ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆನೆಗುದಿಗೆ ಬಿದ್ದಿರುವ ಕರ್ನಾಟಕದ ಫ್ರೆಂಚ್ ನಂಟು

Last Updated 20 ಜೂನ್ 2011, 19:30 IST
ಅಕ್ಷರ ಗಾತ್ರ

ರೋನ್-ಆಲ್ಫ್‌ಸ್ ಎನ್ನುವುದು ಫ್ರಾನ್ಸ್ ದೇಶದಲ್ಲಿ ಎರಡನೇ ಅತಿ ವಿಶಾಲವಾದ ಪ್ರದೇಶವನ್ನು ಹೊಂದಿರುವಂಥ ಒಂದು ಪ್ರಾಂತ್ಯ.

ಯೂರೋಪ್ ಖಂಡದ ಪ್ರಮುಖ ನದಿಗಳಲ್ಲಿ ಒಂದಾದ ರೋನ್ ಹಾಗೂ ಜಗತ್ತಿನ ಅತ್ಯಂತ ಎತ್ತರ ಹಾಗೂ ದೊಡ್ಡ ಪರ್ವತ ಶ್ರೇಣಿಗಳಲ್ಲಿ ಒಂದಾದ ಆಲ್ಫ್‌ಸ್ - ಇವೆರಡೂ ಫ್ರಾನ್ಸಿನ ಈ ಪ್ರದೇಶದ ಮೂಲಕ ಹಾದು ಹೋಗುವುದರಿಂದ ಅದಕ್ಕೆ ರೋನ್-ಆಲ್ಫ್‌ಸ್ ಎಂಬ ಹೆಸರು ಬಂದದ್ದು.

ಇಡೀ ಯೂರೋಪ್ ಖಂಡದಲ್ಲಿ ಆರನೇ ದೊಡ್ಡ ಆರ್ಥಿಕ ವ್ಯವಸ್ಧೆಯನ್ನು ಹೊಂದಿರುವ ರೋನ್-ಆಲ್ಫ್‌ಸ್ ಪ್ರಾಂತ್ಯದ ಮುಕ್ಕಾಲು ಭಾಗ ಕೃಷಿ ಭೂಮಿ ಹಾಗೂ ಅರಣ್ಯಗಳಿಂದ ಆವೃತವಾಗಿದೆ.

ಫ್ರಾನ್ಸ್ ದೇಶದ ಆಂತರಿಕ ಆಡಳಿತ ವ್ಯವಸ್ಥೆಯಲ್ಲಿ ಪ್ರಾಂತ್ಯಗಳಿಗೆ ನಮ್ಮ ರಾಜ್ಯಗಳಿಗೆ ಸಮಾನವಾದಂಥ ಸ್ಥಾನವಿದೆ. ಇಡೀ ದೇಶವನ್ನು ಇಂಥ 22 ಪ್ರಾಂತ್ಯಗಳಾಗಿ ವಿಭಜಿಸಲಾಗಿದ್ದು, ಮತ್ತೆ ಆ ಪ್ರಾಂತ್ಯಗಳನ್ನು ನಮ್ಮ ಕಂದಾಯ ವಿಭಾಗಗಳ ಮಾದರಿಯಲ್ಲಿ ವರ್ಗೀಕರಿಸಲಾಗಿದೆ.

ರೋನ್-ಆಲ್ಫ್‌ಸ್ ಪ್ರಾಂತ್ಯದಲ್ಲಿ ಇಂಥ ಎಂಟು (8) ವಿಭಾಗಗಳಿದ್ದು, ಅವುಗಳನ್ನು ಉಪ ವಿಭಾಗಗಳ ಸ್ವರೂಪದಲ್ಲಿ 25 ಜಿಲ್ಲೆಗಳಾಗಿ ಬೇರ್ಪಡಿಸಲಾಗಿದೆ. ಈ ಜಿಲ್ಲೆಗಳನ್ನು ಆಡಳಿತಾತ್ಮಕ ಆನುಕೂಲಕ್ಕಾಗಿ ಮತ್ತೆ ಉಪ ವಿಭಾಗಗಳನ್ನಾಗಿ ವಿಭಜಿಸಿ, ಪ್ರತಿ ಉಪವಿಭಾಗವನ್ನೂ ನಮ್ಮ ನಗರಪಾಲಿಕೆಗಳೋಪಾದಿಯಲ್ಲಿ ಪುನಃ ವಿಂಗಡಿಸಲಾಗಿದೆ.
 
ರೋನ್-ಆಲ್ಫ್‌ಸ್ ಪ್ರಾಂತ್ಯದಲ್ಲಿ ಇಂಥ 335 ಉಪವಿಭಾಗಗಳೂ 2879 ನಗರಪಾಲಿಕೆಗಳೂ ಇದ್ದು, ನಮ್ಮ ದೇಶದ ಸ್ಥಳೀಯ ಸಂಸ್ಥೆಗಳ ಮಾದರಿಯಲ್ಲಿ ಇವು ಕಾರ್ಯ ನಿರ್ವಹಿಸುತ್ತವೆ. ಇಡೀ ರೋನ್-ಆಲ್ಫ್‌ಸ್ ಪ್ರಾಂತ್ಯದ ಆಡಳಿತವನ್ನು ನಡೆಸುತ್ತಿರುವ ಪ್ರಾದೇಶಿಕ ಮಂಡಳಿಯನ್ನು ನಮ್ಮ ರಾಜ್ಯ ಸರ್ಕಾರಕ್ಕೆ ಹೋಲಿಸಬಹುದು.

ಈ ರೋನ್-ಆಲ್ಫ್‌ಸ್ ಪ್ರದೇಶದ ಬಗ್ಗೆ ನನ್ನ ಆಸಕ್ತಿ ಕೆರಳಿದ್ದು ಕಳೆದ ವಾರ ನಾನು ಈ ಪ್ರಾಂತ್ಯದ ರಾಜಧಾನಿಯಾದ ಲಯಾನ್ ನಗರಕ್ಕೆ ಕಾರ್ಯನಿಮಿತ್ತ ಭೇಟಿ ಕೊಟ್ಟಿದ್ದ ಸಂದರ್ಭದಲ್ಲಿ.

ಸುಸ್ಥಿರ ಅಭಿವೃದ್ಧಿಯನ್ನು ಸಾಧಿಸಲು ಪರಸ್ಪರ ಸಹಕಾರ ತತ್ವವನ್ನಾಧರಿಸಿದ ನೀತಿಯೊಂದನ್ನು ರೂಪಿಸಲು ಸುಮಾರು ಎಂಟು ವರ್ಷಗಳ ಹಿಂದೆ ರೋನ್-ಆಲ್ಫ್‌ಸ್ ಪ್ರಾಂತ್ಯದ ಆಡಳಿತ ಹಾಗೂ ಕರ್ನಾಟಕ ಸರ್ಕಾರದ ನಡುವೆ ಒಡಂಬಡಿಕೆಯೊಂದಕ್ಕೆ ಸಹಿ ಹಾಕಲಾಗಿದೆ ಎಂಬ ವಿಷಯ ನಾನು ಭಾಗವಹಿಸಿದ್ದ ಸಭೆಯೊಂದರಲ್ಲಿ ತಿಳಿದು ಬಂತು.

ಈ ಒಡಂಬಡಿಕೆಯ ಸ್ವರೂಪದ ಬಗ್ಗೆಯಾಗಲಿ, ಅದನ್ನು ಕಾರ್ಯರೂಪಕ್ಕೆ ತರುವ ಜವಾಬ್ದಾರಿಯನ್ನು ಹೊತ್ತಿದ್ದ ನಮ್ಮ ರಾಜ್ಯಾಡಳಿತದ ಅಂಗ ಸಂಸ್ಥೆಯ ಬಗ್ಗೆಯಾಗಲಿ ನಿಖರವಾದ ಮಾಹಿತಿಯೇನೂ ದೊರೆಯದೇ ಹೋದರೂ, ಸಿಕ್ಕ ಹಲ ಕೆಲವು ಸೂಚನೆಗಳನ್ನು ಒಟ್ಟುಗೂಡಿಸಿದಾಗ ಹೊರ ಬಂದ ವಿಷಯವೇನೆಂದರೆ ಕರ್ನಾಟಕಕ್ಕೆ ಅಂತರರಾಷ್ಟ್ರಿಯ ವಲಯದಲ್ಲಿ ಗೋಚರತೆ ಹಾಗೂ ರಾಜ್ಯಕ್ಕೆ ಉಪಯೋಗವಾಗುವಂಥ ಜ್ಞಾನ ವಿನಿಮಯಕ್ಕೆ ಎಡೆ ಮಾಡಿಕೊಡಬಹುದಾಗಿದ್ದ ಒಂದು ಅವಕಾಶಕ್ಕೆ ನಮ್ಮಿಂದ ಸೂಕ್ತ ಪ್ರತಿಕ್ರಿಯೆ ದೊರೆಯಲಿಲ್ಲ ಎನ್ನುವುದು.
 
ಫ್ರಾನ್ಸ್ ದೇಶದಲ್ಲಷ್ಟೇ ಅಲ್ಲದೆ, ಇಡೀ ಯೂರೋಪ್ ಖಂಡದ ಆರ್ಥಿಕ ಶೈಕ್ಷಣಿಕ ಸಾಂಸ್ಕೃತಿಕ ಜೀವನದಲ್ಲಿ ರೋನ್-ಆಲ್ಫ್‌ಸ್ ಪ್ರಾಂತ್ಯಕ್ಕೆ ವಿಶೇಷವಾದ ಸ್ಧಾನವಿದೆ.

ಫ್ರಾನ್ಸ್ ದೇಶದ ಇತರ ಭಾಗಗಳೇ ಅಲ್ಲದೆ, ಯೂರೋಪ್‌ನ ಅನೇಕ ರಾಷ್ಟ್ರಗಳಿಗೂ ಮೆಡಿಟರೇನಿಯನ್ ಸಮುದ್ರ ಪ್ರದೇಶಕ್ಕೂ ಈ ಪ್ರಾಂತ್ಯ ಸಂಪರ್ಕ ಸೇತುವೆಯಂತಿದೆ.

ವ್ಯಾಪಾರ ವಹಿವಾಟುಗಳು, ಪರಿಸರ ಸ್ನೇಹಿ ಪ್ರವಾಸೋದ್ಯಮ, ಪ್ರತಿಷ್ಠಿತ ಉನ್ನತ ಶಿಕ್ಷಣ ಸಂಸ್ಥೆಗಳು, ಸಂಶೋಧನಾ ಚಟವಟಿಕೆಗಳು ಹಾಗೂ ಸಾಂಪ್ರದಾಯಿಕ ಮತ್ತು ಅತ್ಯಾಧುನಿಕ ಉದ್ದಿಮೆಗಳ ವಿಶಿಷ್ಟ ಸಮ್ಮಿಲನ-ಇವು ರೋನ್-ಆಲ್ಫ್‌ಸ್ ಪ್ರಾಂತ್ಯದ ವೈಶಿಷ್ಟ್ಯಗಳು.
 
ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಮಹತ್ತರ ಸಾಧನೆಗಳನ್ನು ಮಾಡಬೇಕೆಂಬ ಆಕಾಂಕ್ಷೆ ಈ ಪ್ರಾಂತ್ಯದ ಆಡಳಿತಾರೂಢ ವ್ಯವಸ್ಥೆಗಿದ್ದು, ಕರ್ನಾಟಕ ಈ ಕ್ಷೇತ್ರದಲ್ಲಿ ಸಾಧಿಸಿರುವ ಪ್ರಗತಿಯನ್ನು ಕಂಡೇ ರಾಜ್ಯದ ಜೊತೆ ಸಹಕಾರವನ್ನು ಏರ್ಪಡಿಸಬೇಕೆಂದು ಅಲ್ಲಿನ ಪ್ರಾದೇಶಿಕ ಮಂಡಳಿ ಮುಂದಾದದ್ದು ಎಂಬ ವಿಷಯವೂ ನನಗೆ ತಿಳಿದು ಬಂತು.

ರೋನ್-ಆಲ್ಫ್‌ಸ್ ಪ್ರಾಂತ್ಯದ ಸರ್ಕಾರ ಅಂತರರಾಷ್ಟ್ರೀಯ ಸಹಕಾರ ನೀತಿಯೊಂದನ್ನು ಅಳವಡಿಸಿಕೊಂಡಿದ್ದು, ಪ್ರಪಂಚದ ಅನೇಕ ದೇಶಗಳೊಡನೆ ಸಂಬಂಧಗಳನ್ನು ಈಗಾಗಲೇ ಬೆಳೆಸಿದೆ.

ಯೂರೋಪ್‌ನ ರಾಷ್ಟ್ರಗಳೇ ಅಲ್ಲದೆ, ಆಫ್ರಿಕಾ ಮತ್ತು ಉತ್ತರ ಅಮೆರಿಕಾ ಖಂಡಗಳ ಕೆಲವು ದೇಶಗಳಿಗೆ ತನ್ನ ಸಂಬಂಧ ಜಾಲವನ್ನು ವಿಸ್ತರಿಸಿರುವ ರೋನ್-ಆಲ್ಫ್‌ಸ್ ಪ್ರಾಂತ್ಯ, ಏಷಿಯಾದಲ್ಲಿ ಚೀನಾ, ಲಾವೋ, ವಿಯಟ್ನಾಮ್, ಶ್ರೀಲಂಕಾ ಮತ್ತು ಭಾರತ ದೇಶಗಳೊಡನೆಯೂ ಸಂಬಂಧವನ್ನು ಏರ್ಪಡಿಸಲು ಆಡಳಿತಾತ್ಮಕ ವ್ಯವಸ್ಥೆಯೊಂದನ್ನು ರೂಪಿಸಿದೆ.

ಪ್ರತಿ ದೇಶದಲ್ಲಿಯೂ ಆಯ್ದ ಒಂದು ಪ್ರದೇಶದೊಡನೆ ವಿಶೇಷವಾದ ಸಮನ್ವಯವನ್ನು ಬೆಳೆಸಿಕೊಳ್ಳಲು ರೋನ್-ಆಲ್ಫ್‌ಸ್ ಪ್ರಾದೇಶಿಕ ಮಂಡಳಿ ನಿರ್ಧರಿಸಿದ್ದರಿಂದ, ಭಾರತದಲ್ಲಿ ಕರ್ನಾಟಕ ರಾಜ್ಯವನ್ನು ಆಯ್ಕೆ ಮಾಡಲಾಗಿತ್ತು.

ಚೀನಾದಲ್ಲಿ ಷಾಂಗೈ ನಗರವನ್ನೂ ಕರ್ನಾಟಕದಲ್ಲಿ ಬೆಂಗಳೂರನ್ನೂ ತಮ್ಮ ಅಂತರರಾಷ್ಟ್ರೀಯ ಸಹಕಾರದ ವರ್ತುಲದಲ್ಲಿ ಸೇರ್ಪಡೆ ಮಾಡಿಕೊಳ್ಳಲು ರೋನ್-ಆಲ್ಫ್‌ಸ್ ಹೆಚ್ಚಿನ ಉತ್ಸುಕತೆಯನ್ನು ತೋರಿದ್ದು, ಈ ಎರಡು ನಗರಗಳೂ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧಿಸಿರುವ ಪ್ರಗತಿ ಹಾಗೂ ಅವರೆಡಕ್ಕೂ ಇರುವ ಸಾಮ್ಯತೆ.

ಷಾಂಗೈ ನಗರ ತೋರಿದ ಉತ್ಸುಕತೆಯ ಕಾರಣದಿಂದಾಗಿ ರೋನ್-ಆಲ್ಫ್‌ಸ್ ಮತ್ತು ಚೀನಾ ದೇಶಗಳ ನಡುವಣ ಸಹಕಾರ ಅತ್ಯಂತ ಯಶಸ್ವಿಯಾಗಿ ಕೃಷಿ, ಪಶು ಸಂಗೋಪನೆ, ರೇಷ್ಮೆ ಉದ್ಯಮ ಮುಂತಾದ ಕ್ಷೇತ್ರಗಳಲ್ಲಿ ಏರ್ಪಟ್ಟಿದ್ದು, ಪರಸ್ಪರ ಪ್ರಯೋಜನವಾಗುವಂಥ ಯೋಜನೆಗಳು ಈಗಾಗಲೇ ಅಸ್ತಿತ್ವಕ್ಕೆ ಬಂದಿವೆ.

ಆದರೆ ನಮ್ಮ ರಾಜ್ಯದ ಮಟ್ಟಿಗೆ ಈ ಸಹಕಾರ ಹೆಚ್ಚು ಕಡಿಮೆ ದಾಖಲೆಯಾಗಿ ಮಾತ್ರ ಉಳಿದಿರುವುದಕ್ಕೆ ರಾಜಕೀಯ ಇಚ್ಛಾಶಕ್ತಿಯ ಕೊರತೆಯೇ ಕಾರಣವಾಗಿದೆ.

2007ರ ಸಮಯದಲ್ಲಿ ರಾಜ್ಯದಲ್ಲಿ ಉಂಟಾಗಿದ್ದ ರಾಜಕೀಯ ಅನಿಶ್ಚಿತತೆ ಹಾಗೂ ಗೊಂದಲಮಯ ವಾತಾವರಣದಿಂದಾಗಿ ಈ ಒಡಂಬಡಿಕೆಯನ್ನು ಕಾರ್ಯರೂಪಕ್ಕೆ ತರಲು ನಮ್ಮ ರಾಜಕೀಯ ನಾಯಕರು ಯಾವುದೇ ಅರ್ಥಪೂರ್ಣವಾದ ಕ್ರಮಗಳನ್ನು ಕೈಗೊಳ್ಳಲಿಲ್ಲ.
 
ಆಗಿನ ಕಾಲಘಟ್ಟದಲ್ಲಿ ಆಡಳಿತ ನಡೆಸುತ್ತಿದ್ದ ಸಮ್ಮಿಶ್ರ ಸರ್ಕಾರದ ಇಬ್ಬರು ಮಂತ್ರಿಗಳು ಹಾಗೂ ನಾಲ್ಕು ಮಂದಿ `ಸಾರಿಗೆ ತಜ್ಞ~ರು ಫ್ರಾನ್ಸ್ ದೇಶದ ಪ್ರವಾಸವನ್ನು ಕೈಗೊಂಡಿದ್ದರು ಎಂಬುದು ತಿಳಿದು ಬಂದಿದೆ. ಆದರೆ ಈ ಎಲ್ಲ ಪ್ರವಾಸಗಳ ಪರಿಣಾಮ ರಾಜ್ಯದ ಅಭಿವೃದ್ಧಿಯ ಮೇಲೆ ಏನಾಯಿತು ಎಂಬುದು ಮಾತ್ರ ತಿಳಿದು ಬಂದಿಲ್ಲ.

ಕರ್ನಾಟಕ ರಾಜ್ಯ ಮತ್ತು ರೋನ್-ಆಲ್ಫ್‌ಸ್ ಪ್ರಾಂತ್ಯಗಳ ನಡುವೆ ಸಹಕಾರಕ್ಕಾಗಿ ರೂಪಿಸಲಾದ ಸಹಕಾರ ನೀತಿಯಲ್ಲಿ ಪ್ರಧಾನವಾಗಿ ಸೇರಿಸಲ್ಪಟ್ಟಿದ್ದ ಕ್ಷೇತ್ರಗಳೆಂದರೆ ವಾಣಿಜ್ಯ ಮತ್ತು ಆರ್ಥಿಕ ಸಂಬಂಧಗಳು, ಪಾರಂಪರಿಕ ಪ್ರವಾಸೋದ್ಯಮ, ವಿಜ್ಞಾನ ಮತ್ತು ತಂತ್ರಜ್ಞಾನ, ಇಂಧನ ಉತ್ಪಾದನೆ, ಮಾಹಿತಿ ತಂತ್ರಜ್ಞಾನ ಹಾಗೂ ವಿದ್ಯಾರ್ಥಿಗಳು ಮತ್ತು ತಜ್ಞರ ವಿನಿಮಯ.

ಬೆಂಗಳೂರು ಹಾಗೂ ಇತರ ನಗರಗಳಲ್ಲಿ ವಾಹನ ದಟ್ಟಣೆಯಿಂದ ಉಂಟಾಗುತ್ತಿರುವ ಪರಿಸರ ಮಾಲಿನ್ಯವನ್ನು ತಡೆಗಟ್ಟಲು ರೋನ್-ಆಲ್ಫ್‌ಸ್ ಪ್ರಾಂತ್ಯದಲ್ಲಿ ಬಳಸಲಾಗುತ್ತಿರುವ `ಬಹು ವಾಹನ~ಗಳ ಮೂಲಕ ಪ್ರಯಾಣಿಸುವಂಥ ವ್ಯವಸ್ಥೆಯನ್ನು ನಮ್ಮ ನಗರಗಳಲ್ಲೂ ಅಳವಡಿಸಬೇಕೆನ್ನುವ ಯೋಜನೆಯೂ ಈ ಒಡಂಬಡಿಕೆಯಲ್ಲಿ ಸೇರಿತ್ತು.

ರೋನ್-ಆಲ್ಫ್‌ಸ್ ಪ್ರದೇಶದಲ್ಲಿನ ಜನರು ಪೆಟ್ರೋಲ್ ಬಳಕೆಯನ್ನು ಕಡಿಮೆ ಮಾಡಲು ಒಂದೇ ಪ್ರಯಾಣದ ಅವಧಿಯಲ್ಲಿ ಟ್ರಾಮ್, ಮೆಟ್ರೋ, ಬೈಸಿಕಲ್-ಈ ಮೂರನ್ನೂ ಉಪಯೋಗಿಸುತ್ತಿದ್ದು ಅದು ಪರಿಸರ ಮಾಲಿನ್ಯವನ್ನು ತಡೆಗಟ್ಟುವುದೇ ಅಲ್ಲದೆ, ಆರೋಗ್ಯಕರವಾದ ಪರಿಸರವನ್ನೂ ಸೃಷ್ಟಿಸಲೂ ಕಾರಣವಾಗಿದೆ.

ಬಹು ವಾಹನದ ಬಳಕೆಯ ಮೂಲಕ ಸುಸ್ಥಿರ ಅಭಿವೃದ್ಧಿಯನ್ನು ಸಾಧಿಸಲು ಸಣ್ಣ ಪ್ರಮಾಣದ ಯೋಜನೆಯೊಂದು ಕೂಡ ತಯಾರಾಗಿದ್ದು, ನಮ್ಮಲ್ಲಿನ ಇಚ್ಛಾಶಕ್ತಿಯ ಕೊರತೆಯಿಂದ ಅದು ಕಾರ್ಯರೂಪಕ್ಕೆ ಬರಲಿಲ್ಲವೆನ್ನುವುದನ್ನು ನಾವು ಗಮನಿಸಬೇಕಾಗಿದೆ.

ಪ್ರವಾಸೋದ್ಯಮ ಕ್ಷೇತ್ರಾಭಿವೃದ್ಧಿ ಹಾಗೂ ಕೃಷಿ ಆಧಾರಿತ ಉತ್ಪನ್ನಗಳ ಉತ್ಪಾದನೆ ಮತ್ತು ವಿತರಣೆಗೆ ರೋನ್-ಆಲ್ಫ್‌ಸ್ ಕೈಗೊಂಡಿರುವ ಕ್ರಮಗಳ ಬಗ್ಗೆ ಜ್ಞಾನ ವಿನಿಮಯಕ್ಕೆ ಈ ಸಹಕಾರ ಏರ್ಪಡಿಸಿದ್ದ ಅವಕಾಶದ ಬಗ್ಗೆಯೂ ಪ್ರಸ್ತಾಪ ಮಾಡುವುದು ಅಪ್ರಸ್ತುತವೆನಿಸಲಾರದು.

ಅತ್ಯಂತ ವೈವಿಧ್ಯಮಯವಾದ ಕೃಷಿ ಉತ್ಪಾದನೆಗಳಿಗೆ ಪ್ರಖ್ಯಾತವಾಗಿರುವ ರೋನ್-ಆಲ್ಫ್‌ಸ್ ಪ್ರದೇಶದಲ್ಲಿ ಸ್ಥಳೀಯವಾಗಿ ದೊರೆಯುವಂಥ ಎಲ್ಲ ಬೆಳೆಗಳಿಗೂ ಬೃಹತ್ ಮಾರುಕಟ್ಟೆಯಿದೆ.

ಹೊರ ಪ್ರದೇಶಗಳಿಂದ ಬಂದ ವಸ್ತುಗಳು ಸ್ಥಳೀಯ ಉತ್ಪನ್ನಗಳ ಮೇಲೆ ದಾಳಿ ನಡೆಸಿ, ಗ್ರಾಮೀಣ ಮಾರುಕಟ್ಟೆಗಳನ್ನು ನಾಶ ಮಾಡುತ್ತಿರುವ ಈ ಹೊತ್ತಿನಲ್ಲಿ, ಸ್ಥಳೀಯ ಸಂಪನ್ಮೂಲಗಳನ್ನು ಬಳಸಿ ಸುಸ್ಥಿರ ಅಭಿವೃದ್ಧಿಯನ್ನು ಸಾಧಿಸುವ ಬಗ್ಗೆ ಅನುಭವ ಹಂಚಿಕೆಯಿಂದ ನಮ್ಮ ರಾಜ್ಯಕ್ಕೆ ಹೇಗೆ ಪ್ರಯೋಜನವಾಗುತ್ತಿತ್ತು ಎಂಬುದರ ಬಗ್ಗೆ ಸಂಬಂಧಿಸಿದವರು, ತಜ್ಞರೊಡನೆ ಸಮಾಲೋಚನೆ ನಡೆಸಿ ಯಾವುದಾದರೂ ಅನುಕರಣೀಯ ಮಾದರಿಗಳಿದ್ದರೆ ಅವುಗಳನ್ನು ಅಳವಡಿಸಬಹುದಾಗಿತ್ತು.

ರೋನ್-ಆಲ್ಫ್‌ಸ್ ಪ್ರಾಂತ್ಯ ತನ್ನ ಪ್ರಾಕೃತಿಕ ಸಂಪನ್ಮೂಲಗಳು ಹಾಗೂ ಪರಿಸರ ಸಂರಕ್ಷಣಾ ನೀತಿಗಳಿಗೂ ಹೆಸರಾಗಿದ್ದು, ಈ ನಿಟ್ಟಿನಲ್ಲಿ ಆ ಪ್ರದೇಶದಲ್ಲಿ ಕೈಗೊಳ್ಳಲಾಗಿರುವ ಕ್ರಮಗಳ ಬಗ್ಗೆ ವಿಚಾರ ವಿನಿಮಯಕ್ಕೂ ಈ ಸಹಕಾರ ನೀತಿಯಲ್ಲಿ ಸ್ಥಾನವನ್ನು ಕಲ್ಪಿಸಲಾಗಿತ್ತು.

ವಿಶೇಷವಾಗಿ, ಕಲುಷಿತ ನೀರಿನ ಮೂಲಗಳ ಶುದ್ಧೀಕರಣ, ತ್ಯಾಜ್ಯವಸ್ತುಗಳ ವಿಲೇವಾರಿ ಮತ್ತು ಪ್ರವಾಸೋದ್ಯಮದ ಅಭಿವೃದ್ಧಿಯ ಹೆಸರಿನಲ್ಲಿ ನಡೆಯುವ ಪರಿಸರ ನಾಶವನ್ನು ತಡೆಗಟ್ಟಲು ಪ್ರಕೃತಿ ಸ್ನೇಹಿ ವ್ಯವಸ್ಥೆಯ ನಿರ್ಮಾಣ- ಈ ಕ್ಷೇತ್ರಗಳಲ್ಲಿ ರೋನ್-ಆಲ್ಫ್‌ಸ್ ಪ್ರಾಂತ್ಯ ಹಾಗೂ ಅದರೊಡನೆ ಸಹಕಾರ ಸ್ಥಾಪಿಸಿರುವ ದೇಶಗಳ ಅನುಭವಗಳ ಬಗ್ಗೆ ವಿನಿಮಯ ಮಾಡಿಕೊಳ್ಳಲು ಈ ಒಡಂಬಡಿಕೆ ಸೃಷ್ಟಿಸಿದ್ದ ಅವಕಾಶವನ್ನು ಕರ್ನಾಟಕ ರಾಜ್ಯ ಸರ್ಕಾರ ಉಪಯೋಗಿಸಿಕೊಳ್ಳಬಹುದಾಗಿತ್ತು.

ಎಲ್ಲಕ್ಕಿಂತ ಮಿಗಿಲಾಗಿ, ನಮ್ಮ ವಿದ್ಯಾರ್ಥಿ ಸಮುದಾಯಕ್ಕೆ ರೋನ್-ಆಲ್ಫ್‌ಸ್ ಪ್ರಾಂತ್ಯದ ಉನ್ನತ ಶಿಕ್ಷಣ ಸಂಸ್ಥೆಗಳ ಅನುಭವವನ್ನು ಪಡೆಯಲು ಈ ಒಪ್ಪಂದ ಒದಗಿಸಿದ್ದ ಅಪಾರ ಅವಕಾಶದ ಸದುಪಯೋಗ ಇದುವರೆಗೂ ನಡೆದಿಲ್ಲವೆನ್ನುವುದು ವಿಷಾದನೀಯ.
 
600 ಸಂಶೋಧನಾ ಪ್ರಯೋಗಾಲಯಗಳೂ, ಉನ್ನತ ಶಿಕ್ಷಣದ ನಾಲ್ಕು ಕೇಂದ್ರಗಳು ಹಾಗೂ ಅತ್ಯಂತ ಉನ್ನತ ಮಟ್ಟದ ತಂತ್ರಜ್ಞಾನವನ್ನು ಬಳಸುವಂಥ ಕೈಗಾರಿಕೆಗಳು-ಇವುಗಳಲ್ಲಿ ತರಬೇತಿ ಹಾಗೂ ಪರಿಣತಿ ಪಡೆಯಲು ನಮ್ಮ ರಾಜ್ಯದ ವಿದ್ಯಾರ್ಥಿಗಳಿಗೆ ಆರ್ಥಿಕ ಬೆಂಬಲವನ್ನು ನೀಡಲು ಈ ಒಪ್ಪಂದ ವ್ಯವಸ್ಥೆಯನ್ನು ಸೃಷ್ಟಿಸಿದ್ದು, ಎಲ್ಲೋ ಅಲ್ಲೊಮ್ಮೆ, ಇಲ್ಲೊಮ್ಮೆ ಕೆಲ ವಿದ್ಯಾರ್ಥಿಗಳು, ಅದೂ ಐಐಎಂ ಅಥವಾ ಭಾರತೀಯ ವಿಜ್ಞಾನ ಸಂಸ್ಥೆಯ ಹಿನ್ನೆಲೆಯಿಂದ ಬಂದಂಥವರು ಇದರ ಪ್ರಯೋಜನವನ್ನು ಪಡೆದಿದ್ದಾರಷ್ಟೆ.

ಇಂಥ ಒಡಂಬಡಿಕೆಗಳಿಂದಲೇ ಎಲ್ಲ ಪರಿಸ್ಥಿತಿಗಳು ಬದಲಾಗುತ್ತವೆ ಅಥವಾ ಸುಧಾರಿಸುತ್ತವೆ ಎಂದು ಹೇಳಲಾಗುವುದಿಲ್ಲ, ನಿಜ. ಯಾವುದೇ ದೇಶ ಮತ್ತೊಂದು ದೇಶದ ಅಭಿವೃದ್ಧಿ ಯತ್ನಗಳಲ್ಲಿ ಕೈಜೋಡಿಸಲು ಮುಂದಾಗುತ್ತದೆ ಎಂದರೆ, ಅದರ ಹಿಂದೆ ಸ್ವಂತಆಸಕ್ತಿಯೂ ಇರುತ್ತದೆ ಎನ್ನುವುದನ್ನೂ ನಾವು ಒಪ್ಪಿಕೊಳ್ಳಬೇಕು.
 
ಆದರೆ ಈ ಪ್ರಕ್ರಿಯೆಯಲ್ಲಿ ಭಾಗಿಗಳಾಗುವ ಎಲ್ಲರಿಗೂ ತಮ್ಮ-ತಮ್ಮ ಅನುಭವ ಹಾಗೂ ಜ್ಞಾನ ಕ್ಷೇತ್ರಗಳ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳಲು ಇಂಥ ಸಹಕಾರಗಳು ಅವಕಾಶವನ್ನು ಕಲ್ಪಿಸಲು ಸಾಧ್ಯವಿದೆ ಎನ್ನುವುದನ್ನೂ ನಾವು ಅಲ್ಲಗಳೆಯುವ ಹಾಗಿಲ್ಲ.

ತೀರಾ ಇತ್ತೀಚೆಗಷ್ಟೇ ಮೈಸೂರು ವಿಶ್ವವಿದ್ಯಾನಿಲಯ ಮತ್ತು ರೋನ್-ಆಲ್ಫ್‌ಸ್ ಪ್ರಾಂತ್ಯದ ಪ್ರಮುಖ ವಿಶ್ವವಿದ್ಯಾನಿಲಯಗಳಲ್ಲಿ ಒಂದಾದ ಲಯಾನ್ ವಿಶ್ವವಿದ್ಯಾನಿಲಯ 2-ಇವುಗಳ ನಡುವೆ ಒಡಂಬಡಿಕೆಗೆ ಸಹಿ ಹಾಕಲಾಗಿದ್ದು, ಈ ಮೂಲಕ ಸಡಿಲವಾಗಿದ್ದ ರೋನ್-ಆಲ್ಫ್‌ಸ್-ಕರ್ನಾಟಕದ ನಡುವಣ ಸಂಬಂಧ ಭವಿಷ್ಯದಲ್ಲಿ ಮತ್ತೆ ಬೆಸೆಯಬಹುದೇನೋ ಎನ್ನುವ ಆಶಯವನ್ನು ರೋನ್-ಆಲ್ಫ್‌ಸ್ ಪ್ರಾಂತ್ಯದ ಮಂಡಳಿಯ ಪ್ರತಿನಿಧಿಗಳು ವ್ಯಕ್ತಪಡಿಸಿದ್ದಾರೆ. ಇನ್ನು ಮುಂದಾದರೂ ರೋನ್-ಆಲ್ಫ್‌ಸ್-ಕರ್ನಾಟಕದ ಸಹಕಾರ ಸಾಕಾರವಾಗುವ ದಿಕ್ಕಿನಲ್ಲಿ ಅರ್ಥಪೂರ್ಣ ಪ್ರಯತ್ನಗಳು ನಡೆಯಲಿ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT