ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಷನಲ್ ಲೀಡರ್ `ಕೈ'ಲಿ ನ್ಯಾಷನಲ್ ಅನಿಮಲ್

ಅಕ್ಷರ ಗಾತ್ರ

ಅಯ್ಯ ಅವರು ತುರ್ತಾಗಿ ರೆಸಾರ್ಟ್‌ನಲ್ಲಿ ಸಭೆ ಕರೆದಿರುವುದು ಏಕೆ? ಎಂದು ಕುತೂಹಲದಿಂದಲೇ ಪೆಕರ ವರದಿ ಮಾಡಲು ಧಾವಿಸಿದ. ಸಭೆಗೆ ಬುದ್ಧಿಜೀವಿಗಳು, ಸಾಹಿತಿಗಳು, ಹಳೆ ಸಾಹಿತಿಗಳು, ಹೊಸ ಸಾಹಿತಿಗಳು, ಸಮಾಜದ ಮುಖಂಡರು, ರಾಷ್ಟ್ರಮಟ್ಟದ ಒಬ್ಬಿಬ್ಬರು ಪತ್ರಕರ್ತರುಗಳನ್ನು ಮಾತ್ರ ಆಹ್ವಾನಿಸಲಾಗಿತ್ತು. ಇದ್ಯಾವುದೂ ಗೊತ್ತಿಲ್ಲದೆ ಪೆಕರ ರೆಸಾರ್ಟ್‌ಗೆ ನುಗ್ಗಿಯೇಬಿಟ್ಟ. ದ್ವಾರಪಾಲಕರು ಪೆಕರನನ್ನು ತಡೆದೇ ಬಿಟ್ಟರು. ನನ್ನ ಹೆಸರು ಕೇಳಿದರೆ ಸಿಎಂಗಳೇ ನಡುಗುತ್ತಾರೆ, ಪಿಎಂಗಳೇ ಅದರುತ್ತಾರೆ ಇವನ್ಯಾವ ಸೀಮೆ ಸೆಕ್ಯುರಿಟಿ ಎಂದು ಪೆಕರನಿಗೆ ಸಿಟ್ಟು ಬಂತು.

`ರೀ ಸ್ವಾಮಿ ನಾನ್ಯಾರು ಗೊತ್ತಾ' ಎಂದು ಗಟ್ಟಿ ಸ್ವರದಲ್ಲಿ ಒಂದು ಗುಟುರು ಹಾಕಿಯೇ ಬಿಟ್ಟ. ಈ ವ್ಯಕ್ತಿ ಈ ರೀತಿ ಗಟ್ಟಿ ದನಿಯಲ್ಲಿ ಆರ್ಭಟಿಸಬೇಕಾದರೆ ಅಯ್ಯ ಅವರ ಕಚೇರಿಯವರೇ ಇರಬೇಕು ಎಂದು ಭಯಬಿದ್ದ ದ್ವಾರಪಾಲಕರು ಪೆಕರನನ್ನು ಒಳಗೆ ಕಳುಹಿಸಿ ಸೈಲೆಂಟಾದರು.

ಡೆಲ್ಲಿಯಿಂದ ಬೆಂಗಳೂರುವರೆಗೆ ನನ್ನ ಹೆಸರು ಕೇಳದವರೇ ಇಲ್ಲ, ಈನನ್ಮಗನಿಗೇನು ಗೊತ್ತು ನನ್ನ ಖದರು ಎಂದು ಸ್ವಗತದಲ್ಲಿ ಹೇಳುತ್ತಾ ಪೆಕರ ಸಭಾಂಗಣಕ್ಕೆ ಬಂದ ಕೂಡಲೇ ಬುಕ್ಕಿಗಳನ್ನು ಕಂಡು ಕ್ರಿಕೆಟ್ ಆಟಗಾರರು ಬೆಚ್ಚಿಬೀಳುವಂತೆ ಬೆಚ್ಚಿಬಿದ್ದ. ಅಲ್ಲಿ ರಂ ಸಾಹಿತಿಗಳಿಂದ ಹಿಡಿದು ಬಂ ಸಾಹಿತಿಗಳವರೆಗೆ, ಶಾಸನಯುಗದ ಸಾಹಿತಿಗಳಿಂದ ಹಿಡಿದು ಸಿ.ಆರ್. ಹುಂಡಿ ಸಾಹಿತಿಗಳವರೆಗೆ ಎಲ್ಲರೂ ಕಿಕ್ಕಿರಿದು ಸೇರಿದ್ದರು. ಬ್ರಹ್ಮಾಂಡ ಜೋತಿಷಿಗಳ ರೀತಿಯಲ್ಲಿ ಕಾಣುವ ಗುಂಪೊಂದು ಮಂತ್ರ ಪಠಿಸುತ್ತಾ ಕುಳಿತಿತ್ತು, ಅಯ್ಯ ಅವರು ನೇರವಾಗಿ ವೇದಿಕೆಗೆ ಆಗಮಿಸುತ್ತಿದ್ದಂತೆಯೇ ಭಾರೀ ಕರತಾಡನ. `ರಾಷ್ಟ್ರನಾಯಕನಿಗೆ ಜಯವಾಗಲಿ' ಎಂಬ ಹೊಸ ಘೋಷಣೆ.

ಅಯ್ಯ ಅವರಿಗೆ ಖುಷಿಯಾಯಿತು. ಇರಲಿ, ಇರಲಿ. ಇವತ್ತು ಇಲ್ಲಿ ಸೇರಿರೋದು ಖಾಸಗಿ ಸಭೆ. ನನಗೆ ನನ್ನ ಕಮ್ಯುನಿಟಿಯಿಂದ ಒತ್ತಡ ಇದೆ. ಅದಕ್ಕೆ ಆಪ್ತರು, ಕಮ್ಯುನಿಟಿ ಜನರನ್ನು ಮಾತ್ರ ಇಲ್ಲಿಗೆ ಕರೆದಿದ್ದೇನೆ. ನನಗೆ ನಿಮ್ಮ ಸಲಹೆ ಬೇಕು. ಅದರ ಪ್ರಕಾರ ನಾನು ಆ್ಯಕ್ಷನ್ ತಗೋಬೇಕು ಕೇಂದ್ರಕ್ಕೆ ಶಿಫಾರಸು ಮಾಡಬೇಕು” ಎಂದು ಅಯ್ಯ ಅವರು ಹೇಳಲಾರಂಭಿಸಿದರು.

ನಡುವೆ ಬಾಯಿಹಾಕಿದ ಬಾಲಬಡುಕನೊಬ್ಬ `ಮೊನ್ನೆ ಸದನದಲ್ಲಿ ರಪ್ಪ ಅವರು ಹೇಳಿದ್ದನ್ನು ಅಷ್ಟು ಸೀರಿಯಸ್ಸಾಗಿ ತಗೋಬೇಡಿ ಸಾರ್, ಲೋಕಸಭೆ ಚುನಾವಣೆ ನಂತರ ನಿಮ್ಮನ್ನು ಬದಲಿಸ್ತಾರೆ ಅಂತ ಹೇಳಿದ್ದು ನಮಗೂ ಬೇಜಾರಾಗಿದೆ' ಎಂದ.

`ನಮ್ಮ ಅಯ್ಯ ಅವರಿಗೆ ಅದೆಲ್ಲಾ ಯಾವ್‌ಲೆಕ್ಕ ಬಿಡಪ್ಪ, ಡಿಸೆಂಬರ್‌ಗೆ ಎಲೆಕ್ಷನ್ ಬರ್ಲಿ, ಆಗ ಇವ್ರೇ ನ್ಯಾಷನಲ್ ಲೀಡ್ರು. ಮೋದಿಗೆ ಸಮಾನ ಪೋಟಿ ಕೊಡೋದು ಅಂದ್ರೆ ನಮ್ಮ ಅಯ್ಯಾನೇ? ಡೆಲ್ಲಿ ಮೇಡಂಗೆ ಇದು ಗೊತ್ತಾಗಿದೆ. “ಮುಂದಿನ ಪ್ರಧಾನಿ ಅಯ್ಯ” ಎಂದು ಪಕ್ಷ ಘೋಷಿಸಿ ಎಲೆಕ್ಷನ್‌ಗೆ ಹೋಗ್ಲಿ ಹಿಂದೆ ಇರೊವೆಲ್ಲಾ ಮುಂದೆ ಬರ‌್ತಾರೆ ನೋಡ್ತಿರಿ. ಒಳ್ಳೆ ದಾರಾಸಿಂಗ್, ಕಿಂಗ್‌ಕಾಂಗ್ ಕುಸ್ತಿ ಇದ್ದಂಗಿರುತ್ತೆ'. ಇನ್ನೊಬ್ಬ ಅಭಿಮಾನಿ ಬೂಸಿ ಬಿಡಲಾರಂಭಿಸಿದ.

ಅಯ್ಯ ಅವರಿಗೆ ಸಿಟ್ಟು ಬಂತು. `ಏಯ್ ತಡಿಯೋ, ಬಾಯ್ ಮುಚ್ಚೋ' ಎಂದು ಅಭಿಮಾನಿಗಳ ಬಾಯಿ ಮುಚ್ಚಿಸಿದರು. ಅತ್ಯುತ್ಸಾಹದಿಂದ ನಿಗುರಾಡುತ್ತಿದ್ದವರೆಲ್ಲಾ ಡಿಕುಶಿ ಮಾರ್ ತರಹ ತೆಪ್ಪಗಾದರು.

ಅಯ್ಯ ಅವರು ಸಭೆಯ ಅಜೆಂಡಾವನ್ನು ಹೇಳಲಾರಂಭಿಸಿದರು. `ನೋಡಿ ನಮ್ಮ ಸಮಾಜದ ಅಭಯಾನಂದ ಪುರಿ ಸ್ವಾಮೀಜಿಗಳು ಕುರಿಯನ್ನು ರಾಷ್ಟ್ರೀಯ ಪ್ರಾಣಿ ಮಾಡಬೇಕು ಎಂದು ಹೇಳಿದ್ದಾರೆ. ಇದು ನಮ್ಮ ಕಾಲದಲ್ಲಿ ಆಗದಿದ್ದರೆ ಇನ್ಯಾವ ಕಾಲದಲ್ಲಿ ಆಗುತ್ತದೆ?' ಎಂದು ಕೇಳಿದ್ದಾರೆ.

ನನ್‌ಕೈಲಿ ಆಗುತ್ತಾ? ಫರ್ಮಾನು ಬೇರೆ ಹೊರಡಿಸಿರೋದ್ರಿಂದ ನಾನು ಈ ಕೆಲ್ಸ ಮಾಡಲೇಬೇಕಿದೆ, ಅದೊಂದನ್ನು ಮಾಡಿಸಿದ್ರೆ ಸಮಾಜ ಇರೋವರ್ಗೂ ನನ್ನ ಹೆಸರು ಶಾಶ್ವತವಾಗಿರುತ್ತೆ' ಎಂದು ಅಯ್ಯ ಮಾತು ಮುಗಿಸುತ್ತಿದ್ದಂತೆಯೇ, ಖಾವಿ ವೇಷಧಾರಿ ಭಕ್ತನೊಬ್ಬ ಹೌದು ಬುದ್ದೀ “ಅತ್ಯಂತ ವಿಷಕಾರಿಯಾದ ಎಕ್ಕದ ಎಲೆ ತಿಂದು ಅಮೃತದಂತಹ ಹಾಲು ಕೊಡುವ ಶಕ್ತಿ ಕುರಿಯಲ್ಲಿದೆ. ಗೋವಿನಲ್ಲಿರುವ ದೈವಿ ಹಾಗೂ ಔಷಧಿ ಗುಣ ಕುರಿಯಲ್ಲಿದೆ. ಇಂಥಾ ಪ್ರಾಣಿಗೆ ಬುದ್ಧಿ ಇಲ್ಲ ಅಂತ ಹೇಳುವವರಿಗೆ ಬುದ್ದಿ ಇಲ್ಲ.  ಇನ್ನು ಮುಂದೆ ಅವೆಲ್ಲಾ ನಡಿಯಲ್ಲ, ಕುರಿ ರಾಷ್ಟ್ರೀಯ ಪ್ರಾಣಿ ಆಗಲೇಬೇಕು. ನಮಗೆ `ಹುಲಿ ಬೇಡ ಕುರಿ ಬೇಕು' ಎಂದು ಕೂಗಿಕೊಂಡ.

`ನೀವು ಈಗ ಹೇಗೂ ನ್ಯಾಷನಲ್ ಲೀಡರ್ ಆಗ್ತಾ ಇದೀರಿ, ಕುರಿಯನ್ನು ನ್ಯಾಷನಲ್ ಅನಿಮಲ್ ಮಾಡಿಸಾರ್' ಎಂದು ಬಸವನಗುಡಿ ಸಾಹಿತಿಗಳು ಹೇಳಿದರು.

ರಂ ಸಾಹಿತ್ಯಯುಗದಿಂದ ಬಂದ ಸಾಹಿತಿಗಳೊಬ್ಬರು ಎದ್ದು ನಿಂತು, ಕುರಿ ಬಹಳ ಮಹತ್ವದ ಪ್ರಾಣಿ, ನೋಡಲು ಸುಂದರ ಕೂಡ. ನಾವೀಗ ಎಲ್ಲ ಹಂತದಲ್ಲೂ ಕುರಿಯ ಮಹತ್ವವನ್ನು ಹೇಳಲೇಬೇಕಾಗಿದೆ. ಸಾಹಿತ್ಯದಲ್ಲಿ, ಭಕ್ತಿಗೀತೆಗಳಲ್ಲಿ, ಸಿನಿಮಾದಲ್ಲಿ, ಸುಪ್ರಭಾತದಲ್ಲಿ ಕುರಿಯ ಮಹತ್ವ ಹೇಳಲೇಬೇಕು. ಈ ಕೆಲಸ ರಾಜ್ಯ ಸಾಹಿತ್ಯ ಅಕಾಡೆಮಿಯಲ್ಲೂ, ರಾಷ್ಟ್ರೀಯ ಸಾಹಿತ್ಯ ಅಕಾಡೆಮಿಯಲ್ಲೂ ಆಗಬೇಕು. ನಾನೊಂದು ಶ್ಲೋಕ ಬರೆದಿದ್ದೀನಿ ಕೇಳಿ:

ಶುಕ್ಲಾಂ ಕುರಿಧರಂ, ವಿಷ್ಣುಂ ಚತುಷ್ಪಾದಂ
ಮೋಟುಬಾಲಂ, ಮುದ್ದು ಮುಖಂ
ಬ್ಯಾ ಬ್ಯಾ ಬ್ಯಾ ಹೀ ಹೂ ಹಾಂ.

ಎಲ್ಲರೂ ಚಪ್ಪಾಳೆ ತಟ್ಟಿ ಅವರನ್ನು ಹುರಿದುಂಬಿಸಿದರು. ಈ ಶ್ಲೋಕ ಪ್ರಾಥಮಿಕ ಶಿಕ್ಷಣದಲ್ಲಿ ಕಡ್ಡಾಯ ಆಬೇಕು ಎಂಬ ನಿರ್ಣಯ ಆಯಿತು.
ಶಾಸನಕಾಲದ ಸಾಹಿತಿಗಳು ಎದ್ದುನಿಂತು, ಕುರಿ ಯೂನಿವರ್ಸಿಟಿಯೊಂದನ್ನು ಆರಂಭಿಸಬೇಕು ಎಂದು ಸಲಹೆ ಮಾಡಿದರು. ಎಲ್ಲರೂ ರೋಮಾಂಚಿತರಾದರು.

`ಕುರಿ' ಅನ್ನುವುದು ಪ್ರಾಚೀನಕಾಲದ ಸಾಹಿತ್ಯದಲ್ಲಿ ಇದೆ. ಕ್ರಿಸ್ತ ಪೂರ್ವದಲ್ಲೂ ನಮ್ಮ ಜನ ಇದ್ದರು. ಕಾನಿಷ್ಕನ ಕಾಲದಲ್ಲೇ ಕುರಿನಾಣ್ಯ ಇತ್ತು ಸಾರ್, ಯಜುರ್ವೇದದಲ್ಲೇ ಕುರಿ ಪ್ರಸ್ತಾಪ ಇದೆ. ಸುಮ್‌ಸುಮ್ನೆ ಕುರಿಯನ್ನು ಮಬ್ಬು, ದಡ್ಡಪ್ರಾಣಿ ಅಂತ ಹೇಳೋದು ತಪ್ಪು. ಕುರಿತೋದದೆಯುಂ ಕಾವ್ಯಪ್ರಯೋಗ ಪರಿಣತಮತಿಗಳ್ ಎಂದು ಪ್ರಾಚೀನ ಕವಿಯೇ ಹೇಳಿಲ್ಲವೇ? `ಕುರಿ' ಅನ್ನೋ ಪದ ಅಲ್ಲೇ ಬಳಸಿದ್ದಾನೆ ನೋಡಿ, “ಕುರಿತು” ಅನ್ನೋ ಪದದಲ್ಲೂ ಕುರಿ ಇದೆ ನೋಡಿ ಸಾರ್‌” ಎಂದು ಚರಿತ್ರೆಯ ಪುಟಗಳನ್ನೇ ತೆರೆಯಲಾರಂಭಿಸಿದರು.

`ಹೇ ಭಾರೀ ಹೇಳಿದ್ರಿ ಬಿಡ್ರಿ' ಎಂದು ಬೀದರ್, ರಾಯಚೂರು, ಕೊಪ್ಪಳದಿಂದ ಬಂದಿದ್ದ ಅಭಿಮಾನಿಗಳು ಹೇಳಿದರು. ಇನ್ನು ಮುಂದೆ ನಾವು ನಮ್ಮ ಹೆಸರಿನ ಮುಂದೆ `ಕುರಿ' ಎನ್ನುವ ಸರ್‌ನೇಮ್ ಸೇರಿಸಿಕೊಳ್ಳಬೇಕು ಎಂದು ಒಬ್ಬರು ಸಲಹೆ ಮಾಡಿದರು. ಕುರಿಯನ್ ಎನ್ನುವವರು ದೊಡ್ಡ ಕ್ರಾಂತಿಯನ್ನೇ ಮಾಡಲಿಲ್ಲವೇ ಸಾರ್, ಅವರೂ ನಮ್ಮವರೇ ಇರಬೇಕು ಅದಕ್ಕೆ ಇನ್ನು ಮುಂದೆ ನಾವೆಲ್ಲಾ ಹೆಸರಿನ ಮುಂದೆ ಕುರಿ ಸೇರಿಸಿಕೊಳ್ತೀವಿ. ತಿಪ್ಪಣ್ಣಕುರಿ, ರಮೇಶಕುರಿ, ಹರೀಶ್‌ಕುರಿ, ಹೀಗೆ ಬರ್ಲಿ ಸಾರ್ ಎಂದು ತಾವು ಶೋಧಿಸಿದ ಹೊಸ ಹೊಳಹನ್ನು ಒಬ್ಬರು ಹರಿಯಬಿಟ್ಟರು.

ಮೂಲೆಯಲ್ಲಿ ಬಕಪಕ್ಷಿಯ ರೀತಿ ಧ್ಯಾನಿಸುತ್ತಿದ್ದ ಕವಿಗಳೊಬ್ಬರು ಎದ್ದು ನಿಂತ ಕೂಡಲೇ ಎಲ್ಲರೂ ಮಾತು ನಿಲ್ಲಿಸಿ ಅವರತ್ತ ನೋಡಿದರು. ಕವಿಗಳು ಹೇಳಿದ್ದಿಷ್ಟೇ: ನಾನು ಜಾಸ್ತಿ ಮಾತಾಡಲ್ಲ. ಕುರಿಗಳಿಗೂ ಮರ್ಯಾದೆ ಕೊಡಬೇಕು. ಇನ್ನು ಮುಂದೆ ನಾನು ಅದನ್ನು ಪಾಲಿಸುವೆ:
ಕುರಿಗಳು ಬಂದರು ದಾರಿ ಬಿಡಿ,
ಕುರಿಗಳ `ಕೈ'ಗೆ ರಾಜ್ಯ ಕೊಡಿ

ಕವಿಗಳು ಮಾತು ಮುಗಿಸಿ ಮೌನವಾಗಿ ಕುಳಿತರು.

ಕುರಿಗೆ ನ್ಯಾಯ ಒದಗಿಸಲೇಬೇಕು, ಚಾಮರಾಜ ಪೇಟೆಯಲ್ಲಿ ಕುರಿಯ 120 ಅಡಿ ಪ್ರತಿಮೆಯನ್ನು ಸ್ಥಾಪಿಸಬೇಕು. ಕುರಿ. ಅಕಾಡೆಮಿ ಸ್ಥಾಪಿಸಬೇಕು. ಕುರಿ ಹಿರತಕ್ಷಣಾ ಸಮಿತಿಯೊಂದನ್ನು ರಚಿಸಬೇಕು. ಕುರಿವಾಣಿ ಎಂಬ ದಿನ ಪತ್ರಿಕೆಯನ್ನು ತಂದು ಕುರಿಯ ಮಹತ್ವವನ್ನು ಜನರಿಗೆ ತಿಳಿಸಬೇಕು. ಕುರಿ ಇರುವ ಚಲನಚಿತ್ರಗಳಿಗೆ ಶೇ ನೂರು ತೆರಿಗೆ ವಿನಾಯಿತಿ ಘೋಷಿಸಬೇಕು. ಇನ್ನು ಮುಂದೆ `ಬಕ್ರಾ' ಎಂಬ ಬೈಗುಳಕ್ಕೆ ನಿಷೇಧ. ಇದಿಷ್ಟು ನಿರ್ಣಯಗಳನ್ನು ಸಭೆಯಲ್ಲಿ ಅಂಗೀಕರಿಸಲಾಯಿತು. `ಕುರಿಗಳು ಸಾರ್ ಕುರಿಗಳು' ಗೀತೆಯನ್ನು ನಾಡಗೀತೆ ಮಾಡೋಣವೇ ಎಂಬ ಸಲಹೆ ಬಂದಾಗ ಬಹಳ ಗದ್ದಲವಾಯಿತು. ಕೊನೆಗೆ ಆ ಗೀತೆಯನ್ನು ನಿಷೇಧಿಸಬೇಕೆಂದು ಒತ್ತಾಯ ಬಂತು. ಮಠಾಧೀಶರ ಕಡೆಯಿಂದ ಆಗಮಿಸಿದ್ದ ಖಾವಿ ತಂಡ `ಹರಹರ ಕುರಿದೇವಾ' ಎಂದು ರಾಗಬದ್ಧವಾಗಿ ಮಂತ್ರಘೋಷ ಮೊಳಗಿಸಿತು.

ನಮ್ಮ ವೀರಾವೇಶದ ಮಾತುಗಳಿಂದ ಅಯ್ಯ ಅವರು ಖುಷಿಯಾಗಿರ್ತಾರೆ ಎಂದು ಅವರತ್ತ ತಿರುಗಿದರೆ ಅಯ್ಯ ಅವರು ಸೊಗಸಾದ ನಿದ್ರೆಯಲ್ಲಿ ಮುಳುಗಿಯೇ ಹೋಗಿಬಿಟ್ಟಿದ್ದಾರೆ! ಅಯ್ಯ ಅವರನ್ನು ಸಹಚರರು ಅಲುಗಾಡಿಸಿ ಅಲರ್ಟ್ ಮಾಡಿದರು. ಏನೂ ಆಗದವರಂತೆ ಎದ್ದು ಹೆಗಲಿಗೆ ಟವಲೇರಿಸಿದ ಅಯ್ಯ ಅವರು, ಎಲ್ಲರೂ ಊಟ ಮಾಡ್ಕೊಂಡು ಹೋಗಿ ಎಂದರು. ಮೀಟಿಂಗ್‌ನಲ್ಲಿ ನಡೆದದ್ದೆಲ್ಲಾ ರಹಸ್ಯವಾಗಿರ್ಲಿ, ಯಾರೂ ಎಲ್ಲೂ ಬಾಯಿಬಿಡ್ಬೇಡಿ ಎಂದು ಎಚ್ಚರಿಸಿದರು.

`ಸಾರ್, ನಾವು ಹೇಳ್ದೆ ಇದ್ರೂ ಪೇಪರ್‌ನವರು ಹೇಗೋ ಕಂಡುಹಿಡಿದು ಬರ್ದುಬಿಡ್ತಾರೆ' ಎಂದು ಬುದ್ದಿಜೀವಿಗಳೊಬ್ಬರು ಹೇಳಿದರು.

“ಬರೀಲಿ ಬರೀಲಿ, ಅವರಿಗೆ ಬುದ್ಧಿ ಕಲಿಸೋಣ, ಸಂಪಾದಕರನ್ನ ಕರೆಸಿ ವಾಗ್ದಂಡನೆ ವಿಧಿಸೋಣ, ವರದಿ ಮಾಡಿದ ಪತ್ರಿಕೆಗಳಿಗೆ ಮೂರು ವರ್ಷ ಜಾಹೀರಾತು ನಿಲ್ಲಿಸೋಣ. ಪ್ರೆಸ್‌ನೋಟ್ ಕೊಡಬಾರದು ಎಂಬ ಕಾನೂನು ಮಾಡೋಣ. ಅವರನ್ನು ವಿಧಾನಸೌಧ ಒಳಕ್ಕೇ ಸೇರಿಸೋದು ಬೇಡ” ಎಂದು ಅಯ್ಯ ಅವರ ಸಹಚರರು ಹಾರಿ ಬಿದ್ದು ಚಾರ್ಜ್ ಮಾಡಿದರು.

ಪೆಕರ ಸದ್ದಿಲ್ಲದೆ ಜಾಗ ಖಾಲಿ ಮಾಡಿದ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT