ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋಕಿಯ ಲುಮಿಯ 925 : ಕಿಸೆಗೆ ಭಾರ, ಗುಣಮಟ್ಟ ಉತ್ತಮ

Last Updated 25 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಮೊಬೈಲ್ ಫೋನ್ ಕಾರ್ಯಾಚರಣ ವ್ಯವಸ್ಥೆಗಳಲ್ಲಿ ಸದ್ಯ ಭಾರತದಲ್ಲಿ ಜನಪ್ರಿಯತೆಯಲ್ಲಿ ಎರಡನೆಯ ಸ್ಥಾನದಲ್ಲಿರುವುದು ವಿಂಡೋಸ್ ಫೋನ್. ಇವು ಆಪಲ್ ಕಂಪೆನಿಯ ಐಓಎಸ್ (ಐಫೋನ್) ಕಾರ್ಯಾಚರಣ ವ್ಯವಸ್ಥೆಯನ್ನು ಹಿಂದಿಕ್ಕಿವೆ. ವಿಂಡೋಸ್ ಫೋನ್ ಕಾರ್ಯಾಚರಣ ವ್ಯವಸ್ಥೆಯನ್ನು ಬಳಸುವ ಫೋನ್‌ಗಳಲ್ಲಿ ನೋಕಿಯ ಕಂಪೆನಿಯ ಲುಮಿಯ ಶ್ರೇಣಿಯ ಫೋನ್‌ಗಳು ಜನಪ್ರಿಯವಾಗಿವೆ.

ಇವುಗಳು ನೋಕಿಯ ಕಂಪೆನಿಗೆ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಕಳೆದುಕೊಂಡ ಸ್ಥಾನಗಳಿಸಿಕೊಟ್ಟಿವೆ. ಜೊತೆಗೆ ಮೈಕ್ರೋಸಾಫ್ಟ್‌ ಕಂಪೆನಿಗೂ ತಾನು ಕಳೆದುಕೊಂಡ ಸ್ಥಾನವನ್ನು ಪುನಃ ಗಳಿಸುವತ್ತ ಹೆಜ್ಜೆ ಇಡಲು ಸಹಾಯ ಮಾಡಿವೆ. ನೋಕಿಯ ಲುಮಿಯ ಶ್ರೇಣಿಯಲ್ಲಿ ಸದ್ಯ ಅತಿ ದುಬಾರಿ ೯೨೫ (Nokia Lumia 925) ನಮ್ಮ ಈ ವಾರದ ಗ್ಯಾಜೆಟ್.

ಗುಣವೈಶಿಷ್ಟ್ಯಗಳು
೧.೫ ಗಿಗಾಹರ್ಟ್ಸ್ ವೇಗದ ಎರಡು ಹೃದಯಗಳ ಪ್ರೊಸೆಸರ್, ೧ ಗಿಗಾಬೈಟ್ ಪ್ರಾಥಮಿಕ ಮತ್ತು ೧೬ ಗಿಗಾಬೈಟ್ ಸಂಗ್ರಹ ಮೆಮೊರಿ. ಅಧಿಕ ಮೆಮೊರಿಗೆ ಮೈಕ್ರೊ ಎಸ್‌ಡಿ ಕಾರ್ಡ್‌ಹಾಕುವ ಸೌಲಭ್ಯ ಮಾತ್ರ ಇಲ್ಲ, ೪.೫ ಇಂಚು ಗಾತ್ರದ 768 x 1280 ಅಮೋಲೆಡ್ (AMOLED) ಸ್ಪರ್ಶಸಂವೇದಿ ಪರದೆ, ಗೊರಿಲ್ಲ ಗಾಜು, ಮೈಕ್ರೊಸಿಮ್ ಕಾರ್ಡ್, ೨ಜಿ, ೩ಜಿ ಮತ್ತು ೪ಜಿ ಸಂಪರ್ಕ, ೮.೭ ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, ಎರಡು ಎಲ್‌ಇಡಿ ಫ್ಲಾಶ್, ೧.೩ ಮೆಗಾಪಿಕ್ಸೆಲ್‌ನ ಇನ್ನೊಂದು ಕ್ಯಾಮೆರಾ, ೧೦೮೦p/೩೦fps ವಿಡಿಯೊ ಚಿತ್ರೀಕರಣ, ಎಫ್‌ಎಂ ರೇಡಿಯೊ, ಜಿಪಿಎಸ್, ಎನ್‌ಎಫ್‌ಸಿ, ಎಕ್ಸೆಲೆರೋಮೀಟರ್, ವೈಫೈ, ಬ್ಲೂಟೂತ್, ಯುಎಸ್‌ಬಿ ಮತ್ತು ೩.೫ ಮಿ.ಮೀ. ಇಯರ್‌ಫೋನ್ ಕಿಂಡಿ, 129 x 70.6 x 8.5 ಮಿಮೀ. ಗಾತ್ರ, ೧೩೯ ಗ್ರಾಂ ತೂಕ, 2000 mAh ಬ್ಯಾಟರಿ, ಇತ್ಯಾದಿ. ಇದರ ಕಾರ್ಯಾಚರಣ ವ್ಯವಸ್ಥೆ ವಿಂಡೋಸ್ ಫೋನ್ ೮. ಬೆಲೆ ಸುಮಾರು ರೂ.೩೦,೦೦೦.

ಇದನ್ನು ನೋಕಿಯ ಲುಮಿಯ ೯೨೦ಯ ಸುಧಾರಿತ ಮಾದರಿ ಎನ್ನಬಹುದು. ೯೨೦ರ ವಿಮರ್ಶೆ ಇದೇ ಅಂಕಣದಲ್ಲಿ ಪ್ರಕಟವಾಗಿತ್ತು. ಕೈಯಲ್ಲಿ ಹಿಡಿಯುವ ಅನುಭವ ಚೆನ್ನಾಗಿದೆ. ಎಲ್ಲ ಲುಮಿಯ ಫೋನ್‌ಗಳಂತೆ ಇದರ ರಚನೆ, ವಿನ್ಯಾಸಗಳು ಚೆನ್ನಾಗಿವೆ. ಸದೃಢವಾಗಿದೆ. ಸಂಪೂರ್ಣ ಮುಚ್ಚಲ್ಪಟ್ಟ ವಿನ್ಯಾಸ. ಅಂದರೆ ಇದನ್ನು ತೆರೆದು ಬ್ಯಾಟರಿ ಬದಲಿಸಲು ಸಾಧ್ಯವಿಲ್ಲ. ಅಧಿಕ ಮೆಮೊರಿಗೆ ಮೈಕ್ರೊಎಸ್‌ಡಿ ಕಾರ್ಡ್ ಹಾಕುವ ಸೌಲಭ್ಯ ಇಲ್ಲ ಎನ್ನುವುದು ಮತ್ತು ಬ್ಯಾಟರಿ ಬದಲಿಸಲು ಅಸಾಧ್ಯ ಎನ್ನುವುದು ಎರಡು ಪ್ರಮುಖ ಕೊರತೆಗಳು. ಒಂದು ಬದಿಯಲ್ಲಿ ವಾಲ್ಯೂಮ್ ಮತ್ತು ಪವರ್ ಬಟನ್‌ಗಳಿವೆ. ಕೇವಲ ೮.೫ ಮಿ.ಮೀ. ದಪ್ಪ ಇದೆ. ತೆಳು ಕಿಸೆಯಲ್ಲೂ ಆರಾಮವಾಗಿ ಇಟ್ಟುಕೊಳ್ಳಬಹುದು.  

ಪರದೆಯ ರೆಸೊಲೂಶನ್ ನಿಜಕ್ಕೂ ಅತ್ಯದ್ಭುತವಾಗಿದೆ. ಪೂರ್ತಿ ಹೈಡೆಫಿನಿಶನ್ ರೆಸೊಲೂಶನ್. ಅಂದರೆ ಅತ್ಯುತ್ತಮ ಗುಣಮಟ್ಟದ ಹೈಡೆಫಿನಿಶನ್ ವಿಡಿಯೊ ವೀಕ್ಷಣೆ ಮಾಡಬಹುದು. ವಿಡಿಯೊ ವೀಕ್ಷಣೆಯ ಅನುಭವ ಮರೆಯುವಂತಿಲ್ಲ. ಲುಮಿಯ ೯೨೫ ಫೋನಿನ ಕೆಲಸದ ವೇಗ ತುಂಬ ಚೆನ್ನಾಗಿದೆ.

ಆಟ ಆಡುವ ಅನುಭವ ಚೆನ್ನಾಗಿದೆ. ವಿಡಿಯೊ ವೀಕ್ಷಣೆ ಮಾಡುವಾಗ ಎಲ್ಲೂ ತಡೆತಡೆದು ಸಾಗುವುದಿಲ್ಲ ಗ್ರಾಫಿಕ್ಸ್ ಕೆಲಸಗಳಿಗೆಂದೇ ಈ ಫೋನಿನಲ್ಲಿ ಪ್ರತ್ಯೇಕ ಗ್ರಾಫಿಕಲ್ ಪ್ರೊಸೆಸರ್ ಇದೆ. ಇದರಿಂದಾಗಿ ಮೇಲ್ದರ್ಜೆಯ ಆಟಗಳು, ವಿಡಿಯೊ ವೀಕ್ಷಣೆ ಎಲ್ಲ ಸರಾಗವಾಗಿ ನಡೆಯುತ್ತವೆ..

ಇದರ ಕ್ಯಾಮೆರಾ ಮಾತ್ರ ಲುಮಿಯ ಶ್ರೇಣಿಯ ಫೋನ್‌ಗಳಲ್ಲೇ ಸದ್ಯದಲ್ಲಿ ಪ್ರಥಮ ಸ್ಥಾನದಲ್ಲಿದೆ. ಗುಣಮಟ್ಟ ಅತಿ ಚೆನ್ನಾಗಿದೆ. ನೋಕಿಯ ಪ್ಯೂರ್‌ವ್ಯೂ ಮಾತ್ರ ಇದಕ್ಕಿಂತ ಚೆನ್ನಾಗಿದೆ. ಕಾರ್ಲ್ ಝೀಸ್ ಲೆನ್ಸ್ ಇದೆ. ಫೋಟೊಗಳು ಚೆನ್ನಾಗಿ ಮೂಡಿ ಬರುತ್ತವೆ. ಫೋನ್ ಬಳಸಿ ತೆಗೆದ ಫೋಟೊ ಎಂದು ಹೇಳಿದರೆ ಮಾತ್ರ ಗೊತ್ತಾಗುತ್ತದೆ. ಈ ಫೋನ್ ಇದ್ದರೆ ನಿಮಗೆ ಏಮ್- ಆಂಡ್- ಶೂಟ್ ಕ್ಯಾಮೆರಾ ಅಗತ್ಯವಿಲ್ಲ. ಐಎಸ್‌ಓ, ಅಪೆರ್ಚರ್, ಇತ್ಯಾದಿ ಹಲವು ಆಯ್ಕೆ ಮಾಡಿಕೊಳ್ಳಬಹುದು.

ಫೋಟೊ ತೆಗೆಯಲು ಮತ್ತು ನಂತರ ಅವುಗಳನ್ನು ಸುಧಾರಿಸಲು ಹಲವು ಸೌಲಭ್ಯಗಳಿವೆ. ಇವುಗಳ ಬಗ್ಗೆ ಈ ಹಿಂದಿನ ಸಂಚಿಕೆಗಳಲ್ಲಿ ತಿಳಿಸಲಾಗಿದೆ. ಪೂರ್ತಿ ಹೈಡೆಫಿನಿಶನ್ ವಿಡಿಯೊ ಚಿತ್ರೀಕರಣ ಮಾಡಬಹುದು. ಮೈಕ್ರೊ ಎಸ್‌ಡಿ ಕಾರ್ಡ್ ಮೂಲಕ ಅಧಿಕ ಮೆಮೊರಿ ಹಾಕಿಕೊಳ್ಳಲು ಅಸಾಧ್ಯ ಎನ್ನುವುದು ಕ್ಯಾಮೆರಾದ ವಿಷಯಕ್ಕೆ ಬಂದಾಗ ಪ್ರಮುಖ ಕೊರತೆಯಾಗುತ್ತದೆ.

ಸಿಕ್ಕಾಪಟ್ಟೆ ಫೋಟೊ ತೆಗೆಯುತ್ತ ಹೋದರೆ ಮೆಮೊರಿ ಬೇಗನೆ ತುಂಬಿಕೊಳ್ಳುತ್ತದೆ. ಆಗ ನೀವು ನಿಮ್ಮ ಲ್ಯಾಪ್‌ಟಾಪ್ ಜೊತೆ ಇಟ್ಟುಕೊಂಡು ಫೋಟೊಗಳನ್ನು ಲ್ಯಾಪ್‌ಟಾಪ್‌ಗೆ ವರ್ಗಾಯಿಸುತ್ತಿರಬೇಕಾಗುತ್ತದೆ. ಮೆಮೊರಿ ಕಾರ್ಡ್ ಬದಲಿಸುವಂತೆಯೂ ಇಲ್ಲ.

ಇದರಲ್ಲಿ ನೋಕಿಯದವರು ತಮ್ಮದೇ ಆದ ನಕ್ಷೆ ತಂತ್ರಾಂಶ ಅಳವಡಿಸಿದ್ದಾರೆ. ಇದು ನಿಮಗೆ ವಾಹನ ಚಲಾವಣೆಗೆ ಮಾರ್ಗದರ್ಶಿಯಾಗಿ ಕೆಲಸ ಮಾಡುತ್ತದೆ. ಎಲ್ಲಿಗೆ ಹೋಗಬೇಕು ಎಂಬುದನ್ನು ಊಡಿಸಿದರೆ ಎಲ್ಲಿ ಯಾವ ಕಡೆ ತಿರುಗಬೇಕು, ಇತ್ಯಾದಿ ತಿಳಿಸುತ್ತ ಹೋಗುತ್ತದೆ.

ಇದರಲ್ಲಿರುವ ಒಂದು ವಿಶೇಷ ಸೌಲಭ್ಯವೆಂದರೆ ಇಡೀ ಮ್ಯಾಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು ಎನ್ನುವುದು. ಹಾಗೆ ಮಾಡಿಟ್ಟುಕೊಂಡರೆ ನಂತರ ವಾಹನ ಚಲಾಯಿಸುವಾಗ ಯಾವುದೇ ರೀತಿಯ ಅಂತರಜಾಲ ಸಂಪರ್ಕವಿಲ್ಲದಿದ್ದರೂ ಇದು ಜಿಪಿಎಸ್ ಉಪಗ್ರಹವನ್ನಾಧರಿಸಿ ನಿರ್ದೇಶನ ನೀಡುತ್ತದೆ. ಇದು ನಿಜಕ್ಕೂ ಉತ್ತಮ ಸೌಲಭ್ಯ.

ಬ್ಯಾಟರಿ ಶಕ್ತಿ ಮತ್ತು ಆಯುಸ್ಸು ಪರವಾಗಿಲ್ಲ. ಅಂತರಜಾಲ, ಜಿಪಿಎಸ್, ಎಲ್ಲ ಬಳಸಿದರೆ, ಎಡೆಬಿಡದೆ ಆಟ ಆಡಿದರೆ ಬ್ಯಾಟರಿ ಬೇಗ ಖಾಲಿಯಾಗುತ್ತದೆ. ಆದರೂ ಆಂಡ್ರಾಯಿಡ್ ಫೋನ್‌ಗಳ ಬ್ಯಾಟರಿ ಆಯುಸ್ಸುಗಿಂತ ಇದರ ಬ್ಯಾಟರಿ ಆಯುಸ್ಸು ಚೆನ್ನಾಗಿದೆ ಎನ್ನಬಹುದು.
ಈ ಫೋನಿನಲ್ಲಿ ವಿಂಡೋಸ್ ೮ ಬಳಸುವ ಎಲ್ಲ ಲುಮಿಯ ಫೋನ್‌ಗಳಂತೆ  ಕನ್ನಡ ಪಠ್ಯದ ರೆಂಡರಿಂಗ್ ಇದೆ. ಕನ್ನಡದ ಜಾಲತಾಣ ವೀಕ್ಷಣೆ ಮಾಡಬಹುದು.

ವಿಂಡೋಸ್ ಫೋನ್ ಮಾರುಕಟ್ಟೆಯಲ್ಲಿ ದೊರೆಯುವ Type Kannada ಎಂಬ ಕಿರುತಂತ್ರಾಂಶವನ್ನು (app) ಇನ್‌ಸ್ಟಾಲ್ ಮಾಡಿಕೊಂಡರೆ ಕನ್ನಡದಲ್ಲಿ ಬೆರಳಚ್ಚು ಮಾಡಬಹುದು. ಆದರೆ ಈ ಕಿರುತಂತ್ರಾಂಶ ಕೆಲಸ ಮಾಡಲು ಅಂತರಜಾಲ ಸಂಪರ್ಕ ಅಗತ್ಯ. ಒಟ್ಟಿನಲ್ಲಿ ಹೇಳುವುದಾದರೆ ದುಬಾರಿಯಾದ ಆದರೆ ಒಂದು ಒಂದು ಉತ್ತಮ ಫೋನ್ ಎನ್ನಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT