ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಪ ಮತ್ತು ಉಪ್ಪಿಟ್ಟು

Last Updated 14 ಜುಲೈ 2012, 19:30 IST
ಅಕ್ಷರ ಗಾತ್ರ

`ಕನ್ನಡದ ಆದಿ ಕವಿ ಪಂಪ ರಸ್ತೆಯಲ್ಲಿ ಸಿಕ್ಕ ಅಂತಿಟ್ಟುಕೋ. ಮನೆಗೆ ಕರೆದುಕೊಂಡು ಬಂದು ಉಪ್ಪಿಟ್ಟು ಕೊಡುತ್ತೀಯ. ಇದಾವ ಭಕ್ಷ್ಯಮೋ? ಮಾಳ್ಪುದೆಂತೋ? ಅನ್ನುವ ಹಾಗೆ ಪ್ರಶ್ನೆ ಕೇಳುತ್ತಾನೆ ಅಂದುಕೋ. ಉಪ್ಪಿಟ್ಟನ್ನು ಮಾಡುವ ವಿಧಾನವನ್ನು ನೀನು ಹೇಗೆ ಬೇಕಾದರೂ ವಿವರಿಸು. ಅದು ಪಂಪನಿಗೆ ಅರ್ಥವಾಗುತ್ತದೋ? ಉಪ್ಪಿಟ್ಟು ಮಾಡುವುದು ಹೇಗೆಂದು ಪಂಪನಿಗೆ ತಿಳಿಸುವುದು ಹೇಗೆ?~

ಇದು ಗೆಳೆಯ ರಾಮು ಒಮ್ಮೆ ಕೇಳಿದ ಪ್ರಶ್ನೆ. ನಾವು ಕಷ್ಟಪಟ್ಟು ಪಂಪನ ಕನ್ನಡ ತಿಳಿದುಕೊಳ್ಳಬಹುದೇನೋ, ಆದರೆ ನಮ್ಮ ಈವತ್ತಿನ ಕನ್ನಡವನ್ನು ಪಂಪ ಖಂಡಿತ ಅರ್ಥಮಾಡಿಕೊಳ್ಳಲಾರ. ವರ್ತಮಾನವು ಭೂತವನ್ನು ಅರ್ಥಮಾಡಿಕೊಳ್ಳಬಹುದು, ಭೂತಕ್ಕೆ ವರ್ತಮಾನ ಎಂದೂ ಅರ್ಥವಾಗದು.

ಭಾಷೆಯಲ್ಲಿ ಆಗುವ ಬದಲಾವಣೆಗಳದು ಯಾವಾಗಲೂ ಒನ್ ವೇ ದಾರಿ. ನುಡಿ ನದಿ ಎಂದೂ ಮತ್ತೆ ತನ್ನ ನದೀ ಮೂಲದ ದಿಕ್ಕಿಗೆ ಹರಿಯಲಾರದು. ಉಪ್ಪಿಟ್ಟು ಮಾಡುವುದನ್ನು ಪಂಪನಿಗೆ ಹೇಳಿಕೊಡಲು ಆಗದು.

ಕನ್ನಡ ಬದಲಾಗಿದೆ. ಉಚ್ಚಾರಣೆಗಳು, ಅಕ್ಷರಗಳು ಬದಲಾಗುತ್ತವೆ. ಬಂಡಿ ಳ, ಬಂಡಿ ರ ಎಂದು ನಾವು ಚಿಕ್ಕವರಿದ್ದಾಗ ಹೇಳಿಕೊಡುತಿದ್ದ ಶಕಟರೇಫ (ಱ) ಮತ್ತು ರಳ (ೞ) ಗಳನ್ನು ಬರೆಯುವುದು ಗೊತ್ತಿದ್ದರೂ, ಅವುಗಳ ಬಳಕೆಯಿಂದ ಅರ್ಥವ್ಯತ್ಯಾಸವಾಗುತ್ತದೆಂದು ತಿಳಿದಿದ್ದರೂ, ಬರವಣಿಗೆಯಲ್ಲಿ ಅದರ ಉಪಯೋಗ ನಿಂತು ಹೋಗಿ ಸುಮಾರು ನಾಲ್ಕು ನೂರು ವರ್ಷದ ಮೇಲಾಯಿತು. ಅವುಗಳ ಸರಿಯಾದ ಉಚ್ಚಾರಣೆಯಂತೂ ಕಿವಿಗೆ ಬೀಳುವುದೇ ಇಲ್ಲವಾದ್ದರಿಂದ ಉಚ್ಚರಿಸುವುದೂ ನಿಂತೇ ಹೋಯಿತು.

ಉಚ್ಚಾರಣೆಯಲ್ಲಿ ಆದ ಬದಲಾವಣೆಯಿಂದ ಪದದ ರೂಪಗಳು ಬದಲಾಗಿವೆ. `ಪ~ ಇದ್ದ ಜಾಗದಲ್ಲಿ ಯಾವಾಗಲೋ `ಹ~ ಬಂದು ಕೂತಿತು. `ಪಾಲು~ ಹಾಲಾಯಿತು, ಪಾಲು ಅನ್ನುವುದಕ್ಕೆ ಬೇರೆ ಅರ್ಥ ಬಂತು.

ಅಕ್ಷರಗಳು ಬದಲಾಗಿವೆ. ಕನ್ನಡವನ್ನು ಈಗ ಬರೆಯುತ್ತಿರುವ ಹಾಗೆ ಪಂಪನ ಕಾಲದಲ್ಲಿ ಬರೆಯುತ್ತಿರಲಿಲ್ಲ. ಕನ್ನಡದ ಮೊದಲ ಶಾಸನ ಅನ್ನುತ್ತಾರಲ್ಲ, ಹಲ್ಮಿಡಿಯಲ್ಲಿ ಸಿಕ್ಕಿದ್ದು, ಸುಮಾರು ಐದನೆಯ ಶತಮಾನದ್ದು, ಅದರ ಲಿಪಿಯನ್ನು ಓದಬಲ್ಲವರು ಆರು ಕೋಟಿ ಜನರಲ್ಲಿ ನೂರಿನ್ನೂರು ಜನ ಇದ್ದರೆ ಹೆಚ್ಚು.

ಪದದ ಅರ್ಥಗಳೂ ಬದಲಾಗುತ್ತವೆ. ಪಂಪನ ಕಾಲದಲ್ಲಿ `ಅಪ್ಪ~ ಅನ್ನುವುದಕ್ಕೆ ಅಮ್ಮ ಅನ್ನುವ ಅರ್ಥ, `ಅಮ್ಮ~ ಅನ್ನುವುದಕ್ಕೆ ಅಪ್ಪ ಅನ್ನುವ ಅರ್ಥವಿತ್ತು. ಕರ್ಣನಿಗೆ ಕೃಷ್ಣ ಹೇಳುತ್ತಾನೆ: ನಿನಗಮ್ಮನ್ ಅಹರ್ಪತಿ, `ಸೂರ್ಯ ನಿನ್ನ ಅಮ್ಮ~. ಇನ್ನು ಎಷ್ಟೋ ಸಹಸ್ರ ಸಹಸ್ರ ಪದಗಳು ಚಲಾವಣೆ ಕಳೆದುಕೊಂಡು ಮ್ಯೂಸಿಯಮ್‌ನಲ್ಲಿ ಪ್ರದರ್ಶನಕ್ಕಿಡುವ ಹಳೆಯ ನಾಣ್ಯಗಳಾದವು.

`ತಂದಲ್~ ಅಂದರೇನು ಅಂತ ಹುಡುಕಿಕೊಂಡು ಹೋದರೆ `ನೀರಿನ ಹನಿ~ ಅನ್ನುವ ಅರ್ಥ ಸಿಕ್ಕೀತು. `ಬರ್ದಿಲ~ ಅಂದರೆ `ಸಾವಿಲ್ಲದ~, `ದೇವತೆ~ ಅನ್ನುವ ಅರ್ಥ ಸಿಕ್ಕೀತು. ಸಿಕ್ಕಿತು ಎಂದು ಇವತ್ತು ಅವನ್ನು ಚಲಾವಣೆ ಮಾಡಿದರೆ ನಡೆಯದು.

ಪದಗಳನ್ನು ಸೇರಿಸಿ ಹೊಸ ಅರ್ಥ ಹುಟ್ಟಿಸುವ ಕ್ರಮ ಬದಲಾಯಿತು. ನಾಣಿಲಿವೆಣ್ ಅಂದರೆ ನಾಣ್-ನಾಚಿಕೆ, ಇಲಿ-ಇಲ್ಲದ ಪೆಣ್-ಹೆಣ್ಣು ಅಂತಾಗುತಿತ್ತು, ಹದಿನಾರನೆಯ ಶತಮಾನದಲ್ಲಿ. ಪಲ್ಲಿಲಿವಾಯ್ ಅಂದರೆ ಪಲ್ಲು-ಹಲ್ಲು, ಇಲಿ-ಇಲ್ಲದ ವಾಯ್ ಅಂದರೆ ಬಾಯಿ ಅಂತಾಗುತ್ತಿತ್ತು. ಇವತ್ತು ಆ ಕ್ರಮದಲ್ಲಿ ಪದಗಳನ್ನು ಜೋಡಿಸಲು ಆಗದು.

ಇನ್ನು ಪದಗಳ ಆಕಾರವೂ ಬದಲಾಗಿದೆ. `ಆದೊಡೆ~ ಎಂದಿದ್ದದ್ದು `ಆದಡೆ~ ಎಂದಾಗಿ, ಈಗ `ಆದರೆ~ ಅನ್ನುವ ರೂಪ ತಳೆದು, ಟೀವಿ, ಟ್ಯಾಬ್ಲಾಡುಗಳಲ್ಲಿ `ಆದ್ರೆ~ ಅಂತಲೂ ಕಾಣಿಸಿಕೊಳ್ಳುತ್ತದೆ.

ವಾಕ್ಯ ರಚನೆಯ ಕ್ರಮವೂ ಗೊತ್ತಾಗದಂತೆ ಬದಲಾಗುತ್ತಿದೆ. ಸಂಸ್ಕೃತದ ನಿಯಮಗಳು ಇಷ್ಟಿಷ್ಟೆ ಇಂಗ್ಲಿಷಿನ ವಾಕ್ಯರಚನೆಯ ಮಾದರಿಗಳಿಗೆ ಜಾಗ ಮಾಡಿಕೊಟ್ಟಿವೆ. `ನನ್ನತ್ತ ನಕ್ಕ~, ಅನ್ನುವ ವಾಕ್ಯ ಇತ್ತೀಚೆಗೆ ನೋಡಿದ್ದು.  

ಬರೆಯುವ ಕ್ರಮ ಬದಲಾಗಿದೆ. ಕನ್ನಡದಲ್ಲಿ ಫುಲ್‌ಸ್ಟಾಪು, ಕಾಮ ಇತ್ಯಾದಿಗಳೆಲ್ಲ ಬಳಕೆಗೆ ಬಂದು ಹೆಚ್ಚೆಂದರೆ ನೂರು, ನೂರೈವತ್ತು ವರ್ಷವಾಗಿರಬಹುದು. ಕೃಷ್ಣಯ್ಯ ಶೆಟ್ಟಿ ಅಂಡ್ ಸನ್ಸ್ ಅವರು ಪ್ರಕಟಿಸುತ್ತಿದ್ದ ಹಳೆಗನ್ನಡ, ನಡುಗನ್ನಡದ ಪುಸ್ತಕಗಳನ್ನು ನೋಡಿದರೆ ಪದ್ಯಗಳು ಕೂಡ ಗದ್ಯದ ಹಾಗೆ ಸಾಲುಗಳ ವಿಂಗಡಣೆ ಇಲ್ಲದೆ ಪ್ರಿಂಟಾಗಿದ್ದು ಕಾಣುತ್ತದೆ. 

ಇಷ್ಟೆಲ್ಲ ಆದರೂ ಭಾಷೆ ಅರಿಸ್ಟಾಟಲ್‌ನ ಉದಾಹರಣೆಯಲ್ಲಿ ಬರುವ ಚಾಕುವಿನ ಹಾಗೆ: ಬಡಗಿ ಹೇಳಿದನಂತೆ ಈ ಚಾಕು ನಮ್ಮಪ್ಪನ ಕಾಲದ್ದು, ಹಿಡಿ ಬದಲಾಯಿಸಿದ್ದೇನೆ, ಹಿಡಿಯ ಮೊಳೆ ಬದಲಾಯಿಸಿದ್ದೇನೆ, ಅಲಗು ಬದಲಾಯಿಸಿದ್ದೇನೆ, ಆದರೆ ಚಾಕು ಮಾತ್ರ ಅದೇ, ನಮ್ಮಪ್ಪ ಬಳಸುತ್ತ ಇದ್ದದ್ದೇ. ಹಿರಿಯ ತಲೆಮಾರಿನಿಂದ ಮಕ್ಕಳಿಗೆ ಕೊಡುಗೆಯಾಗಿ ಬಂದ ಭಾಷೆ ಅವರ ಬಳಕೆಯಲ್ಲಿ ಗೊತ್ತೇ ಆಗದಂತೆ ಬದಲಾಗುತ್ತ ಎರಡು ತಲೆಮಾರು ಕಳೆಯುವ ಹೊತ್ತಿಗೆ ಇನ್ನೇನೋ ರೂಪ ತಾಳಿರುತ್ತದೆ.

ಹೀಗೆ ಬದಲಾಗುವ ಪದಗಳ ಅರ್ಥ, ಬದಲಾಗುವ ಉಚ್ಚಾರಣೆ, ಇವುಗಳ ಬಗ್ಗೆ ಮನುಷ್ಯನ ಕುತೂಹಲ ತುಂಬ ಹಳೆಯದು. ಸಂಸ್ಕೃತ, ಗ್ರೀಕ್, ಲ್ಯಾಟಿನ್ ಇಂಥ ಪ್ರಾಚೀನ ಭಾಷೆಗಳಲ್ಲ್ಲೆಲ ಇಂಥ ಕುತೂಹಲದ ಅನ್ವೇಷಣೆಗಳು ನಡೆದಿದ್ದವು. ಆದರೆ ಇಂಥ ಕುತೂಹಲವನ್ನು `ವಿಜ್ಞಾನ~ವಾಗಿ ಬೆಳೆಸಿಕೊಂಡು ಸುಮಾರು ಇನ್ನೂರು ವರ್ಷಗಳಷ್ಟೆ ಕಳೆದಿವೆ.
 
ಭಾಷೆಯನ್ನು ಕುರಿತ ಒಲವು ಅನ್ನುವ ಅರ್ಥದ ಫಿಲಾಲಜಿ ಸದೃಢವಾಗಿ ಬೆಳೆದದ್ದು ಹದಿನಾರನೆಯ ಶತಮಾನದಲ್ಲಿ. ಭಾಷೆಗಳ ಧ್ವನಿ ನಿಯಮಗಳು, ಧ್ವನಿ ವ್ಯತ್ಯಾಸಗಳು, ಭಾಷೆಗಳ ಪರಸ್ಪರ ಸಂಬಂಧ, ಭಾಷೆಗಳಲ್ಲಿ ಆಗುವ ವ್ಯತ್ಯಾಸಗಳ ವಿನ್ಯಾಸವನ್ನು ಗುರುತಿಸುವುದು, ಇಂಥ ಕೆಲಸ ದೊಡ್ಡ ಪ್ರಮಾಣದಲ್ಲಿ ನಡೆದದ್ದು ಜರ್ಮನಿಯಲ್ಲಿ. ಫ್ರೆಡ್ರಿಕ್ ಶ್ಲೆಗೆಲ್ (1772-1829)ನಿಂದ ಆರಂಭವಾಗಿ ಮತ್ತು ನೀಟ್ಸೆಯವರೆಗಿನ ಅವಧಿಯನ್ನು (1844-1900) ಫಿಲಾಲಜಿಯ ಸುವರ್ಣಯುಗ ಅನ್ನುವುದುಂಟು.

ಜಗತ್ತಿನ ವಿವಿಧ ಜನಾಂಗಗಳ ಭಾಷೆಗಳ ಸಂಬಂಧವನ್ನು ಗುರುತಿಸುವ ಕೆಲಸವೂ ನಡೆಯಿತು.ಮನುಷ್ಯರಲ್ಲಿ ರಕ್ತ ಸಂಬಂಧ ಮತ್ತು ಸಾಮಾಜಿಕ ಸಂಬಂಧಗಳು ಇರುವ ಹಾಗೆಯೇ ತಾಯಿ ಭಾಷೆಯಿಂದ ಹುಟ್ಟಿದ ಮಕ್ಕಳು ಭಾಷೆಗಳು, ಅಕ್ಕ ತಂಗಿ ಭಾಷೆಗಳು, ದಾಯಾದಿ ಭಾಷೆಗಳು ಅನ್ನುವ ಪರಿಭಾಷೆಗಳೂ ಆಗಲೇ ರೂಪಗೊಂಡವು. ಕಾಗ್ನೇಟ್ ಅನ್ನುವ ಪದದ ಅರ್ಥವೇ ಜ್ಞಾತಿ ಅಥವ ದಾಯಾದಿ ಎಂದು.
 
ಮನುಷ್ಯ ಸಂಬಂಧಗಳ ಹಾಗೆಯೇ ಭಾಷಾ ಸಂಬಂಧಗಳು, ಭಾಷೆಗಳ ವಂಶವೃಕ್ಷ ಇತ್ಯಾದಿಗಳು ರೂಪಗೊಂಡವು. ಅವು ರೂಪಗೊಂಡದ್ದೇ ಇನ್ನೊಂದು ರೋಚಕ ಕಥೆ. ಮೊದಲ ಮಹಾಯುದ್ಧದ ಸಮಯದಲ್ಲಿ ಪಶ್ಚಿಮದ ದೇಶಗಳಲ್ಲಿ ಜರ್ಮನರು ಪ್ರತಿಪಾದಿಸುತಿದ್ದ ಜನಾಂಗವಾದದ ಬಗ್ಗೆ ಅಸಹನೆ, ದ್ವೇಷ ಹುಟ್ಟಿಕೊಂಡವಲ್ಲ ಆಗ ಭಾಷೆಯನ್ನು ಕುರಿತ ಈ ಬಗೆಯ ಅಧ್ಯಯನದ ಬಗ್ಗೆಯೂ ಅನುಮಾನಗಳು ಹುಟ್ಟಿಕೊಂಡವು.

ಒಂದು ಮಾತಂತೂ ನಿಜ. ಹತ್ತೊಂಬತ್ತನೆಯ ಶತಮಾನದಲ್ಲಿ ರಾಷ್ಟ್ರೀಯತೆಯ ಭಾವನೆ ಪ್ರಬಲಿಸಿದಾಗಲೇ ಅದರ ಅಂಗಾಂಗಗಳ ಹಾಗೆ ರಾಷ್ಟ್ರಗಳ ಚರಿತ್ರೆಗಳ ನಿರೂಪಣೆ, ವಿವಿಧ ಸಂಸ್ಕೃತಿಗಳ ತೌಲನಿಕ ಅಧ್ಯಯನ, ವಿವಿಧ ಭಾಷೆಗಳ ವ್ಯಾಕರಣಗಳ ನಿರೂಪಣೆ, ಬೇರೆ ಬೇರೆ ಭಾಷೆಗಳ ಶಬ್ದಕೋಶಗಳ ನಿರ್ಮಾಣ ಇತ್ಯಾದಿಗಳೆಲ್ಲ ನಡೆದವು. ಇಂಗ್ಲಿಷರು ಭಾರತವನ್ನು ಆಳುತಿದ್ದರಲ್ಲ ಅವರು ಇಲ್ಲಿನ ಭಾಷಾ ವೈವಿಧ್ಯವನ್ನು ತಮ್ಮದೇ ಕಾರಣಗಳಿಗೆ ವಿಶ್ಲೇಷಣೆ, ಅಧ್ಯಯನಗಳಿಗೆ ಒಳಪಡಿಸಿದರೂ ಅದರಿಂದೆಲ್ಲ ದೊರೆತ ಮಾಹಿತಿ ಮಾತ್ರ ಅಗಾಧ.

ಇದನ್ನೆಲ್ಲ ಇಟ್ಟುಕೊಂಡು ಭಾಷೆಗಳ ಧ್ವನಿ ಸ್ವರೂಪ, ಪದಗಳ ನಿರ್ಮಾಣದ ಬಗೆಗಳು, ಅರ್ಥ ವ್ಯತ್ಯಾಸಗಳ ಅಧ್ಯಯನ, ಇತ್ಯಾದಿಗಳೆಲ್ಲ ಪ್ರತ್ಯೇಕ ಶಾಖೆಗಳಾಗಿ, ಶಾಸ್ತ್ರಗಳಾಗಿ ಬೆಳೆದುಕೊಂಡವು. ಹಳೆಯ ಭಾಷೆಗಳನ್ನು, ಅವುಗಳ ಪರಸ್ಪರ ಹೋಲಿಕೆಯನ್ನು, ಅರ್ಥ ವ್ಯತ್ಪತ್ತಿಯನ್ನು ಕುರಿತ ತಿಳಿವಳಿಕೆಗಳ ಬಗ್ಗೆ ಒಂದಷ್ಟು ಕಾಲ ತಿರಸ್ಕಾರ, ಉದಾಸೀನಗಳೂ ಬೆಳೆದವು.
 
ಭಾಷೆಗಳ ಇಂಥ ಅಧ್ಯಯನ ಕೇವಲ ಸೋಮಾರಿಗಳ, ಹೊತ್ತು ಹೋಗದವರ ಕೆಲಸ ಅನ್ನುವ ಧೋರಣೆಯೂ ತಲೆ ಎತ್ತಿತು. ಭಾಷೆ ಇವತ್ತು ಹೇಗಿದೆ, ಭಾಷೆಯನ್ನು ಕಲಿಸುವುದು ಹೇಗೆ, ಸಮಾಜದ ಬೇರೆ ಬೇರೆ ವರ್ಗಗಳ ಭಾಷೆಯ ಸ್ವರೂಪದಲ್ಲಿ ಏನೇನು ವ್ಯತ್ಯಾಸ, ಹೋಲಿಕೆಗಳಿವೆ ಇಂಥ ಸದ್ಯದ ವಿಚಾರಗಳನ್ನು ಗಮನಿಸಿದರೆ ಸಾಕು, ಭಾಷೆಯ ಸದ್ಯತನ ಅದರ ಚಾರಿತ್ರಿಕತೆಗಿಂತ ಮಹತ್ವದ್ದು ಅನ್ನುವ ನಿಲುವೂ ಗಟ್ಟಿಯಾಯಿತು.

ಚರಿತ್ರೆ ಎಂದರೆ ಬದಲಾವಣೆಯೇ ಅಲ್ಲವೇ, ಬದಲಾವಣೆಯ ವಿನ್ಯಾಸದ ಕಥನವೇ ಅಲ್ಲವೇ? ಮನುಷ್ಯ ಸಮುದಾಯಗಳ ಸಾಂಸ್ಕೃತಿಕ ಚಹರೆಯಾಗಿರುವ ಭಾಷೆಗಳು ಹೇಗೆ, ಯಾಕೆ ಬದಲಾದವು ಅನ್ನುವುದನ್ನು ಚರಿತ್ರೆ, ಸಮಾಜಶಾಸ್ತ್ರ ಮತ್ತು ಭಾಷಾಶಾಸ್ತ್ರಗಳ ಸಂಯೋಜನೆಯ ಮುಖಾಂತರ ಹೊಸ ಕೋನದಿಂದ ನೋಡಲು ಸಾಧ್ಯವೇ? ಜಗತ್ತಿನ ಚರಿತ್ರೆಯನ್ನು ವಿವಿಧ ಸಮುದಾಯಗಳು ಬಳಸುತಿದ್ದ ಭಾಷೆಗಳ ಕೋನದಿಂದ ನಿರೂಪಿಸುವುದಕ್ಕೆ ಆಗುತ್ತದೆಯೇ? ಈ ಪ್ರಶ್ನೆಗಳು ಇಂದು ಮತ್ತೆ ಮುನ್ನೆಲೆಗೆ ಬಂದಿವೆ.

ಪಂಪ ಮತ್ತು ಉಪ್ಪಿಟ್ಟಿನ ಪ್ರಶ್ನೆಯನ್ನು ಕೇವಲ ಕನ್ನಡದ ರಚನೆಯ ದೃಷ್ಟಿಯಿಂದ ಕನ್ನಡದಲ್ಲಿ ಆದ ಬದಲಾವಣೆಗಳಿಂದ ಮಾತ್ರ ಉತ್ತರಿಸಲು ಸಾಧ್ಯವಿಲ್ಲ. ಸಂಸ್ಕೃತಿ, ಚರಿತ್ರೆ, ವಿವಿಧ ಜನಸಮುದಾಯಗಳ ವಲಸೆ, ಮಿಲನ, ವಿವಿಧ ಸಂಸ್ಕೃತಿಗಳ ಜನ ಬಳಸುತಿದ್ದ ಭಾಷೆಗಳ ಹಿಗ್ಗು, ಕುಗ್ಗು, ಏರು, ಇಳಿತ ಇವುಗಳ ಸಂಬಂಧವೆಲ್ಲ ಇಂಥ ಒಂದು ಕ್ಷುಲ್ಲಕವೆಂಬಂತೆ, ತಮಾಷೆ ಎಂಬಂತೆ ತೋರುವ ಪ್ರಶ್ನೆಯ ಹಿಂದೆ ಅಡಗಿದೆ.

ನಿಕೋಲಸ್ ಓಸ್ಲರ್ ಎಂಬ ವಿದ್ವಾಂಸ 2006ರಲ್ಲಿ ಪ್ರಕಟಿಸಿದ ಎಂಪೈರ್ಸ್ ಆಫ್ ದಿ ವರ್ಡ್, ಎ ಲಾಂಗ್ವೇಜ್ ಹಿಸ್ಟರಿ ಆಫ್ ದಿ ವರ್ಲ್ಡ್ ಹೀಗೆ ಜಗತ್ತಿನ ಚರಿತ್ರೆಯ ಚಲನೆಗಳನ್ನು ಭಾಷೆಯ ದೃಷ್ಟಿಯಿಂದ ಪರಿಶೀಲಿಸುವ ಪುಸ್ತಕ. ವಿದ್ವತ್‌ಪೂರ್ಣವಾದರೂ ಸರಳ ನಿರೂಪಣೆಯಿಂದ ಕುತೂಹಲ ಕೆರಳಿಸುವ, ಪ್ರಶ್ನೆಗಳನ್ನು ಹುಟ್ಟಿಸುವ ಪುಸ್ತಕ. ಜಗತ್ತಿನಲ್ಲಿ ಆರು ಬಿಲಿಯನ್ ಜನಸಂಖ್ಯೆ ಇರಬಹುದು, ಆದರೆ ಇಷ್ಟೆಲ್ಲ ಜನ ಬಳಸುವ ಭಾಷೆಗಳು ಮಾತ್ರ ಆರು ಸಾವಿರ; ಇವನ್ನು ವಿವಿಧ ಕುಟುಂಬಗಳಾಗಿ ಪರಿಗಣಿಸಿದರೆ ಸುಮಾರು ಹದಿನೈದು ಮಾತ್ರ.

ಮನುಷ್ಯನ ಚರಿತ್ರೆಯ ಆರಂಭ ಕಾಲ ಎಂದು ಗುರುತಿಸುತ್ತೇವಲ್ಲ ಅಲ್ಲಿಂದ ಇವತ್ತಿನವರೆಗೂ ಎಷ್ಟೊಂದು ಸಾಮ್ರಾಜ್ಯಗಳು ಹುಟ್ಟಿ, ಬೆಳೆದು, ಕಣ್ಮರೆಯಾಗಿವೆ; ಎಷ್ಟೊಂದು ಭಾಷೆಗಳು ಜಾಗತಿಕ ಭಾಷೆಗಳಾಗಿ ಮೆರೆದು, ಕುಗ್ಗಿ, ಬಾಡಿ ಇಲ್ಲವಾಗಿವೆ.
 
ಆದರೂ ಭಾಷೆಯ ವಿಶೇಷ ಲಕ್ಷಣವೆಂದರೆ ಪ್ರತಿಯೊಂದು ಹೊಸ ಕೂಸೂ ತನ್ನ ಹಿರಿಯರಿಂದ ಭಾಷೆಯ ಉಡುಗೊರೆ ಪಡೆದು ತನ್ನದೇ ಇನ್ನೊಂದಷ್ಟನ್ನು ಅದಕ್ಕೆ ಸೇರಿಸುತ್ತ, ಭಾಷೆಯೊಂದನ್ನು ಆಡುವವರು ಯಾರೂ ಇಲ್ಲವಾದರೂ ಅದು ಅರಸಿ ಬರುವವರಿಗೆ ಉದಾರವಾಗಿ ನೀಡಲು ತನ್ನೊಳಗಿನ ಸಂಪತ್ತನ್ನು ಕಾಪಾಡಿಕೊಂಡಿರುತ್ತದಲ್ಲ, ಈ ಅಚ್ಚರಿ ಹೊಸ ಬಗೆಯ ಚಾರಿತ್ರಿಕ ಅಧ್ಯಯನಕ್ಕೆ ದಾರಿಮಾಡಿಕೊಟ್ಟಿದೆ.

ಅಚ್ಚರಿ, ನಿಜ. ಆದರೆ ಗತಕಾಲವನ್ನು ಕುರಿತ ಎಲ್ಲ ಕಥನಗಳಲ್ಲೂ ವಾಸ್ತವಾಂಶ ಇರುವಷ್ಟೇ ಊಹೆಗಳು ಕೂಡ ಇರುತ್ತವೆ. ಅದರಲ್ಲೂ ಸಾವಿರಾರು ವರ್ಷಗಳ ಭಾಷಾ ಚರಿತ್ರೆ ಬಹಳಷ್ಟು ಅಸ್ಪಷ್ಟವೇ. ಹಾಗೆಯೇ ಭಾಷೆಯೊಂದರ ಭವಿಷ್ಯವೂ, ಅದು ಇದು ಎಂದಲ್ಲ, ಎಲ್ಲ ಭಾಷೆಗಳ ಭವಿಷ್ಯವೂ ಸಂದಿಗ್ಧವೇ. ಜಗತ್ತಿನ ಕೆಲವು ಪ್ರಮುಖ ಭಾಷೆಗಳ ಕಥೆಯನ್ನು ಸ್ವಲ್ಪ ನೋಡೋಣ. ಚರಿತ್ರೆ ಗೊತ್ತಾದರೆ ಭವಿಷ್ಯದ ದಾರಿ ತಿಳಿದೀತೋ ಏನೋ.
olnswamy@gmail.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT