ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋಕಿಯ ಲುಮಿಯ 720 ಮಧ್ಯಮ ಬೆಲೆಗೆ ಉತ್ತಮ ಫೋನ್

Last Updated 18 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಮೈಕ್ರೋಸಾಫ್ಟ್ ವಿಂಡೋಸ್ ಫೋನ್ ಕಾರ್ಯಾಚರಣ ವ್ಯವಸ್ಥೆಯನ್ನು ಬಳಸುವ ನೋಕಿಯ ಲುಮಿಯ ಶ್ರೇಣಿಯ ಫೋನ್‌ಗಳಲ್ಲಿ ಮಧ್ಯಮ ಬೆಲೆಗೆ ದೊರೆಯುವ ಒಂದು ಉತ್ತಮ ಫೋನ್ ಲುಮಿಯ 720. ಇದರ ಒಳಿತು ಕೆಡುಕುಗಳ ಮೇಲೊಂದು ನೋಟ.

ಮೈಕ್ರೋಸಾಫ್ಟ್ ಕಂಪೆನಿ ಮೊಬೈಲ್ ಫೋನ್ ಕಾರ್ಯಾಚರಣ ವ್ಯವಸ್ಥೆಯ ಮಾರುಕಟ್ಟೆಯಲ್ಲಿ ತಾನು ಕಳೆದುಕೊಂಡ ಸ್ಥಾನವನ್ನು ಪುನಃ ಗಳಿಸಲು ಹೊರತಂದಿರುವ ವಿಂಡೋಸ್ ಫೋನ್ ಕಾರ್ಯಾಚರಣ ವ್ಯವಸ್ಥೆಯನ್ನು ಬಳಸುವ ಫೋನ್‌ಗಳಲ್ಲಿ ನೋಕಿಯ ಕಂಪೆನಿಯ ಲುಮಿಯ ಶ್ರೇಣಿಯ ಫೋನ್‌ಗಳು ಜನಪ್ರಿಯವಾಗಿವೆ. ಇವುಗಳು ನೋಕಿಯ ಕಂಪೆನಿಗೆ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಸ್ಥಾನಗಳಿಸಿಕೊಟ್ಟಿವೆ ಜೊತೆಗೆ ಮೈಕ್ರೋಸಾಫ್ಟ್‌ ಕಂಪೆನಿಗೂ ತಾನು ಕಳೆದುಕೊಂಡ ಸ್ಥಾನವನ್ನು ಪುನಃ ಗಳಿಸುವತ್ತ ಹೆಜ್ಜೆ ಇಡಲು ಸಹಾಯ ಮಾಡಿವೆ. ನೋಕಿಯ ಲುಮಿಯ ೭೨೦ (Nokia Lumia 720) ನಮ್ಮ ಈ ವಾರದ ಅತಿಥಿ.

ಗುಣವೈಶಿಷ್ಟ್ಯಗಳು
೧ ಗಿಗಾಹರ್ಟ್ಸ್ ವೇಗದ ಎರಡು ಹೃದಯಗಳ ಪ್ರೊಸೆಸರ್, ೫೧೨ ಮೆಗಾಬೈಟ್ ಪ್ರಾಥಮಿಕ ಮತ್ತು ೮ ಗಿಗಾಬೈಟ್ ಸಂಗ್ರಹ ಮೆಮೊರಿ. ಅಧಿಕ ಮೆಮೊರಿಗೆ ಮೈಕ್ರೊಎಸ್‌ಡಿ ಕಾರ್ಡ್‌ ಹಾಕುವ ಸೌಲಭ್ಯ, ೪.೩ ಇಂಚು ಗಾತ್ರದ ೪೮೦ x ೮೦೦ ಪಿಕ್ಸೆಲ್ ರೆಸೊಲೂಶನ್‌ನ ಐಪಿಎಸ್ ಎಲ್‌ಸಿಡಿ ಸ್ಪರ್ಶಸಂವೇದಿ ಪರದೆ, ಗೊರಿಲ್ಲ ಗಾಜು, ಮೈಕ್ರೊಸಿಮ್ ಕಾರ್ಡ್, ೨ಜಿ ಮತ್ತು ೩ಜಿ ಸಂಪರ್ಕ, ೬.೧ ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, ಎಲ್‌ಇಡಿ ಫ್ಲಾಶ್, ೧.೩ ಮೆಗಾಪಿಕ್ಸೆಲ್‌ನ ಇನ್ನೊಂದು ಕ್ಯಾಮೆರಾ, ೭೨೦p/೩೦fps ವಿಡಿಯೊ ಚಿತ್ರೀಕರಣ, ಜಿಪಿಎಸ್, ಎನ್‌ಎಫ್‌ಸಿ, ಎಕ್ಸೆಲೆರೋಮೀಟರ್, ವೈಫೈ, ಬ್ಲೂಟೂತ್, ಯುಎಸ್‌ಬಿ ಮತ್ತು ೩.೫ ಮಿ.ಮೀ. ಇಯರ್‌ಫೋನ್ ಕಿಂಡಿ,
127.9 x 67.5 x 9 ಮಿಮೀ. ಗಾತ್ರ, ೧೨೮ ಗ್ರಾಂ ತೂಕ, 2000 mAh ಬ್ಯಾಟರಿ, ಇತ್ಯಾದಿ. ಇದರ ಕಾರ್ಯಾಚರಣ ವ್ಯವಸ್ಥೆ ವಿಂಡೋಸ್ ಫೋನ್ ೮. ಬೆಲೆ ಸುಮಾರು ರೂ.೧೭೦೦೦.

ಇದೊಂದು ರೀತಿಯಲ್ಲಿ ಲುಮಿಯ ೯೨೦ ಅಥವಾ ೯೨೫ ಕೊಳ್ಳಲು ಅಶಕ್ತರಾದವರಿಗಾಗಿ ತಯಾರಿಸಿದ ಸ್ವಲ್ಪ ಕಡಿಮೆ ಬೆಲೆಯ ಫೋನ್ ಎನ್ನಬಹುದು. ಕೈಯಲ್ಲಿ ಹಿಡಿಯುವ ಅನುಭವ ಚೆನ್ನಾಗಿದೆ. ಫೋನ್ ರಚನೆ, ವಿನ್ಯಾಸ ಚೆನ್ನಾಗಿದೆ. ನೋಕಿಯ ಫೋನ್ ಆಗಿರುವುದರಿಂದ ಸದೃಢವಾಗಿದೆ. ಸಂಪೂರ್ಣ ಮುಚ್ಚಲ್ಪಟ್ಟ ವಿನ್ಯಾಸ. ಅಂದರೆ ಇದನ್ನು ತೆರೆದು ಬ್ಯಾಟರಿ ಬದಲಿಸಲು ಸಾಧ್ಯವಿಲ್ಲ. ಇದೊಂದು ಪ್ರಮುಖ ಕೊರತೆ. ಈ ಒಂದು ವಿಷಯದಲ್ಲಿ ನೋಕಿಯದವರು ಐಫೋನ್‌ನ ಕೆಟ್ಟ ಬುದ್ಧಿಯನ್ನು ನಕಲು ಮಾಡಿದ್ದಾರೆ. ಒಂದು ಬದಿಯಲ್ಲಿ ವಾಲ್ಯೂಮ್ ಮತ್ತು ಪವರ್ ಬಟನ್‌ಗಳಿವೆ. ೯ ಮಿ.ಮೀ. ದಪ್ಪ ಇದೆ. ಪ್ಯಾಂಟ್ ಕಿಸೆಯಲ್ಲಿ ಆರಾಮವಾಗಿ ತುರುಕಬಹುದು. 

ಲುಮಿಯ ೯೨೦ ಮತ್ತು ೯೨೫ಗಳಲ್ಲಿ ಇರುವ ಒಂದು ಪ್ರಮುಖ ಕೊರತೆ ಎಂದರೆ ಮೈಕ್ರೊಎಸ್‌ಡಿ ಕಾರ್ಡ್ ಹಾಕುವ ಸೌಲಭ್ಯವಿಲ್ಲದಿರುವುದು. ಆದರೆ ಲುಮಿಯ ೭೨೦ಯಲ್ಲಿ ಮೈಕ್ರೊಎಸ್‌ಡಿ ಕಾರ್ಡ್‌ ಹಾಕಬಹುದು. ಪರದೆಯ ರೆಸೊಲೂಶನ್ ಅದ್ಭುತ ಎನ್ನುವಂತಿಲ್ಲ. ಹೈಡೆಫಿನಿಶನ್ ರೆಸೊಲೂಶನ್ ಅಲ್ಲ. ಆದರೆ ಹೈಡೆಫಿನಿಶನ್ ವಿಡಿಯೊ ವೀಕ್ಷಣೆ ಮಾಡಬಹುದು. ಆಗ ಅದು ವಿಡಿಯೊದ ರೆಸೊಲಶೂನ್ ಅನ್ನು ತನ್ನ ರೆಸೊಲೂಶನ್‌ಗೆ ಕಡಿಮೆ ಮಾಡಿ ತೋರಿಸುತ್ತದೆ. ಆದರೂ ವಿಡಿಯೊ ವೀಕ್ಷಣೆಯ ಅನುಭವ ಕೆಟ್ಟದಾಗಿಯೇನೂ ಇಲ್ಲ.

ಲುಮಿಯ ೭೨೦ ಫೋನಿನ ಕೆಲಸದ ವೇಗ ಪರವಾಗಿಲ್ಲ. ಕಡಿಮೆ ವೇಗದ ಪ್ರೊಸೆಸರ್ ಮತ್ತು ಕಡಿಮೆ ಮೆಮೊರಿ ಆಗಿರುವುದರಿಂದ ಅಧಿಕ ವೇಗವನ್ನು ನಿರೀಕ್ಷಿಸಲಾಗದು. ಆದರೆ ಇದು ಬಳಸುವುದು ವಿಂಡೋಸ್ ಕಾರ್ಯಾಚರಣ ವ್ಯವಸ್ಥೆಯನ್ನು. ಆಂಡ್ರೋಯಿಡ್ ಅಲ್ಲ. ಆದುದರಿಂದ ಕಡಿಮೆ ವೇಗದ ಪ್ರೊಸೆಸರ್ ಮತ್ತು ಕಡಿಮೆ ಮೆಮೊರಿ ಇದ್ದರೂ ಕೆಲಸದ ವೇಗದಲ್ಲಿ ಗಮನಾರ್ಹ ಕೊರತೆ ಕಂಡುಬರುವುದಿಲ್ಲ.

ಎಲ್ಲ ಲುಮಿಯ ಫೋನ್‌ಗಳಂತೆ ಇದರ ಕ್ಯಾಮೆರಾ ಗುಣಮಟ್ಟ ಕೂಡ ಚೆನ್ನಾಗಿದೆ. F1.9 ರ ಕಾರ್ಲ್ ಝೀಸ್ ಲೆನ್ಸ್ ಇದೆ. ಅದರ ಲುಮಿಯ ೯೨೦ ಅಥವಾ ೯೨೫ ಗಳ ಕ್ಯಾಮೆರಾದ ಗುಣಮಟ್ಟಕ್ಕೆ ಬಾರದಿದ್ದರೂ ಇರುವ ಮಟ್ಟಿಗೆ ಚೆನ್ನಾಗಿಯೇ ಇದೆ. ಫೋಟೊಗಳು ಚೆನ್ನಾಗಿ ಮೂಡಿ ಬರುತ್ತವೆ. ಎಲ್ಲ ಲುಮಿಯಗಳಲ್ಲಿರುವಂತೆ ಇದರಲ್ಲೂ ಫೋಟೊ ತೆಗೆಯಲು ಮತ್ತು ನಂತರ ಅವುಗಳನ್ನು ಸುಧಾರಿಸಲು ಹಲವು ಸೌಲಭ್ಯಗಳಿವೆ. ಉದಾಹರಣೆಗೆ ಐದು ಫೋಟೊಗಳನ್ನು ಒಂದರ ನಂತರ ಒಂದರಂತೆ ತೆಗೆದು ಅವುಗಳಲ್ಲಿ ಉತ್ತಮವಾದುದನ್ನು ಉಳಿಸಿಕೊಳ್ಳಬಹುದು. ಸಿನಿಮಾಗ್ರಾಫ್ ಎಂಬುದು ಒಂದು ವಿಚಿತ್ರ ಸೌಲಭ್ಯ. ಇದನ್ನು ಬಳಸಿ ಒಂದು ಸ್ಥಿರಚಿತ್ರದಲ್ಲಿ ಒಂದು ನಿರ್ದಿಷ್ಟ ಭಾಗದಲ್ಲಿ ಚಲನೆಯನ್ನು ಸೆರೆಹಿಡಿಯಬಹುದು. ಉದಾಹರಣೆಗೆ ಒಬ್ಬನ ಮುಖ ಸ್ಥಿರವಾಗಿದ್ದು ಆತನ ಕಣ್ಣು ಮಾತ್ರ ಮಿಡುಕಿಸುತ್ತಿರುವುದುನ್ನು ಚಿತ್ರೀಕರಿಸಬಹುದು. ಅರ್ಧ ಹೈಡೆಫಿನಿಶನ್ ವಿಡಿಯೊ ಚಿತ್ರೀಕರಣ ಮಾಡಬಹುದು.

ನೋಕಿಯ ಹಿಯರ್ (Nokia HERE) ಎಂಬ ನಕ್ಷೆ ತಂತ್ರಾಂಶ ಇದರಲ್ಲಿದೆ. ಇದನ್ನು ಬಳಸಿ ಎಲ್ಲಿಗೆ ಹೋಗಬೇಕು ಒಂಬುದನ್ನು ಊಡಿಸಿದರೆ ಸಂಪೂರ್ಣ ವಾಹನ ಚಾಲನೆಯ ಸಹಾಯ ನೀಡುತ್ತದೆ. ಎಲ್ಲಿ ಯಾವ ಕಡೆ ತಿರುಗಬೇಕು, ಇತ್ಯಾದಿ ತಿಳಿಸುತ್ತದೆ. ಅಂತರಜಾಲ ಸಂಪರ್ಕ ಇರುವಾಗ ಇಡಿ ಮ್ಯಾಪ್ ಅನ್ನು ಡೌನ್‌ಲೋಡ್ ಮಾಡಿಟ್ಟುಕೊಂಡರೆ (ಇದರಲ್ಲಿ ಈ ಸೌಲಭ್ಯವಿದೆ) ನಂತರ ವಾಹನ ಚಲಾಯಿಸುವಾಗ ಯಾವುದೇ ರೀತಿಯ ಅಂತರಜಾಲ ಸಂಪರ್ಕವಿಲ್ಲದಿದ್ದರೂ ಇದು ಜಿಪಿಎಸ್ ಉಪಗ್ರಹವನ್ನಾಧರಿಸಿ ನಿರ್ದೇಶನ ನೀಡುತ್ತದೆ. ಈ ಸೌಲಭ್ಯ ಹಲವು ನೋಕಿಯ ಫೋನ್‌ಗಳಲ್ಲಿದೆ.

ಬ್ಯಾಟರಿ ಶಕ್ತಿ ಮತ್ತು ಆಯುಷ್ಯ ಚೆನ್ನಾಗಿದೆ. ಒಮ್ಮೆ ಪೂರ್ತಿ ಚಾರ್ಜ್ ಮಾಡಿದರೆ ಸುಮಾರು ಎರಡು ದಿನ ಬಾಳಿಕೆ ಬರುತ್ತದೆ. ಇದು ಒಂದು ಸ್ಮಾರ್ಟ್‌ಫೋನ್ ಎಂಬುದನ್ನು ನೆನಪಿನಲ್ಲಿಟ್ಟುಕೊಂಡರೆ ಇದು ನಿಜಕ್ಕೂ ಉತ್ತಮವೇ.

ಇದು ಬಳಸುವುದು ವಿಂಡೋಸ್ ಫೋನ್ ೮ ಕಾರ್ಯಾಚರಣ ವ್ಯವಸ್ಥೆಯನ್ನು.
ಅಂದರೆ ಕನ್ನಡ ಪಠ್ಯದ ರೆಂಡರಿಂಗ್ ಇದೆ. ಕನ್ನಡದ ಜಾಲತಾಣ ವೀಕ್ಷಣೆ ಮಾಡಬಹುದು. ವಿಂಡೋಸ್ ಫೋನ್ ಮಾರುಕಟ್ಟೆಯಲ್ಲಿ Type Kannada ಎಂಬ ಕಿರುತಂತ್ರಾಂಶ
(app) ಲಭ್ಯವಿದೆ. ಅದನ್ನು ಇನ್‌ಸ್ಟಾಲ್ ಮಾಡಿಕೊಂಡರೆ ಕನ್ನಡದಲ್ಲಿ ಬೆರಳಚ್ಚು ಮಾಡಬಹುದು  ಹಾಗೂ ಕನ್ನಡ ಪಠ್ಯವನ್ನು ಊಡಿಸಬಹುದು. ಆದರೆ ಈ ಕಿರುತಂತ್ರಾಂಶ ಕೆಲಸ ಮಾಡಲು ಅಂತರಜಾಲ ಸಂಪರ್ಕ ಅಗತ್ಯ. ಒಟ್ಟಿನಲ್ಲಿ ಹೇಳುವುದಾದರೆ ನೀಡುವ ಹಣಕ್ಕೆ ಒಂದು ಉತ್ತಮ ಫೋನ್ ಎನ್ನಬಹುದು.

ಗ್ಯಾಜೆಟ್ ಸಲಹೆ
ಸುಶಾಂತ್ ಅವರ ಪ್ರಶ್ನೆ:
ನಾನು ಆಶಾ ೫೦೧ ಖರೀದಿಸಲು ನಿರ್ಧರಿಸಿದ್ದೇನೆ. ಅದಕ್ಕೆ ಉತ್ತಮ ಗುಣಮಟ್ಟದ earphone ತೆಗೆದುಕೊಳ್ಳಲು ದಯವಿಟ್ಟು ಸಲಹೆ ನೀಡಿ. ಆದರೆ ಅದಕ್ಕೆ ಕೊಟ್ಟಿರುವ earphone ಗುಣಮಟ್ಟ ಸರಿ ಇಲ್ಲ ಅನ್ನುವುದು ನಿಮ್ಮ ರಿವ್ಯೂನಲ್ಲಿ ಓದಿದ್ದೇನೆ.

ಉ: ಕ್ರಿಯೇಟಿವ್ ಇಪಿ ೬೩೦.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT