ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಯಾಂಗದ ಪರ ವಕಾಲತ್ತು ಅತ್ಯಗತ್ಯ

Last Updated 15 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ಪ್ರಜಾಪ್ರಭುತ್ವದ  ಆರೋಗ್ಯದ ಬಗ್ಗೆ ಹೇಳುವಾಗ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಮತ್ತು ಪತ್ರಿಕಾರಂಗದ ಜವಾಬ್ದಾರಿಗಳ ಚರ್ಚೆ ಸಹಜವಾಗಿ ಆಗುತ್ತದೆ. ಪ್ರಜಾಪ್ರಭುತ್ವದಲ್ಲಿ ಎಲ್ಲಿ ಏನೇ ಅಹಿತಕರ ಬೆಳವಣಿಗೆಯಾದರೂ ಅದನ್ನು ಸರಿಪಡಿಸುವ ಜವಾಬ್ದಾರಿ ಹೊತ್ತ ನ್ಯಾಯಾಂಗ ಇದೆಯಲ್ಲ ಎಂಬ ವಿಶ್ವಾಸವೂ ವ್ಯಕ್ತವಾಗುತ್ತದೆ.

ಆದರೀಗ ದೇಶದ 70ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ‘ನ್ಯಾಯಾಂಗದ ಸ್ವಾತಂತ್ರ್ಯ’ ರಕ್ಷಣೆಯ ಬಗ್ಗೆ ದೇಶದ ಅತ್ಯು ನ್ನತ ಮಟ್ಟದ ನ್ಯಾಯಮೂರ್ತಿಗಳೇ ವ್ಯಕ್ತಪಡಿಸಿರುವ ಅಳಲು ಮತ್ತು ಆಕ್ರೋಶ ಬಹಳಷ್ಟನ್ನು ಹೇಳುತ್ತಿದೆ.

ಪ್ರಜೆಗಳ ಒಳಿತಿಗಾಗಿ ರೂಪುಗೊಳ್ಳುವ ಕಾನೂನು, ನೀತಿ ನಿಯಮಗಳನ್ನು ಕಟ್ಟೆಚ್ಚರದಿಂದ ಕಾಯಬೇಕಾದ ನ್ಯಾಯಾಂಗವೇ ಕಷ್ಟಕ್ಕೆ ಒಳಗಾದರೆ, ಅದನ್ನು ಕಾಯುವವರು ಯಾರು? ಆದರೆ ತನ್ನ ಕೈಕಟ್ಟಿಹಾಕುವ, ಬಾಯಿಮುಚ್ಚಿಸುವ ಹುನ್ನಾರಗಳು ನಡೆಯುತ್ತಿರುವಾಗ ‘ಹರ ಕೊಲ್ಲಲ್ ಪರ ಕಾಯ್ವನೇ?’ ಎಂದು ನ್ಯಾಯಾಂಗ ಸುಮ್ಮನೆ ತೆಪ್ಪಗಿರಲು ಸಾಧ್ಯವಿಲ್ಲ. ನ್ಯಾಯಾಂಗ ತನ್ನ ಪರವಾಗಿ ಮಂಡಿಸುವ ವಾದ, ಒಂದು ಅರ್ಥದಲ್ಲಿ ದೇಶದ ಪ್ರಜೆಗಳ ಪರವಾಗಿ ನೀಡುವ ತೀರ್ಪು.

ನ್ಯಾಯಾಧೀಶರು, ನ್ಯಾಯಮೂರ್ತಿಗಳು ಮತ್ತು ಇತರ ಪೂರಕ ಸಿಬ್ಬಂದಿಯ ಕೊರತೆಯಿಂದ ನಮ್ಮ ನ್ಯಾಯಾಂಗ ವ್ಯವಸ್ಥೆ ಕಷ್ಟ ಪಡುತ್ತಿರುವುದು, ಅದರ ಪರಿಣಾಮವಾಗಿ ದೇಶದ ಜನರೂ ಕಷ್ಟನಷ್ಟ ಅನುಭವಿಸುತ್ತಿರುವುದು ಹೊಸ ವಿಷಯವೇನಲ್ಲ. ಬೇಡಿಕೆ ಮತ್ತು ಪೂರೈಕೆ ನಡುವೆ ಅಗಾಧ ಅಂತರ ಇರುವುದರಿಂದ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳ ಸಂಖ್ಯೆ ವಿಪರೀತವಾಗಿ ಹೆಚ್ಚುತ್ತಿದೆ.

ಈ ವಿಷಯದ ಬಗ್ಗೆ ಅನೇಕ ನ್ಯಾಯಮೂರ್ತಿಗಳು, ವಕೀಲರು ಮತ್ತು ಸಾರ್ವಜನಿಕ ಚಿಂತಕರು ಕಳವಳ ವ್ಯಕ್ತಪಡಿಸಿ ಪರಿಸ್ಥಿತಿ ಸುಧಾರಿಸಲು ಹಲವು ವರ್ಷಗಳಿಂದ ಒತ್ತಾಯಿಸುತ್ತಿದ್ದಾರೆ. ಹೀಗಿರುವಾಗ, ನ್ಯಾಯಮೂರ್ತಿಗಳ ನೇಮಕಾತಿ ಕುರಿತ ಕಡತದ ಬಗ್ಗೆ ನಿರ್ಧಾರ ಕೈಗೊಳ್ಳದ ಕೇಂದ್ರ ಸರ್ಕಾರದ ವಿರುದ್ಧ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಟಿ.ಎಸ್. ಠಾಕೂರ್ ನ್ಯಾಯೋಚಿತವಾಗಿಯೇ ಕೆರಳಿದ್ದಾರೆ.

ಅಗತ್ಯ ಬಿದ್ದರೆ ಆ ಕಡತಗಳಿಗೆ ಕಾನೂನು ಪ್ರಕಾರವೇ ಒಪ್ಪಿಗೆ ಪಡೆಯುವುದು ನ್ಯಾಯಾಲಯಕ್ಕೆ ಗೊತ್ತು ಎಂದು ಗುಡುಗಿದ್ದಾರೆ. ನ್ಯಾಯಾಂಗ ವ್ಯವಸ್ಥೆಯನ್ನೇ ನಿಷ್ಕ್ರಿಯಗೊಳಿಸುವ ಇರಾದೆ ಎನ್‌ಡಿಎ ಸರ್ಕಾರಕ್ಕಿದೆಯೇ ಎಂದು ಆಕ್ರೋಶದಿಂದ ಕೇಳಿರುವ ಅವರು, ಸಂಘರ್ಷ ಅನಿವಾರ್ಯವಾದರೆ ಅದಕ್ಕೂ ಸಿದ್ಧ ಎಂದು ಸವಾಲು ಹಾಕಿದ್ದಾರೆ.

ಬೇರೆ ವಿಷಯಗಳನ್ನು ಕುರಿತಂತೆ ನ್ಯಾಯಾಲಯಗಳು ಸರ್ಕಾರಗಳನ್ನು ಗದರಿಸುವುದು ಮಾಮೂಲಾದರೂ ಈ ವಿಷಯದ ಕಟುಟೀಕೆಗೆ ವಿಶೇಷ ಮೌಲ್ಯವಿದೆ, ಇದರ ಹಿನ್ನೆಲೆಯಲ್ಲಿ ವಿಶೇಷ ಕಾರಣವೂ ಇದೆ.

ನ್ಯಾಯಮೂರ್ತಿಗಳ ನೇಮಕ ಮತ್ತು ವರ್ಗಾವಣೆಯಲ್ಲಿ ನ್ಯಾಯಾಂಗಕ್ಕಿರುವ ಪರಮಾಧಿಕಾರವನ್ನು ಎನ್‌ಡಿಎ ಸರ್ಕಾರ ಪ್ರಶ್ನಿಸಿರುವುದರಿಂದಲೇ, ನೇಮಕಾತಿ ಸಮಿತಿಯ ಶಿಫಾರಸುಗಳ ಕಡತಗಳಿಗೆ ಒಪ್ಪಿಗೆ ನೀಡದೆ ಸತಾಯಿಸುತ್ತಿದೆ.

ನೇಮಕಾತಿಯಲ್ಲಿ ಸರ್ಕಾರದ ಪಾತ್ರವೂ ಇರಲೇಬೇಕು ಎನ್ನುವುದು ಅದರ ಪ್ರತಿವಾದ. ತಮಗಿರುವ ಶಾಸನಾಧಿಕಾರದಿಂದ ಶಾಸಕರು, ಸಂಸದರ ವೇತನ, ಭತ್ಯೆ, ಇನ್ನಿತರ ಸವಲತ್ತುಗಳನ್ನು ತಮಗಿಷ್ಟಬಂದಂತೆ ತಾವು ಹೆಚ್ಚಿಸಿಕೊಳ್ಳಬಹುದು, ನಿಗಮ ಮಂಡಲಿ ಅಧ್ಯಕ್ಷ ಸ್ಥಾನ, ಸಂಸದೀಯ ಕಾರ್ಯ
ದರ್ಶಿ ಇತ್ಯಾದಿ ಹುದ್ದೆಗಳಿಗೆ ತಮಗಿಷ್ಟ ಬಂದಂತೆ ನೇಮಕಾತಿ ಮಾಡಬಹುದು. ಅದಕ್ಕೆ ಯಾರ ಒಪ್ಪಿಗೆಯ ಹಂಗೂ ಇಲ್ಲ. ಆದರೆ ನ್ಯಾಯಾಂಗ ಹಾಗೆ ಮಾಡುವಂತಿಲ್ಲ ಎನ್ನುವುದು ಆಡಳಿತಗಾರರ ನಿಲುವು.

ನ್ಯಾಯಾಂಗ ವ್ಯವಸ್ಥೆಯ ಕೊರತೆ ಕುರಿತ ಒಂದು ಪ್ರಕರಣ ನ್ಯಾಯಾಲಯಕ್ಕೆ ಬಂದಾಗ ಮುಖ್ಯ ನ್ಯಾಯಮೂರ್ತಿಗಳ ಅಳಲು ಹೀಗೆ ವ್ಯಕ್ತವಾಯಿತಷ್ಟೆ. ಅವರ ಈ ಮಾತುಗಳ ಆಶಯವನ್ನು ‘ಅತ್ಯುನ್ನತ ಸ್ಥಾನದಲ್ಲಿ ಇರುವವರ’ ಗಮನಕ್ಕೆ ತರಲಾಗುವುದೆಂದು ಅಟಾರ್ನಿ ಜನರಲ್ ಭರವಸೆ ನೀಡಿದರಂತೆ. ಆದರೆ ಠಾಕೂರ್ ಅವರೇ ಸ್ವತಃ ಅದನ್ನು ಮಾಡಿ ಮುಗಿಸಿದ್ದಾರೆ. ಅವರು ಈ ಕುರಿತು ಮಾತನಾಡುತ್ತಿರುವುದು ಇದೇ ಮೊದಲ ಸಲವಲ್ಲ.

ಕಳೆದ ಏಪ್ರಿಲ್‌ನಲ್ಲಿ ನಡೆದ ಒಂದು ವಿಶ್ವವಿದ್ಯಾಲಯ ಘಟಿಕೋತ್ಸವ ಸಮಾರಂಭದಲ್ಲಿ ಮಾಡಿದ ಭಾಷಣದಲ್ಲಿ, ನ್ಯಾಯವ್ಯವಸ್ಥೆಯಲ್ಲಿ ಶ್ರಮಿಸುತ್ತಿರುವ ನ್ಯಾಯಮೂರ್ತಿಗಳ ಮತ್ತು ನ್ಯಾಯ ಬೇಡುತ್ತಿರುವ ಜನರ ಪಾಡು ಪ್ರಸ್ತಾಪಿಸುತ್ತಾ ಅವರು ಭಾವೋದ್ವೇಗಕ್ಕೆ ಒಳಗಾದರು. ಅಂದು ವೇದಿಕೆ ಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರೇ ಇದ್ದರು. 

ಸುಧಾರಣೆಯ ಹೆಸರಿನಲ್ಲಿ ಸ್ವತಂತ್ರ ನಿರ್ವಹಣೆಯ ಮೇಲೆ ಕಣ್ಣುಹಾಕುವುದು ಹೇಗೆ ಎನ್ನುವುದರ ಹೊಸ ಅಧ್ಯಾಯ ನಮಗೆ ಈಗಾಗಲೇ ಪರಿಚಿತವಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್‌ನ ಮೀಸಲು ಆರ್ಥಿಕ ಅಧಿಕಾರಗಳನ್ನು ಕೆಣಕಿದ ಎನ್‌ಡಿಎ ಸರ್ಕಾರ, ಅದರ ನೈತಿಕ ಶಕ್ತಿಯ ಅಪಮೌಲ್ಯೀಕರಣಕ್ಕೆ ಹೇಗೆ ದಾರಿ ಮಾಡಿತು ಎಂಬುದನ್ನು ನೋಡಿದ್ದೇವೆ. ನ್ಯಾಯಾಂಗ, ಮುಖ್ಯವಾಗಿ ನ್ಯಾಯಮೂರ್ತಿಗಳ ಅಧಿಕಾರ, ನೇಮಕ ಮತ್ತು ಹಕ್ಕುಗಳನ್ನು ಕುರಿತ ವಾಗ್ವಾದ ಅದಾಗಲೇ ಆರಂಭವಾಗಿದೆ.

‘ಸಂವಿಧಾನವನ್ನು ಕಾಯುವುದು ನಿಮ್ಮ ಕರ್ತವ್ಯ ಆಗಿರಬಹುದು, ಆದರೆ ಅದಕ್ಕೆ ತಿದ್ದುಪಡಿ ತರಬಲ್ಲ ಶಕ್ತಿ ಇರುವ ‘ನಂವಿಧಾನ’ವೇ ಬೇರೆ’ ಎಂಬ ಸವಾಲನ್ನು ಬೇರೆಯವರಿಗೆ ಬಿಡಿ, ನ್ಯಾಯಾಂಗದ ಮುಖಕ್ಕೂ ರಾಚಲಾಗಿದೆ. ಆಳುವ ಪ್ರಭುವಿನ ರಥಕ್ಕಿಂತ ಮೇಲೆ ಒಂದು ಹಕ್ಕಿ ಹಾರಾಡಿದರೆ ಅದನ್ನು ಮೊದಲು ಹೊಡೆದು ಹಾಕಿ ಎಂಬಂಥ ನೀತಿ ಚಾಣಕ್ಯ ಹೇಳಿಬಿಟ್ಟಿದ್ದಾನಲ್ಲ- ಎರಡು ಸಾವಿರ ವರ್ಷಗಳ ಹಿಂದೆಯೇ!

ನ್ಯಾಯಾಂಗ ವ್ಯವಸ್ಥೆಯ ನೇಮಕ ರಾಷ್ಟ್ರಪತಿಗಳ ಪರಮಾಧಿಕಾರ ಎಂದು ಹೇಳಲಾಗಿದ್ದರೂ ವಾಸ್ತವದಲ್ಲಿ ಇರುವಂತೆ, ನ್ಯಾಯಮೂರ್ತಿಗಳು ತಮ್ಮ ನೇಮಕವನ್ನು ತಾವೇ ಮಾಡಿಕೊಳ್ಳಬೇಕೇ ಅಥವಾ ಸರ್ಕಾರ ನಡೆಸುತ್ತಿರುವ ರಾಜಕಾರಣಿಗಳಿಗೆ ಅದರಲ್ಲಿ ಅಧಿಕಾರ ಇರಬೇಕೇ ಎನ್ನುವ ಚರ್ಚೆ ಮತ್ತು ಪ್ರಸ್ತುತ ಕ್ರಮದ ಬದಲಾವಣೆಯ ಪ್ರಯತ್ನ, ಈಗ ವಿವಾದದ ಸ್ವರೂಪವನ್ನೇ ಪಡೆದಿದೆ.

ನ್ಯಾಯಮೂರ್ತಿಗಳ ನೇಮಕಾತಿ ಸಮಿತಿಯಲ್ಲಿ ಮುಖ್ಯ ನ್ಯಾಯಮೂರ್ತಿ ಮತ್ತು ಇತರ ನ್ಯಾಯಮೂರ್ತಿಗಳ ಜೊತೆ ಪ್ರಧಾನಿ, ಕಾನೂನು ಮಂತ್ರಿ ಮತ್ತು ಇನ್ನಿಬ್ಬರು ಗೌರವಾನ್ವಿತ ಪ್ರಜೆಗಳು ಇರಬೇಕು ಎನ್ನುವುದು ಈಗಿನ ಸರ್ಕಾರದ ವಾದ. ಇದರ ಹಿನ್ನೆಲೆಯಲ್ಲಿ ಇರುವುದು- ನ್ಯಾಯಾಂಗ ಮತ್ತು ಅದರಲ್ಲಿ ಕೆಲಸ ನಿರ್ವಹಿಸುವ ನ್ಯಾಯಮೂರ್ತಿಗಳು ಸಂವಿಧಾನಕ್ಕೆ, ಕಾನೂನಿಗೆ ಅತೀತರಲ್ಲ ಎನ್ನುವ ಗ್ರಹಿಕೆ ಮಾತ್ರ ಎನ್ನಲು ಸಾಧ್ಯವಿಲ್ಲ.

ಐಐಟಿಗಳು, ವಿಶ್ವವಿದ್ಯಾಲಯಗಳು, ಫಿಲಂ ಮತ್ತು ಟೆಲಿವಿಷನ್ ಸಂಸ್ಥೆ, ಸಿನಿಮಾ ಸೆನ್ಸಾರ್ ಬೋರ್ಡ್ ಸೇರಿದಂತೆ ಹಲವಾರು ತಥಾಕಥಿತ ಸ್ವತಂತ್ರ ನಿರ್ವಹಣೆಯ ಅಧಿಕಾರವುಳ್ಳ ಸಂಸ್ಥೆಗಳಲ್ಲೆಲ್ಲ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಕೈಹಾಕಿದೆ. ಸಂಸ್ಥೆಗಳ ಸ್ವಾತಂತ್ರ್ಯ ಕಸಿಯುವುದು, ನಿರ್ದಿಷ್ಟ ಉದ್ದೇಶಗಳ ಈಡೇರಿಕೆಗಾಗಿ ತನ್ನವರನ್ನೇ ನೇಮಿಸುವುದು ಈಗ ಹೆಚ್ಚಾಗಿ ಕಣ್ಣಿಗೆ ಹೊಡೆದು ಕಾಣಿಸುತ್ತಿದೆ.

ಅದರಲ್ಲಿ ಪ್ರತಿಯೊಂದೂ ವಿವಾದಕ್ಕೆ ಈಡಾಗಿರುವುದು ವಿರೋಧ ಪಕ್ಷಗಳ ವಿರೋಧದ ಕಾರಣದಿಂದ ಮಾತ್ರ ಎಂದು ಸರಳೀಕರಿಸಬಾರದು. ಯಾವ ರಾಜಕೀಯ ಪಕ್ಷವಾದರೂ ಇದನ್ನೇ ಮಾಡುವುದು ಎಂಬ ವಾದ ಮುಂದಿಟ್ಟು ಇಂಥದನ್ನು ಸಮರ್ಥಿಸಿಕೊಳ್ಳಲೂ ಸಾಧ್ಯವಿಲ್ಲ.

ಹತ್ತಿರ ಅರವತ್ತು ವರ್ಷಗಳ ಕಾಲ ದೇಶವನ್ನು ಆಳಿದ ಕಾಂಗ್ರೆಸ್ ಪಕ್ಷ ಪ್ರತಿಯೊಂದರಲ್ಲೂ ತನಗೆ ಬೇಕಾದುದನ್ನೇ ಮಾಡಿತು, ತನಗೆ ಬೇಕಾದವರನ್ನೇ ನೇಮಿಸಿತು ಎನ್ನುವುದು ಸುಳ್ಳೇನಲ್ಲ. ಆಗಿನ ಮಾತಿರಲಿ, ಈಗಲೂ ಒಂದು ಕಾಂಗ್ರೆಸ್ ರಾಜ್ಯ ಸರ್ಕಾರವೂ ಕೂಡ ತನ್ನ ಅಜೆಂಡಾದಂತೆಯೇ ಕಾರ್ಯ ನಿರ್ವಹಿಸುತ್ತದೆ ಎನ್ನುವುದು ಕರ್ನಾಟಕದ ಲೋಕಾಯುಕ್ತ ಸಂಸ್ಥೆಯ ವಿಧ್ಯುಕ್ತ ಹತ್ಯೆಯಲ್ಲಿ,

ಅದರ ಮುಖ್ಯಸ್ಥರ ಪರೋಕ್ಷ ರಕ್ಷಣೆಯಲ್ಲಿ, ಆಮೇಲೆ ಇತ್ತೀಚಿನ ಕೆಪಿಎಸ್‌ಸಿ ಅಧ್ಯಕ್ಷರ ನೇಮಕದಲ್ಲಿ ಸಾಬೀತಾಗಲಿಲ್ಲವೇ? ಯಾವ ಪಕ್ಷದ ಆಡಳಿತವಾದರೂ ಇರಲಿ, ಪರಿಸ್ಥಿತಿ ಹೀಗೇ ಇರುತ್ತದೆ ಎಂದ ಮಾತ್ರಕ್ಕೆ ಇವರ ಸಮರ್ಥನೆಗೆ ಅವರ ಅಪರಾಧಗಳನ್ನು, ಅವರ ಸಮರ್ಥನೆಗೆ ಇವರ ಅಪರಾಧಗಳನ್ನು ಮುಂದಿಟ್ಟು ವಾದಮಂಡನೆ ಮಾಡುವುದು ನ್ಯಾಯಾಂಗ ಕುರಿತ ಈ ವಿವಾದದ ಸಂದರ್ಭದಲ್ಲಂತೂ ನ್ಯಾಯವಲ್ಲ!

ಹಿಂದಕ್ಕೆ ಹೊರಳಿ ನೋಡುವುದಾದರೆ, ಆಳುವ ಪ್ರಭುತ್ವ ಮತ್ತು ನ್ಯಾಯಾಂಗದ ನಡುವಿನ ಅನೇಕ ಸಂಘರ್ಷಗಳು ಪ್ರಜಾಪ್ರಭುತ್ವದ ಜೀವಂತಿಕೆಯ ನಿದರ್ಶನಗಳಾಗಿವೆ. ಹಾಗೆಯೇ ಇದಕ್ಕಿಂತ ಹೆಚ್ಚಾಗಿ ಅವು ಸರ್ವಾಧಿಕಾರದ ರಕ್ಷಣೆಗೆ ಉದಾಹರಣೆಗಳೂ ಆಗಿರುವುದು ಹೌದು. ಪ್ರಧಾನ ಮಂತ್ರಿ ಇಂದಿರಾ ಗಾಂಧಿ ತಮ್ಮ ಇಷ್ಟದಂತೆ ನಡೆದುಕೊಳ್ಳದ, ತಮ್ಮನ್ನು ಹದ್ದುಬಸ್ತಿನಲ್ಲಿಟ್ಟ ನ್ಯಾಯಮೂರ್ತಿಗಳಿಗೆ ಏನು ಮಾಡಿದರು ಎನ್ನುವುದೆಲ್ಲ ಅವರು ಹೇರಿದ ತುರ್ತು ಪರಿಸ್ಥಿತಿಯ ಇತಿಹಾಸದ ಕರಾಳ ಅಧ್ಯಾಯಗಳೇ ಆಗಿವೆ.

ತುರ್ತು ಪರಿಸ್ಥಿತಿಯ ಸಿಂಧುತ್ವ ಪ್ರಶ್ನಿಸಿದ್ದ ಪ್ರಕರಣ ಸುಪ್ರೀಂ ಕೋರ್ಟ್‌ನ ಮುಂದೆ 1975ರ ಡಿಸೆಂಬರ್‌ನಲ್ಲೇ ಬಂದಾಗ, ಅದರ ವಿಚಾರಣೆ ನಡೆಸಿದ ನ್ಯಾಯಪೀಠದಲ್ಲಿದ್ದ ಕೆಲವು ನ್ಯಾಯಮೂರ್ತಿಗಳಲ್ಲಿ ಎಚ್.ಆರ್. ಖನ್ನ ಒಬ್ಬರನ್ನು ಬಿಟ್ಟರೆ ಇನ್ನುಳಿದವರನ್ನು ಹೇಗೆ ‘ದಾರಿಗೆ ತರಲಾಯಿತು’ ಮತ್ತು ಅದರಿಂದ 4–1 ರಂತೆ ತಮಗೆ ಬೇಕಾದ ತೀರ್ಪು ಪಡೆಯಲಾಯಿತು ಎಂಬುದರ ವಿವರಗಳೆಲ್ಲ ಬಯಲಾಗಿವೆ. ತಮ್ಮ ದಿಟ್ಟ ನಿಲುವಿನಿಂದಾಗಿ ಖನ್ನ ಅವರು ಮುಖ್ಯ ನ್ಯಾಯಮೂರ್ತಿಯಾಗುವ ಅವಕಾಶ ಕಳೆದುಕೊಂಡರು.

ನ್ಯಾಯಪೀಠದಲ್ಲಿ ಆಗ ತುರ್ತುಪರಿಸ್ಥಿತಿ ಪರವಾಗಿ ಇದ್ದ ನ್ಯಾಯಮೂರ್ತಿಗಳಾದ ಪಿ.ಎನ್. ಭಗವತಿ ಮತ್ತು ವೈ.ವಿ. ಚಂದ್ರಚೂಡ್, ತುರ್ತು ಪರಿಸ್ಥಿತಿ ಕಳೆದ ನಂತರ ಅದರ ಅತಿರೇಕಗಳನ್ನು ಟೀಕಿಸುವ ಪ್ರಹಸನಗಳನ್ನು ಮಾಡಿದರು ಎಂಬುದು ದೇಶಕ್ಕೆ ತಿಳಿದಿದೆ.

ಇವೆಲ್ಲ ಬರೀ ಗಾಳಿಮಾತಿನ ಸಂಗತಿಗಳಲ್ಲ. ಆಗ ಇಂದಿರಾ ಗಾಂಧಿ ಅವರ ಪರಮಾಪ್ತರಾಗಿದ್ದ, ಮುಂದೆ ಕರ್ನಾಟಕಕ್ಕೆ ರಾಜ್ಯಪಾಲರಾಗಿ ಬಂದ, ಹಂಸರಾಜ್ ಭಾರದ್ವಾಜ್ ಅವರೇ ತುರ್ತು ಪರಿಸ್ಥಿತಿ ಕಳೆದ ಮುಂದೊಂದು ದಿನ ನೀಡಿದ ವಿವರಣೆಯನ್ನು ಹಿರಿಯ ಪತ್ರಕರ್ತ ಕುಲದೀಪ್ ನಯ್ಯರ್ ಯಥಾವತ್ತಾಗಿ ತಮ್ಮ ಆತ್ಮಕಥೆಯಲ್ಲಿ ದಾಖಲಿಸಿದ್ದಾರೆ.

‘ಸರಿಯಾದ ಕಾಲದಲ್ಲಿ ನನ್ನ ಮಾರ್ಗದರ್ಶನ ಪಡೆದಿದ್ದರೆ, ಆ ಟೂಜಿ ಗೀಜಿ ಪ್ರಕರಣಗಳೆಲ್ಲ ಯಾರಿಗೂ ಗೊತ್ತೇ ಆಗದಂತೆ ಮಾಡುತ್ತಿದ್ದೆ’ ಎಂಬಂಥ ಮಾತುಗಳನ್ನೂ ಅಷ್ಟು ಅನುಭವಸ್ಥರಾದ ಎಚ್.ಆರ್. ಭಾರದ್ವಾಜ್ ಹೇಳಿದರಂತೆ.   

ನ್ಯಾಯಾಂಗ ವ್ಯವಸ್ಥೆ ಪರಮ ಪವಿತ್ರವಾಗಿ ಉಳಿದಿಲ್ಲ, ಪ್ರಜಾಪ್ರಭುತ್ವದ ಇತರ ಅಂಗಗಳ ಹಾಗೆ ಇಲ್ಲಿಯೂ ಸ್ವಜನ ಪಕ್ಷಪಾತ, ಅನಾಚಾರ, ಭ್ರಷ್ಟಾಚಾರ ತಾಂಡವವಾಡುತ್ತಿದೆ, ನ್ಯಾಯದ ತಕ್ಕಡಿ ನ್ಯಾಯದೇವತೆಯ ಕೈಯಲ್ಲೇ ಉಳಿದಿಲ್ಲ ಎನ್ನುವುದು ಎಲ್ಲರಿಗೂ ಗೊತ್ತು. ನ್ಯಾಯ ಎನ್ನುವುದು ಮಾರುವ- ಕೊಳ್ಳುವ ಸರಕು ಎಂದಾಗಿ ಬಹಳ ದಿನಗಳಾಗಿವೆ.

ನ್ಯಾಯನಿಷ್ಠೆಗಿಂತ ಹೆಚ್ಚಾಗಿ ತಮ್ಮ ಧರ್ಮನಿಷ್ಠೆ ಮತ್ತು ರಾಜನಿಷ್ಠೆಯ ಪ್ರಕಾರ ತೀರ್ಪು ನೀಡುವ ನ್ಯಾಯಾಧೀಶರಿಗೆ ನಮ್ಮಲ್ಲಿ ಕೊರತೆಯಿಲ್ಲ. ಬೇಲಿಯೇ ಎದ್ದು ಹೊಲ ಮೇಯುವ ಉದಾಹರಣೆಗಳು ನೂರಾರಿವೆ. ಜಾತ್ಯತೀತ ಸಂವಿಧಾನ ಎತ್ತಿಹಿಡಿಯುವ ಕರ್ತವ್ಯ ಪಾಲಿಸಬೇಕಾದ ನ್ಯಾಯಮೂರ್ತಿಗಳೇ ಹಣೆ ಮೇಲೆ ಕಾಸಿನಗಲ ಕುಂಕುಮ ಧರಿಸಿ ಬಹಿರಂಗವಾಗಿ ಮಠಾಧೀಶರು, ಸನ್ಯಾಸಿಗಳ ಕಾಲಿಗೆ ಬೀಳುವ ಚಿತ್ರಗಳು ಅಪರೂಪವೇನಲ್ಲ.

ಅಂಥ ನಂಬಿಕೆ, ನಡವಳಿಕೆ ಮನೆಗೆ ಸೀಮಿತವಾಗುವುದು ಉಚಿತ ಎನ್ನುವ ಸರಳ ಸಂಗತಿಯೂ ಅಂಥ ದೊಡ್ಡವರಿಗೆ ತಿಳಿದಿಲ್ಲ. ನ್ಯಾಯಾಂಗವೇ ಮೊದಲು ತನಗೊಂದು ನೀತಿಸಂಹಿತೆ ಮತ್ತು ಶಿಕ್ಷಾಸಂಹಿತೆ ರೂಪಿಸಿಕೊಂಡು ಕಟ್ಟುನಿಟ್ಟಾಗಿ ಪಾಲಿಸುವ ಅಗತ್ಯವಿದೆ ಎನ್ನುವುದೂ ಸತ್ಯ. ಬೇರೆಯವರಂತೆ, ನ್ಯಾಯಾಂಗವೂ ಸಂವಿಧಾನಕ್ಕಿಂತ, ಕಾನೂನಿಗಿಂತ ಹೆಚ್ಚಿನದಲ್ಲ. ಇವುಗಳಿಗೆ ತುರ್ತುಗಮನ ಕೊಡಲೇ ಬೇಕು.

ಆದರೆ ನ್ಯಾಯಾಂಗ ವ್ಯವಸ್ಥೆಯ ಸಂಕಟಗಳ ಪರಿಹಾರ ಮತ್ತು ಅದರ ಸ್ವಾತಂತ್ರ್ಯ ಹರಣಕ್ಕೆ ವಿರೋಧ ಇವುಗಳಿಗಿಂತ ಪ್ರತ್ಯೇಕವಾದ ವಿಚಾರ. ದೇಶದಲ್ಲಿ ಕುಂತರೆ ನಿಂತರೆ ಆಯೋಗಗಳು ರಚನೆಯಾಗುತ್ತವೆ.

ನ್ಯಾಯಾಂಗ ಮತ್ತು ಸರ್ಕಾರ ಸಂಘರ್ಷ ಬಿಟ್ಟು ಸೌಹಾರ್ದವನ್ನು ರೂಪಿಸಿಕೊಳ್ಳಲು ಅಂಥ ಅನೇಕ ಮಾರ್ಗಗಳು ಇದ್ದೇ ಇವೆ.  ನ್ಯಾಯಾಂಗ ವ್ಯವಸ್ಥೆಯನ್ನು ಹೀಗೆ ನರಳಿಸಲು ಅದು ಮಾಡಿರುವ ಅಪರಾಧವಾದರೂ ಏನು? ನಾಗರಿಕ ಸಮಾಜ ಅದರ ಪರವಾಗಿ ವಕಾಲತ್ತು ವಹಿಸಬೇಕಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT