ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋಟ್ 4ನ ಉತ್ತರಾಧಿಕಾರಿ

Last Updated 28 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಶಿಯೋಮಿ ಈಗ ಭಾರತದಲ್ಲಿ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಪ್ರಥಮ ಸ್ಥಾನದಲ್ಲಿದೆ. ಈಗ ಅವರು ತಮ್ಮ ಉತ್ಪನ್ನಗಳನ್ನು ಭಾರತದಲ್ಲೂ ತಯಾರಿಸುತ್ತಿದ್ದಾರೆ. ಕಳೆದ ವರ್ಷ ಇದೇ ಅಂಕಣದಲ್ಲಿ ಅವರ ರೆಡ್‌ಮಿ ನೋಟ್ 4 ಫೋನಿನ ವಿಮರ್ಶೆ ಮಾಡಲಾಗಿತ್ತು. ಈ ಸಲ ವಿಮರ್ಶೆ ಮಾಡುತ್ತಿರುವುದು ಆ ಫೋನಿನ ಉತ್ತರಾಧಿಕಾರಿ ಶಿಯೋಮಿ ರೆಡ್‌ಮಿ ನೋಟ್ 5 (Xiaomi Redmi Note 5).

ಈಗಾಗಲೇ ಹೇಳಿದಂತೆ ಇದು ಶಿಯೋಮಿ ಯವರ ರೆಡ್‌ಮಿ ನೋಟ್ 4 ರ ಉತ್ತರಾಧಿಕಾರಿ. ಇತ್ತೀಚೆಗಿನ ಬಹುತೇಕ ಫೋನ್‌ಗಳಂತೆ ಇದು ಕೂಡ ಪರದೆಯ ಬಹುಭಾಗವನ್ನು ಬಳಸುತ್ತದೆ. ಇದರ ಪರದೆಯ ಅನುಪಾತ 18:9 ಇದೆ. ಹಿಂದುಗಡೆಯ ಕವಚ ತೆಗೆಯಲು ಸಾಧ್ಯವಿಲ್ಲ. ಈ ಕವಚ ತುಂಬ ನಯವೂ ಅಲ್ಲದ, ಅತಿ ದೊರಗೂ ಅಲ್ಲದ ವಿನ್ಯಾಸವಾಗಿದೆ. ಬದಿಗಳು ವಕ್ರವಾಗಿವೆ. ಬಲಭಾಗದಲ್ಲಿ ಆನ್/ಆಫ್ ಮತ್ತು ವಾಲ್ಯೂಮ್ ಬಟನ್‌ಗಳಿವೆ. ಮೇಲ್ಗಡೆ 3.5 ಮಿ.ಮೀ ಇಯರ್‌ಫೋನ್ ಕಿಂಡಿ ಮತ್ತು ಕೆಳಭಾಗದಲ್ಲಿ ಮೈಕ್ರೊಯುಎಸ್‌ಬಿ ಕಿಂಡಿಗಳಿವೆ.

ಎಡಭಾಗದಲ್ಲಿ ಸಿಮ್ ಮತ್ತು ಮೆಮೊರಿ ಕಾರ್ಡ್ ಹಾಕಲು ಚಿಕ್ಕ ಟ್ರೇ ಇದೆ. ‌ಇದರಲ್ಲಿ ಒಂದು ನ್ಯಾನೋ ಸಿಮ್ ಮತ್ತು ಇನ್ನೊಂದು ನ್ಯಾನೋ ಸಿಮ್ ಅಥವಾ ಮೆಮೊರಿ ಕಾರ್ಡ್ ಹಾಕಬಹುದು. ಮೇಲ್ಗಡೆ ಅವಕೆಂಪು ಕಿರಣದ ಕಿಂಡಿ ಇದೆ. ಇದನ್ನು ಬಳಸಿ ನಿಮ್ಮ ಮನೆಯ ಟಿ.ವಿ., ಆಂಪ್ಲಿಫೈಯರ್, ಇತ್ಯಾದಿ ಹಲವು ಉಪಕರಣಗಳನ್ನು ನಿಯಂತ್ರಿಸಬಹುದು. ಹಿಂಬದಿಯ ಕ್ಯಾಮೆರಾದ ಕೆಳಗೆ ಬೆರಳಚ್ಚು ಸ್ಕ್ಯಾನರ್ ಇದೆ. ಪರದೆಯ ಕೆಳಗಡೆ ಮೂರು ಸಾಫ್ಟ್‌ ಬಟನ್‌ಗಳಿಲ್ಲ. ಪರದೆಯಲ್ಲೇ ಬೇಕಾ ದಾಗ ಬಟನ್‌ಗಳು ಮೂಡಿ ಬರುತ್ತವೆ. ಈ ವಿಧಾನ ಕೆಲವೊಮ್ಮೆ, ಆಟ ಆಡುವಾಗ ಕಿರಿಕಿರಿ ಯಾಗುತ್ತದೆ. ಆಟ ಒಂದು ಹಂತ ತಲುಪದೆ ಅದರಿಂದ ಹೊರಬರಬೇಕಾದರೆ ಸ್ವಲ್ಪ ಕಸರತ್ತು ಮಾಡಬೇಕಾಗುತ್ತದೆ.

ಎಂಟು ಹೃದಯಗಳ ಪ್ರೊಸೆಸರ್ ಇರುವುದ ರಿಂದ ಇದರ ಕೆಲಸದ ವೇಗ ನಿಜಕ್ಕೂ ಚೆನ್ನಾಗಿದೆ. ಎಲ್ಲ ನಮೂನೆಯ ಆಟಗಳನ್ನು ತೃಪ್ತಿದಾಯಕ ವಾಗಿ ಆಡಬಹುದು. ಅತಿ ಶಕ್ತಿಯನ್ನು ಬೇಡುವ ಮೂರು ಆಯಾಮದ ಮೇಲ್ದರ್ಜೆಯ ಆಟಗಳನ್ನು ಕೂಡ ಈ ಫೋನಿನಲ್ಲಿ ಆಡಬಹುದು. ಹೈಡೆಫಿನಿಶನ್ ವಿಡಿಯೊ ವೀಕ್ಷಣೆ ಮಾಡಬಹುದು. ಅಲ್ಟ್ರಾಹೈಡೆಫಿನಿಶನ್ (4k) ವಿಡಿಯೊ ವೀಕ್ಷಣೆ ಕೂಡ ಮಾಡಬಹುದು. ನನಗೆ ವಿಮರ್ಶೆಗೆ ಬಂದಿರುವುದು 4 + 64 ಗಿಗಾಬೈಟ್ ಮಾದರಿಯದು.

12 ಮೆಗಾಪಿಕ್ಸೆಲ್ ರೆಸೊಲೂಶನ್‌ನ ಪ್ರಾಥಮಿಕ ಮತ್ತು 5 ಮೆಗಾಪಿಕ್ಸೆಲ್‌ನ ಎದುರು ಗಡೆಯ ಕ್ಯಾಮೆರಾ ಎರಡೂ ಚೆನ್ನಾಗಿವೆ. f/2.2 ಲೆನ್ಸ್ ಇರುವುದರಿಂದ ಸುಮಾರಾಗಿ ಉತ್ತಮ ಎನ್ನಬಹುದಾದ ಫೋಟೊ ಮೂಡಿಬರುತ್ತದೆ. ನೋಟ್4ರಲ್ಲಿ ಇದ್ದ ಕ್ಯಾಮೆರಾಕ್ಕಿಂತ ಇದರ ಕ್ಯಾಮೆರಾ ಚೆನ್ನಾಗಿದೆ. ಒಂದು ಮಟ್ಟಿಗೆ ನಿಖರವಾಗಿ ಫೋಕಸ್ ಮಾಡುತ್ತದೆ. ಕಡಿಮೆ ಬೆಳಕಿನಲ್ಲೂ ಅತ್ಯುತ್ತಮ ಅಲ್ಲದಿದ್ದರೂ ತೃಪ್ತಿದಾಯಕವಾದ ಫೋಟೊ ತೆಗೆಯುತ್ತದೆ. ವಿಡಿಯೊ ಚಿತ್ರೀಕರಣವೂ ಚೆನ್ನಾಗಿದೆ. ಇದರ ಆಡಿಯೊ ಇಂಜಿನ್ ಚೆನ್ನಾಗಿದೆ. ಈ ಬೆಲೆಯ ಫೋನ್‌ಗಳಲ್ಲಿ ನನಗೆ ವಿಮರ್ಶೆಗೆ ಬಂದ ಫೋನ್‌ಗಳಲ್ಲಿ ಇದು ನಿಜಕ್ಕೂ ಉತ್ತಮ ಆಡಿಯೊ ಫೋನ್ ಎನ್ನಬಹುದು. ಆದರೆ ಅವರು ಇಯರ್‌ಫೋನ್ ನೀಡಿಲ್ಲ. ಅಂದರೆ ವಿಡಿಯೊ ವೀಕ್ಷಣೆ, ಆಟಗಳ ಆಡುವಿಕೆ, ಇವಕ್ಕೆಲ್ಲ ಇದು ತೃಪ್ತಿದಾಯಕ ಎನ್ನಬಹುದು.

ಮೈಕ್ರೊಎಸ್‌ಡಿ ಮೆಮೊರಿ ಕಾರ್ಡ್ ಹಾಕಿ ಮೆಮೊರಿ ಜಾಸ್ತಿ ಮಾಡಿಕೊಳ್ಳಬಹುದು ಮಾತ್ರವಲ್ಲ ಯುಎಸ್‌ಬಿ ಆನ್‌-ದ-ಗೋ ಕೂಡ ಇರುವುದರಿಂದ ಹೊರಗಿನಿಂದ ಯುಎಸ್‌ಬಿ ಡ್ರೈವ್ ಜೋಡಿಸ ಬಹುದು. ಆ್ಯಂಡ್ರಾಯ್ಡ್‌  7.1.2 ನೀಡಿರುವುದು ಮಾತ್ರ ಸ್ವಲ್ಪ ಬೇಸರದ ಸಂಗತಿ. ಯಾವಾಗ ಆ್ಯಂಡ್ರಾಯ್ಡ್ 8ಕ್ಕೆ ನವೀಕರಣವನ್ನು ನೀಡುತ್ತಾರೆ ಎಂಬುದು ತಿಳಿದುಬಂದಿಲ್ಲ.

ಇದರ ಬ್ಯಾಟರಿ 4000mAh ಶಕ್ತಿಯದು ಎಂದರೆ ತುಂಬ ಶಕ್ತಿಶಾಲಿಯದು ಎಂದು ತೀರ್ಮಾನಿಸಬಹುದು. ನೀಡುವ ಬೆಲೆಗೆ ಇದು ನಿಜಕ್ಕೂ ಅತ್ಯುತ್ತಮ ಫೋನ್ ಎಂದು ಖಂಡಿತವಾಗಿ ಹೇಳಬಹುದು.

ವಾರದ ಆ್ಯಪ್: 2248 (2248 Plus)

2048 ಆಟ ಗೊತ್ತು ತಾನೆ? ಈ ಆಟ, ಸ್ವಲ್ಪ ಮಟ್ಟಿಗೆ ಅದರಿಂದ ಸ್ಫೂರ್ತಿ ಪಡೆದ ಆಟ ಎನ್ನಬಹುದು. 2, 4, 8, 16, 32 ಹೀಗೆ ಸಂಖ್ಯೆಗಳನ್ನು ದ್ವಿಗುಣಗೊಳಿಸುತ್ತ ಹೋಗಬೇಕು. ಹಾಗೆ ಮಾಡುತ್ತ ಮಾಡುತ್ತ ನಿಮ್ಮ ಗಳಿಕೆಯೂ ಹೆಚ್ಚುತ್ತಾ ಹೋಗುತ್ತದೆ. ತುಂಬ ಸರಳ ಆಟ. ಆದರೆ ಒಮ್ಮೆ ಆಡಲು ಪ್ರಾರಂಭಿಸಿದರೆ ಇದಕ್ಕೇ ಅಂಟಿಕೊಂಡಿ ರುತ್ತೀರಾ. ಸಮಯ ಕಳೆಯಲು ಜೊತೆಗೆ ಮೆದುಳಿಗೆ ಕಸರತ್ತು ನೀಡಲು ಸಹಾಯಕಾರಿ. ಈ ಆಟದ ಕಿರುತಂತ್ರಾಂಶ (ಆ್ಯಪ್) ಬೇಕಿದ್ದರೆ ನೀವು ಗೂಗಲ್‌ ಪ್ಲೇ ಸ್ಟೋರಿನಲ್ಲಿ 2248 Plus ಎಂದು ಹುಡುಕಬೇಕು ಅಥವಾ http://bit.ly/gadgetloka318 ಜಾಲತಾಣಕ್ಕೆ ಭೆಟಿ ನೀಡಬೇಕು.

ಗ್ಯಾಜೆಟ್ ಸಲಹೆ

ಪ್ರಶ್ನೆ: ಶೇರ್‌ಇಟ್ ಆ್ಯಪ್ ಬಳಸಿ ಒಂದು ಫೋನಿನಿಂದ ಇನ್ನೊಂದು ಫೋನಿಗೆ ಫೋಟೊ, ವಿಡಿಯೊ, ಆ್ಯಪ್, ಇತ್ಯಾದಿಗಳನ್ನು ಕೆಲವೊಮ್ಮೆ ಕಳುಹಿಸಲು ಆಗುವುದಿಲ್ಲ. ಕೆಲವು ಸಲ ಸರಿಯಾಗಿ ಕೆಲಸ ಮಾಡುತ್ತದೆ. ಇದಕ್ಕೇನು ಪರಿಹಾರ?
ಉ: ಶೇರ್‌ಇಟ್ ಸರಿಯಾಗಿ ಕೆಲಸ ಮಾಡಬೇಕಾದರೆ ನೀವು ನಿಮ್ಮ ಫೋನ್‌ಗಳಲ್ಲಿ ಡಾಟಾವನ್ನು ಆಫ್ ಮಾಡಿರಬೇಕು.

ಗ್ಯಾಜೆಟ್ ಪದ: ಫಾಂಟ್ = ಅಕ್ಷರಶೈಲಿ

ಪಠ್ಯ ಮಾಹಿತಿಯನ್ನು ಪರದೆಯ ಮೇಲೆ ತೋರಿಸಲು ಅಥವಾ ಮುದ್ರಕದಲ್ಲಿ ಮುದ್ರಿಸಲು ಅನುವು ಮಾಡುವ ಒಂದು ತಂತ್ರಾಂಶ ಭಾಗ. ಇಂಗ್ಲಿಷಿನಲ್ಲಿ ಸಾವಿರಾರು ವಿನ್ಯಾಸದ ಅಕ್ಷರಶೈಲಿಗಳು ಲಭ್ಯವಿವೆ. ಕನ್ನಡದಲ್ಲೂ ಹಲವು ನಮೂನೆಯ ಅಕ್ಷರಶೈಲಿಗಳು ಲಭ್ಯವಿವೆ. ಹಳೆಯ ಯುನಿಕೋಡ್ ಅಲ್ಲದ ವಿಧಾನದಲ್ಲಿ ಬಳಕೆಯಾಗುತ್ತಿರುವುದು ಟ್ರೂಟೈಪ್ ಹಾಗೂ ಈಗಿನ ಯುನಿಕೋಡ್ ವಿಧಾನದಲ್ಲಿ ಬಳಕೆಯಾಗುವುದು ಓಪನ್‌ಟೈಪ್ ಎಂಬ ಅಕ್ಷರಶೈಲಿಗಳು. ಕನ್ನಡದ ಕೆಲವು ಓಪನ್‌ಟೈಪ್ ಅಕ್ಷರಶೈಲಿಗಳು – ತುಂಗ, ಕರ್ನಾಟಕ ಸರಕಾರ ಬಿಡುಗಡೆ ಮಾಡಿದ 12 ಅಕ್ಷರಶೈಲಿಗಳು, ಗುಬ್ಬಿ, ನವಿಲು, ಗೂಗಲ್ ನೋಟೋ, ಇತ್ಯಾದಿ.

ಗ್ಯಾಜೆಟ್ ಸುದ್ದಿ : ಸ್ಮಾರ್ಟ್‌ ಜಾಕೆಟ್

‌ಎಲ್ಲವೂ ಸ್ಮಾರ್ಟ್‌ ಆಗುತ್ತಿರುವ ಕಾಲದಲ್ಲಿ ಜಾಕೆಟ್ ಯಾಕೆ ಹಿಂದೆ ಬೀಳಬೇಕು? ಹಲವು ಸವಲತ್ತುಗಳಿರುವ ಜಾಕೆಟ್ ಸಿದ್ಧವಾಗುತ್ತಿದೆ. ಇದರಲ್ಲಿ 25 ಸವಲತ್ತುಗಳಿವೆ. ಅವುಗಳಲ್ಲಿ ಕೆಲವು – ಸ್ಮಾರ್ಟ್‌ಫೋನ್ ಚಾರ್ಜರ್, ಇಯರ್‌ಫೋನ್, ಕಣ್ಣಿಗೆ ಪಟ್ಟಿ, ಟ್ಯಾಬ್ಲೆಟ್ ಮತ್ತು ಸ್ಮಾರ್ಟ್‌ಫೋನ್‌ಗಳಿಗೆ ಕಿಸೆ, ತಲೆಗೆ ದಿಂಬು, ಕೈಗೆ ಗ್ಲೌಸ್ ಇಡಲು ಸ್ಥಳ, ನೀರಿನ ಬಾಟಲಿಗೆ ಸ್ಥಳ, ಪೆನ್ನು, ಸ್ಟೈಲಸ್, ಕಿವಿಗೆ ಪ್ಲಗ್, ಇತ್ಯಾದಿ. ವಿಮಾನದಲ್ಲಿ ಆಗಾಗ ಪ್ರಯಾಣ ಮಾಡುವವರಿಗೆ ಇದು ಉಪಯುಕ್ತ. ಈ ಜಾಕೆಟ್ ಬೇಕಿದ್ದರೆ ನೀವು ಆಗಸ್ಟ್ ತನಕ ಕಾಯಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT