ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಚಗವ್ಯದಿಂದಲೂ ಬಂದೀತು ಬ್ರುಸೆಲ್ಲಾ ಪಂಚಕಂಟಕ

Last Updated 16 ಜೂನ್ 2018, 10:07 IST
ಅಕ್ಷರ ಗಾತ್ರ

ವಿಧಿ ಎಂದರೆ ಇದೇ ಇರಬೇಕು: ಗೋವುಗಳನ್ನು ಕೊಲ್ಲಕೂಡದೆಂದು ಏನೆಲ್ಲ ಒತ್ತಡದ ಪ್ರಚಾರ ನಡೆದ ಕರ್ನಾಟಕದಲ್ಲಿ ಬ್ರುಸೆಲ್ಲಾ ಎಂಬ ಸೂಕ್ಷ್ಮಜೀವಿಯೊಂದು ಗೋವುಗಳನ್ನು ಬಾಧಿಸತೊಡಗಿದೆ. ಅಂಥ ರೋಗಪೀಡಿತ ಗೋವುಗಳನ್ನು ಪತ್ತೆ ಮಾಡಿ ಹತ್ಯೆ ಮಾಡಿ ಹೂಳಲೇಬೇಕಾದ ಅಪ್ರಿಯ ಸನ್ನಿವೇಶ ಸರ್ಕಾರಕ್ಕೆ ಎದುರಾಗಿದೆ.

ಶಾಸಕ ವರ್ತೂರು ಪ್ರಕಾಶ್ ಅವರ ಡೇರಿಯಲ್ಲಿನ 58 ಹಸುಗಳಿಗೆ ಬ್ರುಸೆಲ್ಲೊಸಿಸ್ ರೋಗ ಬಂದಿರುವುದರಿಂದ ಆ ಎಲ್ಲವನ್ನೂ ಕೊಲ್ಲಬೇಕೆಂದು ಪಶುಸಂಗೋಪನ ಇಲಾಖೆ ತೀರ್ಮಾನಿಸಿದೆ. ವಿಜ್ಞಾನ, ಧಾರ್ಮಿಕ ನಂಬಿಕೆ, ಪ್ರಾಣಿದಯೆ, ಲಾಭನಷ್ಟ, ವೈದ್ಯಕೀಯ, ರಾಜಕೀಯ ಎಲ್ಲವೂ ಒಂದರೊಳಗೊಂದು ತಳಕು ಹಾಕಿಕೊಂಡು ಗೋಜಲು ಸೃಷ್ಟಿಯಾಗಿದೆ.

ಬ್ರುಸೆಲ್ಲಾ ಎಂಬುದು ಅತಿಸೂಕ್ಷ್ಮ ಕಡ್ಡಿಯಂಥ ಏಕಾಣುಜೀವಿ. ಹಸುವಿಗೆ ಅದರ ಸೋಂಕು ತಗುಲಿತೆಂದರೆ ಅದಕ್ಕೆ ಔಷಧವಿಲ್ಲ. ಹಸು ಸಾಯುವುದಿಲ್ಲ ನಿಜ. ಅದಕ್ಕೆ ಗರ್ಭ ನಿಲ್ಲುವುದಿಲ್ಲ, ಆರೇಳನೆ ತಿಂಗಳಿಗೆ ಅಬಾರ್ಶನ್ ಆಗುತ್ತದೆ. ಎರಡನೆಯ ಬಾರಿ ಗರ್ಭ ಕಟ್ಟಿದರೆ ಅದೂ ಬಿದ್ದುಹೋಗಬಹುದು.

ಮೂರನೆಯ ಬಾರಿ ಗರ್ಭ ನಿಲ್ಲುತ್ತದೆ. ಆದರೆ ತಾಯಿ ಹಸುವಿನ ಹಾಲಿನಲ್ಲಿ ರೋಗಾಣು ಇರುತ್ತದೆ. ಅಂಥ ಹಾಲನ್ನು ಕಾಯಿಸದೇ ಸೇವಿಸಿದರೆ ಕೆಲವರಿಗೆ ಬ್ರುಸೆಲ್ಲೊ ಸಿಸ್ ರೋಗ ಬರಬಹುದು. ಗೋಮಾಂಸವನ್ನು ಅರೆಬರೆ ಬೇಯಿಸಿ ತಿಂದರೂ ರೋಗ ಬಂದೀತು. ರೋಗ ನಿರೋಧಕ ಶಕ್ತಿ ಚೆನ್ನಾಗಿದ್ದರೆ ರೋಗ ಬರಲಿಕ್ಕಿಲ್ಲ. ಬಂದರೆ ಮಾತ್ರ ಮಹಾ ಕಿರಿಕಿರಿ.

ಮನುಷ್ಯರಿಗೆ ಬ್ರುಸೆಲ್ಲೊಸಿಸ್ ರೋಗ ಬಂದರೆ ಸಾವು ಬರುವುದಿಲ್ಲ. ಆದರೆ ಬಿಟ್ಟು ಬಿಟ್ಟು ಜ್ವರ ಬರುತ್ತದೆ. ಮೈಕೈ ಸ್ನಾಯುಗಳಲ್ಲಿ ವಿಪರೀತ ನೋವು ಇರುತ್ತದೆ. ಜ್ವರ 102-103 ಡಿಗ್ರಿಗೂ ಏರಿ, ಸನ್ನಿ ಅಥವಾ ಭಾವೋನ್ಮಾದವೂ ಆಗಿ ಜ್ವರ ಇಳಿಯುತ್ತದೆ. ತೀರಾ ತೀರಾ ಅಪರೂಪಕ್ಕೆ ಸಾವು ಬಂದೀತು. ಪದೇ ಪದೇ ಹಾಗೆ ಜ್ವರ ಬಾರದಂತೆ ಔಷಧ ಇದೆ; ಆದರೆ ಐದಾರು ತಿಂಗಳುಗಳ ಕಾಲ ಮಾತ್ರೆ ಸೇವಿಸಬೇಕು. ಅದಕ್ಕಿಂತ ದೊಡ್ಡ ಫಜೀತಿ ಏನೆಂದರೆ ಜ್ವರಪೀಡಿತ ಗಂಡಸರ ವೃಷಣದಲ್ಲಿ ಭಾರೀ ಹಿಂಸೆಯಾಗುತ್ತದೆ. ಹೇಳುವಂತಿಲ್ಲ, ಬಿಡುವಂತಿಲ್ಲ. ಕ್ರಮೇಣ ಕೆಲವರಿಗೆ ಷಂಡತನ ಬರುತ್ತದೆ. ರೋಗಾಣುಭರಿತ ಹಸಿ ಹಾಲನ್ನು ಸೇವಿಸಿದ ಹೆಂಗಸರಲ್ಲೂ ಕೆಲವರು ಬಂಜೆಯಾಗುತ್ತಾರೆ. 

ಬ್ರುಸೆಲ್ಲಾ ರೋಗಾಣು ಭಾರೀ ಸಾಂಸರ್ಗಿಕವಂತೂ ಹೌದು. ಅಂದರೆ ಅದರ ಸೆಗಣಿ, ಗಂಜಳ, ಅದು ತಿಂದು ಬಿಟ್ಟ ಮೇವು, ಅದರ ಮೈತೊಳೆದ ನೀರು ಎಲ್ಲವನ್ನೂ ಪ್ರತ್ಯೇಕ ಇಡದಿದ್ದರೆ ಅಕ್ಕಪಕ್ಕದ ಇತರ ಹಸು, ಎಮ್ಮೆ, ಹೋರಿ ಎಲ್ಲವಕ್ಕೂ ರೋಗ ಬರುತ್ತದೆ. ಡೇರಿಯಲ್ಲಿ ಒಂದಕ್ಕೆ ಬ್ರುಸೆಲ್ಲೊಸಿಸ್ ಬಂದರೆ ಅದರ ಲಕ್ಷಣಗಳು ಗೊತ್ತಾಗುವ ಮೊದಲೇ ಇತರ ಹಸುಗಳೆಲ್ಲ ರೋಗಗ್ರಸ್ತ ಆಗಬಹುದು. ಗೊತ್ತಾದರೂ ಏನೂ ಮಾಡುವಂತಿಲ್ಲ.

ಈ ಕಾಯಿಲೆಗೆ ಔಷಧಿ ಇಲ್ಲ. ಕರುಗಳಿಗೆ ರೋಗ ತಗುಲದ ಹಾಗೆ ಲಸಿಕೆ ಹಾಕಿಸಬಹುದು. ಆದರೆ ಲಸಿಕೆ ಹಾಕಿಸುವ ಮೊದಲೇ ರೋಗಾಣುಗಳು ಅದರ ದೇಹದಲ್ಲಿದ್ದರೆ ಏನೂ ಮಾಡುವಂತಿಲ್ಲ. ಆ ರೋಗ ಬೇರೆಡೆ ಹರಡದ ಹಾಗೆ ದಯಾಮರಣ ಕೊಡಿಸಬಹುದು.

ಚುಚ್ಚುಮದ್ದು ಕೊಟ್ಟು ಸಾಯಿಸಿದರೂ ದನದ ಕಳೇವರವನ್ನು ಸುಟ್ಟು ಹುಷಾರಾಗಿ ದಫನ ಮಾಡಬೇಕು. ಅದರ ಮಾಂಸ, ಕೊಂಬು, ಗೊರಸು, ಚರ್ಮ ಯಾವುದೂ ಯಾವುದೇ ದನದ ಸಂಪರ್ಕಕ್ಕೆ ಬರದಂತೆ ಆಳವಾಗಿ ಹೂಳಬೇಕು. ಸತ್ತ ದನವನ್ನು ಗುಂಡಿಗೆ ಹಾಕಿದ ಜೆಸಿಬಿಯನ್ನೂ ಚೊಕ್ಕಟ ತೊಳೆಯಬೇಕು. ನಂತರ ಕೊಟ್ಟಿಗೆಯನ್ನು ಸಂಪೂರ್ಣ ಶುದ್ಧಗೊಳಿಸಬೇಕು. ಅಲ್ಲಿನ ಇತರ ಹಸು ಅಥವಾ ಹೋರಿಗಳನ್ನು ಪ್ರತ್ಯೇಕವಾಗಿ ಇಟ್ಟು ಅವುಗಳ ರಕ್ತ ಪರೀಕ್ಷೆ ಮಾಡಿ... ರಗಳೆ ಒಂದೆರಡಲ್ಲ. ಹಳ್ಳಿಯವರು ‘ಕಂದ್‌ರೋಗ’ ಬಂದ ಅಂಥ ಹಸುಗಳನ್ನು ಉಪಾಯವಾಗಿ ಬೇರೆಯವರಿಗೆ ಮಾರಿ ಕೈತೊಳೆದುಕೊಳ್ಳುತ್ತಾರೆ.

ವರ್ತೂರು ಪ್ರಕಾಶರ ಹಸುಗಳನ್ನು ಸಾಯಿಸಬೇಕೆ ಬೇಡವೆ? ಇಲ್ಲಿ ಹಣಾಹಣಿ ಶುರುವಾಗುತ್ತದೆ. ನೀವು ಗೋವಿನ ಪಕ್ಷದವರಾಗಿದ್ದರೆ ‘ಖಂಡಿತ ಸಾಯಿಸಕೂಡದು’ ಎಂದು ವಾದಿಸುತ್ತೀರಿ. ‘ಇದು ಹೊಸ ಕಾಯಿಲೆ ಏನಲ್ಲ. ಹಿಂದಿನಿಂದಲೂ ನಮ್ಮಲ್ಲಿದೆ; ನಮ್ಮ ರಾಜ್ಯದ ಶೇಕಡ 30ರಷ್ಟು ಹಸುಗಳಲ್ಲಿ ಈ ರೋಗಾಣು ಇದೆ. ನಾವೆಲ್ಲ ಅದಕ್ಕೆ ಒಗ್ಗಿಕೊಂಡಿದ್ದೇವೆ’ ಎನ್ನುತ್ತಾರೆ, ಸಾಗರದಲ್ಲಿ ಪಶುಸಂಗೋಪನೆ ಮಾಡುತ್ತಿರುವ ಕೃಷಿ ವಿಜ್ಞಾನಿ ಎ.ಎಸ್.ಆನಂದ.

ಇವರು ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಸಾವಯವ ಕೃಷಿ ಮಿಶನ್‌ನ ಮುಖ್ಯಸ್ಥರೂ ಆಗಿದ್ದವರು. ‘ನಾವು ಪಂಚಾಮೃತ, ಪಂಚಗವ್ಯಕ್ಕೆ ಹಸೀ ಹಾಲನ್ನೇ ಹಾಕಿ ದೇವರಿಗೆ ನೈವೇದ್ಯ ಮಾಡಿ ಅದನ್ನು ಸ್ವೀಕರಿಸುತ್ತೇವೆ- ನಮಗೆ ಏನೂ ಆಗಿಲ್ಲ’ ಎನ್ನುತ್ತಾರೆ.

ಅಷ್ಟೇಅಲ್ಲ ‘ನಾನು ಮಹಾರಾಷ್ಟ್ರ, ರಾಜಸ್ತಾನ, ಮಧ್ಯಪ್ರದೇಶದ ಅದೆಷ್ಟೊ ಅಲೆಮಾರಿ ಗೋವಳರನ್ನು ಸಮೀಪದಿಂದ ನೋಡಿದ್ದೇನೆ. ಹಾಲು ಮಾರಿ ಜೀವಿಸುವ ಅವರು ಕ್ಯಾಂಪ್ ಹಾಕಿದಲ್ಲೆಲ್ಲ ದಿನವೂ ಸೆಜ್ಜೆರೊಟ್ಟಿ, ಹಸಿ ಹಾಲನ್ನೇ ಸೇವಿಸುತ್ತಾರೆ. ನಾಲ್ಕಾರು ಮಕ್ಕಳಿಗೂ ಜನ್ಮ ನೀಡುತ್ತಾರೆ. ಭಾರತೀಯರ ರೋಗ ನಿರೋಧಕ ಶಕ್ತಿ ಚೆನ್ನಾಗಿಯೇ ಇದೆ’ ಎನ್ನುತ್ತಾರೆ ಆನಂದ.

ರೋಗಿಷ್ಠ ಹಸುಗಳನ್ನು ಸಾಕಿಟ್ಟುಕೊಳ್ಳಬೇಕೆ, ಕೊಲ್ಲಬೇಕೆ? ಪಶುವೈದ್ಯರು ಖಚಿತ ಏನನ್ನೂ ಹೇಳಲು ಹಿಂದೇಟು ಹಾಕುತ್ತಾರೆ. ‘ಹಿಂದೆಯೂ ಹೆಸರುಘಟ್ಟದ ಡೇರಿ ಫಾರ್ಮ್‌ನಲ್ಲಿ ಅಂಥ ಹಸುಗಳಿಗೆ ದಯಾಮರಣ ಕೊಟ್ಟಿದ್ದುಂಟು’ ಎನ್ನುತ್ತಾರೆ  ರಾಷ್ಟ್ರೀಯ ಡೇರಿ ಸಂಶೋಧನಾ ಸಂಸ್ಥೆಯ ಮುಖ್ಯಸ್ಥ ಡಾ. ಕೆ.ಪಿ.ರಮೇಶ್. ‘ನಮ್ಮ ದೇಶದ ಕೆಲವರಲ್ಲಿ ಬ್ರುಸೆಲ್ಲೊಸಿಸ್ ರೋಗ ನಿರೋಧಕ ಶಕ್ತಿ ಇರಲೂಬಹುದು.

ಆಗಾಗ ಒಂದರ್ಧ ಚಮಚ ಪಂಚಗವ್ಯ ಸೇವನೆ ಮಾಡಿದ್ದರಿಂದಲೇ ರೋಗ ನಿರೋಧಕ ಶಕ್ತಿ ಬಂದಿರಲೂಬಹುದು. ಭಾರತದ ಅಪ್ಪಟ ನಾಟಿ ದನಗಳಿಗೆ ಬ್ರುಸೆಲ್ಲೊಸಿಸ್ ರೋಗ ಬರುವುದಿಲ್ಲ. ಆದರೆ ಈಗೀಗ ಎಲ್ಲೆಲ್ಲೂ ಸಂಕರ ತಳಿಗಳೇ ಕಾಣುತ್ತವೆ. ಗಿರ್ ಹಸುಗಳಲ್ಲೂ ಈ ಕಾಯಿಲೆ ಪತ್ತೆಯಾಗಿದೆ.

ಕಟ್ಟುನಿಟ್ಟಾಗಿ ಡೇರಿಗಳನ್ನು ಚೊಕ್ಕಟ ಇಟ್ಟುಕೊಳ್ಳಲೇಬೇಕು. ರೋಗಗ್ರಸ್ತ ಹಸುಗಳನ್ನು ಪ್ರತ್ಯೇಕಿಸಲೇಬೇಕು. ಕೃತಕ ಗರ್ಭಾಧಾನ ಮಾಡಿಸಿದ ಮೇಲೂ ಹೋರಿಗಳನ್ನು ಹಾಯಿಸುವ ಪದ್ಧತಿ ಕೆಲವೆಡೆ ಇದೆ. ರೋಗಿಷ್ಠ ಹೋರಿಗಳನ್ನು ಗುರುತಿಸಿ ಬೀಜ ತೆಗೆಸುವ ಕ್ರಮ ವ್ಯಾಪಕವಾಗಿ ಆಗಬೇಕು’ ಎಂದು ಅವರು ಹೇಳುತ್ತಾರೆ.

ಬ್ರುಸೆಲ್ಲೊಸಿಸ್ ರೋಗದ ಬಗ್ಗೆ ಸುದೀರ್ಘ ಅಧ್ಯಯನ ಮಾಡಿ, ಅದರಲ್ಲೇ ಡಾಕ್ಟರೇಟ್ ಪಡೆದು ಹೆಬ್ಬಾಳದ ವೆಟರಿನರಿ ಕಾಲೇಜಿನ ಸಹಪ್ರಾಧ್ಯಾಪಕರಾಗಿರುವ ಡಾ. ಶ್ರೀಕೃಷ್ಣ ಇಸಳೂರ್ ಕೂಡ ಕಟ್ಟುನಿಟ್ಟಿನ ಶುಚಿತ್ವದ ಬಗ್ಗೆ ಒತ್ತಿ ಹೇಳುತ್ತಾರೆ. ಕೆಲವರ ಹೊಣೆಗೇಡಿತನದಿಂದ ಡೇರಿ ಉದ್ಯಮಿಗಳಿಗೂ ಸಾಕಷ್ಟು ನಷ್ಟವಾಗುತ್ತಿದೆ, ಡೇರಿ ಹಾಲಿನ ವಿಶ್ವಾಸಾರ್ಹತೆ ಕೂಡ ಬಳಕೆದಾರರಲ್ಲಿ ಕಡಿಮೆಯಾಗುತ್ತದೆ; ಪಶುವೈದ್ಯರಿಗೂ ಅಪಾಯ ತಪ್ಪಿದ್ದಲ್ಲ ಎನ್ನುತ್ತಾರೆ.  

ಶಿರಸಿಯ ಸರ್ಕಾರಿ ಪಶುವೈದ್ಯ ಡಾ. ಗಣೇಶ ನೀಲೇಸರ ಸ್ವತಃ ಬ್ರುಸೆಲ್ಲೊಸಿಸ್ ಕಾಯಿಲೆಗೆ ಸಿಕ್ಕು ಅನೇಕ ಬಾರಿ ನರಳಿದವರು. ಜ್ವರ ತಾರಕಕ್ಕೇರಿ ವಿಭ್ರಮೆಯುಂಟಾದಾಗಿನ ತಮ್ಮ ಅನುಭವವನ್ನು ತುಂಬ ಸ್ವಾರಸ್ಯಕರವಾಗಿ ಅವರು ‘ಡೇರಿ ಡಾಕ್ಟರ್, ಹೋರಿ ಮಾಸ್ಟರ್’ ಪುಸ್ತಕದಲ್ಲಿ  ಬರೆದಿದ್ದಾರೆ.

ಹಸುಗಳು ಸಾಲುಸಾಲಾಗಿ ಈ ಕಾಯಿಲೆಗೆ ಸಿಕ್ಕು ಒಂದರ ಮೇಲೊಂದು ಗರ್ಭಸ್ರಾವವಾಗಿ ಇಡೀ ಡೇರಿ ಫಾರ್ಮ್ ದಿವಾಳಿ ಆಗಿರುವ ಉದಾಹರಣೆಯೂ ಅವರ ಕಥನದಲ್ಲಿದೆ. ಅದಕ್ಕೆ ‘ಗರ್ಭಸ್ರಾವದ ಬಿರುಗಾಳಿ’ (ಸ್ಟಾರ್ಮ್ ಆಫ್ ಅಬಾರ್ಶನ್) ಎಂಬ ಗುಣವಾಚಕವೇ ಇದೆಯಂತೆ. ಅದು ಹಾಗಿರಲಿ, ‘ಪಂಚಗವ್ಯ ಸೇವನೆ ಮಾಡಿ ಬ್ರುಸೆಲ್ಲೊಸಿಸ್ ಕಾಯಿಲೆಗೆ ಸಿಕ್ಕು ನರಳಿದ ವೈದಿಕರೂ ನನಗೆ ಗೊತ್ತು’ ಎಂದು ಅವರು ಹೇಳುತ್ತಾರೆ.

ಅದಿರಲಿ, ಈ ರೋಗಾಣುವಿನ ಸೋಂಕು ಒಂದು ಡೇರಿಯಿಂದ ಇನ್ನೊಂದು ಡೇರಿಗೆ ಹೇಗೆ ಹರಡುತ್ತದೆ? ‘ಪಶು ಸಂಗೋಪನ ಇಲಾಖೆಯೇ ರೋಗಕ್ಕೆ ಮೂಲ!’ ಎನ್ನುತ್ತಾರೆ, ಡೇರಿ ಉದ್ಯಮಿ ತಾರಕೇಶ್. ಅನೇಕ ದೇಶಗಳಲ್ಲಿ ಉದ್ಯೋಗದಲ್ಲಿದ್ದ ಇವರು ಎಲ್ಲವನ್ನೂ ಬಿಟ್ಟು ಬಿಡದಿಗೆ ಬಂದು ಡೇರಿಗೆ ಹಣ ಹೂಡಿ ಇಲ್ಲಿನ ಅವ್ಯವಸ್ಥೆಗಳಿಂದ ಸಾಕಷ್ಟು ನೊಂದವರು.

ಅವರ ಪ್ರಕಾರ, ಕೃತಕ ಗರ್ಭಧಾರಣೆಗೆ ಬರುವವರ ಬೇಜವಾಬ್ದಾರಿಯೇ ರೋಗ ಪ್ರಸರಣಕ್ಕೆ ಮುಖ್ಯ ಕಾರಣವಾಗಿದೆ. ಹೋರಿಗಳ ವೀರ್ಯಾಣುಗಳನ್ನು ಶೂನ್ಯ ತಾಪಮಾನದ ದ್ರವಸಾರಜನಕದ ಡಬ್ಬಿಯಲ್ಲಿ ತರಬೇಕು. ಆದರೆ ಈ ಇನ್‌ಸೆಮಿನೇಟರ್‌ಗಳು ವೀರ್ಯಾಣು ಕೊಳವೆಯನ್ನು ಕಿಸೆಯಲ್ಲಿಟ್ಟುಕೊಂಡು ಬರುತ್ತಾರೆ.

ಕೈಗವಚ ಕೂಡ ಹಾಕದೇ ನೇರವಾಗಿ ಹಸುಗಳ ಗರ್ಭದ ಚೀಲಕ್ಕೆ ಕೈ ಹಾಕುತ್ತಾರೆ. ನಂತರ ಹೇಗೆ ಹೇಗೋ ಕೈತೊಳೆದು ಅವಸರದಲ್ಲಿ ಇನ್ನೊಂದು ಡೇರಿಗೆ ಓಡುತ್ತಾರೆ. ನಿಜವಾದ ಅರ್ಹತೆ ಇರುವ ಪಶು ವೈದ್ಯರು ಹಳ್ಳಿ ಕಡೆ ಬರೋದಿಲ್ಲ. ಅವರು ನಗರದ ನಾಯಿಗಳಿಗೊ, ಕುದುರೆಗಳಿಗೊ, ಕೋಳಿಸಾಕಣೆ ಉದ್ಯಮಿಗಳಿಗೊ ಸಲಹಾಕಾರರಾಗಿರುತ್ತಾರೆ.

‘ಈಗಂತೂ ಶುಚಿತ್ವದ ಎಬಿಸಿಡಿ ಗೊತ್ತಿಲ್ಲದವರೂ ಡೇರಿ ನಡೆಸುತ್ತಾರೆ. ಅದಕ್ಕೇ ನೂರಾರು ಡೇರಿಗಳಲ್ಲಿ ಬ್ರುಸೆಲ್ಲಾ ರೋಗಾಣುವಿನ ಹಾವಳಿ ಇದೆ ಕಣ್ರೀ! ಕೆಎಮ್‌ಎಫ್‌ಗೇ ರೋಗ ತಗುಲಿರುವಾಗ ಹಳ್ಳಿ ಡೇರಿಗಳು ಹೆಂಗೆ ಚೊಕ್ಕಟ ಇರ್‌ತಾವ್ರೀ?’ ಎಂದು ಅವರು ಪ್ರಶ್ನಿಸುತ್ತಾರೆ.

ಈ ಕಾಯಿಲೆ ಪಸರಿಸದ ಹಾಗೆ ಸರ್ಕಾರಿ ಸಿಬ್ಬಂದಿ ಡೇರಿಗಳಿಗೆ ಹೋಗಿ ಹಾಲಿನ ಮತ್ತು ಹಸುವಿನ ರಕ್ತದ ಸ್ಯಾಂಪಲ್‌ಗಳನ್ನು ಕಲೆಹಾಕಿ ಪರೀಕ್ಷಿಸಿ ಪ್ರತಿ ತಿಂಗಳೂ ವರದಿ ನೀಡಬೇಕೆಂಬ ನಿಯಮವೇನೊ ಇದೆ. ರಾಜ್ಯದ ಸುಮಾರು ಹದಿನೆಂಟು ಕಡೆ ಬ್ರುಸೆಲ್ಲಾ ರೋಗಾಣುವಿನ ಪರೀಕ್ಷೆ ಕೂಡ ನಿಯಮಿತವಾಗಿ ನಡೆಯುತ್ತಿದೆ.

ಪರೀಕ್ಷೆಯ ಫಲಿತಾಂಶಗಳೇನೊ ಸರ್ಕಾರದ ಕಡತಗಳಲ್ಲಿ ನಿಯಮಬದ್ಧವಾಗಿ ಸೇರ್ಪಡೆ ಆಗುತ್ತಿರುತ್ತದೆ. ಅದರಿಂದ ಏನು ಪ್ರಯೋಜನ? ಹೆಚ್ಚೆಂದರೆ ಕಡತಯಜ್ಞ ಆದೀತೇ ವಿನಾ ಕೆನಡಾ, ಅಮೆರಿಕ, ಯುರೋಪ್‌ನಲ್ಲಿ ಆಗಾಗ ಆಗುವಂತೆ ರೋಗಿಷ್ಠ ಹಸುಗಳ ಗೋಯಜ್ಞವಂತೂ ಇಲ್ಲಿ ಆಗುತ್ತಿಲ್ಲ. ಅವೆಲ್ಲ ಹೋಗಲಿ, ವರ್ತೂರು ಪ್ರಕಾಶ್‌ಗೆ ರೋಗಗ್ರಸ್ತ ಹಸುಗಳು ಶರದ್ ಪವಾರ್ ಅವರ ಬಾರಾಮತಿ ಡೇರಿಯಿಂದ ಬಂದಿದ್ದೇ ನಿಜವಾದರೆ, ಆ ಮಾಜಿ ಕೃಷಿ ಸಚಿವರ ಗೋಶಾಲೆಯೇ ರೋಗಶಾಲೆ ಎಂದಾಯಿತಲ್ಲ?

ಗೋವುಗಳನ್ನು ಮಾತೆ ಎಂದು ಕರೆದು ಮನೆಯಲ್ಲಿ ಒಂದೆರಡು ನಾಟಿ ಹಸುಗಳನ್ನು ಪ್ರೀತಿಯಿಂದ ಸಾಕಿಕೊಳ್ಳುವ ಪುಣ್ಯಾತ್ಮರ ದೃಷ್ಟಿಯಲ್ಲಿ ಗೋವಧೆ ಕೂಡದು, ಒಪ್ಪೋಣ. ಜೀವನೋಪಾಯಕ್ಕಾಗಿ ಒಂದೆರಡು ಹಸು ಇಟ್ಟುಕೊಂಡು ವಿಮೆ ಕಂತನ್ನೂ ಕಟ್ಟಲಾಗದ ಬಡಪಾಯಿ ಗ್ರಾಮೀಣ ಗೌರಮ್ಮನಿಗೆ ಪರಿಹಾರ ನೀಡದೆ ರೋಗಿಷ್ಠ ಹಸುವನ್ನು ನಿರ್ದಾಕ್ಷಿಣ್ಯವಾಗಿ ಎತ್ತಿ ಸಾಗಿಸಬಾರದು.

ಅವಳ ಮೇಲೆ ಕರುಣೆ ಇರಬೇಕು ಅದೂ ನಿಜ. ಆದರೆ ವಿದೇಶೀ ಅಥವಾ ಮಿಶ್ರತಳಿಗಳನ್ನು ತಂದು ಮೂಗುದಾಣ ಹಾಕಿ, ಕರುಗಳ ಮೈನೆಕ್ಕಲೂ ಅವಕಾಶ ಕೊಡದೆ ಸಾಲುಯಂತ್ರದಂತೆ ಅವನ್ನು ನೋಡಿಕೊಳ್ಳುವ ಡೇರಿ ಉದ್ಯಮಿಗಳು ದಯೆ, ಕರುಣೆಯ ಮಾತಾಡುವುದಿಲ್ಲ.

ಸರ್ಕಾರದ ಅಥವಾ ಕೆಎಮ್‌ಎಫ್‌ನ ಅವ್ಯವಸ್ಥೆಯಿಂದಾಗಿಯೇ ರೋಗ ಹಬ್ಬುತ್ತಿದ್ದರೆ, ಹಸುಗಳಿಗೆ ವಿಮೆ ಚುಕ್ತಾ ಮಾಡಿ ಸರ್ಕಾರದವರೇ ಅವುಗಳನ್ನು ಎಲ್ಲಾದರೂ ದೂರ ಸಾಗಿಸಿ ಏನಾದರೂ ಮಾಡಿಕೊಳ್ಳಲಿ ಎಂದು ಡೇರಿ ಮಾಲೀಕರು ಹೇಳುತ್ತಾರೆ.

ಗೋಯಜ್ಞ ಮಾಡಲು ಸರ್ಕಾರಕ್ಕೆ ಧೈರ್ಯ ಇಲ್ಲದಿದ್ದರೆ ಅವನ್ನೆಲ್ಲ ಲಿಂಗನಮಕ್ಕಿ ಇಲ್ಲವೆ ಕಾಳಿ ಜಲಾಶಯದ ನಡುವಣ ಯಾವುದೋ ದ್ವೀಪದಲ್ಲಿ ಸಾಕಬಹುದು. ಹಾಲಿನ ಬಳಕೆದಾರರ ವಿಶ್ವಾಸವನ್ನೂ ಕಾಪಾಡಬಹುದು. 

ಹಸುವಿನ ದೇಹದಲ್ಲಿ ಮುಕ್ಕೋಟಿ ದೇವತೆಗಳು ಇರುತ್ತಾರೆಂದು ಹಿಂದೂಗಳು ನಂಬುತ್ತಾರೆ. ಅದಕ್ಕೇನೂ ಸಾಕ್ಷ್ಯ ಸಿಕ್ಕಿಲ್ಲ. ಆದರೆ ರೋಗಗ್ರಸ್ತ ಹಸುವಿನ ಗರ್ಭದ ಚೀಲದಲ್ಲಿ ಕೈ ತೂರಿಸುವ ಪಶುವೈದ್ಯರ ಕೈಗವಸಿಗೆ ಮುಕ್ಕೋಟಿ ರೋಗಾಣುಗಳು ಅಂಟಿಕೊಳ್ಳುವುದಂತೂ ನಿಜ. ಸೂಕ್ಷ್ಮದರ್ಶಕಗಳಲ್ಲಿ ಅವು ಪ್ರತ್ಯಕ್ಷ ಕಾಣುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT