ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನುಡಿ ಕಡಲು: ಮುದ್ರಣ-ಮಂಥನ

Last Updated 27 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ತಂತ್ರಜ್ಞಾನವು ಜ್ಞಾನವಲ್ಲ, ಜ್ಞಾನದ ಅನ್ವಯ. ದೇಹದ ಅಂತರ್ಗತವಾದ ಸಾಮರ್ಥ್ಯವನ್ನು ಪ್ರತ್ಯೇಕಗೊಳಿಸಿ ದೇಹದ ಹೊರಗಿನ ಸ್ವತಂತ್ರ ವಸ್ತುವಾಗಿಸಿ ಬಳಕೆಗೆ ಸುಲಭವಾಗಿ ಒದಗುವಂತೆ ಮಾಡಿಕೊಳ್ಳುವುದು, ಹಾಗೆ ಮಾಡಿಕೊಳ್ಳುತ್ತ ನಿಜವಾಗಿ ದುರ್-ಬಲನಾಗಿರುವ ಮನುಷ್ಯನ ಬಲ, ಸಾಮರ್ಥ್ಯಗಳನ್ನು ಹೆಚ್ಚಿಸಿಕೊಳ್ಳುವುದು ಎಂದು ತಂತ್ರ`ಜ್ಞಾನ~ವನ್ನು ವಿವರಿಸಿಕೊಳ್ಳಬಹುದು.

ನೋಡಿ, ಬರವಣಿಗೆ ಮನುಷ್ಯನ ಕೈಯ ಕೌಶಲ; ಕೈಯ ಕೌಶಲವೊಂದೇ ಇದ್ದಾಗ ಬರೆದದ್ದನ್ನು ಪ್ರತಿ ಮಾಡುವುದೆಂದರೆ ಎಷ್ಟು ಪ್ರತಿಗಳು ಬೇಕೋ ಅಷ್ಟು ಬಾರಿ ಬರೆಯಬೇಕಿತ್ತು, ಒಂದೊಂದು ಪ್ರತಿಯಲ್ಲಿ ಒಂದೊಂದು ಥರ ವೈಚಿತ್ರ್ಯಗಳು, ತಪ್ಪುಗಳು, ಸೇರ್ಪಡೆಗಳು ಏನೇನೋ ಇರುತಿದ್ದವು.
 
ಹಲವು ಶತಮಾನಗಳ ಅವಧಿಯಲ್ಲಿ ಈ ಕೈಯ ಕೌಶಲ ಅಚ್ಚುಮೊಳೆಗಳಾಗಿ ಮುದ್ರಣ ತೊಡಗಿದಾಗ ಕೈಯ ಕೌಶಲ ಮನುಷ್ಯ ದೇಹದ ಹೊರಗಿನದಾಯಿತು. ಬರವಣಿಗೆ ಎಂಬ ಕೈಯ ಕೌಶಲವನ್ನು ತಪ್ಪಿಲ್ಲದಂತೆ ಅಸಂಖ್ಯ ಪ್ರತಿಗಳಾಗಿಸುವ ತಂತ್ರ ಸಾಧ್ಯವಾದಮೇಲೆ ಮತ್ತೆ ಅದನ್ನು `ಒಳಗು~ ಮಾಡಿಕೊಳ್ಳುವ ಕೆಲಸ. ತಂತ್ರಜ್ಞಾನದ ಚಲನೆಯ ಗತಿಯೇ ಹೀಗೆ ಅನ್ನಿಸುತ್ತದೆ- ಮೊದಲು ಹೊರಮುಖ ಚಲನೆ, ಆಮೇಲೆ ಒಳಮುಖ ಚಲನೆ, ಮತ್ತೆ ಒಳ ಹೊರಗುಗಳೆರಡರ ಪಲ್ಲಟ.

ಭಾಷೆಯನ್ನು ಬರೆಯುವುದಕ್ಕೆ ಧ್ವನಿ ಆಧಾರಿತ ಅಕ್ಷರ ಮಾಲೆ ಎಂಬ ತಂತ್ರವನ್ನು ಮನುಷ್ಯ ಕಂಡುಕೊಂಡಾಗಲೇ ಮನುಷ್ಯ ಕಿವಿಯ ಮಾಂತ್ರಿಕ ಲೋಕದಿಂದ ನಿರ್ಲಿಪ್ತವಾದ ನೋಟದ ಲೋಕಕ್ಕೆ ಅನುವಾದಗೊಂಡ ಅನ್ನುವುದು ಮೆಕ್‌ಲುಹಾನ್‌ನ ವ್ಯಾಖ್ಯಾನ. ಮನಸ್ಸು ಅಕ್ಷರದ ಮಾಧ್ಯಮಕ್ಕೆ ಒಳಪಟ್ಟಿದ್ದರಿಂದ ಇಂದ್ರಿಯಗಳ ಕಾರ್ಯಬಾಹುಳ್ಯದ ಪ್ರಮಾಣ ಹೆಚ್ಚು ಕಡಮೆಯಾಯಿತೇ? ಅಂದರೆ ಕಿವಿಗಿಂತ ಕಣ್ಣೇ ಮುಖ್ಯವಾಯಿತೇ? ಹೀಗೆ ಆಗಿದ್ದರಿಂದ ಮನಸ್ಸಿನ ಕಾರ್ಯ ವಿಧಾನ ಬದಲಾಯಿತೇ?

ಅಕ್ಷರಸ್ಥ ಮನಸ್ಸು ಇಡಿತನವನ್ನು ಕಳೆದುಕೊಂಡು ದ್ವಂದ್ವದ ಸಂಕಟಕ್ಕೆ ಸಿಲುಕಿತೇ? ಈ ಪ್ರಶ್ನೆಗಳಿಗೆ ಸುಲಭದ ಉತ್ತರವಿಲ್ಲ. ಕುವೆಂಪು ಅವರ ಕಾದಂಬರಿಗಳನ್ನೊಮ್ಮೆ ನೆನಪು ಮಾಡಿಕೊಳ್ಳಿ- ಅಕ್ಷರಸ್ಥ ಹೂವಯ್ಯ, ಮುಕುಂದಯ್ಯ ಇಂಥವರ `ದುರ್ಬಲ~ ವ್ಯಕ್ತಿತ್ವಗಳಿಗೂ ಗುತ್ತಿ, ಐತ ಇಂಥ ಅನಕ್ಷರಸ್ಥ ಪಾತ್ರಗಳ ಸದೃಢತೆಗೂ ಇರುವ ವ್ಯತ್ಯಾಸ ಮನದಟ್ಟಾಗುತ್ತದೆ.
 
ತಾಂತ್ರಿಕತೆ ಬೆಳೆದಂತೆ ಮನುಷ್ಯ ಇಂದ್ರಿಯಗಳು ಹೊರಮುಖಗೊಳ್ಳುವ ಪ್ರಮಾಣದಲ್ಲಿ ಆಗುವ ಬದಲಾವಣೆಗಳ ತಿಳಿವಳಿಕೆ ಇಲ್ಲದೆ ಸಾಂಸ್ಕೃತಿಕ ಪಲ್ಲಟಗಳ ಥಿಯರಿಯನ್ನು ರೂಪಿಸಿಕೊಳ್ಳುವುದು ಕಷ್ಟ. ತಾಂತ್ರಿಕತೆ ಅನ್ನುವುದು ಸಮಾಜಗಳ ಸಂಸ್ಕೃತಿಯನ್ನು ನಿರ್ಣಯಿಸುವ `ವಿಧಿ~; ಈ ಮಾತು ಸ್ವಲ್ಪ ಅತಿರೇಕ ಅನ್ನಿಸಿದರೂ ನಿಜದ ಅಂಶ ಇದೆ ಅಲ್ಲವೇ!

ನಾವು ಈ ಅಂಕಣದಲ್ಲಿ ಪರಿಶೀಲಿಸುತ್ತಿರುವ ಭಾಷೆಗೆ ಸಂಬಂಧಿಸಿದ ಕೆಲವು ಸಂಗತಿಗಳನ್ನೇ ನೋಡಿ. ಮುದ್ರಣವು ವ್ಯಾಪಕವಾಗಿ ಬಳಕೆಗೆ ಬರುವವರೆಗೂ ಓದುವುದೆಂದರೆ ಗಟ್ಟಿಯಾಗಿ ಓದುವುದು, ವಾಚಿಸುವುದು ಮಾತ್ರವೇ ಆಗಿತ್ತು. ಹತ್ತೊಂಬತ್ತನೆಯ ಶತಮಾನದಲ್ಲಿ ಕೂಡ ಡಿಕಿನ್ಸ್‌ನಂಥ ಕಾದಂಬರಿಕಾರ ತನ್ನ ಕೃತಿಗಳನ್ನು ಊರೂರು ತಿರುಗಿ ದೊಡ್ಡ ಸಭೆಗಳೆದುರು ವಾಚಿಸುತಿದ್ದ.
 
ಇಪ್ಪತ್ತನೆಯ ಶತಮಾನದ ಮಧ್ಯಭಾಗದವರೆಗೂ ಕಾವ್ಯವಾಚನ, ಪುರಾಣ ಶ್ರವಣ ಇಂಥವು ಕನ್ನಡ ನಾಡಿನಲ್ಲಿ ಪ್ರಚಲಿತವಾಗಿದ್ದವು. ಇವತ್ತು ಪುಸ್ತಕ ಪ್ರಕಾಶನವೆಂದರೆ ಸಮಾರಂಭ, ಪುಸ್ತಕವನ್ನು ಕುರಿತ ಹೊಗಳಿಕೆಯ ಭಾಷಣ, ರಿಯಾಯತಿ ದರದ ಮಾರಾಟ ಇತ್ಯಾದಿ ನೆನಪಿಗೆ ಬರುತ್ತವೆ. ಮಧ್ಯಕಾಲೀನ ಅವಧಿಯಲ್ಲಿ ಪ್ರಕಾಶನವೆಂದರೆ ಸಾರ್ವಜನಿಕ ಪ್ರದರ್ಶನ ರೂಪದ ವಾಚನವೇ ಆಗಿತ್ತು.

ಮಧ್ಯಕಾಲೀನ ವಿದ್ಯಾರ್ಥಿ, ಅಷ್ಟೇ ಯಾಕೆ, ಡಿ.ಎಲ್.ಎನ್. ರಂಥ ಅಧ್ಯಾಪಕರ ಶಿಷ್ಯರು ಕೂಡ ಹಳಗನ್ನಡ ಕೃತಿಗಳನ್ನು ಕೈಯಾರೆ ಬರೆದುಕೊಳ್ಳುವ ಲಿಪಿಶಾಸ್ತ್ರಜ್ಞ, ಸಂಪಾದಕ, ಪ್ರಕಾಶಕ ಎಲ್ಲವೂ ಆಗಿರಬೇಕಾಗಿತ್ತು. ಜ್ಞಾನದ ನುಡಿ ರೂಪದ ಮತ್ತು ಲಿಪಿ ರೂಪದ ರಚನೆಗಳಿಗೆ ಇರುವ ವ್ಯತ್ಯಾಸ ಮತ್ತು ಘರ್ಷಣೆ ಸಮಾಜದ ಬದುಕಿನಲ್ಲಿ ಹೇಗೆಲ್ಲ ವ್ಯಕ್ತವಾಗಿರಬಹುದು ಅನ್ನುವುದನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ.

ಮುದ್ರಣ ತಂತ್ರದಿಂದಾಗಿಯೇ ಜ್ಞಾನವೆನ್ನುವುದು ದೊಡ್ಡ ಪ್ರಮಾಣದ ಉತ್ಪಾದನೆ, ಮಾಸ್ ಪ್ರೊಡಕ್ಷನ್ ಆಗಿ ಬದಲಾಯಿತು. ಗ್ರಹಿಕೆ ಮತ್ತು ಅನ್ವೇಷಣೆಯ ಉಪಕರಣವಾಗಿದ್ದ ಭಾಷೆ ಪುಸ್ತಕದ ರೂಪ ತಾಳಿ ಬೇಕೆಂದಲ್ಲಿಗೆ ಹೊತ್ತೊಯ್ಯಬಹುದಾದ ಗ್ರಾಹಕ ವಸ್ತುವಿನ ರೂಪ ತಳೆಯಿತು. ಕಿಸೆಯಲ್ಲೋ ಕೈಯಲ್ಲೋ ಹಿಡಿಯಬಹುದಾದ ಪುಸ್ತಕ, ಮನಸ್ಸಿನಲ್ಲೇ ಮೌನವಾಗಿ ಓದಿಕೊಳ್ಳುವ ಅಭ್ಯಾಸ ಮತ್ತು ವ್ಯಕ್ತಿಯ ಖಾಸಗಿತನದ ಬೆಳವಣಿಗೆ ಇವಕ್ಕೆಲ್ಲ ಸಂಬಂಧ ಇದೆ ಅನ್ನಿಸುತ್ತದೆ.

ಮುದ್ರಣ ಕಾರಣದಿಂದ ಭಾಷೆಯ ಪ್ರಸರಣ, ಪ್ರಮಾಣೀಕರಣ; ಮಾಹಿತಿ ಸಂಗ್ರಹ, ಮಾಹಿತಿ ಪುನರ್‌ವ್ಯವಸ್ಥೆ, ಮಾಹಿತಿ ಜೋಪಾನ; ಪಠ್ಯದ ಅರ್ಥವನ್ನು ವೃದ್ಧಿಸುವ ಅನುಬಂಧ, ಟಿಪ್ಪಣಿ, ಚಿತ್ರ ಇತ್ಯಾದಿಗಳ ಸೇರ್ಪಡೆ; ಪಠ್ಯ ಪುಸ್ತಕಗಳ ಮೂಲಕ ಸಮಾಜ ವ್ಯವಸ್ಥೆಯನ್ನು ಸಮರ್ಥಿಸಿ ಒಪ್ಪಿಕೊಳ್ಳುವಂತೆ ಮಾಡುವ ತತ್ವ ಇವುಗಳ ಪ್ರಭಾವ ಎಲ್ಲ ಸಾಮಾಜಿಕ ಚಟುವಟಿಕಗಳ ಮೇಲೂ ದಟ್ಟವಾಗಿ ಆಯಿತು. ಅಕ್ಷರಸ್ಥ ಶಿಕ್ಷಣದ ತರ್ಕಕ್ಕೆ ಬಾಹಿರವಾದ `ಜನ~ಸಮುದಾಯ ನಾಗರಿಕರಲ್ಲ, ವಿಚಾರವಂತರಲ್ಲ, ಶಿಕ್ಷಿತರಲ್ಲ ಅನ್ನುವ ಉದಾಸೀನ, ಉದ್ಧಟತನಗಳೂ ಬೆಳೆದವು.

ನಮ್ಮ ದೇಶದ `ನ್ಯಾಶನಲ್ ಲೈಬ್ರರಿ~ಯ ಮೊಟ್ಟ ಮೊದಲ ಮುಖ್ಯಸ್ಥರಾಗಿದ್ದ ಬಳ್ಳಾರಿ ಶಾಮಣ್ಣ ಕೇಶವನ್ ಮೂರು ಸಂಪುಟಗಳಲ್ಲಿ `ಹಿಸ್ಟರಿ ಆಫ್ ಪ್ರಿಂಟಿಂಗ್ ಅಂಡ್ ಪಬ್ಲಿಶಿಂಗ್ ಇನ್ ಇಂಡಿಯ~ ಹಾಗೂ `ದಿ ಬುಕ್ ಇನ್ ಇಂಡಿಯಾ~ ಎಂಬ ಎರಡು ಬಹು ಮುಖ್ಯ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಅದರ ಮುಖ್ಯಾಂಶಗಳನ್ನು ಸ್ಥೂಲವಾಗಿ ಗಮನಿಸಿದರೂ ಮುದ್ರಣವು ಭಾರತೀಯ ಮನಸನ್ನು ತಿದ್ದಿದ ಬಗೆಯ ರೂಪುರೇಖೆಗಳು ಹೊಳೆಯುತ್ತವೆ.
ಭಾರತದಲ್ಲಿ ಮುದ್ರಣ ಶುರುವಾಗಿ 455 ವರ್ಷಗಳಾದವು.
 
ವಾಸ್ಕೋ ಡ ಗಾಮ ಭಾರತದಲ್ಲಿ ಕಾಲಿಟ್ಟ 59 ವರ್ಷಗಳಿಗೆ ಗೋವಾದಲ್ಲಿ ಪ್ರೆಸ್ಸು ಶುರುವಾಯಿತು. ಬೈಬಲನ್ನು ಅನೇಕ ಭಾಷೆಗಳಲ್ಲಿ ಒದಗಿಸಬೇಕೆಂಬ ಉದ್ದೇಶದಿಂದ ಕ್ರಿಶ್ಚಿಯನ್ ಮಿಶನರಿಗಳು ಮುದ್ರಣವನ್ನು ಭಾರತದಲ್ಲಿ ಪ್ರಚಾರಕ್ಕೆ ತಂದರು. ಈಗ ಮುದ್ರಣವು ಸಮಾರು ಸಾವಿರ ಕೋಟಿ ರುಪಾಯಿಯ ಉದ್ಯಮ.

1542ರಲ್ಲಿ ಸ್ಪೇನಿನ ಫ್ರಾನ್ಸಿಸ್ ಕ್ಸೇವಿಯರ್ ತಮಿಳುನಾಡಿನಲ್ಲಿ ಬೈಬಲ್ ಪಾಠ ಹೇಳುತಿದ್ದ. ಗೋವಾದ ವೈಸ್‌ರಾಯ್ ಪೋರ್ಚುಗೀಸ್ ಅರಸನ ಪರವಾಗಿ ಶಾಲೆಗಳನ್ನು ತೆರೆದಿದ್ದ. ಇಬ್ಬರಿಗೂ ಪುಸ್ತಕಗಳ ಅಗತ್ಯ ಹೆಚ್ಚಾಗುತಿತ್ತು. ಭಾರತ, ಇಥಿಯೋಪಿಯ, ಜಪಾನ್‌ಗಳಿಗೆ ಮುದ್ರಣ ಯಂತ್ರಗಳನ್ನು, ಪಾದ್ರಿಗಳನ್ನೂ ಕಳಿಸಬೇಕೆಂದು ಕ್ಸೇವಿಯರ್ ಪೋರ್ಚುಗೀಸ್ ಅರಸನನ್ನು ಒತ್ತಾಯಿಸಿದ.

ಇಥಿಯೋಪಿಯಕ್ಕೆ ಹೊರಟ ಯಂತ್ರ ಮತ್ತು ಮಿಶನರಿಗಳು ಸೆಪ್ಟೆಂಬರ್ 1566ರಲ್ಲಿ ಗೋವೆಗೆ ಬಂದಿಳಿದರು. ಇಷ್ಟು ಹೊತ್ತಿಗೆ ಇಥಿಯೋಪಿಯದ ಅರಸನ ಮನಸ್ಸು ಬದಲಾಗಿತ್ತು. ಪ್ರೆಸ್ಸು ಗೋವೆಯಲ್ಲೇ ಉಳಿಯಿತು. ಅಲ್ಲಿನ ಸೇಂಟ್ ಪಾಲ್ ಕಾಲೇಜಿನಲ್ಲಿ ನೆಲೆಯೂರಿತು. ಮುಂದಿನ ತಿಂಗಳಲ್ಲೇ ಅಂದರೆ, ನವೆಂಬರ್ 6, 1556 ಭಾರತದ ಮೊಟ್ಟಮೊದಲ ಪುಸ್ತಕ ಪ್ರಿಂಟಾಯಿತು.

ಭಾರತದಲ್ಲಿ ಮುದ್ರಣದ ಚರಿತ್ರೆಯೆಂದರೆ ರಾಷ್ಟ್ರವು ಮೈಕೊಡವಿ ಎದ್ದು ನಿಂತ ಕಥೆ; ದೇಶ ಭಾಷೆಗಳು ಮತ್ತು ತಂತ್ರಜ್ಞಾನದ ಸಂಬಂಧ ಸದೃಢಗೊಂಡ ಕಥೆ. ಗುಟೆನ್‌ಬರ್ಗ್ ಬೈಬಲು ಮುದ್ರಣಗೊಂಡ ನೂರು ವರ್ಷಗಳೊಳಗೆ ಅನೇಕ ಭಾರತೀಯ ಭಾಷೆಗಳು ಅಚ್ಚು ಮೊಳೆಗಳ ರೂಪ ತಳೆದು ಕಾಗದದ ಮೇಲೆ ಕಣ್ಣಿಗೆ ಕಾಣುತಿದ್ದವು. ತಾಳೆಗರಿಗಳಲ್ಲಿದ್ದ, ಹಸ್ತಪ್ರತಿಗಳಲ್ಲಿದ್ದ ಭಾಷಾರೂಪದ ಜ್ಞಾನ ಸಾಮಾನ್ಯರ ಮನೆಗಳಿಗೂ ಕಾಲಿಟ್ಟಿತು.

ಭಾರತೀಯ ಸಾಂಸ್ಕೃತಿಕ ಪರಂಪರೆ ಅನ್ನುವ ಕಲ್ಪನೆ ಜನರ ಮನಸನ್ನು ಆವರಿಸುತಿತ್ತು. ಇದು ಎಲ್ಲ ಭಾರತೀಯ ಭಾಷೆಗಳಲ್ಲೂ ನಡೆಯಿತು. `ಮುದ್ರಣ ಪರಂಪರೆಯ ಸೇವೆಯನ್ನೂ ಮಾಡಿತು, ಪರಂಪರೆಗೆ ಸವಾಲೂ ಆಯಿತು. ಮುದ್ರಣಕ್ಕೆ ರಾಜಕೀಯ, ಸಾಮಾಜಿಕ, ಧಾರ್ಮಿಕ ಕಟ್ಟುಪಾಡುಗಳು, ಸೀಮೆಗಳು ಇರಲಿಲ್ಲ, ಎಲ್ಲ ಛಾಯೆಗಳ ಅಭಿಪ್ರಾಯ, ನಿಲುವುಗಳೂ ವಿಚಾರಗಳೂ ಪ್ರಸಾರಗೊಳ್ಳಲು ತೊಡಗಿದವು~ ಅನ್ನುತ್ತಾರೆ ಕೇಶವನ್.

ಭಾರತದ ಮೊದಲ ಪ್ರೆಸ್ಸುಗಳು ಪಶ್ಚಿಮ ಕರಾವಳಿಯ ಸಾಲಿನಲ್ಲಿ-ಗೋವಾ, ಕೊಚಿನ್, ಕನ್ಯಾಕುಮಾರಿ ಬಳಿಯ ಪುನ್ನೈಕ್ಕಯಲ್, ಕೋಡುಂಗಲ್ಲೂರಿನ ಬಳಿಯ ವ್ಯಾಪಿಕೋಟ್ಟೈ, ತ್ರಿಶೂರ್ ಬಳಿಯ ಅಂಬಲಕ್ಕಾಡುಗಳಲ್ಲಿ; ಪೂರ್ವ ಕರಾವಳಿಯ ತರಂಗಂಬಾಡಿ-ಮದರಾಸು, ಫೋರ್ಟ್ ವಿಲಿಯಮ್-ಕಲ್ಕತ್ತ ಮತ್ತು ಶ್ರಿರಾಮಪುರಗಳಲ್ಲಿ; ಎರಡನೆಯ ಹಂತದಲ್ಲಿ ಮುಂಬೈ ಮತ್ತು ದೇಶದ ಇತರ ಪ್ರಾಂತ್ಯಗಳಲ್ಲಿ ತಲೆ ಎತ್ತಿದವು. ರೋಮ್‌ನ ಕ್ಯಾತೊಲಿಕ್ ಪಾದ್ರಿಗಳು, ಯೂರೋಪಿನ ಪ್ರಾಟೆಸ್ಟೆಂಟ್ ಪಾದ್ರಿಗಳು ಬೈಬಲ್ ಅನುವಾದಗಳಲ್ಲಿ ತೊಡಗಿಕೊಂಡರು.

ಈ ಮಜಲಿನಲ್ಲಿ ನೆನೆಯಬೇಕಾದವನು ವಿಲಿಯಮ್ ಕಾರಿ. ಇಂಗ್ಲೆಂಡಿನವನು, ಮೋಚಿಯ ಮಗ, ಪಾದರಿಯಾಗಿ 1793ರಲ್ಲಿ ಭಾರತಕ್ಕೆ ಬಂದ, ಇಲ್ಲಿನ ದೇಶಭಾಷೆಗಳನ್ನು ಕಲಿತ, ಕಲ್ಕತ್ತೆಯ ಫೋರ್ಟ್ ವಿಲಿಯಮ್ ಕಾಲೇಜಿನಲ್ಲಿ ಸಂಸ್ಕೃತ ಮತ್ತು ಬಂಗಾಳಿ ಪ್ರಾಧ್ಯಾಪಕನಾಗಿದ್ದ, ಬೈಬಲನ್ನು ಸಂಸ್ಕೃತ ಮತ್ತು ಬಂಗಾಳಿ ಭಾಷೆಗಳಿಗೆ ಅನುವಾದಿಸಿ ಪ್ರಕಟಿಸಿದ, ಮರಾಠಿ, ಪಂಜಾಬಿ ಆವೃತ್ತಿಗಳನ್ನು ಸಿದ್ಧಪಡಿಸಿದ. ಭಾರತೀಯ ಭಾಷೆಗಳ ಅಚ್ಚುಮೊಳೆಗಳ ಬೆಳವಣಿಗೆಗೆ ಕಾರಣನಾದ.

ಅಸ್ಸಾಂನಲ್ಲಿ 1838ರಲ್ಲಿ ನಾಥನ್ ಬ್ರೌನ್, ಆಲಿವರ್ ಕಟರ್, ಮೈಲ್ಸ್ ಬ್ರಾನ್ಸನ್, 1820ರಲ್ಲಿ ಗುಜರಾತ್‌ನ ಸೂರತ್ ಮಿಶನ್ ಪ್ರೆಸ್ ಅನ್ನು ವಿಲಿಯಮ್ ಫೈವಿ ಆರಂಭಿಸಿದರು. 1820ರಲ್ಲಿ ಮೈಸೂರಿನ ವೆಸ್ಲಿಯನ್ ಮಿಶನ್ ಪ್ರೆಸ್, ಮತ್ತು 1840ರಲ್ಲಿ ಮಂಗಳೂರಿನ ಬಾಸೆಲ್ ಮಿಶನ್ ಶುರುವಾದವು. 1821ರಲ್ಲಿ ಕೊಟ್ಟಾಯಂನಲ್ಲಿ ಬೆಂಜಮಿನ್ ಬೈಲಿ ಮುದ್ರಣಾಲಯ ಆರಂಭಿಸಿದ. ಇವೆಲ್ಲ ದೇಶಭಾಷೆಗಳಲ್ಲಿ ಪ್ರಕಟಣೆಯ ಕ್ರಾಂತಿಯನ್ನು ತಂದವು.

ಬಹಳಷ್ಟು ಭಾರತೀಯ ಭಾಷೆಗಳಲ್ಲಿ ಮುಂಚೂಣಿಯಲ್ಲಿದ್ದ ಪ್ರಕಾಶಕರೆಂದರೆ ಬೈಬಲ್ ಅನುವಾದಕರು. ಜೊತೆಗೇ ಕ್ರಿಶ್ಚಿಯನ್ ಮಿಶನರಿಗಳು ಹದಿನೆಂಟನೆಯ ಶತಮಾನದ ಕೊನೆಯಿಂದ ಹತ್ತೊಂಬತ್ತನೆಯ ಶತಮಾನದ ಮೊದಲ ಅರ್ಧದವರೆಗೆ 86 ನಿಘಂಟು, 115 ವ್ಯಾಕರಣ ಪುಸ್ತಕ, 45 ನಿಯತಕಾಲಿಕಗಳನ್ನು 73 ಭಾಷೆಗಳಲ್ಲಿ ಪ್ರಕಟಿಸಿದರು.

ಮುದ್ರಣದ ಮೂಲಕ ನಡೆದ ಭಾಷಾ ವಿಕಾಸ ಸಾಮಾಜಿಕ-ರಾಜಕೀಯ ಪರಿಣಾಮಗಳನ್ನು ತಂದವು. ತಿಳಿವಳಿಕೆಯ ಹೊಸ ಬಗೆ, ಅಧಿಕಾರದ ಹೊಸ ಸಾಧ್ಯತೆ ಭಾರತವನ್ನು ವ್ಯಾಪಿಸಿತು. ಹಳತು ಕಳಚಿಕೊಂಡು ಹೊಸತಾಗುವ, ಮಧ್ಯಕಾಲೀನದಿಂದ ಆಧುನಿಕತೆಯತ್ತ ಹೊರಳುವ ಅವಧಿಗೆ ಬಲ ಬಂದದ್ದೇ ಮುದ್ರಣ ತಂತ್ರಜ್ಞಾನವನ್ನು ಸ್ಥಳೀಯ ಭಾಷೆಗಳಿಗೆ ಅನ್ವಯಿಸಿಕೊಂಡದ್ದರಿಂದ, ಅದರಿಂದಾಗಿ ಸಾರ್ವಜನಿಕ ಶಿಕ್ಷಣ ಕ್ರಮ ರೂಪುಗೊಂಡದ್ದರಿಂದ.

ಇದೇ ಅವಧಿಯಲ್ಲಿ ಆಧುನಿಕ ರಾಷ್ಟ್ರೀಯತೆಯ ಏಕರೂಪದ, ಕೇಂದ್ರೀಕರಣದ ಶಕ್ತಿಗಳು ರೂಪುಗೊಂಡವು. ಹಾಗೆಯೇ ಸುಶಿಕ್ಷಿತರ ಖಾಸಗಿತನವೂ ಬೆಳೆಯಿತು. ಅಧಿಕಾರದ ಕೇಂದ್ರೀಕರಣ ಸುಲಭಸಾಧ್ಯವಾದಂತೆ ಆಳುವ ಸರ್ಕಾರದ ವಿರೋಧವೂ ಹುಟ್ಟಿಕೊಂಡಿತು.

ಮುದ್ರಣದ ಕಾರಣದಿಂದಲೇ ಭವಿಷ್ಯದ ಕನಸು ಆದರ್ಶಗಳು ಅರಳಿದಂತೆಯೇ ಭಾರತದ ಪ್ರಾಚೀನವನ್ನು ಮರುಸೃಷ್ಟಿ ಮಾಡುವ ಹಂಬಲ, ಹಳೆಯ ಬದುಕಿನ ಕ್ರಮವನ್ನು ಮರುಸ್ಥಾಪಿಸುವ ಹಟ ಇವೂ ತಲೆ ಎತ್ತಿದವು. ಪ್ರಾಚೀನ ಜ್ಞಾನವನ್ನು ಒಳಗೊಂಡ ಕೃತಿಗಳನ್ನು ತಪ್ಪಿಲ್ಲದೆ ಮೂಲಕ್ಕೆ ನಿಷ್ಠವಾಗಿ ಸಂಪಾದಿಸಿ ಪ್ರಕಟಿಸುವ ಕಾರ್ಯ ಆರಂಭವಾಯಿತು.
 
ಮುದ್ರಣ ಎಷ್ಟೆಂದರೂ ನಕಲು ಪ್ರತಿಯಲ್ಲವೇ; ಆದ್ದರಿಂದಲೇ `ಮೂಲ~ವನ್ನು ಶೋಧಿಸುವ ಕಾರ್ಯ ತೊಡಗಿತು. ಈ ಸಾಂಸ್ಕೃತಿಕ ಮಂಥನ ಇನ್ನೂ ನಡೆದೇ ಇದೆ. ನುಡಿಕಡಲನ್ನು ಕಡೆಯುವ ಮಂತಿನ ಚಾಲಕಶಕ್ತಿಗಳ ರೂಪ ಬದಲಾಗಿದೆ. ಭಾರತದಲ್ಲಿ ನಡೆದ ಕೆಲವು ನುಡಿ ಸಾಹಸಗಳ ನಿದರ್ಶನಗಳನ್ನು ಮುಂದಿನ ವಾರಗಳಲ್ಲಿ ನೋಡೋಣ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT