ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನುಡಿಮರಣ ಕಾರಣಗಳು

Last Updated 30 ಜೂನ್ 2012, 19:30 IST
ಅಕ್ಷರ ಗಾತ್ರ

ಭಾಷೆಗಳ ವೈವಿಧ್ಯವನ್ನು ಉಳಿಸಿ ಬೆಳಸಬೇಕು ಅನ್ನುವವರು ನುಡಿಗೆ ಅಪಾಯಗಳು ಯಾಕೆ? ಹೇಗೆ? ಭಾಷೆಗಳೇಕೆ ಸಾಯುತಿವೆ? ನುಡಿಮರಣದ ಪ್ರಮಾಣ ಹೆಚ್ಚುತಿರುವುದೇಕೆ? ಈ ಪ್ರಶ್ನೆಗಳಿಗೆ ಗಮನ ಕೊಡಲೇಬೇಕು.

ಸಂಸ್ಕೃತಿಗಳು ಎದ್ದು, ಬಿದ್ದು, ಸತ್ತಿರುವಂತೆ ಎಷ್ಟೋ ಭಾಷೆಗಳೂ ಸತ್ತಿವೆ. ನುಡಿಗೆ ಬರವಣಿಗೆಯ ರೂಪವಿದ್ದರೆ ಮಾತ್ರ ದಾಖಲೆಗಳು ಉಳಿಯುತ್ತವೆ- ಬಿಥಿನಿಯನ್, ಸಿಸಿಲಿಯನ್, ಸಿಡಿಯನ್, ಫ್ರೀಜಿಯನ್, ಪಾಫಲೋನಿಯನ್, ಎಟ್ರೂಸ್ಕನ್, ಸುಮೇರಿಯನ್, ಎಲಮೈಟ್, ಹಿಟೈಟ್ ಹೀಗೆ ಸುಮಾರು 75 ಭಾಷೆಗಳ ಹೆಸರು ಮಾತ್ರ ಇವತ್ತು ಉಳಿದಿವೆ.

ಇವನ್ನೆಲ್ಲ ಯೂರೋಪು, ಏಷಿಯಾ ಮೈನರ್ ಪ್ರದೇಶದಲ್ಲಿ ಆಡುತಿದ್ದರು. ಚಾರಿತ್ರಿಕ ದಾಖಲೆಗಳಿದ್ದ ಭಾಷೆಗಳಿಗಿಂತ ದಾಖಲೆ ಉಳಿಸದೆ ಕಣ್ಮರೆಯಾದ ಭಾಷೆಗಳೇ ಹೆಚ್ಚು- ಚರಿತ್ರೆಯಲ್ಲಿ ಹೆಸರುಳಿದವರಿಗಿಂತ ಅನಾಮಧೇಯರಾಗಿ ಸತ್ತವರೇ ಶತಕೋಟಿ ಸಂಖ್ಯೆಯಲ್ಲಿ ಇರುವಂತೆಯೇ ಇದೂ ಕೂಡ.

ಗತ ಕಾಲದಲ್ಲಿ ಭಾಷೆಗಳು ಯಾವ ವೇಗದಲ್ಲಿ ಸಾಯುತಿದ್ದವು? ಈ ಬಗ್ಗೆ ಇರುವುದೆಲ್ಲ ಬರೀ ಊಹೆ. ಹಿಂದಿನ ಕಾಲದ ಜನಸಂಖ್ಯೆಯನ್ನು ತಕ್ಕ ಮಟ್ಟಿಗೆ ಖಚಿತವಾಗಿ ಊಹಿಸಬಹುದು.

ಹತ್ತು ಸಹಸ್ರ ವರ್ಷಗಳ ಹಿಂದೆ ಜನ ಸಂಖ್ಯೆ 5-10 ಮಿಲಿಯನ್ ಇದ್ದಿರಬಹುದು; ಒಂದೊಂದು ಸಮುದಾಯದಲ್ಲೂ ಕನಿಷ್ಠ 500-1000 ಜನ ಇದ್ದಿರಬಹುದು ಅನ್ನುವುದು ತಜ್ಞ ಮೈಖೆಲ್ ಕ್ರಾಸ್‌ನ ಊಹೆ. ಇವರೆಲ್ಲ ಬಳಸುತಿದ್ದ ಭಾಷೆಗಳು ಕನಿಷ್ಠ ಐದು, ಗರಿಷ್ಠ ಇಪ್ಪತ್ತು ಸಾವಿರ ಇದ್ದಿರಬಹುದು.
 
ಜಗತ್ತಿನಲ್ಲಿ ಯಾವುದೇ ಒಂದು ಕಾಲದಲ್ಲಿ ಇದ್ದ ಭಾಷೆಗಳ ಸಂಖ್ಯೆ ಅತಿ ಹೆಚ್ಚೆಂದರೆ ಹನ್ನೆರಡು ಸಾವಿರ; ಈಗ ಬಳಕೆಯಾಗುತ್ತಿರುವುದು ಸುಮಾರು 6-7 ಸಾವಿರ ಭಾಷೆಗಳು. ಈ ಮಿಲಿಯನ್ ವರ್ಷಗಳಲ್ಲಿ ಎಷ್ಟು ಭಾಷೆಗಳು ಹುಟ್ಟಿ ಬೆಳೆದು ಸತ್ತವೋ, ಒಂದರೊಳಗೊಂದು ಬೆರೆತವೋ, ಭಾಷೆಗಳ ಅವನತಿಯ ವೇಗ ಒಂದೇ ಸಮನಾಗಿತ್ತೋ- ಇದು ಯಾವುದೂ ನಮಗಿಂದು ಗೊತ್ತಿಲ್ಲ.

`ಭಾಷೆಗಳ ಸಾವಿನ ಪ್ರಮಾಣ ಹೆಚ್ಚುತಿದೆ~ ಈ ಅಭಿಪ್ರಾಯ ಕಾಮನ್ ಸೆನ್ಸ್‌ನಿಂದ ಮೂಡಿದ್ದು. ಇಪ್ಪತ್ತನೆಯ ಶತಮಾನದಲ್ಲಿ ರಾಷ್ಟ್ರ ಪ್ರಭುತ್ವಗಳ ಬೆಳವಣಿಗೆ ಹೆಚ್ಚಿತು, ಅದರಿಂದಾಗಿ ಆಡಳಿತ ಭಾಷೆ / ಅಧಿಕೃತ ಭಾಷೆಯ ಸ್ಥಾನಮಾನ ಸೃಷ್ಟಿಯಾಯಿತು. ಅಂತಾರಾಷ್ಟ್ರೀಯವಾದ ಜಾಗತಿಕ ಭಾಷೆಗಳ ಬೆಳವಣಿಗೆಯೂ ಆಯಿತು.

ಈ ಕಾರಣಗಳಿಂದ ಸಣ್ಣಪುಟ್ಟ ಭಾಷೆಗಳು ಅನುಭವಿಸುವ ಒತ್ತಡ ಹೆಚ್ಚಿದೆ. 1960ರ ದಶಕದಲ್ಲಿ ಸಂಗ್ರಹಿಸಿದ ಭಾಷೆಗಳ ಕುಗ್ಗುವಿಕೆಯ ಅಂಕಿಅಂಶಗಳಿವೆ. ಸಣ್ಣಪುಟ್ಟ ಭಾಷೆಗಳನ್ನಾಡುವ ಭಿನ್ನ ವಯೋಮಾನದ ಜನಗಳ ಸಂಖ್ಯೆಯ ಏರುಪೇರುಗಳ ಗಣತಿ ನಡೆದಿದೆ. ಇವನ್ನೆಲ್ಲ ಸೇರಿಸಿ ನೋಡಿದರೆ ಜಗತ್ತಿನಾದ್ಯಂತ ಇರುವ ಭಾಷಾ ಕುಟುಂಬಗಳ ಕಥೆ ಒಂದೇ ರೀತಿಯದು.

ಕಳೆದ 500 ವರ್ಷಗಳಲ್ಲಿ ಭಾಷೆಗಳ ಸಾವಿನ ಪ್ರಮಾಣ ನಾಟಕೀಯವಾಗಿ ಹೆಚ್ಚಿದೆ. ಕ್ರಿಶ 1500ರ ಸುಮಾರಿನಲ್ಲಿ ಬ್ರೆಜಿಲ್‌ನಲ್ಲಿ ಸುಮಾರು 1175 ಭಾಷೆಗಳ ಬಳಕೆ ಇತ್ತು. ಅಲ್ಲಿ ಇವತ್ತು ಉಳಿದುಕೊಂಡಿರುವ ಭಾಷೆಗಳ ಸಂಖ್ಯೆ ಇನ್ನೂರಕ್ಕಿಂತ ಕಡಮೆ.
ನುಡಿಮರಣಕ್ಕೆ ಒಂದೇ ಒಂದು ಕಾರಣವನ್ನು ಹುಡುಕಲು ಆಗದು.

ಮನುಷ್ಯರು ಸಾಯುವುದಕ್ಕೆ ಹಲವು ಕಾರಣಗಳಿರುವಂತೆ ನುಡಿಮರಣಕ್ಕೂ ಹಲವು ಕಾರಣಗಳಿದ್ದು ಒಂದೊಂದು ಪ್ರಾಂತ್ಯದಲ್ಲಿ ಒಂದೊಂದು ಕಾರಣ ಪ್ರಮುಖವಾಗಬಹುದು. ಆದರೆ ಜನಪ್ರಿಯ ಮಾಧ್ಯಮಗಳಲ್ಲಿ ಮಾತ್ರ ಈ `ಯಾಕೆ~ ಅನ್ನುವ ಪ್ರಶ್ನೆಗೆ `ಇಂಗ್ಲಿಷ್ ಜಾಗತಿಕ ಭಾಷೆಯಾಗಿ ಬೆಳೆದದ್ದೇ ಕಾರಣ~ ಅನ್ನುವಂಥ ಒಂದೇ ಕಾರಣವನ್ನು ಮುಂದುಮಾಡುತ್ತಾರೆ. ಮಾಧ್ಯಮಗಳು ಪ್ರಸರಿಸುವ ಅರ್ಧಕ್ಕಿಂತ ಕಡಮೆ ಸತ್ಯಗಳಲ್ಲಿ ಇದೂ ಒಂದು.


ಹಿಂದೆ ಎಂದೂ ಈಗ ಇರುವಷ್ಟು ಜನಸಂಖ್ಯೆ ಇರಲಿಲ್ಲ; ಜಾಗತೀಕರಣ ಈ ಪ್ರಮಾಣದಲ್ಲಿ ನಡೆದಿರಲಿಲ್ಲ; ಸಂವಹನೆ, ಸಂಪರ್ಕ ಹೀಗೆ ಸರ್ವವ್ಯಾಪಿಯಾಗಿರಲಿಲ್ಲ; ಭಾಷೆಗಳ ನಡುವಿನ ಸಂಪರ್ಕ ಇವತ್ತು ಇರುವಷ್ಟು ಪ್ರಮಾಣದಲ್ಲಿ ಇರಲಿಲ್ಲ; ಯಾವುದೇ ಒಂದು ಭಾಷೆ ಇವತ್ತು ಇಂಗ್ಲಿಷ್ ಮಾಡಿರುವಂಥ ಅಂತಾರಾಷ್ಟ್ರೀಯ ಪರಿಣಾಮಗಳನ್ನು ಉಂಟುಮಾಡಿರಲಿಲ್ಲ. ಇಂಥ ಪರಿಸರದಲ್ಲಿ ಸಣ್ಣಪುಟ್ಟ ಸಮುದಾಯಗಳ ಭಾಷೆಗಳು ಹೇಗೆ ಬದುಕುತ್ತವೆ, ಎಂಥ ಆತಂಕಗಳನ್ನು ಎದುರಿಸುತ್ತವೆ, ಸಾಯುತ್ತವೆ ಅನ್ನುವುದು ಈಗಿನ ಸಂಶೋಧನೆಗಳ ಆಸಕ್ತಿ. ಇಂಥ ಕೆಲವು ಟ್ರೆಂಡ್‌ಗಳು ಈಗ ತಿಳಿದಿವೆ.

1.ಭಾಷೆಯನ್ನಾಡುವ ಜನರೆಲ್ಲ ಸತ್ತರೆ ಆ ಭಾಷೆಯೂ ಸಾಯುತ್ತದೆ. ನುಡಿಯೊಂದರ ಸ್ವಾಸ್ಥ್ಯ ಆ ನುಡಿಯನ್ನು ಬಳಸುವವರ ಕ್ಷೇಮವನ್ನು ಅವಲಂಬಿಸಿದ್ದು. ಹಾಗಾಗಿ ಸಮುದಾಯಕ್ಕೆ ಎದುರಾಗುವ ಭೌತಿಕ ಅಪಾಯ ಭಾಷಾಮರಣದ ಒಂದು ಕಾರಣ. ನೈಸರ್ಗಿಕ ಕಾರಣಗಳಿಂದ ನುಡಿಯೊಂದನ್ನು ಆಡುವವರ ಸಂಖ್ಯೆ ಕುಗ್ಗಬಹುದು. ದೂರ ಪ್ರದೇಶಗಳಲ್ಲಿ, ಸಂಪರ್ಕವಿಲ್ಲದೆ ಬದುಕುವ ಸಮುದಾಯಗಳು ಭೂಕಂಪ, ಸುನಾಮಿ, ಪ್ರವಾಹ, ಬಿರುಗಾಳಿ, ಅಗ್ನಿಪರ್ವತ ಸ್ಫೋಟಗಳಂಥ ಕಾರಣದಿಂದ ನಿರ್ನಾಮವಾಗಬಹುದು.

ಜುಲೈ 17, 1998ರಂದು ಪಪುವಾ ನ್ಯೂಗಿನಿಯಲ್ಲಿ ಭೂಕಂಪವಾಗಿ ನಾಲ್ಕು ಹಳ್ಳಿಗಳು ನೆಲಸಮವಾಗಿ 2200 ಜನ ಸತ್ತು 10 ಸಾವಿರ ನಿರ್ವಸಿತರಾದರು. ಅವುಗಳ ಪೈಕಿ ಎರಡರಲ್ಲಿದ್ದ ಶೇ 30 ಜನ ಸತ್ತರು. ಈ ಎಲ್ಲ ಜನ ನಾಲ್ಕು ಪ್ರತ್ಯೇಕ ಭಾಷೆಗಳನ್ನು ಆಡುತಿದ್ದರೆಂದು ಗುರುತಿಸಲಾಗಿತ್ತು. ಒಂದು ಭಾಷೆಯ ಅಧ್ಯಯನ ಪ್ರಗತಿಯಲ್ಲಿತ್ತು. ಈಗ ಅಳಿದುಳಿದಿರುವ ಜನ 500ಕ್ಕಿಂತ ಕಡಮೆ. ಅವರೀಗ ದೂರದ ಸಹಾಯಕೇಂದ್ರಗಳಲ್ಲಿ ಚದುರಿ ಹೋಗಿದ್ದಾರೆ. ಈ ಭಾಷಿಕ ಸಮುದಾಯಗಳು ಸ್ಥಳಾಂತರದ ಆತಂಕವನ್ನು ದಾಟಿ ಉಳಿಯುತ್ತವೆಯೇ, ಅವರ ನುಡಿಗಳು ಉಳಿಯುತ್ತವೆಯೇ? ಗೊತ್ತಿಲ್ಲ.

2. ನೈಸರ್ಗಿಕ ಅಥವ ಆರ್ಥಿಕ ಕಾರಣಗಳಿಂದ, ಬರ ಮತ್ತು ಕ್ಷಾಮ ಅಂಥ ಎರಡು ಮುಖ್ಯ ಕಾರಣಗಳು, ಭಾಷೆಗಳು ಸಾಯಬಹುದು. 1845-46ರಲ್ಲಿ ಐರ್ಲೆಂಡಿನಲ್ಲಿ ಆಲೂಗಡ್ಡೆ ಕ್ಷಾಮ ತಲೆದೋರಿ, ಆರು ವರ್ಷಗಳ ಅವಧಿಯಲ್ಲಿ ಒಂದು ಮಿಲಿಯನ್ ಜನ ಸತ್ತರು. ದೊಡ್ಡ ಸಂಖ್ಯೆಯಲ್ಲಿ ಬೇರೆಯ ಪ್ರದೇಶಗಳಿಗೆ ಗುಳೆ ಹೋದರು. ಐರಿಶ್ ಭಾಷೆಯನ್ನು ಮಾತ್ರ ಬಲ್ಲವರಾಗಿದ್ದ ಹಳ್ಳಿಗಾಡಿನ ಜನರ ಸಂಖ್ಯೆ ತೀರ ಕಡಮೆಯಾಯಿತು.

ಐರಿಶ್ ಭಾಷೆಯ ಅವನತಿಯ ಕಾಲ ಅದು. ಕ್ಷಾಮ, ಬರ, ಅಂತರ್ಯುದ್ಧಗಳ ಕಾರಣದಿಂದ ಆಫ್ರಿಕದ ಅನೇಕ ಭಾಷೆಗಳ ಮೇಲೆ ವಿಪರೀತ ಪರಿಣಾಮಗಳಾಗಿವೆ. 1983-85ರಲ್ಲಿ ಪೂರ್ವ ಆಫ್ರಿಕದಲ್ಲಿ ಕ್ಷಾಮ ತಲೆದೋರಿ 20 ದೇಶಗಳ 22 ಮಿಲಿಯನ್ ಜನ ನರಳಿದರು; 1991-92ರ ಸೊಮಾಲಿಯ ಬರಗಾಲದಲ್ಲಿ 5 ವರ್ಷಕ್ಕಿಂತ ಕಡಮೆ ವಯಸ್ಸಿನ ಮಕ್ಕಳಲ್ಲಿ ಕಾಲು ಭಾಗ ತೀರಿಕೊಂಡರು; 1998ರಲ್ಲಿ ಸುಡಾನಿನ ದಕ್ಷಿಣದಲ್ಲಿ 29 ಮಿಲಿಯನ್ ಜನಸಂಖ್ಯೆಯ ಶೇ 10 ಭಾಗ ಹಸಿವಿನಿಂದ ನರಳಿದರು- ಇದೆಲ್ಲ ವಿಶ್ವಸಂಸ್ಥೆಯ ಅಂದಾಜು.
 
ಇದರೊಂದಿಗೆ ಸುಡಾನಿನ ಅಂತರ್ಯುದ್ಧದ ಬೇಗೆಯೂ ಸೇರಿಕೊಂಡಿತು. ಸುಡಾನಿನಲ್ಲಿ 132 ಜೀವಂತ ಭಾಷೆಗಳಿದ್ದವು. ಅವುಗಳಲ್ಲಿ 122ರ ಬಗ್ಗೆ ಮಾಹಿತಿ ಇದೆ. ಇವುಗಳಲ್ಲಿ 17 ಭಾಷೆಗಳನ್ನಾಡುವವರು ತಲಾ 1 ಸಾವಿರಕ್ಕಿಂತ ಕಡಮೆ. 54 ಭಾಷೆಗಳಿಗೆ ತಲಾ ಹತ್ತು ಸಾವಿರ ಇದ್ದರು. 105 ಭಾಷೆಗಳನ್ನಾಡುವವರು 1 ಲಕ್ಷಕ್ಕಿಂತ ಕಡಮೆ ಇದ್ದರು. ಕ್ಷಾಮ, ಡಾಮರ, ಬರಗಾಲ, ಅಂತರ್ಯುದ್ಧದ ಕಾರಣಗಳಿಂದ ಆಫ್ರಿಕದ ಎಷ್ಟೋ ಸ್ಥಳೀಯರ ಭಾಷೆಗಳು ಇಲ್ಲವಾದವು.


3. ಪರಸ್ಥಳದವರು ಬಂದು ನೆಲಸಿದಾಗ ಅವರೊಡನೆ ಬಂದ ಹೊಸ ಕಾಯಿಲೆಗಳು ಕೂಡ ಸ್ಥಳೀಯರ, ನುಡಿಗಳ ಅವಸಾನಕ್ಕೆ ಕಾರಣವಾಗುತ್ತವೆ. ಪರಸ್ಥಳೀಯರ ವಲಸೆಯ ಆರಂಭದ ವರ್ಷಗಳಲ್ಲಿ ಆದ ಇಂಥ ದುಷ್ಪರಿಣಾಮ ಅಗಾಧವಾಗಿತ್ತು. ಮೊದಲ ಯೂರೋಪಿಯನ್ನರು ಅಮೆರಿಕ ಖಂಡದಲ್ಲಿ ಕಾಲಿಟ್ಟ 200 ವರ್ಷಗಳಲ್ಲಿ ಅವರು ಹೊತ್ತು ತಂದ ಕಾಯಿಲೆಗಳಿಂದ ಶೇ. 90 ಸ್ಥಳೀಯ ಜನರು ಪ್ರಾಣ ಕಳೆದುಕೊಂಡರು.
 
ಈ ಕಾಯಿಲೆಗಳು ಯೂರೋಪಿಯನ್ನರಿಂದ, ಅವರೊಡನೆ ಬಂದ ಪ್ರಾಣಿಗಳಿಂದ ಹರಡಿದವು. ಒಂದೇ ಒಂದು ಉದಾಹರಣೆ: 1518ರಲ್ಲಿ ಮಧ್ಯ ಮೆಕ್ಸಿಕೋದ ಜನಸಂಖ್ಯೆ ಸುಮಾರು 25 ಮಿಲಿಯನ್ ಇದ್ದದ್ದು 1620ರ ವೇಳೆಗೆ 1.6 ಮಿಲಿಯನ್‌ಗೆ ಕುಸಿದಿತ್ತು. ಯೂರೋಪಿನ ಜನ ಯಾವುದನ್ನು ಹೊಸ ಜಗತ್ತು ಎಂದು ಕರೆಯುತ್ತಾರೋ ಅಲ್ಲಿದ್ದ ನೂರು ಮಿಲಿಯನ್ ಜನರ ಸಂಖ್ಯೆ ಯೂರೋಪಿಯನ್ ಸಂಪರ್ಕದ 200 ವರ್ಷಗಳಲ್ಲಿ ನಂತರ 1 ಮಿಲಿಯನ್‌ಗೆ ಕುಗ್ಗಿತ್ತು. ಎರಡೂ ಮಹಾಯುದ್ಧಗಳಲ್ಲಿ ಒಟ್ಟಾಗಿ ಸತ್ತವರ ಸಂಖ್ಯೆಗಿಂತ ಇದು ಬಹಳ ದೊಡ್ಡದು.

4. ನೈಜೀರಿಯದಲ್ಲಿ ನಾಲ್ಕುನೂರ ಎಪ್ಪತ್ತು ಸ್ಥಳೀಯ ಭಾಷೆಗಳಿವೆ; ಕ್ಷಯದ ಕಾರಣದಿಂದ ಅಲ್ಲಿನ 1 ಲಕ್ಷ 50 ಸಾವಿರ ಜನ ಸತ್ತರು. ಏಡ್ಸ್ ಕಾರಣದಿಂದ ಸತ್ತ ಶೇ 95ರಷ್ಟು ಜನ ಅಭಿವೃದ್ಧಿ ಹೊಂದುತ್ತಿರುವ ದೇಶಗಳವರು; ಈ ದೇಶಗಳಲ್ಲೇ ಜಗತ್ತಿನ ಒಟ್ಟು ಭಾಷೆಗಳಲ್ಲಿ ನಾಲ್ಕನೆಯ ಮೂರು ಭಾಗ ಇರುವುದು. ಜನಕ್ಕೆ ಬರುವ ಕಾಯಿಲೆ ಜನರಾಡುವ ನುಡಿಯನ್ನೂ ಸಾಯಿಸುತ್ತದೆ.

5. ಪರಕೀಯರು ಬಂದು ಸ್ಥಳೀಯ ಸಂಪನ್ಮೂಲವನ್ನು ಶೋಷಿಸುವ ಪ್ರಮಾಣಕ್ಕೂ ಜನ ಅನುಭವಿಸುವ ಸಂಕಟಕ್ಕೂ ನೇರ ಸಂಬಂಧವಿದೆ. ಆಫ್ರಿಕ ಖಂಡದಲ್ಲಿ 1970-80ರ ದಶಕದಲ್ಲಿ ಕಡಮೆ ಮಳೆಯ ಪ್ರದೇಶಗಳಲ್ಲಿ ಪರಕೀಯರು ನಡೆಸಿದ ಅತಿ ಬೇಸಾಯ, ಅತಿ ಪ್ರಾಣಿ ಸಾಕಣೆ, ಕೆಟ್ಟ ನೀರಾವರಿ ಪದ್ಧತಿ, ಕಾಡು ಕಡಿತ, ವಾಣಿಜ್ಯ ಬೆಳೆಗಳ ಹೆಚ್ಚಳ, ಜೊತೆಗೆ ಹವಾಮಾನ ವೈಪರೀತ್ಯವೂ ಸೇರಿಕೊಂಡು ಸ್ಥಳೀಯ ಜನ ಆಹಾರ ಬೆಳೆದುಕೊಳ್ಳುವ ಪ್ರದೇಶ ಕುಗ್ಗಿ ಬಹು ದೊಡ್ಡ ವಲಸೆಗಳು ನಡೆದವು. ಇದರಿಂದ ಸಮುದಾಯಗಳ ಅಖಂಡತೆ, ಪಾರಂಪರಿಕ ಸಂಸ್ಕೃತಿ, ಭಾಷೆಗಳ ಸಂಬಂಧದ ಜಾಲ ಮುರಿದು ಬಿತ್ತು.

6. ಸ್ಥಳೀಯ ನೈಸರ್ಗಿಕ ಸಂಪನ್ಮೂಲಗಳನ್ನು ಹೊರಗಿನವರು ಬಳಸಲು ಅವಕಾಶ ಮಾಡಿಕೊಟ್ಟಾಗ ಆಗುವ ದುಷ್ಪರಿಣಾಮಗಳಿಗೆ ಬ್ರೆಝಿಲ್ ಉದಾಹರಣೆ. 1996ರಲ್ಲಿ ಅಮೆಝಾನ್ ಮಳೆ ಕಾಡುಗಳಲ್ಲಿ ಕಾಡು ಕಡಿಯಲು ವಿದೇಶೀಯರಿಗೆ 344 ಸ್ಥಳಗಳಲ್ಲಿ ಸರ್ಕಾರ ಅವಕಾಶ ಕಲ್ಪಿಸಿತು. ರಾಜಕಾರಣಿಗಳು, ಮರಗಳ್ಳರು, ಅಧಿಕಾರಿಗಳು ಇವರೆಲ್ಲರ ದುರಾಕ್ರಮಣಗಳ ಕಾರಣದಿಂದ ಅಮೆಝಾನ್ ಕಾಡುಗಳ ಸಣ್ಣಪುಟ್ಟ ಸಮುದಾಯಗಳ ಕಗ್ಗೊಲೆ, ಅವರ ಭಾಷೆ ಸಂಸ್ಕೃತಿಗಳ ನಾಶ ನಡೆಯಿತು.
 
ಬದುಕಿ ಉಳಿದ ಬುಡಕಟ್ಟುಗಳ ಜನ ಕಾಡು ಬಿಟ್ಟು ನಗರಗಳಿಗೆ ವಲಸೆ ಹೋದರು. ತಮ್ಮ ಸಾಂಸ್ಕೃತಿಕ ಚಹರೆ ಕಳಕೊಳ್ಳುವುದು, ಬದುಕಿ ಉಳಿಯಲು ಹೊಸ ಭಾಷೆಯನ್ನು ಕಲಿಯುವುದು ಅವರಿಗೆ ಅನಿವಾರ್ಯವಾಯಿತು. ಯಾವುದೇ ಸ್ಥಳೀಯ ಪುಟ್ಟ ಭಾಷೆ ಒಂದು ತಲೆಮಾರನ್ನು ದಾಟಿ ಉಸಿರು ಹಿಡಿದುಕೊಂಡಿರಲಾರದು.

7. ರಾಜಕೀಯ, ಅಂತರ್ಯುದ್ಧ, ಅಂತಾರಾಷ್ಟ್ರೀಯ ಪ್ರಮಾಣದ ಒಳ ಸಂಘರ್ಷಗಳ ಕಾರಣದಿಂದ ಜನಸಮುದಾಯ ಛಿದ್ರವಾಗುತ್ತದೆ. ಕೊಲಂಬಿಯಾದಲ್ಲಿ ನಡೆದ ಮಿಲಿಟರಿ ಕಾರ್ಯಾಚರಣೆಗಳಿಂದ ಸ್ಥಳೀಯ ಸಮುದಾಯಗಳನೇಕವು ನಾಮಾವಶೇಷವಾದವು. ಸ್ಪಾನಿಶರ ಆಗಮನದಿಂದ ಸುಮಾರು ಮೂವತ್ತು ಭಾಷೆಗಳು ಕಣ್ಮರೆಯಾದವು. ಕೊಲಂಬಿಯಾದ ಹಳ್ಳಿಗಾಡುಗಳಲ್ಲಿ ನಿಯಮಿತವಾಗಿ ನಡೆಯುತ್ತಿರುವ ಪ್ಯಾರಾ ಮಿಲಿಟರಿ, ಗೆರಿಲ್ಲಾ, ಮಾದಕವಸ್ತು ಸಾಗಣೆ ಮಾಫಿಯಾಗಳ ಕಾರಣದಿಂದ ಸಮುದಾಯಗಳು, ಭಾಷೆಗಳು ಸಾವು ಕಂಡಿವೆ.
 
ಗುಲಾಮಗಿರಿ, ನಗರ ಪ್ರದೇಶಕ್ಕೆ ಬಲವಂತವಾಗಿ ಜನರನ್ನು ಒಯ್ಯುವುದು ಇವೂ ಜನರ ಸಾವಿಗೆ, ಭಾಷೆಗಳ ಅಳಿವಿಗೆ ಕಾರಣಗಳಾಗಿವೆ.  ಜನ ಸಮೃದ್ಧವಾಗಿ ಬದುಕಿದರೂ ಭಾಷೆಗಳು ಸಾಯಬಹುದು. ಹೇಗೆಂದು ನೋಡೋಣ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT