ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೊಬೆಲ್ ಸಾಹಿತ್ಯ ಪ್ರಶಸ್ತಿಯ ಹಿಂದು ಮುಂದು

Last Updated 13 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಈ ಬಾರಿ ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿ ಬಂದುದನ್ನು ನಾವು ಸಂಭ್ರಮಿಸುತ್ತಿದ್ದಾಗ ಇನ್ನೊಂದು ಸಂತಸದ ಸುದ್ದಿ ಭಾರತೀಯರಾದ ನಮಗೆ ಬಂತು. ಭಾರತದ ಕೆಲವು ಗಣ್ಯ ಲೇಖಕರು ನೊಬೆಲ್ ಪ್ರಶಸ್ತಿಯ ಕೊನೆಯ ಸುತ್ತಿನಲ್ಲಿ ಪರಿಗಣಿಸಲ್ಪಡುತ್ತಿದ್ದಾರೆಂಬ ಸಮಾಚಾರ ನಮ್ಮಲ್ಲಿನ ಆಶಾವಾದಿತ್ವವನ್ನು ಕೆರಳಿಸಿತು.

ಬಂಗಾಳದ ಮಹಾಶ್ವೇತಾದೇವಿ, ರಾಜಸ್ತಾನಿ, ಹಿಂದಿ ಲೇಖಕ ವಿಜಯದಾನ್ ದೇತಾ, ಮಲಯಾಳಿ ಕವಿ ಕೆ. ಸಚ್ಚಿದಾನಂದನ್ ಈ ಮೂರು ಹೆಸರುಗಳು ಕೇಳಿ ಬಂದರೂ ಸಚ್ಚಿದಾನಂದನ್ ಅವರ ಬಗ್ಗೆ ಹೆಚ್ಚಿನ ನಿರೀಕ್ಷೆಗಳಿದ್ದವು. ಕೇರಳದ ಮಾಧ್ಯಮಗಳಲ್ಲಿ ಮತ್ತು ಶ್ರೀಸಾಮಾನ್ಯರ ನಡುವೆ ಸಂಭ್ರಮದ ವಾತಾವರಣ ಉಂಟಾಯಿತು. ಅದೇ ಸಮಯದಲ್ಲಿ ಇನ್ನೂ ಯಾರಿಗೆ ಈ ಉನ್ನತ ಪ್ರಶಸ್ತಿ ಹಿಂದೆ ಸಿಗಬೇಕಿತ್ತು, ಮುಂದೆ ಸಿಗಬೇಕು ಅನ್ನೋದರ ಚರ್ಚೆಯೂ ಶುರುವಾಯಿತು. ಕುರಿತೋದಿತ ಸಾಹಿತ್ಯಾಭಿಮಾನಿಗಳ ಜೊತೆಜೊತೆಗೆ ಕುರಿತೋದದ ಸಾಮಾನ್ಯರು ಮತ್ತು ಕುರಿತೋದುವುದನ್ನು ನಿಲ್ಲಿಸಿರುವ ಸಾಹಿತ್ಯದ ಗಣ್ಯ ಪಳೆಯುಳಿಕೆಗಳೂ ಈ ವಿವಾದದಲ್ಲಿ ತೊಡಗಿದರು. ಆದರೆ ನೊಬೆಲ್ ಸಂಸ್ಥೆಯ ಆಖೈರು ತೀರ್ಮಾನ ಈ ಎಲ್ಲ ನಿರೀಕ್ಷೆ ಮತ್ತು ಚರ್ಚೆಗಳ ಮೇಲೆ ತೆರೆ ಎಳೆಯಿತು.

ನೊಬೆಲ್ ಪ್ರಶಸ್ತಿಯ ಕೊನೆ ಪಟ್ಟಿಯಲ್ಲಿ ಹೆಸರು ನುಸುಳಿಸಿದ ಮಾತ್ರಕ್ಕೇ ಪ್ರಶಸ್ತಿ ಸಿಕ್ಕಿಬಿಡಬಹುದೆಂಬ ಗ್ಯಾರಂಟಿಯೇನೂ ಇಲ್ಲ ಎಂಬ ಸರಳ ಸತ್ಯ ಸ್ಪಷ್ಟವಾಗಿ ಗೊತ್ತಾಗತೊಡಗಿದೆ. ಕಮಲಾದಾಸ್ ಅವರ ಹೆಸರು ಮೂವ್ವತ್ತು ಬಾರಿ ಪರಿಗಣನೆಯಲ್ಲಿತ್ತಂತೆ. ಅಷ್ಟೇ ಅಲ್ಲದೆ, ಪಟ್ಟಿಯಲ್ಲಿರುವ ಹೆಸರುಗಳಾಗಲಿ, ಆ ಹೆಸರುಗಳಿಗೆ ಪಟ್ಟಿಯಲ್ಲಿ ದೊರಕಿರುವ ಸ್ಥಾನಗಳಾಗಲೀ ನಿರ್ವಿವಾದವಲ್ಲ ಎನ್ನುವುದೂ ಗೋಚರವಾಗುತ್ತಿದೆ. ಇಂಥಾ ದೊಡ್ಡ ಪ್ರಶಸ್ತಿಯ ನಿಷ್ಪಕ್ಷಪಾತ ದೃಷ್ಟಿಯ ಬಗೆಗೂ ಪ್ರಶ್ನೆಗಳು ಏಳುತ್ತಿವೆ. ಉದಾಹರಣೆಗೆ ಭಾರತದಂಥ ಸಾಹಿತ್ಯಶ್ರೀಮಂತ ರಾಷ್ಟ್ರಕ್ಕಾಗಿರುವ ಅನ್ಯಾಯವನ್ನೇ ತೆಗೆದುಕೊಳ್ಳೋಣ. ವಿಜ್ಞಾನದಲ್ಲಿ ಭಾರತೀಯರಿಗೆ ಸಾಕಷ್ಟು ಪ್ರಶಸ್ತಿಗಳು ಬಂದಿವೆಯಾದರೂ, ಭಾರತೀಯ ಸಾಹಿತ್ಯಕ್ಕೆ ಸಿಕ್ಕ ಕೊನೆಯ ಪ್ರಶಸ್ತಿ ರವೀಂದ್ರನಾಥ ಟ್ಯಾಗೋರರಿಗೆ, 1912ರಲ್ಲಿ. ಎಷ್ಟೊಂದು ಭಾಷೆಗಳಲ್ಲಿ ಸಮೃದ್ಧವಾಗಿರುವ ಭಾರತೀಯ ಸಾಹಿತ್ಯದಲ್ಲಿ ಆ ನಂತರ ಯಾರೂ ನೊಬೆಲ್ ಕಣ್ಣಿಗೆ ಬೀಳಲಿಲ್ಲವೇ? ಅಲ್ಲದೆ, ಈ ವರೆಗಿನ ನೊಬೆಲ್ ಸಾಹಿತ್ಯ ಪ್ರಶಸ್ತಿ ವಿಜೇತರ ಪಟ್ಟಿಯನ್ನು ಸೋಸಿ ನೋಡಿದರೆ ಪಶ್ಚಿಮೇತರ ಬರಹಗಾರರಿಗೆ ಸಿಕ್ಕಿರುವ ಸಾಹಿತ್ಯ ಪ್ರಶಸ್ತಿಗಳು ಬಹಳ ಕಡಿಮೆ. ನೈಜೀರಿಯಾದ ಶ್ರೇಷ್ಠ ನಾಟಕಕಾರ ವೊಲೆ ಶೊಯಿಂಕಾಗೆ ಈ ಪ್ರಶಸ್ತಿ ಸಿಕ್ಕಾಗ ಆಫ್ರಿಕನ್ ಬರಹಗಾರರ ಬಗ್ಗೆ ನೊಬೆಲ್ ಕಮಿಟಿಯ ತಾತ್ಸಾರವನ್ನು ಆತ ತನ್ನ ಪ್ರಶಸ್ತಿ ಸ್ವೀಕಾರ ಭಾಷಣದಲ್ಲಿ ಲೇವಡಿ ಮಾಡಿದ್ದ. ಅವನು ಹೇಳಿದ ಪ್ರಕಾರ ಪ್ರಶಸ್ತಿ ಸ್ಥಾಪನೆಯಾದ 86 ವರ್ಷಗಳ ಬಳಿಕ ಒಬ್ಬ ಕರಿಯನಿಗೆ ತನಗೆ ಈ ಪ್ರಶಸ್ತಿ ಸಿಕ್ಕಿದ್ದರಿಂದ ಇದಕ್ಕೆ ಪ್ರತಿಯಾಗಿ ಕರಿಯರೂ ಒಂದು ಪ್ರಶಸ್ತಿಯನ್ನು ಸ್ಥಾಪನೆ ಮಾಡಿ 86 ವರ್ಷಗಳ ಬಳಿಕ ಒಬ್ಬ ಬಿಳಿಯನಿಗೆ ಆ ಪ್ರಶಸ್ತಿ ಕೊಡಬೇಕು.

ಆಫ್ರಿಕಾ, ಏಷಿಯಾ, ದಕ್ಷಿಣ ಅಮೆರಿಕಾಗಳಿಗೆ ನೊಬೆಲ್ ಸಮಿತಿ ಅಪೇಕ್ಷಿತ ಮಟ್ಟದಲ್ಲಿ ಗಮನ ನೀಡಿಲ್ಲವೆಂಬುದು ಸೂರ್ಯ ಸ್ಪಷ್ಟ. ಅಷ್ಟೇ ಅಲ್ಲ, ಯೂರೋಪಿನಲ್ಲೇ ಯುಗ ಪ್ರವರ್ತಕ ಬರಹಗಾರರಲ್ಲಿ ಹಲವರು ನೊಬೆಲ್ ಪ್ರಶಸ್ತಿಯಿಂದ ವಂಚಿತರಾಗಿದ್ದಾರೆ. ನಾರ್ವೆಯ ಇಬ್ಸನ್, ರಷ್ಯಾದ ತೋಲ್ಸ್‌ತೋಯ್, ಮಯಕೋವಸ್ಕಿ, ಅನ್ನಾ ಆಖಮತೋವಾ, ಜರ್ಮನ್‌ನಲ್ಲಿ ಬರೆದ ಕಾಫ್ಕ, ಬ್ರೆಕ್ಟ್, ಸ್ಪೇನ್‌ನ ಲೋರ್ಕಾ, ರಾಫೇಲ್ ಆಲ್ಬೆರ್ತಿ, ಹಂಗರಿಯ ಫರೆನ್ ಯೂಹಸ್, ಸ್ಲೊವೇನಿಯದ ಮಿರೊಸ್ಲಾವ್ ಹೊಲುಬ್- ಈ ಎಲ್ಲ ಗಣ್ಯರೂ ನೊಬೆಲ್ ಪ್ರಶಸ್ತಿಯ ಹೊರಗೇ ಉಳಿದಿದ್ದಾರೆ. ಇಬ್ಸನ್ ಆಧುನಿಕ ಜಗತ್ತಿನ ನಾಟಕಕಾರರಲ್ಲಿ ಅಗ್ಗಳ. ಅವನ ಪ್ರೇರಣೆಯಿಂದ ಅವನಷ್ಟು ಪ್ರತಿಭೆಯಿಲ್ಲದ ಜಾರ್ಜ್ ಬರ್ನಾಡ್ ಶಾ ಇಬ್ಸನ್ನನ ಕಲಾತ್ಮಕ ಅಥವಾ ನೈತಿಕ ಸೂಕ್ಷ್ಮತೆಗಳಿರದ ವಾಚಾಳಿ ನಾಟಕಗಳನ್ನು ಬರೆದ. ಆದರೆ ನೊಬೆಲ್ ಗೌರವ ಸಿಕ್ಕಿದ್ದು ಶಾನಿಗೇ ಹೊರತು ಇಬ್ಸನ್ನನಿಗಲ್ಲ. ಗೆಯ್ದು ಬೆಳೆಸಿದವನಿಗಿಂತ ಅಟ್ಟು ಹಾಕಿದವನೇ ದೊಡ್ಡವನಾದ.

ನೊಬೆಲ್ ಪ್ರಶಸ್ತಿಯ ಜನ್ಮಸ್ಥಾನವಾದ ಸ್ವೀಡನ್ನಿನಲ್ಲೇ ಹಲವು ಉತ್ತಮ ಬರಹಗಾರರು ನೊಬೆಲ್ ಪ್ರಶಸ್ತಿಯಿಂದ ವಂಚಿತರಾಗಿದ್ದಾರೆ. ಸ್ವೀಡನ್ನಿನ ಮಹಾಕವಿ ಗುನ್ನಾರ್ ಎಕಲಾಫ್‌ಗೆ ನೊಬೆಲ್ ಪ್ರಶಸ್ತಿ ದೊರಕಲಿಲ್ಲ. ಆಗಸ್ಟ್ ಸ್ಟ್ರಿಂಡ್‌ಬರ್ಗನದು ಅತ್ಯುತ್ತಮ ಉದಾಹರಣೆ. ಇಂಗ್ಲೆಂಡಿಗೆ ಶೇಕ್ಸ್‌ಪಿಯರ್ ಹೇಗೋ ಹಾಗೆ ಸ್ವೀಡನ್‌ಗೆ ಸ್ಟ್ರಿಂಡ್ ಬರ್ಗ್. ಆತ ಸ್ವೀಡನ್ನಿನ ಸಾಂಸ್ಕೃತಿಕ ಪ್ರತಿಭೆಯ ಹೆಗ್ಗುರುತು. ಸ್ವೀಡನ್ನಿನ ಹೊರಗೆ ಕೇವಲ ನಾಟಕಕಾರನೆಂದು ಪ್ರಸಿದ್ಧನಾದರೂ ಸ್ವೀಡನ್ನಿನಲ್ಲಿ ಅವನ ಬಹುಮುಖ ಪ್ರತಿಭೆ ಎಲ್ಲರಿಗೂ ಪರಿಚಿತ. ಅವನ ಕತೆ, ಕಾದಂಬರಿಗಳು ಇಂದಿಗೂ ಅಲ್ಲಿ ಅತ್ಯಂತ ಜನಪ್ರಿಯ. ಅಲ್ಲದೆ ಅವನು ಇತಿಹಾಸಕಾರ, ತತ್ವಜ್ಞಾನಿ, ಚೀಣೀ ವಿದ್ವಾಂಸ, ಚಿತ್ರಕಾರ. ಅವನ ಒಟ್ಟು ಕೃತಿಗಳ 57 ಸಂಪುಟಗಳ ಪ್ರಕಟನೆಯನ್ನು ಸ್ವೀಡನ್ನಿನ ಸರ್ಕಾರ ಹಮ್ಮಿಕೊಂಡಿದ್ದು, ಇಲ್ಲಿಯವರೆಗೆ 37 ಸಂಪುಟಗಳನ್ನು ಮಾತ್ರ ಪ್ರಕಟಿಸಿದೆ. ಯೂರೋಪಿನ ಸಂದರ್ಭದಲ್ಲೂ ಅವನ ಸಾಧನೆ ಅನುಪಮವಾದುದು. ಆಧುನಿಕ ನಾಟಕ ಮತ್ತು ರಂಗಭೂಮಿಗಳಲ್ಲಿ ಇಪ್ಪತ್ತನೆಯ ಶತಮಾನದಲ್ಲಿ ಘಟಿಸಿದ ಎಲ್ಲ ಬೆಳವಣಿಗೆಗಳ, ಬದಲಾವಣೆಗಳ, ಚಳವಳಿಗಳ ಕುಂಡಲಿ ಸ್ಟ್ರಿಂಡ್‌ಬರ್ಗನ ನಾಟಕ ಕೃತಿ ಸಮುಚ್ಚಯದಲ್ಲಿ ಕಾಣ ಸಿಗುತ್ತದೆ. ಆದರೆ 1909ರಲ್ಲಿ ನೊಬೆಲ್ ಪ್ರಶಸ್ತಿ ದೊರಕಿದ್ದು ಸ್ವೀಡನ್ನಿನ ಸಲ್ಮಾ ಲಾಗೆರ್ಲಾ್ ಎಂಬ ಸಾಧಾರಣ ಕಾದಂಬರಿಕಾರ್ತಿಗೆ. ಇದರಿಂದ ಸಿಟ್ಟಿಗೆದ್ದ ಸ್ಟ್ರಿಂಡ್‌ಬರ್ಗ್ ತನ್ನ ಅಂಕಣಗಳಲ್ಲಿ ಅವಳ ಬಗ್ಗೆ, ಪ್ರಶಸ್ತಿ ನೀಡುವರ ಬಗ್ಗೆ ರುದ್ರಕೋಪದಿಂದ ವರ್ಷಗಟ್ಟಲೆ ಹರಿಹಾಯುತ್ತಾ ಹೋದ. ಸ್ಟ್ರಿಂಡ್‌ಬರ್ಗ್‌ನನ್ನು ತಮ್ಮ ಪ್ರತಿನಿಧಿಯೆಂದು ಬಗೆದಿದ್ದ ಸೀಡನ್ನಿನ ಕಾರ್ಮಿಕವರ್ಗ ಇದನ್ನು ತನಗಾದ ಅಪಚಾರವೆಂದು ಬಗೆಯಿತು. ಸ್ವೀಡನ್ನಿನ ಎಲ್ಲಾ ಕಾರ್ಮಿಕರೂ ಸ್ವಂತ ಇಚ್ಛೆಯಿಂದ ಹಣ ಸಂಗ್ರಹ ಮಾಡಿ ನೊಬೆಲ್ ಪ್ರಶಸ್ತಿಯವರು ಪುರಸ್ಕೃತರಿಗೆ ನೀಡುವಷ್ಟೇ ಹಣದ ಮೊತ್ತವನ್ನು ತಮ್ಮ ಅಚ್ಚುಮೆಚ್ಚಿನ ಬರಹಗಾರನಿಗೆ ನೀಡಿ ಸನ್ಮಾನಿಸಿದರು. ಇದೊಂದು ಅಪರೂಪದ ಘಟನೆ. ನೊಬೆಲ್‌ನಿಂದ ವಂಚಿತರಾದ ಬೇರೆ ಯಾವ ಬರಹಗಾರರಿಗೂ ಇಂಥ ಭಾಗ್ಯ ದೊರಕಲಿಲ್ಲ. ಉದಾಹರಣೆಗೆ ನಾರ್ವೆಯ ಇಬ್ಸನ್, ಸ್ಟ್ರಿಂಡ್ ಬರ್ಗ್‌ನ ಸಮಕಾಲೀನನಾಗಿದ್ದು ಅವನಷ್ಟೇ ಅಗ್ಗಳನಾಗಿದ್ದರೂ ಬುದ್ಧಿಜೀವಿಗಳಿಗೆ ಪ್ರಿಯನಾಗಿದ್ದನೇ ಹೊರತು ಜನಸಾಮಾನ್ಯರ ಹೃದಯದಲ್ಲಿ ಜಾಗ ಪಡೆದಿರಲಿಲ್ಲ. ಜನತೆಯ ಮನಸ್ಸನ್ನು ಗೆದ್ದುಕೊಂಡರೆ ಯಾವುದೇ ಪ್ರಸಿದ್ಧ ಪುರಸ್ಕಾರಕ್ಕೂ ಕಡಿಮೆಯಿಲ್ಲದ ಮೆಚ್ಚುಗೆ, ಪ್ರೀತಿ ದೊರಕಬಹುದೆಂಬುದನ್ನು ಇಂದಿನ ಬರಹಗಾರರು ಮರೆತಿರುವ ಸಂದರ್ಭದಲ್ಲಿ ಸ್ಟ್ರಿಂಡ್ ಬರ್ಗ್‌ನ ನೆನಪು ಮಾಡಿಕೊಳ್ಳುವ ಅಗತ್ಯವಿದೆ.

ಲೇಖಕರೂ ಕೇವಲ ಮನುಷ್ಯರಾಗಿರುವುದರಿಂದ ಪ್ರಶಸ್ತಿಗಳು ಸಿಗದಿದ್ದಾಗ ನೊಂದುಕೊಳ್ಳುತ್ತಾರೆ, ಕೊರಗುತ್ತಾರೆ, ಕರುಬುತ್ತಾರೆ, ಕಿರುಚುತ್ತಾರೆ. ಸ್ಟ್ರಿಂಡ್‌ಬರ್ಗ್ ಬಹಳ ಕಿರುಚಾಡಿದ್ದ. ಜಪಾನಿನ ಕಾದಂಬರಿಕಾರ ಯಸುನಾರಿ ಕವಾಬಾಟಾಗೆ 1968ರಲ್ಲಿ ನೊಬೆಲ್ ಗೌರವ ಸಿಕ್ಕಾಗ ಜಪಾನಿಗರಿಗೆ ಅದು ಅಷ್ಟು ಸಮಾಧಾನ ತರುವ ಸುದ್ದಿಯಾಗಿರಲಿಲ್ಲ. ಯಾಕೆಂದರೆ, ಇನ್ನೊಬ್ಬ ಪ್ರತಿಭಾವಂತ ಕಾದಂಬರಿಕಾರ ಯುಕಿಯೋ ಮಿಷಿಮಾ, ಕವಾಬಾಟಾಗಿಂತ ಜನಪ್ರಿಯನಾಗಿದ್ದು ಅವನಿಗೇ ಪ್ರಶಸ್ತಿ ಸಿಗಬಹುದೆಂಬ ನಿರೀಕ್ಷೆಯಿತ್ತು. ಆದರೆ ಹಾಗಾಗಲಿಲ್ಲ. ಅಲ್ಲಿಂದ ಕೆಲವೇ ದಿನಗಳಲ್ಲಿ ಮಿಷಿಮಾ ರಾಜಕೀಯ ಕಾರಣಕ್ಕಾಗಿ ಹರಾಕಿರಿ ಮಾಡಿಕೊಂಡು ಅಸುನೀಗಿದ. ಕೆಲವು ವಿದ್ವಾಂಸರ ಪ್ರಕಾರ ತನಗೆ ನೊಬೆಲ್ ಸಿಕ್ಕಲಿಲ್ಲವೆಂಬ ನೋವೂ ಅವನ ಅಕಾಲ ಮರಣಕ್ಕೆ ಕಾರಣವಾಗಿತ್ತು. ಮಿಷಿಮಾನ ಸಂತಾಪಸೂಚಕ ಸಭೆಯಲ್ಲಿ ಮಾತಾಡಿದ ಕವಬಾಟ ಹರಾಕಿರಿ ಆತ್ಮಹತ್ಯಾ ಪದ್ಧತಿ ಜಪಾನಿ ಬೌದ್ಧಧರ್ಮಕ್ಕೆ ವಿರುದ್ಧವಾದುದರಿಂದ ಖಂಡನಾರ್ಹವೆಂದು ವಾದಿಸಿದ. ಆದರೆ ಕೆಲವೇ ವಾರಗಳಲ್ಲಿ ಅವನೂ ಆತ್ಮಹತ್ಯೆ ಮಾಡಿಕೊಂಡ. ಒಬ್ಬ ಸೋತು ಅಸು ನೀಗಿದ; ಇನ್ನೊಬ್ಬ ಗೆದ್ದೂ ಅಸುನೀಗಿದ.

ನೊಬೆಲ್ ಪ್ರಶಸ್ತಿಯ ಇತಿಹಾಸದಲ್ಲಿ ಇನ್ನೂ ಅನೇಕ ವ್ಯಂಗ್ಯಗಳಿವೆಯಾದರೂ ಕೆಲವು ಸಲ ಯೋಗ್ಯರಿಗೂ ಈ ಪ್ರಶಸ್ತಿ ಸಿಕ್ಕಿದೆಯೆನ್ನುವುದನ್ನು ಮರೆಯಲಾಗುವುದಿಲ್ಲ. ಪ್ರಸಿದ್ಧ ಕತೆಗಾರ ಇಾಕ್ ಬೆಷೆವಿಸ್ ಸಿಂಗರ್ ಇಡೀ ಜಗತ್ತಿನಲ್ಲಿ ಕೆಲವೇ ಸಾವಿರ ಜನ ಮಾತಾಡುತ್ತಿದ್ದ ಯಿಡ್ಡಿಶ್ ಭಾಷೆಯಲ್ಲಿ ಬರೆಯುತ್ತಿದ್ದರೂ ಅವನಿಗೆ ನೊಬೆಲ್ ಪ್ರಶಸ್ತಿ ಸಿಕ್ಕಿದ್ದು ಅಭಿನಂದನಾರ್ಹ. ಪೋಲೆಂಡಿನ ಮಹಾಕವಿ ಚೆಸ್ಲಾಮಿಲೋಷ್, ಚಿಲಿಯ ಪಾಬ್ಲೋ ನೆರುದಾ, ಗ್ರೀಸ್ ನ ಜಾರ್ಜ್ ಸೆಫರಿಸ್, ಜರ್ಮನಿಯ ಠಾಮಸ್ ಮನ್, ಆಸ್ಟ್ರೇಲಿಯದ ಪ್ಯಾಟ್ರಿಕ್ ವೈಟ್, ನೈಜೀರಿಯದ ಶೊಯಿಂಕಾ, ದಕ್ಷಿಣ  ಆಫ್ರಿಕದ ಬೆಸ್ಸಿ ಹೆಡ್- ಈ ಎಲ್ಲರೂ  ನೊಬೆಲ್ ಪ್ರಶಸ್ತಿ ಸಿಕ್ಕದಿದ್ದರೂ ಅಷ್ಟೇ ಗಣನೀಯ ಬರಹಗಾರರಾಗಿದ್ದರು.

ಅಲ್ಲದೆ, ನೊಬೆಲ್ ಸಮಿತಿಗೂ ಕೆಲವು ಮಿತಿಗಳಿರುವುದನ್ನು ಮರೆಯಲಾಗದು. ಆ ಸಮಿತಿಯ ಸದಸ್ಯರು ಎಷ್ಟೇ ವೈವಿಧ್ಯಮಯ ಹಿನ್ನೆಲೆಗಳಿಂದ ಬಂದವರಾದರೂ ಜಗತ್ತಿನ ಎಲ್ಲ ಭಾಷೆಗಳನ್ನು ಬಲ್ಲವರಾಗಿರುವುದಿಲ್ಲ. ಆದ್ದರಿಂದ ಅನುವಾದಗಳ ಮೇಲೆ, ಅದೂ ಯೂರೋಪಿನ ಮುಖ್ಯ ಭಾಷೆಗಳಲ್ಲಿ ದೊರಕುವ ಅನುವಾದಗಳ ಮೇಲೆ ಅವರ ತೀರ್ಪು ನಿಲ್ಲುತ್ತದೆ. ಜಗತ್ತಿನ ನೂರಾರು ಸಣ್ಣಪುಟ್ಟ ಭಾಷೆಗಳಲ್ಲಿ ಬರೆಯುವ ಲೇಖಕರಿಗೆ ಅನುವಾದಗೊಳ್ಳುವ ಪುಣ್ಯ ಇರುವುದಿಲ್ಲ. ಸಿಂಗರ್‌ನ ಬರಹಗಳ ಉತ್ತಮ ಅನುವಾದಗಳು ಇರದೆ ಹೋಗಿದ್ದರೆ ಅವನಿಗೆ ನೊಬೆಲ್ ಪ್ರಶಸ್ತಿ ಕನಸಿನಲ್ಲಿಯೂ ಸಿಕ್ಕುತ್ತಿರಲಿಲ್ಲ. ಕನ್ನಡದಲ್ಲೇ ನೋಡಿ. ನಮ್ಮ ಆಧುನಿಕ ಯುಗದ ಮೇರು ಬರಹಗಾರರಾದ ಕುವೆಂಪು, ಮಾಸ್ತಿ, ಶಿವರಾಮ ಕಾರಂತ, ಅಡಿಗ, ಕೆ.ಎಸ್.ನ ಇವರೆಲ್ಲ ಪ್ರಶಸ್ತಿ ಪುರಸ್ಕೃತರಿಗಿಂತ ಕಡಿಮೆಯಾದವರಲ್ಲ.  ಆದರೆ ಅವರ ಕೃತಿಗಳು ಎಷ್ಟರಮಟ್ಟಿಗೆ ಯೂರೋಪಿಯನ್ ಭಾಷೆಗಳಿಗೆ ಅನುವಾದವಾಗಿವೆ? ಅಥವಾ ಇಂಗ್ಲಿಷ್‌ನಲ್ಲಿ ಸದ್ಯ ಲಭ್ಯವಿರುವ ಅನುವಾದಗಳು ಯಾವ ಮಟ್ಟಿಗೆ ಅವುಗಳ ಗುಣಮಟ್ಟವನ್ನು ಎಲ್ಲಿಯವರೆಗೆ ಕಾಪಾಡಿಕೊಂಡಿವೆ ಅಥವಾ ಕನ್ನಡೇತರರಿಗೆ ತಲುಪಿಸುತ್ತಿವೆ?

70ರ ದಶಕದಲ್ಲಿ ಅರ್ವಿಂಗ್ ವಲಾಸ್ ಅನ್ನುವ ಜನಪ್ರಿಯ ಕಾದಂಬರಿಕಾರ ನೊಬೆಲ್ ಪ್ರಶಸ್ತಿ ನೀಡಿಕೆಯ ಹಿಂದಣ ರಾಜಕಾರಣವನ್ನು ಬಯಲುಗೊಳಿಸುವ ಉದ್ದೇಶದಿಂದ `ದ ಪ್ರೈಜ್~ ಎಂಬ ಕಾದಂಬರಿ ಬರೆದಿದ್ದ. ಆಗ ಅದು ಬಹಳ ಕಾಲ ಬೆಸ್ಟ್ ಸೆಲರ್ ಪಟ್ಟಿಯಲ್ಲಿತ್ತು. ಆದರೆ ವಲಾಸನ ನೇತ್ಯಾತ್ಮಕ ದೃಷ್ಟಿಕೋನ ನಮ್ಮದಾಗಬೇಕಿಲ್ಲ. ಉತ್ತಮರಿಗೆ ನೊಬೆಲ್ ಸಿಕ್ಕಾಗ ಖುಷಿ ಪಡೆಯೋಣ. ಸಿಕ್ಕದಿದ್ದಾಗ ಪ್ರಶಸ್ತಿಗಿಂತ ಬರವಣಿಗೆಯೇ ಮುಖ್ಯವೆಂದು ಸಮಾಧಾನ ಪಡೋಣ. ನೊಬೆಲ್ ಪ್ರಶಸ್ತಿಯ ಪ್ರಾಯ ಕೇವಲ 110 ವರ್ಷ.  ಸಾಹಿತ್ಯವೋ ಅಂದಿಂಗೆ ಹಳೆಯ, ಇಂದಿಂಗೆ ಎಳೆಯ. ಜಲಾಲುದ್ದೀನ್ ರೂಮಿ ಪ್ರಕಾರ `ನಮ್ಮ ದ್ರಾಕ್ಷಿ ಕಳ್ಳು ಜಗತ್ತಿನ ಎಲ್ಲಾ ದ್ರಾಕ್ಷಿ ತೋಟಗಳಿಗಿಂತಾ ಮೊದಲೇ ತಯಾರಾಗಿತ್ತು~.

(ನಿಮ್ಮ ಅನಿಸಿಕೆಗಳನ್ನು ತಿಳಿಸಿ: 
 editpagefeedback@prajavani.co.in)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT