ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆನಪಿನ ಪುಟಗಳಲಿ ಅವಳಿ ಮಕ್ಕಳು

Last Updated 28 ಜುಲೈ 2012, 19:30 IST
ಅಕ್ಷರ ಗಾತ್ರ

ಡಾ. ನಾಗಮಣಿ ಹೈದರಾಬಾದ್‌ನಲ್ಲಿ ಶಿಶುವೈದ್ಯೆ. ಅವರು ದಾವಣಗೆರೆಯ ಜೆಎಂಜೆ ವೈದ್ಯಕೀಯ ಕಾಲೇಜಿನಲ್ಲಿ ನನ್ನ ಕಿರಿಯ ಸಹಪಾಠಿಯಾಗಿದ್ದರು. ಸುಮಾರು 27 ವರ್ಷದ ಬಳಿಕ ಇದ್ದಕ್ಕಿದ್ದಂತೆ ಅವರು ನನ್ನನ್ನು ಸಂಪರ್ಕಿಸಿದರು. ಅವರ ಮಗಳಿಗೆ ಜೆಎಸ್‌ಎಸ್ ವೈದ್ಯಕೀಯ ಕಾಲೇಜಿನಲ್ಲಿ ಮೇನೇಜ್‌ಮೆಂಟ್ ಕೋಟಾದಡಿ ಸೀಟು ಬೇಕಾಗಿತ್ತು. ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರಾಗಿದ್ದ ನನ್ನ ಅಪ್ಪಾಜಿಯ ಮೂಲಕ ಅದನ್ನು ಪಡೆದುಕೊಳ್ಳಬಹುದು ಎಂಬುದು ಅವರ ದೂರವಾಣಿ ಕರೆಯ ಉದ್ದೇಶ.

ಒಂದು ತಿಂಗಳ ಹಿಂದೆ ಅವರು ಮತ್ತೆ ಕರೆ ಮಾಡಿದ್ದರು. ಮಾತಿನ ನಡುವೆ, ನನ್ನ ಸಹಪಾಠಿ ಹಾಗೂ ಆಕೆಯ ಸಂಬಂಧಿ ಡಾ. ರವಿ ಬಾಬು ಅವರ ಪ್ರಸ್ತಾಪ ಬಂತು. ರವಿ ಬಾಬು ಅವರ ಅವಳಿ ಮಕ್ಕಳಲ್ಲಿ ಮೊದಲನೆಯವಳಾದ ದಿವ್ಯಾ ಕೂಡ ಅವಳಿ ಮಕ್ಕಳಿಗೆ ಜನ್ಮವಿತ್ತ್ದ್ದಿದನ್ನು ಹೇಳಿದರು. ಅರವ್ ಮತ್ತು ಆರ‌್ಯ ಆ ಮಕ್ಕಳ ಹೆಸರು. ಡಾ. ದಿವ್ಯಾ ನೇತ್ರವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಮಾಡುತ್ತಿದ್ದಾರೆ. ಆಕೆಯ ಪತಿ ವರುಣ್ ದಾಸರಿ ಓರ್ವ ಸರ್ಜನ್. ರವಿ ಬಾಬು ಅವರ ಮತ್ತೊಬ್ಬ ಮಗಳು ಡಾ. ದೀಪ್ತಿ ಶಿಶುವೈದ್ಯ ಎಂ.ಡಿ (ಡಾಕ್ಟರ್ ಆಫ್ ಮೆಡಿಸಿನ್) ಅಂತಿಮ ವರ್ಷದ ವಿದ್ಯಾರ್ಥಿನಿಯಾಗಿದ್ದು, ಸರ್ಜನ್ ನಿತಿನ್ ಅವರನ್ನು ವಿವಾಹವಾಗಿದ್ದಾರೆ.

ರವಿಬಾಬು ಅವರ ಕುಟುಂಬದ ಪ್ರಸ್ತಾಪ ನನ್ನನ್ನು ನೆನಪಿನ ಪುಟಗಳಿಗೆ ಜಾರಿಸಿತು. ಹೆಚ್ಚು ಎತ್ತರವಿಲ್ಲದ ತೆಳ್ಳನೆ ದೇಹದ ಡಾ. ರವಿ ಬಾಬು ನನ್ನ ಎಂ.ಡಿ. ತರಗತಿಯ ಸಹಪಾಠಿ. ನಾವಿಬ್ಬರು ಆಪ್ತ ಸ್ನೇಹಿತರು. ಕಷ್ಟಪಟ್ಟು ಓದಿ ಹೆಚ್ಚಿನ ಅಂಕದೊಂದಿಗೆ ಎಂ.ಡಿ ಪೂರೈಸಬೇಕು ಎಂಬ ಒಪ್ಪಂದ ನಮ್ಮಿಬ್ಬರಲ್ಲಿ ನಡೆದಿತ್ತು. ರವಿ ಲಕ್ಷಗಟ್ಟಲೆ ಹಣ ತೆತ್ತು ಮೇನೇಜ್‌ಮೆಂಟ್ ಕೋಟಾದಡಿ ಸೀಟು ಗಿಟ್ಟಿಸಿಕೊಂಡಿದ್ದರು.

ಪ್ರತಿನಿತ್ಯವೂ (ಕೆಲವು ನಿರೀಕ್ಷೆಗಳೊಂದಿಗೆ) ನಾವು ಕೇಸ್ (ರೋಗಿ) ಒಂದನ್ನು ನೋಡುತ್ತಿದ್ದೆವು. ಅದನ್ನು ಇಬ್ಬರೂ ಮುಂದಿನ ಮೂರು ವರ್ಷವೂ ಮುಂದುವರಿಸಿದ್ದೆವು. ಆ ಸಮಯದಲ್ಲಿ ಬರೆದಿಟ್ಟುಕೊಂಡ ವಿಷಯಗಳು ನನ್ನ ಬಳಿ ಇಂದಿಗೂ ಇವೆ. ಅವು ನನ್ನ ಅತ್ಯಮೂಲ್ಯ ಆಸ್ತಿ. ಆಗಿನ ಕಾಲದಲ್ಲಿ ಇಂಟರ್‌ನೆಟ್ ಸೌಲಭ್ಯ ಇರಲಿಲ್ಲ. ಜೆರಾಕ್ಸ್ ದುಬಾರಿಯಾಗಿತ್ತು. ಹೀಗಾಗಿ ನಾವಿಬ್ಬರೂ ಕಾರ್ಬನ್ ಹಾಳೆ ಬಳಸಿ ನೋಟ್ಸ್ ಬರೆದಿಟ್ಟುಕೊಳ್ಳುತ್ತಿದ್ದೆವು. ಇವುಗಳ ದೊಡ್ಡ ಸಂಗ್ರಹವೇ ನನ್ನಲ್ಲಿದೆ.

ರವಿ ಬಾಬು ಮೃದು ಭಾಷಿ, ಸರಳ ವ್ಯಕ್ತಿತ್ವ ಹಾಗೂ ಅಧ್ಯಯನದಲ್ಲಿ ಬದ್ಧತೆಯುಳ್ಳವರಾಗಿದ್ದರು. ಸೀಟಿಗಾಗಿ ತನ್ನ ತಂದೆ ವ್ಯಯಮಾಡಿದ್ದ ದೊಡ್ಡ ಮೊತ್ತದ ಬಗ್ಗೆ ಯಾವಾಗಲೂ ಚಿಂತಿಸುತ್ತಿದ್ದ ಅವರು, ಬೇಗ ಹಣ ಸಂಪಾದಿಸಿ ಅದನ್ನು ಅವರಿಗೆ ಹಿಂದಿರುಗಿಸಬೇಕು ಎಂಬ ಹಂಬಲ ಹೊಂದಿದ್ದರು. ಸ್ನಾತಕೋತ್ತರ ಪದವಿಯ ಅಂತಿಮ ವರ್ಷದಲ್ಲಿದ್ದಾಗ ಅವರ ಮದುವೆ ಡಾ. ವಿಜಯಾ ಅವರೊಂದಿಗೆ ನಡೆಯಿತು. ಡಾ. ವಿಜಯಾ ದಾವಣಗೆರೆಯಲ್ಲಿ ಎಂ.ಡಿ (ಪ್ರಸೂತಿ ಮತ್ತು ಸ್ತ್ರೀರೋಗ) ವಿಭಾಗಕ್ಕೆ ಸೀಟು ಪಡೆದುಕೊಂಡಿದ್ದರು. ಅವರದು ಹೇಳಿ ಮಾಡಿಸಿದ ಜೋಡಿ.

ರವಿ ಮತ್ತು ನಾನು ನಮ್ಮ ಗುರಿಯಂತೆ ಎಂ.ಡಿ.ಯನ್ನು ಉತ್ತಮ ಅಂಕಗಳೊಂದಿಗೆ ಪೂರ್ಣಗೊಳಿಸಿದೆವು. ಯಾವಾಗಲೂ ಅಷ್ಟೇ- ಯಶಸ್ಸಿಗೆ ಕಿರುದಾರಿಗಳಿಲ್ಲ. ಪರಿಶ್ರಮವೊಂದೇ ಮೂಲ ಮಾರ್ಗ.

ನಮ್ಮ ಬ್ಯಾಗುಗಳನ್ನು ತುಂಬಿಕೊಂಡು ವಿದಾಯದ ಸಮಯದಲ್ಲಿ ಒಬ್ಬರಿಗೊಬ್ಬರು ಶುಭ ಹಾರೈಸಿದೆವು. ಆತ ಖಮ್ಮಂಗೆ (ಆಂಧ್ರಪ್ರದೇಶದಲ್ಲಿರುವ ಆತನ ಊರು) ಹಿಂದಿರುಗಿದ. ನಾನು ಬೆಂಗಳೂರಿನತ್ತ ಹೆಜ್ಜೆ ಹಾಕಿದೆ. ಆತನ ಪತ್ನಿ ವಿಜಯಾ ಮತ್ತು ನಾಗಮಣಿ ತಮ್ಮ ಕೋರ್ಸ್ ಮುಗಿಯುವವರೆಗೆ ದಾವಣಗೆರೆಯಲ್ಲಿಯೇ ಇದ್ದರು.

ನಂತರವೂ ನಾವು ನಿರಂತರ ಸಂಪರ್ಕದಲ್ಲಿದ್ದೆವು. ವಿಜಯಾ ಅಂತಿಮ ವರ್ಷದಲ್ಲಿ ಓದುತ್ತಿದ್ದಾಗ ಗರ್ಭಿಣಿಯಾಗಿದ್ದರು. ಆಗವರು ಅಪಸ್ಮಾರಕ್ಕೆ ತುತ್ತಾದರು. ಆ ದಿನ ನನಗಿನ್ನೂ ಸ್ಪಷ್ಟವಾಗಿ ನೆನಪಿದೆ. ರವಿ ದಾವಣಗೆರೆಯಿಂದ ತಮ್ಮ ಪತ್ನಿಯನ್ನು ಕರೆದುಕೊಂಡು ಬಂದು ನಿಮ್ಹಾನ್ಸ್‌ನಲ್ಲಿ ದಾಖಲಿಸಿದರು. ದೇವರದಯೆಯಿಂದ ಅವರು, 1985ರ ಡಿಸೆಂಬರ್ 27ರಂದು ಅವಳಿ ಹೆಣ್ಣು ಮಕ್ಕಳಿಗೆ ಜನ್ಮನೀಡಿದರು. ದಿವ್ಯಾ ಮತ್ತು ದೀಪ್ತಿ- ಇಬ್ಬರಿಗೂ ಈಗ 27 ವರ್ಷ.

ಸಾಮಾನ್ಯವಾಗಿ ಅವಳಿ ಮಕ್ಕಳು ಜನಿಸುವುದು ತಡ ವಯಸ್ಸಿನಲ್ಲಿ ತಾಯಿಯಾಗುವುದರಿಂದ (ಮಹಿಳೆ ತಡವಾಗಿ ಮದುವೆಯಾಗುವುದು) ಮತ್ತು ಬಂಜೆತನದ ಚಿಕಿತ್ಸೆ ಕಾರಣದಿಂದ. ಇದಕ್ಕೆ ವಂಶಾವಳಿಯ ಕಾರಣವೂ ಇದ್ದೇ ಇರುತ್ತದೆ. ಕುಟುಂಬದಲ್ಲಿ ತಾಯಿಯ ಸಂಬಂಧದಲ್ಲಿ ಅವಳಿ ಮಕ್ಕಳು ಜನಿಸಿದ ದೃಷ್ಟಾಂತವಿದ್ದರೆ- ಈ ಹೆಣ್ಣುಮಗಳೂ ಅವಳಿ ಮಕ್ಕಳನ್ನು ಹೆರುವ ಸಾಧ್ಯತೆ ಇರುತ್ತದೆ.

ಇಂತಹ ಪ್ರಕರಣದಲ್ಲಿ ಒಂದು ವಿಧಾನವನ್ನು ಅನುಸರಿಸಲಾಗುತ್ತದೆ. ಅದು ಹೆಲ್ಲಿನ್ಸ್ ಲಾ. 85 ಜನನಗಳಲ್ಲಿ 1 ಅವಳಿ, 85ರ ಎರಡು ವರ್ಗದಲ್ಲಿ (7225 ಜನನಗಳಲ್ಲಿ 1) ಅದು ದ್ವಿಗುಣಗೊಳ್ಳುತ್ತದೆ, ಹೀಗೆ ಅದರ ಲೆಕ್ಕಾಚಾರ ಮುಂದುವರಿಯುತ್ತದೆ. ಶತಮಾನಗಳ ಹಿಂದೆ ರೂಪುಗೊಂಡ ಈ ಹೆಲ್ಲಿಸ್ ಲಾ ಅನ್ನು ಬದಲಾದ ಬದುಕಿನ ಶೈಲಿಯ ನಡುವೆ ಅಳವಡಿಸುವುದು ಕಷ್ಟವಾದೀತು.

ಜರಾಯು (ಪ್ಲಾಸೆಂಟಾ) ಮತ್ತು ಅದರ ಕೋಶದ ಆಧಾರದಲ್ಲಿ ಅವಳಿಗಳಲ್ಲಿ ಹಲವು ಬಗೆಗಳಿವೆ. ಜರಾಯು ಗರ್ಭಕೋಶ ಮತ್ತು ಭ್ರೂಣದ ನಡುವೆಯಿರುವ ಒಂದು ಬಂಧಕ. ಇದು ಗರ್ಭದ ಒಳಗವಚದ (ಅಮ್ನಿಯೊಟಿಕ್) ಮತ್ತು ತಾಯಿಯ ದೇಹದೆಡೆ ಭ್ರೂಣ ಪದರ (ಕೊರಿಯಾನ್) ಎಂಬ ಎರಡು ಕೋಶಚೀಲಗಳನ್ನು ಅಭಿವೃದ್ಧಿಪಡಿಸುತ್ತದೆ. ಹೀಗೆ ಹುಟ್ಟಿನಿಂದ ಅನನ್ಯವಾದ ಒಂದೇ ಲಿಂಗಕ್ಕೆ ಸೇರಿದ ಬಹುಯುಗ್ಮಜೀಯ ಅವಳಿ ಜನಿಸುತ್ತವೆ. ಈ ಅವಳಿಗಳು ಒಂದು ಜರಾಯು, ಒಂದು ಭ್ರೂಣ ಪದರ ಮತ್ತು ಎರಡು ಗರ್ಭದ ಒಳಗವಚಗಳನ್ನು (ಮೊನೊ ಕೊರಿಯಾನಿಕ್ ಮತ್ತು ಡಿಅಮ್ನಿಯೊಟಿಕ್) ಅಥವಾ ಒಂದು ಭ್ರೂಣ ಪದರ ಮತ್ತು ಗರ್ಭದ ಒಳಗವಚ (ಡಿಕೊರಿಯಾನಿಕ್ ಮತ್ತು ಡಿಅಮ್ನಿಯೊಟಿಕ್), ಎರಡು ಪ್ರತ್ಯೇಕ ಅಂಡಾಣುವಿನಿಂದ ಸೃಷ್ಟಿಯಾದ ಅವಳಿ (ಡಿಜಿಗೊಟಿಕ್)ಯಲ್ಲಿ ಎರಡು ಜರಾಯು, ಎರಡು ಒಳಗವಚ ಮತ್ತು ಎರಡು ಭ್ರೂಣ ಪದರಗಳಿರುತ್ತವೆ. ಇದು ಎರಡು ಮಕ್ಕಳನ್ನು ಏಕಕಾಲಕ್ಕೆ ಹೆರುವಂತೆ ಅನಿಸುತ್ತದೆ.

ಅವಳಿ ಗರ್ಭಾವಸ್ಥೆಯಲ್ಲಿ ವೈದ್ಯಕೀಯ ರಂಗಕ್ಕೆ ಹಲವಾರು ಸವಾಲುಗಳಿವೆ. ಅವಳಿ ಮಕ್ಕಳಿರುವ ಗರ್ಭದಲ್ಲಿ ಅಸಹಜ ಮಕ್ಕಳನ್ನು ಹೆರುವ, ಗರ್ಭಪಾತವಾಗುವ, ತಾಯಿ ಗರ್ಭಾವಸ್ಥೆಯಲ್ಲಿ ಮಧುಮೇಹಕ್ಕೆ ಒಳಗಾಗುವ, ರಕ್ತದೊತ್ತಡ ಹೆಚ್ಚುವ ಹಾಗೂ ಹೆಚ್ಚಿನ ಸಮಯಗಳಲ್ಲಿ ಸಿಸೇರಿಯನ್ ಹೆರಿಗೆ ಮಾಡಿಸಬೇಕಾದ ಪರಿಸ್ಥಿತಿಗಳು ಎದುರಾಗುವುದು ಅಧಿಕ.

ಅವಳಿ ಮಕ್ಕಳು ಗರ್ಭದಲ್ಲಿರುವಾಗ ಗರ್ಭಕೋಶದಲ್ಲಿ ಜಾಗದ ಹೊಂದಾಣಿಕೆ, ಪೌಷ್ಠಿಕಾಂಶ ಸೇವನೆ ಸೇರಿದಂತೆ ಹಲವಾರು ಹೊಂದಾಣಿಕೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ.

ಮಕ್ಕಳು ಅವಧಿಗೆ ಮುನ್ನವೇ ಜನಿಸಿದರೆ, ಹುಟ್ಟಿದಾಗ ತೂಕ ತುಂಬಾ ಕಡಿಮೆ ಇದ್ದರೆ ಮತ್ತು ಗರ್ಭದಲ್ಲಿ ಪೌಷ್ಠಿಕಾಂಶದ ಕೊರತೆ ಕಂಡುಬಂದರೆ ಅದನ್ನು ಗರ್ಭಕೋಶದೊಳಗಿನ ಸೀಮಿತ ಬೆಳವಣಿಗೆ (ಐಯುಜಿಆರ್) ಎಂದು ಗುರುತಿಸಲಾಗುತ್ತದೆ. ಸ್ಥಳ ಮತ್ತು ಪೌಷ್ಠಿಕಾಂಶಕ್ಕಾಗಿನ ಹೋರಾಟ ಈ ಅವಳಿಗಳಲ್ಲಿ ಒಂದರ ಸಾವು ಅಥವಾ ಹುಟ್ಟಿನಿಂದಲೇ ಅಂಗವೈಕಲ್ಯಕ್ಕೆ ಕಾರಣವಾಗಬಹುದು.

ಭ್ರೂಣದ ವಿಂಗಡಣೆ ನಿಧಾನವಾಗಿ ಮತ್ತು ಅಪೂರ್ಣವಾಗಿ ಸಂಭವಿಸಬಹುದು. ಇದು ಒಂದಕ್ಕೊಂದು ಸೇರಿಕೊಂಡ, ಅಂದರೆ ಸಯಾಮಿ ಎಂದು ಕರೆಯಲಾಗುವ ಅವಳಿಗಳ ಜನನಕ್ಕೆ ಕಾರಣವಾಗುತ್ತದೆ. ಪ್ರಸವದ ಬಳಿಕವೂ ಈ ಅವಳಿಗಳು ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಅಕಾಲಿಕ ಜನನದ (ಒಂದೇ ಜಾಗವನ್ನು ಎರಡು ಮಕ್ಕಳು ಹಂಚಿಕೊಂಡಾಗ ಗರ್ಭಕೋಶವು ಅಕಾಲಿಕ ಜನನಕ್ಕೆ ಪ್ರೇರೇಪಿಸುತ್ತದೆ ಮತ್ತು ಇದು ಹುಟ್ಟುವಾಗ ಕಡಿಮೆ ತೂಕ ಹೊಂದಿರಲು ಕಾರಣವಾಗುತ್ತದೆ) ಬಳಿಕ ಮರಣಿಸುವ ಸಾಮಾನ್ಯ ಶಿಶುಗಳಿಗೆ ಹೋಲಿಸಿದರೆ ಇವುಗಳಲ್ಲಿ ಮಕ್ಕಳು ಸಾವಿಗೀಡಾಗುವ ಸಾಧ್ಯತೆ ಹೆಚ್ಚು.

ಅವಳಿ ಮಕ್ಕಳ ಬಗ್ಗೆ ಕುಟುಂಬ ಸಂಭ್ರಮದಿಂದ ಉದ್ವೇಗಕ್ಕೆ ಒಳಗಾಗಿದ್ದರೂ ಅವರು ಮೊದಲ ಮೂರು ವರ್ಷ ಮತ್ತು ಶೈಶವ್ಯದ ಆರಂಭದ (ಜನನದಿಂದ ಆರು ತಿಂಗಳು) ಸಮಸ್ಯೆಗಳೊಂದಿಗೆ ಹೋರಾಡಬೇಕಾಗುತ್ತದೆ ಎಂಬುದನ್ನು ಅರಿತುಕೊಳ್ಳಬೇಕು. ಎರಡು ವರ್ಷದವರೆಗೆ ನಿರಂತರ ಎದೆಹಾಲನ್ನು ನೀಡಿದರೆ ಅವು ಬೇಗನೆ ಚೇತರಿಸಿಕೊಳ್ಳಬಲ್ಲವು.

ಒಂದು ಮಗುವನ್ನು ಹೊಂದಿರುವವರಲ್ಲಿಯೇ ಎದೆಹಾಲು ಕುಡಿಸುವ ಕುರಿತು ನಮ್ಮ ಸಮುದಾಯದ ಹೆಚ್ಚಿನ ಜನರಿಗೆ ಸೂಕ್ತ ತಿಳಿವಳಿಕೆಯಿಲ್ಲ. ಹೀಗಿರುವಾಗ ಅವಳಿಗಳಿಗೆ ಹಾಲುಣಿಸುವುದು ನಿಜಕ್ಕೂ ಸಾಧ್ಯವೇ? ಖಂಡಿತಾ ಸಾಧ್ಯ. ಒಂದು ಮಗುವಿಗೆ ಒಂದು ಎದೆ ಮ್ಯಾಜಿಕ್‌ನಂತೆ ಕಾರ್ಯನಿರ್ವಹಿಸುತ್ತದೆ. ಇದು ಸಮಯದ ಪಾಲನೆಯಲ್ಲಿ ತಾಯಿಗೆ ಸಹಕಾರಿಯಾಗಬಲ್ಲದು ಮತ್ತು ಬಲಹೀನವಾಗಿರುವ ಮಗುವಿಗೆ ಎದೆಹಾಲು ಸುಲಭವಾಗಿ ದಕ್ಕುತ್ತದೆ. ಶಕ್ತಿಶಾಲಿಯಿರುವ ಮಗು ಹಾಲು ಕುಡಿಯುವಾಗ ಎರಡೂ ಎದೆಗಳಿಗೆ ಸಮಾನಾಂತರವಾಗಿ ಹಾಲು ಹರಿಯುವಂತೆ ಮಾಡುತ್ತದೆ. ದೇವರು ಎಲ್ಲದಕ್ಕೂ ಒಂದು ಮಾರ್ಗವನ್ನು ಸೃಷ್ಟಿಸಿರುತ್ತಾನೆ ಮತ್ತು ತನ್ನ ಸೃಷ್ಟಿಗೆ ಸೂಕ್ತ ಆರೈಕೆಯನ್ನೂ ಮಾಡುತ್ತಾನೆ. ಎದೆಹಾಲಿನ ಕೊರತೆ ಎಲ್ಲಿಯೂ ಇಲ್ಲ - ಸರಿಯಾದ ಕ್ರಮದಲ್ಲಿ ಹೆಚ್ಚು ಹಾಲುಣಿಸುವುದು ಅಧಿಕ ಹಾಲಿನ ಉತ್ಪಾದನೆಗೆ ಸಹಕಾರಿಯಾಗುತ್ತದೆ.

ನಾನು ನನ್ನ ಸ್ನೇಹಿತ ರವಿ ಬಾಬು ಅವರ ಮೊಮ್ಮಕ್ಕಳಿಗೆ ಎದೆಹಾಲನ್ನು ಸಮರ್ಪಕವಾಗಿ ನೀಡುವಂತೆ ಆ ಕುಟುಂಬದವರನ್ನು ಒತ್ತಾಯಿಸಿದೆ. ಪ್ರೊ. ನಿರ್ಮಲಾ ಕೇಸರಿ ಅವರ ವಿದ್ಯಾರ್ಥಿಯಾಗಿದ್ದ ನನ್ನ ಗೆಳೆಯರೂ ಎದೆಹಾಲಿನ ಮಹತ್ವದ ಬಗ್ಗೆ ಒತ್ತುಕೊಡುವವರಾಗಿದ್ದರು.

ಡಾ. ರವಿ ಬಾಬು ತಮ್ಮ ಅಧ್ಯಯನ ಮುಗಿದ ಬಳಿಕ ತಮ್ಮೂರಿನಲ್ಲಿ `ಮದರ್ ಅಂಡ್ ಚೈಲ್ಡ್~ ಆಸ್ಪತ್ರೆಯನ್ನು ಪ್ರಾರಂಭಿಸಿದ್ದರು. ಅದರ ಆಹ್ವಾನ ಪತ್ರಿಕೆಯನ್ನೂ ಕಳುಹಿಸಿದ್ದರು. 1987ರಲ್ಲಿ ನಾನು ಗರ್ಭಿಣಿಯಾಗಿದ್ದ ಸಂದರ್ಭದಲ್ಲಿ ಅವರು ನನ್ನನ್ನು ಭೇಟಿಯಾಗಿದ್ದರು. ನನಗಾಗಿ ಆಂಧ್ರದ ಗುಂಗುರು, ಉಪ್ಪಿನಕಾಯಿ ಮತ್ತು ಚಟ್ನಿಪುಡಿಗಳನ್ನು ತಂದಿದ್ದರು.

ಅದನ್ನು ನಾನು ನಾಗಮಣಿಗೆ ಹೇಳಿದಾಗ ಆಕೆಯೂ ಕೂಡಲೇ ಅವುಗಳನ್ನು ವಾಣಿವಿಲಾಸ ಆಸ್ಪತ್ರೆಯ ವೈದ್ಯಕೀಯ ತುರ್ತು ಪ್ರಸೂತಿ ಕೇಂದ್ರದಲ್ಲಿದ್ದ (ಇಎಂಓಸಿ) ತನ್ನ ಸಹೋದರಿ ಮೂಲಕ ನನಗೆ ಕಳುಹಿಸಿದ್ದಳು.

1987ರಲ್ಲಿ ಡಾ. ವಿಜಯಾ `ಮದರ್ ಅಂಡ್ ಚೈಲ್ಡ್~ ಆಸ್ಪತ್ರೆಯಲ್ಲಿ ರವಿ ಬಾಬು ಜೊತೆ ಸೇರಿಕೊಂಡರು. 10 ವರ್ಷದ ಬಳಿಕ 1995ರ ಮಧ್ಯಭಾಗದಲ್ಲಿ ನನಗೊಂದು ದೂರವಾಣಿ ಕರೆ ಬಂತು. ಕರೆಮಾಡಿದವರು ತೆಲುಗಿನಲ್ಲಿ- ನನ್ನ ಸ್ನೇಹಿತ ಡಾ. ರವಿ ಬಾಬು 37 ವರ್ಷದವರಿದ್ದಾಗಲೇ ತೀವ್ರ ಹೃದಯಾಘಾತದಿಂದ ಕೊನೆಯುಸಿರೆಳೆದರು ಎಂದು ಹೇಳಿದರು. ಕರೆ ಮಾಡಿದವರು ರವಿ ಬಾಬುವಿನ ತಂದೆ. ಅವರು ರವಿ ಬಾಬು ಇನ್ನೂ ಸುರಕ್ಷಿತವಾಗಿ ಇರಿಸಿಕೊಂಡಿದ್ದ ಡೈರಿಯ ಬಗ್ಗೆ ಹೇಳಿದರು. ಅದರಲ್ಲಿ ನನ್ನ ಕುರಿತು ತುಂಬಾ ಬರೆದಿದ್ದರು (ನನ್ನ ಸಂಪರ್ಕದ ವಿವರಗಳು ಸೇರಿದಂತೆ). ಅವರು ನನ್ನ ಇತರ ಸಹಪಾಠಿಗಳಿಗೆ ಈ ವಿಚಾರ ತಿಳಿಸುವಂತೆ ಕೇಳಿಕೊಂಡರು. ಆದರೆ ಗೆಳೆಯರಾದ ಡಾ. ತೀರ್ಥಪ್ಪ ಮತ್ತು ಡಾ. ಚಿಂತಾಮಣಿ ಈ ಮೊದಲೇ ಸ್ವರ್ಗದಲ್ಲಿ ನೆಲೆಸಿದ್ದಾರೆಂದು ನಾನು ಅವರಿಗೆ ಹೇಗೆ ತಾನೆ ಹೇಳಲು ಸಾಧ್ಯ.

ರವಿ ಬಾಬುವಿನ ತಂದೆ ನರ್ಸಿಂಗ್ ಹೋಮ್ ನಿರ್ವಹಣೆ ಜವಾಬ್ದಾರಿ ಮಾತ್ರವಲ್ಲ 10 ವರ್ಷದವರಾಗಿದ್ದ ತನ್ನ ಎರಡು ಪುಟ್ಟ ಅವಳಿ ಮೊಮ್ಮಕ್ಕಳ ಪೋಷಣೆ ಹೊಣೆಯನ್ನೂ ಹೊತ್ತುಕೊಳ್ಳುವಂತಾಯಿತು. ಏಕೆಂದರೆ 2007ರಲ್ಲಿ ರವಿ ಬಾಬುವಿನ ಪತ್ನಿ ಡಾ. ವಿಜಯಾ ಕೂಡ ಇಹಲೋಕ ತ್ಯಜಿಸಿದ್ದರು. ರವಿ ಬಾಬುವಿನ ಮರಣದ 12 ವರ್ಷದ ನಂತರ ಅವರು ತೀವ್ರ ಬ್ರೈನ್ ಟ್ಯೂಮರ್‌ಗೆ ತುತ್ತಾಗಿದ್ದರು (ಗರ್ಭಿಣಿಯಾಗಿದ್ದಾಗ ಅಂಗಾಂಗ ಸೆಳೆತಕ್ಕೆ ಒಳಗಾಗಿದ್ದ ಅವರು ಅಪಸ್ಮಾರ ಚಿಕಿತ್ಸೆಗೂ ಒಳಗಾಗಿದ್ದರಿಂದ ಅದು ಸಹಜವೆನ್ನುವಂತೆ ಆವರಿಸಿತ್ತು).

ಡಾ. ದೀಪ್ತಿ ಮತ್ತು ಡಾ. ದಿವ್ಯಾ ತಮ್ಮ ಬಾಲ್ಯದಲ್ಲಿಯೇ ತಂದೆ ತಾಯಿಯನ್ನು ಕಳೆದುಕೊಂಡರೂ ಕುಟುಂಬ ವರ್ಗದ ಪ್ರೋತ್ಸಾಹದಿಂದ ವೈದ್ಯರಾಗುವ ಗುರಿಯನ್ನು ಸಾಧಿಸಿದರು. ತಮ್ಮ ದುಃಖದ ಸಂದರ್ಭಗಳಲ್ಲಿ ಒಬ್ಬರಿಗೊಬ್ಬರ ಪರಿಸ್ಥಿತಿ ನೋಡಿ ಸಮಾಧಾನ ಮಾಡಿಕೊಳ್ಳಲು ಈ ಅವಳಿ ಸಹೋದರಿಯರಿಗೆ ಸಾಧ್ಯವಾಗಿತ್ತು!

ರವಿ ಬಾಬು ಅವರ ಕನಸಿನ ಮಾತುಗಳಿಗೆ ನಾನು ಕಿವಿಯಾಗಿದ್ದವಳು. ತನ್ನ ಮಾತಿನಂತೆ ಅವರು ತಂದೆಯ ಎಲ್ಲಾ ಹಣವನ್ನೂ ಹಿಂದಿರುಗಿಸಲು ಸಾಧ್ಯವಾಗಿತ್ತೇ ಎಂಬ ಪ್ರಶ್ನೆ ಯಾವಾಗಲೂ ನನ್ನ ಮನಸ್ಸಿನಲ್ಲಿ ಸುಳಿದು ಹೋಗುತ್ತದೆ. ಏಕೆಂದರೆ ನಮ್ಮಿಬ್ಬರ ನಡುವಿನ ಬಹಳ ಪ್ರಮುಖ ಮಾತುಕತೆಗಳಲ್ಲಿ ಅದೂ ಒಂದಾಗಿತ್ತು. ತನ್ನೊಂದಿಗೆ ಅನೇಕಾನೇಕ `ಇದ್ದರೆ~, `ಆದರೆ~ಗಳನ್ನು ರವಿಬಾಬು ಬಿಟ್ಟುಹೋಗಿದ್ದರು. ಈ ಅವಳಿಗಳ ಜನನದೊಂದಿಗೆ ನಾನು ಆತನ ಕುಟುಂಬದೊಂದಿಗೆ ಮತ್ತೆ ಸಂಪರ್ಕ ಸಾಧಿಸುವಂತಾಯಿತು. ರವಿ ಬಾಬು ಮತ್ತು ವಿಜಯಾ ನನಗೆ ಎಷ್ಟು ಆಪ್ತರೆಂಬುದು ಅವರಿಗೆ ಚೆನ್ನಾಗಿ ತಿಳಿದಿತ್ತು.

ರವಿ ಬಾಬು ನನಗೆ ಬರೆದುಕೊಟ್ಟಿದ್ದ ನೋಟ್ಸ್‌ಗಳನ್ನು (ಕಾರ್ಬನ್ ಕಾಪಿಗಳು) ನೋಡಿದಾಗ ನಾನು ಬಿಕ್ಕಿ ಬಿಕ್ಕಿ ಅತ್ತೆ. ನಾನು ಶಿಶುವೈದ್ಯೆಯಾಗುವಲ್ಲಿ ಅವರದು ಬಹುಮುಖ್ಯ ಪಾತ್ರವಿತ್ತು.

ಈ ಲೇಖನವನ್ನು ಬರೆಯಲು ನಾನು ಉದ್ದೇಶಿಸಿದ್ದಾಗ ನನ್ನ ವಿಭಾಗಕ್ಕೆ ಎರಡು ತಿಂಗಳ ಒಂದು ಅವಳಿ ಮಕ್ಕಳ ಜೋಡಿ ದಾಖಲಾಯಿತು. ಅದರಲ್ಲಿ ಬಾಟಲಿ ಹಾಲು ಕುಡಿದು ಹೆಣ್ಣುಮಗು ವಾಂತಿ ಮತ್ತು ಭೇದಿಗೆ ಒಳಗಾಗಿತ್ತು. ಈ ಮಕ್ಕಳ ಜನನದ ತೂಕ 1.5 ಕೇಜಿ ಇತ್ತು (ಅಕಾಲಿಕವಾಗಿ ಜನಿಸಿದ್ದ ಈ ಮಕ್ಕಳ ತೂಕ ಅತಿ ಕಡಿಮೆ ಇತ್ತು). ಅದರಲ್ಲಿ ಎರಡು ತಿಂಗಳ ಗಂಡು ಮಗು ಈಗ ಮೂರು ಕಿಲೋ ತೂಗುತಿದ್ದರೆ, ಹೆಣ್ಣು ಕೂಸು 1.45 ಕೇಜಿಯಷ್ಟೇ ಇತ್ತು. ತಿಳಿವಳಿಕೆಯ ಕೊರತೆಯಿಂದಾಗಿ ಗಂಡು ಮಗುವಿಗೆ ಎದೆಹಾಲು ನಿರಂತರವಾಗಿ ದೊರಕುತ್ತಿದ್ದರೆ, ಹೆಣ್ಣುಮಗುವಿಗೆ ಸಿಗುತ್ತಿದ್ದದ್ದು ಬಾಟಲಿ ಹಾಲು! ಆ ತಾಯಿ ತನ್ನೆಲ್ಲಾ ಹಾಲನ್ನೂ ಗಂಡು ಮಗುವಿಗೇ ನೀಡಲು ನಿರ್ಧರಿಸಿದ್ದಳು. ಕೊನೆಗೆ ನಾವು ಆಕೆಗೆ ಸೂಕ್ತವಾದ ರೀತಿಯಲ್ಲಿ ಎರಡೂ ಮಕ್ಕಳಿಗೆ ಸಾಕಾಗುವಷ್ಟು ಹಾಲು ಆಕೆಯಲ್ಲಿ ಉತ್ಪಾದನೆಯಾಗುತ್ತದೆ. ಒಂದು ಮಗುವಿಗೆ ಒಂದು ಎದೆ ಹಾಲು ಕುಡಿಸಬಹುದು ಎಂಬುದನ್ನು ಬಿಡಿಸಿ ಹೇಳತೊಡಗಿದೆವು.

ಒಟ್ಟಿಗೇ ಜನಿಸಿದ್ದರೂ ಮಕ್ಕಳಿಗೆ ಹಾಲುಣಿಸುವುದರಲ್ಲಿಯೂ ತಾರತಮ್ಯ ಮಾಡುವ ತಾಯಂದಿರ ಮನೋಭಾವ ನನ್ನಲ್ಲಿ ನೋವನ್ನುಂಟು ಮಾಡಿತು. ತಪ್ಪು ಯಾರದು ಮತ್ತು ಎಲ್ಲಿಯದು? ದನಿಯಿಲ್ಲದ ಈ ಮಕ್ಕಳಿಗೆ ದನಿಯಾಗುವವರು ಯಾರು? ಅವರಲ್ಲಿರುವುದು ಒಂದೇ ಭಾಷೆ-  ಅಳು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT