ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೂರೈವತ್ತರ ನೆನಪಿನ ಸುಗಂಧ

Last Updated 25 ಜನವರಿ 2012, 19:30 IST
ಅಕ್ಷರ ಗಾತ್ರ

ಖ್ಯಾತ ವಿಜ್ಞಾನದ ಲೇಖಕ ಐಸಾಕ್ ಅಸಿಮೊವ್ ತನ್ನ ಪುಸ್ತಕವೊಂದರ ಮುನ್ನುಡಿಯಲ್ಲಿ ಹೀಗೆ ಬರೆಯುತ್ತಾನೆ :  ಪ್ರಪಂಚದಲ್ಲಿ ಸುಮಾರು ಅರವತ್ತು ಲಕ್ಷ ಜನರಲ್ಲಿ ಒಬ್ಬ ಮಾತ್ರ ತನ್ನ ಹೆಜ್ಜೆಯ ಗುರುತುಗಳನ್ನು ಸಮಾಜ ಜೀವನದ ಮರಳು ಹಾಸಿನ ಮೇಲೆ ಬಿಟ್ಟು ಹೋಗುತ್ತಾನೆ, ಉಳಿದವರು ಹುಳಗಳಂತೆ ಹೆಸರಿಲ್ಲದೇ ಮಾಯವಾಗುತ್ತಾರೆ .

ನಮಗೂ ಹಾಗೆಯೇ ಅನ್ನಿಸುವುದಿಲ್ಲವೇ? ಬಹಳಷ್ಟು ಜನ ಬದುಕಿದ್ದಾಗಲೇ ಅನಾಮಧೇಯರಾಗುತ್ತಾರೆ, ಕೆಲವರು ಕೆಲವರ್ಷ ನೆನಪಿನಲ್ಲಿರುತ್ತಾರೆ. ಅಪರೂಪಕ್ಕೆ ಕೆಲವರನ್ನು ಬಹುಕಾಲ ಸ್ಮರಿಸುತ್ತೇವೆ. ಆದರೆ ಅತ್ಯಂತ ಕೆಲವೇ ಕೆಲವು ಮಹಾನುಭಾವರು ಭೌತಿಕವಾಗಿ ಮರೆಯಾಗಿ ಶತಮಾನಗಳ ನಂತರವೂ ಸ್ಮರಣೆಯಲ್ಲಿ ಇರುವುದು ಮಾತ್ರವಲ್ಲ, ಆಗಿನ ಸಮಾಜಕ್ಕೂ ಪ್ರಚೋದನೆ ನೀಡಿ ಸದಾ ಪ್ರಸ್ತುತರಾಗಿಯೇ ಉಳಿಯುತ್ತಾರೆ. ಅಂತಹ ಮಹಾ ಚೈತನ್ಯಗಳಲ್ಲಿ ಸ್ವಾಮಿ ವಿವೇಕಾನಂದರದು ಮುಂದಿನ ಸಾಲಿನ ಸ್ಥಾನ.

ದೈಹಿಕವಾಗಿ ಬದುಕಿದ್ದದ್ದು ಕೇವಲ 39 ವರ್ಷ, ಆದರೆ ಮಾಡಿದ ಸಾಧನೆಗಳನ್ನು ಗಮನಿಸಲು ಸಾಮಾನ್ಯರಿಗೆ ಒಂದು ಇಡೀ ಜೀವಮಾನ ಸಾಲದು. ಒಂದು ಸಮಗ್ರವಾದ ಜೀವನದ ಕಲ್ಪನೆಯನ್ನು ಯಾರಿಗಾದರೂ ನೀಡಬೇಕೆಂದರೆ ವಿವೇಕಾನಂದರ ಜೀವನವೇ ಮಾದರಿ, ಅದೆಷ್ಟು ದಿಕ್ಕುಗಳಲ್ಲಿ ಚಿಂತನೆ! ಪ್ರತಿಯೊಂದು ಕ್ಷೇತ್ರದಲ್ಲೂ ತಲಸ್ಪರ್ಶಿಯಾದ ಅರಿವು, ಕಶ್ಮಲವನ್ನರಿಯದ ಹೃದಯ, ಯಾವುದೇ ಸಮಸ್ಯೆಯನ್ನು ಬಿರಿದು ನೋಡಬಲ್ಲ ಅತ್ಯಂತ ತೀಕ್ಷ್ಣ ಬುದ್ಧಿಮತ್ತೆ ಇವುಗಳಿಂದಾಗಿ ಸ್ವಾಮಿ ವಿವೇಕಾನಂದರಿಗೆ ಪೌರ್ವಾತ್ಯ ಜನರ ಹೃದಯಗಳನ್ನು ಮತ್ತು ಪಾಶ್ಚಿಮಾತ್ಯರ ಬುದ್ಧಿಗಳನ್ನು ಏಕಕಾಲಕ್ಕೆ ಸಮಾನವಾಗಿ ತಲುಪಲು ಸಾಧ್ಯವಾಯಿತು.

ಗುರುವನ್ನು ಕೂಡ ಪರೀಕ್ಷಿಸಬಯಸುವ ವೈಚಾರಿಕತೆ, ಆದರೆ ಅವರನ್ನು ಒಪ್ಪಿಕೊಂಡ ಮೇಲೆ ಸಾಧಿಸಿದ ಸರ್ವಾರ್ಪಣೆ ಅನನ್ಯ. ಅದು ಯಾವ ಮಟ್ಟದ ಗೌರವವೆಂದರೆ ಅಮೆರಿಕೆಯಲ್ಲಿ ಮಾತನಾಡುವಾಗ ಎಂದಿಗೂ ಶ್ರಿರಾಮಕೃಷ್ಣರ ಹೆಸರನ್ನು ಅವರು ಬಾಯಿಯಿಂದ ನುಡಿಯುತ್ತಿರಲಿಲ್ಲ, ಕೇವಲ `ನನ್ನ ಗುರು~ ಎನ್ನುತ್ತಿದ್ದರು. ವಿವೇಕಾನಂದರ ಯಾವ ಮುಖ ನಮಗೆ ಪ್ರಿಯವಾಗದಿರುವುದು ಸಾಧ್ಯ? ಶಿಕಾಗೋದ ಸರ್ವಧರ್ಮ ಸಮ್ಮೇಳನದಲ್ಲಿ ತಮ್ಮ ಧೀರ ಗಂಭೀರ ಧ್ವನಿಯಲ್ಲಿ ಕೇವಲ ಅಮೆರಿಕೆಯ ಸಹೋದರಿ, ಸಹೋದರರೇ ಎಂದೊಡನೆ ಅವರ ಹೃದಯಗಳನ್ನು ಅಯಸ್ಕಾಂತದಂತೆ ಸೆಳೆದುಕೊಂಡ ವಿವೇಕಾನಂದರೇ? ಮ್ಯೋಡಂ ಕಾಲ್ಪ್ಟಿಯಂತಹ ಸಂಗೀತಗಾರ್ತಿಯ ಹೃದಯದಾಳದ ದುಃಖವನ್ನು ಕೇವಲ ದೃಷ್ಟಿಮಾತ್ರದಿಂದ ಗಮನಿಸಿ, ಅವಳ ಜೀವನದ ಹಿಂದಿನ ಘಟನೆಗಳನ್ನೆಲ್ಲ ತೆರೆದ ಪುಸ್ತಕದಂತೆ ಓದಿ ಸಂತೈಸಿ ಅವಳ ಜೀವನಕ್ಕೆ ಬೆಳಕಾದವರೇ? ಜಾನ್ ರಾಕ್‌ಫೆಲರ್‌ನಂತಹ ಶ್ರಿಮಂತ ಮನುಷ್ಯನಿಗೆ, `ನಿನ್ನ ದುಡ್ಡು ನಿನ್ನದಲ್ಲ. ಭಗವಂತ ನೀಡಿದ ದುಡ್ಡನ್ನು ಸಮಾಜಕ್ಕೆ ಬಳಸುವಲ್ಲಿ ನೀನೊಬ್ಬ ವಾಹಕ ಅಷ್ಟೇ~ ಎಂದು ಹೇಳಿ ಅವನಿಂದ ಬಹುದೊಡ್ಡದಾದ ಜನೋಪಯೋಗಿಯಾದ ರಾಕ್‌ಫೆಲರ್ ಫೌಂಡೇಶನ್ ಸ್ಥಾಪನೆಯಾಗಲು ಕಾರಣರಾದ ವಿವೇಕಾನಂದರೇ? ತನ್ನ ತಾಯಿನಾಡನ್ನು ಜರೆದ ಪಾದ್ರಿಯನ್ನು ಕತ್ತು ಹಿಡಿದು ಮೇಲೆತ್ತಿ,  `ನನ್ನ ತಾಯಿನಾಡಿನ ಬಗ್ಗೆ ಒಂದಾದರೂ ಕೆಟ್ಟಮಾತನ್ನಾಡಿದರೆ ಸಮುದ್ರದಲ್ಲಿ ಎಸೆದುಬಿಡುತ್ತೇನೆ~ ಎಂದು ದೇಶಪ್ರೇಮವನ್ನು ಮೆರೆದ ವೀರ ಸನ್ಯಾಸಿಯೇ? ಎಲ್ಲಿಯೋ ಭೂಕಂಪವಾಗಿ ಜನರ ಪ್ರಾಣಹಾನಿಯಾದಾಗ ಇಲ್ಲಿ ಕಣ್ಣೀರು ಸುರಿಸಿದ ದಯಾರ್ದ್ರ ಹೃದಯದ ಸನ್ಯಾಸಿಯೇ? ಪ್ರಪಂಚದಲ್ಲಿ ಏನಾದರೂ ಸುಭಗವಾದದ್ದನ್ನು, ಸುಂದರವಾದದ್ದನ್ನು ಕಂಡೊಡನೆ ನನ್ನ ದೇಶದಲ್ಲಿ ಹೀಗಾಗಬಾರದೇ ಎಂದು ಚಿಂತಿಸಿ ದುಡಿದ ಸಮಾಜ ಪ್ರೇಮಿಯೇ? ಜಾತಿ, ಮತ, ಧರ್ಮ ಮೀರಿ ದರಿದ್ರನಾರಾಯಣನ ಸೇವೆಯೇ ಪರಮಧರ್ಮವೆಂದು ಬೋಧಿಸುವುದು ಮಾತ್ರವಲ್ಲ ಹಾಗೆಯೇ ನಡೆದು ತೋರಿದ ಲೋಕಮಾದರಿಯೇ? ವ್ಯಕ್ತಿ ಕೇಂದ್ರಿತ ವ್ಯವಸ್ಥೆಗಿಂತ ಚಿಂತನಾ ಕೇಂದ್ರಿತ ವ್ಯವಸ್ಥೆ ಚಿರಾಯುವೆಂಬುದನ್ನು ಅರಿತು ತನ್ನ ನಂತರವೂ ಚಿಂತನೆಯ ದಾರಿ ಸುಲಲಿತವಾಗುವಂತೆ  ಶ್ರಿ ರಾಮಕೃಷ್ಣ ಮಠವನ್ನು ಸ್ಥಾಪಿಸಿ, ತಾನೆಂದಿಗೂ ಅದರ ಅಧ್ಯಕ್ಷನಾಗದೇ ಹಿಂದೆ ನಿಂತು ಅದನ್ನು ಮುನ್ನಡೆಸಿದ ಕಾರ್ಯ ವಿಚಕ್ಷಣತೆಯೇ? ವೇದ, ಉಪನಿಷತ್ತುಗಳ ಆಳವನ್ನು ಜನರಿಗೆ ತಿಳಿಸುತ್ತಲೇ ಧರ್ಮದ ಹೆಸರಿನಲ್ಲಿ ಅಪಾರವಾಗಿ ಸೇರಿಹೋಗಿದ್ದ ಮೂಢನಂಬಿಕೆಗಳ, ಅಸ್ಪಶ್ಯತೆಯಂತಹ ರೋಗಗಳನ್ನು ಕಠೋರವಾಗಿ ನಿಂದಿಸುತ್ತಾ ಜನಜಾಗೃತಿ ಮಾಡಿದ ಸಮಾಜ ಸುಧಾರಣೆಯೇ? ಯಾವ ಮುಖದಿಂದ ನೋಡಿದರೂ ಅದೊಂದು ಸಮಗ್ರ ಜೀವನ. ಇಂದು ನಮ್ಮ ಯುವಕರನ್ನು ವಿವೇಕಾನಂದರ ಸ್ಮರಣೆ ಉತ್ತೇಜಿಸದೇ ಹೋದರೆ ಇನ್ನಾರೂ ಉತ್ತೇಜನ ನೀಡುವುದು ಅಸಾಧ್ಯ.

ಕೆಲವೊಮ್ಮೆ ಬಹುದೊಡ್ಡ ಪರ್ವತವನ್ನು ನಮ್ಮ ಸಣ್ಣ ಕಣ್ಣುಗಳಲ್ಲಿ ತುಂಬಿಕೊಳ್ಳಲಾಗುವುದಿಲ್ಲ. ಅದಕ್ಕೆ ನಮ್ಮ ಕಣ್ಣುಗಳ ದುರ್ಬಲತೆಯೇ ಕಾರಣ ಹೊರತು ಪರ್ವತದ ದೋಷವಲ್ಲ. ಕುರುಡರು ಆನೆಯ ಬೇರೆ ಬೇರೆ ಭಾಗಗಳನ್ನು ಮುಟ್ಟಿನೋಡಿ ಬೇರೆಯಾಗಿ ಭಾವಿಸಿದಂತೆ ನಾವೂ ಕೆಲವೊಮ್ಮೆ ಅಜ್ಞಾನದಿಂದ ಮಹಾತ್ಮರ ಜೀವನವನ್ನು ಸರಿಯಾಗಿ ಗಮನಿಸದೇ ಅದರಲ್ಲಿ ಕಸರು ಕಾಣುತ್ತೇವೆ.

ಭಗವಂತನಲ್ಲೇ ತಪ್ಪು ಕಾಣುವ ನಮಗೆ ಇದು ಸಾಮಾನ್ಯ. ನನ್ನ ಕಣ್ಣುಗಳಲ್ಲಿ ಕಸ ಸೇರಿದಾಗ ದೃಷ್ಟಿ ಮಸಕಾಗುತ್ತದೆ. ಅದಕ್ಕೆ ಸೃಷ್ಟಿಯನ್ನು ತೊಳೆಯುವ ಕಾರಣವಿಲ್ಲ, ಕಣ್ಣುಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳಬೇಕು ಅಷ್ಟೇ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT