ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಡಿತವಕ್ಕಿಗಳಿಗೆ ನಮಿಸುತ್ತ...

Last Updated 5 ನವೆಂಬರ್ 2011, 19:30 IST
ಅಕ್ಷರ ಗಾತ್ರ

ಆಡುವುದೇ ಕನ್ನಡವಾಗಿದ್ದ ಕಾಲವದು. ಕನ್ನಡ ವಿದ್ವಾಂಸ, ಕನ್ನಡ ಉಪಾಧ್ಯಾಯರನ್ನು `ಕನ್ನಡ ಪಂಡಿತರು~ ಎಂದು ಕರೆಯುತಿದ್ದೆವು. ಕನ್ನಡಕ್ಕೆ ಸಂಬಂಧಿಸಿ ಮಾತ್ರವಲ್ಲ, ಅವರ ಬದುಕಿಗೆ ಸಂಬಂಧಿಸಿದ್ದೆಲ್ಲವೂ ಆ ಹಿನ್ನೆಲೆಯಲ್ಲಿಯೇ ಕರೆಯಲ್ಪಡುತಿತ್ತು. ಕನ್ನಡ ಪಂಡಿತರ ಮನೆ, ಕನ್ನಡ ಪಂಡಿತರ ಹೆಂಡತಿ, ಕನ್ನಡ ಪಂಡಿತರ ಮಗಳು, ಕನ್ನಡ ಪಂಡಿತರ ಹಿತ್ತಲಿನ ಹೂಗು - ಹೀಗೆ ಪಂಡಿತ ಹೆಸರಿನೊಂದಿಗೆ ಅವರಿಗೆ ಸೇರಿದ್ದೆಲ್ಲವೂ ಬೆರೆತುಕೊಂಡೇ ಇರುತಿತ್ತು. ಅಂದು ಕನ್ನಡ, ಹಿಂದೀ, ಪಾರ್ಸಿ, ಸಂಸ್ಕೃತ, ಇತ್ಯಾದಿ ದೇಶೀ ಭಾಷಾ ವಿದ್ವಾಂಸರೆಲ್ಲ ಕರೆಸಿಕೊಳ್ಳುತಿದ್ದುದೇ ಪಂಡಿತರು ಎಂದಷ್ಟೆ. ಆದರೆ ಇಂಗ್ಲಿಷ್ ಅಧ್ಯಾಪಕರು ಪಂಡಿತರಲ್ಲ, ಇಂಗ್ಲಿಷ್ ಮಾಸ್ಟ್ರು. ಅವರು ಪ್ರಾಧ್ಯಾಪಕರಾಗಿದ್ದರೆ ಇನ್ನೂ ಹೆಚ್ಚು. ನನ್ನ ಅಣ್ಣನ ಸಹೋದ್ಯೋಗಿಯಾಗಿದ್ದ ಒಬ್ಬ ಇಂಗ್ಲಿಷ್ ಪ್ರಾಧ್ಯಾಪಕರ ಹೆಂಡತಿ ತನ್ನ ಪತಿಯನ್ನು ಪ್ರೊಫೆಸರ್ ಅಂತಲೇ ಕರೆಯುತಿದ್ದರಂತೆ. ಮನೆಗೆ ಅವರನ್ನು ಕೇಳಿಕೊಂಡು ಹೋದರೆ `ಪ್ರೊಫೆಸರ್ ಇದ್ದಾರೆ/ಇಲ್ಲ~ ಅಂತ ಉತ್ತರಿಸುತಿದ್ದರಂತೆ. ಸ್ವತಃ ಇಂಗ್ಲಿಷ್ ಪ್ರಾಧ್ಯಾಪಕನಾಗಿದ್ದ ಆತ ಇದನ್ನು ಪ್ರಸ್ತಾಪಿಸಿ ಗಂಟಲಲ್ಲೇ ಸಶಬ್ದ ನಗುತಿದ್ದುದು ಮರೆತೇ ಹೋಗದು. ಇಂಗ್ಲಿಷ್ ಅಧ್ಯಾಪಕರ ಉಡುಗೆಗೂ ದೇಶೀಭಾಷಾ ಬೋಧಕರ ಉಡುಗೆಗೂ ಕೂಡ ವ್ಯತ್ಯಾಸ ಇತ್ತು. ಇಂಗ್ಲಿಷ್ ಪ್ರಾಧ್ಯಾಪಕರೋ, ಸೂಟು ಅಥವ ಪ್ಯಾಂಟು ಶರ್ಟು ತೊಟ್ಟು ಟೈ ಇಲ್ಲದೆ ಹೊರಡರು. ಪಾಪ, ಎಂಥ ಸೆಕೆಯ ಊರಾದರೂ. ಎಷ್ಟು ಹಿಂಸೆಯಾದರೂ. ದೇಶೀಭಾಷಾ ಪಂಡಿತರೋ, ಕಾಲೇಜಿನಲ್ಲೇ ಪಾಠ ಹೇಳಲಿ ಬೇಕಾದರೆ- ಕಚ್ಚೆ ಪಂಚೆ, ಮೇಲೊಂದು ಜುಬ್ಬ, ಕೋಟು, ಎಡ ಅಥವಾ ಬಲ ಭುಜದ ಮೇಲೆ ಪಟ್ಕಡಿ ಮಡಚಿದ ಶಾಲು, ಮುಂಡಾಸು ಅಥವಾ ಟೊಪ್ಪಿ ಮತ್ತು ಕೆಲವರಿಗೆ ಅದರ ಕೆಳಗೆ ಕಂಡೂಕಾಣದಂತೆ ತೆಳ್ಳಗಿನ ಜುಟ್ಟೂ. ಶಿಸ್ತಿನ ಲಯಬದ್ಧ ತೂಕದ ನಡಿಗೆ. ಒಟ್ಟಿನಲ್ಲಿ ನೋಡಿದೊಡನೆ ಭಾಷಾಪಂಡಿತರು ಎಂದು ಗುರುತು ಹಿಡಿಯುವಷ್ಟು ನಿರ್ದಿಷ್ಟ ವೇಷಭೂಷಣ ನಡೆ ನಡಿಗೆ ನಗೆಯವರು. ಕೆಲವರಂತೂ ಗಂಭೀರ- ಪ್ರಸನ್ನ ಮುಖರು. ನಾ ಕಂಡ ಕನ್ನಡ ಪಂಡಿತರೆಲ್ಲ ಬಳಿಹೋದರೆ ಕನ್ನಡ ಭಾಷೆಯಂತೆಯೇ ತಿಳಿವಿನ ತಿಳಿನಗೆಯವರಾಗಿದ್ದರು. ಅಂದ ಹಾಗೆ ಆಕೃತಿಯ ವಿಚಾರಕ್ಕೆ ಬಂದರೆ, ಏನಾಶ್ಚರ್ಯ, ಆ ಬಹುತೇಕ ಕನ್ನಡ ಪಂಡಿತರ ಭೌತಿಕ ಎತ್ತರ, ಕಯ್ಯಾರ ಕಡಂಗೋಡ್ಲು ಅಂತಹ ಕೆಲವೇ ಕೆಲವರನ್ನು ಹೊರತುಪಡಿಸಿ, ಹೆಚ್ಚು ಕಡಿಮೆ ಒಂದೇ ಹದವಿತ್ತು!

***

ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕನ್ನಡಪಂಡಿತರ ಪರಂಪರೆಯೇ ಇದೆ. ಅವರಲ್ಲಿ ಹೆಚ್ಚಿನವರು ಹವ್ಯಕರು. ಸೇಡಿಯಾಪು ಅವರ ನೆನಪುಗಳನ್ನು ಸಂಗ್ರಹಮಾಡುವ ಹೊತ್ತಿನಲ್ಲಿ ನಾನವರನ್ನು `ಅದೇನು ಕಾರಣ?~ ಕೇಳಿದೆ. ಅದಕ್ಕವರು ಹವ್ಯಕ ಭಾಷೆ ಹಳೆಗನ್ನಡಕ್ಕೆ ಹತ್ತಿರವಿರುವುದು ಒಂದು ಕಾರಣವೆಂದರು. ಹಾಗಾಗಿ ಎಷ್ಟೋ ಕಠಿಣ ಪದಗಳು ಅವರಿಗೆ ಸುಲಭದಲ್ಲಿ ಅರ್ಥವಾಗುವುದಂತೆ. ತನ್ನ ಹತ್ತನೇ ವರ್ಷಕ್ಕೆಯೇ ರನ್ನನ `ಗದಾಯುದ್ಧ~ ಓದಿದವರು ಸೇಡಿಯಾಪು. ಇನ್ನೊಂದು ಕಾರಣ ಮುಳಿಯ ತಿಮ್ಮಪ್ಪಯ್ಯ ಅವರ ಪ್ರೇರಣೆ. ಸೇಡಿಯಾಪು ಅವರ ಮಾತಿನಲ್ಲೇ ಹೇಳಬೇಕೆಂದರೆ ಮುಳಿಯ ಅವರು `ಈ ಜಿಲ್ಲೆಯ ಪಂಡಿತರ ಸಾಲನ್ನು ನಿರ್ಮಿಸಿದವರು~. ಕನ್ನಡವನ್ನು ಜೀವಸಮಾನವಾಗಿ ಪ್ರೀತಿಸಿದವರು. ಬಳಿ ಹೋದವರಿಗೆಲ್ಲ ಅವರು ನೀವು ಕನ್ನಡ ಕಲಿಯಿರಿ ಎನ್ನುತಿದ್ದರಂತೆ. ಮುಳಿಯ ಎಂದೊಡನೆ `ನಾಡೋಜ ಪಂಪ~ ಜೊತೆಗೇ ನೆನಪಾಗುವಷ್ಟು ವಿಚಿಂತನದ ಕೃತಿ ರಚಿಸಿದವರು. ಅವರು ತೆರೆದ ಪಂಡಿತ ಪರಂಪರೆಯ ಬಾಗಿಲಲ್ಲಿ `ಅವರ ಹಿಂದೆ ನಾವು ಒಬ್ಬೊಬ್ಬರೇ ಸಾಲುಸಾಲಾಗಿ ಬಂದೆವು~ ಎಂದರು ಸೇಡಿಯಾಪು. ಸೇಡಿಯಾಪು ನೆನಪಿನ ಸಂಗ್ರಹದಲ್ಲಿ ಅಂದಿನ ಮದರಾಸು ವಿ.ವಿ. ನಡೆಸುತಿದ್ದ ವಿದ್ವತ್ ಪರೀಕ್ಷೆಯ ವಿವರಗಳು, ಸಂದೇಹ ಬಂದಾಗ ತಾನು ಮುಳಿಯ ಅವರೊಡನೆ ಕೇಳುತಿದ್ದದ್ದು, ತನ್ನ ಇಪ್ಪತ್ತಾರನೆಯ ವರ್ಷಕ್ಕೆ ಪರೀಕ್ಷೆಗೆ ಕುಳಿತು ಪಾಸಾಗಿ ಉದ್ಯೋಗ ಪಡೆದ ಕತೆ ಎಲ್ಲ ಇವೆ. ಅಷ್ಟರೊಳಗೆ ತಾನು ಸಂಸ್ಕೃತ ಮತ್ತು ಹಿಂದಿಯನ್ನೂ ಕಲಿತಿದ್ದರಿಂದಾಗಿ `ಈಗ ಸಂಸ್ಕೃತ, ಕನ್ನಡ ಮತ್ತು ಹಿಂದೀ ಎಲ್ಲ ಬಂತು ಅಂತ ಮಾಡಿಕೊಂಡೆ~ ಎಂದಿದ್ದಾರೆ. ಹಾಗೆ ನೋಡಿದರೆ ಅಂದಿನ ಹೆಚ್ಚಿನ ಪಂಡಿತರು ಸಂಸ್ಕೃತವನ್ನೂ ಬಲ್ಲವರೇ ಇದ್ದರು. ಸಂಸ್ಕೃತ ಭಾಷೆಯು ದೇಶೀಭಾಷಾದೊಂದಿಗೇ ಸೇರಿ ತಕ್ಕಮಟ್ಟಿಗೆ ಜೀವಂತವಿದ್ದ ಕಾಲವದು. ನಡುನಡುವೆ ಸಂಸ್ಕೃತದ ಸುಭಾಷಿತವನ್ನೋ ಕಾವ್ಯಸಾಲುಗಳನ್ನೋ ಉದ್ದರಿಸಿ, ರಾಮಾಯಣ ಮಹಾಭಾರತಗಳ ಸಂದರ್ಭಗಳನ್ನು ಆಯಾ ಗ್ರಂಥದಲ್ಲಿನ ವಾಕ್ಯಗಳಲ್ಲೇ ಉದ್ಧರಿಸುತ್ತಾ ವರ್ತಮಾನದ ಸಂಗತಿಗಳಿಗೆ ತಂದು ಮುಟ್ಟಿಸುವುದಂತೂ ಸಾಮಾನ್ಯವಾಗಿತ್ತು. ಹಾಗೆ ಉದ್ಧರಿಸುತ್ತ ಅವುಗಳನ್ನು ತಿಳಿಗನ್ನಡದಲ್ಲಿ ವಿವರಿಸಿ ಮಾತನಾಡುವ ಒಂದು ಶೈಲಿಯೇ ಇತ್ತು ಆಗ. ಕೇವಲ ಲೌಕಿಕದ ಮಾತಾದರೂ ಅದು ಮಾತು ಮಾತ್ರವಾಗದೆ ತತ್ವ ವೇದಾಂತ ಕಾವ್ಯ ಎಲ್ಲವನ್ನೂ ಆಧಾರವಾಗಿ ಇಟ್ಟುಕೊಂಡು ನಡೆಸುವ ಜಿಜ್ಞಾಸೆಯೇ ಆಗಿತ್ತು. ವ್ಯಾಸರೊಂದಿಗೆ ಕುಮಾರವ್ಯಾಸ, ವಾಲ್ಮೀಕಿಯೊಂದಿಗೆ `ನಮ್ಮ ಮುದ್ದಣ~, ಎಂದರೆ ಕಾವ್ಯಭಾಷಾಮಹಿಮರೆಲ್ಲ ಪಂಡಿತರೊಂದಿಗೂ ಸಹೃದಯ ರಸಿಕರೊಂದಿಗೂ ಒಟ್ಟಾಗಿ ಒಡನಾಡಿಕೊಂಡು ಇದ್ದ ಕಾಲವಾಗಿತ್ತಲ್ಲವೆ ಅದು? ಪ್ರಧಾನಭೂಮಿಕೆಯಲ್ಲಿ ಮಾತ್ರ ಆಯಾ ಭಾಷಾಪಂಡಿತರಿಗೆ ಅವರವರ ವಿದ್ವತ್ತಿನ ಭಾಷೆ; ಅಂತೆ, ಮುಳಿಯ, ಸೇಡಿಯಾಪು, ಕಡಂಗೋಡ್ಲು, ಕಯ್ಯಾರ ಕಿಞ್ಞಣ್ಣ ರೈ  ಅಂಥ ಅನೇಕರಿಗೆ ಎಲ್ಲಕ್ಕೂ ಅಂತಿಮವಾಗಿ ಕನ್ನಡ ನುಡಿಯೇ ಕನ್ನಡಿಯಾಗಿತ್ತು. ಅನ್ಯಭಾಷೆಯಿಂದ ಗಳಿಸಿದ್ದನ್ನೂ ಕನ್ನಡದಲ್ಲಿ ವಿಲೀನಗೊಳಿಸಿದ ಅವರು ಕನ್ನಡದ ಲೋಕದರ್ಶನ ಸಾಮರ್ಥ್ಯ ತಿಳಿದವರಾಗಿದ್ದರು.

***

ಮದರಾಸು ವಿ.ವಿ.ಯ ಕನ್ನಡವಿಭಾಗಕ್ಕೊಂದು ಗಟ್ಟಿಸ್ವರೂಪವನ್ನು ಕೊಟ್ಟು ಬೆಳೆಸಿದ ಪ್ರೊ.ಮರಿಯಪ್ಪ ಭಟ್ಟರು `ಕನ್ನಡದ ಕಿಟ್ಟೆಲ್~ ಎಂದೇ ಹೆಸರಾದವರು. `ಹವ್ಯಕ - ಇಂಗ್ಲಿಷ್ ಅರ್ಥಕೋಶ~ವನ್ನೂ ರಚಿಸಿದವರು. ಅದರಲ್ಲಿ ಸಮಾನಾರ್ಥ ಪದಗಳಷ್ಟೇ ಅಲ್ಲ, ಇನ್ನಿತರ ಸಹೋದರ ಭಾಷೆಯಲ್ಲಿನ ಸಮಾನಾರ್ಥ ಪದಗಳನ್ನೂ ನೀಡಿ ಸುಪುಷ್ಟಗೊಳಿಸಿದವರು. ಹಾಗೆ ಅಂದಿನ ವಿದ್ವಾಂಸರಾರೂ ಕೇವಲ ಪಾಠ ಮಾಡುವವರಾಗಿರಲಿಲ್ಲವಲ್ಲವೆ. ಗ್ರಂಥಕರ್ತರಾಗಿದ್ದರು. ಕವಿಗಳಾಗಿದ್ದರು. ಪ್ರಸಂಗಕರ್ತರಾಗಿದ್ದರು. ಕಥೆಗಾರರಾಗಿದ್ದರು. ವ್ಯಾಖ್ಯಾನಕಾರರಾಗಿದ್ದರು. ಸೇಡಿಯಾಪು ಅವರ `ವಿಚಾರ ಪ್ರಪಂಚ~, `ನಾಗರಬೆತ್ತ~, ಕಡಂಗೋಡ್ಲು ಅವರ `ಅದ್ದಿಟ್ಟು~, `ಮಾದ್ರಿಯ ಚಿತೆ~, ಪಂಜೆಯವರ `ತೆಂಕಣ ಗಾಳಿಯಾಟ~, ಕಯ್ಯಾರರ `ಐಕ್ಯವೊಂದೇ ಮಂತ್ರ~, `ಬೆಂಕಿ ಬಿದ್ದಿದೆ ಮನೆಗೆ~... ನೆನೆದೊಡನೆ ಮನದೆದುರು ನಿಲ್ಲುವ ಎಷ್ಟು ಉದಾಹರಣೆಗಳು ಬೇಕು. ವಿದ್ವತ್ತು ಮತ್ತು ಕೃತಿರಚನೆ ಎರಡನ್ನೂ ಉಸಿರೊಳಗೆ ಬೆಸೆದುಕೊಂಡ ಪರಂಪರೆಯಾಗಿತ್ತು ಅದು.

ಬದುಕಿನಶೋಧ ಮತ್ತು ಕಾವ್ಯಶೋಧ ಮತ್ತು ಹೆಣ್ಣುಮಕ್ಕಳ ಮಟ್ಟಿಗೆ ಕರ್ಮಠತ್ವವೂ ತಳಕು ಹಾಕಿಕೊಂಡ ಪ್ರವಾಹ ವಿಪ್ರವಾಹದ ಸಂಕೀರ್ಣ ಕಾಲವದು. ವಿದ್ವತ್ತುಗಿದ್ವತ್ತು ಓದಲು, ಕೆಲಸಕ್ಕೆ ಹೋಗಲು ಹೆಣ್ಣಿಗೆ ಪರ್ಮಿಟಿಲ್ಲದ ಕಾಲ; ಎಂದರೆ ಇದೂ ಅರ್ಧ ಮಾತಾಗುತ್ತದೇನೊ. ಯಾಕೆಂದರೆ ಸೇಡಿಯಾಪು ನೆನಪುಗಳಲ್ಲಿ ಅವರು ಶಾಲೆ ಓದಲು ಪಟ್ಟ ಕಷ್ಟಾನುಕಷ್ಟದ ವಿವರಗಳೆಲ್ಲ ಇವೆ. ಆದರೆ ಅವರು ಬಂಧನಗಳನ್ನು ಹರಿದು ಹೋಗಲು ಸಾಧ್ಯವಾಗಿದ್ದಕ್ಕೂ ಮಹಿಳೆ ಹಾಗೆ ಮೀರಿಹೋಗಲು ಸಕಾರಣವಾಗಿ ಹಿಂಜರಿಯುತ್ತಿದ್ದುದಕೂ ಅಂದಿನ ಸಾಮಾಜಿಕ ಸ್ಥಿತಿಗತಿಗೂ ಸಂಬಂಧ ಇದ್ದೇ ಇದೆ ಎಂಬುದನು ಮರೆಯುವಂತಿದೆಯೆ? ಆಗೆಲ್ಲ ನಮ್ಮಲ್ಲಿ ಕನ್ನಡಕ್ಕೆ ಮಹಿಳಾ ಟೀಚರಿಲ್ಲ, ಸಂಸ್ಕೃತಕ್ಕೂ ಇಲ್ಲ. ಹಾಗೆಂತ ಹಿಂದೀ `ಟೀಚರ್~ ಇದ್ದರು. ನಾವು ಹಿಂದಿ ಕಲಿಸುವ ಮಾಸ್ಟರಿಗೆ ಹಿಂದೀ ಪಂಡಿತರೆನ್ನುತಿದ್ದೆವು. ಅವರು `ಟೀಚರಾದರೆ~ ಅವರಿಗೆ ಹಿಂದೀ ಟೀಚರು ಎನ್ನುತಿದ್ದೆವು ಹೊರತು, ಪಂಡಿತಾ ಎನ್ನುತ್ತಿರಲಿಲ್ಲ. ವಿದ್ವತ್ತು ಪಾಸು ಮಾಡಿದರೂ ಆಕೆ ಹೆಸರಿನ ಹಿಂದೆ ವಿದ್ವಾನ್ ಹಾಕಿಕೊಳ್ಳುತ್ತಿರಲಿಲ್ಲ, ಯಾಕೆ? ಇಷ್ಟಕ್ಕೂ ಟೀಚರು ಎಂಬುದು ಮಹಿಳೆಯರಿಗೂ ಮಾಸ್ಟರು ಎಂಬುದು ಮತ್ತು ಪಂಡಿತ ಎಂಬುದು ಪುರುಷರಿಗೂ ಸಂದ ಮೀಸಲು ಶಬ್ದಗಳಾಗಿದ್ದು ಹೇಗೆ? ನಾನು ಕೇಳಿದ ಪಂಡಿತಾ ಎಂದರೆ- ಪಂಡಿತಾ ರಮಾಬಾಯಿ ಒಬ್ಬರೇ.

***

`ಸ್ವಾಭಿಮಾನಿ ಪಂಡಿತ ಸೇಡಿಯಾಪು ಕಠಿಣ ಬದುಕನ್ನು ಎದುರಿಸಿದವರು. ಸುಳ್ಳು ಹೇಳುವುದಿಲ್ಲವೆಂದು ಅತಿಕಠಿಣ ಪ್ರತಿಜ್ಞೆ ಮಾಡಿ ಕೊನೆಯವರೆಗೂ ಅಖಂಡವಾಗಿ ಸತ್ಯವ್ರತರಾದರು. ಯಾರಿಗೋ ಬಾಲ್ಯದಲ್ಲೊಮ್ಮೆ ಕೊಡಬೇಕಾದ ಎರಡು ರೂಪಾಯಿಯನ್ನು ತಾನು ಕೊಡದೇಹೋದ ಋಣಬಾಧೆ ಅವರನ್ನು ತೊಂಬತ್ತರ ವೃದ್ಧಾಪ್ಯದಲ್ಲಿಯೂ ಕಾಡುತ್ತಿತ್ತು. ಕೊನೆಯಗಳಿಗೆಯವರೆಗೂ ತನ್ನ ತಿಳಿಹಾಸ್ಯ ಪ್ರವೃತ್ತಿಯನ್ನು ಅವರು ಉಳಿಸಿಕೊಂಡೇ ಇದ್ದರು. ಅವರ ಸರಸಿ ವ್ಯಕ್ತಿತ್ವ ಯಾವಾಗ ಪಂಡಿತನ ಮತ್ತು ವ್ರತನಿಷ್ಠನ ನಿಷ್ಠುರತೆಗೆ ಮಗುಚಿಕೊಳ್ಳುತ್ತದೆ ಎಂಬುದೇ ತಿಳಿಯುತ್ತಿರಲಿಲ್ಲ. ನಿಜವಾಗಿ ಎಂದರೆ ಒಂದು ಸಣ್ಣ ಆಚೀಚಿಗೂ ಅವರು ಚಡಪಡಿಸುವ ರೀತಿ... ಅತಿ ಸಮರ್ಪಕತೆಯನ್ನು ಸರ್ವದಾ ಸರ್ವತ್ರ ನಿರೀಕ್ಷಿಸಿ ಭಯಪಡಿಸುವ ಬಗೆ... ಮತ್ತೊಂದು ಕಡೆ ಆಡುಮಾತಿನ ಲಯಕ್ಕೂ ತಲೆದೂಗುತ್ತಿದ್ದ ಸೇಡಿಯಾಪು ಈ ಪ್ರವೃತ್ತಿಯಿಂದಾಗಿಯೇ ವೈಯಾಕರಣ ಆಗಿರುವುದರ ಜೊತೆಗೇ ಕನ್ನಡದಲ್ಲಿ ಬಹುಕಾಲ ಉಳಿಯುವ ಒಂದು ಕತೆ `ನಾಗರಬೆತ್ತ~ವನ್ನು ಬರೆಯಲು ಸಾಧ್ಯವಾಯಿತೇನೋ~ ಎಂದು ಒಂದೆಡೆ ಅವರ ಬಗ್ಗೆ ಬರೆದಿದ್ದೆ. ಇದು ಅಂದಿನ ಪಂಡಿತ ಶ್ರೇಷ್ಠರ ಒಂದು ಸರಿಸುಮಾರು ಸ್ಥಾಯೀಚಿತ್ರಣವಾಗಿಯೂ ಕಾಣುತ್ತಿದೆ.

ಭಾಷಾಶುದ್ಧಿಯ ವಿಚಾರದಲ್ಲಿ ಮಾತ್ರ ಭಾಷಾಪಂಡಿತರು ಬಹುಪಾಲು ಕಟ್ಟುನಿಟ್ಟಿನವರು. ತಪ್ಪು ಕಂಡೊಡನೆ ಕೆಂಡವಾಗುತಿದ್ದರು. ಉದಾ: ಶಾರದ ಎಂಬ ಹೆಸರು ಕನ್ನಡಕ್ಕೆ ಬರುವಾಗ ಶಾರದೆ ಆಗುತ್ತದೆ. ಸೀತಾ ಇದ್ದದ್ದು ಸೀತೆ ಆಗುತ್ತದೆ. `ಸೀತೆಗೆ~ ಸರಿ. `ಸೀತಾಗೆ~ ಸರಿಯಲ್ಲ. ಒಂದೊಮ್ಮೆ `ಸೀತಾಗೆ~ ಎನ್ನಬೇಕಿದ್ದರೆ `ಸೀತಾಳಿಗೆ~ ಎನ್ನಬೇಕು- ಅಂತೆಲ್ಲ ಒಬ್ಬ ವಿದ್ವಾಂಸರು ನಮ್ಮ ಮನೆಯಲ್ಲಿ ಭಾಷಾ ಪ್ರಯೋಗದ ಕುರಿತು ಸಣ್ಣ ಹಿಡಿದು ಚರ್ಚಿಸುವುದನ್ನು ಕೇಳಿದ್ದೆ. ನಮಗೋ, ಸೀತಾಳಿಗೆ ಎನ್ನುವುದು `ಹಳೆಯ ಪದ್ಧತಿ~ ಅಂತ. ಸೀತೆ ಎನ್ನುವುದೂ. ಸೀತಾಗೆ, ಸೀತಂಗೆ ಎಂದರೆ ಇವತ್ತು ಮಾತಾಡಿದಂತಹ ಸುಖ. ವ್ಯಾಕರಣ ಶುದ್ಧತೆ ಎಂಬುದು ಕಲಿಯಲು ಮಾತ್ರ. ಬರೆಯ ಹೋದಾಗ ಅಲ್ಲಿನ ಭಾವ ತನ್ನ ಸ್ವಾತಂತ್ರ್ಯವನ್ನು ಬಳಸಿ ಕೆಲ ಅಪಭ್ರಂಶಗಳನ್ನು ಇದ್ದಕ್ಕಿದ್ದಂತೆ ಆಖಾಡಕ್ಕಿಳಿಸುತ್ತದೆ, ವಾಕ್ಯಗಳನು ಕರಕ್ಕನೆ ಕತ್ತರಿಸಿ, ಜೋಡಿಸಿ ತನಗೆ ಬೇಕಾದ್ದು ಬರುವವರೆಗೂ ಆಪರೇಶನ್ ಮಾಡುತ್ತದೆ. ಭಾಷೆಯನ್ನು ಮುರಿದು ಕಟ್ಟುವಲ್ಲಿ ಆಗುವ ತಪ್ಪುಒಪ್ಪುಗಳಿಗೆಲ್ಲ ಯಾವತ್ತೂ ಕಾಲ ತತ್‌ಕ್ಷಣವೇ ದಸ್ಕತು ಹಾಕದು, ಕೊನೆಗೂ ಅದು `ಕಾಲಾಂತರ~ಕೆ ಸೇರಿದ ಮಾತಷ್ಟೆ?

ಅಂದು ವೃತ್ತಪತ್ರಿಕೆಗಳಲ್ಲಿ ಬರುವ ತಪ್ಪುಪ್ರಯೋಗಗಳನ್ನೂ, ವ್ಯಾಕರಣದ ಅಬದ್ಧಗಳನ್ನೂ ಪಟ್ಟಿ ಮಾಡಿಟ್ಟು ಚರ್ಚಿಸುತಿದ್ದ ಪಂಡಿತರಿದ್ದರಂತೆ. ಸ್ನೇಹಿತರೊಬ್ಬರು ಹೇಳುತಿದ್ದರು- ಅವರ ಊರಿನ ಕನ್ನಡಮಾಸ್ಟರು ವೃತ್ತಪತ್ರಿಕೆ ಓದುತಿದ್ದಂತೆ ತಪ್ಪು ಕಂಡಲ್ಲೆಲ್ಲ ಅಡಿಗೀಟು ಹಾಕಿಯೇ ಮುಂದರಿಯುತಿದ್ದರಂತೆ. ತಪ್ಪು ಪ್ರಯೋಗ ಕಂಡರೆ ಪಂಡಿತರು ಮಾತ್ರವಲ್ಲ, ಸುಮ್ಮನೆ ಕನ್ನಡ ಮಾತಾಡುವ ಮಂದಿಯೂ ಸಿಡಿಮಿಡಿಗೊಳ್ಳುತಿದ್ದರು. ಮನೆಗೆ ಬಂದ ಅತಿಥಿಗಳಿಗೂ ಆತಿಥೇಯರಿಗೂ ಮಾತಾಡಲು ಅದೊಂದು ಜಂಟಿಯಾದ ಮುಖ್ಯವಿಚಾರವೇ ಆಗುವಷ್ಟು ಅದು ಅವರನ್ನು ಆಕ್ರಮಿಸುತಿತ್ತು. ಒಳಮನೆಯಲ್ಲಿ ಊಟದಹೊತ್ತಿಗೆ ಹಾಗೆ ಅವರೆಲ್ಲ ಚರ್ಚಿಸುವುದು ನಮ್ಮ ಕಿವಿಗೆ ಬೀಳುತಿತ್ತು. ಆ ನೆನಪುಗಳನೆಲ್ಲ ನೆನೆದರೆ ಅಂದಿನ ಕನ್ನಡ ಲೋಕದ ಒಟ್ಟಭಿಪ್ರಾಯ `ಪತ್ರಿಕೆಗಳೇ ಇಲ್ಲದಾಗ ಎಷ್ಟು ಒಳ್ಳೆಯ ಕನ್ನಡವಿತ್ತು. ಇನ್ನು ಬಿಡಿ, ಕನ್ನಡ ಮನೆ ಸೇರಿದ ಹಾಗೆಯೇ~ ಅಂತ ಇತ್ತೇನೊ. `ಕನ್ನಡವೇ ಸತ್ಯ~ವೆಂದು ದೃಢವಿದ್ದ ಆ ಹೊತ್ತಿನಲ್ಲಿಯೇ ಎದ್ದ ಆತಂಕದ ದನಿಯದು.

***

ನಾನು ಎಳವೆಯಿಂದಲೂ ಕಾಣುತ್ತ ಬಂದ, ಭಾಷೆಯ ಮೂರ್ತರೂಪವಾಗಿ ನನ್ನಲ್ಲಿ ನೆಲೆಸಿರುವವರಲ್ಲಿ ಒಬ್ಬರು, ವಿದ್ವಾನ್ ಯಜ್ಞನಾರಾಯಣ ಉಡುಪರು. ಶಿವರಾಮ ಕಾರಂತರ ಗುರು ಪಂಡಿತ ಐರೋಡಿ ಶಿವರಾಮಯ್ಯ ಅವರ ಪುತ್ರ ಇವರು. ಇದು ಕನ್ನಡದ ಕೆಲಸ ಎಂಬ ಲೇಬಲು ಹಚ್ಚಿಕೊಳ್ಳದೆ ಪ್ರತಿಫಲವೆಂಬ ಮೈಲಿಗೆಯೇ ಇಲ್ಲದೆ ಕನ್ನಡದ ಕೆಲಸಕ್ಕೆ ತನ್ನನ್ನು ಕೊಟ್ಟುಕೊಂಡವರು. ವರ್ಗವಾದ ಊರಿಗೆ ಹೋಗಿ ಮನೆ ಹುಡುಕುವಾಗ ಅವರು ಮೊದಲು ನೋಡುತಿದ್ದುದು- ತನ್ನ ಪುಸ್ತಕಗಳನ್ನು ಇಡಲು ಸಾಕಷ್ಟು ಜಾಗವಿದೆಯೇ? ಇದೆಯಾದರೆ ಸರಿ, ಈ ಮನೆ ಆಗಬಹುದು. ಉಳಿದ ಕೊರತೆಗಳೇ? ಹೇಗೂ ನಿಭಾಯಿಸಬಹುದು! ಅವರು ಕೋಟೇಶ್ವರದಲ್ಲಿದ್ದ ಮನೆಯಲ್ಲಿ ಹೊಕ್ಕೊಡನೆಯೇ ದೊಡ್ಡದೊಂದು ಹಾಲು. ಆ ಹಾಲು ಪೂರ್ತಿ ಪುಸ್ತಕದ ಸಾಲು. ಪತಿಯ ಕನ್ನಡಲೋಕದಲ್ಲಿ ಜೊತೆಗೂಡಿಕೊಂಡೇ ಇರುತಿದ್ದ, ಈ ಪುಸ್ತಕಗಳೇ ತನ್ನ ಆಭರಣವೆಂಬಷ್ಟು ನೆಚ್ಚಿ ಪ್ರೀತಿಸಿದ, ಅವುಗಳ ಸಹವಾಸವನ್ನೇ ಸಂಭ್ರಮಿಸಿದ, ಪತಿಯ ಬರವಣಿಗೆಯಲ್ಲಿ ಚರ್ಚೆಯಲ್ಲಿ ಸಹಭಾಗಿಯಾಗಿ ಲೌಕಿಕ ಕುಂದುಕೊರತೆ ನೋವುಗಳನ್ನು ಮೀರುವ ತ್ರಾಣ ಪಡೆದ ಪತ್ನಿ ರುಕ್ಮಿಣೀ ದೇವಿ. ಅಕ್ಷರಶಃ ಪಂಡಿತವಕ್ಕಿ ದಂಪತಿಗಳಾಗಿದ್ದರು ಅವರು. ಪತಿಯ ನಿಧನದ ನಂತರ ಕ್ರೌಂಚಪಕ್ಷಿಯ ಆಕ್ರಂದನದಂತೆ ಕೇಳಿದ ಆಕೆಯ ಮೌನವನ್ನು ಶಬ್ದದಲ್ಲಿ ಹಿಡಿದು ಹೇಗೆ ಹೇಳಲು ಸಾಧ್ಯ? ವಿದ್ವಾನ್ ಯಜ್ಞನಾರಾಯಣ ಉಡುಪ ಅವರ ಜೀವಮಾನದ ಪರಿಶ್ರಮದ ಸಾಕ್ಷಿಯಾಗಿ ಅವರ ಕೃತಿಗಳಲ್ಲಿ ಒಂದಾದ `ಪುರಾಣಭಾರತ ಕೋಶ~ ನಮ್ಮ ಜೊತೆಗಿದೆ.

ಉದ್ಯೋಗಕ್ಕಾಗಿ ಎಲ್ಲಿಂದ ಎಲ್ಲಿಗೋ ಚಲಿಸುವ ಪರ್ವದ ಮೊದಮೊದಲ ದಿನಗಳವು. ಹಾಗೆ ಮಂಜೇಶ್ವರದ ಕಡೆಯಿಂದ ಕುಂದಾಪುರಕ್ಕೆ ಬಂದು ನೆಲೆಸಿದವರು ವಿದ್ವಾನ್ ಡಿ.ವಿ.ಹೊಳ್ಳರು. ಅಲ್ಲಿನ ಕೆಥೊಲಿಕ್ ಶಾಲೆಯಲ್ಲಿ ವರ್ಷಗಟ್ಟಲೆ ಕನ್ನಡ ಕಲಿಸಿದವರು. ಗೀತಾ ಸಾಂಗತ್ಯವಲ್ಲದೆ, ಅನೇಕ ಪದ್ಯಗಳನ್ನು, ಯಕ್ಷಗಾನ ಪ್ರಸಂಗಗಳನ್ನು ಬರೆದವರು. ಮಾಸ್ತರಿಕೆಯಲ್ಲಂತೂ ಸವೆಯದ ಹುರುಪು ಸಂಭ್ರಮ. ದಿವ್ಯ ಪ್ರಸನ್ನ ಮುಖಿ.

ಅವರ ಹೆಂಡತಿ ಕಾವೇರಮ್ಮನಿಗೋ `ಜೀವಂತಿಕಾ~ ಎಂಬುದು ಅನ್ವರ್ಥನಾಮವಾಗುತಿತ್ತು. ಅಂಥಾ ಲಕಲಕ ಜೀವನ ಪ್ರೀತಿಯವರದು. ತಾನು ಕನ್ನಡಪಂಡಿತರ ಪತ್ನಿ ಎಂಬ ಆಪ್ಯಾಯಮಾನ ಅಭಿಮಾನದಲ್ಲಿ ಬದುಕಿದವರು. ಕುಂದೇಶ್ವರ ದೇವಸ್ಥಾನದ ದಾರಿಗೆ ಇಳಿಯುವಲ್ಲಿಯೇ ಒಂದು ಪುಟ್ಟ ಕುಟೀರದಂತಹ ಮನೆಯಲ್ಲಿ ಆ ದಂಪತಿ ವಾಸಿಸುತಿದ್ದರು. ಒಮ್ಮಮ್ಮೆ ಸಂಜೆಹೊತ್ತಲ್ಲಿ ನಾವು ಮಕ್ಕಳು ನಮ್ಮಮ್ಮನ ಒಸಗೆಯೊಂದನ್ನು ಕಾವೇರಮ್ಮನಿಗೆ ತಲುಪಿಸಲು ಅಲ್ಲಿಗೆ ಹೋದಾಗ ಅನೇಕ ಬಾರಿ ಪಂಡಿತರು ತಾನು ಬರೆದ ಒಂದು ಪದ್ಯವನ್ನೋ ಲೇಖನವನ್ನೋ ಪತ್ನಿಯೆದುರು ಓದಿ ಹೇಳುವುದನ್ನೂ `ಹೆಂಗುಂಟು?~ ಎಂದು ಕೇಳುವುದನ್ನೂ ಕೇಳುತ್ತ ಕಾಣುತ್ತ ಕುಳಿತುಕೊಳ್ಳುತಿದ್ದೆವು. ಅವರು ಹೇಳುವ ಅಂದಿನ ಭ್ರಷ್ಟಾಚಾರದ ಕತೆಗಳಿಗೆ, ಬೆಲೆಏರಿಕೆಗಳಿಗೆ, ಸ್ವಭಾವ ವರ್ಣನೆಗಳ ಎದುರಿಗೆ ಹೆಂಡತಿ `ಹ್ಞ, ಏನಿಯೆ ಇದೆಲ್ಲ!~ ಅಂತ ಉದ್ಗರಿಸುವರು. ಹೆಂಡತಿಯ ಪ್ರತಿಕ್ರಿಯೆಗಳನ್ನೆಲ್ಲ ಆಲಿಸಿಯಾದ ಮೇಲೆ, ಆಕೆ ಮನೆವಿಚಾರ, ಹಿತ್ತಲಿನ ಡೇಲಿಯಾ ಗುಲಾಬಿ, ಮಲ್ಲಿಗೆ, ಹೂಕಟ್ಟುವ ಜಲಜ, ತೆಂಗಿನ ಮರ, ಅದರ ಕಟ್ಟೆ, ತಾ ಬಾ ಕೆಲಸದ ಸೀನ, ವಿವಿಧ ತಿಂಡಿ, ಅದರ ಖಾರ ಕಟ್ಟಗ-  ಏನೇನು ಹೇಳಿದರೂ ಸ್ವಲ್ಪವೂ ಸದರ ಮಾಡದೆ ಕುಮಾರವ್ಯಾಸ ಭಾರತವನ್ನು ಆಲಿಸಿದಷ್ಟೇ ಶ್ರದ್ಧೆಯಿಂದ ಕೇಳಿ ಪ್ರತಿಕ್ರಿಯಿಸುವ, ಹೂಂಕರಿಸುವ, ನಗುವ ಆ ಕನ್ನಡ ಪಂಡಿತರು. ಬದುಕಿನ ಬಂಡಿ ಹತ್ತಿ ಕುಳಿತು ಅತ್ತ ಇತ್ತ ನೋಡುತ್ತ ಖುಶಿಯಲ್ಲಿ ಸಾಗುವ ಎರಡು ಪಕ್ವ ಮನಸ್ಸುಗಳಂತೆ ಇದ್ದರಲ್ಲ ಅವರಿಬ್ಬರು.

ಈ ನಾಡಿನುದ್ದಕ್ಕೂ ಕನ್ನಡಿಗರ ಮನದಲ್ಲಿ ನೆಲೆಸಿರುವ ನಾನಾ ಪಂಡಿತರ ನಾನಾ ಚಿತ್ರಗಳು, ಬರೆಯುತ್ತ ಹೋದಷ್ಟೂ ಮುಂದರಿಯುತ್ತಲೇ ಹೋಗುವವು.

***

ಮೂರುಸಾವಿರಕ್ಕೂ ಹೆಚ್ಚು ಕನ್ನಡಶಾಲೆಗಳನ್ನು ಮುಚ್ಚುವ ಸುದ್ದಿಯ ಆಘಾತವನ್ನೂ ತಳಮಳವನ್ನೂ ಬರೆಯ ಹೋದವಳು ಕನ್ನಡಪಂಡಿತರ ನೆನಪಲ್ಲಿ ಕುಳಿತಿರುವೆ.
ಹೇಳಿಕೇಳಿ ಕನ್ನಡ ಸರ್ಕಾರವಿದು, ಕನ್ನಡಶಾಲೆಗಳನ್ನು ಮುಚ್ಚುತ್ತದೆ ಎಂದರೆ! ತಲೆಸರಿಯಿದೆ ಎನ್ನುವುದು ಹೇಗೆ? ಅವನ್ನು ಇಂದಿಗೆ ತಕ್ಕಂತೆ ರೂಪಿಸುವ, ನಾವು ನಮ್ಮ ಮಕ್ಕಳಿಗೆ ಕನ್ನಡಮಾಧ್ಯಮದೊಂದಿಗೇ ವರ್ತಮಾನದ ಅಗತ್ಯವಾಗಿರುವ ಇತರ ಭಾಷೆಗಳನ್ನೂ ಕನ್ನಡಶಾಲೆಗಳಲ್ಲೇ ಪಡೆಯುವಂತಹ ಸವಾಲನ್ನು ಅದು ಎತ್ತಿಕೊಳ್ಳದು, ಏಕೆ? ಮುಚ್ಚುವುದೇ ಹೌದಾದರೆ ಇಂಗ್ಲಿಷ್ ಶಾಲೆಗಳನ್ನು ಮುಚ್ಚಿ, ಅವುಗಳ ಜಾಗದಲ್ಲಿ ಹೊಸಯುಗಕ್ಕೆ ಸ್ಪಂದಿಸುವ ನವೀಕರಿಸಿದ ಕನ್ನಡಶಾಲೆಗಳನ್ನು ತೆರೆಯಲಾಗದೆ? ಮಕ್ಕಳನ್ನು ಇದಕ್ಕೆ ಕಳಿಸಲೇಬೇಕಾದ ಸ್ಥಿತಿಯನ್ನು ರಚನಾತ್ಮಕವಾಗಿ ನಿರ್ಮಿಸಲಾಗದೆ? ನವೆಂಬರ್ ಒಂದರ ಕನ್ನಡ ರಾಜ್ಯೋತ್ಸವ ಎಷ್ಟು ದೊಡ್ಡ ಮತ್ತು ಕ್ರೂರ ಅಣಕವಾಗಿ ಕಾಣುತ್ತಿದೆ.

ನಾಗರ ಹಾವೇ ಹಾವೊಳು ಹೂವೆ.. ನಾಗರಹಾವಲ್ಲವಿದು ಹೆಬ್ಬಾವು. ಹೆಬ್ಬಾವಿನ ಬಾಯಿಗೆ ಭಾಷೆ ಬಲಿಬೀಳಲು ಸರಕಾರವೇ ಸಹಕರಿಸುತ್ತಿದೆಯೆ?

ಸಂಕಲ್ಪ ಎಂಬುದು ಎಷ್ಟು ದೊಡ್ಡ ಕಷ್ಟವಪ್ಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT