ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನುಡಿ ಮನ

Last Updated 29 ಸೆಪ್ಟೆಂಬರ್ 2012, 19:30 IST
ಅಕ್ಷರ ಗಾತ್ರ

ಬರಹವಿಲ್ಲದೆ ಕೇವಲ ನುಡಿಯೊಳಗಷ್ಟೇ ಬದುಕುವ ಸ್ಥಿತಿ ಇಲ್ಲವಾಗಿ ಸಾವಿರಾರು ವರ್ಷಗಳೇ ಕಳೆದಿವೆ. ಮಾನವಶಾಸ್ತ್ರಜ್ಞರು, ಭಾಷಾಶಾಸ್ತ್ರಜ್ಞರು ನುಡಿ ಮನ ಮತ್ತು ಅಕ್ಷರ ಮನಗಳು ವ್ಯವಹರಿಸುವ ಬಗೆ ಹೇಗೆ ಭಿನ್ನ ಎಂದು ತಿಳಿಯಲು ಬಹಳ ಪ್ರಯತ್ನಪಟ್ಟಿದ್ದಾರೆ.

ಅಕ್ಷರ ಬಳಸದ, ಅಕ್ಷರದ ಸಂಪರ್ಕ ತೀರ ಕಡಮೆ ಇರುವ, ಸಮುದಾಯಗಳ ಅಧ್ಯಯನ ನಡೆಸಿ ನುಡಿ ರೂಪದ ಭಾಷೆ ಮತ್ತು ಬರಹ ರೂಪದ ಭಾಷೆಗಳು ಮನುಷ್ಯನ ಗ್ರಹಿಕೆ, ತಿಳಿವಳಿಕೆ, ಜ್ಞಾನದ ಸ್ವರೂಪವನ್ನು ಹೇಗೆ ಎಷ್ಟರಮಟ್ಟಿಗೆ ಬದಲಿಸುತ್ತವೆ ಅನ್ನುವುದನ್ನು ಗುರುತಿಸಲು ಯತ್ನಿಸಿದ್ದಾರೆ.

ನಮ್ಮ ಜಗತ್ತಿನ ಬಹುಸಂಖ್ಯಾತ ಜನ ಈಗಲೂ ಅಕ್ಷರ ಪ್ರಪಂಚದ ನಿಕಟ ಒಡನಾಡಿಗಳಲ್ಲದೆ ಇರುವಾಗ ಅವರ ಮನಸ್ಸು ಗ್ರಹಿಕೆಗಳನ್ನು ನಿರ್ಧರಿಸುವ ನುಡಿ ಮನದ ಸ್ವರೂಪ ಅರಿಯುವುದು ಮುಖ್ಯವಾಗುತ್ತದೆ.

ಕೇವಲ ನುಡಿ ಮಾತ್ರವಾದ ಜಗತ್ತು ಈಗ ಕೇವಲ ಊಹೆಯ ಸೃಷ್ಟಿ. ಬರಹವಿದ್ದರೂ ಅದನ್ನು ಹೆಚ್ಚು ನೆಚ್ಚಿಕೊಳ್ಳದ, ನುಡಿಗೇ ಹೆಚ್ಚು ಮನ್ನಣೆ ಇರುವ ಸ್ಥಿತಿ ಈಗಲೂ ಹಲವು ಎಡೆಗಳಲ್ಲಿ, ನಮ್ಮ ಸುತ್ತಲೂ ಇರುವ ಅನೇಕ ಜನರಲ್ಲಿ ಕಾಣುತ್ತದೆ. ಬರಹದ ಮೇಲುಗೈಯಾದಾಗಲೂ ನುಡಿ ಬಳಕೆಯಲ್ಲಿ ತಿದ್ದಿಕೊಂಡ ಮನಸ್ಸು ಹಳೆಯ ಅಭ್ಯಾಸಗಳನ್ನು ಉಳಿಸಿಕೊಂಡಿರುವುದೂ ಕಾಣುತ್ತದೆ. ಇವನ್ನೆಲ್ಲ ಗಮನಿಸಿ ಮನುಷ್ಯ ಕುಲದ ಚರಿತ್ರೆಯನ್ನು ನುಡಿ-ಬರಹದ ದೃಷ್ಟಿಯಿಂದ ವಿಂಗಡಿಸಿ ನೋಡುವ ಅಭ್ಯಾಸವೂ ಇದೆ.

ನುಡಿ, ಬರಹ, ಮುದ್ರಣ, ವಿದ್ಯುನ್ಮಾನ ಇವುಗಳ ಮೂಲಕ ವ್ಯಕ್ತವಾಗುವ ಭಾಷೆ, ಅದರಿಂದ ಸೃಷ್ಟಿಗೊಳ್ಳುವ ಮನಸ್ಸು, ಅಂಥ ಮನಸ್ಸುಗಳಿಂದ ರೂಪುಗೊಳ್ಳುವ ಸಮಾಜ ಹೇಗೆ ಬೇರೆ ಬೇರೆ ರೂಪಗಳನ್ನು ತಾಳುತ್ತದೆ ಅನ್ನುವುದು ನಿಜಕ್ಕೂ ದೊಡ್ಡ ಕುತೂಹಲ. ನುಡಿ ಮಾತ್ರ ಇರುವಾಗ ಪರಸ್ಪರ ಸಂಬಂಧ, ಅವಲಂಬನೆ, ಸಹಕಾರ, (ಅಥವ ದ್ವೇಷ, ವಿರೋಧ ಅನ್ನಿ ಬೇಕಿದ್ದರೆ) ಮುಖ್ಯವಾಗುತ್ತದೆ, ಬಿಡಿ ವ್ಯಕ್ತಿಗಿಂತ ಸಮುದಾಯ ಮುಖ್ಯವಾಗುತ್ತದೆ. ಬರಹ ತೊಡಗಿದೊಡನೆ ಸಮುದಾಯಕ್ಕಿಂತ ವ್ಯಕ್ತಿ, ಅಧಿಕಾರದ ವಿನ್ಯಾಸ, ಅಕ್ಷರಸ್ಥ ಅನಕ್ಷರಸ್ಥ ಅನ್ನುವ ಭೇದ ಇವೆಲ್ಲ ಶುರುವಾಗುತ್ತವೆ. ಅಧಿಕಾರವನ್ನು, ಅಧಿಕಾರಸ್ಥರನ್ನು ಸಮರ್ಥಿಸುವ ಕಥೆ, ಪುರಾಣ ಇತ್ಯಾದಿಗಳ ಸೃಷ್ಟಿ ನಡೆಯುತ್ತದೆ. ಮುದ್ರಣದ್ದು ಇನ್ನೊಂದೇ ಕಥೆ. ಮುದ್ರಣ ತೊಡಗುವ ವೇಳೆಗೆ ಅಕ್ಷರ ಬಹಳಷ್ಟು ಜನರಿಗೆ ದಕ್ಕುವಂತೆ ಆಗಿತ್ತಾದರೂ ಸಮುದಾಯದ ಬದಲು `ಓದುಗ~ರು ಸೃಷ್ಟಿಯಾದದ್ದು ಮುದ್ರಣದ ಪ್ರಭಾವದಿಂದಲೇ. ಹೀಗೆ ಬಿಡಿ ವ್ಯಕ್ತಿಗಳು ಸೃಷ್ಟಿಯಾಗುವುದು ಬಂಡವಾಳಶಾಹಿ ಅನ್ನುವ ಸಮಾಜಕ್ಕೆ ಅಗತ್ಯ. ಇನ್ನು ವಿದ್ಯುನ್ಮಾನ ತಂತ್ರಗಳಿಂದ ಭಾಷೆ ಪಡೆಯುತ್ತಿರುವ ಶಕ್ತಿ, ಹೊಸ ಸಾಧ್ಯತೆಗಳು ಮತ್ತೆ ಹೊಸ ನುಡಿ ಸಮುದಾಯವನ್ನು ಕಟ್ಟುತಿವೆಯೋ, ಇಲ್ಲ ಎಲ್ಲರನ್ನೂ ಏಕಾಂಗಿಗಳನ್ನಾಗಿಸುತ್ತಿದೆಯೋ, ಸಮುದಾಯದ ಭ್ರಮೆಯನ್ನು ಪೋಷಿಸುತಿದೆಯೋ ಅದು ದೊಡ್ಡ ಚರ್ಚೆಯ ಸಂಗತಿ.
ಸದ್ಯಕ್ಕೆ ನುಡಿ ಮನಸ್ಸೇ ಮುಖ್ಯವಾಗಿರುವಾಗ ಅಂಥ ಪರಿಸರದಲ್ಲಿ ಜ್ಞಾನದ ಸ್ವರೂಪ ಹೇಗಿರುತ್ತದೆ, ಭಾಷೆಯ ಸ್ವರೂಪ ಹೇಗಿರುತ್ತದೆ ಅನ್ನುವುದನ್ನು ನೋಡೋಣ.

`ನೋಡೋಣ~ ಅಂದೆ. ನುಡಿ ಮಾತ್ರವಿರುವ ಸಂಸ್ಕೃತಿಯಲ್ಲಿ `ನೋಡೋಣ~ ಅನ್ನುವುದು ಅರ್ಥಹೀನ ಮಾತು. ಎಂಥ ದೃಶ್ಯವತ್ತಾದ ಮಾತು ಕೂಡ ಕೇಳುವ ಶಬ್ದಗಳಷ್ಟೇ ಆಗಿರುತ್ತವೆ. ಕೇಳಿದ್ದನ್ನು, ಹೇಳಿದ್ದನ್ನು ನೆನಪು ಮಾಡಿಕೊಳ್ಳಬಹುದು, ಆದರೆ ಅವನ್ನು `ನೋಡ~ಬಹುದಾದ ತಾಣ ಇರುವುದಿಲ್ಲ; ಘಟನೆಗಳು, ಸಂಭವಗಳು ಇರುತ್ತವೆ, ನೋಡಬಹುದಾದ ದಾಖಲೆ ಇರುವುದಿಲ್ಲ.

ನಮಗೆ ಗೊತ್ತಿದ್ದೂ ಗಮನಿಸದ ಈ ಸಂಗತಿ ನೋಡಿ. ನುಡಿ ಅಂದರೆ ಕೇವಲ ಸದ್ದು, ಧ್ವನಿ ತಾನೆ. ಭಾಷೆಯನ್ನು ಕೇವಲ ಧ್ವನಿಯಾಗಿ ಸ್ವಲ್ಪ ಚಿಂತಿಸಿ ನೋಡಿ. ಧ್ವನಿಗೂ ಕಾಲಕ್ಕೂ ಇರುವ ಸಂಬಂಧವೇ ವಿಚಿತ್ರ. ಧ್ವನಿ ಅತ್ಯಂತ ನಶ್ವರ, ಅತ್ಯಂತ ಅಶಾಶ್ವತ. ಧ್ವನಿಯೊಂದು ಸಾಯದೆ ಶಬ್ದ ಹುಟ್ಟುವುದಕ್ಕೆ ಸಾಧ್ಯವೇ ಇಲ್ಲ. `ಶಾಶ್ವತ~ ಅಂದು ನೋಡಿ. ನೀವು `ತ~ ಅನ್ನುವ ಹೊತ್ತಿಗೆ `ಶಾ~ ಮತ್ತು `ಶ್ವ~ ಸತ್ತಿರುತ್ತವೆ, ಅವೆರಡೂ ಸಾಯದೆ `ತ~ ಅನ್ನುವುದಾದರೂ ಹೇಗೆ! ಶಾ, ಶ್ವ ಮತ್ತು ತ ಮೂರನ್ನೂ ಅಂದು `ಮುಗಿಸಿ~ದರೆ ಮಾತ್ರ ಶಾಶ್ವತ ಅನ್ನುವ ಶಬ್ದ ಹುಟ್ಟುತ್ತದೆ.

ನೀವು ಬೇಕಾದರೆ ಚಲಿಸುವ ಚಿತ್ರವನ್ನು, ವೀಡಿಯೋವನ್ನು, ನಿಲ್ಲಿಸಿ, ಅಂದರೆ ಸ್ಟಿಲ್ ಮಾಡಿ, ಬೇಕಾದಷ್ಟು ಹೊತ್ತು ವಿವರವಾಗಿ ನೋಡಬಹುದು. ಆದರೆ, ಧ್ವನಿಯನ್ನು ಮಾತ್ರ ಯಂತ್ರದಲ್ಲೂ ಸ್ಟಿಲ್ ಮಾಡಲಾಗದು. ಧ್ವನಿ ನಿಂತ ತಕ್ಷಣ ಧ್ವನಿಯಿಲ್ಲ. ಎಲ್ಲ ಸಂವೇದನೆಗಳೂ ಕಾಲಬದ್ಧವೇ ಆದರೂ ಅವು ಯಾವುವೂ ಧ್ವನಿಯ ಹಾಗೆ ಸ್ಥಿರತೆಯನ್ನು ವಿರೋಧಿಸುವುದಿಲ್ಲ. ನೋಟ ಚಲನೆಯನ್ನು ಗ್ರಹಿಸಬಹುದು, ಸ್ಥಿರತೆಯನ್ನೂ ಗ್ರಹಿಸಬಹುದು. ಆದರೆ ಪರಿಶೀಲನೆಗಾಗಿ ಸ್ಥಿರತೆಯನ್ನು ಅಪೇಕ್ಷಿಸುತ್ತದೆ. ಸ್ಥಿರ ಚಿತ್ರಕ್ಕೆ ಸಮಾನಾರ್ಥಕವಾದದ್ದು ಧ್ವನಿಗೆ ಇಲ್ಲ.

ಹಾಗಾಗಿ `ಶಬ್ದ~ ಅನ್ನುವುದು ಕ್ರಿಯೆ ಕೂಡ ಹೌದು. ನುಡಿಯೊಳಗಾದ ಜನರಲ್ಲಿ ಭಾಷೆಯು ಕ್ರಿಯೆಯ ಒಂದು ರೂಪ. ಅದು ಕೇವಲ ಆಲೋಚನೆಯ ಪಡಿನುಡಿ ಅಲ್ಲ. ಎಲ್ಲ ನುಡಿ ಸಂಸ್ಕೃತಿಗಳಲ್ಲೂ ಶಬ್ದವನ್ನು ಅಗಾಧ ಶಕ್ತಿ ಉಳ್ಳದ್ದೆಂದು ತಿಳಿದಿದ್ದರು. ಜೀವಿಗಳಿಂದ ಹೊಮ್ಮುವ ಯಾವುದೇ ನಾದ, ಶಬ್ದ ಚೈತನ್ಯದ ಒಂದು ರೂಪ. ಆದ್ದರಿಂದಲೇ ಮಾತು ಮಂತ್ರ ಎಂಬ ಭಾವನೆ ಬೆಳೆಯಿತೇನೋ.

ನುಡಿ ಮನವು ಹೆಸರುಗಳನ್ನು (ಹೆಸರುಗಳೂ ಶಬ್ದಗಳೇ ಅಲ್ಲವೇ!) ವಸ್ತುಗಳ ಮೇಲಿರುವ ಅಧಿಕಾರ ಎಂದು ಭಾವಿಸುತ್ತದೆ. ಯಾವ ವಸ್ತುವಿಗೆ ಹೆಸರಿಡುತ್ತೇವೋ ಅದು ನಮಗೆ ಗೊತ್ತಿರುವಂಥದಾಗುತ್ತದೆ, ಅದರ ಮೇಲೆ ನಮ್ಮ ಬುದ್ಧಿಗೆ, ಮನಸಿಗೆ ಅಧಿಕಾರ ದೊರೆಯುತ್ತದೆ. ಹೆಸರುಗಳ ರಾಶಿಯನ್ನು ಕಲಿಯದೆ ಕೆಮಿಸ್ಟ್ರಿಯನ್ನೋ ದೇಹಶಾಸ್ತ್ರವನ್ನೋ ಕಲಿಯಲಾಗದು. ಎಲ್ಲ ಬೌದ್ಧಿಕ ಜ್ಞಾನದ ಮಟ್ಟಿಗೂ ಇದು ನಿಜ. ಆದರೆ ಬರಹ ಮತ್ತು ಮುದ್ರಣಗಳ ಪ್ರಭಾವಕ್ಕೆ ಒಳಗಾದ ಮನಸ್ಸು ಹೆಸರುಗಳನ್ನು ಲೇಬಲ್ ಎಂದು, ವಸ್ತುವಿಗೆ ಕಾಲ್ಪನಿಕವಾಗಿ ಹಚ್ಚಿದ ಲೇಬಲ್ಲು ಎಂದು ಭಾವಿಸುತ್ತದೆ. ಆದರೆ ನುಡಿ ಮನಕ್ಕೆ ಇಂಥ ಕಲ್ಪನೆ ಇರಲು ಸಾಧ್ಯವಿಲ್ಲ. ಮಾತು ಕ್ರಿಯೆಯಾಗಬಹುದೇ ಹೊರತು ಲೇಬಲ್ ಆಗಲು ಅಸಾಧ್ಯ.

ನುಡಿಯ ಈ ಸ್ವರೂಪದಿಂದ ಆಲೋಚನೆಯ ಕ್ರಮವೂ ಬೇರೆಯೇ ಆಗುತ್ತದೆ. ಭಾರತದ ಸ್ವಾತಂತ್ರ್ಯ ಹೋರಾಟ, ಕ್ಯಾಲ್ಕ್ಯುಲಸ್, ಟಿ 20 ಕ್ರಿಕೆಟ್ಟಿನ ಅಂಕಿಅಂಶ, ಟ್ರಾಫಿಕ್ ರೂಲ್ಸು ಇತ್ಯಾದಿ ಎಲ್ಲ `ಜ್ಞಾನ~ವೂ ನಮಗೆ ಇಂತು ಬರಹದ ಮೂಲಕ ದೊರೆಯುತ್ತದೆ. ಆದರೆ ಕೇವಲ ನುಡಿ ಮಾತ್ರವೇ ಇರುವ ಸಂಸ್ಕೃತಿಯಲ್ಲಿ ಪಠ್ಯಗಳು ಇರುವುದಿಲ್ಲ. ನುಡಿ ಸಮುದಾಯ ತನಗೆ ಬೇಕಾದ ಜ್ಞಾನ ಸಾಮಗ್ರಿಯನ್ನು ಹೇಗೆ ವ್ಯವಸ್ಥೆ ಮಾಡಿಕೊಳ್ಳುತ್ತದೆ?

ಕೇವಲ ನುಡಿ ಮಾತ್ರ ಇರುವಾಗ ಸಂಕೀರ್ಣ ಸಮಸ್ಯೆಯ ಬಗ್ಗೆ ಯೋಚನೆ ಮಾಡಿ ಸಂಕೀರ್ಣ ಉತ್ತರವನ್ನು ಕಂಡುಕೊಂಡರೆ ಅದನ್ನು ಮತ್ತೆ ನೆನಪಿಗೆ ಒದಗುವಂತೆ ಉಳಿಸಿಕೊಳ್ಳುವುದು ಹೇಗೆ? ಯಾಕೆಂದರೆ, ಯಾವುದೇ ಬರಹ ಇಲ್ಲದಿರುವಾಗ ಆಲೋಚಕನ ಆಚೆಗೆ ಏನೂ ಇರುವುದಿಲ್ಲ; ತಾನು ಯೋಚನೆ ಮಾಡಿದ್ದು ಹೇಗೆ ಅನ್ನುವುದನ್ನು ಮತ್ತೆ ಪುನರಾವರ್ತಿಸುವ ಹಾಗೆ ಅಥವ ತಾನು ಆಲೋಚಿಸಿದ್ದು ಇದೇ ಕ್ರಮದಲ್ಲಿಯೇ ಎಂದು ಪರಿಶೀಲಿಸುವುದಕ್ಕೆ ಸಹಾಯವಾಗುವಂಥದು ಏನೂ ಇರುವುದಿಲ್ಲ.

ನುಡಿಸಂಸ್ಕೃತಿಯ ಸಮುದಾಯದಲ್ಲಿ `ಕೇಳುಗ~ನೊಬ್ಬ ಅನಿವಾರ್ಯ. ಆಲೋಚನೆ ಕೂಡ ಸಂವಹನಕ್ಕೆ ಬದ್ಧವಾದದ್ದು. ಆಲೋಚನೆಯನ್ನು ಪ್ರಚೋದಿಸಬಲ್ಲ ಕೇಳುಗ ಇದ್ದಾಗಲೂ ಆಲೋಚನೆಯ ತುಣುಕುಗಳನ್ನು ದಾಖಲಿಸಿ ಕಾಪಾಡಿಕೊಳ್ಳುವ ಅವಕಾಶ ಇರುವುದಿಲ್ಲ. ಅಷ್ಟು ಶ್ರಮಪಟ್ಟು ಕಂಡುಕೊಂಡ ಪರಿಹಾರವನ್ನು ಮರಳಿ ಮನಸಿಗೆ ತಂದುಕೊಳ್ಳುವುದು ಹೇಗೆ? ಒಂದೇ ಉತ್ತರ: ನೆನಪಿಟ್ಟುಕೊಳ್ಳಬಹುದಾದ ಆಲೋಚನೆಗಳನ್ನು ಮಾತ್ರ ಮಾಡುವುದು. ಹುಷಾರಾಗಿ ರೂಪಿಸಿಕೊಂಡ ಚಿಂತನೆ ಬೇಕಾದಾಗ ಮರಳಿ ದೊರೆವಂತೆ ಮಾಡುವ ದಾರಿ ಎಂದರೆ ನೆನಪಿಟ್ಟುಕೊಳ್ಳಬಹುದಾದ ವಿನ್ಯಾಸಗಳಲ್ಲೇ ಆಲೋಚನೆ ಮಾಡುವುದು.

ಆಲೋಚನೆ ಲಯಬದ್ಧವಾಗಿರಬೇಕಾಗುತ್ತದೆ, ನುಡಿಗೆ ವಿನ್ಯಾಸ, ವಿನ್ಯಾಸಕ್ಕೆ ಸಮತೋಲನ ಬೇಕಾಗುತ್ತದೆ; ಪುನರುಕ್ತಿಗಳು, ಪರವಿರುದ್ಧಗಳ ಜೋಡಣೆಗಳು ಬೇಕಾಗುತ್ತವೆ, ಪದಗಳ ಸ್ವರ ಮತ್ತು ವ್ಯಂಜನಗಳ ನಿಯಮಿತ ಪುನರುಕ್ತಿ ಬೇಕಾಗುತ್ತದೆ, ಗಾದೆ ಥರದ ಅಚ್ಚುಕಟ್ಟು ಬೇಕಾಗುತ್ತದೆ, ಸೂತ್ರದ ಥರ ಸಂಕ್ಷಿಪ್ತವಾಗಿರಬೇಕಾಗುತ್ತದೆ; ಯುಕ್ತ ಸಮಯ ಬಂದಾಗ ಒಟ್ಟಾರೆ ವಿನ್ಯಾಸದಿಂದಲೇ ನೆನಪಿಗೆ ಒದಗುವಂತೆ ಇರಬೇಕಾಗುತ್ತದೆ. ಅಂದರೆ ನುಡಿಮನದ ಚಿಂತನೆ ಭಾಷೆಯ ವ್ಯವಸ್ಥೆಗಳೊಂದಿಗೆ ಹೆಣೆದುಕೊಂಡಿರುತ್ತದೆ. ನೆನಪಿನ ಅಗತ್ಯ ವಾಕ್ಯರಚನೆಯನ್ನೂ ನಿರ್ಧರಿಸುತ್ತದೆ.

ನಾವು ಯಾವುದನ್ನು ಈಗ ಸರಾಗವಾಗಿ ಛಂದಸ್ಸು ಅಂದು ಸುಮ್ಮನಾಗಿಬಿಡುತ್ತೇವೋ ಅದರ ಎಲ್ಲ ಅಂಶಗಳೂ ನುಡಿ ಮನಸ್ಸು ತನಗೆ ಅಗತ್ಯವಾದ `ಜ್ಞಾನ~ವನ್ನು ಅಗತ್ಯ ಬಂದಾಗ ಬಳಸಿಕೊಳ್ಳಲು ಆಗುವಂತೆ ರೂಪಿಸಿಕೊಂಡ ತಂತ್ರಗಳೇ ಆಗಿವೆ. ಬಗೆಬಗೆಯ ಶಾಸ್ತ್ರಕೃತಿಗಳೆಲ್ಲ, ಉದಾಹರಣೆಗೆ ಅಮರ ಕೋಶದಂಥ ನಿಘಂಟು, ಛಂದೋಬದ್ಧವಾದ ಭಾಷೆಯಲ್ಲಿ ಅಥವ ಸಂಕ್ಷಿಪ್ತವಾದ, ನೆನಪಿಟ್ಟುಕೊಳ್ಳಲು ಸುಲಭವಾದ ಸೂತ್ರ ರೂಪದಲ್ಲಿ, ಉದಾಹರಣೆಗೆ ವ್ಯಾಕರಣ, ಬ್ರಹ್ಮ ಸೂತ್ರ ಇತ್ಯಾದಿಗಳು, ಮೈತಾಳಿವೆ. ಛಂದಸ್ಸು, ಅಲಂಕಾರಗಳೆಲ್ಲ ಕಲೆಯ ಅಂಶವಾಗಿ ಬಳಕೆಯಾದದ್ದು ಆಮೇಲಿನ ಮಾತು. ಅದರ ಮುಖ್ಯ ಅಗತ್ಯ ಇದ್ದದ್ದು ನೆನಪಿನಲ್ಲಿ ಉಳಿಯುವಂತೆ `ಜ್ಞಾನ~ವನ್ನು ಸಂಯೋಜಿಸಿಕೊಳ್ಳುವ ಅಪೇಕ್ಷೆ. 

ಭಾರತದಲ್ಲಿ ವೇದ ಪಠ್ಯಗಳನ್ನು ನೆನಪಿಟ್ಟುಕೊಳ್ಳಲು ನುಡಿಮನಸ್ಸು ಕೆಲವು ಉಪಾಯಗಳನ್ನು ಕಂಡುಕೊಂಡಿತು. ಅವುಗಳಲ್ಲಿ ಮುಖ್ಯವಾದವು ಜಟಾಪಾಠ, ಧ್ವಜಪಾಠ ಮತ್ತು ಘನಪಾಠ. ಜಟಾಪಾಠ ಹೆಣಿಗೆಯ ಮಾದರಿಯದು; ಮೂರು ಪದಗಳಿದ್ದರೆ ಅವನ್ನು ಅನುಕ್ರಮವಾಗಿ 1,2,3 ಎಂದು ಹೇಳುವುದು ಮತ್ತೆ 3,2,1 ಹೇಳಿ, ಆಮೇಲೆ 1,2,3 ಹೇಳಿ ನಾಲ್ಕನೆಯ ಪದಕ್ಕೆ ಹೋಗುವುದು; ಧ್ವಜಪಾಠ ಎಂದರೆ ವಾಕ್ಯದ ಮೊದಲ ಜೋಡಿ ಪದಗಳು, ಕೊನೆಯ ಜೋಡಿಪದಗಳು, ಹೀಗೆ ಹಿಂದೆ ಮುಂದೆ ಚಲಿಸಿಕೊಂಡು ನೆನಪಿಗೆ ತಂದುಕೊಳ್ಳುವುದು. ಘನಪಾಠ ಇನ್ನೂ ಜಟಿಲವಾದದ್ದು: ಪದ1 ಪದ2, ಪದ2 ಪದ1, ಪದ1 ಪದ2 ಪದ3, ಪದ3 ಪದ2 ಪದ1, ಪದ1 ಪದ2 ಪದ3; ಪದ2 ಪದ3, ಪದ3 ಪದ2, ಪದ2 ಪದ3 ಪದ4, ಪದ4 ಪದ3 ಪದ2, ಪದ2 ಪದ3 ಪದ4; ...ಹೀಗೆ. ಇಂಥ ನೆನಪಿನ ತಂತ್ರಗಳಿಂದ ಪದಗಳ ಕ್ರಮ ಮತ್ತು ಶಬ್ದಸ್ವರೂಪವನ್ನು ಖಚಿತವಾಗಿ ಉಳಿಸಿಕೊಳ್ಳಲು ಸಾಧ್ಯವಾಯಿತು. ಋಗ್ವೇದದಂಥ ವಿಸ್ತಾರ ಪಠ್ಯವನ್ನೂ ಪಾಠಾಂತರಗಳಿಲ್ಲದೆ ಉಳಿಸಿಕೊಂಡದ್ದು ಮನುಷ್ಯ ಮನಸ್ಸಿನ ದೊಡ್ಡದೊಂದು ಸಾಧನೆ.
ಚಿನವ ಅಚಿಬೆ ಆಫ್ರಿಕದ ತನ್ನ `ನೋ ಲಾಂಗರ್ ಅಟ್ ಈಸ್~ ಕಾದಂಬರಿಯಲ್ಲಿ ನ್ಯಾಯ ತೀರ್ಮಾನದ ಪ್ರಸಂಗ ವರ್ಣಿಸುತ್ತಾನೆ. ಅಲ್ಲಿ ವಾದಿ, ಪ್ರತಿವಾದಿಗಳು ಸರಣಿ ಸರಣಿಯಾಗಿ ಗಾದೆಗಳನ್ನು ಹೇಳುತ್ತ ತಮ್ಮ ವಾದ ಮಂಡಿಸುತ್ತಾರೆ; ನ್ಯಾಯಾಧೀಶನೂ ತೀರ್ಮಾನ ಹೇಳುವಾಗ ಅದಕ್ಕೆ ಸೂಕ್ತವಾದ ಗಾದೆಗಳನ್ನು ಹೇಳುತ್ತಾನೆ. ನುಡಿಯಿಂದಲಷ್ಟೇ ಶಿಕ್ಷಿತವಾದ ಮನಸ್ಸು ಹೇಗೆ ನೆನಪಿಟ್ಟುಕೊಳ್ಳಬಹುದಾದ ನುಡಿಯ ಜಾಡಿನಲ್ಲೇ ಸಾಗುತ್ತ ತಮಗೆದುರಾದ ಸಂದರ್ಭವನ್ನು ಬೌದ್ಧಿಕ ವಿಶ್ಲೇಷಣೆಗೆ ಒಳಪಡಿಸುತ್ತವೆ ಅನ್ನುವುದನ್ನು ಚಿತ್ರಿಸಿದ್ದಾನೆ. ಆಫ್ರಿಕದ ಆ ಬುಡಕಟ್ಟಿನಲ್ಲಿ ಗಾದೆಗಳು ಕೇವಲ ಅಲಂಕಾರ ಮಾತ್ರವಲ್ಲ ಕಾನೂನು ಕೂಡ ಆಗಿಬಿಡುತ್ತವೆ ಅನ್ನುವುದನ್ನು ತೋರಿಸಿದ್ದಾನೆ.

ನುಡಿ ಮಾತ್ರದಿಂದಲೇ ರೂಪುಗೊಂಡ ಮನಸ್ಸು ಇನ್ನೂ ಕೆಲವು ವಿಶೇಷ ಲಕ್ಷಣಗಳನ್ನು ಹೊಂದಿರುತ್ತದೆ. ಅವನ್ನು ಮುಂದಿನ ಬರಹಗಳಲ್ಲಿ ಚರ್ಚಿಸೋಣ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT