ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇಪಥ್ಯಕ್ಕೆ ಸರಿದ ಸೋನಿಯಾ ನೆನಪಾಗುವುದು ಹೀಗೆ...

Last Updated 17 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ರಾಹುಲ್‌ ಗಾಂಧಿ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಆ ಪಕ್ಷದ ಅಧ್ಯಕ್ಷರಾದ ತಮ್ಮ ಕುಟುಂಬದವರ ಪೈಕಿ ರಾಹುಲ್ ಅವರು ಆರನೆಯವರು. ಮೋತಿಲಾಲ್ ನೆಹರೂ ಅವರು ಮೊದಲನೆಯವರು. ನಂತರ ಅವರ ಪುತ್ರ ಜವಾಹರಲಾಲ್‌ ಅಧ್ಯಕ್ಷರಾದರು. ಅದಾದ ನಂತರ ಕ್ರಮವಾಗಿ ಇಂದಿರಾ, ರಾಜೀವ್‌ ಮತ್ತು ಸೋನಿಯಾ ಪಕ್ಷದ ಅಧ್ಯಕ್ಷರಾದರು. ಮೋತಿಲಾಲ್‌ ನೆಹರೂ ಅವರು ಅಧ್ಯಕ್ಷರಾಗಿದ್ದು 1919ರಲ್ಲಿ. ಹಾಗಾಗಿ, ಪಕ್ಷದ ಅಧ್ಯಕ್ಷ ಗಾದಿಯನ್ನು ನೆಹರೂ–ಗಾಂಧಿ ಕುಟುಂಬ ಹಿಡಿದಿದ್ದಕ್ಕೆ ಮುಂದಿನ ವರ್ಷ ಶತಮಾನ ತುಂಬಲಿದೆ.

ಅಧ್ಯಕ್ಷ ಹುದ್ದೆಯಲ್ಲಿ ನಡುವಿನ ಅವಧಿಗಳಲ್ಲಿ ಬೇರೆಯವರೂ ಕುಳಿತಿದ್ದರು ಎಂಬುದು ನಿಜ. ಆದರೆ, ಮೋತಿಲಾಲ್‌ ಅವರ ಪುತ್ರ ಹತ್ತು ವರ್ಷಗಳ ನಂತರ ಅಧ್ಯಕ್ಷರಾದ ಮೇಲೆ, ‘ಭಾರತದ ಮೊದಲ ರಾಜಕೀಯ ಮನೆತನ’ ಎಂಬ ಪರಿಕಲ್ಪನೆ ಮೂಡಲು ಆರಂಭವಾಗಿತ್ತು.

ಮೊದಮೊದಲು ಕಾಂಗ್ರೆಸ್ ಅಧ್ಯಕ್ಷ ಪದವಿಯನ್ನು ವ್ಯಕ್ತಿಯೊಬ್ಬ ಒಂದು ವರ್ಷದ ಅವಧಿಗೆ ಮಾತ್ರ ಹೊಂದಿರುತ್ತಿದ್ದರು. ಆದರೆ, ಜವಾಹರಲಾಲ್‌ ಅವರು ಪ್ರಧಾನಿಯಾದ ನಂತರ, ಅವರು ಅಧ್ಯಕ್ಷ ಹುದ್ದೆಯನ್ನು ಹೆಚ್ಚಿನ ವರ್ಷಗಳ ಕಾಲ ಹೊಂದಿದ್ದರು ಎಂಬುದು ನನ್ನ ಅನಿಸಿಕೆ.

ಇಂದಿರಾ ಅವರು ಪಕ್ಷದ ಅಧ್ಯಕ್ಷರಾದ ನಂತರ, ಒಬ್ಬನೇ ವ್ಯಕ್ತಿ ಪಕ್ಷದ ಅಧ್ಯಕ್ಷರಾಗಿ ಹೆಚ್ಚು–ಕಮ್ಮಿ ಶಾಶ್ವತವಾಗಿ ಮುಂದುವರಿಯುವ ಪರಂಪರೆ ಆರಂಭವಾಯಿತು. ಸೋನಿಯಾ ಅವರು ಸರಿಸುಮಾರು 20 ವರ್ಷ ಅಧ್ಯಕ್ಷರಾಗಿ ಮುಂದುವರಿದಿದ್ದು ಆ ಪಕ್ಷದ ಇತಿಹಾಸದಲ್ಲಿ ಅತ್ಯಂತ ದೀರ್ಘ ಅವಧಿ. ಭಾರತೀಯರು ಆ ಪಕ್ಷವನ್ನು ಕಾಣುವ ಬಗೆ ಬದಲಾದ ಕಾಲವಾಗಿಯೂ ಅವರ ಅಧ್ಯಕ್ಷ ಅವಧಿ ನೆನಪಿನಲ್ಲಿ ಉಳಿಯುತ್ತದೆ.

ತನ್ನ ಇತಿಹಾಸದ ಬಹುಪಾಲು ಅವಧಿಯಲ್ಲಿ ಕಾಂಗ್ರೆಸ್ ‘ಹಿಂದೂಗಳ ಪಕ್ಷ’ವಾಗಿ ಕಂಡಿತ್ತು ಎಂದು ಹೇಳಿದರೆ ಯುವ ಓದುಗರಲ್ಲಿ ಹಲವರಿಗೆ ಆಶ್ಚರ್ಯವಾಗಬಹುದು. ಅತ್ಯಂತ ಸಂಪ್ರದಾಯವಾದಿ ನಿಲುವು ಹೊಂದಿದ್ದವರು ಕಾಂಗ್ರೆಸ್‌ ನಾಯಕರಾಗಿದ್ದರು. ಇಂತಹ ನಾಯಕರನ್ನು ಈಗ ಬಿಜೆಪಿಯ ಜೊತೆ ಗುರುತಿಸಲಾಗುತ್ತಿದೆ.

ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಸಂಸ್ಥಾಪಕ ಪಂಡಿತ್ ಮದನ ಮೋಹನ ಮಾಳವೀಯ ಅಂಥವರಲ್ಲಿ ಒಬ್ಬರು. ಕಾಂಗ್ರೆಸ್‌ ನೇತೃತ್ವದಲ್ಲಿ ಭಾರತದ ಅಲ್ಪಸಂಖ್ಯಾತರಿಗೆ ನ್ಯಾಯ ಸಿಗುವುದಿಲ್ಲ ಎಂದು ಜಿನ್ನಾ ನೇತೃತ್ವದ ಮುಸ್ಲಿಂ ಲೀಗ್‌ಗೆ ಅನಿಸಿತು. ಈ ಭಾವನೆಯೇ ಭಾರತದ ವಿಭಜನೆಗೆ ಕಾರಣವಾಯಿತು.

ಪಕ್ಷ ಹೊಂದಿದ್ದ ಇಂಥದ್ದೊಂದು ಚಿತ್ರಣವನ್ನು ಬದಲಾಯಿಸಿದ್ದು ಸೋನಿಯಾ ಗಾಂಧಿ ಅವರ ಹೆಗ್ಗಳಿಕೆ. ಈ ಬದಲಾವಣೆಯು ಕೆಲವರು ಕಾಂಗ್ರೆಸ್ಸನ್ನು ‘ಹಿಂದೂ ವಿರೋಧಿ’ ಎಂಬಂತೆ ಕಾಣುವ ಹಂತದವರೆಗೂ ಹೋಯಿತು. ಆದರೆ ಆ ಪಕ್ಷ ಅಂಥದ್ದಲ್ಲ. ಸೋನಿಯಾ ಅಧ್ಯಕ್ಷತೆಯ 20 ವರ್ಷಗಳು ಭಾರತದ ಇತಿಹಾಸದ ಅತ್ಯಂತ ಕುತೂಹಲಕರ ಘಟ್ಟವೊಂದನ್ನು ಕೂಡ ಕಂಡವು. ರಾಜೀವ್ ಹತ್ಯೆಯ ನಂತರ ಪಿ.ವಿ. ನರಸಿಂಹ ರಾವ್ ಅವರು ಪಕ್ಷದ ನೇತೃತ್ವ ವಹಿಸಿಕೊಂಡರು.

ಒಗಟಿನಂತಹ ವ್ಯಕ್ತಿತ್ವದವರೂ, ಚತುರ ರಾಜಕಾರಣಿಯೂ ಆಗಿದ್ದ ರಾವ್ ಅವರು ಸೋನಿಯಾ ಗಾಂಧಿ ಅವರ ನೆರಳಿನಲ್ಲೇ ಆಡಳಿತ ನಡೆಸಬೇಕಾಗಿತ್ತು. ಆ ದಿನಗಳಲ್ಲಿ ಸೋನಿಯಾ ಅವರು ಸಾರ್ವಜನಿಕ ಜೀವನಕ್ಕೆ ಕಾಲಿಟ್ಟಿರಲಿಲ್ಲ. ಅವರು ಕಾಣಿಸಿಕೊಳ್ಳುವುದು, ಮಾತನಾಡುವುದು ಎಷ್ಟು ಅಪರೂಪವಾಗಿತ್ತೆಂದರೆ, ಅವರ ಪ್ರತಿ ನಡೆಯ ಬಗ್ಗೆಯೂ ಪತ್ರಿಕೆಗಳು ವ್ಯಾಖ್ಯಾನ ನೀಡುತ್ತಿದ್ದವು. ಸರಿಯೋ, ತಪ್ಪೋ, ಸೋನಿಯಾ ಅವರು ಯಾವುದೇ ಹುದ್ದೆ ಹೊಂದಿಲ್ಲದಿದ್ದರೂ, ಅವರು ಸರ್ಕಾರದ ಜೊತೆ ನೈಜ ಸಂಪರ್ಕ ಹೊಂದಿಲ್ಲದಿದ್ದರೂ ದೇಶದಲ್ಲಿನ ಅಧಿಕಾರದ ಕೇಂದ್ರ ಅವರೇ ಎಂದು ಜನ ನಂಬಿದ್ದರು.

ವಂಶಪಾರಂಪರ್ಯದ ರಾಜಕಾರಣದಿಂದ ಹೊರತಾದ ಪಕ್ಷವಾಗುವ ಅವಕಾಶ ಕಾಂಗ್ರೆಸ್ಸಿಗೆ ಇದ್ದಿದ್ದರೆ, ಪಕ್ಷದ ಹಿರಿಯ ನಾಯಕರು ಆ ಸಂದರ್ಭದಲ್ಲಿ ಆ ಕೆಲಸ ಮಾಡಬಹುದಿತ್ತು. ಆದರೆ, ಬಾಬರಿ ಚಳವಳಿಯು ತಂದ ಕ್ಷೋಭೆ, ಅದು ನಮ್ಮ ಸಮಾಜದಲ್ಲಿ ಹಾಗೂ ರಾಜಕಾರಣದಲ್ಲಿ ತಂದ ಹಿಂಸೆಯು ಕಾಂಗ್ರೆಸ್ ಪಕ್ಷದಲ್ಲಿ ಅಸುರಕ್ಷತೆಯ ಭಾವನೆ ಮೂಡಿಸಿತು. ಆಗ ಪಕ್ಷ, ಕುಟುಂಬದ ಕಡೆ ಮುಖ ಮಾಡಿತು. ಪಕ್ಷದ ನಾಯಕತ್ವ ವಹಿಸಿಕೊಳ್ಳಲು ಸೋನಿಯಾ ಮುಂದಾದಾಗ, ಅಧ್ಯಕ್ಷರಾಗಿದ್ದ ಸೀತಾರಾಮ್ ಕೇಸರಿ ಅವರನ್ನು ಪಕ್ಕಕ್ಕೆ ಸರಿಸಿ ಆ ಹುದ್ದೆಯನ್ನು ಸುಲಭವಾಗಿ ಪಡೆದುಕೊಂಡರು.

ಸೋನಿಯಾ ಅವರು ಯಾವಾಗಲೂ ಸೀರೆ ಉಡುತ್ತಿದ್ದರು. ಆದರೆ ಅಧ್ಯಕ್ಷರಾದ ನಂತರ ಅದನ್ನು ಸಮವಸ್ತ್ರದಂತೆ ಉಡಲು ಆರಂಭಿಸಿದರು. ಅವರು ಸೀರೆಯನ್ನು ಒಪ್ಪವಾಗಿ ಉಡುತ್ತಾರೆ ಎಂಬುದನ್ನು ಸೂಕ್ಷ್ಮಮತಿ ಭಾರತೀಯರು ಗಮನಿಸಿರುತ್ತಾರೆ. ಭಾರತದ ರಾಜಕಾರಣದಲ್ಲಿ ಇದು ತೀರಾ ಸಹಜವೇನೂ ಅಲ್ಲ. ಸೋನಿಯಾ ಅವರು ಹಿಂದಿಯಲ್ಲೇ ಮಾತನಾಡಲು ಆರಂಭಿಸಿದರು. ಇಂಗ್ಲಿಷ್ ಅಕ್ಷರಗಳಲ್ಲಿ ಬರೆದಿರುತ್ತಿದ್ದ ಸೋನಿಯಾ ಅವರ ಹಿಂದಿ ಭಾಷಣ ಹಾಸ್ಯಕ್ಕೆ ಗುರಿಯಾಯಿತು (ಇಂಗ್ಲಿಷ್‌ ಅಕ್ಷರಗಳಲ್ಲಿ ಬರೆದ ಭಾಷಣವನ್ನು ದಿನಪತ್ರಿಕೆಯಲ್ಲಿ ಪ್ರಕಟವಾದ ಚಿತ್ರವೊಂದು ತೋರಿಸಿಕೊಟ್ಟಿತು).

ನಂತರದ ದಿನಗಳಲ್ಲಿ ಪ್ರಕಟವಾದ ಇನ್ನೊಂದು ಚಿತ್ರವು, ಸೋನಿಯಾ ಅವರು ದೇವನಾಗರಿ ಲಿಪಿಯಲ್ಲಿ ಬರೆದ ಭಾಷಣವನ್ನೇ ಓದುತ್ತಿರುವುದನ್ನು ತೋರಿಸಿತು. ನಂತರದ ದಿನಗಳಲ್ಲಿ ಅವರು ಭಾಷಣ ಓದುವುದನ್ನು ಸಂಪೂರ್ಣವಾಗಿ ಕೈಬಿಟ್ಟರು. ಸೋನಿಯಾ ಅವರು ಜನರನ್ನು ಮಂತ್ರಮುಗ್ಧಗೊಳಿಸುವ ಭಾಷಣಕಾರ್ತಿ ಆಗಿರಲಿಲ್ಲ. ಆ ರೀತಿಯಲ್ಲಿ ಅವರು ತಮ್ಮನ್ನು ಬಿಂಬಿಸಿಕೊಳ್ಳಲೂ ಇಲ್ಲ.

ಅವರ ಸಾರ್ವಜನಿಕ ಜೀವನದಲ್ಲಿ ಎರಡು ವಿಶಿಷ್ಟ ಸನ್ನಿವೇಶಗಳಿವೆ. ಮೊದಲನೆಯದು, ಸಾಂವಿಧಾನಿಕ ಅರ್ಹತೆ ಇದ್ದರೂ 2004ರಲ್ಲಿ ಪ್ರಧಾನಿಯಾಗಲು ಒಲ್ಲೆ ಎಂದಾಗಿನದು. ಸೋನಿಯಾ ಅವರು ವಿದೇಶಿ ವ್ಯಕ್ತಿ ಎಂದು ಹೇಳಿದ್ದ ಸುಷ್ಮಾ ಸ್ವರಾಜ್, ಸೋನಿಯಾ ಅವರು ಪ್ರಧಾನಿಯಾದರೆ ತಾವು ತಲೆ ಬೋಳಿಸಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದರು.

ಯುರೋಪಿನ ಪೌರತ್ವವನ್ನು ಬಿಟ್ಟುಬಿಡಲು ಸ್ವಲ್ಪ ಸಮಯ ತೆಗೆದುಕೊಂಡಿದ್ದಕ್ಕಾಗಿ ಸೋನಿಯಾ ಟೀಕೆಗೆ ಗುರಿಯಾದರು. ನನ್ನ ಪಾಲಿಗೆ ಇದೊಂದು ವೈಚಿತ್ರ್ಯ. ಅಮೆರಿಕದ ಗ್ರೀನ್‌ ಕಾರ್ಡ್‌ ಪ್ರೇಮಿಗಳು ಇರುವ ಈ ದೇಶದಲ್ಲಿ, ಧಗಧಗಿಸುವ ದೇಶಭಕ್ತಿಯ ಕಾರಣದಿಂದಾಗಿ ಅಮೆರಿಕದ ಅಥವಾ ಯುರೋಪಿನ ಪೌರತ್ವ ಬಿಟ್ಟುಕೊಡಲು ಎಷ್ಟು ಜನ ಸಿದ್ಧರಿದ್ದೇವೆ? ಅಂತಹ ಭಾರತೀಯರ ಬಗ್ಗೆ ನನಗೆ ತಿಳಿದಿಲ್ಲ. ಈ ಹೆಣ್ಣುಮಗಳು ಹಾಗೆ ಮಾಡದಿದ್ದರೂ ಟೀಕೆಗೆ ಗುರಿಯಾದರು. ಕೆನಡಾದ ಪೌರತ್ವ ಪಡೆಯಲು ಅಕ್ಷಯ್ ಕುಮಾರ್ ಅವರು ಭಾರತದ ಪೌರತ್ವ ಬಿಟ್ಟರು. ಹೀಗಿದ್ದರೂ ಅವರು ಟಿ.ವಿ. ವಾಹಿನಿಗಳ ಮೂಲಕ ದೇಶಭಕ್ತಿಯ ಕಾರ್ಯಕ್ರಮ ನಡೆಸಿಕೊಡಬಹುದು!

ಸೋನಿಯಾ ಅವರ ಜೀವನದ ಎರಡನೆಯ ವಿಶಿಷ್ಟ ಸಂದರ್ಭ ಮನಮೋಹನ್ ಸಿಂಗ್ ಅವರನ್ನು ಮುಂದೆ ತಂದಿದ್ದು. ಸಿಂಗ್ ಅವರು ನರಸಿಂಹ ರಾವ್‌ ನೇತೃತ್ವದ ಸರ್ಕಾರದ ಅವಧಿಯಲ್ಲಿ ‘ಆರ್ಥಿಕ ಸುಧಾರಣೆ’ಯ ಪರಿಕಲ್ಪನೆಯನ್ನು ಪರಿಚಯಿಸಿದ್ದರು. ಸಿಂಗ್ ಅವರ ಎರಡು ಅವಧಿಯ ಆಡಳಿತವನ್ನು ಇಂದು ಭ್ರಷ್ಟಾಚಾರದ ಕಾರಣಗಳಿಗಾಗಿ ಬಹುತೇಕ ನೆನಪಿಸಿಕೊಳ್ಳಲಾಗುತ್ತಿದೆ. ಆದರೆ ಆ ಎರಡು ಅವಧಿಗಳು ನಿಜಕ್ಕೂ ಪರಿವರ್ತನೆ ತಂದವು.

ಮಾಹಿತಿ ಹಕ್ಕು ಕಾಯ್ದೆ, ನರೆಗಾ ಮತ್ತು ಇತರ ಮಾನವೀಯ ಕಾನೂನುಗಳು ಸಿಂಗ್ ನೇತೃತ್ವದ ಸರ್ಕಾರಕ್ಕೆ ‘ಎಡಪಂಥೀಯ’ ಮತ್ತು ‘ಸಮಾಜವಾದಿ’ ಎಂಬ ಹೆಸರು ತಂದವು. ಹೀಗಿದ್ದರೂ, ಸಿಂಗ್ ಅವರೇ ಒಮ್ಮೆ ಹೇಳಿರುವಂತೆ, ಸಿಂಗ್ ಅವರಿಗೆ ಸಕಲ ತೀರ್ಮಾನಗಳನ್ನೂ ಕೈಗೊಳ್ಳಲು ಸಾಧ್ಯವಿಲ್ಲದಿದ್ದ ಮೈತ್ರಿಕೂಟ ಸರ್ಕಾರದ 10 ವರ್ಷಗಳ ಆಡಳಿತದಲ್ಲಿ ಭಾರತ ಕಂಡ ಸರಾಸರಿ ಜಿಡಿಪಿ ಬೆಳವಣಿಗೆ ದರವನ್ನು ಇಂದಿನ ಸರ್ಕಾರಕ್ಕೆ ಇಷ್ಟೆಲ್ಲ ಬಡಾಯಿಗಳ ನಡುವೆಯೂ ಸಾಧಿಸಲು ಆಗಿಲ್ಲ.

ಸೋನಿಯಾ ನೇತೃತ್ವದಲ್ಲಿ ಕಾಂಗ್ರೆಸ್ ಎದುರಿಸಿದ ಕಡೆಯ ಲೋಕಸಭಾ ಚುನಾವಣೆಯು ಆ ಪಕ್ಷದ ಪಾಲಿಗೆ ಅತ್ಯಂತ ಕೆಟ್ಟ ಫಲಿತಾಂಶವನ್ನು ತಂದುಕೊಟ್ಟಿತು. ಹೀಗಿದ್ದರೂ, ಸೋನಿಯಾ ಅವರ ಸಾಧನೆ ಮತ್ತು ಅವರ ವ್ಯಕ್ತಿತ್ವದ ಕಾರಣದಿಂದಾಗಿ ಇತಿಹಾಸವು ಅವರನ್ನು ಪ್ರಶಂಸೆಯ ದೃಷ್ಟಿಯಿಂದಲೇ ಕಾಣಲಿದೆ.

ಲೇಖಕ ಅಂಕಣಕಾರ ಹಾಗೂ ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT