ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೈರ್ಮಲ್ಯ ಆಂದೋಲನ: ಇದಲ್ಲವೇ ಜನಾರ್ದನರ ಸೇವೆ...!

Last Updated 23 ಫೆಬ್ರುವರಿ 2014, 19:30 IST
ಅಕ್ಷರ ಗಾತ್ರ

ಕೊಪ್ಪಳ ಜಿಲ್ಲೆಯಲ್ಲಿ ಇತ್ತೀಚೆಗೆ ದಿಢೀರನೆ ನೈರ್ಮಲೀಕರಣದ ಬಗ್ಗೆ ದೊಡ್ಡ ಆಂದೋ­ಲನವೇ ನಡೆಯುತ್ತಿದೆ. ಗ್ರಾಮೀಣ ಜನರಿಗೆ ಸ್ವಚ್ಛತೆ ಮತ್ತು ನೈರ್ಮಲ್ಯದ ಬಗ್ಗೆ ಮನವರಿಕೆ ಮಾಡಿಕೊಟ್ಟು ವೈಯಕ್ತಿಕ ಶೌಚಾಲಯ­ಗಳನ್ನು ನಿರ್ಮಿಸಿ­ಕೊಳ್ಳು­ವಂತೆ ಮನವೊಲಿ­ಸುವ ಮೂಲಕ ಅಲ್ಲಿನ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಟಿ.ಜನಾ­ರ್ದನ ಹುಲಿಗಿ ಇತರರಿಗೆ ಮಾದರಿ­ಯಾಗಿ­ದ್ದಾರೆ.

ನಸುಕಿನಲ್ಲೇ ಎದ್ದು ಹಳ್ಳಿಗೆ ಹೋಗುವ ಅವರು, ತಂಬಿಗೆ ಹಿಡಿದು ಕತ್ತಲಿನಲ್ಲೇ ಬಯಲಿ­ನತ್ತ ಮುಖ ಮಾಡಿದವರಿಗೆ ಅಡ್ಡ ನಿಂತು ಕೈ ಮುಗಿಯುತ್ತಾರೆ; ಶೌಚಾಲಯ­ಗಳನ್ನು ಕಟ್ಟಿಸಿ­ಕೊಂಡು ಬಳಸುವಂತೆ ಕಾಲಿಗೆ ಬಿದ್ದು  ಮನವಿ ಮಾಡುತ್ತಾರೆ.

ಸರ್ಕಾರದಿಂದ ದೊರೆಯುವ ಸವಲತ್ತುಗಳ ಮಾಹಿತಿ ನೀಡು­ತ್ತಾರೆ. ಹಾಗಾಗಿಯೇ ಕೊಪ್ಪಳ ಜಿಲ್ಲೆಯ ಹಳ್ಳಿ­ಗ­ಳಲ್ಲಿ ವೈಯಕ್ತಿಕ ಶೌಚಾಲಯ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಈ ಮೂಲಕ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಮನಸ್ಸು ಮಾಡಿ­ದರೆ ಎಂಥ ಕೆಲಸವನ್ನಾದರೂ ಸಾಧಿಸ­ಬಹುದು ಎಂಬುದನ್ನು ಹುಲಿಗಿ ತೋರಿಸಿ­ಕೊಟ್ಟಿ­ದ್ದಾರೆ.  ಇದು ಚುನಾಯಿತ ಪ್ರತಿನಿಧಿ­ಯೊಬ್ಬರ ಜನಪರ ಕಾಳಜಿಯನ್ನೂ ಎತ್ತಿ ತೋರುತ್ತದೆ. ಜತೆಗೆ ಜನತೆಯ ಕಣ್ತೆರೆಸುವ ಕಾರ್ಯವೂ ಆಗಿದೆ.

ಕೊಪ್ಪಳ ತಾಲ್ಲೂಕಿನ ಹುಲಿಗಿ ಗ್ರಾಮದವ­ರಾದ ಜನಾರ್ದನ, ಹಳ್ಳಿ ಪರಿಸರದಲ್ಲಿಯೇ ಬೆಳೆದವರು. ಮೂಲತಃ ಕೃಷಿ ಕುಟುಂಬದವ­ರಾದರೂ ಸರಕು ಸಾಗಾಟ ವ್ಯವಹಾರದಲ್ಲೂ ಇದ್ದಾರೆ. ಬಿ.ಎ ವರೆಗೆ ಓದಿದ್ದರೂ ಪದವಿ ಪೂರ್ಣ­ವಾಗಿಲ್ಲ. ಒಮ್ಮೆ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಸೋಲು ಅನುಭವಿಸಿದ್ದಾರೆ.

ಆದರೆ ಜನರ ಸೇವೆ ಮಾಡಬೇಕು ಎಂಬ ತುಡಿತ ಅವರನ್ನು ಮನೆಯಲ್್ಲಿಯೇ ಕೂರಲು ಬಿಡಲಿಲ್ಲ. ಜಿಲ್ಲಾ ಪಂಚಾಯ್ತಿ ಚುನಾವಣೆ­ಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದರು. ರಾಜಕೀಯ ಮೇಲಾಟದಲ್ಲಿ ಕಳೆದ ಜೂನ್‌ನಲ್ಲಿ ಅವರಿಗೆ ಅಧ್ಯಕ್ಷ ಸ್ಥಾನವೂ ಒಲಿದು ಬಂತು. ಕಾಂಗ್ರೆಸ್‌ ಕೇವಲ ಒಂಬತ್ತು ಸದಸ್ಯರನ್ನು ಹೊಂದಿದ್ದರೂ ಅನ್ಯ ಪಕ್ಷಗಳ ಸದಸ್ಯರ ಬೆಂಬಲದಿಂದ ಗೆಲುವು ಸಾಧಿಸಿತು.

ಗ್ರಾಮಗಳಲ್ಲಿ ಸ್ವಚ್ಛತೆ ಕಾಪಾಡುವುದು; ಪ್ಲಾಸ್ಟಿಕ್‌ ಪ್ರತ್ಯೇಕಿಸಿ ತ್ಯಾಜ್ಯ ಸಂಗ್ರಹಿಸುವುದು; ಅದನ್ನು ಎರೆಗೊಬ್ಬರವಾಗಿ ಪರಿವರ್ತಿಸುವ ಘಟಕ ಸ್ಥಾಪಿಸುವ ಮೂಲಕ ಗ್ರಾಮೀಣ ಪ್ರದೇಶದಲ್ಲಿ ನೈರ್ಮಲೀಕರಣದ ಪರಿಕಲ್ಪನೆ ಹೊಂದಿರುವ ಹುಲಿಗಿ, ವಿಶೇಷವಾಗಿ ಶೌಚಾಲಯ ನಿರ್ಮಾಣಕ್ಕೆ ಹೆಚ್ಚು ಒತ್ತು­ಕೊಟ್ಟು ಜಾಗೃತಿ ಮೂಡಿಸುತ್ತಿದ್ದಾರೆ. ಇದು ಮೆಚ್ಚುವಂತಹ ಕಾರ್ಯ.

ಸ್ವಾತಂತ್ರ್ಯ ದಿನಾ­ಚರಣೆ­ಯಂದು ಹುಲಿಗಿ ಗ್ರಾಮದಲ್ಲಿ ಸ್ವಚ್ಛತಾ ಕಾರ್ಯಕ್ರಮಕ್ಕೆ ಪುಟ್ಟದಾಗಿ ಚಾಲನೆ ನೀಡಿದರು. ಆ ಗ್ರಾಮವನ್ನೇ ಪೈಲಟ್‌ ಗ್ರಾಮ­-ವಾಗಿ ಆಯ್ಕೆ ಮಾಡಿಕೊಂಡು ತಮ್ಮ ಪರಿಕಲ್ಪನೆ­ಗಳನ್ನು ಜಾರಿಗೊಳಿಸಿದರು. ಈಗ ಜಿಲ್ಲೆಗೆ ವಿಸ್ತರಿಸುವ ಮಹತ್ವಾಕಾಂಕ್ಷೆ ಹೊಂದಿದ್ದಾರೆ.

ಕಡಿಮೆ ವೆಚ್ಚದಲ್ಲಿ ಮತ್ತು ತ್ವರಿತವಾಗಿ ವೈಯಕ್ತಿಕ ಶೌಚಾಲಯಗಳನ್ನು ನಿರ್ಮಿಸುವ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಅದನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಮುಂದಾ­­ಗಿದ್ದಾರೆ. ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಜಿಲ್ಲೆಯಲ್ಲಿ ಇದೇ ಮಾರ್ಚ್‌ ಅಂತ್ಯದ ವೇಳೆಗೆ ಒಂದು ಲಕ್ಷ ಶೌಚಾಲಯ­ಗಳನ್ನು ನಿರ್ಮಿಸುವ ಗುರಿ ಹೊಂದಿದ್ದಾರೆ. 

ಹುಬ್ಬಳ್ಳಿ ಮೂಲದ ಸಂಸ್ಥೆಯೊಂದು ಅರ್ಧ ಗಂಟೆ ಅವಧಿಯಲ್ಲಿ ಶೌಚಾಲಯ ನಿರ್ಮಿಸಲು ಮುಂದೆ ಬಂದಿದೆ. ನಿರ್ಮಲ ಭಾರತ ಯೋಜನೆ­ಯಡಿ ಪ್ರತಿ ಶೌಚಾಲಯ ನಿರ್ಮಾಣಕ್ಕೆ ಸರ್ಕಾರ ಕೊಡ ಮಾಡುವ ₨ 10,000 ಬಳಸಿಕೊಳ್ಳಲಾಗುತ್ತಿದೆ.

ಆರು ತಿಂಗಳಿನಿಂದಲೂ ಸ್ವಚ್ಛತೆಯನ್ನೇ ಜಪವಾಗಿಸಿಕೊಂಡಿದ್ದಾರೆ ಹುಲಿಗಿ. ಮಕ್ಕಳಿಗೆ ಈ ವಿಷಯವನ್ನು ಮನವರಿಕೆ ಮಾಡಿಕೊಟ್ಟರೆ ಅವರಿಂದ ಪೋಷಕರ ಮೇಲೆ ಪರಿಣಾಮ ಬೀರು­ವುದು ಸುಲಭ ಎಂಬುದನ್ನು ಅರಿತು­ಕೊಂಡು ಪ್ರತಿನಿತ್ಯ ಪ್ರಾರ್ಥನೆ ಸಂದರ್ಭದಲ್ಲಿ ಶಾಲೆಗಳಲ್ಲಿ ಶಿಕ್ಷಕರು ಇದನ್ನೇ ಬೋಧಿಸಬೇಕು ಎಂದು ಸೂಚಿಸಿದ್ದಾರೆ. ತಾವೂ ಹಳ್ಳಿ ಹಳ್ಳಿ ತಿರುಗುತ್ತಿದ್ದಾರೆ.

ಮಹಾತ್ಮ ಗಾಂಧೀಜಿಯವರ ಪುಣ್ಯ ತಿಥಿಯಂದು ಹಳ್ಳಿಯೊಂದರಲ್ಲಿ ಮಹಿಳೆ­ಯರ ಕಾಲಿಗೆ ಎರಗಿ ಮನೆಯಲ್ಲಿಯೇ ಶೌಚಾಲಯ ನಿರ್ಮಿಸಿಕೊಳ್ಳುವಂತೆ ಬೇಡುತ್ತಿದ್ದ ಚಿತ್ರಗಳು ಪತ್ರಿಕೆಗಳಲ್ಲಿ ಪ್ರಕಟವಾದಾಗ ಜಿಲ್ಲೆಯಲ್ಲಿ ಒಂದು ರೀತಿ ವಿದ್ಯುತ್‌ ಸಂಚಾರ­ವಾದಂತಾಯಿತು.

ಅಧ್ಯಕ್ಷರ ಮನವಿಗೆ ಜನರೂ ಸ್ಪಂದಿಸ­ಲಾ­ರಂಭಿ­ಸಿದ್ದಾರೆ. ಅವಿಶ್ವಾಸ ನಿರ್ಣಯ ಮಂಡಿಸಿ ಹುಲಿಗಿಯವರನ್ನು ಪದಚ್ಯುತಿಗೊಳಿಸ­ಬೇಕು ಎಂದು ಆರಂಭದ ದಿನಗಳಲ್ಲಿ ಯೋಚಿ­ಸಿದ್ದ ಜಿಲ್ಲಾ ಪಂಚಾಯ್ತಿ ಸದಸ್ಯರೂ ಈಗ ಅವರಿಗೆ ಸಹಕಾರ ನೀಡುತ್ತಿದ್ದಾರೆ. ಯಲ­ಬುರ್ಗಾ ತಾಲ್ಲೂಕು ಹಿರೇವಂಕಲ­ಕುಂಟಾ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಶಿವಮ್ಮ ಗಾಳೆಪ್ಪ ಓಜನ­ಹಳ್ಳಿ ಮತ್ತು ಅವರ ಪತಿ ಗ್ರಾಮ ಪಂಚಾಯ್ತಿ ಸದಸ್ಯ ಗಾಳೆಪ್ಪ ಓಜನಹಳ್ಳಿ ಅವರೂ ಜನರ ಮನವೊಲಿಸಲು ಮುಂದಾಗಿ­ದ್ದಾರೆ. ಹುಲಿಗಿ­ಯವ­ರಂತೆಯೇ ಕಾಲಿಗೆ ಬೀಳುವ, ಬೇಡುವ ಕಾರ್ಯದಲ್ಲಿ ತೊಡಗಿ­ದ್ದಾರೆ. ಜಿಲ್ಲೆಯಲ್ಲಿ ಸ್ವಚ್ಛತೆಯ ಆಂದೋಲನ ಪ್ರಬಲವಾಗಿ ಸಾಗುತ್ತಿರುವುದಕ್ಕೆ ಇದು ನಿದರ್ಶನ.

ಇನ್ನೂ ಶೌಚಾಲಯ ನಿರ್ಮಿಸಿಕೊಳ್ಳದ ಮತ್ತು ನಿರ್ಮಿಸಿಕೊಂಡಿದ್ದರೂ ಬಳಸದವರಿಗೆ ಮನವರಿಕೆ ಮಾಡಿಕೊಡಲು ಈಗ ಹೊಸ­ದೊಂದು ಅಭಿಯಾನವನ್ನು ಹುಲಿಗಿ ಹಮ್ಮಿ­ಕೊಂಡಿ­­ದ್ದಾರೆ. ತಂಬಿಗೆ ಇಟ್ಟುಕೊಂಡು ಬಯಲಿನಲ್ಲಿ ಶೌಚಕ್ಕೆ ಕೂರುವವರನ್ನು ಗ್ರಾಮ ಪಂಚಾಯ್ತಿ ಸಿಬ್ಬಂದಿ ಸಿೀಟಿ ಊದಿ ಎಬ್ಬಿಸುವ ಅಭಿಯಾನ ಅದು.

ಅಂದರೆ ಗ್ರಾಮ ನೈರ್ಮಲ್ಯ­ವನ್ನು ಹುಲಿಗಿಯವರು ಎಷ್ಟು ಗಂಭೀರ­ವಾಗಿ ಪರಿಗಣಿಸಿದ್ದಾರೆ ಎಂಬುದು ಅರಿವಾಗುತ್ತದೆ. ಇದರಿಂದ ವೈಯಕ್ತಿಕವಾಗಿ ಹುಲಿಗಿಯವರಿಗೆ ಏನೇನೂ ಪ್ರಯೋಜನವಿಲ್ಲ. ಬದಲಿಗೆ ಊರಿನ ಜನರು ಆರೋಗ್ಯ­ವಾಗಿ­ರ­ಬೇಕು ಎಂಬ ಕಳಕಳಿ ಇದರ ಹಿಂದಿದೆ.  ಮಹಿಳೆಯರು ಶೌಚಕ್ಕೆ ಬಯಲಿಗೆ ಹೋಗು­ವು­ದ­ರಿಂದ ಆಗುವ ತೊಂದರೆ­ ತಪ್ಪಿಸಬೇಕು ಎಂಬ ಕಾಳಜಿ ಇದೆ. ಇದನ್ನು ಜನರೂ ಅರ್ಥ ಮಾಡಿಕೊಳ್ಳಬೇಕು.

ಒಟ್ಟಿನಲ್ಲಿ 2014 ಮಾರ್ಚ್‌ 31ರ ಒಳಗೆ ಕೊಪ್ಪಳ ಜಿಲ್ಲೆ ಬಯಲು ಶೌಚ ಮುಕ್ತ ಜಿಲ್ಲೆ­ಯಾ­ಗಬೇಕು ಎಂಬುದು ಅವರ ಗುರಿ. ಈ ಗುರಿಯ ಅನುಷ್ಠಾನಕ್ಕಾಗಿ ಈಗಾಗಲೇ ತಾಲ್ಲೂಕು ಪಂಚಾಯ್ತಿ, ಗ್ರಾಮ ಪಂಚಾಯ್ತಿ ಸದಸ್ಯರಿಗೆ ಕಾರ್ಯಾಗಾರಗಳಾಗಿವೆ. ಯೋಜನೆ ಅನುಷ್ಠಾನದ ಜವಾಬ್ದಾರಿಯನ್ನು ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳಿಗೆ (ಪಿಡಿಒ) ಒಪ್ಪಿಸಿದ್ದಾರೆ. ಹೆಚ್ಚು ಶೌಚಾಲಯಗಳನ್ನು ನಿರ್ಮಿಸಿದ ಗ್ರಾಮ ಪಂಚಾಯ್ತಿಗೆ ನಗದು ಬಹುಮಾನವನ್ನೂ ಘೋಷಿಸಿದ್ದಾರೆ.

ಸಣ್ಣ ಪುಟ್ಟ ಕಾಮಗಾರಿಗಳಿಗೂ ಗುದ್ದಲಿ ಪೂಜೆ, ಉದ್ಘಾಟನೆ ನೆರವೇರಿಸಿ, ಮುಂಜಾನೆ ಪತ್ರಿಕೆ­ಗಳಲ್ಲಿ ಚಿತ್ರ ಪ್ರಕಟವಾಗಬೇಕು ಎಂದು ಬಯಸುವ, ಬಣ್ಣ ಬಣ್ಣದ ಮಾತುಗಳ­ನ್ನಾ­ಡುತ್ತಾ ಜನರನ್ನು ಮರಳು ಮಾಡಿ ತಮ್ಮ ಹಿತ ಕಾಪಾಡಿಕೊಳ್ಳುವುದರಲ್ಲಿಯೇ ಕಾಲಕಳೆ­ಯುವ ರಾಜಕಾರಣಿಗಳ ಕಣ್ಣನ್ನೂ ತೆರೆಸುವ ಕಾರ್ಯವನ್ನು ಹುಲಿಗಿ ಮಾಡಿದ್ದಾರೆ.

ಪ್ರಚಾರ­ದಿಂದ ದೂರ ಉಳಿಯಲು ಇಚ್ಛಿಸುವ ಹುಲಿಗಿ, ನಸುಕಿನಲ್ಲಿ ಯಾವ ಊರಿಗೆ ಹೋಗುತ್ತೇನೆ ಎಂಬ ಗುಟ್ಟನ್ನು ಯಾರಿಗೂ ಬಿಟ್ಟು­ಕೊಡುವುದಿಲ್ಲ.

ಕೊಪ್ಪಳ ಜಿಲ್ಲಾ ಪಂಚಾಯ್ತಿ ಅಧ್ಯಕ್ಷರ ಮನೋಭಾವವನ್ನೇ ರಾಜ್ಯದ ಇತರ 29 ಜಿಲ್ಲಾ ಪಂಚಾಯ್ತಿ ಅಧ್ಯಕ್ಷರೂ ಮೈಗೂಡಿಸಿ­ಕೊಂಡು, ಈ ಕೆಲಸವನ್ನು ಆರಂಭಿಸಿದರೆ ಕನಿಷ್ಠ ಇನ್ನೊಂದು ವರ್ಷದಲ್ಲಾದರೂ ಕರ್ನಾಟಕ­ವನ್ನು ನಿರ್ಮಲ ಕರ್ನಾಟಕವನ್ನಾಗಿಸಬಹುದು. ಆ ಇಚ್ಛಾಶಕ್ತಿ ಇರಬೇಕಲ್ಲ? ಅಧಿಕಾರಕ್ಕೆ ಬರುವವರೆಗೆ ಜನರ ಸೇವೆಯೇ ಜನಾರ್ದನ ಸೇವೆ ಎನ್ನುವ ರಾಜಕಾರಣಿಗಳು ನಂತರ ಸ್ವಾರ್ಥ ಸಾಧನೆಗೆ ಇಳಿಯುವುದರಿಂದ  ಹಳ್ಳಿಗಳ ಸ್ಥಿತಿ ಬದಲಾಗಿಲ್ಲ.

ಅಲ್ಲದೇ, ನಮ್ಮಲ್ಲಿ ರಾಜಕಾರಣಿಗಳಿಗೆ ಗ್ರಾಮೀಣ ಪ್ರದೇಶದ ಅಭಿವೃದ್ಧಿ ಎಂದರೆ ‘ಬಾಕ್ಸ್‌ ಡ್ರೈನೇಜ್’ ಮತ್ತು ‘ರಸ್ತೆ ನಿರ್ಮಾಣ’ ಎರಡೇ ಕಾಣುವುದು. ಇದರ ಜತೆಗೆ ಸಂಸದರ ಮತ್ತು ಶಾಸಕರ ಕ್ಷೇತ್ರಾಭಿವೃದ್ಧಿ ಅನುದಾನದಿಂದ ಒಂದಿಷ್ಟು ಸಮು­ದಾಯ ಭವನ ನಿರ್ಮಾಣ, ಚುನಾವಣೆ ಸಂದರ್ಭ­ದಲ್ಲಿ ದೇವಾಲಯಗಳನ್ನು ದುರಸ್ತಿ­ಪಡಿಸಲು ಅಥವಾ ಹೊಸದಾಗಿ ಕಟ್ಟಿಕೊಳ್ಳಲು ಸ್ವಂತ ರೊಕ್ಕ ಕೊಡುವುದು. ಇದು ರಾಜ­ಕಾರಣಿ­ಗಳಿಗೆ ಆದ್ಯತಾ ವಲಯದ ಅರಿವಿಲ್ಲ ಎಂಬು­ದನ್ನು ಸಾರುತ್ತದೆ. ಇಂತಹವರು ಹುಲಿಗಿ­ಯ­ವರ ಚಿಂತನೆಯನ್ನು ಮೈಗೂಡಿಸಿ­ಕೊಳ್ಳಬೇಕು.

ನಗರ ಪ್ರದೇಶಗಳಲ್ಲಿ ತಾಯಂದಿರು ತಮ್ಮ ಪುಟ್ಟ ಮಕ್ಕಳಿಗೆ ಬಾಲ್ಯದಲ್ಲಿಯೇ ಶೌಚಾಲಯ ಬಳಕೆ ಕಲಿಸುವುದನ್ನು ಬಿಟ್ಟು, ತಾವೇ ನಿಂತು ಬೀದಿಯಲ್ಲಿ ಮಕ್ಕಳಿಗೆ ಶೌಚ ಮಾಡಿಸುತ್ತಾರೆ. ಇಂಥ ತಾಯಂದಿರನ್ನು ತಿದ್ದುವುದು ಹೇಗೆ? ಒಂದು ಕೈಯಲ್ಲಿ ತಂಬಿಗೆ ಇನ್ನೊಂದು ಕೈಯಲ್ಲಿ ಮೊಬೈಲ್‌ ಫೋನ್‌ ಹಿಡಿದು ಶೌಚಕ್ಕೆ ಬಯಲಿಗೆ ಹೋಗುವ ಜನರಿಗೆ ಯಾವ ರೀತಿ ತಿಳಿಹೇಳ­ಬೇಕು?

ಎಲ್ಲಕ್ಕಿಂತ ಆರೋಗ್ಯಕರ ಬದುಕು ಮುಖ್ಯ ಎಂಬುದನ್ನು ಜನರು ಅರ್ಥ ಮಾಡಿಕೊಳ್ಳಬೇಕು. ಮನ ಪರಿವರ್ತನೆ ಮಾಡಿಕೊಂಡು ಶೌಚಾಲಯ ಬಳಸುವುದನ್ನು ರೂಢಿಸಿಕೊಳ್ಳಬೇಕು. ಆಗ ಮಾತ್ರ ನಿರ್ಮಲ ಭಾರತ ನಿರ್ಮಾಣ ಸಾಧ್ಯವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT