ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಲ ಕಳ್ಕೊಂಡೋರ ಸಂಕಟವೂ, ನೆಲೆ ಇಲ್ಲದೋರ ದುಃಖವೂ...­­

Last Updated 12 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

‘ರಾತ್ರಿಯೆಲ್ಲ ರಾಮಾಯ್ಣ ಕೇಳಿ ಬೆಳಿಗ್ಗೆದ್ದು ರಾಮನಿಗೂ ಸೀತೆಗೂ ಏನ್ ಸಂಬಂಧ ಅಂದ್ರಂತೆ. ಇಷ್ಟೊತ್‌ವರೆಗೆ ಹೇಳಿದ್ನಲ್ಲ ನನಗೆ ಕೆಲಸಕ್ಕೆ ಬರೋಕೆ ಸಾಧ್ಯವಿಲ್ಲ ಅಂತ... ಅಂದ್ರೆ ಐ ವಾಂಟ್ ಟು ಕ್ವಿಟ್! ಈವತ್ತೇ ರಾಜೀನಾಮೆ ಕಳಿಸ್ತೀನಿ’ ಅಂತ ಬೆಳ್ ಬೆಳಿಗ್ಗೆನೆ ಕವಿತಾ ಆಫೀಸಿನವರ ಹತ್ತಿರ ರಾಂಗ್ ಆಗಿ ಮಾತನಾಡುತ್ತಿದ್ದಳು. ಅವಳ ಹಣೆ ಬರಹ ಇದ್ದದ್ದೇ ಇಷ್ಟು... ಸರಿಯಾಗಿ ಒಂದು ವರ್ಷವೂ ಒಂದು ಜಾಗದಲ್ಲಿ ಕೆಲಸ ಮಾಡುತ್ತಿರಲಿಲ್ಲ.

ಆ ಕೆಲಸ ಬಿಟ್ಟಳೋ... ಪುರುಸೊತ್ತಿಲ್ಲದಂತೆ ಇನ್ನೊಂದು ಕೆಲಸಕ್ಕೆ ಸೇರುತ್ತಿದ್ದಳು. ಹಾಗಂತ ಅವಳಿಗೆ ತುಂಬಾ ದುಡ್ಡು ಸಿಗ್ತಾ ಇತ್ತು ಅಂದುಕೊಂಡರೆ ಅದು ನಿಮ್ಮ ತಪ್ಪು. ಯಾವ ಕೆಲಸದಲ್ಲೂ ಅವಳಿಗೆ ಅವಳ ಯೋಗ್ಯತೆಗೆ ತಕ್ಕ ಸಂಬಳ ಸಿಗುತ್ತಿದ್ದಿಲ್ಲ. ಬದುಕಲು ಬೇಕಾಗುವಷ್ಟು ದುಡ್ಡಾದರೂ ಸರಿ ಎಂದುಕೊಂಡರೆ, ಅದನ್ನು ಸಂಪಾದಿಸಲೂ ಒದ್ದಾಡಿ ಹೋಗುತ್ತಿದ್ದಳು.

ಕಡಿಮೆ ದುಡ್ಡಿನಲ್ಲಿ ಸಿಂಪಲ್ ಆಗಿ ಇರೋಕಾಗಲ್ವಾ ಅಂತ ಕವಿತಾ ಹಲವಾರು ಬಾರಿ ಯೋಚಿಸಿದ್ದರೂ ಉತ್ತರ ಸೊನ್ನೆಯೇ. ಯಾಕೆಂದರೆ ಹುಡುಗನೊಬ್ಬ ಒಂಟಿಯಾಗಿ ಬದುಕುವುದಕ್ಕೂ, ಹುಡುಗಿಯೊಬ್ಬಳು ಸ್ವತಂತ್ರವಾಗಿ ಬದುಕು ಕಟ್ಟಿಕೊಳ್ಳುವುದಕ್ಕೂ ಬಹಳ ವ್ಯತ್ಯಾಸ ಇದೆ.

ಹುಡುಗ ಯಾವ ಏರಿಯಾದಲ್ಲೂ ‘ರೂಮ್’ ಮಾಡಿಕೊಂಡು ಇರಬಹುದು. ಕನಿಷ್ಠ ಸ್ವಚ್ಛತೆ ಇದ್ದರೆ ಸಾಕು ಅನ್ನಿಸುವವರು ಹಾಗೇ ಬದುಕುತ್ತಾರೆನ್ನಿ. ಆದರೆ ಈ ‘ಕನಿಷ್ಠ’ದ ಮಟ್ಟ ಬೇರೆ ಬೇರೆ ಇರುತ್ತದಲ್ಲ? ಗಲೀಜು ಎನ್ನುವುದು ಒಮ್ಮೊಮ್ಮೆ ಕಣ್ಣಿಗೆ ಕಾಣುವ ಕಸ ಅಲ್ಲವೇ ಅಲ್ಲ. ಮನಸ್ಸಿನ ಅನುಭವಕ್ಕೆ ಬರುವಂಥದ್ದು! ಎಲ್ಲ ಓನರ್ರುಗಳೂ ಅಷ್ಟಿಷ್ಟು ನಿರ್ಬಂಧಗಳನ್ನು ಹೇರುತ್ತಾರಾದರೂ ಹುಡುಗರು ಬಹಳ ಮಟ್ಟಿಗೆ ಅವಕ್ಕೆಲ್ಲಾ ಹೊರತಾದವರು.

ಆದರೆ ಒಂಟಿ ಹುಡುಗಿಯರು ಎಲ್ಲರ ಕಣ್ಣಿಗೆ ಒಂಥರಾ ಸಸ್ಪೆನ್ಸ್ ಕಾದಂಬರಿಯ ಥರ ಕಾಣಿಸುತ್ತಾರೇನೋ. ಈವತ್ತಿನ ಜಗತ್ತು ಬದಲಾಗಿದೆ ಎನ್ನುವುದೇನೋ ಸರಿ. ಆದರೆ ಆ ದಿನಗಳಲ್ಲಿ ಒಂಟಿ ಹುಡುಗಿಯರು ಬಹುತೇಕ ಎಲ್ಲರ ಕಣ್ಣಿಗೂ ಬೀಳುತ್ತಿದ್ದರು. ಆಧುನಿಕ ಬೆಂಗಳೂರಿಗೆ ಅವರಿಂದ ಯಾವ ತೊಂದರೆಯೂ ಇರಲಿಲ್ಲ. ಅವರು ಸವಾಲ್ ಎನಿಸುತ್ತಿದ್ದುದು ನವಮಧ್ಯಮ ವರ್ಗಕ್ಕೆ. ಕಾಕ್ಸ್ ಟೌನ್, ಕೋರಮಂಗಲ, ಫ್ರೇಸರ್ ಟೌನ್ ಇಂಥಲ್ಲೆಲ್ಲ ಎಗ್ಗಿಲ್ಲದೆ ಇರುತ್ತಿದ್ದ ಸ್ವತಂತ್ರ ಯುವ ಸಮೂಹ, ಬಸವನಗುಡಿ, ವಿಜಯನಗರ, ರಾಜಾಜಿ ನಗರ, ಪದ್ಮನಾಭ ನಗರ ಇಂಥಲ್ಲಿ ಬದುಕಲು ಸ್ವಲ್ಪ ಕಷ್ಟ ಅನುಭವಿಸುತ್ತಿತ್ತು.

ಒಂಟಿ ಹುಡುಗಿಯರ ಸವಾಲು ಹುಡುಗರಿಗಿಂತ ಬೇರೆ ಥರದ್ದು. ಮನೆಯೋ ರೂಮೋ ಬಾಡಿಗೆ ಹಿಡಿಯುವಾಗ ಉತ್ತಮ ಏರಿಯಾ ಆಗಬೇಕು. ಬಾಗಿಲು ಬೀದಿಗೆ ಕಾಣುವಂತೆ ಇರಬಾರದು. ಆದಷ್ಟೂ ಮೊದಲ ಫ್ಲೋರ್ ಮನೆ ಇದ್ದರೆ ಒಳ್ಳೆಯದು. ನೀರು ನಿಡಿ ತೊಂದರೆ ಆದರೂ ಸಹಿಸಿಕೊಳ್ಳಬಹುದು ಆದರೆ ಹೋಗುತ್ತಾ ಬರುತ್ತಾ ಮನೆಯೊಳಗೆ ಇಣುಕುವ ಅಧಿಕಪ್ರಸಂಗಿಗಳ ಸಹಿಸಿಕೊಳ್ಳಲಾಗದಯ್ಯಾ ಕೂಡಲಸಂಗಮದೇವಾ!! ಅಂತ ಹೊಸ ವಚನ ಹುಟ್ಟಿಕೊಂಡೀತು. ದೊಡ್ಡ ಜಾಗ ಹಿಡಿಯಲು ಸಾಕಷ್ಟು ದುಡ್ಡು ಬೇಕು. ಅಷ್ಟು ದುಡ್ಡೆಲ್ಲಿಂದ ತರೋದು? ಆಮೇಲೆ ಸುತ್ತ ಮುತ್ತ ಅಂಗಡಿಗಳಿದ್ದರೂ ಕಷ್ಟ! ಇಲ್ಲದಿದ್ದರೂ ಕಷ್ಟ!

ಒಂದೊಮ್ಮೆ ಅವಳು ಯಾವುದೋ ಪ್ರಾಜೆಕ್ಟ್ ಮೇಲೆ ಹೋಗಿ ವಾಪಸು ಬರುವಾಗ ನಡು ರಾತ್ರಿ ದಾಟಿತ್ತು. ಬಹುಷಃ ಒಂದೂವರೆ ಆಗಿತ್ತೇನೊ, ಸೀದಾ ಹೋಗಿ ಮಲಗಿಬಿಟ್ಟಳು. ಅಷ್ಟು ಹೊತ್ತಿನಲ್ಲಿ ಮೆಟ್ಟಿಲು ಹತ್ತಲೂ, ಮನೆ ಬಾಗಿಲು ತೆರೆಯಲೂ ಹೆದರಿಕೆ. ಯಾವನಾದರೂ ಒಬ್ಬಂಟಿ ಹುಡುಗಿ ಅಂತ ಮೆಟ್ಟಿಲ ಹತ್ತಿರ ಕಾದಿದ್ದು ಅಟ್ಯಾಕ್ ಮಾಡಿದರೆ? ಹೆದರಿಕೆಗಳು ರಾತ್ರಿ ಹೊತ್ತು ಪುಕ್ಕ ಕಟ್ಟಿಕೊಂಡು ಕುಣಿಯುತ್ತಿದ್ದವು. ಇಂತಹ ಸಂದರ್ಭಗಳು ಹಲವಾರು.
ಮಾರನೇ ದಿನೆ ಬೆಳಿಗ್ಗೆ ಕವಿತಾ ಹಾಲು ತರಲು ಪಕ್ಕದ ಅಂಗಡಿಗೆ ಹೋದಳು.

ಅಂಗಡಿಯ ಮಧ್ಯ ವಯಸ್ಕನಾದ ಸ್ಕೂಲಿಗೆ ಹೋಗುವ ಮಕ್ಕಳ ತಂದೆಯಂಥ ಗಂಡಸು ತಗ್ಗಿಸಿದ ತಲೆ ಎತ್ತದೆ ಅರ್ಧ ಲೀಟರ್ ಹಾಲಿನ ಪ್ಯಾಕೆಟ್ ಕೊಡುತ್ತಾ ಹೇಳಿದ: ‘ರಾತ್ರಿ ಬಹಳ ಲೇಟಾಗಿ ಬಂದಂಗಿತ್ತು ಅಷ್ಟು ಲೇಟಾಗಿ ಬಂದ್ರೆ ತೊಂದ್ರೆ ಆಗುತ್ತೆ...’ ಆ ಧ್ವನಿಯಲ್ಲಿ ಕಾಳಜಿ ಇರಲಿಲ್ಲ, ಬದಲಾಗಿ ಹೆಚ್ಚೂ ಕಡಿಮೆ ‘ನೀನು ಕಣ್ಣಳತೆಯಲ್ಲೇ ಇದೀಯಾ’ ಎನ್ನುವ ಧೋರಣೆ ಇತ್ತು.

ಮನೆಗೆ ಬಂದ ಕವಿತಾ ಕೂತು ಅವನ ಮಾತುಗಳನ್ನೇ ನೆನೆಸಿಕೊಳ್ಳುತ್ತಾ ನಡುಗಿದಳು. ಇವನು ಒಬ್ಬ... ಇವನ ಥರ ಇನ್ನೂ ಸಾವಿರ ಜನ... ಹಾಗಂತ ಮನೆಯಲ್ಲೇ ಇರೋಕಾಗುತ್ತಾ? ಮತ್ತೆ ಬ್ಯಾಗು ಹೆಗಲಿಗೆ ಹಾಕಿಕೊಂಡು ಇನ್ನೊಂದು ನೌಕರಿ, ಇನ್ನೊಂದು ಮನೆ, ಇನ್ನೊಂದು ಬೆದರಿಕೆ, ಇನ್ನೊಂದು ಊರು... ಹೊಸ ಥರದ ಕುತೂಹಲ ಎಲ್ಲಕ್ಕೂ ಮತ್ತೆ ತಯಾರಾಗಲೇಬೇಕು. ಮೈ ಕೊಡವಿಕೊಂಡು ನಿಲ್ಲಬೇಕು.

‘ರವೀ, ಹೆಂಗಸರ ಕಷ್ಟಗಳ ಮುಂದೆ ನಿಮ್ಮ ಕಷ್ಟಗಳನ್ನು ಇಟ್ಟರೆ ತೂಕ ಸಮ ಆಗೋದೇ ಇಲ್ಲ ಕಣೋ. ನಮ್ಮ ಕಷ್ಟ ಎಲ್ಲಿಂದ ಶುರುವಾಗುತ್ತೆ ಗೊತ್ತಾ? ಭ್ರೂಣ ಹೆಣ್ಣಾದ ತಕ್ಷಣ ಅದರ ಹಣೆಯಲ್ಲಿ ಎಂಥೆಂಥ ಸವಾಲುಗಳನ್ನು ಬರೆದಿರ್ತಾನೆ ದೇವರು’ ಎಂದು ತನ್ನ ಪ್ರಿಯಕರನಿಗೆ ಹೇಳುವಾಗ ಅವನು ಬಿದ್ದು ಬಿದ್ದು ನಕ್ಕಿದ್ದ.

‘ಸಕ್ಕತ್ ಡ್ರಾಮಾ ಕಣೆ ನಿಂದು. ಎಲ್ರಿಗೂ ಕಷ್ಟ ಕಷ್ಟವೇ..’
‘ಲೋ... ನಿಂಗರ್ಥ ಆಗಲ್ಲ. ನಿನಗೆ ಉಚ್ಚೆ ಹುಯ್ಯಬೇಕು ಅನ್ನಿಸಿದಾಗ ನೀನು ಯಾವ ಯೋಚನೆಯನ್ನೂ ಮಾಡಬೇಕಿಲ್ಲ. ಯಾವ ರಸ್ತೆ, ಮರ, ಗೋಡೆ, ಸಂದಿ ಎಲ್ಲಿ ಬೇಕಲ್ಲಿ ಆ ಕೆಲಸ ಮಾಡಬಹುದು. ಹೆಣ್ಣು ಮಕ್ಕಳು ಹಾಗೆ ಮಾಡಿರೋದನ್ನ ನೋಡಿದೀಯಾ? ಹಳ್ಳಿಯಲ್ಲೂ ಪೇಟೆಯಲ್ಲೂ ಇದೇ ಸತ್ಯ. ಪಶ್ಚಿಮ ದೇಶಗಳಲ್ಲಿ ಇದೆಲ್ಲಾ ಅಷ್ಟು ಬಹಿರಂಗವಾಗಿ ನಾಚಿಕೆಯಿಲ್ಲದೆ ನಡೆಯಲ್ಲ ಅಂದರೂ, ತನ್ನ ದೇಹದ ಬಗ್ಗೆ ನಾಚಿಕೆ, ಹೆದರಿಕೆ ಇವೆಲ್ಲ ಹೆಂಗಸರಿಗೆ ಇದ್ದದ್ದೇ ಕಣೊ... ಯಾವನೋ ನನ್ನ ಮುಖ ನೋಡದೆ ನನ್ನ ಎದೆ ನೋಡಿ ಮಾತಾಡ್ತಾ ಇದ್ದರೆ ಅದನ್ನು ಪ್ರತಿಭಟಿಸೋಕೂ ಕಷ್ಟ ಗೊತ್ತಾ? ಮೊನ್ನೆ ನನ್ನ ಲೇಡಿ ಕಲೀಗ್‌ಗೆ ನಮ್ಮ ಟೀಂ ಮೇಟ್ ಒಬ್ಬ ಹೀಗೆ ಎದೆ ನೋಡಿ ಮಾತಾಡ್ತಾನೆ ಕಣೇ ಅಂತ ಹೇಳಿದೆ. ಅದಕ್ಕವಳು ‘ಪಾಪ ಕಣೇ ಪೊಲೈಟ್ ಆಗಿ ಮಾತಾಡ್ತಾನೆ... ನೀನೇ ಏನೇನೋ ಊಹಿಸಿಕೊಳ್ತೀ’ ಅಂತ ಅಂದುಬಿಟ್ಲು. ಮೈ ಉರಿದು ಹೋಗುತ್ತೆ...’ ಅನ್ನುತ್ತಿದ್ದಳು. 
 
ಇವಳು ಇಷ್ಟೆಲ್ಲಾ ಹೋರಾಡೋದನ್ನ ನೋಡಿ ಒಮ್ಮೊಮ್ಮೆ ವಿಜಿಗೆ ಪಾಪ ಅನ್ನಿಸುತ್ತಿತ್ತು. ‘ವಾಸ್ತವ’ ಹೀಗೇ ಇದೆ ಅಂದ ಮೇಲೆ ಯಾಕೆ ಹೊಡೆದಾಡ್ತೀ ಅಂತ ಕೇಳಿಯೂ ಇದ್ದಳು. ಅದಕ್ಕೆ ಕವಿತಾ ಉತ್ತರ ವಿಚಿತ್ರವಾಗಿತ್ತು. ‘ಇದು ಬದಲಾಗುತ್ತಾ ಗೊತ್ತಿಲ್ಲ. ನನ್ನ ಥರ ಇನ್ನೂ ಹಲವರು ಇರಬಹುದು. ಹೀಗೇ ಇರ್ತೀವಿ...’
ಸ್ಟೇಷನ್ನಿಗೆ ಹೋಗಿ ಬರುವ ಅವಾಂತರಗಳ ನಡುವೆಯೇ ಬಹಳ ಗಾಢವಾದ ಸ್ನೇಹ ಬೆಳೆದ ದಿನಗಳಲ್ಲಿ ವಿಜಿ ಒಮ್ಮೆ ಕವಿತಾಳನ್ನು ಕೇಳಿದ್ದಳು. ‘ಅಕ್ಕಾ ಯಾಕೆ ಇನ್ನೂ ಮದುವೆ ಆಗಿಲ್ಲ ನೀನು? ಸುಮ್ಮನೆ ಅಲ್ಲಿ ಇಲ್ಲಿ ಕೆಲಸ ಮಾಡಿಕೊಂಡಿರೋ ಬದಲು ಮನೇಲಿ ಹಾಯಾಗಿರಬಾರದಾ?’

ಅದಕ್ಕೆ ಪ್ರತಿಯಾಗಿ ಮಾತನಾಡದೆ ಕವಿತಾ ಸುಮ್ಮನೆ ನಕ್ಕು ಸಿಗರೇಟು ಹಚ್ಚಿದ್ದಳು. ಯಾವಾಗಲೂ ಅಲ್ಲದಿದ್ದರೂ ಬಹಳ ತುಮುಲಗಳು ಹೆಚ್ಚಿದಾಗ ಕವಿತಾ ಒಮ್ಮೊಮ್ಮೆ ಸಿಗರೇಟು ಸೇದುತ್ತಿದ್ದಳು. ಆಗಾಗ ರಮ್ ಕೂಡ ಕುಡಿಯುತ್ತಿದ್ದಳು. ಮೊನ್ನೆಯೂ ಹಾಗೇ ಆಗಿತ್ತು. ರವೀಂದ್ರನ ಪ್ರೇಮದ ಬಲೆಯಲ್ಲಿ ಇಷ್ಟೆಲ್ಲ ಅವಾಂತರವಾಗಿ ಸ್ಟೇಷನ್ನಿನ ಮೆಟ್ಟಿಲು ಹತ್ತುವಂತಾದ ಮೇಲೆ ಯಾಕೋ ಅವನ ಅಧೈರ್ಯದ ಬಗ್ಗೆ ಅಸಹನೆ ಶುರುವಾಗಿತ್ತು.

‘ಹೀಗೆ ಒಬ್ಬೊಬ್ಬರಲ್ಲೂ ಒಂದೊಂದು ಹುಳುಕು ಹುಡುಕಿ ತಿರಸ್ಕರಿಸುತ್ತಾ ಹೋದರೆ ನಾಳೆ ನಿನ್ನ ಗತಿ? ಒಬ್ಬಳೇ ಉಳಿದುಕೊಂಡು ಬಿಡ್ತೀಯಾ ಕಣೆ! ಎಲ್ಲರೂ ಮದುವೆ ಆಗಿ ಹೋಗಿರ್ತಾರೆ... ಮಕ್ಕಳನ್ನ ಆಡಿಸ್ತಿರ್ತಾರೆ. ಈಗಲೇ ಲೇಟಾಗಿದೆ... ನಿನ್ನ ಫ್ರೆಂಡ್ಸ್ ಮಕ್ಕಳೆಲ್ಲಾ ಸ್ಕೂಲಿಗೆ ಹೋಗ್ತಾ ಇದ್ದಾರೆ... ಎಲ್ಲರೂ ಸಂಜೆ ಹೊತ್ತು ಮಕ್ಕಳಿಗೆ ಹೋಂ ವರ್ಕ್ ಮಾಡಿಸ್ತಾ ಇದ್ದರೆ ನೀನು ಎಣ್ಣೆ ಹೊಡ್ಕೊಂಡು ಸಿಗರೇಟು ಸೇದ್ಕೊಂಡು ಕೂತಿರ್ತೀಯಾ... ಯಾರು ಒಪ್ತಾರೆ ನಿನ್ನ?’ ವಿಜಿ ಕವಿತಾಳನ್ನು ಪದೇ ಪದೇ ಕೇಳುತ್ತಿದ್ದಳು. ಅದನ್ನೆಲ್ಲ ಕೇಳಿಸಿಕೊಂಡು ಕವಿತಾ ನಕ್ಕು ಸುಮ್ಮನಾಗುತ್ತಿದ್ದಳು. ಮದುವೆ ಆಗದೇ ಇರುವುದು ಅಂಥಾ ಅಪರಾಧವೇ ಅಲ್ಲ ಅವಳಿಗೆ. ಆದರೆ ವಿಜಿಗೆ ಯಾಕೋ ಮದುವೆಯ ಸಹಬಾಳ್ವೆಯ ಆಸೆಯನ್ನು ಕವಿತಾ ಕರಿಯರ್-ಕೆಲಸ ದಾರಿಯಲ್ಲಿ ತರ್ಪಣ ಬಿಟ್ಟಿದ್ದಾಳೆ, ಹಾಗಂತಲೇ ಅವಳಿಗೆ ಹುಡುಗರು ಸಿಗುತ್ತಿಲ್ಲ ಎನ್ನಿಸುತ್ತಿತ್ತು.

ಹೀಗೇ ಮೇಲಿಂದ ಮೇಲೆ ಮದುವೆ ವಿಷಯ ತೆಗೆದು ವಿಜಿ ಕಿರಿಕಿರಿ ಮಾಡಿದ ದಿನ ಕವಿತಾ ಹೇಳಿದಳು. ‘ಮುಂದಿನ ವಾರ ಮೂರು ದಿನ ರಜೆ ಹಾಕು. ಮಂಗಳವಾರದಿಂದ ಗುರುವಾರದವರೆಗೆ ಲೀವ್ ಹಾಕಿದರೆ ಶುಕ್ರವಾರ ಮತ್ತು ಶನಿವಾರ ಹೇಗೂ ರಜೆ ಇದೆ. ಒಂದು ಜಾಗಕ್ಕೆ ಕರಕೊಂಡು ಹೋಗ್ತೀನಿ. ಬಹಳ ಇಂಟ್ರೆಸ್ಟಿಂಗ್ ಜಾಗ ಕಣೆ...’

ಕವಿತಾಗೆ ಹೇಗಿದ್ದರೂ ಫೋಟೊಗ್ರಫಿಯ ಹವ್ಯಾಸ ಇತ್ತಲ್ಲ? ಹಳೇ ಕೆಲಸ ಬಿಟ್ಟು ಹೊಸ ಕೆಲಸ ಸೇರುವ ನಡುವಿನ ಸಮಯದ ಅಂತರವನ್ನು ಬೇಕಂತಲೇ ಹೆಚ್ಚು ಇಟ್ಟುಕೊಳ್ಳುತ್ತಿದ್ದಳು. ಕನಿಷ್ಠ ಎರಡು ವಾರ, ಅದೃಷ್ಟ ಇದ್ದರೆ ಒಂದು ತಿಂಗಳ ಸಮಯ ಸಿಗುತ್ತಿತ್ತು. ಪಶ್ಚಿಮ ದೇಶಗಳಲ್ಲಿ ಬೆಳೆದ ಮಕ್ಕಳು ಪ್ರೌಢಿಮೆಗೆ ಬರುತ್ತಾ ತಮ್ಮ ವ್ಯಕ್ತಿತ್ವದ ಬಗೆಗಿನ ಎಲ್ಲ ಸಂದಿಗ್ಧ ಮತ್ತು ಇಬ್ಬಂದಿಗಳನ್ನು ದಾಟಿದ ಮೇಲೆ ಒಂಥರಾ ಗಟ್ಟಿ ವ್ಯಕ್ತಿತ್ವ ಬೆಳೆಸಿಕೊಳ್ಳುತ್ತಾರೆ. ಅದು ಭಾರತದಲ್ಲಿ ಬೆಳೆದ ಮಕ್ಕಳಿಗೆ ಬಹಳ ತಡವಾಗಿ ಘಟಿಸುವ ಸಂಗತಿ ಇದ್ದರೂ ಇರಬಹುದು ಅಂತ ಕಾಣ್ಸುತ್ತೆ.

ಏನೇ ಆಗಲಿ. ಕಳ್ಳತನದ ಸಂಗತಿ ಘಟಿಸಿದ ಮೇಲೆ ಮೊದಲ ಬಾರಿಗೆ ರವೀಂದ್ರ ತನ್ನ ಊರಾದ ಹೈದರಾಬಾದಿಗೆ ಹೋದ. ಕವಿತಾಗೆ ಅವನ ಬಗ್ಗೆ ಇದ್ದ ಆಸಕ್ತಿ ಕಡಿಮೆ ಆಯಿತು ಎಂದರೆ ತಪ್ಪಲ್ಲ. ಅವಳ ಅನುಭವದಲ್ಲಿ ಮಧ್ಯಮ ಮತ್ತು ಮೇಲ್ಮಧ್ಯಮ ವರ್ಗದ ಹುಡುಗರು ರಿಸ್ಕ್ ತಗೊಳ್ಳೋದು ಕಡಿಮೆ ಅಂತ ಖಾತ್ರಿ ಇತ್ತು.
‘ಯಾಕೆ? ಅವರು ಲವ್ ಮ್ಯಾರೇಜ್ ಮಾಡ್ಕೊಳಲ್ವಾ?’ ವಿಜಿ ಕೇಳಿದಳು.

‘ಹಂಗೆಲ್ಲ ಹುಡುಗರು ಹಂಗೆ, ಹುಡುಗೀರು ಹಿಂಗೆ ಅಂತ ಬಹಳ ತೇಲಿಸಿ ಮಾತಾಡೋಕೆ ಆಗಲ್ಲ. ಆದರೆ ಮೊನ್ನೆ ಪೊಲೀಸ್ ಸ್ಟೇಷನ್ನಿನಲ್ಲಿ ರವಿ ಎಷ್ಟು ಹೆದರಿದ್ದ ಅಂದರೆ, ಅವನಿಗೆ ಸ್ವತಂತ್ರವಾಗಿ ಲೈಫ್‌ ಫೇಸ್ ಮಾಡಕ್ಕೆ ಧೈರ್ಯ ಸಾಲದು ಅನ್ಸುತ್ತೆ... ಅದಕ್ಕೆ ಅವರ ಅಪ್ಪನ್ನ, ಅಮ್ಮನ್ನ ನೋಡ್ಕೊಂಡು ಬರಕ್ಕೆ ಹೋಗಿದಾನೆ...’
‘ಸೋ?’
‘ಸೋ ಏನಿಲ್ಲ... ನನ್ನ ಅಂದಾಜಿನ ಪ್ರಕಾರ ಅವರ ಅಪ್ಪ ಅಮ್ಮ ಈಗ ಅವನಿಗೆ ಜೀವನದ ಕಷ್ಟಗಳ ಬಗ್ಗೆ ಬಹಳ ಸಹನೆಯಿಂದ ಮಾತಾಡಿರ್ತಾರೆ. ತಾವೇ ಬೆಳೆಸಿರೋ ಮಗುವಿನ ದೌರ್ಬಲ್ಯ ಎಲ್ಲ ಅಪ್ಪ ಅಮ್ಮನಿಗೂ ಗೊತ್ತಿರುತ್ತೆ. ಆದರೆ ತಮ್ಮ ಮಕ್ಕಳ ಧೈರ್ಯ ಎಷ್ಟು ದೊಡ್ಡದು ಅಂತ ಬಹುತೇಕ ಅಪ್ಪ ಅಮ್ಮನಿಗೆ ತಿಳಿದೇ ಇರಲ್ಲ. ಹಾಗಾಗಿ ಮಕ್ಕಳು ತಾವು ಹಾಕಿದ ಬೇಲಿಯನ್ನು ಎಲ್ಲಿ ದಾಟಿ ಬಿಡ್ತಾರೋ ಎನ್ನುವ ಹೆದರಿಕೆಯಿಂದಲೇ ತಂದೆತಾಯಿ ಜೀವನ ಮಾಡ್ತಾರೆ. ಒಂದೊಮ್ಮೆ ಮಕ್ಕಳೇನಾದರೂ ಎಡವಿ ಸುಧಾರಿಸಿಕೊಳ್ಳಕ್ಕೆ ಆಗದೇ ಹೋದರೆ ಅಪ್ಪ ಅಮ್ಮನಷ್ಟು ಸಂತೋಷ ಪಡೋರು ಯಾರೂ ಇರಲ್ಲ. ಅಬ್ಬ! ಮಗ/ಮಗಳು ದಕ್ಕಿದರು ಎನ್ನುವ ಖುಷಿ ಎಲ್ಲಾ ಸಂತೋಷಗಳನ್ನೂ ಮೀರಿದ್ದು. ಈಗ ರವಿ ಅಪ್ಪ ಅಮ್ಮನೂ ಅದನ್ನೇ ಅನುಭವಿಸುತ್ತಿರಬಹುದು’ ಎಂದು ಕವಿತಾ ದೀರ್ಘ ವಿಶ್ಲೇಷಣೆಯನ್ನು ವಿಜಿಯ ಮುಂದಿಟ್ಟಾಗ ವಿಜಿಗೆ ಸೋಜಿಗವಾಯಿತು.

ತನ್ನ ಖಾಸಗೀ ಬದುಕನ್ನು, ತನ್ನ ಪ್ರಿಯಕರನ ವ್ಯಕ್ತಿತ್ವವನ್ನು ಹೀಗೆ ಇನ್ನೊಬ್ಬಳ ಮುಂದೆ ತೆರೆದ ಪುಸ್ತಕದ ಹಾಗೆ ಬಿಚ್ಚಿಡುತ್ತಿದ್ದಾಳಲ್ಲ ಅಂತ ಅನ್ನಿಸಿ ಏನು ಪ್ರತಿಕ್ರಿಯೆ ನೀಡಬೇಕು ಅಂತ ತಿಳಿಯದೆ ಸುಮ್ಮನಾದಳು. ಕವಿತಾಗೂ ವಿಜಿಯ ಹತ್ತಿರ ಮಾತಾಡಬೇಕು ಅನ್ನುವ ಅನಿವಾರ್ಯವೇನೂ ಇರಲಿಲ್ಲ. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ತನ್ನ ಜೊತೆಗೆ ಕೂತು ಮಾತನಾಡಲು ಯಾರಾದರೂ ಬೇಕಲ್ಲ ಎನ್ನುವ ಕಾರಣಕ್ಕೆ ವಿಜಿಯ ಹತ್ತಿರ ಆಲೋಚನೆಯ ಹೊಸ ಹೊಸ ಆಯಾಮಗಳನ್ನು ಹರವಿಕೊಂಡು ಕುಳಿತಿದ್ದಳು.

ವಿಜಿ ಮತ್ತು ಕವಿತಾ ಊರಿಗೆ ಹೋಗುವ ಪ್ಲಾನ್ ಹಾಕುವ ಹೊತ್ತಿಗೆ ಚಿತ್ರಾ ಪೀಜಿ ಖಾಲಿ ಮಾಡಿಕೊಂಡು ಊರಿಗೆ ವಾಪಸ್ ಹೋದಳು. ಇದ್ದಕ್ಕಿದ್ದ ಹಾಗೆ ಒಂದು ವೀಕೆಂಡ್ ‘ಓಕೆ ಗರ್ಲ್ಸ್! ನಾನು ಹೊರಟೆ. ಅಪ್ಪ ಅಮ್ಮನ ಕಾಟ ತಡಿಯೋಕಾಗ್ತಿಲ್ಲ. ಅವರಿರೋ ಊರಲ್ಲೇ ಕೆಲಸ ಸಿಕ್ತು... ಅಲ್ಲಿಗೆ ಹೋಗಿ ಅದೇನು ಹಣೆ ಬರಹವೋ ಅನುಭವಿಸುತ್ತೀನಿ’ ಅಂತ ಹೇಳಿ ಅಳುತ್ತಾ ಹೊರಟೇ ಬಿಟ್ಟಳು.

ಸೂಸನ್ ಕವಿತಾ ಮತ್ತು ವಿಜಿಯ ಜೊತೆ ಬರುವ ಆಸೆ ವ್ಯಕ್ತಪಡಿಸಿದರೂ ಯಾಕೋ ಪ್ಲಾನು ಕೈಗೂಡಲಿಲ್ಲ. ಹಾಗಾಗಿ ಕವಿತಾ ವಿಜಿ ಇಬ್ಬರೇ ಹೊರಟರು.
‘ಎಲ್ಲಿಗೆ ಹೋಗ್ತಾ ಇದೀವಿ?’ ವಿಜಿಯ ಪ್ರಶ್ನೆ.

ಹಂಪಿ ಎಕ್ಸ್‌ಪ್ರೆಸ್ ಅನ್ನೋ ರೈಲಿನಲ್ಲಿ ಇಬ್ಬರೂ ಬ್ಯಾಗು ಹಾಕಿ, ರಾತ್ರಿಯೆಲ್ಲಾ ಬಾಗಿಲ ಹತ್ತಿರ ನಿಂತು ಮಾತನಾಡುತ್ತಾ ಸಮಯ ಕಳೆದರು. ಕವಿತಾ ಎನ್ನುವ ಅತ್ಯಂತ ಆಧುನಿಕ ಆತ್ಮವಿಶ್ವಾಸದ ಹುಡುಗಿಯನ್ನು ಈ ಪರಿ ಹತ್ತಿರದಿಂದ ನೋಡಿದ ವಿಜಿಯ ಮನಸ್ಸು ಹೊಸತಾಗಿ ಹುರಿಗಟ್ಟಿದ ಮಿರಿ ಮಿರಿ ಮಿಂಚುವ ಕುದುರೆಯಂತೆ ಕೆನೆಯುತ್ತಿತ್ತು.

ಇಬ್ಬರ ಹತ್ತಿರವೂ ದುಡ್ಡು ಕಡಿಮೆ ಇತ್ತು. ಒಂದು ರಾತ್ರಿಗೆ ಎಂಬತ್ತು ರೂಪಾಯಿಯಂತೆ ರೂಮುಗಳು ಬಾಡಿಗೆಗೆ ಸಿಗುವ ದೊಡ್ಡಿಯಂತಹ ಒಂದು ಜಾಗ ಕವಿತಾಗೆ ಆಗಲೇ ಗೊತ್ತಿತ್ತು. ಅಲ್ಲಿಗೆ ಹೋಗಿ ಇಬ್ಬರೂ ಬ್ಯಾಗ್ ಇಟ್ಟರು. ಸಾಧಾರಣ ಮಟ್ಟಿಗೆ ಕ್ಲೀನ್ ಆಗಿದ್ದ, ಅರ್ಧ ಬಾಗಿಲು ಮಾತ್ರವೇ ಇದ್ದ ಸ್ನಾನದ ಮನೆಗೆ ಕ್ಯೂ ಇರುತ್ತಿತ್ತು. ಪುಣ್ಯಕ್ಕೆ ಟಾಯ್ಲೆಟ್ಟಿಗೆ ಪೂರ್ತಿ ಬಾಗಿಲು ಇದ್ದುದರಿಂದ ಎಲ್ಲರ ಮಾನವೂ ಉಳಿಯುವಂತಿತ್ತು.

ಅಲ್ಲೊಬ್ಬ ಕಾಶ್ಮೀರಿ ಹುಡುಗ. ಹಂಪಿ ಬಜಾರದ ಹತ್ತಿರ ಅವ್ಯಾವೋ ಬಣ್ಣಬಣ್ಣದ ಹರಳು, ಬೆಳ್ಳಿ ಒಡವೆ, ಶಾಲು, ಊದಿನಕಡ್ಡಿ ಮಾರುತ್ತಿದ್ದ ಅಂಗಡಿ ಇಟ್ಟಿದ್ದ. ಕಾಶ್ಮೀರಿ ಮುಸ್ಲಿಮನಂತೆ. ಅಲ್ಲಿ ಗಲಾಟೆ ಆದಾಗ ಅವನ ಕುಟುಂಬದ ಎಲ್ಲರೂ ಓಡಿ ಬಂದು ಎಲ್ಲೆಲ್ಲೋ ಅಂಗಡಿ ಇಟ್ಟುಕೊಂಡಿದಾರಂತೆ. ಹಂಪಿಯಲ್ಲಿ ಪ್ರವಾಸಿಗರು ಜಾಸ್ತಿ ಅಂತ ಗೊತ್ತಾಗಿದ್ದಕ್ಕಿಂತ ಹೆಚ್ಚಾಗಿ ಅಲ್ಲಿ ಕಾಶ್ಮೀರಿ ಅಂಗಡಿಗಳು ಇಲ್ಲ ಅಂತ ಗೊತ್ತಾಗಿ ಇಲ್ಲಿ ಬಂದು ಅಂಗಡಿ ಇಟ್ಟಿದ್ದಾನಂತೆ. ‘ದೀದಿ... ಇಬ್ರೇ ಬಂದಿದೀರಾ? ಹುಶಾರು’ ಅಂದ.

‘ಲೈ... ನೀನೇ ಜನ ಊರು ಗೊತ್ತಿಲ್ಲದ ಕಡೆ ಬಂದಿದ್ದೀಯ. ನೀನೂ ಹುಶಾರು...’ ಅಂದಳು ಕವಿತಾ. ಅವಳ ಕಣ್ಣನ್ನು ನೋಡಿದವನೇ ಏನನ್ನೋ ಗುರುತು ಹಿಡಿದವನಂತೆ ಹೇಳಿದ. ‘ದೀದಿ... ಹೋನಾ ಕ್ಯಾ? (ತಂದು ಕೊಡ್ಲಾ?)’
ಕವಿತಾ ಕಣ್ಣುಗಳು ಅರಳಿದವು. ‘ಪಕ್ಕಾ ಚೀಜ್ (ವಸ್ತು) ನಾ? ತುಟ್ಟಿ ಆದರೂ ಪರವಾಗಿಲ್ಲ.’ 
ಹಂಡ್ರಡ್ ಪರ್ಸೆಂಟ್! ಅಂದವನೇ ಅಂಗಡಿಯ ಕಡೆಗೆ ಓಡಿದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT