ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಹರೂ–ಗಾಂಧಿ: ಪ್ರಾಯಶ್ಚಿತ್ತ ಒಂದೇ ಮಾರ್ಗ

Last Updated 7 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ
ಬೊಫೋರ್ಸ್‌ ಹಗರಣದಲ್ಲಿ ಭ್ರಷ್ಟಾಚಾರ ನಡೆದಿರುವ ಬಗ್ಗೆ, ಕಮಿಷನ್ ಪಾವತಿಯಾಗಿರುವ ಬಗ್ಗೆ ಸಾಕಷ್ಟು ನಿಖರ ಸಾಕ್ಷ್ಯಗಳು ಇದ್ದರೂ ಅಂದಿನ ಪ್ರಧಾನಿ ರಾಜೀವ್ ಗಾಂಧಿ ಅವರ ವರ್ಚಸ್ಸು ಕಾಪಾಡುವ ಉದ್ದೇಶದಿಂದ ಸ್ವೀಡನ್ ಸರ್ಕಾರ ತನಿಖೆ ಕೈಬಿಟ್ಟಿತು ಎಂದು ಅಮೆರಿಕದ ಕೇಂದ್ರೀಯ ತನಿಖಾ ಸಂಸ್ಥೆಯ (ಸಿಐಎ) ಪಶ್ಚಿಮ ಯುರೋಪ್‌ ವಿಭಾಗವು 1980ರ ದಶಕದ ಕೊನೆಯಲ್ಲಿ ರಹಸ್ಯ ಪರಿಶೀಲನೆ ನಡೆಸಿ ಹೇಳಿತ್ತು.
 
‘ಸ್ವೀಡನ್‌ನಲ್ಲಿ ಆದ ಮಾಹಿತಿ ಸೋರಿಕೆಯಿಂದ ರಾಜೀವ್ ಗಾಂಧಿ ತೊಂದರೆ ಎದುರಿಸಿದರು. ಅದರಿಂದ ರಾಜೀವ್ ಅವರನ್ನು ಪಾರು ಮಾಡುವ ಉದ್ದೇಶ ಸ್ವೀಡನ್‌ ಸರ್ಕಾರದ್ದಾಗಿತ್ತು’ ಎಂದು ಈಚೆಗೆ ಬಹಿರಂಗವಾಗಿರುವ ಸಿಐಎ ದಾಖಲೆಗಳನ್ನು ಪರಿಶೀಲಿಸಿರುವ ‘ಎಕನಾಮಿಕ್ ಟೈಮ್ಸ್‌’ನ ಮನು ಪಬ್ಬಿ ಹೇಳುತ್ತಾರೆ. ಲಂಚ ಪ್ರಕರಣದಲ್ಲಿ ದೋಷಾರೋಪ ಎದುರಿಸುವ ತೊಂದರೆಯಿಂದ ಅವರನ್ನು ರಕ್ಷಿಸುವ ಉದ್ದೇಶವೂ ಇತ್ತು ಎಂದು ಮನು ಹೇಳುತ್ತಾರೆ. ಹಾಗಾಗಿ, ಈ ಉದ್ದೇಶಗಳನ್ನು ಈಡೇರಿಸಿಕೊಳ್ಳಲು, ಹಣ ಪಾವತಿಯ ವಿವರಗಳನ್ನು ರಹಸ್ಯವಾಗಿಡುವ ಕಾರ್ಯತಂತ್ರವನ್ನು ಎರಡೂ ಸರ್ಕಾರಗಳು ರೂಪಿಸಿದವು. ಭಾರತದಲ್ಲಿ ವ್ಯವಹಾರ ಕುದುರಿಸಿಕೊಳ್ಳಲು ಸ್ವೀಡನ್ ಹಣ ಪಾವತಿಸಿದ್ದು ‘ಬಹುತೇಕ ಖಚಿತ’ ಎಂದು ದಾಖಲೆಗಳು ಹೇಳುತ್ತವೆ. ಮಧ್ಯವರ್ತಿಗಳಿಗೆ ಕಮಿಷನ್ ರೂಪದಲ್ಲಿ ಅಂದಾಜು 4 ಕೋಟಿ ಅಮೆರಿಕನ್ ಡಾಲರ್ ಹಣ ಪಾವತಿಸಲಾಗಿತ್ತು ಎಂಬ ತೀರ್ಮಾನಕ್ಕೆ ಸ್ವೀಡನ್ನಿನ ರಾಷ್ಟ್ರೀಯ ಲೆಕ್ಕಪತ್ರ ಸಂಸ್ಥೆ ಬಂದಿತ್ತು ಎಂದು ದಾಖಲೆಗಳು ಹೇಳುತ್ತವೆ. ಆದರೆ, ರಾಜೀವ್ ಗಾಂಧಿ ಅವರನ್ನು ರಕ್ಷಿಸಲು, ಸ್ವೀಡನ್ ಸರ್ಕಾರವು ಹಗರಣ ಬಹಿರಂಗವಾದ ಎರಡು ವರ್ಷಗಳ ನಂತರ ತನಿಖೆಯನ್ನೇ ಬರ್ಖಾಸ್ತು ಮಾಡಿತು. ಭಾರತದಲ್ಲಿ ವ್ಯವಹಾರ ಕುದುರಿಸಲು ಬೊಫೋರ್ಸ್‌ ಕಮಿಷನ್ ಪಾವತಿಸಿತ್ತು ಎಂಬುದನ್ನು ಸಿಐಎ ದಾಖಲೆಗಳು ಪುಷ್ಟೀಕರಿಸುತ್ತವೆ.
 
ಬೊಫೋರ್ಸ್‌ ಕಥೆಯ ಆರಂಭ ಇರುವುದು ಭಾರತೀಯ ಸೇನೆಗೆ ಫಿರಂಗಿಗಳನ್ನು ಖರೀದಿಸುವ ಪ್ರಕ್ರಿಯೆ 1980ರ ದಶಕದ ಶುರುವಿನಲ್ಲಿ ಚಾಲನೆ ಪಡೆದುಕೊಂಡ ಸಂದರ್ಭದಲ್ಲಿ. ಆಗ ಫ್ರಾನ್ಸ್‌ನ ಸೊಫ್ಮಾ ಕಂಪೆನಿಯ ಹೆಸರು ಮುಂಚೂಣಿಯಲ್ಲಿತ್ತು. ಆದರೆ ಕೊನೆಯ ಹಂತದಲ್ಲಿ ಬೊಫೋರ್ಸ್‌ ಕಂಪೆನಿ ವ್ಯವಹಾರ ಕುದುರಿಸಿಕೊಂಡಿತು. ಬೊಫೋರ್ಸ್‌ ಕಂಪೆನಿ ಕಮಿಷನ್ ಪಾವತಿಸಿತ್ತು ಎಂಬುದನ್ನು ಜಿನಿವಾದಲ್ಲಿದ್ದ ಪತ್ರಕರ್ತೆ ಚಿತ್ರಾ ಸುಬ್ರಮಣಿಯಂ ಕೈಗೊಂಡ ಅದ್ಭುತವಾದ ತನಿಖೆ, ನಂತರ ಸ್ವೀಡನ್ ಮತ್ತು ಸ್ವಿಟ್ಜರ್ಲೆಂಡ್‌ನಲ್ಲಿ ಸಿಬಿಐ ನಡೆಸಿದ ತನಿಖೆಗಳು ಸ್ಪಷ್ಟವಾಗಿ ಹೇಳಿದ್ದವು. ಈ ವ್ಯವಹಾರದಲ್ಲಿ ಒಟ್ಟಾವಿಯೊ ಕ್ವಟ್ರೋಚಿ ಕೂಡ ಲಾಭ ಪಡೆದಿದ್ದಾರೆ ಎಂಬುದನ್ನು ಸಾಬೀತು ಮಾಡುವ ಬ್ಯಾಂಕ್‌ ದಾಖಲೆಗಳನ್ನು ಸಿಬಿಐ ಪಡೆದಿತ್ತು.
 
ಕಮಿಷನ್ ಮತ್ತು ಲಂಚದ ಆರೋಪಗಳನ್ನು ನೆಹರೂ–ಗಾಂಧಿಗಳ ಮನೆ ಬಾಗಿಲಿನವರೆಗೆ ಕೊಂಡೊಯ್ಯುವ ಕಟು ಸಾಕ್ಷ್ಯಗಳು ಪತ್ರಕರ್ತರು ಮತ್ತು ಸಿಬಿಐ ನಡೆಸಿದ ತನಿಖೆಗಳಿಂದ ಸಿಕ್ಕಿದ್ದವು. ಉದಾಹರಣೆಗೆ: ಎ.ಇ ಸರ್ವಿಸಸ್‌ ಎಂಬ ಕಂಪೆನಿಯ ಜೊತೆ 1985ರ ಉತ್ತರಾರ್ಧದಲ್ಲಿ ಒಪ್ಪಂದ ಮಾಡಿಕೊಂಡ ಬೊಫೋರ್ಸ್‌, ಭಾರತದ ಜೊತೆಗಿನ ಒಪ್ಪಂದ ಪ್ರಕ್ರಿಯೆ 1986ರ ಮಾರ್ಚ್‌ 31ರೊಳಗೆ ಪೂರ್ಣಗೊಂಡರೆ ಶೇಕಡ 3ರಷ್ಟು ಕಮಿಷನ್ ನೀಡುವುದಾಗಿ ಹೇಳಿತ್ತು ಎಂಬುದನ್ನು ತನಿಖಾಧಿಕಾರಿಗಳು ಪತ್ತೆ ಮಾಡಿದರು. ಇದು ಕಾಲ ಮಿತಿಯ ಒಪ್ಪಂದವಾಗಿತ್ತು. ಎ.ಇ. ಸರ್ವಿಸಸ್ ಕಂಪೆನಿ ನಿಗದಿತ ಅವಧಿಯೊಳಗೆ ಒಪ್ಪಂದ ಕುದುರಿಸಿಕೊಡಬೇಕಿತ್ತು. ಆಶ್ಚರ್ಯದ ಸಂಗತಿಯೆಂದರೆ, ರಾಜೀವ್ ಗಾಂಧಿ ನೇತೃತ್ವದ ಸರ್ಕಾರ 1986ರ ಮಾರ್ಚ್‌ 24ರಂದು ಬೊಫೋರ್ಸ್‌ ಜೊತೆ ಒಪ್ಪಂದ ಮಾಡಿಕೊಂಡಿತು. ಅಂದರೆ, ನಿಗದಿಯಾಗಿದ್ದ ಗಡುವಿಗಿಂತ ಒಂದು ವಾರ ಮೊದಲು!
 
ಎರಡು ತಿಂಗಳ ನಂತರ ಭಾರತವು ಬೊಫೋರ್ಸ್‌ ಕಂಪೆನಿಗೆ ಒಪ್ಪಂದದ ಒಟ್ಟು ಮೊತ್ತದ ಶೇಕಡ 20ರಷ್ಟನ್ನು ಪಾವತಿಸಿತು. ಮೊದಲಿನ ಒಪ್ಪಂದದಂತೆ ಬೊಫೋರ್ಸ್‌ ಕಂಪೆನಿಯು ಶೇಕಡ 3ರಷ್ಟನ್ನು – ಅಂದರೆ 73 ಲಕ್ಷ ಅಮೆರಿಕನ್ ಡಾಲರ್ ಹಣವನ್ನು – ಎ.ಇ. ಸರ್ವಿಸಸ್ ಕಂಪೆನಿಯ ಜ್ಯುರಿಚ್‌್‌ನ ನಾರ್ಡ್‌ಫಿನಾಂಜ್ ಬ್ಯಾಂಕ್‌ ಖಾತೆಗೆ ವರ್ಗಾಯಿಸಿತು. ಈ ಹಣವನ್ನು ಎ.ಇ. ಸರ್ವಿಸಸ್ ಕಂಪೆನಿ ಕೊಲ್ಬಾರ್‌ ಇನ್ವೆಸ್ಟ್‌ಮೆಂಟ್ಸ್‌ ಎಂಬ ಕಂಪೆನಿಯ ಖಾತೆಗೆ ವರ್ಗಾಯಿಸಿತು ಎಂಬುದನ್ನು ಸಿಬಿಐ ಪತ್ತೆ ಮಾಡಿತು. ಕೊಲ್ಬಾರ್ ಕಂಪೆನಿ ಮಾಲೀಕತ್ವ ಯಾರದ್ದಾಗಿತ್ತು ಗೊತ್ತಾ? ಅದು ಸೋನಿಯಾ ಮತ್ತು ರಾಜೀವ್ ಗಾಂಧಿ ಅವರ ಪ್ರಿಯ ಸ್ನೇಹಿತರಾದ ಮಾರಿಯಾ ಹಾಗೂ ಒಟ್ಟಾವಿಯೊ ಕ್ವಟ್ರೋಚಿಗೆ ಸೇರಿದ್ದಾಗಿತ್ತು!
 
ಕಮಿಷನ್ ಪಾವತಿ ಬಗ್ಗೆ ತನಿಖೆ ನಡೆಸಿದ ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿಯ ದೆಹಲಿ ಪೀಠ ಕೂಡ ಹಣದ ಈ ಜಾಡನ್ನು ಖಚಿತಪಡಿಸಿತು.
 
ವ್ಯವಹಾರ ಕುದುರಿಸಲು ಬೊಫೋರ್ಸ್‌ ಕಂಪೆನಿಯು ಭಾರತದಲ್ಲಿ ಕೆಲವರಿಗೆ ಲಂಚ ಕೊಟ್ಟಿರುವುದಕ್ಕೆ ತನ್ನಲ್ಲಿ ದಾಖಲೆಗಳಿವೆ ಎಂದು ಸ್ವೀಡಿಷ್ ರೇಡಿಯೊ 1987ರ ಏಪ್ರಿಲ್‌ನಲ್ಲಿ ಘೋಷಿಸಿದಾಗ ಈ ಹಗರಣ ಬಯಲಿಗೆ ಬಂತು. ರಾಜೀವ್ ಗಾಂಧಿ ಅವರ ಪ್ರತಿಷ್ಠೆ ಇದ್ದಕ್ಕಿದ್ದಂತೆ ಕುಸಿದು, ಅವರು ಹಗರಣದ ಸುಳಿಯಿಂದ ಹೊರಬರಲು ಯತ್ನಿಸುತ್ತಿದ್ದಾಗ ಇನ್ನೊಂದು ಆಶ್ಚರ್ಯಕರ ಬೆಳವಣಿಗೆ ನಡೆಯಿತು. ಬೊಫೋರ್ಸ್‌ ಕಂಪೆನಿಗೆ ಪತ್ರ ಬರೆದ ಎ.ಇ. ಸರ್ವಿಸಸ್‌ ಅಧಿಕಾರಿಗಳು ಭಾರತದ ಜೊತೆಗಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ತಮಗೆ ಇನ್ನೂ ಹೆಚ್ಚಿನ ಕಮಿಷನ್ ಬೇಕಾಗಿಲ್ಲ ಎಂದು ಹೇಳಿದರು.
 
1987ರಿಂದಲೂ ಭಾರತೀಯರಲ್ಲಿ ಒಂದು ಪ್ರಶ್ನೆ ಉಳಿದುಕೊಂಡಿದೆ: ‘ಇಟಲಿಯ ಕ್ವಟ್ರೋಚಿ ಗಡುವಿಗೆ ಮುನ್ನ ಬೊಫೋರ್ಸ್‌ ಒಪ್ಪಂದ ಕುದುರಿಸಿದ್ದು ಹೇಗೆ? ಈ ಅಸಾಮಾನ್ಯ ಸಾಹಸದಲ್ಲಿ ಯಶಸ್ಸು ಸಾಧಿಸಲು ಅವರಿಗೆ ನೆರವಾಗಿದ್ದು ಯಾರು? ಇವೆಲ್ಲಕ್ಕಿಂತಲೂ ಮುಖ್ಯವಾಗಿ, ಹಗರಣ ಬಯಲಿಗೆ ಬಂದ ನಂತರ ಕ್ವಟ್ರೋಚಿ ತನಗೆ ಬರಬೇಕಿದ್ದ ಬಾಕಿ ಮೊತ್ತ ಬಿಟ್ಟುಕೊಡಲು ಕಾರಣವೇನು?’
 
ಹಗರಣ ಬಯಲಿಗೆ ಬಂದ ನಂತರ ರಾಜೀವ್ ಗಾಂಧಿ ಅವರ ಮೇಲೆ ಮುಗಿಬಿದ್ದ ವಿರೋಧ ಪಕ್ಷಗಳು, ರಕ್ಷಣಾ ವ್ಯವಹಾರದಲ್ಲಿ ಅವರು ಲಂಚ ಪಡೆದಿದ್ದಾರೆ ಎಂದು ಆರೋಪಿಸಿದವು. ಇದು 1989ರ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಕಾರಣವಾಯಿತು ಎಂಬುದು ಎಲ್ಲರಿಗೂ ತಿಳಿದಿದೆ.
 
ಈ ಹಗರಣದ ಪಾಲುದಾರರಲ್ಲಿ ಹಲವರು ಈಗ ಇಲ್ಲ. ರಾಜೀವ್ ಗಾಂಧಿ, ಒಟ್ಟಾವಿಯೊ ಕ್ವಟ್ರೋಚಿ, ಭಾರತದ ಸರ್ಕಾರದ ಜೊತೆ ಒಪ್ಪಂದ ಆದ ಸಂದರ್ಭದಲ್ಲಿ ಬೊಫೋರ್ಸ್‌ ಅಧ್ಯಕ್ಷರಾಗಿದ್ದ ಮಾರ್ಟಿನ್ ಆರ್ಡ್ಬೊ (ಇವರ ದಿನಚರಿಯಲ್ಲಿನ ಕೆಲವು ಉಲ್ಲೇಖಗಳು ಸ್ವೀಡನ್ ಪೊಲೀಸರಿಗೆ ಮಹತ್ವದ ಸುಳಿವು ನೀಡಿದ್ದವು), ಭಾರತದ ಮಾಜಿ ರಕ್ಷಣಾ ಕಾರ್ಯದರ್ಶಿ ಎಸ್.ಕೆ. ಭಟ್ನಾಗರ್, ಕಂಪೆನಿಯ ಭಾರತದಲ್ಲಿನ ಏಜೆಂಟ್ ಆಗಿದ್ದ ವಿನ್ ಛಡ್ಡಾ ಈಗಿಲ್ಲ. ಇವರೆಲ್ಲ ಕಾಲವಾಗಿರುವ ಕಾರಣ ಬೊಫೋರ್ಸ್‌ ಹಗರಣದ ಕಥೆ ಕೂಡ ಮುಗಿಯುತ್ತದೆ ಎಂದು ಊಹಿಸಲಾಗಿತ್ತು. ಆದರೆ ಹಾಗಾಗಿಲ್ಲ.
 
ಸರ್ಕಾರದ ಬೊಕ್ಕಸಕ್ಕೆ ಆದ ನಷ್ಟ ಭರ್ತಿಯಾಗುವವರೆಗೆ ಯಾವುದೇ ಹಣಕಾಸಿನ ಅಥವಾ ಲಂಚದ ಹಗರಣ ಸಾರ್ವಜನಿಕರ ಸ್ಮೃತಿಪಟಲದಿಂದ ಮರೆಯಾಗುವುದಿಲ್ಲ. ನಷ್ಟ ಭರ್ತಿಯಾಗುವವರೆಗೆ ಹಗರಣಕ್ಕೆ ಸಾವಿಲ್ಲ. ಆ ಹಗರಣ ಜನರ ಮನಸ್ಸಿನಲ್ಲಿ ಅನುರಣಿಸುತ್ತ ಇರುತ್ತದೆ. ಬಹುಶಃ ಆ ಹಗರಣದ ಕಥೆಗೆ ಇನ್ನೊಂದಿಷ್ಟು ಸ್ವಾರಸ್ಯಕರ ಅಂಶ ಸೇರಿಸಿ, ಮುಂದಿನ ತಲೆಮಾರಿನವರಿಗೆ ತಿಳಿಸಲಾಗುತ್ತದೆ. ಎಲ್ಲ ಬಗೆಯ ಹಗರಣಗಳಲ್ಲೂ  ಇದು ಆಗುತ್ತದೆಯಾದರೂ, ರಾಷ್ಟ್ರದ ಭದ್ರತೆಗೆ ಸಂಬಂಧಿಸಿದ ಹಗರಣಗಳಲ್ಲಿ ಇದರ ತೀವ್ರತೆ ಹೆಚ್ಚಿರುತ್ತದೆ.
 
ಯೋಧರಿಗೆ ಫಿರಂಗಿ ಖರೀದಿಸುವಾಗ ಲಂಚ, ಕಮಿಷನ್ ಪಡೆಯುವುದನ್ನು ದೇಶದ್ರೋಹದ ಕೃತ್ಯ ಎಂದು ಭಾವಿಸಲಾಗುತ್ತದೆ. ಹಣದ ಜಾಡಿನ ಬಗ್ಗೆ ನಿಖರ ಸಾಕ್ಷ್ಯಗಳು ಇದ್ದರೂ, ಮಾರಿಯಾ ಕ್ವಟ್ರೋಚಿ, 2013ರಲ್ಲಿ ತಮ್ಮ ಪತಿ ತೀರಿಕೊಂಡ ನಂತರ, ‘ನನ್ನ ಗಂಡನನ್ನು 20 ವರ್ಷಗಳ ಕಾಲ ಗೋಳಾಡಿಸಲಾಯಿತು’ ಎಂದು ಹೇಳಿದರು.
 
ಲಂಚದ ಬಗ್ಗೆ ತಪ್ಪೊಪ್ಪಿಕೊಂಡು, ಸ್ವೀಡನ್ನಿನ ಶಸ್ತ್ರಾಸ್ತ್ರ ತಯಾರಿಕಾ ಕಂಪೆನಿಯಿಂದ ತಮ್ಮ ಆಪ್ತರಿಗೆ ಕಮಿಷನ್ ಪಾವತಿಯಾಗಿತ್ತು ಎಂಬುದನ್ನು ಒಪ್ಪಿಕೊಳ್ಳುವವರೆಗೆ ಬೊಫೋರ್ಸ್‌ನ ಭೂತ ನೆಹರೂ–ಗಾಂಧಿಗಳನ್ನು ಕಾಡಲಿದೆ.
 
ಆ ಕುಟುಂಬ ಪ್ರಾಮಾಣಿಕವಾಗಿ ತಪ್ಪೊಪ್ಪಿಕೊಳ್ಳುವುದು ಮಾತ್ರ ಈಗ ಉಳಿದಿರುವ ಪ್ರಾಯಶ್ಚಿತ್ತ. ಅಲ್ಲಿಯವರೆಗೆ, ಸಿಐಎ ಕಡತಗಳು ಈಗ  ಬಹಿರಂಗಪಡಿಸಿರುವಂತೆ, ಬೊಫೋರ್ಸ್‌ನ ಭೂತ ಅವರ ಬೆನ್ನು ಬಿಡುವುದಿಲ್ಲ. 1986ರಲ್ಲಿ ಕೈಗೊಂಡ ನಿರ್ಧಾರಕ್ಕೆ ರಾಜಕೀಯ ಬೆಲೆ ತೆರುವಂತೆ ಮಾಡುತ್ತಲೇ ಇರುತ್ತದೆ.
ಲೇಖಕ ಪ್ರಸಾರ ಭಾರತಿ ಮಂಡಳಿ ಅಧ್ಯಕ್ಷ 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT