ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತ್ರಕರ್ತರ ಹತ್ಯೆ: ಪತ್ರಿಕಾ ಸ್ವಾತಂತ್ರ್ಯದ ಕತ್ತು ಹಿಚುಕುವ ಕೃತ್ಯ

Last Updated 14 ಜೂನ್ 2011, 19:30 IST
ಅಕ್ಷರ ಗಾತ್ರ

ಅಧಿಕಾರದಲ್ಲಿ ಇರುವವರಿಗೆ ಇಲ್ಲವೇ ಬಲಶಾಲಿಗಳಿಗೆ ಅಪಥ್ಯವಾಗುವಂತಹುದನ್ನು ಬರೆದರೆ ತನಗೆ ಸಾವು ಕಾದಿರುತ್ತದೆ ಎನ್ನುವ ಜೀವಭಯದಲ್ಲಿಯೇ ಪತ್ರಕರ್ತರು ಬದುಕುವುದು ನಿಜಕ್ಕೂ ಗಾಬರಿಗೊಳಿಸುವ ಸಂಗತಿ. ದಕ್ಷಿಣ ಏಷ್ಯಾದಲ್ಲಿ ಕಾರ್ಯನಿರ್ವಹಿಸುತ್ತಿರುವ ಬಹುತೇಕ ದಿಟ್ಟ ಪತ್ರಕರ್ತರು ಇಂತಹ ಭಯದ ವಾತಾವರಣದಲ್ಲಿಯೇ ದಿನಗಳನ್ನು ದೂಡುತ್ತಿರುವುದು ಕಟು ವಾಸ್ತವ.

ಈ ಪ್ರದೇಶದಲ್ಲಿನ ಆಡಳಿತಗಾರರು, ಭಯೋತ್ಪಾದಕರಷ್ಟೇ ಮುಂಗೋಪಿಗಳಾಗಿದ್ದಾರೆ. ಸ್ವತಂತ್ರ ಕಾರ್ಯನಿರ್ವಹಣೆಗೆ ಹಲವಾರು ಅಡಚಣೆಗಳಿದ್ದರೂ ವೃತ್ತಿಯ ಕರೆಯು ಪತ್ರಕರ್ತರು ಇಂತಹ ಸವಾಲುಗಳನ್ನು ದಿಟ್ಟತನದಿಂದ ಎದುರಿಸಲು ಸಜ್ಜಾಗುವಂತೆ ಮಾಡುತ್ತದೆ.

ಪಾಕಿಸ್ತಾನದ ಪತ್ರಕರ್ತ ಸಲೀಂ ಶಹಜಾದ್ ಮತ್ತು ಮುಂಬೈನ ಹಿರಿಯ ಪತ್ರಕರ್ತ ಜ್ಯೋತಿರ್ಮಯ್ ಡೇ ಅವರನ್ನು  ಗುಂಡಿಕ್ಕಿ ಹತ್ಯೆ ಮಾಡಿರುವುದು ಇತ್ತೀಚಿನ ನಿದರ್ಶನಗಳಾಗಿವೆ.

ಸಲೀಂ ಅವರು ಭಯೋತ್ಪಾದಕ ಇಲಿಯಾಸ್ ಕಾಶ್ಮೀರಿಯ ಸಂದರ್ಶನ ಮಾಡಿದ ಒಂದು ತಿಂಗಳ ನಂತರ ಅವರನ್ನು ಹತ್ಯೆ ಮಾಡಲಾಗಿತ್ತು. ಕೆಲ ದಿನಗಳ ಹಿಂದೆ ನಡೆದ ಅಮೆರಿಕದ ಡ್ರೋಣ್ ದಾಳಿಯಲ್ಲಿ ಕಾಶ್ಮೀರಿ ಕೂಡ ಮೃತಪಟ್ಟಿದ್ದಾನೆ.

ಕಾಶ್ಮೀರಿಯ ಆಹ್ವಾನದ ಮೇರೆಗೆ ಸಲೀಂ ಶಹಜಾದ್ ಆತನ ಬಳಿಗೆ ತೆರಳಿದ್ದ. ಪಾಕಿಸ್ತಾನದ ಭದ್ರತಾ ಪಡೆಗಳ ಜತೆ ತನಗೆ ಯಾವುದೇ ನಂಟು ಇಲ್ಲ ಎನ್ನುವುದನ್ನು ಸ್ಪಷ್ಟಪಡಿಸಲು ಆತ ಈ ಸಂದರ್ಶನ ನೀಡಿದ್ದ.

ಶಹಜಾದ್ ತಮ್ಮ ಪುಸ್ತಕ `ಇನ್‌ಸೈಡ್ ಅಲ್‌ಖೈದಾ ಆಂಡ್ ತಾಲಿಬಾನ್: ಬಿಯಾಂಡ್ ಬಿನ್ ಲಾಡೆನ್ ಆಂಡ್ 9/11~ ದಲ್ಲಿ ಮುಂಬೈ ಮೇಲಿನ ದಾಳಿಯ ಹಿನ್ನೆಲೆ ಬಗ್ಗೆ ಹೆಚ್ಚಿನ ಬೆಳಕು ಚೆಲ್ಲಿದ್ದರು. ಭಾರತ ಮತ್ತು ಪಾಕಿಸ್ತಾನ ಮಧ್ಯೆ ಯುದ್ಧ ನಡೆಯುವಂತೆ ಮಾಡುವುದೇ ಕಾಶ್ಮೀರಿಯ ಮುಖ್ಯ ಉದ್ದೇಶವಾಗಿತ್ತು ಎನ್ನುವ ಆಘಾತಕಾರಿ ಸಂಗತಿಯ ವಿವರಗಳನ್ನು ನೀಡಿದ್ದರು. ಇದೇ ಕಾರಣಕ್ಕೆ ಮುಂಬೈ ಮೇಲೆ ವ್ಯಾಪಕ ಪ್ರಮಾಣದ ವ್ಯವಸ್ಥಿತ ದಾಳಿ ಆಯೋಜಿಸಲಾಗಿತ್ತು ಎಂದೂ ಪುಸ್ತಕದಲ್ಲಿ ಪ್ರತಿಪಾದಿಸಲಾಗಿದೆ. ನಲವತ್ತು ವರ್ಷದ ಶಹಜಾದ್, ಆಫ್ಘಾನಿಸ್ತಾನ ಮತ್ತು ನೆರೆಹೊರೆ ಪ್ರದೇಶದಲ್ಲಿನ ಭಯೋತ್ಪಾದಕ ಚಟುವಟಿಕೆಗಳ ಬಗ್ಗೆ ಅಧಿಕಾರಯುತವಾಗಿ ಬರೆಯಬಲ್ಲವರಾಗಿದ್ದರು. ಪಾಕಿಸ್ತಾನದ ದಿನಪತ್ರಿಕೆಯಲ್ಲಿ ಅವರು ಬರೆದಿದ್ದ ಪುಸ್ತಕದ ಆಯ್ದ ಭಾಗಗಳು ಪ್ರಕಟಗೊಂಡ ನಂತರವೇ ಅವರನ್ನು ಹತ್ಯೆ ಮಾಡಲಾಗಿತ್ತು.

ಶಹಜಾದ್ ಹತ್ಯೆಯು ಪತ್ರಿಕಾ ಸ್ವಾತಂತ್ರ್ಯದ ಮೇಲಿನ ದಾಳಿಯಾಗಿದ್ದರೂ, ಪಾಕಿಸ್ತಾನ ಸರ್ಕಾರದ ಯಾವೊಬ್ಬ ಪ್ರಮುಖನೂ ಈ ಹತ್ಯೆ ಖಂಡಿಸದಿರುವುದು ಅತ್ಯಂತ ದುಃಖದ ಸಂಗತಿ. ಘಟನೆ ಸಂಬಂಧ ಉನ್ನತಮಟ್ಟದ ತನಿಖೆಗೂ ಆದೇಶಿಸಿಲ್ಲ. ಹತ್ಯೆಯಲ್ಲಿ ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ `ಐಎಸ್‌ಐ~ ಕೈವಾಡವೇ ಇದೆ ಎಂದೇ ವ್ಯಾಪಕವಾಗಿ ನಂಬಲಾಗಿದೆ.

ಒಂದು ವೇಳೆ ಈ ಆರೋಪ ಸತ್ಯವಲ್ಲ ಎಂದು ಭಾವಿಸಿದರೂ, ವಿಶ್ವಾಸಾರ್ಹವಾದ ತನಿಖೆ ನಡೆಸಲು ಪಾಕಿಸ್ತಾನ ಸರ್ಕಾರ ಹಿಂದೇಟು ಹಾಕಿರುವುದು ಸಹಜವಾಗಿಯೇ ಅನುಮಾನಕ್ಕೆ ಎಡೆಮಾಡಿ ಕೊಟ್ಟಿದೆ. `ಐಎಸ್‌ಐ~ ಜತೆ ತನಗೆ ಯಾವುದೇ ಸಂಬಂಧ ಇಲ್ಲ ಎಂದು ಕಾಶ್ಮೀರಿ ಸ್ಪಷ್ಟಪಡಿಸಿದ ನಂತರವೇ ಶಹಜಾದ್ ಅವರ ಹತ್ಯೆ ನಡೆದಿರುವುದು ಏಕೆ? ಎನ್ನುವ ಪ್ರಶ್ನೆಗಳಿಗೆ ಉತ್ತರವೇ ಸಿಗುತ್ತಿಲ್ಲ.

ಪಾಕಿಸ್ತಾನದಲ್ಲಿನ ದಿಟ್ಟ ಪತ್ರಕರ್ತರು ಅಥವಾ ಉದಾರವಾದಿಗಳ ಬಲ ಮತ್ತು  ನೆಲೆ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ದೇಶದಲ್ಲಿ ನಡೆದ ಸಮೀಕ್ಷೆಯೊಂದರ ಪ್ರಕಾರ, ಪಾಕಿಸ್ತಾನದ ಶೇ 67ರಷ್ಟು ಜನರು ತಮ್ಮದು ಧರ್ಮ ಮತ್ತು ದೇವರ ಹೆಸರಿನಲ್ಲಿನ (ಧಾರ್ಮಿಕ) ಸರ್ಕಾರ ನಡೆಯುವ ದೇಶವಾಗಿರಬೇಕು ಎಂದು ಬಯಸುತ್ತಾರೆ. ತಾಲಿಬಾನಿಗಳು, ಆಫ್ಘಾನಿಸ್ತಾನದಲ್ಲಿನ ತಮ್ಮ ಅಲ್ಪಾವಧಿಯ ಅಧಿಕಾರಾವಧಿಯಲ್ಲಿ ಧರ್ಮಾಧಾರಿತ ಆಡಳಿತ ಹೇಗೆ ಇರುತ್ತದೆ ಎನ್ನುವುದನ್ನು ಇಡೀ ಜಗತ್ತಿಗೆ ಪರಿಚಯಿಸಿದ್ದಾರೆ.

ಧರ್ಮ ಆಧಾರಿತ ಆಡಳಿತವನ್ನು ಬಲವಾಗಿ ಪ್ರತಿಪಾದಿಸುವ ತಾಲಿಬಾನಿಗಳು, ಇಸ್ಲಾಂ ಧರ್ಮದ ರಕ್ಷಣೆಯ ಹೆಸರಿನಲ್ಲಿ ಮುಸ್ಲಿಮರನ್ನು ಕೊಲ್ಲುತ್ತಿರುವುದು ಏಕೆ? ಎನ್ನುವ  ಪ್ರಶ್ನೆ ಈಗಲೂ ನನ್ನನ್ನು ಕಾಡುತ್ತಲೇ ಇದೆ. ಲಾಹೋರ್, ಕರಾಚಿ ಅಥವಾ ವಜರಿಸ್ತಾನಗಳಲ್ಲಿ ಇಂತಹ ಕೃತ್ಯಗಳು ಮೇಲಿಂದ ಮೇಲೆ ಘಟಿಸುತ್ತಲೇ ಇವೆ.

ಬರೀ ಪತ್ರಕರ್ತರಷ್ಟೇ ಅಲ್ಲ, ಒಟ್ಟಾರೆ ಪಾಕಿಸ್ತಾನ ದೇಶವನ್ನೇ ಭಯೋತ್ಪಾದಕರ ಕಪಿಮುಷ್ಟಿಯಿಂದ ಪಾರು ಮಾಡುವ ತುರ್ತು ಅಗತ್ಯ ಇದೆ. ಇಲ್ಲಿಯವರೆಗೆ ಪಾಕಿಸ್ತಾನವು ಗಂಭೀರ ಸ್ವರೂಪದ ಪ್ರತಿಕೂಲ ಪರಿಸ್ಥಿತಿಯಲ್ಲಿಯೇ ಸಾಕಷ್ಟು ಏಳುಬೀಳು ಕಾಣುತ್ತಿದೆ.

ಅನಪೇಕ್ಷಿತ ಬೆಳವಣಿಗೆಗಳು ಮತ್ತು ಘಟನಾವಳಿಗಳನ್ನು ಮಟ್ಟ ಹಾಕಲು ಸರ್ಕಾರ ತಕ್ಷಣ ಕಾರ್ಯಪ್ರವೃತ್ತವಾಗದಿದ್ದರೆ, ಕಾಯ್ದೆ-ಸುವ್ಯವಸ್ಥೆಗೆ ಹೋಲಿಕೆ ಮಾಡುವಂತಹ ಪರಿಸ್ಥಿತಿಯೂ ನಿರ್ಮಾಣವೂ ಸಾಧ್ಯವಾಗಲಿಕ್ಕಿಲ್ಲ.

ನವಾಜ್ ಷರೀಫ್ ಮತ್ತವರ ಪಕ್ಷವು ದೇಶದಲ್ಲಿ ಕಾಯ್ದೆ- ಸುವ್ಯವಸ್ಥೆ ಸರಿದಾರಿಗೆ ತರುವ ನಿಟ್ಟಿನಲ್ಲಿ ಗಂಭೀರವಾಗಿ ಪ್ರಯತ್ನಿಸಬೇಕಾಗಿದೆ. ಇಡೀ ಪಾಕಿಸ್ತಾನವೇ ಗಂಡಾಂತರದಲ್ಲಿ ಸಿಲುಕಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ರಾಜಕೀಯ ಪಕ್ಷಗಳು ತಮ್ಮೆಲ್ಲ ಭಿನ್ನಾಭಿಪ್ರಾಯ ಬದಿಗೊತ್ತಿ ಸಂಘಟಿತರಾಗಿ ಕೆಲಸ ಮಾಡಬೇಕಾಗಿದೆ.

ಕೆಲ ವರ್ಷಗಳ ಹಿಂದಷ್ಟೇ ಶ್ರೀಲಂಕಾದ ಖ್ಯಾತ ಪತ್ರಕರ್ತ ಸಂಪತ್ ಲಕ್ಮಲ್ ಡಿಸಿಲ್ವಾ ಅವರ ಕೊಲೆ ಮಾಡಲಾಗಿತ್ತು. ರಕ್ಷಣಾ ಇಲಾಖೆಗೆ ಸಂಬಂಧಿಸಿದ ಹಲವಾರು ಗೋಪ್ಯ ಮಾಹಿತಿಗಳು ಅವರ ಬಳಿ ಇದ್ದವು ಎನ್ನುವ ಕಾರಣಕ್ಕೆ ಅವರನ್ನು ಹತ್ಯೆ ಮಾಡಲಾಯಿತು ಎಂದು ಶಂಕಿಸಲಾಗಿತ್ತು. ಶ್ರೀಲಂಕಾ ಅಧ್ಯಕ್ಷ ಮಹಿಂದಾ ರಾಜಪಕ್ಷೆ ಅವರ ಕೈವಾಡ ಇರುವ ಬಗ್ಗೆಯೂ ಅನುಮಾನಗಳು ಕೇಳಿ ಬಂದಿದ್ದವು. ರಾಜಪಕ್ಷೆ ಅವರದ್ದು ಏಕಚಕ್ರಾಧಿಪತ್ಯ. ಇವರಿಗೆ ಮತ್ತು ಇವರಿಗಿಂತ ಮುಂಚೆ ಅಧಿಕಾರದಲ್ಲಿ ಇದ್ದವರಿಗೆ ತಮ್ಮ ವಿರುದ್ಧದ ಟೀಕೆಗಳನ್ನು ಸಹಿಸುವ ಉದಾರ ಗುಣವೇ ಇಲ್ಲ.

ಬಾಂಗ್ಲಾದೇಶದಲ್ಲಿ ಮತ್ತೆ ಮುಷ್ಕರಗಳ ಹಾವಳಿ ಕಾಣಿಸಿಕೊಂಡಿದ್ದರೂ, ಸರ್ಕಾರ ಧಾರ್ಮಿಕ ಮೂಲಭೂತವಾದದತ್ತ ಒಲವು ತೋರದಿರುವುದು ಮಾತ್ರ ಉತ್ತಮ ಬೆಳವಣಿಗೆಯಾಗಿದೆ. ಆದರೆ, ಪತ್ರಿಕಾ ಸ್ವಾತಂತ್ರ್ಯ ಬರೀ ಕಾಗದದ ಮೇಲಷ್ಟೇ ಇದೆ. ಅಲ್ಪಮಟ್ಟಿಗಿನ ಟೀಕೆಯೂ ಆಡಳಿತಾರೂಢರಿಗೆ ಪಥ್ಯವಾಗುತ್ತಿಲ್ಲ.

ಪ್ರಧಾನಿ ಶೇಖ್ ಹಸೀನಾ, ಉದಾರ ಧೋರಣೆಯವರಾಗಿದ್ದರೂ, ಮಾಧ್ಯಮಗಳ ಟೀಕೆಗಳನ್ನು ಅರಗಿಸಿಕೊಳ್ಳುವ ಗುಣ ರೂಢಿಸಿಕೊಂಡಿಲ್ಲ. ತಮ್ಮನ್ನು ಹಾಡಿ ಹೊಗಳದ  ಪತ್ರಕರ್ತರಿಗೆ ತಮ್ಮ ಭೇಟಿಗೆ ಅವಕಾಶ ನೀಡದಷ್ಟು ಕಠಿಣ ಧೋರಣೆ ತಳೆದಿದ್ದಾರೆ.

ಮಾಧ್ಯಮದವರಲ್ಲಿ `ನಾವು~ ಮತ್ತು `ಅವರು~ ಎಂದು ಎರಡು ಗುಂಪು ಮಾಡಿ ಒಡೆದು ಆಳುವ ನೀತಿ ತಳೆದಿದ್ದಾರೆ. ಪ್ರಜಾಪ್ರಭುತ್ವದ ಮೂಲ ಆಶಯಗಳಿಗೆ ಬದ್ಧವಾಗಿರುವ ಅವರ ಧೋರಣೆ ಶ್ಲಾಘನೀಯವಾಗಿದ್ದರೂ, ಟೀಕಾಕಾರರು ಅವರ ಧೋರಣೆಗೆ ವ್ಯತಿರಿಕ್ತ ನಿಲುವು ತಳೆದಾಗ ಹಸೀನಾ ಅವರಿಗೆ ಅದು ಇಷ್ಟವಾಗದೇ ಮೊಂಡು ಧೋರಣೆ ತಳೆಯುತ್ತಾರೆ.

ಭಾರತದಲ್ಲಿಯೂ ಹಲವಾರು ಪತ್ರಕರ್ತರು ತಮ್ಮ ವೃತ್ತಿ ನಿಷ್ಠೆಯ ಫಲವಾಗಿ ಜೀವ ಕಳೆದುಕೊಂಡಿದ್ದಾರೆ. ಮುಂಬೈ ಪತ್ರಕರ್ತ ಜ್ಯೋತಿರ್ಮಯ್ ಡೇ ಅವರ ಹತ್ಯೆ ಇದಕ್ಕೆ ತಾಜಾ ನಿದರ್ಶನ. ಪೊಲೀಸರ ದೌರ್ಜನ್ಯ ಅಥವಾ ಅನ್ಯಾಯ - ಭ್ರಷ್ಟಾಚಾರ  ಪ್ರಕರಣಗಳನ್ನು ಬಯಲಿಗೆ ತಂದಿರುವುದೇ ಅವರು ಎಸಗುವ ಪ್ರಮಾದವಾಗಿರುತ್ತದೆ.
ಪತ್ರಿಕೋದ್ಯಮವು ಈಗ ಸಾಕಷ್ಟು ವಾಣಿಜ್ಯೀಕರಣಗೊಂಡಿದೆ. ಇದಕ್ಕೆ ತಕ್ಕಂತೆ ನಡೆದುಕೊಳ್ಳದ ಪತ್ರಕರ್ತರನ್ನು ಕೆಲಸದಿಂದ ತೆಗೆದು ಹಾಕುವುದು ಅಬಾಧಿತವಾಗಿ ನಡೆದಿದೆ.

ದೇಶದಲ್ಲಿ ಪತ್ರಿಕಾ ಸ್ವಾತಂತ್ರ್ಯಕ್ಕೇನೂ ಧಕ್ಕೆ ಒದಗಿಲ್ಲ. ಆದರೆ, ಬೇರೆಯೇ ಆದ ಕಾರಣಗಳು ಪತ್ರಕರ್ತರ ಸ್ವತಂತ್ರ ಚಿಂತನೆಗೆ ಅಡ್ಡಿಯಾಗಿ ಪರಿಣಮಿಸಿವೆ. ಇದಕ್ಕೆ ಅಪವಾದ ಇರುವಂತಹ ಪತ್ರಿಕಾ ಸಂಸ್ಥೆಗಳೂ ಸಾಕಷ್ಟಿವೆ. ವೃತ್ತಿ ಬಗ್ಗೆ ಸಾಕಷ್ಟು ಕಾಳಜಿ ಇರುವ ಮಾಲೀಕರೂ ಸಾಕಷ್ಟು ಸಂಖ್ಯೆಯಲ್ಲಿ ಇದ್ದಾರೆ.

ದಿನಪತ್ರಿಕೆಗಳಿಗಿಂತ ಟೆಲಿವಿಷನ್ ಚಾನೆಲ್‌ಗಳಂತೂ ಇನ್ನಷ್ಟು ಅಧ್ವಾನವಾಗಿವೆ. ರಿಯಲ್ ಎಸ್ಟೇಟ್ ಮಾಲಿಕರೇ ಚಾನೆಲ್‌ಗಳನ್ನು ನಿರ್ವಹಿಸುತ್ತಿದ್ದಾರೆ. ಉದ್ಯಮ - ವಹಿವಾಟುಗಳೇ ಮಾಧ್ಯಮಗಳನ್ನು ನಿಯಂತ್ರಿಸುತ್ತಿವೆ. ಇದೇ ಕಾರಣಕ್ಕೆ ಮಾಧ್ಯಮಗಳನ್ನು ತಮ್ಮ ತಾಳಕ್ಕೆ ತಕ್ಕಂತೆ ಕುಣಿಸಬಹುದು ಎಂದು ಸರ್ಕಾರಗಳು ನಿರ್ಧರಿಸಿವೆ.

ಹಿಂತಿರುಗಿ ನೋಡಿದಾಗೊಮ್ಮೆ, ಪತ್ರಿಕಾ ಸ್ವಾತಂತ್ರ್ಯವು, ಮೂರು ದಶಕಗಳ ಹಿಂದೆ ಇದ್ದ ಪರಿಸ್ಥಿತಿಗೆ ಹೋಲಿಸಿದರೆ ತುಂಬ ನಿರಾಶಾದಾಯಕ ಪರಿಸ್ಥಿತಿ ಇದೆ ಎನ್ನುವ ಭಾವನೆ ಮೂಡುತ್ತದೆ. ದಕ್ಷಿಣ ಏಷ್ಯಾದಲ್ಲಿನ ಮಾಧ್ಯಮಗಳು ಸದ್ಯಕ್ಕೆ ಈ ಮೊದಲಿಗಿಂತ ಸಾಕಷ್ಟು ಪ್ರಭಾವಶಾಲಿಯಾಗಿವೆ. ಅದರೆ, ಕಟು ಟೀಕಾಕಾರರ ಸಂಖ್ಯೆ ದಿನೇ ದಿನೇ ಕ್ಷೀಣಿಸುತ್ತಿದೆ. ಶಹಜಾದ್ ತೋರಿದ ಧೈರ್ಯ ಪ್ರದರ್ಶಿಸುವ ಪತ್ರಕರ್ತರ ಸಂಖ್ಯೆ ಕಡಿಮೆಯಾಗುತ್ತಿರುವುದಂತೂ ನಿಜ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT