ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಯಾಂಗದ ಪಾಲಿನ ಸುದೀರ್ಘ ವಾರಾಂತ್ಯ!

Last Updated 13 ಜನವರಿ 2018, 19:30 IST
ಅಕ್ಷರ ಗಾತ್ರ

ಬ್ರಿಟನ್ನಿನ ಮಾಜಿ ಪ್ರಧಾನಿ ಹೆರೊಲ್ಡ್ ವಿಲ್ಸನ್ ಅವರ ಪ್ರಸಿದ್ಧ ಮಾತನ್ನು ಅತ್ಯಂತ ಮಹತ್ವದ್ದಾದ ಈ ಸಂದರ್ಭದಲ್ಲಿ ತುಸು ಬದಲಾಯಿಸುವ ಮನಸ್ಸಾಗುತ್ತಿದೆ. ‘ಒಂದು ವಾರ ಎಂಬುದು ರಾಜಕೀಯದಲ್ಲಿ ದೀರ್ಘವಾದ ಅವಧಿ’ ಎಂಬುದು ಆ ಮಾತು. ‘ಭಾರತದ ನ್ಯಾಯಾಂಗದ ಇತಿಹಾಸದಲ್ಲಿ ಒಂದು ವಾರಾಂತ್ಯವೆಂಬುದು ದೀರ್ಘವಾದ ಅವಧಿ’ ಎಂದು ನಾನು ಹೇಳುತ್ತೇನೆ. ವಾರಾಂತ್ಯದಲ್ಲಿ ನಾವು ಇದರ ಬಗ್ಗೆಯೇ ಚರ್ಚಿಸುತ್ತಿದ್ದೇವೆ.

ತಮ್ಮ ಸಂಸ್ಥೆಗೆ (ನ್ಯಾಯಾಂಗ) ಮತ್ತು ವೃತ್ತಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಸಾರ್ವಜನಿಕ ಚರ್ಚೆಯ ಅಂಗಳಕ್ಕೆ ತಂದ ನಾಲ್ಕು ಜನ ನ್ಯಾಯಮೂರ್ತಿಗಳನ್ನು, ‘ನಿಮ್ಮ ಕ್ರಮದಿಂದ ಸುಪ್ರೀಂ ಕೋರ್ಟ್‌ನ ಚಟುವಟಿಕೆಗಳ ಮೇಲೆ ಯಾವ ಪರಿಣಾಮ ಉಂಟಾಗುತ್ತದೆ’ ಎಂದು ಪ್ರಶ್ನಿಸಿದಾಗ, ‘ನಾವು ಸೋಮವಾರ ನ್ಯಾಯಾಲಯಕ್ಕೆ ಮರಳುತ್ತೇವೆ. ಕಲಾಪಗಳು ಎಂದಿನಂತೆ ನಡೆಯುತ್ತವೆ’ ಎಂದು ಉತ್ತರಿಸಿದರು.

ಆದರೆ ಅದಕ್ಕೂ ಮೊದಲಿನ 48 ಗಂಟೆಗಳ ಅವಧಿಯಲ್ಲಿ ಸಾಕಷ್ಟು ವಿದ್ಯಮಾನಗಳು ನಡೆಯುತ್ತವೆ. ತೆರೆಯ ಮರೆಯಲ್ಲಿ ಮಾತುಕತೆಯ ಯತ್ನಗಳು ಆಗುತ್ತವೆ; ರಾಜಕೀಯದ ಎಲ್ಲ ಕಡೆಗಳಲ್ಲೂ ಒಂದಿಷ್ಟು ಚಟುವಟಿಕೆಗಳು ನಡೆಯುತ್ತವೆ. ಇವೆಲ್ಲಕ್ಕಿಂತ ಮುಖ್ಯವಾಗಿ, ನಮ್ಮೆದುರು ಬಂದ ನಾಲ್ಕು ಜನ ನ್ಯಾಯಮೂರ್ತಿಗಳು, ತಮ್ಮದೇ ಸಂಸ್ಥೆಯಲ್ಲಿ ಒಂದು ಸಂಘರ್ಷವನ್ನು ಕಂಡ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಮತ್ತು ಸುಪ್ರೀಂ ಕೋರ್ಟ್‌ನ ಇತರ 20 ನ್ಯಾಯಮೂರ್ತಿಗಳು ಆತ್ಮಾವಲೋಕನ ನಡೆಸಲಿದ್ದಾರೆ. ನಮ್ಮ ವ್ಯವಸ್ಥೆಯಲ್ಲಿ ಸುಪ್ರೀಂ ಕೋರ್ಟ್‌ನ ಎಲ್ಲ ನ್ಯಾಯಮೂರ್ತಿಗಳು ಸಮಾನರು ಎಂಬುದು ನೆನಪಿನಲ್ಲಿ ಇರಲಿ. ಕೋರ್ಟ್‌ನಲ್ಲಿ ಕೂಡ, ಸಮಾನರ ನಡುವೆ ಸಿಜೆಐ ಮೊದಲಿಗ ಮಾತ್ರ. ಆದರೆ, ಆಡಳಿತದ ವಿಚಾರದಲ್ಲಿ ಸಿಜೆಐ ಮುಖ್ಯಸ್ಥರು. ತಕರಾರು ಉದ್ಭವಿಸುವುದು ಇಲ್ಲೇ.

ಸೋಮವಾರದಿಂದ ಚಟುವಟಿಕೆಗಳೆಲ್ಲವೂ ‘ಎಂದಿನಂತೆ’ ಆಗಬೇಕು ಎಂದಾದರೆ ಎರಡು ‘ಬದಿಗಳಿಂದ’ ಸಾಕಷ್ಟು ಕೊಡು–ಕೊಳ್ಳುವಿಕೆ ಆಗಬೇಕಾಗುತ್ತದೆ. ನಮ್ಮ ಸರ್ವೋಚ್ಚ ನ್ಯಾಯಾಲಯದ ಎರಡು ಗುಂಪುಗಳ ನ್ಯಾಯಮೂರ್ತಿಗಳನ್ನು ಎರಡು ಬದಿಗಳು ಎಂದು ಹೇಳಬೇಕಾಗಿರುವುದು ದುರದೃಷ್ಟದ ಸಂಗತಿ. ಹಾಗಾಗಿ ನಾನು ಇಲ್ಲಿ ಉದ್ಧರಣ ಚಿಹ್ನೆಯನ್ನು ಬಳಸಿದ್ದೇನೆ. ನರಮನುಷ್ಯರಾದ ನಾವು, ನಮ್ಮ ಮೇಲೆ ಸಂಪೂರ್ಣ ಅಧಿಕಾರ ಹೊಂದಿರುವ ನ್ಯಾಯಮೂರ್ತಿಗಳು ನಮ್ಮ ಜಗಳಗಳನ್ನು ಪರಿಹರಿಸುತ್ತಾರೆ ಎಂಬ ಭರವಸೆಯೊಂದಿಗೆ ನ್ಯಾಯಾಲಯದ ಬಾಗಿಲು ಬಡಿಯುತ್ತೇವೆ. ಆದರೆ, ಗೌರವಾನ್ವಿತ ನ್ಯಾಯಮೂರ್ತಿಗಳಿಗೆ ಇಂತಹ ಆಯ್ಕೆಗಳು ಇಲ್ಲ ಎಂಬುದು ಇನ್ನಷ್ಟು ದುರದೃಷ್ಟಕರ ಸಂಗತಿ. ‘ನ್ಯಾಯಮೂರ್ತಿಗಳ ವಿಚಾರದಲ್ಲಿ ನ್ಯಾಯನಿರ್ಣಯ ಮಾಡುವವರು ಯಾರು’ ಎಂಬುದು ಬಹಳ ಹಳೆಯದಾದ ಹಾಗೂ ಅಷ್ಟೇ ದುರ್ಬಳಕೆಯಾದ ಮಾತು. ಆದರೆ ಇಲ್ಲಿ ಈ ಮಾತಿನ ಅಗತ್ಯವೇನೂ ಇಲ್ಲ. ಇಲ್ಲಿ ಬೇಕಿರುವುದು, ಯಾವುದು ಯುಕ್ತ ಎಂಬುದನ್ನು ಪರಿಶೀಲಿಸಿ, ಸಮಸ್ಯೆಯನ್ನು ಪರಿಹರಿಸಬಲ್ಲ ನಿಷ್ಪಕ್ಷಪಾತ ಸಾಂಸ್ಥಿಕ ವ್ಯಕ್ತಿತ್ವ.

ಆದರೆ ಅಂತಹ ವ್ಯಕ್ತಿತ್ವ ಈಗ ಉಳಿದಿಲ್ಲ. ಕಳೆದ ಎರಡೂವರೆ ದಶಕಗಳ ಅವಧಿಯಲ್ಲಿ ಸುಪ್ರೀಂ ಕೋರ್ಟ್‌, ಇತರರಿಂದ ದೂರವಾಗದಿದ್ದರೂ, ತನ್ನನ್ನು ತನ್ನದೇ ಆದ ಸಾಂಸ್ಥಿಕ ಚೌಕಟ್ಟಿನಲ್ಲಿ ಮುಚ್ಚಿಟ್ಟುಕೊಂಡಿದೆ. ಈಗ ಕಾನೂನು ಸಚಿವ ಕೂಡ ಅವರಿಗೆ ಹೆಚ್ಚೇನನ್ನೂ ಹೇಳಲು ಆಗದು – ಕಾಂಗ್ರೆಸ್ಸಿನ ಹಂಸರಾಜ ಭಾರದ್ವಾಜ್ ಅವರ ಕಾಲದ ನಂತರವಂತೂ ಇದು ಸಾಧ್ಯವೇ ಆಗುತ್ತಿಲ್ಲ. ಭಾರದ್ವಾಜ್ ಅವರ ರಾಜಕೀಯ ಚುರುಕಿನ ಕಪಟತನವು ಅವರ ಸ್ಥಾನಮಾನ ಮತ್ತು ಕಾನೂನು ಪಾಂಡಿತ್ಯಕ್ಕಿಂತ ಹೆಚ್ಚಿತ್ತು ಎಂಬುದನ್ನು ಒಮ್ಮೆ ಪಕ್ಕಕ್ಕೆ ಇಡೋಣ.

ರಾಷ್ಟ್ರಪತಿ ಹುದ್ದೆಗೆ ಈಚೆಗಷ್ಟೇ ಬಂದಿರುವ ರಾಮನಾಥ ಕೋವಿಂದ್‌ ಅವರು ನ್ಯಾಯಮೂರ್ತಿಗಳಿಗೆ ಕಿವಿಮಾತು ಹೇಳುವ ವ್ಯಕ್ತಿತ್ವ ಹೊಂದಿರಲಿಕ್ಕಿಲ್ಲ. ಆದರೆ ಗಣರಾಜ್ಯವೊಂದರ ರಾಷ್ಟ್ರಪತಿ ಹುದ್ದೆಗೆ ಸೂಕ್ತವಾದಂತಹ ವ್ಯಕ್ತಿತ್ವ ತಮ್ಮಲ್ಲಿ ಇದೆ ಎಂದು ತೋರಿಸಿಕೊಳ್ಳುವಂತಹ ಸಂದರ್ಭ ಬಂದಿರುವಂತಿದೆ. ಆದರೆ ಯಾರಾದರೊಬ್ಬರು ಈಗ ನಡೆಯುತ್ತಿರುವ ವಿದ್ಯಮಾನಗಳನ್ನು ತಡೆಯಬೇಕು, ‘ನೀವೆಲ್ಲರೂ’ ಒಂದೇ ಗುಂಪಿನವರು ಎಂದು ತಿಳಿಹೇಳಬೇಕು.

ನಾವು ಅನುಸರಿಸುತ್ತಿರುವ ಆಂಗ್ಲೊ–ಸ್ಯಾಕ್ಸನ್‌ ನ್ಯಾಯ ವ್ಯವಸ್ಥೆಯಲ್ಲಿ ಪೂರ್ವ ನಿದರ್ಶನಗಳನ್ನು ಆಧರಿಸಿ ಈಗ ಮಾಡಬೇಕಿರುವುದು ಏನು ಎಂಬುದನ್ನು ನಿರ್ಣಯಿಸಲಾಗುತ್ತದೆ. ಆದರೆ ಈಗ ಎದುರಾಗಿರುವಂಥ ಸಂದರ್ಭದಲ್ಲಿ ಏನು ಮಾಡಬೇಕು ಎಂಬ ಬಗ್ಗೆ ಪೂರ್ವ ನಿದರ್ಶನಗಳು ಇಲ್ಲ. ಹಿರಿಯರನ್ನು ಹಿಂದಕ್ಕೆ ತಳ್ಳಿ ಇನ್ನೊಬ್ಬರು ಮುಂದೆ ಬಂದಿರುವ, ಒಳ್ಳೆಯ ನ್ಯಾಯಮೂರ್ತಿಯಾಗಿದ್ದಕ್ಕೆ ತೊಂದರೆಗೆ ಸಿಲುಕಿಕೊಂಡ, ಸ್ನೇಹಪರವಾಗಿ ಇದ್ದಿದ್ದಕ್ಕೆ ನೆರವು ಪಡೆದ ಉದಾಹರಣೆಗಳು ಇವೆ. ಇಂದಿರಾ ಗಾಂಧಿ ಅವರ ಆಡಳಿತಾವಧಿಯಲ್ಲಿ ಇಂಥವು ಆಗಿವೆ. ಹಾಗೆಯೇ, ಅವರ ಆಡಳಿತ ಅವಧಿಯಲ್ಲಿ ನಾವು ಎಲ್ಲ ಕಾಲಗಳಲ್ಲೂ ಅತ್ಯಂತ ಹೆಚ್ಚು ಗೌರವಿಸುವ ನ್ಯಾಯಮೂರ್ತಿಯನ್ನು ಕಾಣುವಂತಾಯಿತು: ಎಚ್.ಆರ್. ಖನ್ನಾ ಆ ನ್ಯಾಯಮೂರ್ತಿ. ಅವರಿಗೆ ಅರ್ಹವಾಗಿ ಸಿಗಬೇಕಿದ್ದ ಸಿಜೆಐ ಹುದ್ದೆಯನ್ನು ನಿರಾಕರಿಸಲಾಯಿತು ಎಂಬುದನ್ನು ಒಮ್ಮೆ ಮರೆಯೋಣ. ನ್ಯಾಯಮೂರ್ತಿಗಳ ಸಮಿತಿಯ (ಕೊಲಿಜಿಯಂ) ವ್ಯಾಪ್ತಿಯಲ್ಲೇ ಎಲ್ಲವನ್ನೂ ಮುಚ್ಚಿಡುತ್ತಿದ್ದಾಗಲೂ ಕೋರ್ಟ್‌ನ ಒಳಾಂಗಣದಲ್ಲಿ ಬಲವಾದ ಅಸಮ್ಮತಿಗಳು ವ್ಯಕ್ತವಾಗುತ್ತಿದ್ದವು, ಆದರೆ ಈಗ ಆಗಿರುವಂಥದ್ದು ಹಿಂದೆಂದೂ ಆಗಿರಲಿಲ್ಲ.

ಇಲ್ಲಿ ಯಾವುದೂ ಪಾರದರ್ಶಕವಾಗಿ ಇಲ್ಲ, ಯಾವುದನ್ನೂ ಸಾರ್ವಜನಿಕ ಅವಗಾಹನೆಗೆ ತರುತ್ತಿಲ್ಲ. ಅಸಮ್ಮತಿಗಳನ್ನು, ಅಭಿಪ್ರಾಯ ಭೇದಗಳನ್ನು, ಒಬ್ಬ ವ್ಯಕ್ತಿಯನ್ನು ನ್ಯಾಯಮೂರ್ತಿಯನ್ನಾಗಿ ಏಕೆ ನೇಮಿಸಲಾಯಿತು ಎಂಬುದನ್ನು, ಇನ್ನೊಬ್ಬನಿಗೆ ಏಕೆ ಆ ಹುದ್ದೆಯನ್ನು ನಿರಾಕರಿಸಲಾಯಿತು ಎಂಬುದನ್ನು ಬಹಿರಂಗಪಡಿಸುತ್ತಿಲ್ಲ. ನಾಗರಿಕರು, ಸಂಸತ್ತು, ಮುಂದಿನ ತಲೆಮಾರುಗಳು, ಇತಿಹಾಸಕಾರರು ಏನನ್ನೂ ತಿಳಿದುಕೊಳ್ಳಲು ಆಗುವುದಿಲ್ಲ. ಸರ್ವಶಕ್ತವಾದ ಈ ನ್ಯಾಯಾಂಗ ಗುಂಪಿನ ಅತ್ಯಂತ ಹಿರಿಯ ನ್ಯಾಯಮೂರ್ತಿಗಳು ಮೌನ ಮತ್ತು ರಹಸ್ಯ ಕಾಯ್ದುಕೊಳ್ಳುವ ಶಪಥ ಮಾಡಿರುತ್ತಿದ್ದರು. ಅದನ್ನು ಇದುವರೆಗೆ ಮುರಿದಿರಲಿಲ್ಲ. ಮನೆಗೆ ಸಂಬಂಧಿಸಿದ ವಿಚಾರ ಮನೆಯೊಳಗೇ ಇರಬೇಕು ಎಂಬ ರೀತಿಯಲ್ಲಿ ಇದು ಇತ್ತು. ಇದನ್ನು ಈಗ ಮೀರಲಾಗಿದೆ – ಹೀಗೆ ಮಾಡಿದ್ದರಲ್ಲಿ ಮೊದಲಿಗರು ಸಿಜೆಐ ನಂತರದ ಅತ್ಯಂತ ಹಿರಿಯ ನ್ಯಾಯಮೂರ್ತಿಯಾಗಿರುವ ಜೆ. ಚಲಮೇಶ್ವರ್. ಇನ್ನುಳಿದ ಮೂರು ಜನ ನ್ಯಾಯಮೂರ್ತಿಗಳೂ ಅದೇ ಕೆಲಸ ಮಾಡಿದ್ದಾರೆ.

ರಾಜಕೀಯ ವರ್ಗಕ್ಕೆ ಎದುರಾಗಿ ನಿಂತು, ಕೊಲಿಜಿಯಂ ವ್ಯವಸ್ಥೆಯನ್ನು ರೂಪಿಸಿಕೊಂಡಾಗ ನ್ಯಾಯಾಂಗವು ಯಾವುದರಿಂದ ಹೊರಬರಲು ಯತ್ನಿಸಿತು ಎಂಬುದನ್ನು ಅರ್ಥ ಮಾಡಿಕೊಳ್ಳುವುದು ಸುಲಭ.  (ಈ ಲೇಖಕ ಸೇರಿದಂತೆ) ನಮ್ಮಲ್ಲಿ ಹಲವರು ಕೊಲಿಜಿಯಂ ಪರಿಕಲ್ಪನೆಗೆ ಈ ವಿವಾದಾತ್ಮಕ ವರ್ಷಗಳಲ್ಲಿ ಪೂರ್ತಿ ಬೆಂಬಲ ನೀಡಿದ್ದಾರೆ. ಇದಕ್ಕೊಂದು ತಾರ್ಕಿಕ ನೆಲೆ ಇತ್ತು. ಕೊಲಿಜಿಯಂ ವ್ಯವಸ್ಥೆಯಲ್ಲಿ ಏನೇ ದೋಷಗಳು ಇದ್ದರೂ, ನ್ಯಾಯಾಂಗ ನೇಮಕಾತಿಯಲ್ಲಿ ರಾಜಕಾರಣಿಗಳು ಪ್ರವೇಶಿಸಲು ಅವಕಾಶ ಕೊಡುವುದಕ್ಕಿಂತಲೂ ಕೊಲಿಜಿಯಂ ಉತ್ತಮ ಎಂಬುದು ಆ ತರ್ಕ. ನ್ಯಾಯಾಂಗ ಎಂಬುದು ವರ್ಷಗಳ ನಂತರ ಮತ್ತೊಂದು ಸಿಬಿಐ ಅಥವಾ ಅದರಂತಹ ಇತರ ಸಂಸ್ಥೆಗಳಂತೆ ಆಗಬಾರದು ಎಂಬುದು ನಮ್ಮ ಬಯಕೆಯಾಗಿತ್ತು.

ನಿಷ್ಪಕ್ಷಪಾತವಾಗಿ ಇರುವ ವಿಚಾರದಲ್ಲಿ ನ್ಯಾಯಾಂಗವು ನಮ್ಮನ್ನು ನಿರಾಸೆಗೆ ನೂಕಿಲ್ಲ. ಸಾಂವಿಧಾನಿಕ ಸಭ್ಯತೆ, ಉದಾರವಾದದಂತಹ ವಿಚಾರಗಳು ಎದುರಿಗಿದ್ದಾಗ ನ್ಯಾಯಾಂಗವು ಸರಿಯಾದ ತೀರ್ಮಾನವನ್ನೇ ತೆಗೆದುಕೊಂಡಿದೆ - ಖಾಸಗಿತನ ಮೂಲಭೂತ ಹಕ್ಕು ಎಂದು ಹೇಳಿರುವುದನ್ನು ಇಲ್ಲಿ ಉಲ್ಲೇಖಿಸಬಹುದು. ಆದರೆ ಈ ಎಲ್ಲ ಪ್ರಕ್ರಿಯೆಗಳ ನಡುವೆಯೇ ನ್ಯಾಯಾಂಗವು ತನ್ನ ಸುತ್ತಲಿನ ಬೇಲಿಯನ್ನು ತೀರಾ ಬಿಗಿಗೊಳಿಸಿಕೊಂಡಿದೆ. ಸಂಸತ್ತಿನ ಕಲಾಪಗಳು ನೇರಪ್ರಸಾರ ಆಗುತ್ತಿರುವ, ಮಾಹಿತಿ ಹಕ್ಕು ಕಾಯ್ದೆ ಜಾರಿಗೆ ಬಂದಿರುವ, ಹ್ಯಾಕಿಂಗ್‌ಗಳು ದೊಡ್ಡ ಮಟ್ಟದಲ್ಲಿ ಆಗುತ್ತಿರುವ, ಅತಿಹೆಚ್ಚಿನ ಪಾರದರ್ಶಕತೆ ಬೇಡುತ್ತಿರುವ ಇಂದಿನ ಕಾಲಮಾನದಲ್ಲೂ ನ್ಯಾಯಾಂಗವು ಹಿಂದಿನ ಕಾಲಘಟ್ಟದ ಸಂಸ್ಥೆಯಂತೆ ವರ್ತಿಸುತ್ತಿದೆ.

ಕೊಲಿಜಿಯಂ ವ್ಯವಸ್ಥೆಯನ್ನು ನ್ಯಾಯಾಂಗವು ಈಚಿನ ವರ್ಷಗಳಲ್ಲಿ ಅತ್ಯಂತ ಹೆಚ್ಚು ರಕ್ಷಣಾತ್ಮಕವಾಗಿ ನೋಡಿಕೊಳ್ಳುತ್ತಿದೆ. ಕೊಲಿಜಿಯಂ ಸದಸ್ಯತ್ವ ಎಂಬುದು ಒಂದು ಶ್ರೇಣಿಯ ದ್ಯೋತಕವೂ ಆಗಿದೆ. ಕೊಲಿಜಿಯಂನಲ್ಲಿನ ಚರ್ಚೆಗಳ ಬಗೆಗಿನ ಪ್ರಶ್ನೆಗಳಿಗೆ, ಅದರ ಚಟುವಟಿಕೆಗಳನ್ನು ಪಾರದರ್ಶಕವಾಗಿ ನಡೆಸಬೇಕು ಎಂಬ ಆಗ್ರಹಗಳಿಗೆ ಕೋಪದ ಪ್ರತಿಕ್ರಿಯೆ ನೀಡಲಾಯಿತು. ಚಲಮೇಶ್ವರ್ ಅವರ ಬಂಡಾಯ ಸಂಪೂರ್ಣ ಅನಿರೀಕ್ಷಿತವೇನೂ ಅಲ್ಲ. ಕೊಲಿಜಿಯಂ ವ್ಯವಸ್ಥೆ ಇನ್ನಷ್ಟು ತೆರೆದುಕೊಳ್ಳಬೇಕು, ಅದರ ಸಭೆಗಳ ವಿವರಗಳು ಪಾರದರ್ಶಕವಾಗಿರಬೇಕು ಎಂದು ಅವರು ಆಗ್ರಹಿಸುತ್ತಲೇ ಬಂದಿದ್ದಾರೆ. ಈ ಬೇಡಿಕೆಗಳು ತಿರಸ್ಕೃತಗೊಂಡಾಗ ಚಲಮೇಶ್ವರ್ ಅವರು ತೀರಾ ಈಚಿನವರೆಗೆ ಕೊಲಿಜಿಯಂ ಸಭೆಗಳಿಂದ ದೂರ ಉಳಿದಿದ್ದರು. ಈಗ ಆಗಿರುವ ಆಸ್ಫೋಟವು ಕೆಲವು ‘ಸೂಕ್ಷ್ಮ’ ಪ್ರಕರಣಗಳ ವಿಚಾರಣೆಗೆ ರಚಿಸಿರುವ ಪೀಠಗಳಿಗೆ ಸಂಬಂಧಿಸಿದ್ದು.

ದೇಶದ ಇತಿಹಾಸದಲ್ಲಿ ಇದು ನಿರ್ಣಾಯಕ ಕ್ಷಣ ಎಂದು ನ್ಯಾಯಮೂರ್ತಿ ಚಲಮೇಶ್ವರ್ ಬಣ್ಣಿಸಿದ್ದಾರೆ. ವ್ಯಕ್ತಿಯೊಬ್ಬ ಬಂಡೆದ್ದು ಸರ್ವಶಕ್ತ ನಾಯಕನೊಬ್ಬನ ಅಧಿಕಾರದ ಮೇಲೆ ದಾಳಿ ನಡೆಸಿದ್ದು, ಬಹುಮತದ ಸರ್ಕಾರವೊಂದರ ಮೇಲೆ ಪ್ರಹಾರ ನಡೆಸಿದ್ದು ನಿರ್ಣಾಯಕ ಸಂದರ್ಭಗಳಾಗಿ ಪರಿವರ್ತನೆಯಾದ ನಿದರ್ಶನಗಳು ನಮ್ಮ ದೇಶದ ರಾಜಕೀಯ ಇತಿಹಾಸದಲ್ಲಿ ಕಾಣುತ್ತವೆ. ಅಲಹಾಬಾದ್ ಹೈಕೋರ್ಟ್‌ನ ನ್ಯಾಯಮೂರ್ತಿ ಜಗಮೋಹನ್‌ ಲಾಲ್‌ ಸಿನ್ಹಾ ಅವರು ಇಂದಿರಾ ಗಾಂಧಿ ಅವರ ಮುನ್ನಡೆಯನ್ನು ತಡೆಯುವವರೆಗೆ, ಇಂದಿರಾ ಅವರು ತಮ್ಮ ಅಧಿಕಾರದ ಉತ್ತುಂಗದಲ್ಲಿ ಇದ್ದರು.

ಇದೇ ರೀತಿ, ರಾಜೀವ್ ಗಾಂಧಿ ಅವರು ವಿ.ಪಿ. ಸಿಂಗ್ ಅವರ ಬಂಡಾಯದಿಂದ ತೊಂದರೆಗೆ ಸಿಲುಕಿದರು. ಸಿಎಜಿ ಆಗಿದ್ದ ವಿನೋದ್ ರಾಯ್‌ ಅವರ ಪ್ರತಿರೋಧ ಇಲ್ಲದಿರುತ್ತಿದ್ದರೆ ಯುಪಿಎ ಮೈತ್ರಿಕೂಟ 2014ರಲ್ಲಿ ಕಂಡಂತಹ ಸೋಲನ್ನು ಕಾಣುತ್ತಿತ್ತೇ? ನ್ಯಾಯಯುತವಾಗಿ ಮಾತನಾಡಬೇಕು ಎಂದಾದರೆ, ಇದರ ಗರಿಮೆ ನ್ಯಾಯಮೂರ್ತಿ ಜಿ.ಎಸ್. ಸಿಂಗ್ವಿ ಅವರಿಗೂ ಸಲ್ಲಬೇಕು. 2ಜಿ ತರಂಗಾಂತರ ಹಂಚಿಕೆ ಸೇರಿದಂತೆ ಕೆಲವು ಅತ್ಯಂತ ದೊಡ್ಡ ಹಗರಣಗಳ ವಿಚಾರದಲ್ಲಿ ಕಠಿಣ ತೀರ್ಪು ನೀಡಿದವರು ಸಿಂಗ್ವಿ.

ಚಲಮೇಶ್ವರ್ ಅಥವಾ ಪತ್ರಿಕಾಗೋಷ್ಠಿ ನಡೆಸಿದ ನಾಲ್ಕೂ ಜನ ನ್ಯಾಯಮೂರ್ತಿಗಳು ನರೇಂದ್ರ ಮೋದಿ ನೇತೃತ್ವದ ಸರ್ಕಾರದ ರಭಸವನ್ನು ತಡೆಯುವಂತಹ ಶಕ್ತಿಯನ್ನು ಇನ್ನೂ ಪಡೆದಿಲ್ಲ. ಜಗಮೋಹನ್‌ ಲಾಲ್‌ ಸಿನ್ಹಾ ಅವರಂತೆ ಈ ನ್ಯಾಯಮೂರ್ತಿಗಳು ಸರ್ಕಾರಕ್ಕೆ ಸಂಬಂಧಿಸಿದ ಪ್ರಕರಣವೊಂದರ ವಿಚಾರಣೆ ನಡೆಸುತ್ತಿಲ್ಲ. ಈ ಹಂತದಲ್ಲಿ ಈ ನಾಲ್ವರು ನ್ಯಾಯಮೂರ್ತಿಗಳ ಸಮರ ಅವರದೇ ಸಂಸ್ಥೆಯೊಳಗೆ ನಡೆಯುವಂಥದ್ದು. ಹಾಗಾಗಿ, ಈ ವಿವಾದದಿಂದ ದೂರ ಉಳಿಯುವ ವಿವೇಕದ ಕೆಲಸವನ್ನು ಸರ್ಕಾರ ಮಾಡಿದೆ. ಈ ವಿವಾದ ಎಲ್ಲಿಗೆ ತಲುಪುತ್ತದೆ, ಹೇಗೆ ಕೊನೆಗೊಳ್ಳುತ್ತದೆ ಎಂಬುದು ಸಿಜೆಐ ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ಆಧರಿಸಿದೆ.

ವಿವಾದಕ್ಕೆ ಸಿಲುಕಿರುವ ಹಲವು ವಿಚಾರಗಳು ನ್ಯಾಯಾಂಗಕ್ಕೆ ಮಾತ್ರ ಸಂಬಂಧಿಸಿದವು. ಆ ವಿವಾದಗಳ ವಿಚಾರದಲ್ಲಿ ಏನಾಗುತ್ತದೆ ಎಂಬುದು ನ್ಯಾಯಾಂಗದ ಘನತೆ ಮತ್ತು ಗೌರವಕ್ಕೆ ಮಾತ್ರ ಸಂಬಂಧಿಸಿದ್ದು. ಆದರೆ, ದೊಡ್ಡ ಮಟ್ಟದ ರಾಜಕಾರಣಕ್ಕೆ ಸಂಬಂಧಿಸಿದ ವಿಚಾರಗಳೂ ಇವೆ. ಈ ವಿಚಾರಗಳಲ್ಲಿ ಸಿಜೆಐ ದೀಪಕ್ ಮಿಶ್ರಾ ಅವರ ಪಾಂಡಿತ್ಯ ಪರೀಕ್ಷೆಗೆ ಒಳಗಾಗಲಿದೆ. ಕಲಾಪಗಳು ಸೋಮವಾರದಿಂದ ಎಂದಿನಂತೆ ನಡೆಯುತ್ತವೆಯೇ ಎಂಬುದು ನ್ಯಾಯಮೂರ್ತಿ ಮಿಶ್ರಾ ತಮ್ಮ ಪಾಂಡಿತ್ಯವನ್ನು ಹೇಗೆ ಬಳಸಿಕೊಳ್ಳಲಿದ್ದಾರೆ ಎಂಬುದನ್ನು ಆಧರಿಸಿದೆ.

(ಲೇಖಕ ‘ದಿ ಪ್ರಿಂಟ್‌’ನ ಸಂಸ್ಥಾಪಕ ಹಾಗೂ ಪ್ರಧಾನ ಸಂಪಾದಕ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT