ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆನಪಾಗುತ್ತಿದೆ ದಶಕದ ಹಿಂದಿನ ಪಡಿತರ ವ್ಯವಸ್ಥೆ!

Last Updated 26 ನವೆಂಬರ್ 2016, 19:30 IST
ಅಕ್ಷರ ಗಾತ್ರ
ಎಪ್ಪತ್ತರ ದಶಕದಲ್ಲಿ ದೇಶದಲ್ಲಿ ಸೃಷ್ಟಿಯಾಗಿದ್ದ  ದಿನನಿತ್ಯದ ಅವಶ್ಯಕ ಸರಕುಗಳ ಅಭಾವಕ್ಕೂ, ಈಗ ಎಲ್ಲೆಡೆ ಕಂಡುಬರುತ್ತಿರುವ ಮತ್ತು ಬಡವ – ಶ್ರೀಮಂತರಿಗೂ ಅನುಭವಕ್ಕೆ ಬರುತ್ತಿರುವ ರೂಪಾಯಿಗಳ ಕೊರತೆ ಪರಿಸ್ಥಿತಿಗೂ ಹಲವಾರು ಸಾಮ್ಯತೆಗಳಿವೆ. 
 
1966ರಲ್ಲಿ ನಾನು ಮೊದಲ ಬಾರಿಗೆ ಪಂಜಾಬ್‌ನ ಭಟಿಂಡಾದಲ್ಲಿ ಇಂಗ್ಲಿಷ್‌ ಕಲಿಯಲು ಆರಂಭಿಸಿದ್ದೆ. ಆಗ 6ನೇ ತರಗತಿಯಿಂದ ಇಂಗ್ಲಿಷ್‌ ಬೋಧಿಸಲಾಗುತ್ತಿತ್ತು. ಮೊನ್ನೆ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರು ಭಟಿಂಡಾದಲ್ಲಿ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಎಐಐಎಂಎಸ್‌) ಹೊಸ ಕಟ್ಟಡ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡುತ್ತ, ಗರಿಷ್ಠ ಮುಖಬೆಲೆಯ ನೋಟುಗಳನ್ನು ರದ್ದು ಮಾಡಿ ಕಪ್ಪುಹಣ ಮತ್ತು ಭ್ರಷ್ಟಾಚಾರದ ವಿರುದ್ಧ ಸಮರ ಸಾರಿರುವ ತಮ್ಮ ನಿರ್ಧಾರವನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. 
 
ನಾನು ಇಲ್ಲಿ 1966ನೇ ವರ್ಷವನ್ನು ಉಲ್ಲೇಖಿಸಲು ಕಾರಣ ಏನೆಂದರೆ, ಇಂದಿರಾ ಗಾಂಧಿ ಅವರು ಮೊದಲ ಬಾರಿಗೆ ದೇಶದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ   ಮತ್ತು ‘ಸಮಾಜವಾದಿ ರಾಜ್‌’ ನಿರ್ಮಾಣಕ್ಕೆ ಚಾಲನೆ ನೀಡಿದ ವರ್ಷವೂ ಅದಾಗಿತ್ತು. ದೇಶದಲ್ಲಿ ರೇಷನ್‌ (ಪಡಿತರ) ವ್ಯವಸ್ಥೆಗೆ ಮೊದಲ ಬಾರಿಗೆ ಚಾಲನೆ ನೀಡಲಾಗಿತ್ತು. ಮೇಲಿಂದ ಮೇಲೆ ಮರುಕಳಿಸುತ್ತಿದ್ದ ಬರಗಾಲದಿಂದಾಗಿ ಆ ದಿನಗಳಲ್ಲಿ ಅರ್ಥ ವ್ಯವಸ್ಥೆಯಲ್ಲಿ ದಿನಬಳಕೆ ಅವಶ್ಯಕ ಸರಕುಗಳ ತೀವ್ರ ಕೊರತೆ ಉದ್ಭವಿಸಿತ್ತು. ಈ ಅಭಾವ ಪರಿಸ್ಥಿತಿ ನಿಭಾಯಿಸಲು ಇಂದಿರಾ ಗಾಂಧಿ ಅವರು ದೇಶದ ಇತಿಹಾಸದಲ್ಲಿ ಅದೇ ಮೊದಲ ಬಾರಿಗೆ ಅತ್ಯಂತ ಕಠಿಣ ಸ್ವರೂಪದ ಮತ್ತು ಅವಿವೇಕದ ಪಡಿತರ ವ್ಯವಸ್ಥೆ ಜಾರಿಗೆ ತರಲು ಚಾಲನೆ ನೀಡಿದ್ದರು.
 
ಜನರು ತಮಗೆಷ್ಟೇ ಕಷ್ಟವಾದರೂ ಸಂಯಮದಿಂದ ಆ ಎಲ್ಲ ಕಟ್ಟುಪಾಡುಗಳನ್ನು  ಸಹಿಸಿಕೊಂಡಿದ್ದರು. ಹಡಗುಗಳಲ್ಲಿ ಅಮೆರಿಕದಿಂದ ಪೂರೈಕೆಯಾಗುತ್ತಿದ್ದ ಗೋಧಿಯ ಅನಿವಾರ್ಯ ಬಳಕೆಯ ಕಟು ವಾಸ್ತವವನ್ನೂ ಅವರು ಒಪ್ಪಿಕೊಂಡಿದ್ದರು. ಆದರೆ, ಕೆಲವೇ ವರ್ಷಗಳಲ್ಲಿ ಅಧಿಕಾರಶಾಹಿಯು ಪಡಿತರ ಪದ್ಧತಿ, ನಿಯಂತ್ರಣ ಕ್ರಮಗಳ ಮೂಲಕ ತನ್ನ ಅಧಿಕಾರವನ್ನು ಹೆಚ್ಚಿಸಿಕೊಂಡಿತ್ತು. ಮದುವೆ ಮತ್ತಿತರ ಶುಭ ಸಮಾರಂಭಗಳಿಗೆ ಬೇಕಾಗುವ ಸಕ್ಕರೆ, ಮೈದಾ, ರವೆ ಖರೀದಿಸುವ ಪ್ರಮಾಣ ನಿಗದಿಪಡಿಸುವ ಅಧಿಕಾರವನ್ನು ಜಿಲ್ಲಾಧಿಕಾರಿಗಳಿಗೆ ನೀಡಲಾಗಿತ್ತು.  ಅಷ್ಟೊತ್ತಿಗಾಗಲೇ ಸೀಮೆಎಣ್ಣೆಯ ಪಡಿತರ ವಿತರಣೆಯೂ ಜಾರಿಗೆ ಬಂದಾಗಿತ್ತು.  ಆನಂತರ ಈ ಪಡಿತರ ಪಟ್ಟಿಗೆ ಸಿಮೆಂಟ್ ಕೂಡ ಸೇರ್ಪಡೆಯಾಗಿತ್ತು. 
 
ಸದ್ಯಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕಾರ್ಯದರ್ಶಿ, ಹೆಚ್ಚುವರಿ ಕಾರ್ಯದರ್ಶಿ ಹುದ್ದೆ ನಿಭಾಯಿಸುತ್ತಿರುವ ಐಎಎಸ್‌ ಅಧಿಕಾರಿಗಳು ಆ ದಿನಗಳಲ್ಲಿ ಸಿಮೆಂಟ್ ಖರೀದಿಯ ಪಡಿತರ ಪ್ರಮಾಣವನ್ನೂ ನಿಗದಿಪಡಿಸುವ ಹೊಣೆಗಾರಿಕೆ ನಿಭಾಯಿಸಿದ್ದರು.
 
ಬಿಜೆಪಿಯ ಹಿಂದಿನ ಅವತಾರವಾಗಿದ್ದ ಜನಸಂಘವು ಚಲಾವಣೆಗೆ ತಂದಿದ್ದ, ‘ಇಂದಿರಾ, ನಿನ್ನ ಅಧಿಕಾರಾವಧಿಯಲ್ಲಿ ತಿಪ್ಪೆಗುಂಡಿಯ ಕಸವನ್ನೂ ಪಡಿತರದಲ್ಲಿ ಮಾರಾಟ ಮಾಡಲಾಗುತ್ತಿದೆ’ ಎನ್ನುವ ಘೋಷಣೆಯು ಆಗ ಎಲ್ಲೆಡೆ ತುಂಬ ಜನಪ್ರಿಯವಾಗಿತ್ತು.
 
ಇಂತಹ ಕಟು ಟೀಕೆಗಳನ್ನೂ ಲೆಕ್ಕಕ್ಕೆ ತೆಗೆದುಕೊಳ್ಳದ ‘ಸಮಾಜವಾದಿ’ ಸರ್ಕಾರ ತನಗೆ ಸರಿಕಂಡ ರೀತಿಯಲ್ಲಿಯೇ ಮುನ್ನಡೆದಿತ್ತು. 1970ರಲ್ಲಿ ಸರ್ಕಾರ ಅಗ್ಗದ ಹತ್ತಿಯನ್ನೂ ರೇಷನ್‌ ಮೂಲಕ ಮಾರಾಟ ಮಾಡಲು ಮುಂದಾಗಿತ್ತು. ಶಾಲೆಗಳ ನೋಟ್‌ ಪುಸ್ತಕಗಳ ವಿತರಣೆಯೂ ಪಡಿತರ ವ್ಯವಸ್ಥೆಗೆ ಒಳಪಟ್ಟಿತ್ತು. 
 
ಈ ಪಡಿತರ ವ್ಯವಸ್ಥೆಯ ಫಲವಾಗಿ ನಾಗರಿಕ ಸೇವೆ ಅಧಿಕಾರಿಗಳ ಬಳಿ ಹೆಚ್ಚೆಚ್ಚು ಅಧಿಕಾರ ಕೇಂದ್ರೀಕೃತವಾಗಿತ್ತು. ಹೀಗಾಗಿ ಅವರಲ್ಲಿ ಅಧಿಕಾರದ ಪಿತ್ತ ನೆತ್ತಿಗೇರಿತ್ತು. ಉದಾಹರಣೆಗೆ ಹೇಳುವುದಾದರೆ, ಮಕ್ಕಳ ಮದುವೆಗೆ ಎಷ್ಟು ಜನ ಬಂಧು ಬಾಂಧವರು ಬರಬಹುದೆಂದು ಮದುವೆ ಮನೆಯವರು ನಿರೀಕ್ಷಿಸುವುದನ್ನೂ ಈ ಅಧಿಕಾರಿಗಳೇ ನಿರ್ಧರಿಸುತ್ತಿದ್ದರು. ಮದುವೆ ದಿಬ್ಬಣಕ್ಕೆ ಯಾವ ಪ್ರಮಾಣದಲ್ಲಿ ಸಿಹಿತಿಂಡಿ ಉಣಬಡಿಸಬೇಕು ಎನ್ನುವುದನ್ನೂ ಅಧಿಕಾರಿಗಳೇ ನಿಯಂತ್ರಿಸುತ್ತಿದ್ದರು.   ಆದರೆ, ಯಾರೊಬ್ಬರೂ ಅದನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿರಲಿಲ್ಲ. ಹೀಗಾಗಿ ನಿಗದಿಪಡಿಸಿದ ಸಂಖ್ಯೆಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಬರುವ ಪ್ರತಿ ಅತಿಥಿಗೆ ಹೆಚ್ಚುವರಿಯಾಗಿ ಅಡುಗೆ ತಯಾರಿಸಿದ್ದಕ್ಕೆ ಪ್ರತಿಯಾಗಿ ಸರ್ಕಾರಕ್ಕೆ ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗುತ್ತಿತ್ತು.  
 
‘ಅಭಾವ ಆರ್ಥಿಕತೆ’ಯಲ್ಲಿ ಹಾಲಿನ ಉತ್ಪನ್ನಗಳ ಖರೀದಿ ಮೇಲೂ ನಿಬಂಧನೆ ವಿಧಿಸಲಾಗಿತ್ತು. ಬೇಸಿಗೆಯಲ್ಲಿ ಹಾಲಿನ ಉತ್ಪಾದನೆ ಕಡಿಮೆ ಇರುತ್ತಿದ್ದರಿಂದ ಹಾಲಿನ ಉತ್ಪನ್ನಗಳಾದ ಖೋವಾ, ಪನ್ನೀರ್‌, ಬರ್ಫಿ, ಗುಲಾಬ್‌ ಜಾಮೂನ್‌, ರಸಗುಲ್ಲಾಗಳ ತಯಾರಿಕೆ ಮತ್ತು ಖರೀದಿ ಮೇಲೆ ನಿಷೇಧ ಜಾರಿಯಲ್ಲಿ ಇರುತ್ತಿತ್ತು.
 
ಉಳ್ಳವರು ಮತ್ತು ಇಲ್ಲದವರು, ಆಡಳಿತ ನಡೆಸುವವರು ಮತ್ತು ಮತದಾರರ ಮಧ್ಯೆ ಇರುವ ಅಂತರ ತಗ್ಗಿಸುವುದು ಸಮಾಜವಾದಿ ಸರ್ಕಾರದ ಭರವಸೆಯಾಗಿತ್ತು. ಈ ಉದ್ದೇಶ ಸಾಕಾರಗೊಳಿಸಲು ಕೈಗೊಂಡ ಕ್ರಮಗಳ ಫಲಿತಾಂಶ ಮಾತ್ರ ಸಂಪೂರ್ಣವಾಗಿ ತದ್ವಿರುದ್ಧವಾಗಿತ್ತು.
 
ಶ್ರೀಮಂತರು ನಿರಂತರವಾಗಿ ಇನ್ನಷ್ಟು ಸಿರಿವಂತರಾಗುತ್ತಲೇ ಹೋದರು. ಹೀಗಾಗಿ ಇವರು ತಮಗೆ ಅನುಕೂಲಕರವಾದ ವ್ಯವಸ್ಥೆಯನ್ನು ಇನ್ನಷ್ಟು ಪೋಷಿಸುತ್ತಲೇ ಹೋದರು. ಶೋಷಣೆಗೆ ಒಳಗಾದವರು ಅಧಿಕಾರಶಾಹಿಯ ವಸಾಹತುಶಾಹಿ ಧೋರಣೆಗೆ ನಲುಗುತ್ತಲೇ ಹೋದರು. 
 
ಜನಸಾಮಾನ್ಯರು ಎದುರಿಸುತ್ತಿದ್ದ ಹಲವಾರು ಸಂಕಷ್ಟಗಳು ಅನೇಕ ಸಂದರ್ಭಗಳಲ್ಲಿ ತಮಾಷೆಗೂ ಕಾರಣವಾಗುತ್ತಿದ್ದವು. ಉದಾಹರಣೆಗೆ  ಪಂಜಾಬ್‌ನ ಭಟಿಂಡಾದ ರೈತನೊಬ್ಬ ಫಿರಂಗಿ ಹೊಂದಲು ಅರ್ಜಿ ಸಲ್ಲಿಸಿದಾಗ ಜಿಲ್ಲಾಧಿಕಾರಿಯು ಇಂತಹ ಹುಚ್ಚುಚ್ಚು ಬೇಡಿಕೆ ಮಂಡಿಸಿರುವ ತಿಕ್ಕಲು ವ್ಯಕ್ತಿಯನ್ನು ತನ್ನ ಬಳಿ ಕರೆ ತರಬೇಕು ಎಂದು ಆದೇಶಿಸುತ್ತಾನೆ. ಜಿಲ್ಲಾಧಿಕಾರಿ ಕಚೇರಿಗೆ ಬರುವ ರೈತ, ತುಂಬ ವಿನೀತ ಭಾವದಿಂದ ‘ಹುಜೂರ್‌, ನನ್ನ ಮಗಳ ಮದುವೆಗೆ ನಾನು ಐದು ಕ್ವಿಂಟಲ್‌ನಷ್ಟು ಸಕ್ಕರೆ ಬೇಕು ಎಂದು ಮನವಿ ಸಲ್ಲಿಸಿದ್ದೆ. ಅದಕ್ಕೆ ಸಾಹೇಬ್‌ ಬಹಾದ್ದೂರ್‌ (ಜಿಲ್ಲಾಧಿಕಾರಿ) ಅವರು 25 ಕೆ.ಜಿ.ಗಳಷ್ಟು ಸಕ್ಕರೆ ಮಾತ್ರ ಹಂಚಿಕೆ ಮಾಡಿದ್ದರು. ಹೀಗಾಗಿ ಈಗ ನನಗೆ ಬರೀ ಪಿಸ್ತೂಲ್‌ಗೆ ಮಾತ್ರ ಲೈಸೆನ್ಸ್‌ ಬೇಕು. ಆದರೆ, ಫಿರಂಗಿ ಹೊಂದಲು ಲೈಸೆನ್ಸ್‌ ಕೇಳಿದರೆ ಕನಿಷ್ಠ ಪಿಸ್ತೂಲ್‌ ಆದರೂ ಸಿಕ್ಕೀತು’ ಎಂದು ಮನವಿ ಮಾಡಿಕೊಳ್ಳುತ್ತಿದ್ದನಂತೆ.
 
ಬಾಲಿವುಡ್‌ ಸಿನಿಮಾಗಳಲ್ಲೂ ಮನೋಜ್‌ ಕುಮಾರ್‌ ಅವರಂತಹ ನಾಯಕ ನಟರು, ‘ಅಕ್ರಮ ದಾಸ್ತಾನುಗಾರರು, ಕಾಳಸಂತೆಕೋರರು, ದುರಾಸೆಯ ಲಾಭಕೋರರೆಲ್ಲ ಕೆಟ್ಟವರು, ಖಳನಾಯಕರು’ ಎಂದು ದೂರಿ ಅವರನ್ನು ಸದೆ ಬಡಿಯುತ್ತಿದ್ದರೇ ಹೊರತು ಸರ್ಕಾರಿ ಅಧಿಕಾರಿಗಳನ್ನಂತೂ ಅಲ್ಲ. 
 
ದೇಶದಲ್ಲಿ ಹಣದುಬ್ಬರ ಅತ್ಯಂತ ಗರಿಷ್ಠ ಮಟ್ಟವಾದ ಶೇ 27ರಷ್ಟಕ್ಕೆ ತಲುಪಿದ 1974ರ ದಿನಗಳಲ್ಲಿ ಬಿಡುಗಡೆಯಾದ ಮತ್ತು ಭಾರಿ ಜನಪ್ರಿಯತೆ ಪಡೆದ ‘ರೋಟಿ, ಕಪಡಾ ಔರ್‌ ಮಕಾನ್‌’ ಹಿಂದಿ ಚಿತ್ರದಲ್ಲಿನ ಜನಪ್ರಿಯ ಹಾಡಿನ ‘ಬಾಕಿ ಕುಚ್‌ ಬಚಾ ತೋ ಮೆಹಂಗಾಯಿ ಮಾರ್‌ ಗಯಿ...’ ಸಾಲುಗಳು ಸದ್ಯಕ್ಕೆ ಉದ್ಭವಿಸಿರುವ ಕರೆನ್ಸಿ ಬಿಕ್ಕಟ್ಟಿನ ಸಂದರ್ಭದಲ್ಲಿ ಅದೆಷ್ಟು ಪ್ರಸ್ತುತವಾಗಿವೆ ಎನ್ನುವುದನ್ನೂ ನಾವಿಲ್ಲಿ ಗಮನಿಸಬಹುದು.
 
ಸದ್ಯಕ್ಕೆ ರೂಪಾಯಿ ವಿತರಣೆಗೂ ಪಡಿತರ ನಿಯಮ ಅನ್ವಯವಾಗಿದೆ. ನಾವೆಲ್ಲ ಸಣ್ಣ ಮೊತ್ತ ಪಡೆಯಲು ಬ್ಯಾಂಕ್‌, ಎಟಿಎಂಗಳ ಎದುರು ಸರತಿ ಸಾಲಿನಲ್ಲಿ ನಿಲ್ಲಬೇಕಾಗಿ ಬಂದಿದೆ. ನಮ್ಮದೇ ಆದ ಬ್ಯಾಂಕ್‌ ಖಾತೆಯಿಂದ ನಮ್ಮ ಹಣ ಪಡೆಯಲು ಪಡಿತರ ವ್ಯವಸ್ಥೆಗೆ ಮೊರೆ ಹೋಗಿದ್ದೇವೆ. ಕೊನೆಮೊದಲಿಲ್ಲದ ಉದ್ದನೆಯ ಸರತಿ ಸಾಲು ನಮ್ಮನ್ನು ನಿರ್ದಯವಾಗಿ ಹಿಂಸಿಸುತ್ತಿದೆ.
 
ದಶಕಗಳ ಉದ್ದಕ್ಕೂ ಸಮಾಜವಾದಿ ಸರ್ಕಾರ ಪಾಲಿಸಿಕೊಂಡು ಬಂದಿದ್ದ ಪಡಿತರ ವ್ಯವಸ್ಥೆಯು ಸಮಾಜದಲ್ಲಿ ‘ಸೂಪರ್‌ ಸಮಾಜಶ್ರೇಷ್ಠರು’ ಎನ್ನುವ ಹೊಸ ವರ್ಗವನ್ನೇ ಸೃಷ್ಟಿಸುತ್ತಾ ಬಂದಿತ್ತು. ಈ ಹೊಸ ವರ್ಗವು ಸಮಾಜದಲ್ಲಿನ ಇತರರ ಜತೆ ಸದಾ ಒರಟಾಗಿ ವರ್ತಿಸುತ್ತಲೇ ಬಂದಿದೆ. ಭ್ರಷ್ಟತೆ ಮೈಗೂಡಿಸಿಕೊಳ್ಳುತ್ತಲೇ ಕಪ್ಪುಹಣವನ್ನೂ ಸಂಗ್ರಹಿಸುತ್ತಲೇ ಬಂದಿದೆ. ಅಪ್ರಾಮಾಣಿಕತೆ ಮತ್ತು ಭ್ರಷ್ಟತೆಯನ್ನು ರಕ್ತಗತ ಮಾಡಿಕೊಂಡಿರುವ ಭಾರತೀಯರು ಸ್ವಯಂ ಚಾಟಿಯೇಟು ಹಾಕಿಕೊಳ್ಳುವುದೂ ಈಗ ಹೊಸ ಫ್ಯಾಷನ್‌ ಆಗಿಬಿಟ್ಟಿದೆ. 
 
ನಾವು ಪರಿಪೂರ್ಣರಲ್ಲ ಎನ್ನುವುದು ವಾಸ್ತವ ಸಂಗತಿಯಾಗಿದೆ. ಆದರೆ, ನಮ್ಮ ಸಂಸ್ಥೆಗಳು ಅಥವಾ ಸರ್ಕಾರ, ನಮ್ಮ ಮುಖಂಡರು ಎಲ್ಲರನ್ನೂ ಒಳಗೊಂಡ ‘ವ್ಯವಸ್ಥೆ’ಯು ದಶಕಗಳ ಅವಧಿಯಲ್ಲಿ ಸಮಾಜವಾದದ ಸ್ವಯಂ ಸರ್ವನಾಶದ ಅವಕಾಶವನ್ನೇ ಒದಗಿಸಿಕೊಟ್ಟಿಲ್ಲ. 
 
1971ರಿಂದ 1983ರವರೆಗಿನ ಸರ್ಕಾರಿ ನಿಯಂತ್ರಣದ ‘ಬಡತನ ನಿರ್ಮೂಲನೆ’ಯ (ಗರೀಬಿ ಹಟಾವೊ) ವರ್ಷಗಳಲ್ಲಿ ಬಡತನ ರೇಖೆಗಿಂತ ಕೆಳಗೆ ಇರುವ ಕಡು ಬಡವರ ಸಂಖ್ಯೆಯು ಶೇ 1ರಷ್ಟೂ ಕಡಿಮೆಯಾಗಿಲ್ಲ. ಆದಾಗ್ಯೂ ನಾವು ಸಮಾಜವಾದಿ  ವ್ಯವಸ್ಥೆಯನ್ನು ಹೊಗಳುತ್ತಲೇ ಬಂದಿದ್ದು, ಇಂದಿರಾ ಗಾಂಧಿ ಅವರನ್ನು ಪ್ರಭಾವಿ ರಾಜಕಾರಣಿ ಎಂದೇ ಶ್ಲಾಘಿಸುತ್ತಾ ಬಂದಿದ್ದೇವೆ.
 
ಎಪ್ಪತ್ತು, ಎಂಬತ್ತರ ದಶಕದ ದಿನಗಳ ಬಗ್ಗೆ ಇಂದಿನ ಗೂಗಲ್‌ ನಂತರದ ತಲೆಮಾರಿನವರಿಗೆ ಯಾವುದೇ ಮಾಹಿತಿ ಇಲ್ಲ. ನಮ್ಮ ಅಧಿಕಾರಶಾಹಿಯು ಆ ದಿನಗಳಲ್ಲಿ ಏನೆಲ್ಲ ಅವಾಂತರಗಳನ್ನು ಮಾಡಿತ್ತು ಎನ್ನುವುದೆಲ್ಲ ಹೊಸ ತಲೆಮಾರಿನ ಯುವಜನಾಂಗದ ಪಾಲಕರಿಗೆ ಮಾತ್ರ ಗೊತ್ತಿದೆ.
 
ಹೀಗಾಗಿ ಹೊಸ ಪಡಿತರ ವ್ಯವಸ್ಥೆ ಮತ್ತು ನಿಯಂತ್ರಣ ಕ್ರಮಗಳು ಅಧಿಕಾರಶಾಹಿಯ ಬಾಯಲ್ಲಿ ನೀರೂರಿಸುತ್ತಿವೆ. ಹಳೆಯ ಸಮಾಜವಾದಿ, ‘ನಿಯಂತ್ರಣ ರಾಜ್‌’ ವ್ಯವಸ್ಥೆಯ  ಸಹಜ ಪ್ರವೃತ್ತಿಯು ಅವರಲ್ಲಿ ಮತ್ತೆ ಮೈಗೂಡುತ್ತಿದೆ. 
 
ಗರಿಷ್ಠ ಮುಖಬೆಲೆಯ ನೋಟುಗಳ ಚಲಾವಣೆಯನ್ನು ಅಮಾನ್ಯಗೊಳಿಸಿದ ಅಚ್ಚರಿದಾಯಕ ನಿರ್ಧಾರ ಪ್ರಕಟವಾದಾಗ, ‘ವ್ಯವಸ್ಥೆ’ ಏನು ಮಾಡಬಹುದು.  ಹೆಚ್ಚೆಂದರೆ ಹಳೆಯ ನಿಯಮಗಳ ದೂಳು ಕೊಡವಿ ಮತ್ತೆ ಜಾರಿಗೆ ತರಲು ಮುಂದಾಗಬಹುದು.
 
ಪ್ರತಿ ವ್ಯಕ್ತಿಯು ಸೂಕ್ತ ದಾಖಲೆ ತಂದರೆ ಮಾತ್ರ ಬ್ಯಾಂಕ್‌ನಿಂದ ₹ 4,000 ಪಡೆಯಬಹುದು ಎನ್ನುವ ನಿಬಂಧನೆ ವಿಧಿಸಲಾಯಿತು. ಬ್ಯಾಂಕ್‌ಗೆ ಮುಗಿಬೀಳುವವರ ಸಂಖ್ಯೆ ಹೆಚ್ಚಾದಾಗ ಬೆರಳಿಗೆ ಅಳಿಸಲಾಗದ ಮಸಿ ಹಚ್ಚುವ ನಿಯಮ  ಜಾರಿಗೆ ಬಂದಿತು. ತಕ್ಷಣಕ್ಕೆ ಮಸಿ ದೊರೆಯದೆ ಹೋದಾಗ, ಹಣ ಪಡೆಯುವ ಮೊತ್ತದ ಮೇಲೆ ಮತ್ತೆ ಮಿತಿ ಹೇರಲಾಯಿತು. ನೋಟು ರದ್ದತಿ ನಿರ್ಧಾರ ಜಾರಿಗೆ ಬಂದು ಹತ್ತಿರ  ಮೂರು ವಾರಗಳಾದರೂ ಬಿಕ್ಕಟ್ಟನ್ನು ಸಮರ್ಥವಾಗಿ ನಿಭಾಯಿಸಲು ಕೇಂದ್ರ ಸರ್ಕಾರಕ್ಕೆ ಇದುವರೆಗೂ ಸಾಧ್ಯವಾಗುತ್ತಿಲ್ಲ. 
 
‘ಡಿಸೆಂಬರ್‌ 30ರವರೆಗೆ  ಹಳೆ ನೋಟುಗಳನ್ನು ಬದಲಿಸಲು ಅವಕಾಶ ಇದೆ. ನಿಮ್ಮ ಹಣ ಸುರಕ್ಷಿತವಾಗಿರುತ್ತದೆ. ಯಾವುದೇ ಕಾರಣಕ್ಕೂ ಆತಂಕ ಪಡಬೇಡಿ’ ಎಂದು ಪ್ರಧಾನಿ ಭರವಸೆ ನೀಡಿದ್ದಾರೆ. ಭಾರತೀಯ ರಿಸರ್ವ್‌ ಬ್ಯಾಂಕ್‌ ಕೂಡ ಇದೇ ಬಗೆಯ ಅಭಯ ನೀಡಿದೆ. 
 
ಮಕ್ಕಳ ಮದುವೆ ನೆರವೇರಿಸಲು ಪಾಲಕರು ಬ್ಯಾಂಕ್‌ ಖಾತೆಯಿಂದ ₹ 2.5 ಲಕ್ಷದ ಗರಿಷ್ಠ ಮಿತಿ ಒಳಗೆ ತಮ್ಮ ದುಡಿಮೆಯ ಹಣ ಮರಳಿ ಪಡೆಯಲು ಒದಗಿಸಬೇಕಾದ ಸಾಕ್ಷ್ಯಾಧಾರಗಳನ್ನು ಪಟ್ಟಿ ಮಾಡುವ ಅಧಿಕಾರಿಗಳೇ, ಅರವತ್ತರ ದಶಕದಲ್ಲಿ ಮದುವೆ ಸಮಾರಂಭಗಳಿಗೆ ಸಕ್ಕರೆ ಹಂಚಿಕೆಯ ನಿಯಮಗಳನ್ನು ರೂಪಿಸಿದ್ದರು. ಕೆಲ ಅಧಿಕಾರಿಗಳಂತೂ ಹಳೆಯ ದಾಖಲೆಗಳನ್ನೇ ಹೊರ ತೆಗೆದು ಕೆಲ ಸಣ್ಣಪುಟ್ಟ ಬದಲಾವಣೆಗಳೊಂದಿಗೆ ನೋಟಿಗೆ ಸಂಬಂಧಿಸಿದ ನಿಬಂಧನೆಗಳನ್ನು ಜಾರಿಗೆ ತಂದಿರಬಹುದು ಎಂದೂ ಭಾವಿಸಬಹುದಾಗಿದೆ. 
 
ಭಾರತದ ಅಧಿಕಾರಶಾಹಿಯ ಚಿಂತನೆ ಯಾವ ರೀತಿ ಇರುತ್ತದೆ ಎನ್ನುವುದನ್ನು ತಿಳಿಯಲು, ಅಂಕಣ ಬರೆಯಲು ಮಾಹಿತಿ ಕಲೆ ಹಾಕುವ, ಸಂಶೋಧನೆ ನಡೆಸುವುದಕ್ಕಿಂತ ಹೆಚ್ಚಿನ ಪರಿಶ್ರಮ ಪಡಬೇಕಾದೀತು. ಬಹುಶಃ ಇದಕ್ಕೆ ಹಾರ್ವರ್ಡ್‌ ಕೆನಡಿ ಸ್ಕೂಲ್‌ನ ಡಾಕ್ಟರೇಟ್‌ ಪಡೆಯಬೇಕೇನೊ.
 
ನಿಮಗಿನ್ನೂ ಅನುಮಾನಗಳಿದ್ದರೆ, ಬೇಕಿದ್ದರೆ ಹಳೆಯ ಪಾಸ್‌ಪೋರ್ಟ್‌ಗಳನ್ನು ಗಮನಿಸಿ. ಹಳೆಯದು ಅಂದರೆ ತುಂಬ ಹಳೆಯದೂ ಅಲ್ಲ. ಪಿ.ವಿ.ನರಸಿಂಹರಾವ್‌ ಮತ್ತು ಮನಮೋಹನ್‌ ಸಿಂಗ್ ಅವರು ಆರ್ಥಿಕ ಸುಧಾರಣಾ ಕ್ರಮಗಳನ್ನು ಜಾರಿಗೆ ತಂದ ತೊಂಬತ್ತರ ದಶಕದ ಆರಂಭದ ವರ್ಷಗಳ ಪಾಸ್‌ಪೋರ್ಟ್‌ಗಳ ಕೊನೆಯ ಕೆಲ ಪುಟಗಳ ಮೇಲೆ ಒಮ್ಮೆ ಕಣ್ಣಾಡಿಸಿ ನೋಡಿದರೆ, ಪಡಿತರ ವ್ಯವಸ್ಥೆಯ ಹಾವಳಿಯ ಬಗ್ಗೆ ಸಾಕಷ್ಟು ಮಾಹಿತಿ ದೊರೆಯಬಹುದು.
 
ವಿದೇಶ ಪ್ರವಾಸದ ಉದ್ದೇಶಕ್ಕೆ ವಿದೇಶಿ ಕರೆನ್ಸಿ ಮಂಜೂರು ಮಾಡಿದ ಮತ್ತು ಉಳಿಕೆ ಕರೆನ್ಸಿಗಳನ್ನು ಬ್ಯಾಂಕ್‌ಗೆ ಮರಳಿ ಒಪ್ಪಿಸಿದ ಬಗ್ಗೆ ಬ್ಯಾಂಕ್‌ ಸಿಬ್ಬಂದಿಯು ಓದಲು ಸಾಧ್ಯವಿಲ್ಲದ ಸಾಲುಗಳನ್ನು ಬೇಕಾಬಿಟ್ಟಿಯಾಗಿ ಬರೆದು ಮುದ್ರೆ ಒತ್ತಿರುವುದನ್ನು  ನೋಡಬಹುದು. ಆ ದಿನಗಳಲ್ಲಿ ವಿದೇಶಿ ಪ್ರವಾಸಕ್ಕೆ ತೆಗೆದುಕೊಂಡಿದ್ದ ವಿದೇಶಿ ಕರೆನ್ಸಿಯ ಉಳಿದ ಮೊತ್ತವನ್ನು ಬ್ಯಾಂಕ್‌ಗಳಿಗೆ ಮರಳಿಸುವುದು ಕಡ್ಡಾಯವಾಗಿತ್ತು.
 
ಈಗಿನ ನಮ್ಮ ವ್ಯವಸ್ಥೆಯೂ ದಶಕಗಳ ಹಿಂದೆ ವರ್ತಿಸುತ್ತಿದ್ದಂತೆಯೇ ನಡೆದುಕೊಳ್ಳುತ್ತಿದೆ. ಅದರ ಧೋರಣೆಯಲ್ಲಿ ಯಾವುದೇ ಪ್ರಮುಖ ಬದಲಾವಣೆ ಆಗಿಲ್ಲ. ಭಾರತಕ್ಕೆ ಭೇಟಿ ನೀಡುತ್ತಿರುವ ಬಡಪಾಯಿ ವಿದೇಶಿ ಪ್ರವಾಸಿಗರೂ, ಈ ಮಾನವ ನಿರ್ಮಿತ ಕರೆನ್ಸಿ ಬರಗಾಲ ಮತ್ತು ಪಡಿತರ ವ್ಯವಸ್ಥೆಯಿಂದ ಸಂಕಷ್ಟಕ್ಕೆ ಗುರಿಯಾಗಿದ್ದಾರೆ.  
 
ಅವರಿಗೆ ಪ್ರತಿ ವಾರಕ್ಕೆ ಕೇವಲ ₹ 5,000 ( 71 ಡಾಲರ್‌) ವಿತರಿಸಲಾಗುತ್ತಿದ್ದು, ಪಾಸ್‌ಪೋರ್ಟ್‌ನ ಹಾಳೆಗಳ ಮೇಲೆ ಈ ವಿವರ ಬರೆದು ಈ ಹಿಂದಿನ ಚಾಳಿಯಂತೆ ಕೊಳೆ ಮಾಡಲಾಗುತ್ತಿದೆ.
 
ನೋಟುಗಳನ್ನು  ರದ್ದು ಮಾಡಿರುವ ನರೇಂದ್ರ ಮೋದಿ ಅವರ ನಿರ್ಧಾರವು ಭಾರತವನ್ನು ಬದಲಿಸುತ್ತಿದೆ ಎನ್ನುವುದರಲ್ಲಿ ಯಾವುದೇ ಸಂದೇಹಗಳಿಲ್ಲ. ಆದರೆ, ಮೋದಿ ಅವರೂ ಅದೇ ಹಳೆಯ ಅಧಿಕಾರಶಾಹಿಯನ್ನು ನೆಚ್ಚಿಕೊಂಡು ‘ಸಮಾಜವಾದಿ ರಾಜ್‌’ ವ್ಯವಸ್ಥೆಯ ಕೊಡುಗೈ ದೊರೆಯಂತೆ ವರ್ತಿಸುತ್ತಿದ್ದರೆ ಮಾತ್ರ ಅವರ ನಿರ್ಧಾರಗಳ ಬಗ್ಗೆ ಅನುಮಾನ ಪಡಬಹುದಾಗಿದೆ.
(ಲೇಖಕ ಮೀಡಿಯಾಸ್ಕೇಪ್ ಪ್ರೈ.ಲಿ. ಸಂಸ್ಥಾಪಕ ಸಂಪಾದಕ ಹಾಗೂ ಅಧ್ಯಕ್ಷ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT