ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇಪಥ್ಯದಿಂದ ಹೊರಬಂದ ಗೌರಮ್ಮಾಜಿ

Last Updated 23 ಮಾರ್ಚ್ 2016, 8:29 IST
ಅಕ್ಷರ ಗಾತ್ರ

ವಿದ್ಯಾವರ್ಧಕ ಕಾಲೇಜಿನಲ್ಲಿ ಬಿ.ಎ. ಮಾಡುತ್ತಿದ್ದಾಗ ನಡೆದ ಘಟನೆ ಇದು. ಐಚ್ಛಿಕ ಕನ್ನಡದ ವಿದ್ಯಾರ್ಥಿಗಳನ್ನು ಪ್ರತಿ ವರ್ಷ ಲೇಖಕರೊಬ್ಬರ ಮನೆಗೆ ಕರೆದೊಯ್ಯುವ ಅಪೂರ್ವ ಸಂಪ್ರದಾಯವಿತ್ತು ನಮ್ಮ ಕಾಲೇಜಿನಲ್ಲಿ. ಮೊದಲ ವರ್ಷ ನಾವು ಹೋದದ್ದು ಮಾಸ್ತಿಯವರ ಮನೆಗೆ. ಮಹಿಳಾ ಕಾಲೇಜಾದ್ದರಿಂದ ಅಲ್ಲಿಗೆ ಹೋದ ವಿದ್ಯಾರ್ಥಿನಿಯರು ಮಾಸ್ತಿಯವರೊಂದಿಗೆ ನಡೆಸಿದ ಸಂವಾದದಲ್ಲಿ ಸಹಜವಾಗಿಯೇ ಹೆಣ್ಣಿನ ಸ್ಥಿತಿಗತಿಗಳ ಚರ್ಚೆ ಆರಂಭವಾಯಿತು.

ತೊಂಬತ್ತರ ಇಳಿ ವಯಸ್ಸಿನ ಮಾಸ್ತಿಯವರು ಹೆಣ್ಣಿನ ತಾಳ್ಮೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಅವಳ ಪಾತ್ರ, ಅವಳ ಶಕ್ತಿ ಇತ್ಯಾದಿಗಳ ಬಗ್ಗೆ ಮಾತನಾಡುತ್ತಿದ್ದಾಗ ಗೆಳತಿಯೊಬ್ಬಳು, ‘ಹಾಗಿದ್ದರೆ ಗಂಡ ಹಿಡಿದು ಹೊಡೆಯುತ್ತಿದ್ದರೂ ಹೆಣ್ಣು ತಾಳ್ಮೆಯಿಂದ ಅದನ್ನೆಲ್ಲ ಸಹಿಸಿಕೊಳ್ಳಬೇಕಾ?’ ಎಂದು ವಯೋಸಹಜವಾದ ವ್ಯಗ್ರತೆಯಲ್ಲಿ ಪ್ರಶ್ನಿಸಿದಳು. ತಮ್ಮ ಜಗತ್ಪ್ರಸಿದ್ಧವಾದ ಮುಗುಳ್ನಗೆ ನಕ್ಕು ಮಾಸ್ತಿಯವರು, ‘ಅಯ್ಯೋ ತಾಯಿ, ನೀನು ಯಾಕೆ ಹೊಡೆತ ತಿನ್ನಬೇಕು?’ ಅಂದಾಗ, ಆ ಎಳೆ ವಯಸ್ಸಿನ ನಾವೆಲ್ಲರೂ, ಹಾಗಿದ್ದರೆ ನಾವೂ ತಿರುಗಿಸಿ ಹೊಡೆಯುವುದನ್ನು ಮಾಸ್ತಿ ಸಲಹೆ ಮಾಡುತ್ತಾರೇನೋ ಎಂದು ಕಾತರದಿಂದ ಕಾಯುತ್ತಿದ್ದರೆ, ಅವರು ನಿರುದ್ವಿಗ್ನವಾದ ಧ್ವನಿಯಲ್ಲಿ, ‘ಅವನು ಹೊಡೆಯುವುದಕ್ಕೆ ಎತ್ತಿದ ಕೈಯನ್ನು ನೀನು ಗಟ್ಟಿಯಾಗಿ ಹಿಡಿ, ಅವನು ಹೊಡೆಯುವುದಕ್ಕೆ ಬಿಡಬೇಡ’ ಅಂದರು! ಇದು ಪರಿಹಾರವೋ ರಾಜಿಯೋ  ಸೋಲು ಗೆಲುವನ್ನು ಮೀರಿದ ನೆಲೆಯಲ್ಲಿ ಬದುಕನ್ನು ಎದುರಿಸುವ ಮಾರ್ಗವೋ  ಗೊತ್ತಾಗದ ಮನಸ್ಥಿತಿಯಲ್ಲಿ ವಾಪಸಾದೆವು.

ಮಾಸ್ತಿಯವರ ಈ ಮಾತು ನನ್ನ ಮಟ್ಟಿಗೆ ಆ ಭೇಟಿಯ ಸವಿನೆನಪಿನ ಜೊತೆಯಲ್ಲೂ ಉಳಿದಿರುವ ಒಂದು ಸಂಕೇತವೇ ಆಗಿದೆ. ಸಾಹಿತ್ಯ ಮತ್ತು ಸ್ತ್ರೀವಾದದ ಮುಂದುವರಿದ ಅಧ್ಯಯನದ ಸಂದರ್ಭದಲ್ಲಿ ಮಾಸ್ತಿಯವರ ಈ ಮಾತು, ಹೆಣ್ಣನ್ನು ಕುರಿತ ಸುಧಾರಣಾವಾದದ ಒಂದು ಮಾದರಿಯಂತೆಯೇ ಕಂಡಿದೆ. ಮೇಲ್ನೋಟಕ್ಕೆ ಉದಾರವಾದದಂತೆ ಕಾಣಿಸುವ, ಬದಲಾವಣೆಯಂತೆ ಕಾಣಿಸುವ ಆದರೆ ಒಳಗೆ ಪಿತೃಸಂಸ್ಕೃತಿಯ ವಿನ್ಯಾಸಕ್ಕೂ ಧಕ್ಕೆ ಬಾರದಂತೆ ನಿಭಾಯಿಸುವ ಕ್ರಮದ ಹಾಗೆ ಕಾಣಿಸುವ ಈ ದೃಷ್ಟಿಕೋನವನ್ನು ಇನ್ನೂ ಆಳವಾಗಿ ಗಮನಿಸಿದರೆ ಕುತೂಹಲಕರವಾದ ಸಂಗತಿಗಳು ಕಾಣಿಸುತ್ತವೆ.

ಇಡೀ ಸಮುದಾಯವೇ ನಭೂತೋ ಎನ್ನುವಂತೆ ಭಾಸವಾಗುವ ಪಲ್ಲಟಗಳ ಮತ್ತು ಅವುಗಳ ಅಗತ್ಯ, ಅನಿವಾರ್ಯತೆಯ ಸೆಳೆತಕ್ಕೆ ಸಿಕ್ಕಿದ

ಕಾಲಘಟ್ಟ ಅದು. ಶಿಕ್ಷಣವೆನ್ನುವುದು ಹೆಣ್ಣಿನ ಒಳ ಅರಿವನ್ನು ಹೊರ ಅಭಿವ್ಯಕ್ತಿಯಾಗಿಸುವುದರ ಮೂಲಕ ಅವಳಲ್ಲಿ ಆತ್ಮಗೌರವದ ಮೌನ ಅಸ್ಫೋಟಕ್ಕೆ ಅವಕಾಶ ಮಾಡಿಕೊಡುತ್ತಿದ್ದ ಸಂಕ್ರಮಣ ಘಟ್ಟ ಅದು. ಈ ಕಾಲಘಟ್ಟದ ಸುಧಾರಣಾವಾದಿ ನಾಯಕರಲ್ಲಿ ವಿಚಿತ್ರವಾದ ದ್ವಂದ್ವಗಳಿದ್ದವು. ಅಥವಾ ಇವುಗಳನ್ನು ಪಿತೃಸಂಸ್ಕೃತಿಯ ದ್ವಂದ್ವಗಳೆನ್ನುವುದೇ ಸೂಕ್ತವೇನೋ. ಆ ಯುಗದ ಹರಿಕಾರರೆಂದೇ ಖ್ಯಾತರಾದ ರಾಜಾರಾಮ್ ಮೋಹನರಾಯರು ಹೆಣ್ಣಿನ ಬಗ್ಗೆ ಹೊಂದಿದ್ದ ದ್ವಂದ್ವಗಳ ಘರ್ಷಣೆ ಅವರ ವೈಯಕ್ತಿಕ ಬದುಕನ್ನು ಘಾಸಿಗೊಳಿಸಿದ ಸಂಗತಿಗಳನ್ನು ಗಮನಿಸಿದರೆ ಈ ಅಂಶ ಸ್ಪಷ್ಟವಾಗುತ್ತದೆ. ಸುಧಾರಣವಾದಿಯ ಬೌದ್ಧಿಕ ನಿಲುವುಗಳು ಮತ್ತು ಪಿತೃಸಂಸ್ಕೃತಿಯ ಅಭಿನ್ನ ಭಾಗವಾಗಿರುವ ಗಂಡಿನ ಮನೋವಿನ್ಯಾಸದ ನಡುವಿನ ಘರ್ಷಣೆ ಇದು.

ಡಾ. ಕೃಷ್ಣ ಗಿಳಿಯಾರ್‌



ಈ ಇಡೀ ಪ್ರಕ್ರಿಯೆಗೆ ಇನ್ನೊಂದು ಮುಖವೂ ಇದೆ. ಸ್ತ್ರೀಲೋಕದಲ್ಲಿ ಸಹಜವಾಗಿ ಆಗುತ್ತಿದ್ದ ಬದಲಾವಣೆಗಳ ನೇತೃತ್ವವನ್ನು ಸುಧಾರಣಾವಾದಿಗಳು ವಹಿಸಿಕೊಳ್ಳುವುದರಲ್ಲಿ ಹಲವು ಅಂಶಗಳಿದ್ದವು. ಒಂದು, ಬದಲಾವಣೆಗಳ ಪ್ರಕ್ರಿಯೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದರ ಮೂಲಕವೇ ಅದರ ಮೇಲೆ ನಿಯಂತ್ರಣ ಸಾಧಿಸುವುದು. ಇನ್ನೊಂದು, ಪಿತೃಸಂಸ್ಕೃತಿಯ ವಿನ್ಯಾಸಗಳನ್ನು ಉಳಿಸಿಕೊಳ್ಳುವುದಕ್ಕೆ ಬೇಕಾದ ಕಾರ್ಯಮಾದರಿಗಳ ರಚನೆಗೆ ಬೇಕಾದ ಅವಕಾಶಗಳ ಸೃಷ್ಟಿಗೆ ಅನುವು ಮಾಡಿಕೊಳ್ಳುವುದು. ಇದು ಇಷ್ಟು ಸರಳವಾದ, ನೇರವಾದ ನಡೆ ಎನ್ನುವುದು ನನ್ನ ಮಾತಿನ ಅರ್ಥವಲ್ಲ. ಬಹು ಸಂಕೀರ್ಣವಾದ ಚಲನೆಯನ್ನು ಸ್ಥೂಲಾರ್ಥಕ್ಕೆ ತಂದುಕೊಳ್ಳುವ ಪ್ರಯತ್ನ ಮಾತ್ರ.

ಇದನ್ನು ಮಹಿಳೆಯರ ದೃಷ್ಟಿಯಿಂದ ನೋಡಿದರೆ ಲೋಕವೇ ಬೇರೆಯಾಗಿ ಕಾಣುತ್ತದೆ ಎನ್ನುವುದು ವಿಚಿತ್ರವಾದರೂ ಸತ್ಯ. ಅಸ್ಪಷ್ಟವಾಗಿ, ಮಂಜು ಮುಸುಕಿದಂತೆ ಕಾಣಿಸುತ್ತಿದ್ದ ದಾರಿಯಲ್ಲಿ ಈ ಮಹಿಳೆಯರು ಆತ್ಮಪ್ರಭೆಯ ಬೆಳಕಿನ ಪಂಜುಗಳನ್ನು ಹತ್ತಿಸಿಕೊಂಡು ಮುನ್ನೆಡೆದರು. ಕುಟುಂಬದ ಒಳಜಗತ್ತನ್ನೂ ಸಮುದಾಯದ ಹೊರಜಗತ್ತನ್ನೂ ಬೆಸೆಯುವ ತಮ್ಮ ಮಹಾಪ್ರಯಾಣವನ್ನು ಈ ತಲೆಮಾರಿನ ಮಹಿಳೆಯರು ಆರಂಭಿಸಿದರು. ಎಂದರೆ, ಲೋಕದ ಅಪೇಕ್ಷಿತ ಹೆಣ್ಣಿನ ವೇಷದಲ್ಲಿಯೇ ತಮ್ಮ ಆಯ್ಕೆಯ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವ ಪ್ರಯತ್ನ ಇದು.

ಇದಕ್ಕೆ ಅತ್ಯುತ್ತಮ ಉದಾಹರಣೆಗಳನ್ನು ಮಾಸ್ತಿಯವರಲ್ಲಿಯೂ ನೋಡಬಹುದು. ಮಾಸ್ತಿಯವರ ವಿಸ್ತಾರವಾದ, ಎಲ್ಲ ವರ್ಗ ಮತ್ತು ಹಿನ್ನೆಲೆಯವರನ್ನು ಒಳಗೊಳ್ಳುವಷ್ಟು ವಿಸ್ತಾರವಾದ ಕಥಾಪ್ರಪಂಚ ಮಾಸ್ತಿಯವರದು. ಅಪ್ಪಟ ಮಾನವೀಯ ಕಾಳಜಿಯು ಮಾಸ್ತಿಯವರ ಬರವಣಿಗೆಗೆ ಆರ್ತತೆಯನ್ನೂ ಘನತೆಯನ್ನೂ ತಂದುಕೊಟ್ಟಿದೆ. ಕೇಡು ಮನುಷ್ಯನ ಮೂಲಗುಣಗಳಲ್ಲೊಂದು, ಅದನ್ನು ಗೆಲ್ಲುವ ಪ್ರಯತ್ನಗಳೇ ಮನುಷ್ಯರ ಆರೋಹಣದ ದಾರಿಯೆಂದು ನಂಬಿದವರು ಮಾಸ್ತಿ.

ಇಂಥ ಮಾಸ್ತಿಯವರಿಗೂ ತಿರುಮಲಾಂಬ ಬರವಣಿಗೆಯ ಬಗ್ಗೆ ಪ್ರಶ್ನೆಗಳೇಳುವುದು ಯಾಕೆಂದರೆ, ಹೆಣ್ಣು ಶಿಕ್ಷಣವನ್ನು ಪಡೆದು, ಉದ್ಯೋಗಸ್ಥಳಾಗಿ ಹೊರಲೋಕಕ್ಕೆ ಕಾಲಿಡಬೇಕು, ತನ್ನ ಬದುಕು ಮತ್ತು ವ್ಯಕ್ತಿತ್ವ ಎರಡನ್ನೂ ಬದಲಿಸಿಕೊಳ್ಳಬೇಕು ಎನ್ನುವ ತಿರುಮಲಾಂಬ ಅವರ ನಿಲುವು ಮಾಸ್ತಿಯವರಿಗೆ ನಮ್ಮ ಸಂಸ್ಕೃತಿಗೆ ಒದಗಿದ ಆಪತ್ತಿನಂತೆ ಕಾಣಿಸುವುದರ ಮೂಲ ನಾನು ಹೇಳುತ್ತಿರುವ ದ್ವಂದ್ವವೇ ಆಗಿದೆ. ಇದೇ ಮಾಸ್ತಿಯವರು ‘ಮೊಸರಿನ ಮಂಗಮ್ಮ’, ‘ಹೇಮಕೂಟದಿಂದ ಬಂದ ಮೇಲೆ’, ‘ವಿಚಿತ್ರ ಪ್ರೇಮ’ ಮೊದಲಾದ ಕಥೆಗಳಲ್ಲಿ ಕೆಲವು ಅಪೂರ್ವ ಸ್ತ್ರೀವ್ಯಕ್ತಿತ್ವಗಳನ್ನು ಕಟ್ಟಿಕೊಟ್ಟಿರುವುದು ಇದಕ್ಕಿರುವ ಇನ್ನೊಂದು ಪುರಾವೆ.

ಮಾಸ್ತಿಯವರ ಸ್ತ್ರೀಪಾತ್ರಗಳಲ್ಲೆಲ್ಲ ಅತ್ಯಂತ ಮುಖ್ಯವಾದುದೆಂದರೆ, ‘ಚಿಕವೀರರಾಜೇಂದ್ರ’ ಕಾದಂಬರಿಯ ಗೌರಮ್ಮಾಜಿ. ಯಾವ ತಾಳ್ಮೆ, ಧಾರಣ ಶಕ್ತಿಗಳನ್ನು ಹೆಣ್ಣಿನ ಅಪೇಕ್ಷಿತ ಗುಣಗಳೆಂದು ಹೇಳಲಾಗುತ್ತದೆಯೋ  ಮತ್ತು ಈ ಗುಣಗಳೇ ಅವಳ ವ್ಯಕ್ತಿತ್ವದ ಮೂಲಾಂಶಗಳೆಂದು ಹೇಳಲಾಗುತ್ತದೆಯೋ ಆ ಗುಣ ಮತ್ತು ಸ್ವಭಾವಗಳು ಗೌರಮ್ಮಾಜಿಯಲ್ಲಿ ವ್ಯಕ್ತಿಗತ ನೆಲೆಯನ್ನು ಮೀರಿ ಅವಳ ದಾಂಪತ್ಯವನ್ನು, ಕುಟುಂಬವನ್ನು ವಿಘಟನೆಯಿಂದ ಪಾರು ಮಾಡುತ್ತವೆ. ಮಾತ್ರವಲ್ಲ ಆ ಇಡೀ ಅರಸೊತ್ತಿಗೆಯು ಬ್ರಿಟೀಷರ ತುತ್ತಾಗುವುದನ್ನು ಎಷ್ಟು ಸಾಧ್ಯವೋ ಅಷ್ಟು ಮುಂದೂಡುವುದರ ಮೂಲಕ ರಾಜಕೀಯ ನೆಲೆಯನ್ನೂ ಪಡೆಯುತ್ತವೆ. ಅಂದರೆ, ಯಾವೆಲ್ಲ ಗುಣಗಳ ಮೂಲಕ ಹೆಣ್ಣಿನ ವ್ಯಕ್ತಿತ್ವವನ್ನು ಅಧೀನತೆಗೆ ಒಳಪಡಿಸಲಾಗುತ್ತದೆಯೋ ಅದೇ ಗುಣಗಳು ಅಧೀನತೆಯ ಮಿತಿಯನ್ನು ದಾಟುತ್ತಾ ಅವಳ ವ್ಯಕ್ತಿತ್ವ, ದಾಂಪತ್ಯ, ಕುಟುಂಬ ಮತ್ತು ಸಮುದಾಯದಲ್ಲಿನ ಅವಳ ಪಾತ್ರ ಎರಡಕ್ಕೂ ಅಧಿಕೃತತೆ ಮತ್ತು ಮಾನ್ಯತೆಯನ್ನು ತಂದುಕೊಡುವ ವಿಸ್ತಾರ ಮತ್ತು ಮಹತ್ವ ಎರಡನ್ನೂ ಗೌರಮ್ಮಾಜಿಯ ಪಾತ್ರ ಸಾಧಿಸುತ್ತದೆ.

ಚಿಕವೀರರಾಜೇಂದ್ರ ಕೊಡಗಿನ ಕೊನೆಯ ಅರಸನಾಗಿ, ಲಂಪಟನಾಗಿ ಬ್ರಿಟಿಷರು ಬಯಸಿದ್ದ ದುರ್ಬಲ ವ್ಯಕ್ತಿಯಾಗಿದ್ದವನು. ಇಂಥವನನ್ನು ಮದುವೆಯಾಗಿ, ‘ಹೇಗೂ ಹೆಂಡಿರಾಗಿ ಬದುಕುವುದು ಎಲ್ಲ ಹೆಣ್ಣಿನ ಹಣೆಯಲ್ಲಿ ಬರೆದದ್ದು’ ಎನ್ನುವ ಸಾಂಪ್ರದಾಯಿಕ ವಿಧಿವಾದಿ ಹೆಣ್ಣಿನ ಹಾಗೆ ಆರಂಭವಾಗುವ ಗೌರಮ್ಮಾಜಿಯ ವ್ಯಕ್ತಿತ್ವ ನಿಧಾನವಾಗಿ ಅನಿವಾರ್ಯ ಸನ್ನಿವೇಶಗಳ ಮೂಲಕ ತನ್ನ ಶಕ್ತಿ ಸಾಧ್ಯತೆಗಳನ್ನು ಅನಾವರಣ ಮಾಡುತ್ತಾ ಹೋಗುತ್ತದೆ. ಚಿಕವೀರರಾಜೇಂದ್ರ ತನ್ನ ಧೂರ್ತತನ ಮತ್ತು ಲಂಪಟತನಗಳನ್ನು ಒಂದನ್ನು ಇನ್ನೊಂದರಿಂದ ಮುಚ್ಚಲು ವ್ಯರ್ಥ ಪ್ರಯತ್ನಗಳನ್ನು ನಡೆಸುತ್ತಿರುವಂತೆಯೇ ಎಲ್ಲ ಅರ್ಥದಲ್ಲೂ ಜನಬೆಂಬಲವನ್ನು ಕಳೆದುಕೊಳ್ಳುತ್ತಾ ಹೋಗುತ್ತಾನೆ; ಅವನ ಮಂತ್ರಿಗಳಿಂದ ಹಿಡಿದು ಜನಸಾಮಾನ್ಯರ ತನಕ.

ತಂಗಿ ದೇವಮ್ಮಾಜಿಗೆ ಹುಟ್ಟಬಹುದಾದ ಮಗು ತನಗೆ ಕಂಟಕವಾಗಬಹುದು ಎಂದು ದೀಕ್ಷಿತರು ಹೇಳಿದ ಜ್ಯೋತಿಷ್ಯದ ಕಾರಣಕ್ಕೆ ಅವಳನ್ನು ಸೆರೆಯಲ್ಲಿಡಿಸುವ, ಕಣ್ಣಿಗೆ ಬಿದ್ದ ಎಲ್ಲ ಸುಂದರ ಹೆಣ್ಣುಮಕ್ಕಳೂ ತನಗೆ ಬೇಕು ಎನ್ನುವ, ಹಗಲು ರಾತ್ರಿಗಳ ವ್ಯತ್ಯಾಸವಿಲ್ಲದೆ ಕುಡಿಯುವ ಗಂಡನನ್ನೂ ಈ ಕಾರಣಕ್ಕಾಗಿ ದುರ್ಬಲವಾಗುತ್ತಾ ಹೋಗುವ ರಾಜ್ಯವನ್ನೂ ಕಾಪಾಡಿಕೊಳ್ಳಲು ಗೌರಮ್ಮಾಜಿ ನಡೆಸುವ ಪ್ರಯತ್ನಗಳು ಅವಳು ನಿರೀಕ್ಷಿಸುವ ಫಲವನ್ನು ಕೊಡುವುದಿಲ್ಲ ನಿಜ. ಆದರೆ ನಮಗೆ ಅದು ಗೌರಮ್ಮಾಜಿಯ ಸೋಲು ಎನಿಸುವುದಿಲ್ಲ. ಗಂಡನನ್ನೂ ಉಳಿಸಿಕೊಳ್ಳುವ, ಮಗಳ ಮತ್ತು ರಾಜ್ಯದ ಹಿತದ ಸಲುವಾಗಿ ಚಿಕವೀರ ಆಡುವ ಎಂಥ ನಂಜಿನ ಮಾತುಗಳನ್ನೂ ಗೌರಮ್ಮಾಜಿ ಸಹಿಸಿಕೊಳ್ಳುತ್ತಾಳೆ.

ಕೊಡಗನ್ನು ಕುರಿತ ತನ್ನ ನೈತಿಕ ಬದ್ಧತೆಯನ್ನು ಎಲ್ಲ ಹೊತ್ತಿಗೂ ಉಳಿಸಿಕೊಂಡ ವ್ಯಕ್ತಿ, ಮಂತ್ರಿಯಾದ ಬೋಪಯ್ಯ. ರಾಜನಿಗಿರಬೇಕಾದ ವಿವೇಕ, ಮುಂದಾಲೋಚನೆ, ಬದ್ಧತೆ, ನೈತಿಕತೆ ಎಲ್ಲವನ್ನೂ ಉಳಿಸಿಕೊಂಡು, ರಾಜನ ಅನಾದರ, ಧೂರ್ತತೆಯನ್ನು ರಾಜ್ಯ ಮತ್ತು ಗೌರಮ್ಮಾಜಿಯ ಮೇಲಿನ ಗೌರವ ಮತ್ತ್ತು ಕಾಳಜಿಯ ಸಲುವಾಗಿ ಸಹಿಸಿಕೊಳ್ಳುತ್ತಿದ್ದವನ ಬಗೆಗೇ ಚಿಕವೀರ ಕೆಟ್ಟ ಮಾತುಗಳನ್ನಾಡುತ್ತಾನೆ. ಎಂಥವರ ಸಹನೆಯೂ ಮುಗಿದು ಕೆರಳುವಷ್ಟು ರಾಜನ ನಡವಳಿಕೆ ಕೆಟ್ಟಾಗಲೂ ಗೌರಮ್ಮಾಜಿ ತನ್ನನ್ನೂ ಸಂಭಾಳಿಸಿಕೊಂಡು ಬೋಪಯ್ಯನಿಗೂ ಸಮಾಧಾನ ಹೇಳಿ ಕರ್ತವ್ಯ ನಿರ್ವಹಣೆಗೆ ಸಜ್ಜಾಗುತ್ತಾಳೆ. ಗಂಡನ ವಿರೋಧವನ್ನು ಕಟ್ಟಿಕೊಂಡು ಮಗಳ ನೆರವಿನಿಂದ ನಾದಿನಿಯನ್ನು ಸೆರೆವಾಸದಿಂದ ಬಿಡಿಸುತ್ತಾಳೆ, ವಿಪತ್ತಿನಿಂದ ಪಾರಾಗಲೆಂದು ಪೂಜೆಗಳನ್ನು ಮಾಡಿಸುತ್ತಾಳೆ. ಏನು ಮಾಡಿಯೂ ರಾಜ್ಯ ಕೈತಪ್ಪುವುದು ಅನಿವಾರ್ಯವೆಂದಾಗ, ಮೊದಲು ಮಗಳ ಭವಿಷ್ಯವನ್ನು ಕುರಿತು ಚಿಂತಿಸುತ್ತಾಳೆ. ತಾನು ನಂಬಿದ ದೈವದ ಆರಾಧನೆಯ ಕೊನೆಗೆ ಅನಾರೋಗ್ಯದಿಂದ ತೀರಿಕೊಳ್ಳುತ್ತಾಳೆ.

ಹಾಗಿದ್ದರೆ ಗೌರಮ್ಮಾಜಿಯನ್ನು ಕೈಹಿಡಿದು ನಡೆಸಿದ್ದು ಯಾವುದು? ಯಾವುದನ್ನು ಆಧರಿಸಿ ಹಿಡಿದು ಅವಳು ತನ್ನ ಬದುಕನ್ನು ಕಟ್ಟಿಕೊಂಡಳು? ಕುಸಿದು ಮಣ್ಣಾಗಬಹುದಾಗಿದ್ದ ಬದುಕನ್ನು ಅವಳು ಯಾಕಾಗಿ ನಚ್ಚಿದಳು? ಬದುಕನ್ನು ಕುರಿತ ಗೌರವ ಮತ್ತು ತನ್ನ ವ್ಯಕ್ತಿತ್ವದ ಬಗ್ಗೆ ಅವಳಿಗಿದ್ದ ನಂಬಿಕೆಗಳು ಅವಳನ್ನು ಮುನ್ನೆಡೆಸಿದವು. ಇಡೀ ಕಾದಂಬರಿಯುದ್ದಕ್ಕೂ ದಣಿವರಿಯದ, ಸೋಲೊಪ್ಪದ ಹೋರಾಟಗಾರ್ತಿಯ ಹಾಗೆ ನಿರಂತರವಾದ ಹೊರ ಮತ್ತು ಒಳ ಸಂಘರ್ಷಗಳಲ್ಲಿ ತೊಡಗಿಸಿ ಕೊಳ್ಳುವ ಗೌರಮ್ಮಾಜಿ, ಒಂದೇ ಒಂದು ಸಲ ಮಾತ್ರ ದೀಕ್ಷಿತರ ಬಳಿ, ‘ಜೀವ ತೀರ ಸೋತಿತು ಅಯ್ಯನವರೆ, ಇನ್ನಿರುವುದು ಬೇಡ ಅನಿಸುತ್ತಿದೆ’ ಎನ್ನುತ್ತಾಳೆ.

ನಿಜವೆಂದರೆ, ಅವಳಿಗೆ ಬದುಕಿನಲ್ಲಿ, ತನ್ನೊಳಗನ್ನೆಲ್ಲ ಹೇಳಿ ಹಗುರವಾಗಬಹುದಾದ ಒಂದೇ ಒಂದು ಸಂಬಂಧವೂ ಸಿಗುವುದಿಲ್ಲ. ತನ್ನೊಂದಿಗೆ ತಾನೇ ಸಖ್ಯ ಬೆಳೆಸುತ್ತಾ ಬದುಕನ್ನು ಎದುರಿಸುತ್ತಾ ಅದರೊಂದಿಗೆ ಮಾತ್ರ ಕೊನೆಯಿಲ್ಲದ ಸಖ್ಯವನ್ನು ಕಟ್ಟಿಕೊಳ್ಳುತ್ತಾಳೆ. ತುಂಬಿದ ಅರಮನೆಯಲ್ಲಿಯೂ ಏಕಾಂಗಿಯಾಗಿ, ಆದರೆ ಅವರೆಲ್ಲರ ಕರುಣೆಗೆ ತಾನು ಪಕ್ಕಾಗದ ಧೀರತೆ ಮತ್ತು ಘನತೆಯನ್ನು ಉಳಿಸಿಕೊಳ್ಳುವ ಗೌರಮ್ಮಾಜಿ ಈ ಕಾರಣಕ್ಕಾಗಿಯೇ ಅವರೆಲ್ಲರ ಪ್ರೀತಿ ವಿಶ್ವಾಸವನ್ನು ಗಳಿಸುತ್ತಾಳೆ. ಅವಳ ಊಳಿಗದ ಕೆಲವರು ಅವಳ ಬಗ್ಗೆ ಅನುಕಂಪ ತೋರಿಸಲು ಪ್ರಯತ್ನಿಸುವ ಸಂದರ್ಭಗಳಲ್ಲಿಯೂ ಅದನ್ನು ಅಲ್ಲೇ ಮೊಟಕುಗೊಳಿಸಿ ಅದು ಬದುಕಿನ ಗತಿ ಎನ್ನುವ ತನ್ನ ನಿಲುವನ್ನು ಅವರಿಗೆ ಸ್ಪಷ್ಟಪಡಿಸುತ್ತಾಳೆ, ತನ್ನ ಮೇಲಿನ ಅವರ ಗೌರವವನ್ನು ಇನ್ನಷ್ಟು ಹೆಚ್ಚಿಸುತ್ತಾಳೆ.

ಇಲ್ಲಿ ನಾವು ಗಮನಿಸಬೇಕಾದ ಮುಖ್ಯ ಸಂಗತಿಯೆಂದರೆ ಚಿಕವೀರ ತಾನು ಹೆಂಡತಿಗೆ ಚಿಕ್ಕಾಸಿನ ಬೆಲೆಯನ್ನೂ ಕೊಡಬೇಕಾಗಿಲ್ಲ ಎನ್ನುವ ಠೇಂಕಾರವನ್ನು ನಿರಂತರವಾಗಿ ಮಾಡುತ್ತಲೇ ಗೌರಮ್ಮಾಜಿಯ ಎದುರಿಗೆ ಕುಬ್ಜನಾಗುತ್ತಾ ಹೋಗುತ್ತಾನೆ. ನಾಟಕೀಯವಾಗಿ ಹೇಳಬೇಕೆಂದರೆ ಗೌರಮ್ಮಾಜಿಯದು ಆರೋಹಣ ಪರ್ವದ ಹಾಗೆ ಕಂಡರೆ ಚಿಕವೀರನದು ಅವರೋಹಣ ಪರ್ವ ಎನಿಸುತ್ತದೆ.

ಪಿತೃಸಂಸ್ಕೃತಿಯು  ಕೊಡಮಾಡಿದ ಎಲ್ಲ ಅಧಿಕಾರ ಕೇಂದ್ರಗಳೂ ಇರುವುದು ಚಿಕವೀರನ ಬಳಿ. ಆದರೆ ದತ್ತ ಅಧಿಕಾರವಿಲ್ಲದೆಯೂ, ಗಂಡನ ತೀವ್ರ ಅನಾದರದ ನಡುವೆಯೂ ಗೌರಮ್ಮಾಜಿ ಕುಟುಂಬದ ಹಿತವನ್ನು ಜೀವನ್ಮರಣದ ತೀವ್ರತೆಯಲ್ಲಿ ಕಾಯುತ್ತಾಳೆ. ಹೆಣ್ಣನ್ನು ಎರಡನೇ ದರ್ಜೆಯ, ಅಧೀನ ವ್ಯಕ್ತಿತ್ವವಾಗಿ ಉಳಿಸಲು ಅಗತ್ಯವಾದ ಧಾತುಗಳೇ ಅವಳನ್ನು ಅತ್ಯುತ್ತಮ ಮಾನವ ವ್ಯಕ್ತಿತ್ವವಾಗಿ ರೂಪಿಸುತ್ತವೆ. ಈ ಅಂಶವೇ ಗೌರಮ್ಮಾಜಿಯ ಇಡೀ ವ್ಯಕ್ತಿತ್ವ ಮತ್ತು ಬದುಕಿಗೆ ಪ್ರತಿರೋಧದ ಆಯಾಮ ಮತ್ತು ಶಕ್ತಿಯನ್ನು ಕೊಡುತ್ತವೆ. ವ್ಯವಸ್ಥೆಯು ತನ್ನ ಆಯ್ಕೆಯಿಂದಲ್ಲದಿದ್ದರೂ ಅನಿವಾರ್ಯವಾಗಿ ಗೌರಮ್ಮಾಜಿಯ ವ್ಯಕ್ತಿತ್ವದ ಮುಂಚಲನೆಯನ್ನು ಒಪ್ಪಿ ಅಧಿಕೃತಗೊಳಿಸಬೇಕಾಗುತ್ತದೆ.

ನಾವು ಚರ್ಚಿಸಬೇಕಾದ ಇನ್ನೊಂದು ಸಂಗತಿಯಿದೆ ಇಲ್ಲಿ. ಹೆಣ್ಣಿನ ಆರೋಹಣ ಪರ್ವಗಳನ್ನೆಲ್ಲ ಅಪವಾದಗಳೆಂದು, ಅನಿವಾರ್ಯವಾಗಿ ಎದುರಾದ ಸಂದರ್ಭಗಳನ್ನು ಹೆಣ್ಣು ನಿಭಾಯಿಸುವ ಪರಿಯೆಂದು ವ್ಯಾಖ್ಯಾನಿಸುವ ಕ್ರಮ. ಈ ಅಂಕಣದಲ್ಲಿ ನಾವು ಗಮನಿಸುತ್ತಿರುವ ಮಹಿಳೆಯರು ಈ ದೃಷ್ಟಿಕೋನವನ್ನು ಶಕ್ತವಾಗಿ ನಿರಾಕರಿಸುತ್ತಾರೆ. ಇದು ಹೆಣ್ಣಿನ ಮೂಲ ವ್ಯಕ್ತಿತ್ವವೇ ಎನ್ನುವುದನ್ನು ಸ್ಥಾಪಿಸುತ್ತಾ ಹೋಗುತ್ತಾರೆ.

ಗೌರಮ್ಮಾಜಿಗೆ ತನ್ನ ನಿಡುಗಾಲದ ಬದುಕಿನಲ್ಲಿ ತನ್ನದೆಂದು ಸಿಕ್ಕಿದ್ದು ಮಗಳು ಮಾತ್ರ. ಉಳಿದದ್ದೆಲ್ಲ ಜವಾಬ್ದಾರಿ, ಕರ್ತವ್ಯ ಮಾತ್ರ. ಈ ಸಹಜವಾಗಿ ಹುಟ್ಟಬಹುದಾದ ಕಹಿ ತನ್ನ ಬದುಕು ಮತ್ತು ವ್ಯಕ್ತಿತ್ವವನ್ನು ಘಾಸಿಗೊಳಿಸದಂತೆ ಗೌರಮ್ಮಾಜಿ ತನ್ನ ಅಂತಃಸತ್ವವನ್ನು ಕಾಪಾಡಿಕೊಂಡು ಬರುವುದರಲ್ಲಿ ಯಶಸ್ವಿಯಾಗುತ್ತಾಳೆ. ನೇಪಥ್ಯದಲ್ಲಿ ತನ್ನ ವ್ಯಕ್ತಿತ್ವದ ಶಕ್ತಿ ಮತ್ತು ಘನತೆಯಿಂದಲೇ ರಾಜ್ಯದ ಅಧಃಪತನವನ್ನು ಆದಷ್ಟೂ ಮುಂದೂಡುತ್ತಾ ಹೋಗುತ್ತಾಳೆ.

ಬದುಕಿನ ಬಿಕ್ಕಟ್ಟಿನ ಸಂದರ್ಭಗಳಲ್ಲಿ ಪಲಾಯನವಾದಿಯಾಗುವುದು ಗಂಡೇ ಹೊರತು ಹೆಣ್ಣಲ್ಲ ಎನ್ನುವ ಮಾತಿಗೆ ಐತಿಹಾಸಿಕ ಪುರಾವೆಯಾಗುತ್ತಾಳೆ ಗೌರಮ್ಮಾಜಿ. ಕೊನೆಗೆ ಮಗಳಿಂದ ತನಗೆ ಅಪಾರ ನಿರಾಸೆಯಾದರೂ ಅದು ಅವಳ ಆಯ್ಕೆ ಎನ್ನುವ  ತಿಳಿವಳಿಕೆಯಲ್ಲಿ ಆ ತೀರ್ಮಾನವನ್ನು ಗೌರವಿಸುತ್ತಾಳೆ. ದುರಂತ ನಾಯಕಿಯಾಗಿ, ಅಸಹಾಯಕ ವ್ಯಕ್ತಿತ್ವವಾಗಿ, ಕರುಣೆಯ ಕೂಸಾಗಿ ಬಿಡಬಹುದಾಗಿದ್ದ, ಮಿಹಿರ ಬಿಂಬವ ಕಾಣದ ನೃಪ ಮಹಿಳೆಯಾಗಿ ಅಂತಃಪುರದ ಕತ್ತಲಲ್ಲಿ ಅದೃಶ್ಯಳಾಗಿಬಿಡಬಹುದಾಗಿದ್ದ ಗೌರಮ್ಮಾಜಿ ತನ್ನ ಅಂತಃಪ್ರಭೆಯಿಂದಲೇ ಬೆಳಗುತ್ತಾಳೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT