ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಯಾಧೀಶರ ಸಾವಿನ ಸುತ್ತ ಸಂದೇಹದ ಹುತ್ತ

Last Updated 26 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಚಂಡ ಪ್ರಚಂಡರ ಕುರಿತು ನ್ಯಾಯ ತೀರ್ಮಾನ ಮಾಡಬೇಕಿರುವ ನ್ಯಾಯಾಧೀಶರೊಬ್ಬರು ಅತ್ಯಂತ ಸಂದೇಹಾಸ್ಪದ ಘಟನಾ ಕ್ರಮದಲ್ಲಿ ದಿನ ಬೆಳಗಾಗುವುದರೊಳಗೆ ಹೆಣವಾಗಿ ಉರುಳುತ್ತಾರೆ. ಹೃದಯಾಘಾತದಿಂದ ಉಂಟಾದ ಸಾವು ಎಂದು ವರದಿ ಬರೆದು ಕೈ ತೊಳೆದುಕೊಳ್ಳಲಾಗುತ್ತದೆ. ಮರಣದ ಮೂರು ವರ್ಷಗಳ ನಂತರ ದಿಟ್ಟ ವರದಿಗಾರನೊಬ್ಬ ಪ್ರಾಣದ ಹಂಗು ತೊರೆದು ವರ್ಷವಿಡೀ ದುಡಿದು ಬರೆದ ತನಿಖಾ ವರದಿಯನ್ನು ಪ್ರತಿಷ್ಠಿತ ಇಂಗ್ಲಿಷ್ ನಿಯತಕಾಲಿಕವೊಂದು ಪ್ರಕಟಿಸುತ್ತದೆ.

ಈ ಸಂಶಯಾಸ್ಪದ ಸಾವು ತನ್ನಷ್ಟಕ್ಕೆ ತಾನೇ ದೊಡ್ಡ ಸುದ್ದಿಯಾಗಬೇಕಿತ್ತು. ಆದರೆ ಅದೊಂದು ಪೂರ್ಣಪ್ರಮಾಣದ ಅಡಿಟಿಪ್ಪಣಿ ಕೂಡಾ ಆಗಿಲ್ಲ. ಸಮೂಹ ಮಾಧ್ಯಮಗಳು ಸತ್ಯದ ಶೋಧನೆಯ ತಮ್ಮ ಕೆಲಸವನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂಬ ಆರೋಪಗಳನ್ನು ಹೊತ್ತು ಖುದ್ದು ಕಟಕಟೆಯಲ್ಲಿ ನಿಂತಿವೆ. ನ್ಯಾಯಾಧೀಶ- ವಕೀಲ ಸಮುದಾಯ ತುಟಿ ಬಿಚ್ಚಿಲ್ಲ.

ಈ ವರದಿಯೇ ಅಂತಿಮ ಸತ್ಯವೆಂದು ಯಾರೂ ಹೇಳುವುದಿಲ್ಲ. ಆದರೆ ಅದು ಎತ್ತಿರುವ ಪ್ರಶ್ನೆಗಳಲ್ಲಿ ಜನತಂತ್ರದ ಆತ್ಮವನ್ನು ವಿಚಲಿತಗೊಳಿಸುವ ನಿಷ್ಠುರ ಅಂಶಗಳು ಅಡಗಿವೆ. ನ್ಯಾಯಾಧೀಶರೊಬ್ಬರ ಹತ್ಯೆಯ, ಭ್ರಷ್ಟಾಚಾರದ ಮತ್ತು ನ್ಯಾಯವ್ಯವಸ್ಥೆಯನ್ನು ಬಾಗಿಸಿ ತಿರುಚುವ ಹುನ್ನಾರದ ದುರ್ನಾತವಿದೆ. ವಾರವೇ ಉರುಳಿದರೂ ಈ ವರದಿಯ ಕುರಿತು ದೇಶದ ಘಟಾನುಘಟಿ ಇಂಗ್ಲಿಷ್ ಮತ್ತು ಹಿಂದಿ ವೃತ್ತಪತ್ರಿಕೆಗಳು ಮತ್ತು ಚಾನೆಲ್‌ಗಳು ವಹಿಸಿರುವ ಮೌನ ಕಿವಿ ಗಡಚಿಕ್ಕುವಂತಿದೆ. ಆಪಾದನೆ ಹೊತ್ತಿರುವ ಬಿಜೆಪಿ ಮತ್ತು ಆಪಾದನೆಯನ್ನು ಸಾರಿ ಹೇಳಬೇಕಿದ್ದ ಕಾಂಗ್ರೆಸ್ ಪಕ್ಷ ಮೌನಕ್ಕೆ ಶರಣಾಗಿವೆ.

ಸಂದೇಹಾಸ್ಪದ ಘಟನಾವಳಿಗಳಲ್ಲಿ ಸಾವಿಗೀಡಾದವರು ಮುಂಬೈನ ವಿಶೇಷ ಸಿಬಿಐ ನ್ಯಾಯಾಲಯದ ನ್ಯಾಯಾಧೀಶ ಬ್ರಿಜಶರಣ್ ಹರಕಿಶನ್ ಲೋಯಾ. ಈ ನ್ಯಾಯಾಧೀಶರ ಮುಂದೆ ಮುಖ್ಯ ಆರೋಪಿಯಾಗಿ ಕಟಕಟೆಯಲ್ಲಿ ನಿಂತಿದ್ದವರು ಪ್ರಧಾನಿ ನರೇಂದ್ರ ಮೋದಿಯವರ ನಂತರ ದೇಶದ ಅತ್ಯಂತ ಸರ್ವಶಕ್ತರಲ್ಲಿ ಒಬ್ಬರೆಂದು ಭಾವಿಸಲಾಗಿರುವ ಬಿಜೆಪಿ ಅಧ್ಯಕ್ಷ ಅಮಿತ್ ಷಾ ಅವರು. ಗುಜರಾತಿನ ಸೊಹ್ರಾಬುದ್ದೀನ್ ಶೇಖ್ ಎಂಬ ಪಾತಕಿಯೊಬ್ಬನನ್ನು ಅಲ್ಲಿನ ಪೊಲೀಸರು 2005ರಲ್ಲಿ ನಕಲಿ ಎನ್‌ಕೌಂಟರಿನಲ್ಲಿ ಕೊಂದು ಹಾಕಿದ್ದರು. ಮೋದಿಯವರು ಮುಖ್ಯಮಂತ್ರಿಯಾಗಿದ್ದ ಅಂದಿನ ಗುಜರಾತಿನ ಗೃಹಮಂತ್ರಿಯಾಗಿದ್ದವರು ಅಮಿತ್ ಷಾ.

ಶೇಖನನ್ನು ಲಷ್ಕರ್‌– ಎ– ತಯಬಾ ಭಯೋತ್ಪಾದಕನೆಂದು ಕರೆದು 2005ರ ನವೆಂಬರ್‌ನಲ್ಲಿ ಗುಜರಾತ್ ಪೊಲೀಸರು ಆತನನ್ನು ಗುಂಡಿಟ್ಟು ಕೊಂದಿದ್ದರು. ಶೇಖ್, ಅವನ ಪತ್ನಿ ಕೌಸರ್ ಬೀ ಹಾಗೂ ಅವನ ಸಹಚರ ತುಲಸೀರಾಂ ಪ್ರಜಾಪತಿಯನ್ನು ಅನಧಿಕೃತವಾಗಿ ವಶಕ್ಕೆ ಪಡೆದು ವಿಚಾರಣೆಯಿಲ್ಲದೆ ಕೊಂದು ಹಾಕಿದ ಸಂಗತಿ ಸುಪ್ರೀಂ ಕೋರ್ಟ್ ನೇಮಕ ಮಾಡಿದ್ದ ವಿಶೇಷ ತನಿಖೆಯಿಂದ ಹೊರಬಿದ್ದಿತ್ತು. ಶೇಖ್ ಭಯೋತ್ಪಾದಕ ಎಂಬ ಆರೋಪವನ್ನೂ ವಿಶೇಷ ತನಿಖಾ ತಂಡ ತಳ್ಳಿಹಾಕಿತ್ತು.

ಈ ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ 2010ರ ಜನವರಿಯಲ್ಲಿ ಸಿಬಿಐಗೆ ಒಪ್ಪಿಸಿತ್ತು. ಐದು ತಿಂಗಳ ನಂತರ ಗುಜರಾತಿನ ನ್ಯಾಯಾಲಯದಲ್ಲಿ ಅಮಿತ್ ಷಾ ವಿರುದ್ಧ ಸಿಬಿಐ ಆಪಾದನಾಪಟ್ಟಿ ಸಲ್ಲಿಸಿತು. ಸುಪ್ರೀಂ ಕೋರ್ಟ್ ಈ ಪ್ರಕರಣದ ವಿಚಾರಣೆಯನ್ನು 2012ರಲ್ಲಿ ಗುಜರಾತಿನಿಂದ ಹೊರಕ್ಕೆ ಮುಂಬೈಗೆ ವರ್ಗ ಮಾಡಿತು. ಮೊದಲಿಂದ ಕಡೆಯವರೆಗೆ ಒಬ್ಬರೇ ನ್ಯಾಯಾಧೀಶ ಈ ವಿಚಾರಣೆ ನಡೆಸಬೇಕೆಂದೂ ಆದೇಶ ನೀಡಿತ್ತು.

2014ರ ಮೇ ತಿಂಗಳಲ್ಲಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರಹಿಡಿಯಿತು. ಆಗ ಅಮಿತ್ ಷಾ ಅವರು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ. ಷಾ ಅವರು ಪ್ರತಿ ಸಲ ಏನಾದರೂ ಕಾರಣ ಹೇಳಿ ನ್ಯಾಯಾಲಯದ ಮುಂದೆ ಖುದ್ದು ಹಾಜರಾಗದೆ ತಪ್ಪಿಸಿಕೊಳ್ಳುತ್ತಿದ್ದಾರೆಂದು ನ್ಯಾಯಾಧೀಶ ಉತ್ಪತ್ 2014ರ ಜೂನ್ ಆರರಂದು ತೀವ್ರ ಆಕ್ಷೇಪ ಪ್ರಕಟಿಸಿದ್ದರು. ಮುಂದಿನ ವಿಚಾರಣೆಯ ದಿನಾಂಕ ಜೂನ್ 26 ಎಂದು ನಿಗದಿಯಾಗಿತ್ತು. ಜೂನ್ 25ರಂದು ಅವರ ಎತ್ತಂಗಡಿಯಾಗಿತ್ತು. ಷಾ ಗೈರುಹಾಜರಿಯನ್ನು ಆಕ್ಷೇಪಿಸಿದ 19 ದಿನಗಳಲ್ಲಿ ಉತ್ಪತ್ ಅವರನ್ನು ಪುಣೆಗೆ ವರ್ಗ ಮಾಡಲಾಯಿತು. ಷಾ ಅವರನ್ನು ಅಪಾದನಾ ಪಟ್ಟಿಯಿಂದ ಕೈ ಬಿಡುವ ಮನವಿಯ ಕುರಿತು ತೀರ್ಪು ನೀಡಬೇಕಿದ್ದ ದಿನದಂದೇ ವರ್ಗಾವಣೆ ಆಗಿತ್ತು. ತಮ್ಮ ಮಗಳ ಶಿಕ್ಷಣದ ಸಲುವಾಗಿ ಪುಣೆಗೆ ವರ್ಗ ಮಾಡಬೇಕೆಂಬ ಉತ್ಪತ್ ಅವರ ಕೋರಿಕೆ ಪ್ರಕಾರ ಈ ವರ್ಗಾವಣೆ ಜರುಗಿದೆ ಎಂದು ಬಾಂಬೆ ಹೈಕೋರ್ಟ್ ಸ್ಪಷ್ಟನೆ ನೀಡಿತು. ತೆರವಾದ ಜಾಗಕ್ಕೆ ಬ್ರಿಜಶರಣ್ ಲೋಯಾ ನೇಮಕ ನಡೆಯಿತು.

ಲೋಯಾ ಸಂಶಯಾಸ್ಪದವಾಗಿ ಸಾಯುತ್ತಾರೆ. ಅವರ ಜಾಗವನ್ನು ನ್ಯಾಯಾಧೀಶ ಎಂ.ಬಿ. ಗೋಸಾವಿ ತುಂಬುತ್ತಾರೆ. ಡಿಸೆಂಬರ್ 15ರಿಂದ 15 ದಿನಗಳ ವಿಚಾರಣೆ ನಡೆಸುವ ಗೋಸಾವಿ ತೀರ್ಪು ನೀಡಿ ಅಮಿತ್ ಷಾ ಅವರನ್ನು ಎಲ್ಲ ಆರೋಪಗಳಿಂದ ಮುಕ್ತಗೊಳಿಸುತ್ತಾರೆ ಮತ್ತು ಈ ತೀರ್ಪಿನ ವಿರುದ್ಧ ಸಿಬಿಐ ಮೇಲ್ಮನವಿ ಸಲ್ಲಿಸುವುದಿಲ್ಲ. ನೇಮಕವಾದ ನಾಲ್ಕು ತಿಂಗಳ ನಂತರ ಸಹೋದ್ಯೋಗಿಯೊಬ್ಬರ ಮಗಳ ಮದುವೆಗೆಂದು ಇಬ್ಬರು ಸಹನ್ಯಾಯಾಧೀಶರು ಲೋಯಾ ಅವರಿಗೆ ಇಷ್ಟವಿಲ್ಲದಿದ್ದರೂ ಬಲವಂತ ಮಾಡಿ ಅವರನ್ನು ನಾಗಪುರಕ್ಕೆ ಕರೆದೊಯ್ಯುತ್ತಾರೆ. ಸರ್ಕಾರಿ ವಿಐಪಿ ಅತಿಥಿ ಗೃಹದಲ್ಲಿ ತಂಗಿದ್ದ ಅವರಿಗೆ ನವೆಂಬರ್ 30ರ ಮಧ್ಯರಾತ್ರಿ ಎದೆನೋವು ಬರುತ್ತದೆ.

ಸಹನ್ಯಾಯಾಧೀಶರಿಬ್ಬರೂ ಲೋಯಾ ಅವರನ್ನು ಆಟೊದಲ್ಲಿ ಆಸ್ಪತ್ರೆಗೆ ಒಯ್ಯುತ್ತಾರೆ. ಸಾವಿನ ಒಂದೂವರೆ ತಿಂಗಳ ನಂತರ ಕುಟುಂಬದವರನ್ನು ಭೇಟಿ ಮಾಡುತ್ತಾರೆ. ಆನಂತರ ಅವರದು ಗಾಢ ಮೌನ.

‘ಲೋಯಾ ತೀವ್ರ ಒತ್ತಡದಲ್ಲಿದ್ದರು. ಮುಂಬೈ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಮೋಹಿತ್ ಷಾ ನನ್ನ ಸೋದರನನ್ನು ಸಿವಿಲ್ ಡ್ರೆಸ್‌ನಲ್ಲಿ ಕರೆಯಿಸಿ ಮಾತಾಡುತ್ತಿದ್ದರು. ಆದಷ್ಟು ತ್ವರಿತವಾಗಿ ಸಕಾರಾತ್ಮಕ ತೀರ್ಪು ನೀಡುವಂತೆ ಒತ್ತಡ ಹೇರುತ್ತಿದ್ದರು. ಆದರೆ ಕೇಸಿನ ಅಧ್ಯಯನ ಮಾಡುತ್ತಿರುವುದಾಗಿಯೂ, ಕಾಲ ಬಂದಾಗ ಸತ್ಯ ತೀರ್ಪು ನೀಡುವುದಾಗಿಯೂ ನನ್ನ ಸೋದರ ದೃಢ ಜವಾಬು ನೀಡುತ್ತಿದ್ದರು. ಆದರೂ ಡಿಸೆಂಬರ್ 30ರೊಳಗೆ ತಿಂಗಳೊಪ್ಪತ್ತಿನಲ್ಲಿ ತೀರ್ಪು ನೀಡುವಂತೆ ಅವರ ಮೇಲೆ ಬಹಳ ಒತ್ತಡವಿತ್ತು. ನೂರು ಕೋಟಿ ರೂಪಾಯಿಯ ಲಂಚದ ಆಮಿಷವನ್ನು ಖುದ್ದು ಮೋಹಿತ್ ಷಾ ಒಡ್ಡಿದ್ದರೆಂಬ ಸಂಗತಿಯನ್ನು ನನ್ನ ಸೋದರನೇ ಅವರ ಸಾವಿಗೆ 15-20 ದಿನ ಮುನ್ನ ತಿಳಿಸಿದ್ದರು’ ಎಂದು ಲೋಯಾ ಅವರ ಸೋದರಿ ಡಾ.ಅನುರಾಧಾ ಬಿಯಾನಿ ‘ದಿ ಕಾರವಾನ್’ ಜೊತೆಗಿನ ವಿಡಿಯೊ ಸಂವಾದದಲ್ಲಿ ಹೇಳಿದ್ದಾರೆ. ತಂದೆ ಹರಕಿಶನ್ ಲೋಯಾ ಮತ್ತು ಇನ್ನೊಬ್ಬ ಸೋದರಿ ಸರಿತಾ ಮಂಧಾನ ಈ ಅಂಶವನ್ನು ತಮ್ಮ ಮಾತುಗಳಲ್ಲಿ ಅನುಮೋದಿಸಿದ್ದಾರೆ.

ರಾಜೀನಾಮೆ ಸಲ್ಲಿಸುವ ಇಲ್ಲವೇ ವರ್ಗಾವಣೆ ಮಾಡಿಸಿಕೊಳ್ಳುವ ಮನಸ್ಥಿತಿ ಸೋದರನದಾಗಿತ್ತು ಎಂದು ಸರಿತಾ ಹೇಳಿದ್ದಾರೆ. ಲೋಯಾ ಸಾವಿನ ಮೂರು ತಿಂಗಳ ನಂತರ 2015ರ ಫೆಬ್ರುವರಿಯಲ್ಲಿ ಮುಂಬೈ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಮೋಹಿತ್ ಷಾ, ಲೋಯಾ ಕುಟುಂಬದವರನ್ನು ಭೇಟಿ ಮಾಡಿದ್ದರು. ₹ 100 ಕೋಟಿ ಆಮಿಷದ ಆಪಾದನೆ ಕುರಿತು ಮೋಹಿತ್ ಷಾ ಈವರೆಗೆ ಪ್ರತಿಕ್ರಿಯೆ ನೀಡಿಲ್ಲ.

ಸಾವು ಸಂಭವಿಸಿದ ಮೂರು ವರ್ಷಗಳ ನಂತರ, ಅದೂ ಗುಜರಾತ್ ವಿಧಾನಸಭಾ ಚುನಾವಣಾ ಸಮರದ ನಟ್ಟ ನಡುವೆ ಈ ಆರೋಪವನ್ನು ಬಡಿದೆಬ್ಬಿಸಿ ನಿಲ್ಲಿಸುವುದರ ಹಿಂದೆ ಬಿಜೆಪಿ ವಿರೋಧಿಗಳ ರಾಜಕೀಯ ದುರುದ್ದೇಶವಿದೆ ಎಂಬುದು ಕೇಸರಿ ಪಕ್ಷದ ಬೆಂಬಲಿಗರ ಆರೋಪ. ಲೋಯಾ ಕುಟುಂಬ ಮೂರು ವರ್ಷಗಳ ಕಾಲ ಯಾಕೆ ಮೌನವಾಗಿತ್ತು ಎಂಬ ಪ್ರಶ್ನೆ ಕೇಳಲಾಗುತ್ತಿದೆ.

ಲೋಯಾ ಕುಟುಂಬ ಮೂರು ವರ್ಷ ಕಾಲ ಮೌನವಾಗಿರಲಿಲ್ಲ. ಎರಡನೆಯ ಮರಣೋತ್ತರ ಪರೀಕ್ಷೆಯ ಆಗ್ರಹಕ್ಕೆ ಯಾರೂ ಸೊಪ್ಪು ಹಾಕದಿದ್ದಾಗ, ಅಸಹಜ ಸಾವಿನ ಸಂದೇಹಕ್ಕೆ ವ್ಯವಸ್ಥೆ ಕಿವುಡಾಗಿತ್ತು. ಕುಟುಂಬ ಕಟ್ಟಕಡೆಗೆ ಮೊರೆ ಹೋಗಿದ್ದು ಪತ್ರಕರ್ತರೊಬ್ಬರನ್ನು.

ಮರಣದ ಎರಡು ತಿಂಗಳ ನಂತರ ಅನುಜ್ ಲೋಯಾ ಅವರು ಮುಖ್ಯ ನ್ಯಾಯಮೂರ್ತಿ ಮೋಹಿತ್ ಷಾ ಅವರಿಗೆ ಪತ್ರ ಬರೆದು ತಮ್ಮ ತಂದೆ ಲೋಯಾ ಅವರ ಅಸಹಜ ಮರಣದ ಕುರಿತು ವಿಚಾರಣೆ ನಡೆಸಬೇಕೆಂದು ಕೋರುತ್ತಾರೆ. ಇವರ ಕೋರಿಕೆಗೆ ಷಾ ಅವರಿಂದ ಯಾವುದೇ ಪ್ರತಿಕ್ರಿಯೆ ಬರುವುದಿಲ್ಲ. ಕಡೆಗೆ ಕುಟುಂಬ, ಪತ್ರಕರ್ತ ಟಾಕ್ಲೆ ಅವರನ್ನು ಸಂಪರ್ಕಿಸುತ್ತದೆ.

ವರದಿಗಾರ ನಿರಂಜನ ಟಾಕ್ಲೆ ಇಡೀ ಒಂದು ವರ್ಷ ಲೋಯಾ ಕುಟುಂಬವರ್ಗದೊಡನೆ ಮಾತುಕತೆ ನಡೆಸಿ ಶಂಕಾಸ್ಪದ ಸಾವಿನ ವರದಿಯನ್ನು ಬೇರು ಮಟ್ಟದಿಂದ ತನಿಖೆ ಮಾಡಿ ಕಟ್ಟಿಕೊಟ್ಟಿದ್ದಾರೆ. ಲೋಯಾ ಅವರ ಸೋದರಿಯರಾದ ಡಾ.ಅನುರಾಧಾ ಬಿಯಾನಿ ಮತ್ತು ಸರಿತಾ ಮಂಧಾನೆ ಹಾಗೂ ತಂದೆ ಹರಕಿಶನ್ ಲೋಯಾ ಅವರು ನ್ಯಾಯಾಧೀಶ ಲೋಯಾ ಸಾವಿನ ಕುರಿತು ಮೂಲಭೂತ ಪ್ರಶ್ನೆಗಳನ್ನು ಎತ್ತಿದ್ದಾರೆ. ಲೋಯಾ ಅವರ ಪತ್ನಿ ಶರ್ಮಿಳಾ ಮತ್ತು ಅನುಜ್ ಲೋಯಾ ‘ಜೀವಭಯ’ದ ಕಾರಣ ಮುಕ್ತವಾಗಿ ಮಾತಾಡಲು ಮುಂದೆ ಬಂದಿಲ್ಲ. ಟಾಕ್ಲೆ ಬಹಳ ಸುತ್ತಾಡಿ ವರ್ಷವಿಡೀ ಶ್ರಮಿಸಿ ವರದಿ ಸಿದ್ಧಪಡಿಸಿದರೂ ಅದನ್ನು ಪ್ರಕಟಿಸಲು ಯಾರೂ ಮುಂದೆ ಬರುವುದಿಲ್ಲ. ಇಂಗ್ಲಿಷ್ ನಿಯತಕಾಲಿಕ ‘ದಿ ಕಾರವಾನ್’ ದಿಟ್ಟತನ ತೋರುತ್ತದೆ. ತಮಗೆ 50 ವರ್ಷ ವಯಸ್ಸಾಗಿದ್ದು ಪ್ರಾಣಭೀತಿ ಇಲ್ಲವೆಂದು ಸಾರಿದ್ದಾರೆ ವರದಿಗಾರ ಟಾಕ್ಲೆ.

ಮರಣೋತ್ತರ ಪರೀಕ್ಷೆಯಲ್ಲಿ ಲೋಯಾ ಸಾವಿನ ಸಮಯವನ್ನು 2014ರ ಡಿಸೆಂಬರ್ ಒಂದರ ತಡರಾತ್ರಿ ನಾಲ್ಕು ಗಂಟೆಗೆ ಎದೆ ನೋವಿನ ನಂತರ ಮುಂಜಾನೆ 6.15 ಎಂದು ನಮೂದಿಸಲಾಗಿದೆ. ಮರಣೋತ್ತರ ಪರೀಕ್ಷೆ ನಡೆದದ್ದು ಡಿಸೆಂಬರ್ ಒಂದರ ಬೆಳಿಗ್ಗೆ 10.55ರಿಂದ ಒಂದು ತಾಸಿನ ಕಾಲ. ಆದರೆ ಲೋಯಾ ಸೋದರಿಯರ ಪ್ರಕಾರ ಸಾವಿನ ಕುರಿತ ಫೋನ್ ಬಂದದ್ದು 2014ರ ಡಿಸೆಂಬರ್ ಒಂದರ ಮುಂಜಾನೆ ಐದು ಗಂಟೆಗೆ. ಕರೆ ಮಾಡಿದವರು ತಮ್ಮನ್ನು ನ್ಯಾಯಾಧೀಶರೆಂದೂ ತಮ್ಮ ಹೆಸರು ಬಾರ್ಡೆ ಎಂದೂ ಗುರುತಿಸಿಕೊಂಡಿದ್ದರು. ಲೋಯಾಸಾಯುವ ಮುನ್ನವೇ ಅವರು ಸಾಯಲಿದ್ದಾರೆ ಎಂಬ ವರ್ತಮಾನ ಬಾರ್ಡೆಯವರಿಗೆ ಗೊತ್ತಾದದ್ದು ಹೇಗೆ? ಲೋಯಾ ಸಂಬಂಧಿಕನೆಂದು ಹೇಳಿಕೊಂಡ ವ್ಯಕ್ತಿಯಿಂದ ಮರಣೋತ್ತರ ಪರೀಕ್ಷಾ ವರದಿಗೆ ಸಹಿ ಪಡೆಯಲಾಗಿದೆ. ಅಂತಹ ಯಾವ ಸಂಬಂಧಿಕರೂ ನಾಗಪುರದಲ್ಲಿ ಲೋಯಾ ಕುಟುಂಬಕ್ಕೆ ಇರಲಿಲ್ಲ. ಹಾಗಿದ್ದರೆ ಈ ವ್ಯಕ್ತಿ ಯಾರು?

ಶವವನ್ನು ಕುಟುಂಬದ ಪೂರ್ವಿಕರ ಊರಾದ ಗಾಟೇಗಾಂವ್‌ಗೆ ಕಳಿಸಿಕೊಡಲಾಗುವುದು ಎಂದು ಈಶ್ವರ ಬಹೇತಿ ಎಂಬ ಆರ್‌ಎಸ್‌ಎಸ್‌ ಕಾರ್ಯಕರ್ತ ತಿಳಿಸುತ್ತಾರೆ. ಲೋಯಾ ಸಾವಿನ ಸುದ್ದಿ ಇವರಿಗೆ ಗೊತ್ತಾದದ್ದಾದರೂ ಹೇಗೆ ಮತ್ತು ಸರ್ಕಾರಿ ಸಿಬ್ಬಂದಿಗೆ ಬದಲಾಗಿ ಆರ್‌ಎಸ್‌ಎಸ್‌ ಕಾರ್ಯಕರ್ತರೊಬ್ಬರು ಈ ಸಾವಿನ ಸುದ್ದಿಯನ್ನು ಕುಟುಂಬಕ್ಕೆ ಯಾಕೆ ಮುಟ್ಟಿಸುತ್ತಾರೆ ಎಂಬುದೇ ಮುಂತಾದ ಪ್ರಶ್ನೆಗಳು ಸಾಲಾಗಿ ನಿಲ್ಲುತ್ತವೆ. ಉತ್ತರ ಬೇಕಿದ್ದರೆ ತನಿಖೆಯೊಂದೇ ದಾರಿ.

ದೆಹಲಿ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಅಜಿತ್ ಪ್ರಕಾಶ್ ಷಾ ಅವರು ದೇಶದ ಕಾನೂನು ಆಯೋಗದ ಅಧ್ಯಕ್ಷರೂ ಆಗಿ ಸೇವೆ ಸಲ್ಲಿಸಿದವರು. ನ್ಯಾಯಾಂಗ ಕ್ಷೇತ್ರದ ಬಹುಗೌರವಾನ್ವಿತರು. ಲೋಯಾ ಸಾವನ್ನು ವಿಚಾರಣೆಗೆ ಒಳಪಡಿಸುವುದು ಉಚಿತವೆಂದು ಹೇಳಿದ್ದಾರೆ.

‘ಇತ್ತೀಚಿನ ದಿನಗಳಲ್ಲಿ ನ್ಯಾಯಾಂಗ ತನಗೆ ತಾನೇ ಮಾಡಿಕೊಂಡ ಗಾಯಗಳನ್ನು ನೆಕ್ಕಿಕೊಳ್ಳುತ್ತಿದೆ. ನ್ಯಾಯಾಂಗದ ಘನತೆ- ಸ್ವಾತಂತ್ರ್ಯ ಕಾಪಾಡಲೆಂದಾದರೂ ಇಂತಹ ಆಪಾದನೆಗಳ ವಿಚಾರಣೆ ನಡೆಯಲೇಬೇಕು’ ಎಂಬ ಷಾ ಮಾತುಗಳನ್ನು ಆತ್ಮಸಾಕ್ಷಿಯುಳ್ಳ ಯಾವುದೇ ವ್ಯವಸ್ಥೆ ತಳ್ಳಿ ಹಾಕಕೂಡದು.

ಗುಜರಾತಿನ ಚುನಾವಣೆಗಳ ನಟ್ಟ ನಡುವೆ ಈ ಪ್ರಕರಣದ ಕುರಿತು ದನಿಯೆತ್ತಿದರೆ, ‘ಕಾಂಗ್ರೆಸ್‌ ಸೊಹ್ರಾಬುದ್ದೀನ್ ಶೇಖ್ ಎಂಬ ಪಾತಕಿಯನ್ನು ಬೆಂಬಲಿಸುತ್ತಿದೆ’ ಎಂದು ಬಿಜೆಪಿಯು ಹಿಂದೂ-ಮುಸ್ಲಿಂ ಕೋಮು ಧ್ರುವೀಕರಣ ಮಾಡಿ ರಾಜಕೀಯ ಲಾಭ ಪಡೆಯುತ್ತದೆ ಎಂದು ಕಾಂಗ್ರೆಸ್ ಪಕ್ಷ ಬಾಯಿಗೆ ಬೀಗ ಧರಿಸಿದೆ. ಮೊದಲು ಕಾಂಗ್ರೆಸ್ ಮಾತಾಡಲಿ ಎಂದು ಬಿಜೆಪಿ ಕಾಯತೊಡಗಿದೆ.

ಸೊಹ್ರಾಬುದ್ದೀನ್ ಒಬ್ಬ ಕುಖ್ಯಾತ ಪಾತಕಿ ಎಂದು ಹೇಳಿ ಅವನ ಹತ್ಯೆಯನ್ನು ತಳ್ಳಿ ಹಾಕಲಾಯಿತು. ಆದರೆ ನ್ಯಾಯಾಧೀಶ ಲೋಯಾ ಭಾರತೀಯ ನ್ಯಾಯಾಂಗ ವ್ಯವಸ್ಥೆಯ ಮಜಬೂತಾದ ಮೆಟ್ಟಿಲಾಗಿದ್ದವರು. ಅವರ ಸಾವಿನ ಚಿಂತೆ ನಮಗೆ ಯಾರಿಗೂ ಇಲ್ಲವಾಗುವುದು ಜನತಂತ್ರ ವ್ಯವಸ್ಥೆಗೆ ಹಿಡಿದ ಗೆದ್ದಲು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT