ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋಟು ನಿಷೇಧದ ಪರ- ವಿರೋಧ ವಾದಗಳ ಸುತ್ತ...

Last Updated 25 ನವೆಂಬರ್ 2016, 6:08 IST
ಅಕ್ಷರ ಗಾತ್ರ

ನೋಟು ನಿಷೇಧದ ಸುತ್ತಲಿನ ಚರ್ಚೆ ನನ್ನ ಸ್ನೇಹಿತನೊಬ್ಬ ಹೇಳಿದ ನೈಜಕಥೆಯೊಂದನ್ನು ನೆನಪಿಸುತ್ತಿದೆ. ಮೈಸೂರಿನ ಚಹಾದಂಗಡಿ ಯೊಂದರಲ್ಲಿ ಇಬ್ಬರು ಸ್ನೇಹಿತರು ಆಕಸ್ಮಿಕವಾಗಿ ಭೇಟಿಯಾದರು. ಚಹಾ ಕುಡಿದ ನಂತರ, ಒಬ್ಬ ಸ್ನೇಹಿತ ತಾನೇ ಹಣ ಕೊಡುವುದಾಗಿ ಒತ್ತಾಯ ಪೂರ್ವಕವಾಗಿ ಜೇಬಿನಿಂದ ನೂರರ ನೋಟನ್ನು ತೆಗೆದು ನೀಡಿದ. ತಕ್ಷಣವೇ ಮತ್ತೊಬ್ಬನಿಂದ ಹಣ ನೀಡಿದಾತನಿಗೆ ಪ್ರಶ್ನೆಯೊಂದು ಎದುರಾ ಯಿತು: ‘ಏನು, ನೀನು ನೀಡಿದ ನೋಟು ಕಪ್ಪು ಹಣವೆ?’ ‘ಹೌದು’ ಎಂದು ಒಪ್ಪಿಕೊಂಡ ಮೊದಲ ಸ್ನೇಹಿತನು ನೋಟನ್ನು ಮುಟ್ಟದೆಯೇ ಅಥವಾ ಹತ್ತಿರದಿಂದ ನೋಡದೆ ಹಣದ ಕಪ್ಪು ತನವನ್ನು ಎರಡನೆಯವನು ಅರಿತಿದ್ದಾದರೂ ಹೇಗೆ ಎಂದು ಆಶ್ಚರ್ಯಚಕಿತನಾದ. ಅದಕ್ಕೆ ಎರಡನೆಯವನ ವಿವರಣೆ ತುಂಬ ಸರಳವಾ ಗಿತ್ತು: ‘ನೋಟು ಇನ್ನೂ ತನ್ನನ್ನು ತಂದ ಗೋಣಿ ಚೀಲದ ವಾಸನೆಯ ಘಾಟನ್ನು ಕಳೆದುಕೊಂಡಿಲ್ಲ’.

ಹೌದು, ನಮ್ಮ ಊರುಗಳಿಗೆ ಹಣ ಬ್ಯಾಂಕುಗಳ ಮೂಲಕ ಮಾತ್ರವಲ್ಲ, ಅನಧಿಕೃತವಾಗಿ ಗೋಣಿಚೀಲಗಳಲ್ಲಿಯೂ ಬರುತ್ತಿದೆ. ಹೀಗೆ ಬರುವ ಹಣವನ್ನು ಕೇವಲ ಭ್ರಷ್ಟರು ಮತ್ತು ಅಪರಾಧಿಗಳು ತರುತ್ತಿಲ್ಲ. ಸಾಮಾನ್ಯ ಜನರೂ ಈ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದಾರೆ. ಹಾಗಾಗಿಯೆ ಈ ಹಣವು ಚಹಾದಂಗಡಿಯನ್ನೂ ತಲುಪುತ್ತದೆ. ಖೋಟಾನೋಟುಗಳು ಅಲ್ಲೊಂದು ಇಲ್ಲೊಂದು ಸಿಗಬಹುದಾದರೂ, ಬಹುತೇಕ ಮಟ್ಟಿಗೆ ಕಪ್ಪುಹಣವೆಂದು ನಾವು ಕರೆಯುವ ನಗದೆಲ್ಲವೂ ರಿಸರ್ವ್  ಬ್ಯಾಂಕ್ ಹೊರಡಿಸಿರುವ ವಿಧಿಮಾನ್ಯ (ಲೀಗಲ್ ಟೆಂಡರ್). ಗೋಣಿಚೀಲದ ವಾಸನೆ ಮರೆಯಾದ ಮೇಲೆ ಆ ಹಣ ನಮ್ಮ ಊರಿಗೆ ಬ್ಯಾಂಕಿನ ಮೂಲಕ ತಲುಪಿತೋ ಅಥವಾ ಗೋಣಿಚೀಲಗಳಲ್ಲಿ ತರಲಾಯಿತೋ ಗೊತ್ತಾಗುವುದಿಲ್ಲ.

ಈ ಕಥೆಯನ್ನು ರೂಪಕವಾಗಿ ನಾನು ಇಲ್ಲಿ ಬಳಸುತ್ತಿರುವುದಕ್ಕೆ ಕಾರಣವೊಂದಿದೆ. ಕಪ್ಪುಹಣವೆಂದರೆ ಭ್ರಷ್ಟ ಇಲ್ಲವೆ ಅಪರಾಧಿಯಾದವನು ತನ್ನ ದಿಂಬಿನಡಿ ಇಟ್ಟಿರುವ ಹಣವೆಂದು ಸರಳವಾಗಿ ಕಲ್ಪಿಸಿಕೊಳ್ಳುತ್ತೇವೆ. ಆದರೆ ಹಣ ವನ್ನು ಹೀಗೆ ಸುಮ್ಮನೆ ಸಂಗ್ರಹಿಸಿ ಇಟ್ಟುಕೊಳ್ಳುವುದು ಅಪರೂಪ. ಹಾಗಾಗಿ ಅರ್ಥಶಾಸ್ತ್ರಜ್ಞ ಪ್ರಭಾತ್ ಪಟ್ನಾಯಕ್ ಅವರು ಇತ್ತೀಚೆಗೆ ನಮಗೆ ನೆನಪಿಸಿದಂತೆ ಕಪ್ಪುಹಣವನ್ನು ಅದು ಚಲಾವಣೆಯಾಗುವ ಕಪ್ಪು ಮಾರುಕಟ್ಟೆಯ ಸಂದರ್ಭದಲ್ಲಿ ನೋಡಬೇಕು.

ಈ ಕಪ್ಪು ಮಾರುಕಟ್ಟೆಯ ಚಟುವಟಿಕೆಗಳು ಸರ್ಕಾರದ ತೆರಿಗೆಯನ್ನು ತಪ್ಪಿಸಿ ಕೊಳ್ಳಲೆಂದು ನಮ್ಮಲ್ಲಿ ಬಹುತೇಕರು ಮಾಡುವಂ ತಹ ಕ್ರಿಯೆಗಳೂ ಆಗಬಹುದು. ಉದಾಹರಣೆಗೆ ಆಸ್ತಿಯೊಂದನ್ನು ಮಾರುವಾಗ ಮಾರುಕಟ್ಟೆ ಬೆಲೆಯ ಆಂಶಿಕ ಮೊತ್ತಕ್ಕೆ ನೋಂದಾಯಿಸು ವುದು ಅಥವಾ  ನಾವು ಕೊಳ್ಳುವ ಟಿ.ವಿ. ಯಂತಹ ಹಲವಾರು ವಸ್ತುಗಳಿಗೆ  ರಸೀದಿ ಬೇಡ ವೆನ್ನುವುದು. ಇಲ್ಲವೇ ಇದು ಮಾದಕ ವಸ್ತುಗಳ ವ್ಯಾಪಾರದಂತಹ ಅಪರಾಧಿ ಜಗತ್ತಿನ ಕಾರ್ಯ ಗಳೂ ಆಗಿರಬಹುದು.

ಹೀಗೆ ಜನಸಾಮಾನ್ಯರ ಪ್ರತಿದಿನದ ಬದುಕಿನ ಅಂಗವಾಗಿರುವ ಕಪ್ಪು ಮಾರುಕಟ್ಟೆಯನ್ನು ಸುಮಾರು 45 ಲಕ್ಷ ಕೋಟಿ ರೂಪಾಯಿಗಳಷ್ಟು ಇರಬಹುದು ಎಂದು ಸ್ಟೇಟ್ ಬ್ಯಾಂಕ್ ಆಫ್  ಇಂಡಿಯಾದ ಮುಖ್ಯ ಆರ್ಥಿಕ ಸಲಹೆಗಾರರಾದ  ಸೌಮ್ಯ ಕಾಂತಿ ಘೋಷ್ ಅಂದಾಜಿಸುತ್ತಾರೆ. ಇದರಲ್ಲಿ ಶೇ 20ರಷ್ಟು (ಅಂದರೆ ಸುಮಾರು 9 ಲಕ್ಷ ಕೋಟಿ ರೂಪಾಯಿ ಗಳು) ನಗದಿನ ರೂಪದಲ್ಲಿ ಇರಬಹುದು ಹಾಗೂ ಉಳಿದದ್ದು ಭೂಮಿ, ಚಿನ್ನ ಇತ್ಯಾದಿಗಳಾಗಿ ಪರಿವರ್ತಿತವಾಗಿರುತ್ತದೆ ಎಂದು ಘೋಷ್ ಹೇಳುತ್ತಾರೆ. ನೋಟು ನಿಷೇಧದ ಮೂಲಕ ಈ ಹಣವನ್ನು ಬ್ಯಾಂಕಿಂಗ್ ವ್ಯವಸ್ಥೆಯೊಳಗೆ ತರಲು ಇಲ್ಲವೆ ಚಲಾವಣೆಯಿಂದ ಹೊರದಬ್ಬಲು ಸರ್ಕಾರ ಪ್ರಯತ್ನಿಸುತ್ತಿದೆ.

ಅಂದರೆ ಕಪ್ಪುಹಣವನ್ನು ಹೊಂದಿರುವವರು  ತಮ್ಮಲ್ಲಿರುವ ಹಣವನ್ನು ಬ್ಯಾಂಕುಗಳಿಗೆ ಜಮಾ ಮಾಡುವ  ದಾರಿಯನ್ನು ಕಂಡುಕೊಂಡರೆ, ಅಂತಹ ಹಣವು ವ್ಯವಸ್ಥೆಯೊಳಗೆ ವಾಪಸು ಬರುತ್ತದೆ. ಮಾಧ್ಯಮಗಳಲ್ಲಿ ಇಂತಹ ದಾರಿಗಳಾ ವುವು ಎನ್ನುವುದರ ಬಗ್ಗೆ ಸತತವಾಗಿ ಚರ್ಚೆಗ ಳಂತೂ ನಡೆಯುತ್ತಲೇ ಇವೆ. ಉದಾಹರಣೆಗೆ ‘ಹಫಿಂಗ್ಟನ್ ಫೋಸ್ಟ್‌’ನಲ್ಲಿ ಪ್ರಕಟವಾದ ಲೇಖನವೊಂದರಲ್ಲಿ ಕಪ್ಪುಹಣವನ್ನು ಶುದ್ಧಗೊ ಳಿಸುವ 13 ದಾರಿಗಳನ್ನು ಚರ್ಚಿಸಲಾಗಿದೆ. ಬ್ಯಾಂಕುಗಳಿಗೆ ಜಮಾ ಆಗದ ಮಿಕ್ಕ ಹಣವು ಚಲಾವಣೆಯಿಂದ ಹೊರಗಾಗುತ್ತದೆ.

ಇದರ ಪ್ರಮಾಣ ಎಷ್ಟಿರಬಹುದು ಎನ್ನುವುದರ ಬಗ್ಗೆ ಕೆಲವು ಅಂದಾಜುಗಳಿವೆ. ಅದನ್ನು ಚರ್ಚಿಸುವ ಮೊದಲು ಈ ಕೆಳಗಿನ ಅಂಕಿ ಅಂಶಗಳನ್ನು ಗಮನಿಸೋಣ. ಮಾರ್ಚ್ 2016ರ ರಿಸರ್ವ್ ಬ್ಯಾಂಕಿನ ವರದಿಯ ಪ್ರಕಾರ ಭಾರತ ದಲ್ಲಿ ಸುಮಾರು ₹ 14.2 ಲಕ್ಷ ಕೋಟಿ ಮೌಲ್ಯದ 2203  ಕೋಟಿ (₹ 500 ಮತ್ತು 1000 ಮೌಲ್ಯದ) ನೋಟುಗಳು ಚಲಾವಣೆಯಲ್ಲಿದ್ದವು. ಇದು ಚಲಾವಣೆಯಲ್ಲಿದ್ದ ಎಲ್ಲ ನೋಟುಗಳ ಶೇ 86ರಷ್ಟು ಮೌಲ್ಯವುಳ್ಳದ್ದಾಗಿದೆ. ಇವುಗಳಲ್ಲದೆ ಸುಮಾರು   6824 ಕೋಟಿ ಇತರೆ ನೋಟುಗಳು (ಅವುಗಳ ಮೌಲ್ಯ ಸುಮಾರು 2.2 ಲಕ್ಷ ಕೋಟಿ) ಸಹ ಚಲಾವಣೆಯಲ್ಲಿವೆ. ಅಂದರೆ ಒಟ್ಟಾರೆ  2016ರ ಮಾರ್ಚ್‌ನಲ್ಲಿ ₹ 16.4 ಲಕ್ಷ ಕೋಟಿ ಮೌಲ್ಯವನ್ನು ಹೊಂದಿದ್ದ 9027 ಕೋಟಿ ನೋಟುಗಳು ಚಲಾವಣೆಯಲ್ಲಿದ್ದವು.

ಹಾಗಾದರೆ ಅಪಮೌಲ್ಯೀಕರಣಕ್ಕೆ ಒಳಗಾದ 500 ಮತ್ತು 1000 ರೂಪಾಯಿಯ ನೋಟು ಗಳು ಇದುವರೆಗೆ ಬ್ಯಾಂಕಿಂಗ್ ವ್ಯವಸ್ಥೆಯೊಳಗೆ ಬಂದಿರುವುದೆಷ್ಟು? ನವೆಂಬರ್ 9ರಿಂದ 18ರವ ರೆಗೆ, ರಿಸರ್ವ್ ಬ್ಯಾಂಕಿನ ಹೇಳಿಕೆಯ ಪ್ರಕಾರ ಸುಮಾರು ₹ 5.44 ಲಕ್ಷ ಕೋಟಿಯಷ್ಟು ಮೌಲ್ಯದ ನೋಟುಗಳನ್ನು ಬ್ಯಾಂಕುಗಳಿಗೆ ಜಮಾ ಮಾಡ ಲಾಗಿದೆ ಅಥವಾ ಬದಲಾಯಿಸಿಕೊಳ್ಳಲಾಗಿದೆ.

ಸೌಮ್ಯ ಕಾಂತಿ ಘೋಷ್ ಅವರ ಅಂದಾಜನ್ನು ಒಪ್ಪುವುದಾದರೆ, ನಮ್ಮಲ್ಲಿ ಚಲಾವಣೆಯಲ್ಲಿರುವ ₹ 16.4 ಲಕ್ಷ ಕೋಟಿ ಮೌಲ್ಯದ ಹಣದಲ್ಲಿ ಸುಮಾರು ₹ 9 ಲಕ್ಷ ಕೋಟಿಯಷ್ಟು ನಗದು ಕಪ್ಪು ಹಣವೆ ಇದೆ ಎನ್ನಬೇಕಾಗುತ್ತದೆ. ಇದು ಒಂದೆಡೆ ಇರಲಿ. ಘೋಷ್ ಅವರ ಆರ್ಥಿಕ ಮಾದರಿ (ಮಾಡೆಲ್)ಗಳನ್ನು ಅನುಲಕ್ಷಿಸುವುದಾದರೆ, ಈಗಿರುವ ಕಪ್ಪುಹಣದಲ್ಲಿ ಶೇ 25ರಿಂದ 50ರಷ್ಟು (ಸುಮಾರು ₹ 2.48 ಲಕ್ಷ ಕೋಟಿಯಿಂದ 4.8 ಲಕ್ಷ ಕೋಟಿ) ಹಣವು ಬ್ಯಾಂಕಿಂಗ್ ವ್ಯವಸ್ಥೆಯೊ ಳಗೆ ಬರುವುದಿಲ್ಲ. ಘೋಷ್ ತಮ್ಮ ಅಂದಾಜುಗ ಳನ್ನು ಮಾಡಲು 1978ರ ಪೂರ್ವನಿದರ್ಶನ ವನ್ನು ಗಮನಿಸಿದ್ದಾರೆ. ಅಂದರೆ ರಿಸರ್ವ್ ಬ್ಯಾಂಕ್ ಇದುವರೆಗೆ ಮುದ್ರಿಸಿರುವ ಹಾಗೂ ಭದ್ರತೆ (ಗ್ಯಾರಂಟಿ) ನೀಡಿರುವ ಹಣವು ಈ ಪ್ರಮಾಣದಲ್ಲಿ ನ್ಯಾಯಸಮ್ಮತವಲ್ಲದಾಗುತ್ತದೆ.

ಇದು ಸರ್ಕಾರಕ್ಕೆ ಮತ್ತು ರಿಸರ್ವ್ ಬ್ಯಾಂಕಿಗೆ ಆಗುವ ಲಾಭ ಸಹ. ಇದಕ್ಕೆ ವಿವರಣೆಯಿಷ್ಟೆ. ಅರ್ಥವ್ಯವಸ್ಥೆಯಲ್ಲಿ ಚಲಾವಣೆಯಲ್ಲಿದ್ದ ಸುಮಾರು  ಶೇ 15ರಿಂದ 30ರಷ್ಟು ನಗದು ಅಮಾನ್ಯವಾದರೆ, ಅದಕ್ಕೆ ಗ್ಯಾರಂಟಿ ನೀಡಿದ್ದ ರಿಸರ್ವ್ ಬ್ಯಾಂಕ್ ತನ್ನ ಗ್ಯಾರಂಟಿಯನ್ನು ಹೊಸ ನೋಟುಗಳನ್ನು ಮುದ್ರಿಸಲು ಬಳಸಬಹುದು. ಸರ್ಕಾರಕ್ಕೆ ಲಾಭಾಂಶದ ರೂಪದಲ್ಲಿ ಹೊಸಹಣ ವನ್ನು ನೀಡಿ, ಅದರ ಯೋಜನೆಗಳಿಗೆ ಸಹಕರಿಸ ಬಹುದು. ಜೊತೆಗೆ ಬ್ಯಾಂಕುಗಳಿಗೆ ನಗದು ಜಮಾ ಆಗುತ್ತಿರುವುದರಿಂದ ಹಾಗೂ ಕಡಿಮೆ ನಗದು ಹಣ ಹೊರಗೆ ಹೋಗುತ್ತಿರುವುದರಿಂದ ಅವು ಗಳ ಮರುಬಂಡವಾಳೀಕರಣ ಹೆಚ್ಚು ಸುಲಭ ವಾಗಿ ಆಗುತ್ತದೆ. ಕೆಟ್ಟಸಾಲಗಳನ್ನು ನೀಡಿ, ಅಪಾರ ನಷ್ಟಗಳನ್ನು ಅನುಭವಿಸಿದ್ದ ಸಾರ್ವಜನಿಕ ಬ್ಯಾಂಕುಗಳಿಗೂ ಈ ಕ್ರಮದಿಂದ
ಅನುಕೂಲ ವಾಗಬಹುದು.

ಇದಿಷ್ಟೂ ಸಿದ್ಧಾಂತ. ಆರ್ಥಿಕ ಸಿದ್ಧಾಂತಗಳು ಮತ್ತು ಅರ್ಥಶಾಸ್ತ್ರಜ್ಞರು ಜ್ಯೋತಿಷಶಾಸ್ತ್ರ ಹಾಗೂ ಜ್ಯೋತಿಷಿಗಳಿಗಿಂತ ಉತ್ತಮರೇನಲ್ಲ ಎನ್ನುವವರೂ ಇದ್ದಾರೆ. ಆದರೆ ‘ಪೂರ್ವಸಿದ್ಧತೆ ಯಿಲ್ಲದ ಆರ್ಥಿಕ ಪ್ರಯೋಗ’ವಾಗಿರುವ ನೋಟು ನಿಷೇಧವೆನ್ನುವ ಕ್ರಮವನ್ನು ಪ್ರಧಾನಿಯವರು ಕೈಗೆತ್ತಿಕೊಂಡಿದ್ದಾದರೂ ಏಕೆ ಎನ್ನುವ ರಾಹುಲ್ ಗಾಂಧಿಯವರ ಪ್ರಶ್ನೆಗೆ ಬಹುಶಃ ಮೇಲಿನ ಅಂಕಿ ಅಂಶಗಳಲ್ಲಿ ಒಂದು ವಿವರಣೆ ದೊರಕಬಹುದು.

ನೋಟು ನಿಷೇಧವು ಪ್ರಧಾನಿಯವರು ತೆಗೆದುಕೊಂಡಿರುವ ಅಪಾಯಕಾರಿ (ರಿಸ್ಕಿ) ನಿರ್ಧಾರ ಎನ್ನುವುದರಲ್ಲಿ ಅನುಮಾನವಿಲ್ಲ. ಯಾಕೆಂದರೆ ಸಿದ್ಧಾಂತದಲ್ಲಿ ಅಥವಾ ಮಾದರಿ ಗಳಲ್ಲಿ ಏನನ್ನು ಬಿಂಬಿಸಿದ್ದರೂ, ವಾಸ್ತವದಲ್ಲಿ ಪರಿಣಾಮಗಳು ಏನಿರಬಹುದು ಎನ್ನುವುದು ಸ್ಪಷ್ಟವಾಗುತ್ತಿಲ್ಲ. ಇದುವರೆಗೆ ಮೋದಿಯವರ ಕ್ರಮವನ್ನು ತಾಳ್ಮೆಯಿಂದಲೇ ಜನರು ಸ್ವೀಕರಿಸಿ ದ್ದಾರೆ. ಆದರೆ ಚಲಾವಣೆಯಲ್ಲಿದ್ದ ಶೇ 86ರಷ್ಟು ನೋಟುಗಳನ್ನು ಮತ್ತೆ ನಮ್ಮ ಅರ್ಥವ್ಯವಸ್ಥೆಗೆ ಸೇರಿಸುವುದು ಸುಲಭದ ಅಥವಾ ವೇಗವಾಗಿ ಆಗಬಲ್ಲ ಕೆಲಸವಲ್ಲ.

2200 ಕೋಟಿ ಹೊಸ ನೋಟುಗಳನ್ನು ಮುದ್ರಿಸಲೇ ಸುಮಾರು 5–6 ತಿಂಗಳು ಬೇಕು ಎನ್ನುವ ಅಂದಾಜಿದೆ. ನೋಟು ಗಳ ಮುದ್ರಣ ಮತ್ತು ವಿತರಣೆಯ ಕೆಲಸ ಸಮರ್ಪಕವಾಗಿ ಆಗುವ ತನಕ ಹಾಗೂ ಎಲ್ಲರೂ ತಮ್ಮ ಠೇವಣಿಗಳಲ್ಲಿರುವ ಹಣವನ್ನು ಮುಕ್ತವಾಗಿ ಯಾವುದೇ ನಿರ್ಬಂಧವಿಲ್ಲದೆ ಹೊರತೆಗೆಯಲು ಆಗುವವರಗೆ ಭಾರತದ ಅರ್ಥವ್ಯವಸ್ಥೆಯಲ್ಲಿ ಬಿಕ್ಕಟ್ಟು ಇರುತ್ತದೆ. ನಾವು ಈಗಾಗಲೇ ಗಮನಿಸಿ ರುವಂತೆ ನಗದು ಮಾತ್ರ ಬಳಕೆಯಾಗುವ ವಲಯಗಳಲ್ಲಿ ಚಟುವಟಿಕೆಗಳು ಕುಸಿದಿವೆ. ಹೆಚ್ಚು ನಿರ್ದಿಷ್ಟವಾಗಿ ಹೇಳುವುದಾದರೆ, ಸಾಮಾನ್ಯ ಜನರು ನಿರ್ಭರವಾಗಿರುವ ಅನೌಪಚಾರಿಕ ಅರ್ಥ ವ್ಯವಸ್ಥೆಯ ಅಂಗವಾದ ಕೃಷಿ, ಸಣ್ಣ ಮತ್ತು ಗುಡಿ ಕೈಗಾರಿಕೆಗಳು, ಕಟ್ಟಡ ನಿರ್ಮಾಣ ಮತ್ತಿತರ ಕ್ಷೇತ್ರಗಳಲ್ಲಿ ಪರಿಣಾಮಗಳು ಕಾಣಿಸಿಕೊಳ್ಳುತ್ತಿವೆ.

2016–17ನೆಯ ಆರ್ಥಿಕ ವರ್ಷದ ಉತ್ತರಾ ರ್ಧದ ಆರ್ಥಿಕ ಅಭಿವೃದ್ಧಿ ಕುಂಠಿತವಾಗುತ್ತದೆ ಎನ್ನುವುದರಲ್ಲಿ ಯಾವ ಅನುಮಾನಗಳೂ ಈಗ ಉಳಿದಿಲ್ಲ. ಭಾರತದ ಜಿಡಿಪಿಯ ಅಭಿವೃದ್ಧಿಯ ಗತಿ 3.5ರಷ್ಟಾಗಿ, ಕಳೆದ ವರ್ಷದ ಅರ್ಧಕ್ಕಿಂತ ಕಡಿಮೆಯಾದರೂ ಆಗಬಹುದು. ಈ ಯಾವ ಅಂಕಿಅಂಶಗಳೂ ಸಾಮಾನ್ಯ ಜನರ ಪ್ರತಿದಿನದ ಬದುಕಿನಲ್ಲಿ ಆಗುತ್ತಿರುವ ಅಡೆತಡೆಗಳು ಮತ್ತು ತೊಂದರೆಗಳನ್ನು, ಹಸಿವು, ನೋವು ಮತ್ತು ನಷ್ಟಗಳನ್ನು ಹಿಡಿದಿಡುವುದಿಲ್ಲ ಎನ್ನುವುದೂ ಸತ್ಯವೆ. 2017ರಲ್ಲಿ ಈ ಕ್ರಮದ ಪರಿಣಾಮಗಳು ಏನಿರಬಹುದು ಎನ್ನುವುದನ್ನು ಯಾರೂ ಖಚಿತವಾಗಿ ಊಹಿಸಲಾಗುತ್ತಿಲ್ಲ.

ನೋಟು ನಿಷೇಧದ ಪರ–ವಿರೋಧ ವಾದ ಗಳು ಸಾಮಾನ್ಯವಾದ ರಾಜಕೀಯ ವಾದಗಳಂತೆ ಆಂಶಿಕ ಸತ್ಯಗಳನ್ನು ಆಧರಿಸಿ ಸಾಗುತ್ತಿವೆ. ಉದಾಹರಣೆಗೆ, ನೋಟುನಿಷೇಧದ ಪರಿಣಾಮ ಕಪ್ಪುಹಣವನ್ನು ಹೊಂದಿರುವ ಕಾಳಸಂತೆ ಕೋರರ ಮೇಲೆ ಮತ್ತು ಖೋಟಾನೋಟು ಗಳನ್ನು ಬಳಸುವ ಭಯೋತ್ಪಾದಕರ ಮೇಲೆ ಆಗುತ್ತದೆ ಎಂದು ಪ್ರಧಾನಿಯವರು ವಾದಿಸುತ್ತಾರೆ. ಅದು ಸತ್ಯವಿರಬಹುದು. ಆದರೆ ಈ ಮಹತ್ವಾಕಾಂಕ್ಷಿ ಕ್ರಮದ ಮೂಲಕ ಪ್ರಭುತ್ವವು ಭಾರತೀಯ ಸಮಾಜದ ಪ್ರತಿಯೊಬ್ಬರನ್ನೂ (ಪ್ರಾಮಾಣಿಕ ದೇಶಪ್ರೇಮಿಗಳನ್ನೂ  ಸೇರಿದಂತೆ) ಅನುಮಾನದಿಂದಲೇ ನೋಡುತ್ತದೆ, ಅವರ ನಿಷ್ಠೆಯನ್ನು ಪರೀಕ್ಷಿಸಬಯಸುತ್ತದೆ. ಇದು ಪ್ರಧಾನಿಯವರು ಪ್ರಭುತ್ವಕ್ಕೆ, ರಾಷ್ಟ್ರರಾಜಕಾರಣಕ್ಕೆ ನೀಡುತ್ತಿರುವ ಹೊಸ ಆಯಾಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT