ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಕ್ಷಾಂತರ ಎಂಬ ವ್ಯಕ್ತ, ಅವ್ಯಕ್ತ ಕ್ರಿಯೆ!

Last Updated 19 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಶರದ್ ಯಾದವ್ ಮತ್ತು ಅಲಿ ಅನ್ವರ್ ಅನ್ಸಾರಿ ಅವರ ರಾಜ್ಯಸಭಾ ಸದಸ್ಯತ್ವ ರದ್ದು ಮಾಡಲು ಉಪರಾಷ್ಟ್ರಪತಿ ಹಾಗೂ ರಾಜ್ಯಸಭೆಯ ಸಭಾಪತಿ ಕೂಡ ಆಗಿರುವ ವೆಂಕಯ್ಯ ನಾಯ್ಡು ಅವರು ಕೈಗೊಂಡಿರುವ ತೀರ್ಮಾನ ಮತ್ತು ಆ ತೀರ್ಮಾನ ಕೈಗೊಂಡಿದ್ದಕ್ಕೆ ನೀಡಿರುವ ಕಾರಣಗಳು ಪಕ್ಷಾಂತರ ನಿಷೇಧ ಕಾಯ್ದೆಗೆ ಹೊಸ ಆಯಾಮವನ್ನು ನೀಡಿವೆ. ಅಲ್ಲದೆ, ಕಾಯ್ದೆಯ ಅಂಶಗಳಿಗೆ ಇನ್ನಷ್ಟು ಬಲ ತಂದಿವೆ, ಕಾಯ್ದೆ ರೂಪಿಸುವಾಗ ಇದ್ದ ಮೂಲ ಉದ್ದೇಶಗಳಿಗೆ ಶಕ್ತಿ ನೀಡಿವೆ.

ಸಭಾಪತಿಯವರು ಕೈಗೊಂಡಿರುವ ಈ ತೀರ್ಮಾನವು ಪಕ್ಷದ ಸದಸ್ಯತ್ವವನ್ನು ‘ಸ್ವಇಚ್ಛೆಯಿಂದ ಬಿಟ್ಟು ಕೊಡುವುದು’ ಎಂದರೆ ಏನು ಎಂಬುದನ್ನು ಇನ್ನು ಮುಂದೆ ಸದನದ ಮುಖ್ಯಸ್ಥರು ಹೇಗೆ ಗ್ರಹಿಸುತ್ತಾರೆ ಎಂಬುದರ ಮೇಲೆಯೂ ಗಮನಾರ್ಹ ಪರಿಣಾಮ ಉಂಟುಮಾಡಲಿದೆ. ಈ ನಿರ್ಧಾರವು ಸದನದ ಮುಖ್ಯಸ್ಥರು ಈ ಕಾಯ್ದೆಯ ಅಡಿ ನಡೆಸಬೇಕಿರುವ ವಿಚಾರಣೆಯನ್ನು ಮೂರು ತಿಂಗಳೊಳಗೆ ಪೂರ್ಣಗೊಳಿಸುವಂತೆ ಮಾಡುವ, ಅನಗತ್ಯ ಕಾಲಹರಣಕ್ಕೆ ಅಂತ್ಯ ಹಾಡುವ ನಿರೀಕ್ಷೆಯೂ ಇದೆ.

ಲಾಲು ಪ್ರಸಾದ್ ಅವರ ರಾಷ್ಟ್ರೀಯ ಜನತಾದಳ ಸೇರಿದಂತೆ ಕೆಲವು ಪಕ್ಷಗಳ ಜೊತೆ ಮಾಡಿಕೊಂಡಿದ್ದ ಚುನಾವಣಾಪೂರ್ವ ಮೈತ್ರಿಕೂಟ ‘ಮಹಾ ಘಟಬಂಧನ’ದಿಂದ ಹೊರಬಂದು, ಭಾರತೀಯ ಜನತಾ ಪಕ್ಷದ ಜೊತೆ ಹೊಂದಾಣಿಕೆ ಮಾಡಿಕೊಳ್ಳುವ ತೀರ್ಮಾನವನ್ನು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಕೈಗೊಂಡ ಕಾರಣದಿಂದಾಗಿ ಈ ಇಬ್ಬರು ಸದಸ್ಯರ ಪಕ್ಷಾಂತರದ ವಿಚಾರ ಉದ್ಭವವಾಯಿತು. ಶರದ್ ಯಾದವ್ ಮತ್ತು ಅನ್ಸಾರಿ ಅವರು ನಿತೀಶ್ ಅವರ ತೀರ್ಮಾನವನ್ನು ವಿರೋಧಿಸಿದರು, ಲಾಲು ಪ್ರಸಾದ್‌ ಜೊತೆ ಗುರುತಿಸಿಕೊಂಡಿರುವ ಗುಂಪು ಸೇರಿಕೊಂಡರು, ಹೊಸ ಮೈತ್ರಿಕೂಟವನ್ನು ಸಾರ್ವಜನಿಕವಾಗಿ ಖಂಡಿಸಿದರು. ಆದರೆ, ಸಂಯುಕ್ತ ಜನತಾದಳದ (ಜೆಡಿಯು) ಬಹುಪಾಲು ಶಾಸಕರು ಮತ್ತು ಪದಾಧಿಕಾರಿಗಳ ಬೆಂಬಲ ನಿತೀಶ್ ಅವರ ಬೆನ್ನಿಗಿತ್ತು. ಇದರ ಪರಿಣಾಮವಾಗಿ, ಶರದ್ ಯಾದವ್ ಅವರನ್ನು ಪಕ್ಷದ ಮೇಲ್ಮನೆಯ ನಾಯಕನ ಸ್ಥಾನದಿಂದ ಜೆಡಿಯು ಕೆಳಗಿಳಿಸಿತು. ಅನ್ಸಾರಿ ಮತ್ತು ಶರದ್ ಯಾದವ್ ವಿರುದ್ಧ ಕ್ರಮಕ್ಕೆ ಮುಂದಾಯಿತು.

ಸಂವಿಧಾನದ ಹತ್ತನೆಯ ಅನುಬಂಧದಲ್ಲಿ ಸೇರಿಸಲಾಗಿರುವ ಪಕ್ಷಾಂತರ ನಿಷೇಧ ಕಾಯ್ದೆಯ 2(1)ನೇ ಪ್ಯಾರಾದಲ್ಲಿರುವ ವಿವರದ ಅನ್ವಯ, ಶಾಸನಸಭೆಯ ಸದಸ್ಯನೊಬ್ಬ ತನ್ನ ಪಕ್ಷದ ಸದಸ್ಯತ್ವವನ್ನು ‘ಸ್ವಇಚ್ಛೆಯಿಂದ ತೊರೆದರೆ’ ಅಥವಾ ಆತ ತನ್ನ ಪಕ್ಷ ನೀಡಿದ ಸೂಚನೆಗೆ ವಿರುದ್ಧವಾಗಿ ಮತ ಚಲಾಯಿಸಿದರೆ, ಮತದಾನದಿಂದ ದೂರ ಉಳಿದರೆ ಆತನನ್ನು ಅನರ್ಹಗೊಳಿಸಬಹುದು. ಶರದ್ ಯಾದವ್ ಮತ್ತು ಅನ್ಸಾರಿ ಪ್ರಕರಣಗಳಲ್ಲಿ ಉದ್ಭವವಾದ ಮಹತ್ವದ ಪ್ರಶ್ನೆ, ಈ ಇಬ್ಬರು ಸದಸ್ಯರು ನಡೆದುಕೊಂಡ ಬಗೆಯು ಪಕ್ಷದ (ಜೆಡಿಯು) ಸದಸ್ಯತ್ವವನ್ನು ‘ಸ್ವಇಚ್ಛೆಯಿಂದ ತೊರೆಯುವುದಕ್ಕೆ’ ಸಮನಾಗಿತ್ತೇ ಎಂಬುದಾಗಿತ್ತು.

ತಾವು ಪಕ್ಷದ ಸದಸ್ಯತ್ವವನ್ನು ಸ್ವಇಚ್ಛೆಯಿಂದ ತೊರೆದಿಲ್ಲ ಎಂದು ಇಬ್ಬರೂ ಸಂಸದರು ವಾದಿಸಿದ್ದರು. ಪಕ್ಷದ ಸಂವಿಧಾನದಲ್ಲಿ ಹೇಳಿರುವ ಗುರಿ ಮತ್ತು ಉದ್ದೇಶಗಳನ್ನು ಉಲ್ಲಂಘಿಸುವ ಮೂಲಕ, ಪಕ್ಷ ಸ್ಥಾಪನೆಯಾದ ಉದ್ದೇಶಗಳಿಗೆ ವಿರುದ್ಧವಾಗಿ ನಡೆದುಕೊಳ್ಳುವ ಮೂಲಕ ನಿತೀಶ್ ಕುಮಾರ್‌ ಅವರೇ ಪಕ್ಷದ ಸದಸ್ಯತ್ವವನ್ನು ಸ್ವಇಚ್ಛೆಯಿಂದ ತೊರೆಯುವ ಕೆಲಸ ಮಾಡಿದ್ದಾರೆ ಎಂದು ಇವರಿಬ್ಬರೂ ವಾದಿಸಿದ್ದರು. ಮಹಾಘಟಬಂಧನ ತೊರೆದು, ಬಿಜೆಪಿ ಜೊತೆ ಗುರುತಿಸಿಕೊಳ್ಳುವ ನಿತೀಶ್ ಕುಮಾರ್ ತೀರ್ಮಾನವು ಜೆಡಿಯು ಹೋಳಾಗುವುದಕ್ಕೆ ಕಾರಣವಾಯಿತು. ಪ‍ಕ್ಷ ಹೋಳಾದ ನಂತರ ಬಹುಮತ ಇರುವುದು ತಮ್ಮ ಬಣಕ್ಕೆ ಎಂದೂ ಶರದ್ ಯಾದವ್ ಮತ್ತು ಅನ್ಸಾರಿ ಪ್ರತಿಪಾದಿಸಿದ್ದರು.

ಚುನಾವಣಾಪೂರ್ವ ಮೈತ್ರಿಯ ಪಾವಿತ್ರ್ಯವನ್ನು ಹಾಳು ಮಾಡಬಾರದು ಎಂಬ ವಾದವನ್ನೂ ಇವರಿಬ್ಬರು ಮುಂದಿಟ್ಟಿದ್ದರು. ಆದರೆ, ಮಹಾಘಟಬಂಧನವನ್ನು ಒಂದು ರಾಜಕೀಯ ಪಕ್ಷಕ್ಕೆ ಸಮ ಎಂಬಂತೆ ಇವರು ಮಾತನಾಡಿದ್ದರಲ್ಲಿ ಹುರುಳಿಲ್ಲ. ಚುನಾವಣಾಪೂರ್ವ ಮೈತ್ರಿಕೂಟಗಳ ಪಾವಿತ್ರ್ಯ ಕಾಪಾಡಲು ಪಕ್ಷಾಂತರ ನಿಷೇಧ ಕಾಯ್ದೆಗೆ ತಿದ್ದುಪಡಿ ತರಬೇಕು ಎಂದು ಎರಡನೆಯ ಆಡಳಿತ ಸುಧಾರಣಾ ಆಯೋಗ ಶಿಫಾರಸು ಮಾಡಿದ್ದು ನಿಜ. ಮೈತ್ರಿಕೂಟಗಳು ಇಂದಿನ ಕಾಲದ ವಾಸ್ತವ. ಚುನಾವಣಾಪೂರ್ವ ಮೈತ್ರಿಕೂಟದ ಪಕ್ಷಗಳು ಜೊತೆಯಾಗಿರುವಂತೆ ಮಾಡುವ ನಿಯಮದ ಅಗತ್ಯ ಇದೆ ಎಂದು ಆಯೋಗ ಹೇಳಿತ್ತು. ಆದರೆ, ಪಕ್ಷಾಂತರ ನಿಷೇಧ ಕಾಯ್ದೆಯ ವ್ಯಾಪ್ತಿಯನ್ನು ಸಂಸತ್ತು ಚುನಾವಣಾಪೂರ್ವ ಮೈತ್ರಿಕೂಟಗಳಿಗೆ ವಿಸ್ತರಿಸಿಲ್ಲ. ಹಾಗಾಗಿ, ಈಗಿರುವ ಕಾನೂನು ರಾಜಕೀಯ ಪಕ್ಷಗಳ ಸುತ್ತಲೇ ಗಿರಕಿ ಹೊಡೆಯುತ್ತದೆ. ಸಂವಿಧಾನ ಪುನರ್‌ ಪರಿಶೀಲನೆಗಾಗಿನ ರಾಷ್ಟ್ರೀಯ ಆಯೋಗವು ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಹೋಗುವ ಶಾಸನಸಭೆಗಳ ಸದಸ್ಯರು ಹೊಸದಾಗಿ ಚುನಾವಣೆ ಎದುರಿಸಬೇಕು ಎಂದು ಹೇಳಿತ್ತು.

ಜೆಡಿಯು ರಾಜ್ಯಸಭೆಯಲ್ಲಿ ತನ್ನ ನಾಯಕನನ್ನಾಗಿ ಹೊಸಬರನ್ನು ಚುನಾಯಿಸಿರುವುದಕ್ಕೆ ಇವರಿಬ್ಬರೂ ಸಲ್ಲಿಸಿದ್ದ ಆಕ್ಷೇಪಗಳನ್ನು ಸಭಾಪತಿಯವರು ತಳ್ಳಿಹಾಕಿದ್ದಾರೆ. ‘ಪ್ರಜಾತಂತ್ರ ವ್ಯವಸ್ಥೆಯಲ್ಲಿ ಬಹುಸಂಖ್ಯಾತರ ತೀರ್ಮಾನ ಹಾಗೂ ಅವರ ಅಭಿಪ್ರಾಯಕ್ಕೆ ಬೆಲೆ ಕೊಡಬೇಕು ಎಂಬ ವಾಡಿಕೆಯನ್ನು ನಾನು ಪಾಲಿಸಬೇಕಾಗುತ್ತದೆ’ ಎಂದು ಸಭಾಪತಿ ಹೇಳಿದ್ದಾರೆ. ‘ಈ ಪ್ರಕರಣದಲ್ಲಿ, ಜೆಡಿಯು ಶಾಸಕಾಂಗ ಪಕ್ಷದಲ್ಲಿ ತಮ್ಮ ಗುಂಪಿಗೆ ಬಹುಮತ ಇದೆ ಎಂಬುದನ್ನು ಸಾಬೀತು ಮಾಡಲು ಇವರಿಬ್ಬರೂ ವಿಫಲರಾಗಿದ್ದಾರೆ’ ಎಂದೂ ಅವರು ಹೇಳಿದ್ದಾರೆ. ಅಲ್ಲದೆ, ಮಹಾಘಟಬಂಧನದಿಂದ ಹೊರಬಂದ ನಿತೀಶ್ ಕುಮಾರ್ ತೀರ್ಮಾನವನ್ನು ಈ ಇಬ್ಬರೂ ಸಂಸದರು ಸಾರ್ವಜನಿಕವಾಗಿ ಖಂಡಿಸಿರುವುದು, ಜೆಡಿಯು ವಿರೋಧಿಗಳ ಜೊತೆ ಸಾರ್ವಜನಿಕವಾಗಿ ವೇದಿಕೆ ಹಂಚಿಕೊಂಡಿರುವುದು ಇವರಿಬ್ಬರೂ ಪಕ್ಷವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದರು ಎಂಬುದನ್ನು ‘ಅನುಮಾನಕ್ಕೆ ಎಡೆಯಿಲ್ಲದಂತೆ ಸಾಬೀತು ಮಾಡಲು ಸಾಕು’ ಎಂದೂ ಸಭಾಪತಿ ಹೇಳಿದ್ದಾರೆ.

ಈ ಇಬ್ಬರೂ ಸಂಸದರು ತಮ್ಮ ಪಕ್ಷದ ಸದಸ್ಯತ್ವವನ್ನು ‘ಸ್ವಇಚ್ಛೆಯಿಂದ ಬಿಟ್ಟುಕೊಟ್ಟಿದ್ದಾರೆಯೇ’ ಎಂಬುದು ಈ ಪ್ರಕರಣದಲ್ಲಿನ ಕೇಂದ್ರ ಪ್ರಶ್ನೆ. ಈ ಪದಗಳು ‘ಪಕ್ಷಕ್ಕೆ ಅಧಿಕೃತವಾಗಿ ರಾಜೀನಾಮೆ ಸಲ್ಲಿಸುವುದು’ ಎಂಬುದಕ್ಕಿಂತಲೂ ಹೆಚ್ಚಿನ ಅರ್ಥವನ್ನು ನೀಡುತ್ತವೆ ಎನ್ನುವುದನ್ನು ಹೇಳಲು ಸಭಾಪತಿಯವರು ಸುಪ್ರೀಂ ಕೋರ್ಟ್‌ನ ಎರಡು ಪ್ರಮುಖ ತೀರ್ಮಾನಗಳನ್ನು ಆಧಾರವಾಗಿ ಇಟ್ಟುಕೊಂಡಿದ್ದಾರೆ. ‘ಪಕ್ಷದ ಸದಸ್ಯತ್ವವನ್ನು ಸ್ವಇಚ್ಛೆಯಿಂದ ತ್ಯಜಿಸಿದರು’ ಎಂಬುದನ್ನು ‘ರಾಜೀನಾಮೆ ನೀಡಿದರು’ ಎಂಬುದಕ್ಕೆ ಪರ್ಯಾಯವಾಗಿ ಬಳಸಲು ಆಗದು, ಅದಕ್ಕೆ ಇನ್ನೂ ವಿಸ್ತೃತವಾದ ಅರ್ಥವಿದೆ ಎಂದು ರಾಮ್‌ ನಾಯಕ್ ಮತ್ತು ಕೇಂದ್ರ ಸರ್ಕಾರದ ನಡುವಣ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಹೇಳಿದೆ. ಅಧಿಕೃತವಾಗಿ ರಾಜೀನಾಮೆ ಸಲ್ಲಿಸದೆ ಇದ್ದರೂ, ಶಾಸಕ–ಸಂಸದನ ವರ್ತನೆಯನ್ನು ಆಧರಿಸಿ ಆತ ತನ್ನ ಪಕ್ಷದ ಸದಸ್ಯತ್ವವನ್ನು ಸ್ವಇಚ್ಛೆಯಿಂದ ತೊರೆದಿದ್ದಾನೆ ಎಂದು ಅರ್ಥೈಸಬಹುದು.

‘ರಾಜಕೀಯ ಪಕ್ಷದ ಸದಸ್ಯತ್ವವನ್ನು ಸ್ವಇಚ್ಛೆಯಿಂದ ತ್ಯಜಿಸುವ ಕ್ರಿಯೆಯು ಸ್ಪಷ್ಟವಾಗಿ ವ್ಯಕ್ತವಾಗಿರಬಹುದು (express), ಅಂತರ್ಗತವಾಗಿಯೂ (implied) ನಡೆದಿರಬಹುದು’ ಎಂದು ಇನ್ನೊಂದು ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಹೇಳಿದೆ. ‘ಸ್ವಇಚ್ಛೆಯಿಂದ ಪಕ್ಷದ ಸದಸ್ಯತ್ವ ತೊರೆಯುವುದು’ ಎಂದರೆ ಏನು ಎಂಬುದನ್ನು ಎಂಟನೆಯ ಲೋಕಸಭೆಯ ಹಕ್ಕುಬಾಧ್ಯತಾ ಸಮಿತಿಯು ರಾಮ್‌ ನಾಯಕ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ತೀರ್ಪು ಬರುವುದಕ್ಕೆ ಮೊದಲು ಒಮ್ಮೆ ಪರಿಶೀಲಿಸಿತ್ತು.

ಸಂವಿಧಾನದಲ್ಲಿ ಹೇಳಿರುವುದನ್ನು ಸಂಕುಚಿತವಾಗಿ ವ್ಯಾಖ್ಯಾನಿಸಬಾರದು ಎಂದು ಸಮಿತಿಯು ಅಭಿಪ್ರಾಯಪಟ್ಟಿತ್ತು. ‘ಕಾನೂನು ನಿರ್ಮಾತೃಗಳ ಉದ್ದೇಶವು ಸ್ಪಷ್ಟವಾಗಿದೆ: ಬಹಿರಂಗವಾಗಿ ರಾಜೀನಾಮೆ ನೀಡುವ ಮೂಲಕ ಮಾತ್ರವೇ ಅಲ್ಲ, ವ್ಯಕ್ತಿಯೊಬ್ಬ ರಾಜಕೀಯ ಪಕ್ಷದ ಸದಸ್ಯತ್ವವನ್ನು ತನ್ನ ಕ್ರಿಯೆಗಳ ಮೂಲಕವೂ ತ್ಯಜಿಸಬಹುದು. ಸದಸ್ಯನೊಬ್ಬ ತನ್ನ ಕ್ರಿಯೆಗಳ ಮೂಲಕ ತಾನು ಪಕ್ಷದ ಶಿಸ್ತಿನ ಚೌಕಟ್ಟಿಗೆ ಒಳಪಟ್ಟಿಲ್ಲ ಎಂಬುದನ್ನು ಸ್ಪಷ್ಟವಾಗಿ ತೋರಿಸಿಕೊಟ್ಟರೆ, ಅದನ್ನು ಉಲ್ಲಂಘಿಸಲು ಸಿದ್ಧ ಎಂದು ತೋರಿಸಿಕೊಟ್ಟರೆ, ತಾನು ಹೊಂದಿರುವ ಸ್ಥಾನವನ್ನು ಕಳೆದುಕೊಳ್ಳಲು ಸಿದ್ಧನಾಗಿರಬೇಕು ಎಂಬುದು ಸಮಿತಿಯ ಅಭಿಪ್ರಾಯ’ ಎಂದು ಅದು ಹೇಳಿದೆ.

ಶಾಸನಸಭೆಗಳ ಕೆಲವು ಮುಖ್ಯಸ್ಥರು ಇಂತಹ ಪ್ರಕರಣಗಳನ್ನು ತೀರ್ಮಾನಿಸುವಾಗ ಅತಿ ಎನಿಸುವಷ್ಟು ಸಮಯ ತೆಗೆದುಕೊಳ್ಳುವ ಬಗ್ಗೆ ಇರುವ ಟೀಕೆಗಳ ಕುರಿತೂ ವೆಂಕಯ್ಯ ನಾಯ್ಡು ಅವರು ಉಲ್ಲೇಖಿಸಿದ್ದಾರೆ. ಇಂತಹ ಪ್ರಕರಣಗಳನ್ನೆಲ್ಲ ಮೂರು ತಿಂಗಳೊಳಗೆ ಇತ್ಯರ್ಥಪಡಿಸಬೇಕು ಎಂದು ನಾಯ್ಡು ಅವರು ಹೇಳಿದ್ದಾರೆ. ಹಾಗೆ ಮಾಡಿದಾಗ ಮಾತ್ರ ಪಕ್ಷಾಂತರ ಎಂಬ ಕೆಡುಕನ್ನು ಒದ್ದೋಡಿಸಲು ಸಾಧ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT