ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಜಾಬ್‌ನಲ್ಲಿ ‘ಗೋಡೆ ಬರಹ’ದ ಬಿಸಿ

Last Updated 4 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಚುನಾವಣಾ ಸಂದರ್ಭಗಳಲ್ಲಷ್ಟೇ ಅಲ್ಲದೆ ಸಾಮಾನ್ಯ ಸಂದರ್ಭಗಳಲ್ಲಿ ದೇಶದಾದ್ಯಂತ ಮತ್ತು ನೆರೆಹೊರೆ ದೇಶಗಳಿಗೆ ನಾವೆಲ್ಲ ಪ್ರವಾಸಕ್ಕೆ ಹೋದಾಗ, ನಮ್ಮ ಅನುಭವಕ್ಕೆ ಬರುವ ಸಂಗತಿಗಳಿಗೆ ‘ಗೋಡೆ ಮೇಲಿನ ಬರಹ’ ಎನ್ನುವ ರೂಪಾಲಂಕಾರ ಬಳಸುತ್ತೇವೆ.

ನಗರಗಳು ಮತ್ತು ನಗರೀಕರಣದ ಪ್ರಭಾವಕ್ಕೆ ಒಳಗಾದ ಗ್ರಾಮೀಣ ಪ್ರದೇಶಗಳಲ್ಲಿ ಸುತ್ತಾಡುವಾಗ ನಮ್ಮ ನಿಮ್ಮೆಲ್ಲರ ಕಣ್ಣು, ಕಿವಿಗಳನ್ನು ತೆರೆದಿಟ್ಟಿದ್ದರೆ, ಯಾವುದು ಬದಲಾಗುತ್ತಿದೆ ಅಥವಾ ಯಾವುದು ಬದಲಾಗುತ್ತಿಲ್ಲ ಎನ್ನುವುದು ಗೋಡೆ ಮೇಲಿನ ಬರಹದಷ್ಟೇ ಸ್ಪಷ್ಟವಾಗಿ ನಮ್ಮ ಕಣ್ಣಿಗೆ ರಾಚುತ್ತದೆ. ಭಾರತ ಯಾವತ್ತೂ ಜಡವಾಗಿಲ್ಲ, ಅದೊಂದು ಸದಾ ಚಲನಶೀಲ ದೇಶ ಎನ್ನುವುದನ್ನೂ ಈ ಗೋಡೆ ಬರಹಗಳು ಸ್ಪಷ್ಟವಾಗಿ ಹೇಳುತ್ತವೆ.

ಭಾರತ ಉಪಖಂಡದ ಎಲ್ಲ ಕಡೆಗಳಲ್ಲಿಯೂ ಗೋಡೆಗಳ ಮೇಲೆ ಬರಹಗಳು ಅನಾವರಣಗೊಳ್ಳುವುದು ಸಾಮಾನ್ಯ ನೋಟವಾಗಿದೆ. ಈ ಗೋಡೆ ಬರಹಗಳು ಸೀಮಿತ ಅರ್ಥದಲ್ಲಿ ಭೌತಿಕ ಸ್ವರೂಪದಲ್ಲಿ ಅಥವಾ ಸಾಹಿತ್ಯದ ಭಾಷೆಯಲ್ಲಷ್ಟೇ ಇರುವುದಿಲ್ಲ.

ಗುಜರಾತ್‌ನ ರಾಷ್ಟ್ರೀಯ ಹೆದ್ದಾರಿಗಳ ಉದ್ದಕ್ಕೂ, ಕಾಂಚಿಪುರಂನಲ್ಲಿನ ಹಳೆಯ ಪೆರಿಯಾರ್‌ ಪ್ರತಿಮೆಯ ಅಡಿಯಲ್ಲಿ ಅಥವಾ ಚುನಾವಣಾ ಪ್ರಚಾರ ನಡೆಯುತ್ತಿರುವ ಪ್ರದೇಶದಲ್ಲಿನ ಜನರ ಮುಖದ ಮೇಲೂ ಇಂತಹ ಬರಹ ಕಂಡು ಬರುತ್ತದೆ. ತಮಾಷೆಯ ಜತೆಗೆ ವ್ಯಾಖ್ಯಾನಿಸಲಾಗದ ಶ್ಲಾಘನೆ ಮತ್ತು ಆಶಾವಾದದ ಮಿಶ್ರ ಭಾವವೂ ಈ ಗೋಡೆ ಬರಹದಲ್ಲಿ ಅಂತರ್ಗತವಾಗಿರುತ್ತದೆ.

ಚುನಾವಣಾ ಪ್ರಚಾರ ಅಭಿಯಾನವನ್ನು ನೋಡುವಾಗ, ಪ್ರತಿಯೊಬ್ಬ ಮತದಾರನೂ ಬದಲಾವಣೆ ದೃಢಪಡಿಸುವುದರ ಬಗ್ಗೆ ಆಸೆಗಣ್ಣಿನಿಂದ ನೋಡುತ್ತಿರುತ್ತಾನೆ.  1990ರಲ್ಲಿ ವಿ.ಪಿ.ಸಿಂಗ್‌ ಅವರು ಎದುರಿಸಿದ ಸವಾಲಿನಲ್ಲಿ, 2014ರ ಚುನಾವಣೆಯಲ್ಲಿ ನರೇಂದ್ರ ಮೋದಿ, ಬಿಹಾರದಲ್ಲಿ ನಿತೀಶ್‌ ಕುಮಾರ್‌ ಮತ್ತು ಪಶ್ಚಿಮ ಬಂಗಾಳದಲ್ಲಿ ನಡೆದ ಎರಡು ಚುನಾವಣೆಗಳ ಸಂದರ್ಭದಲ್ಲಿ ಮಮತಾ ಬ್ಯಾನರ್ಜಿ ಅವರಲ್ಲಿ ನಾವು ಅಂತಹ ಭರವಸೆಯನ್ನು ಕಂಡಿದ್ದೇವೆ.

2015ರಲ್ಲಿ ದೆಹಲಿ ಚುನಾವಣೆಯಲ್ಲಿ ಅರವಿಂದ ಕೇಜ್ರಿವಾಲ್‌ ಅವರಲ್ಲಿ ನಾವು ಅಂತಹ ಭರವಸೆಯ ನಿರೀಕ್ಷೆ ಮಾಡಿದ್ದೆವು. ಈ ಎಲ್ಲ ಸಂದರ್ಭಗಳಲ್ಲಿ ಮತದಾರರು ಸ್ಪಷ್ಟ ಮತ್ತು ಖಚಿತವಾದ ತೀರ್ಪು ನೀಡಿದ್ದರು. ಮತದಾರರ ಗೆಲುವಿನ ನಗೆಯ ಮನಸ್ಥಿತಿಯನ್ನು ಈ ಬಾರಿ ನಾವು ಪಂಜಾಬ್‌ನಲ್ಲಿ ಕಾಣುತ್ತಿದ್ದೇವೆ.

ಪಂಜಾಬ್‌ನ ಅತ್ಯಂತ ಸಿರಿವಂತ, ಅತಿದೊಡ್ಡ ಕೈಗಾರಿಕಾ ನಗರವಾಗಿರುವ ಲೂಧಿಯಾನದ ಗೋಡೆಗಳ ತುಂಬೆಲ್ಲ ಈ ಬದಲಾವಣೆಯ ಬರಹ ಕಂಡು ಬರುತ್ತಿದೆ. ಇತ್ತೀಚಿನ ಚುನಾವಣಾ ಪ್ರಚಾರ ಸಭೆಗಳಲ್ಲಿ ಅರವಿಂದ ಕೇಜ್ರಿವಾಲ್‌ ಅವರು ಅತ್ಯಂತ ಜನಪ್ರಿಯ ವ್ಯಕ್ತಿಯಾಗಿ ಗಮನ ಸೆಳೆಯುತ್ತಿದ್ದಾರೆ.

ಮಾರ್ಗದುದ್ದಕ್ಕೂ ಚುನಾವಣಾ ಪ್ರಚಾರ ನಡೆಸುವ ರೋಡ್‌ಷೋಗಳಲ್ಲಿ ರಾಜಕೀಯ ಮುಖಂಡನೊಬ್ಬ ವಾಹನದ ಮೇಲ್ಭಾಗದಲ್ಲಿ ನಿಂತುಕೊಂಡು, ರಸ್ತೆಯ ಎರಡೂ  ಬದಿಗಳಲ್ಲಿ ನಿಂತಿರುವ ಅಭಿಮಾನಿಗಳತ್ತ  ಕೈಬೀಸುತ್ತ ಇಲ್ಲವೆ ಕೈಮುಗಿಯುತ್ತ ‘ನೀವು ನನಗೆ ಮತ ನೀಡಿ’ ಎಂಬರ್ಥದ ಗೆಲುವಿನ ನಗೆ ಬೀರುತ್ತ ಸಾಗುತ್ತಾನೆ. ಇಂತಹ ಪ್ರಚಾರ ಅಭಿಯಾನಗಳಲ್ಲಿ ಕೆಲಮಟ್ಟಿಗಾದರೂ ಜನಸಂದಣಿ ಇದ್ದೇ ಇರುತ್ತದೆ.  ರಸ್ತೆಯ ಎರಡೂ ಬದಿಗಳಲ್ಲಿ ನಿಂತಿರುವ ಜನರು ನಗುನಗುತ್ತಲೇ ಮುಖಂಡನತ್ತ ಆಶಾವಾದದಿಂದ ನೋಡುತ್ತಿದ್ದರೆ, ಬದಲಾವಣೆಯ ನಿರೀಕ್ಷೆ ನಿಜವಾಗುವ ಭರವಸೆ ಮೂಡುತ್ತದೆ.

ನಾಯಕನೊಬ್ಬ ವಾಹನದಲ್ಲಿ ನಿಂತುಕೊಂಡು ವೇಗವಾಗಿ ಸಾಗುವಾಗ ರಸ್ತೆಯ ಇಕ್ಕೆಲಗಳಲ್ಲಿನ ಸಾವಿರಾರು ಮುಖಗಳ ಭಾವನೆಗಳನ್ನು ಅರ್ಥೈಸುವ ಯಾವುದೇ ಸಿದ್ಧ ಸೂತ್ರವಾಗಲಿ ಅಥವಾ ಶಾಸ್ತ್ರವಾಗಲಿ ಬಳಕೆಯಲ್ಲಿ ಇಲ್ಲ. ಮತದಾರರ ಮೊಗದಲ್ಲಿನ ನಗೆಯನ್ನು ಹೇಗೆ ವ್ಯಾಖ್ಯಾನಿಸುವಿರಿ ಎನ್ನುವುದು ನಿಜಕ್ಕೂ ವ್ಯಕ್ತಿಗತವಾದದ್ದು.

ಪಂಜಾಬ್‌ ಜನರ ಮುಖದಲ್ಲಿನ ಈ ಬದಲಾವಣೆಯ ನಿರೀಕ್ಷೆಗಳನ್ನು ನಾನು ಈ ಮೊದಲೇ ಕಂಡಿರುವೆ. ಹೊಸ ರಾಜಕೀಯ ಬದಲಾವಣೆಯನ್ನು ಸ್ಥಳೀಯ ಜನರು ಎದುರು ನೋಡುತ್ತಿದ್ದಾರೆ. ಜನಾಭಿಪ್ರಾಯದ ಸಮೀಕ್ಷೆ ನಡೆಸುವವರು ಮತ್ತು ಅವುಗಳನ್ನು ವಿಶ್ಲೇಷಿಸುವವರು ಈ ಬಗ್ಗೆ ಏನೇ ಅವಹೇಳನ ಮಾಡಿದರೂ, ಸಮೀಕ್ಷೆ ನಡೆಸಿ ಆ ಬಗ್ಗೆ ನಿರ್ಧಾರಕ್ಕೆ ಬರುವ ಅವರ ವಿಧಾನ ಮತ್ತು ಗೋಡೆ ಮೇಲಿನ ಬರಹದ ಬಗ್ಗೆ ನಂಬಲರ್ಹವಲ್ಲದ ವ್ಯಾಖ್ಯಾನ ಮಾಡುವುದನ್ನು ನಾನು ತಳ್ಳಿಹಾಕಲಾರೆ ಮತ್ತು ಅವರ ನಿಲುವನ್ನು ಪ್ರಶ್ನಿಸಲೂ ಇಚ್ಛಿಸಲಾರೆ.

ಮಾರ್ಚ್‌ 11ರಂದು ಯಾವ ಪಕ್ಷ ಗೆಲ್ಲಲಿದೆ ಎಂದು ನೀವು ನನ್ನನ್ನು ನೇರವಾಗಿ ಪ್ರಶ್ನಿಸಿದರೆ, ದೇಶದಾದ್ಯಂತ ಅಲ್ಲದಿದ್ದರೂ, ಪಂಜಾಬ್‌ ರಾಜ್ಯದಾದ್ಯಂತ ಹೊಸ ಪಕ್ಷವೊಂದು ಉದಯಿಸಲಿದೆ ಎಂದು ಖಚಿತವಾಗಿ ಹೇಳಬಲ್ಲೆ. 1989ರಲ್ಲಿ ವಿ.ಪಿ.ಸಿಂಗ್‌ ಅವರ ಜನತಾ ದಳ ಉದಯಿಸಿದ ನಂತರ ಇದೇ ಮೊದಲ ಬಾರಿಗೆ ಹೊಸ ಪಕ್ಷವೊಂದು ದೆಹಲಿ ಆಚೆಗೂ ತನ್ನ ಅಸ್ತಿತ್ವ ಸಾಬೀತುಪಡಿಸಲಿರುವುದರಲ್ಲಿ ಎರಡು ಮಾತಿಲ್ಲ.

ಜನತಾ ದಳವು ಸ್ಥಾಪಿತ ಸಮಾಜವಾದಿ– ಜಾತಿ ರಾಜಕೀಯ ವ್ಯವಸ್ಥೆಗಿಂತ ಭಿನ್ನವಾದ ನೆಲೆಯಲ್ಲಿ ಬೆಳವಣಿಗೆ ಕಂಡಿತ್ತು. ಆದರೆ, ಆಮ್‌ ಆದ್ಮಿ ಪಾರ್ಟಿಯು ಇಂತಹ ಯಾವುದೇ ನೆಲೆಗಟ್ಟು ಇಲ್ಲದೆ ಶೂನ್ಯದಿಂದ ತನ್ನ ಚಟುವಟಿಕೆ ಆರಂಭಿಸಿ, ಇತರ ರಾಜಕೀಯ ಪಕ್ಷಗಳಿಗೆ ಹೋಲಿಸಿದರೆ ಅಸದೃಶವಾದ ರೀತಿಯಲ್ಲಿ ಬೆಳವಣಿಗೆ ಕಂಡಿದೆ.

70 ವರ್ಷಗಳ ಇತಿಹಾಸದಲ್ಲಿ ಪಂಜಾಬ್‌ ಸಾಕಷ್ಟು ಏರಿಳಿತ ಕಂಡಿದೆ. ಸಿಖ್‌, ಹಿಂದೂ ಹಾಗೂ ಭಾಷೆಯ ಆಧಾರದ ಮೇಲೆ 1966ರಲ್ಲಿನ ವಿಭಜನೆ, 1983ರಿಂದ 93ರ ತನಕ ಒಂದು ದಶಕದ ಅವಧಿಯಲ್ಲಿನ ಭಯೋತ್ಪಾದಕರ ಅಟ್ಟಹಾಸದ ಹೊರತಾಗಿಯೂ ಅಲ್ಲಿನ ರಾಜಕೀಯ ವ್ಯವಸ್ಥೆ ತನ್ನ ಸಮಗ್ರತೆ ಕಾಯ್ದುಕೊಂಡಿದೆ. 

ಕಾಂಗ್ರೆಸ್‌ ಮತ್ತು ಅಕಾಲಿ ದಳ ಪ್ರತಿ ಐದು ವರ್ಷಕ್ಕೊಮ್ಮೆ ಒಂದರ ನಂತರ ಒಂದರಂತೆ ಅಧಿಕಾರದ ರುಚಿ ನೋಡುತ್ತ ಬಂದಿವೆ. ಕೆಲವೊಮ್ಮೆ ರಾಷ್ಟ್ರಪತಿ ಆಳ್ವಿಕೆಯನ್ನೂ ರಾಜ್ಯ ಕಂಡಿದೆ. ಇತರ ರಾಷ್ಟ್ರೀಯ ಪಕ್ಷಗಳು ಮತ್ತು ಅಕಾಲಿ ದಳದಿಂದ ಸಿಡಿದು ಹೋದ ಬಣಗಳು ಯಾವತ್ತೂ ರಾಜ್ಯ ರಾಜಕೀಯದಲ್ಲಿ ಪ್ರಭಾವ ಬೀರಿಲ್ಲ.

ರಾಜ್ಯದ ಕೆಲ ಭಾಗಗಳಲ್ಲಿ ಮೊದಲಿನಿಂದಲೂ ಕಮ್ಯುನಿಸ್ಟರು ತಮ್ಮ ಸೀಮಿತ ಪ್ರಭಾವವನ್ನು ತಕ್ಕಮಟ್ಟಿಗೆ ಉಳಿಸಿಕೊಂಡು ಬಂದಿದ್ದಾರೆ. ಹರಿಕಿಷನ್‌ ಸಿಂಗ್‌ ಸುರ್ಜಿತ್‌  ಅವರು ಇಲ್ಲಿಯವರೇ. ಆದರೆ, ಅಂತಿಮವಾಗಿ ಕಮ್ಯುನಿಸ್ಟರೂ ಇಲ್ಲಿ ಪ್ರಭಾವ ಕಳೆದುಕೊಂಡಿದ್ದಾರೆ. ರಾಜ್ಯದಲ್ಲಿ ಎರಡು ಪಕ್ಷಗಳ ರಾಜಕೀಯವೇ ಮುಖ್ಯವಾಗಿದೆ.

ಬಹುಜನ ಸಮಾಜ ಪಕ್ಷದ ಸ್ಥಾಪಕ ದಿವಂಗತ ಕಾನ್ಶಿರಾಂ ಅವರೂ ಇಲ್ಲಿಯವರೇ. ಇಲ್ಲಿಯೇ ಅವರು ತಮ್ಮ ರಾಜಕೀಯ ಜೀವನ ಆರಂಭಿಸಿದ್ದರು. ಆದರೆ, ರಾಜಕೀಯ ಪಕ್ಷವೊಂದನ್ನು ಕಟ್ಟಿ ಬೆಳೆಸುವ ಅವರ ಪ್ರಯತ್ನ ಇಲ್ಲಿ ಯಾವತ್ತೂ ಫಲ ನೀಡಲಿಲ್ಲ. ದೇಶದಲ್ಲಿಯೇ ಅತಿ ಹೆಚ್ಚು ದಲಿತ ಮತದಾರರು (ಶೇ 32.4) ಇರುವ ರಾಜ್ಯ ಇದಾಗಿದ್ದರೂ ಕಾನ್ಶಿರಾಂ ಅವರ ರಾಜಕೀಯ ತಂತ್ರ ಇಲ್ಲಿ ಫಲ ನೀಡಿರಲಿಲ್ಲ. 

ಭಿಂದ್ರನ್‌ವಾಲೆಯ ಉಗ್ರ ಅನುಯಾಯಿಗಳು ಮತ್ತು ಅವರ ಉತ್ತರಾಧಿಕಾರಿಗಳು ದಶಕದ ಕಾಲ ಇಲ್ಲಿ ತಮ್ಮ ಅಟ್ಟಹಾಸ ಮೆರೆದರು. ಆದರೆ, ಅವರು ಕೂಡ ಯಾವತ್ತೂ ಜನಸಮೂಹದ ಮನ್ನಣೆಗೆ ಪಾತ್ರರಾಗಲಿಲ್ಲ. ಇಂತಹ ವಿಶಿಷ್ಟ ರಾಜಕೀಯ ಇತಿಹಾಸ ಹೊಂದಿರುವ ಪಂಜಾಬ್‌ನಲ್ಲಿ ಎಎಪಿಯನ್ನು ಸ್ಥಳೀಯರು ಹೊರಗಿನ ಪಕ್ಷ ಎಂದು ದೂರ ಇಡದೇ ಹತ್ತಿರ ಬಿಟ್ಟುಕೊಂಡಿರುವುದು ನಿಜವಾಗಿಯೂ ಗಮನಾರ್ಹವಾದ ಸಂಗತಿಯಾಗಿದೆ.

ಪಂಜಾಬಿ ಭಾಷೆ ಮಾತನಾಡದ, ಜಾತಿ ಪ್ರಾಬಲ್ಯವನ್ನೂ ಹೊಂದಿರದ, ನದಿ ನೀರು ಹಂಚಿಕೆಯೂ ಸೇರಿದಂತೆ ಹಲವಾರು ಭಾವನಾತ್ಮಕ ವಿವಾದಗಳನ್ನು ಹೊಂದಿರುವ ಹರಿಯಾಣ ರಾಜ್ಯದ ಹಿಂದೂ ವ್ಯಕ್ತಿ ಅರವಿಂದ ಕೇಜ್ರಿವಾಲ್‌ ಅವರ ರಾಜಕೀಯ ಚಿಂತನೆಯನ್ನು ಯಾರೊಬ್ಬರೂ ಇದುವರೆಗೆ ಸರಿಯಾಗಿ ತಿಳಿದುಕೊಂಡಿಲ್ಲ.

ಪಂಜಾಬ್‌ನಲ್ಲಿ ತಮ್ಮ ಪಕ್ಷದ ಅಸ್ತಿತ್ವ ಸಾಬೀತುಪಡಿಸಲು ಹೆಣಗಾಡುತ್ತಿರುವ ಒಗಟಾದ ವ್ಯಕ್ತಿತ್ವದ ಕೇಜ್ರಿವಾಲ್‌ ಅವರನ್ನು ಪಂಜಾಬ್‌ ಜನತೆ ಕೊಂಡಾಡುತ್ತಿರುವುದು ವಿಶೇಷ ಎನಿಸುತ್ತದೆ. ಸಾಕಷ್ಟು ಸಂಖ್ಯೆಯ ಜನರು ಕೇಜ್ರಿವಾಲ್‌ ಅವರನ್ನು ಹೊರಗಿನವರು ಎಂದು ತಿರಸ್ಕಾರದಿಂದ ನೋಡದಿರುವುದು ಇಲ್ಲಿ ಎಲ್ಲಕ್ಕಿಂತ ಮುಖ್ಯವಾದ ಸಂಗತಿಯಾಗಿದೆ.

‘ಕೇಜ್ರಿವಾಲ್‌ ಪಂಜಾಬಿನವರು ಆಗಿರದಿದ್ದರೆ ಏನಾಯ್ತು, ಅವರು ಕೆನಡಾ ಅಥವಾ ಲಂಡನ್‌ಗೆ ಸೇರಿದವರು ಏನಲ್ಲವಲ್ಲ. ಅವರೂ ಭಾರತೀಯನಾಗಿದ್ದಾರೆ, ನಾವು ಕೂಡ ಭಾರತೀಯರಾಗಿದ್ದೇವೆ’ ಎಂದು ಭಟಿಂಡಾದಿಂದ ಅಷ್ಟೇನೂ ದೂರವಲ್ಲದ ಜತ್ರು ಗ್ರಾಮದಲ್ಲಿ ಸಹ ಗ್ರಾಮಸ್ಥರ ಜತೆ ಇಸ್ಪೀಟ್‌ ಆಡುತ್ತಿದ್ದ ಸೆಹವತ್‌ ಸಿಂಗ್‌ ಹೇಳುತ್ತಾರೆ.

ಇಸ್ಪೀಟ್‌ ಆಡುವ ತಂಡದಲ್ಲಿ ಅರ್ಧದಷ್ಟು ಜನ ಕಾಂಗ್ರೆಸ್‌ ಬೆಂಬಲಿಗರೇ ಇದ್ದರು. ಎಎಪಿ ಬೆಂಬಲಿಗರಿಗಿಂತ ಅವರ ಸಂಖ್ಯೆ ಹೆಚ್ಚಿಗಿತ್ತು. ಇಬ್ಬರೇ ಅಕಾಲಿ ಬೆಂಬಲಿಗರಿದ್ದರು. ಅವರಲ್ಲಿ ರಾಜಕೀಯ ಚರ್ಚೆ ತುಂಬ ಬಿರುಸಿನಿಂದ ನಡೆಯುತ್ತಿದ್ದರೂ ತಮಾಷೆಯಿಂದಲೇ ಒಬ್ಬರಿಗೊಬ್ಬರು ಛೇಡಿಸುತ್ತಿದ್ದರು.

ನೋಟು ರದ್ದತಿಯು ಪ್ರತಿಯೊಬ್ಬರನ್ನೂ ಸಂಕಷ್ಟಕ್ಕೆ ದೂಡಿರುವ ಬಗ್ಗೆ ಮಾತ್ರ ಅವರಲ್ಲಿ ಒಮ್ಮತಾಭಿಪ್ರಾಯ ಕಂಡುಬಂದಿತ್ತು. ಫಲವತ್ತಾದ ಗೋಧಿ ಮತ್ತು ಹತ್ತಿ ಬೆಳೆಯುವ ಪ್ರದೇಶಗಳಲ್ಲಿ ನೋಟು ರದ್ದತಿ ನಿರ್ಧಾರದ ಬಗೆಗಿನ ಆಕ್ರೋಶವು ಇನ್ನಷ್ಟು ತೀಕ್ಷ್ಣವಾಗಿತ್ತು.

ಕಾಂಗ್ರೆಸ್‌ ಸಭೆ ನಡೆಯುತ್ತಿದ್ದ ಸಂದರ್ಭದಲ್ಲಿ ಕಾರ್‌ ಸ್ಫೋಟಗೊಂಡು ಆರು ಮಂದಿ ಮೃತಪಟ್ಟ ಮರೂರ್‌ ಮಾರುಕಟ್ಟೆಯ ಹೊರಭಾಗದಲ್ಲಿ ಎದುರಾದ ಚರತ್‌ ಸಿಂಗ್ ಅವರಿಗೂ ನೋಟು ರದ್ದತಿಯಿಂದ ತುಂಬ ಕಹಿ ಅನುಭವವಾಗಿದೆ. ಅವರು ತಮ್ಮ ಬೆಳೆಯನ್ನು ₹ 1.10 ಲಕ್ಷಕ್ಕೆ ಮಾರಾಟ ಮಾಡಿದ್ದರೂ, ಬ್ಯಾಂಕ್‌ನಿಂದ ಪಡೆಯುವ ಹಣದ ಮೇಲೆ ಮಿತಿ ವಿಧಿಸಿರುವುದಕ್ಕೆ ಚರತ್ ಸಿಂಗ್‌ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಅಮೃತಸರದಿಂದ ಲೂಧಿಯಾನಕ್ಕೆ ಮತ್ತು ಅಲ್ಲಿಂದ ದಕ್ಷಿಣದತ್ತ ಭಟಿಂಡಾ ಹಾಗೂ ಪಟಿಯಾಲಾಕ್ಕೆ ಸಂಪರ್ಕ ಕಲ್ಪಿಸುವ ಹಾದಿಯಲ್ಲಿ ರಸ್ತೆ ಉದ್ದಕ್ಕೂ ಎಎಪಿ ಮತ್ತು ಅದರ ಚಿಹ್ನೆ ಕಸಬರಿಕೆ ಬಗ್ಗೆಯೇ ಹೆಚ್ಚು ಮಾತು ಕೇಳಿ ಬಂದವು. ಕಾಂಗ್ರೆಸ್‌ನ ಕ್ಯಾಪ್ಟನ್‌ ಅಮರಿಂದರ್‌ ಸಿಂಗ್‌ ಮತ್ತು ಅಕಾಲಿ ದಳದ ಬಾದಲ್‌ ಅವರಿಗಿಂತ ಕೇಜ್ರಿವಾಲ್‌ ಅವರೇ ಇಲ್ಲೆಲ್ಲ ಹೆಚ್ಚು ಜನಪ್ರಿಯರಾಗಿರುವುದು ಅನುಭವಕ್ಕೆ ಬಂದಿತು.

ಅಕಾಲಿಗಳ ಬಗ್ಗೆ ಒಳ್ಳೆಯ ಮಾತುಗಳು ತುಂಬ ವಿರಳವಾಗಿ ಕೇಳಿ ಬಂದವು. ಹಳೆಯ ಮತ್ತು ಸಾಕಷ್ಟು ಬೇರುಗಳನ್ನು ಬಿಟ್ಟಿರುವ ಕಾಂಗ್ರೆಸ್‌ ಪಕ್ಷಕ್ಕೆ ನಿಷ್ಠಾವಂತ ಬೆಂಬಲಿಗರು ಸಾಕಷ್ಟು ಸಂಖ್ಯೆಯಲ್ಲಿ ಇರುವುದನ್ನು ವರದಿಗಾರರು ಕಾಣದಿದ್ದರೂ, ರಾಜಕೀಯ ವಿಶ್ಲೇಷಕರು ಅದನ್ನುಸೂಕ್ಷ್ಮವಾಗಿ ಗಮನಿಸಿದ್ದಾರೆ. ಆದರೆ, ನನಗೆ ಆ ಬಗ್ಗೆ ಹೆಚ್ಚಿನ ವಿಶ್ವಾಸ ಇಲ್ಲ.

ಎಎಪಿ ಪ್ರಭಾವ ಪಂಜಾಬ್‌ನ ಅತಿ ದೊಡ್ಡ ಪ್ರದೇಶಕ್ಕೆ ಮಾತ್ರ ಸೀಮಿತವಾಗಿದೆ ಎನ್ನುವ ವಾದವನ್ನೂ ನಾನು ಪೂರ್ಣವಾಗಿ ಒಪ್ಪಿಕೊಳ್ಳುವುದಿಲ್ಲ.  ಪುಟ್ಟ ರಾಜ್ಯವಾಗಿರುವ ಪಂಜಾಬ್‌, ಈ ಬಾರಿ ರಾಷ್ಟ್ರೀಯ ಮಾಧ್ಯಮಗಳ ವ್ಯಾಪಕ ಗಮನ ಸೆಳೆಯುತ್ತಿರುವುದು ನನ್ನಲ್ಲಿ ಅಚ್ಚರಿ ಮೂಡಿಸಿದೆ. ರಾಜ್ಯವು ಮೂರು ಪ್ರತ್ಯೇಕ ಪ್ರದೇಶಗಳಾಗಿರುವುದು ನಿಜ. ಅಮೃತಸರ ಒಳಗೊಂಡಿರುವ  ಬಿಯಾಸ್‌ ನದಿಯ ಪಶ್ಚಿಮಕ್ಕಿರುವ ಜಿಲ್ಲೆಗಳ ವ್ಯಾಪ್ತಿಯು ಇತರ ಎರಡು ಪ್ರದೇಶಗಳಿಗೆ ಹೋಲಿಸಿದರೆ ಗಾತ್ರದಲ್ಲಿ ಚಿಕ್ಕದಾಗಿದೆ. ಇದಕ್ಕೆ ಮಾಝಾ ಎನ್ನುತ್ತಾರೆ. 

ಬಿಯಾಸ್‌ ಮತ್ತು ಸಟ್ಲೇಜ್‌ ನದಿ ಮಧ್ಯದಲ್ಲಿ ಇರುವ ಪ್ರದೇಶವು ಅತ್ಯಂತ ಶ್ರೀಮಂತ ಪ್ರದೇಶವಾಗಿದೆ. ಇದರಲ್ಲಿ ಲೂಧಿಯಾನ ಮತ್ತು ಜಲಂಧರ್‌ಗಳೂ ಬರುತ್ತವೆ. ಸಟ್ಲೇಜ್‌ ನದಿಯ ಪೂರ್ವಕ್ಕೆ ಇರುವ ರಾಜಸ್ತಾನ ಮತ್ತು ಹರಿಯಾಣದ ಗಡಿಗೆ ಹೊಂದಿಕೊಂಡಿರುವ ಮಾಲ್ವಾ ಪ್ರದೇಶವು ರಾಜ್ಯ ವಿಧಾನಸಭೆಯಲ್ಲಿ 69 ಸ್ಥಾನಗಳನ್ನು ಹೊಂದಿದೆ.

ಇತರ ಎರಡು ಪ್ರದೇಶಗಳಲ್ಲಿನ 48 ಸ್ಥಾನಗಳಿಗಿಂತ ಹೆಚ್ಚಿನ ವಿಧಾನಸಭಾ ಕ್ಷೇತ್ರಗಳು ಈ ಪ್ರದೇಶದಲ್ಲಿ ಇವೆ. ಎಎಪಿ ಪ್ರಭಾವವು ಮಾಲ್ವಾ ಪ್ರದೇಶಕ್ಕಷ್ಟೇ ಸೀಮಿತವಾಗಿದೆ ಎಂದು ಪ್ರತಿಸ್ಪರ್ಧಿಗಳು ಮತ್ತು ಚುನಾವಣಾ ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ. ವಿಶ್ಲೇಷಕರು ಇದಕ್ಕೆ ಕಾರಣವನ್ನೂ ನೀಡುತ್ತಾರೆ. ಮಾಲ್ವಾ ಪ್ರದೇಶವು ಮೊದಲಿನಿಂದಲೂ ಬಂಡಾಯದ ಗುಣ ಮೈಗೂಡಿಸಿಕೊಂಡಿದೆ. ಎಡಪಂಥೀಯರು, ಆಡಳಿತ ವಿರೋಧಿಗಳು, ಬಡವರು ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ.

ಒಂದು ಪ್ರದೇಶದಲ್ಲಿನ ರಾಜಕೀಯ ಪ್ರಭಾವವು ಭೌಗೋಳಿಕ ಕಾರಣಗಳಿಗೆ ಅಥವಾ ಭೂಭಾಗ ಬೇರ್ಪಡಿಸುವ ನದಿಯೊಂದರ ಕಾರಣಕ್ಕೆ ಒಂದು ನಿರ್ದಿಷ್ಟ ಭೂಭಾಗಕ್ಕಷ್ಟೇ ಸೀಮಿತಗೊಳ್ಳುತ್ತದೆ ಎಂಬುದಕ್ಕೆ ಕೊಡುವ ಕಾರಣಗಳು, ಸಾಕಷ್ಟು ಪ್ರಭಾವಶಾಲಿಯಾಗಿರುತ್ತವೆ ಎನ್ನುವುದನ್ನು ನಂಬುವುದು ಕಷ್ಟ.
ಮಾಲ್ವಾ ಸುತ್ತಮುತ್ತ ಒಣ ಭೂಮಿ ಎಂದು ಕರೆಯುವ ಪ್ರದೇಶವು ಅಭಿವೃದ್ಧಿಯ ಸಕಲ ಸೌಲಭ್ಯಗಳಿಂದ ಗಮನ ಸೆಳೆಯುತ್ತಿದೆ.

ಸೊಂಪಾಗಿ ಗೋಧಿ, ಸಾಸಿವೆ ಬೆಳೆಯುವ ಪ್ರದೇಶ, ಭವ್ಯ ಮನೆಗಳು, ವಿಶಾಲವಾದ ರಸ್ತೆ, ಶಾಲೆ, ಕಾಲೇಜು ಮತ್ತು ವಿದ್ಯುತ್‌ ಸಮಸ್ಯೆ ಇಲ್ಲದಿರುವುದು ಜನರ ಬದುಕನ್ನು ಹೆಚ್ಚು ಸಹ್ಯಗೊಳಿಸಿದೆ. ಈ ಹಿಂದಿನ ನಿರಾಶಾದಾಯಕ, ಶುಷ್ಕ ಜನಜೀವನದಲ್ಲಿ ಭಾರಿ ಬದಲಾವಣೆ ಕಂಡು ಬಂದಿದೆ. ಇದಕ್ಕೆ ಬಾದಲ್‌ಗಳ ಕೊಡುಗೆಯೂ ಸಾಕಷ್ಟಿದೆ. ಆದರೆ, ಈ ಬಾರಿಯ ಚುನಾವಣೆಯಲ್ಲಿ ಇದೆಲ್ಲ ಮುಖ್ಯವಾಗಿಲ್ಲ.

ಕಾಂಗ್ರೆಸ್, ಅದರಲ್ಲೂ ಮುಖ್ಯವಾಗಿ ಕ್ಯಾಪ್ಟನ್‌ ಅಮರಿಂದರ್‌ ಸಿಂಗ್ ಅವರು ಸಹಜವಾಗಿಯೇ ಜನರ ಆಯ್ಕೆಯಾಗಿದ್ದಾರೆ. ಇದಕ್ಕಿಂತಲೂ ಹೆಚ್ಚು ಸಮೃದ್ಧ ತಂದುಕೊಡುವ ಭರವಸೆಯ ಮಾತುಗಳನ್ನಾಡುತ್ತ ಅವರು ಮತದಾರರ ಮನಸ್ಸು ಗೆಲ್ಲುತ್ತಿದ್ದಾರೆ.

ಎಎಪಿ ಕೂಡ ರಾಜಕೀಯ ಲೆಕ್ಕಾಚಾರಗಳನ್ನೆಲ್ಲ ಬದಲಿಸಲು ಹವಣಿಸುತ್ತಿದೆ. ತುಂಬ ಸರಳವಾದ ಚುನಾವಣಾ ಕಾರ್ಯತಂತ್ರವನ್ನು ಅದು ಅಳವಡಿಸಿಕೊಂಡಿದೆ. ಬದಲಾವಣೆ, ಪ್ರತೀಕಾರ ಮತ್ತು ಯುವಜನರ ಆಶೋತ್ತರಗಳ ಪ್ರತಿನಿಧಿಯಾಗುವ ಮಂತ್ರ ಜಪಿಸುತ್ತಿದೆ.

ನೀವು ಬದಲಾವಣೆ ಬಯಸಿದ್ದರೆ, ದಣಿದಿರುವ ಅಕಾಲಿಗಳನ್ನು,  ತಲೆಚಿಟ್ಟು ಹಿಡಿಸಿರುವ ಕಾಂಗ್ರೆಸಿಗರನ್ನು ಸೋಲಿಸಿ ಹೊಸತನ್ನು ಆಹ್ವಾನಿಸಿ. ಪ್ರತಿಯೊಬ್ಬರ ಬಗ್ಗೆ ನಿಮ್ಮಲ್ಲಿ ಆಕ್ರೋಶ ಮಡುಗಟ್ಟಿದೆ. ನಾವು ಅವರನ್ನು ಕಾರಾಗೃಹಕ್ಕೆ ತಳ್ಳುವವರೆಗೆ ಸಹನೆಯಿಂದ ಕಾಯಿರಿ. ನಮ್ಮ ರಾಜಕೀಯ ಸಾಧನೆ ಗಮನಾರ್ಹವಾಗಿಲ್ಲ ನಿಜ. ಆದರೆ, ರಾಜಕೀಯಕ್ಕೆ ನಾವಿನ್ನೂ ಹೊಸಬರು.

ನಮಗೂ ಒಂದು ಅವಕಾಶ ನೀಡಿ ಎಂದು ಮನವೊಲಿಕೆಯ ಮಾತುಗಳನ್ನಾಡುತ್ತ ಮತದಾರರ ಮನಕ್ಕೆ ಎಎಪಿ ಲಗ್ಗೆ ಹಾಕಿದೆ. ಪಂಜಾಬ್‌ ಜನ ಈ ಬಾರಿ ಹೊಸ ಸಾಹಸಕ್ಕೆ ಮನಸ್ಸು ಮಾಡಿರುವಂತೆ ತೋರುತ್ತದೆ.  ಚುನಾವಣಾ ವಿಶ್ಲೇಷಕರ ನಿಲುವು ಸರಿಯಾಗಿರಬಹುದು  ಮತ್ತು ಗೋಡೆ ಮೇಲಿನ ಬರಹವು ಬರಿಗಣ್ಣಿಗಂತೂ ರಾಚುತ್ತಿದೆ.

ಚುನಾವಣಾ ಫಲಿತಾಂಶದಲ್ಲಿ ಮೊದಲ ಸ್ಥಾನಕ್ಕೆ ಏರಲಿ ಇಲ್ಲವೆ ದ್ವಿತೀಯ ಸ್ಥಾನಕ್ಕೆ ತೃಪ್ತಿಪಡಲಿ. ಅಂದರೆ ಫಲಿತಾಂಶ ಏನೇ ಇರಲಿ, ಆಮ್‌ ಆದ್ಮಿ ಪಾರ್ಟಿಯು ಈ ಚುನಾವಣೆಯಲ್ಲಿ ಪ್ರಮುಖ ರಾಷ್ಟ್ರೀಯ ರಾಜಕೀಯ ಶಕ್ತಿಯಾಗಿ ಹೊರಹೊಮ್ಮುತ್ತಿರುವುದರಲ್ಲಿ ಯಾವುದೇ ಅನುಮಾನವಂತೂ ಇಲ್ಲವೇ ಇಲ್ಲ.

ಒಟ್ಟಿನಲ್ಲಿ ಪಂಜಾಬ್‌ ಚುನಾವಣಾ ಫಲಿತಾಂಶವು ರಾಷ್ಟ್ರ ರಾಜಕಾರಣದ ಮೇಲೆ ಗಂಭೀರ ಸ್ವರೂಪದ ಪರಿಣಾಮ ಬೀರಲಿದೆ. ಮುಂದಿನ ವರ್ಷ ಗುಜರಾತ್‌ನಿಂದಲೇ ಅದರ ಪ್ರಭಾವ ಎಲ್ಲರ ಅನುಭವಕ್ಕಂತೂ ಖಂಡಿತವಾಗಿಯೂ ಬರಲಿದೆ.
(ಲೇಖಕ ಮೀಡಿಯಾಸ್ಕೇಪ್ ಪ್ರೈ.ಲಿ. ಸಂಸ್ಥಾಪಕ ಸಂಪಾದಕ ಹಾಗೂ ಅಧ್ಯಕ್ಷ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT