ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತ್ರಿಕಾ ಸ್ವಾತಂತ್ರ್ಯದ ಮೇಲೆ ತೂಗುಗತ್ತಿ

Last Updated 14 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಅರ್ಧ ಶತಮಾನದಿಂದೀಚೆಗೆ ದೇಶವು ಮೂವರು ಪ್ರಭಾವಿ ಪ್ರಧಾನಿಗಳನ್ನು ಕಂಡಿದೆ. ಸಂಪೂರ್ಣ ಬಹುಮತ ಮತ್ತು ಸ್ಥಿರ ಸರ್ಕಾರ ನೀಡಿದ ಹೆಗ್ಗಳಿಕೆ ಇವರದ್ದಾಗಿದೆ. 1971ರ ಮಾರ್ಚ್‌ನಲ್ಲಿ ನಡೆದ ಚುನಾವಣೆಯಲ್ಲಿ ಭರ್ಜರಿ ಗೆಲುವು ಕಂಡಿದ್ದ ಕಾಂಗ್ರೆಸ್‌ನ ಇಂದಿರಾ ಗಾಂಧಿ, 1984ರಲ್ಲಿ ಕಾಂಗ್ರೆಸ್‌ನ ರಾಜೀವ್‌ ಗಾಂಧಿ ಮತ್ತು ಮೂರನೆಯದಾಗಿ ಬಿಜೆಪಿಯ ನರೇಂದ್ರ ಮೋದಿ ಅವರು ಈಗ ತಮ್ಮ ಅಧಿಕಾರಾವಧಿಯ ಐದನೇ ವರ್ಷಕ್ಕೆ ಕಾಲಿರಿಸಿದ್ದಾರೆ. ಪೂರ್ಣಾವಧಿ ಸರ್ಕಾರದ ಸ್ಪಷ್ಟತೆ ಉದ್ದೇಶದಿಂದ ನಾನು ಇಲ್ಲಿ 1980–84ರ ಅವಧಿಯನ್ನು, ಇಂದಿರಾ ಗಾಂಧಿ ಅವರ ಹತ್ಯೆ ನಡೆದ ಕಾರಣಕ್ಕೆ ಪರಿಗಣನೆಗೆ ತೆಗೆದುಕೊಂಡಿಲ್ಲ.

ಈ ಮೂವರು ಪ್ರಧಾನಿಗಳಲ್ಲೂ ಒಂದು ಸಾಮಾನ್ಯ ಸಂಗತಿಯನ್ನು ನಾವು ಗುರುತಿಸಬಹುದಾಗಿದೆ. ತಮ್ಮ ಅಧಿಕಾರಾವಧಿಯ ಕೊನೆಯ ವರ್ಷದಲ್ಲಿ ಈ ಮೂವರೂ ಒಂದೇ ಬಗೆಯ ನಿರ್ಧಾರಕ್ಕೆ ಬಂದಿದ್ದರು ಎನ್ನುವ ಸುಳಿವು ನೀಡುವೆ. ಆದಾಗ್ಯೂ, ಅದು ಯಾವ ವಿದ್ಯಮಾನ ಎನ್ನುವುದು ನಿಮಗೆ ಹೊಳೆಯದಿದ್ದರೆ, ಎರಡನೆಯ ಸುಳಿವಿನ ರೂಪದಲ್ಲಿ ಪತ್ರಕರ್ತರಾಗಿ ಚಿಂತಿಸಿದರೆ ಹೊಳೆಯಬಹುದು ನೋಡಿ... ಇಂದಿರಾ, ರಾಜೀವ್‌ ಗಾಂಧಿ ನೇತೃತ್ವದಲ್ಲಿನ ಸರ್ಕಾರಗಳು ತಮ್ಮ ಅಧಿಕಾರಾವಧಿಯ ಐದನೇ ವರ್ಷದಲ್ಲಿ ಪತ್ರಿಕಾ ಸ್ವಾತಂತ್ರ್ಯ ಮೊಟಕುಗೊಳಿಸಲು ಮುಂದಾಗಿದ್ದವು.

ನರೇಂದ್ರ ಮೋದಿ ಅವರ ಸರ್ಕಾರವೂ ಇದೇ ಹಾದಿಯಲ್ಲಿ ಸಾಗಿದೆ. ತಮ್ಮ ಅಧಿಕಾರಾವಧಿಯ ಐದನೇ ವರ್ಷ ಆರಂಭವಾಗುತ್ತಿದ್ದಂತೆ ಇಂದಿರಾ ಗಾಂಧಿ ಅವರು ದೇಶದಲ್ಲಿ ತುರ್ತುಪರಿಸ್ಥಿತಿ ಹೇರಿ, ಸುದ್ದಿಗಳ ಪ್ರಕಟಣೆ ಮೇಲೆ ಕಡಿವಾಣ (ಸೆನ್ಸಾರ್‌ಶಿಪ್‌) ವಿಧಿಸಿದ್ದರು. ಆನಂತರ ಅವರು ಅಧಿಕಾರದಲ್ಲಿ ಮುಂದುವರೆಯಲು ಸಂಸತ್ತಿನ ಅವಧಿಯನ್ನು ಒಂದು ವರ್ಷದವರೆಗೂ ವಿಸ್ತರಿಸಿಕೊಂಡಿದ್ದರು.

ಆಗ ‘ಮಾಧ್ಯಮ’ ಶಬ್ದ ಬಳಕೆಯಲ್ಲಿ ಇದ್ದಿರಲಿಲ್ಲ. ‘ಪತ್ರಿಕೆಗಳು ಜನರಲ್ಲಿ ನಕಾರಾತ್ಮಕ ಭಾವನೆ ಬೆಳೆಸುತ್ತಿದ್ದು, ಸಿನಿಕತನ ಪೋಷಿಸುತ್ತಿವೆ. ಕೆಲ ಸ್ಥಾಪಿತ ಹಿತಾಸಕ್ತಿಗಳು ಪತ್ರಿಕೆಗಳನ್ನು ನಿಯಂತ್ರಿಸುತ್ತಿವೆ. ಇವು, ದೇಶವನ್ನು ಅಸ್ಥಿರಗೊಳಿಸುವ ಬಾಹ್ಯ ಶಕ್ತಿಗಳ ಕೈಗೊಂಬೆಗಳಾಗಿವೆ. ಹೀಗಾಗಿ, ಪತ್ರಿಕೆಗಳನ್ನು ನಿಯಂತ್ರಿಸುವ ಅಗತ್ಯ ಇದೆ’ ಎನ್ನುವುದು ಅವರ ವಾದ ಸರಣಿಯಾಗಿತ್ತು. ಅವರ ಮಾತನ್ನು ಪತ್ರಿಕಾ ಲೋಕದ ಬಹುತೇಕರು ಒಪ್ಪಿಕೊಂಡಿದ್ದರು. ಅವರ ಧೋರಣೆ ಒಪ್ಪದವರನ್ನು ಜೈಲಿಗೆ ಅಟ್ಟಲಾಗಿತ್ತು, ಇಲ್ಲವೇ ಅಂಥ ಪತ್ರಿಕೆಗಳನ್ನು ಸರ್ಕಾರವೇ ವಶಕ್ಕೆ ಪಡೆಯುವ ಪ್ರಯತ್ನಗಳು ನಡೆದಿದ್ದವು.

ರಾಜೀವ್‌ ಗಾಂಧಿ ಅವರು ತಮ್ಮ ಅಧಿಕಾರಾವಧಿಯ ಐದನೇ ವರ್ಷಕ್ಕೆ ಕಾಲಿಡುತ್ತಿದ್ದಂತೆ, 1987–88ರಲ್ಲಿ ಮಾನಹಾನಿ ತಡೆ ಮಸೂದೆಯನ್ನು ಜಾರಿಗೆ ತರಲು ಮುಂದಾಗಿದ್ದರು. ಅದೇ ಹೊತ್ತಿಗೆ ಬೊಫೋರ್ಸ್‌ ಹಗರಣ, ಜೈಲ್‌ಸಿಂಗ್‌ ಅವರ ಸವಾಲು, ವಿ.ಪಿ. ಸಿಂಗ್‌ ಅವರ ಬಂಡಾಯ ಮತ್ತಿತರ ಸಮಸ್ಯೆಗಳು ಅವರನ್ನು ಮುತ್ತಿಕೊಂಡಿದ್ದವು. ಇದಕ್ಕೆಲ್ಲ ಪತ್ರಿಕೆಗಳೇ ಕಾರಣ ಎಂದು ಗೂಬೆ ಕೂರಿಸಲಾಗಿತ್ತು. ಈ ಮಸೂದೆಯ ಮೂಲಕ ಪತ್ರಿಕೆಗಳ ದನಿ ಅಡಗಿಸಲು ಹೊರಟಿದ್ದ ಅವರು, ತಮ್ಮ ಯತ್ನದಲ್ಲಿ ವಿಫಲರಾಗಿದ್ದರು. ಆದರೆ, ಇಂಡಿಯನ್‌ ಎಕ್ಸ್‌ಪ್ರೆಸ್‌ ಪತ್ರಿಕೆ ವಿರುದ್ಧ ನೂರಾರು ಮೊಕದ್ದಮೆಗಳು ದಾಖಲಾಗುವಂತೆ ನೋಡಿಕೊಂಡಿದ್ದರು. ತಮ್ಮ ವಿರುದ್ಧದ ಟೀಕೆಗಳಿಗಾಗಿ ಪತ್ರಿಕೆಯನ್ನೇ ದಂಡಿಸಲು ಅವರು ಮುಂದಾಗಿದ್ದರು.

ಈಗ ಮೋದಿ ಸರ್ಕಾರವು, ‘ನಕಲಿ ಸುದ್ದಿ’ ಪ್ರಕಟಿಸುವುದರ ವಿರುದ್ಧ ಕ್ರಮ ಕೈಗೊಳ್ಳುವುದರ ನೆಪದಲ್ಲಿ, ಮುಖ್ಯವಾಹಿನಿಯಲ್ಲಿ ಇರುವ ಮಾಧ್ಯಮಗಳನ್ನು ನಿಯಂತ್ರಿಸಲು ಹೊರಟಿದ್ದಾರೆ. ಕಠಿಣ ಶಬ್ದಗಳಲ್ಲಿ ಇದ್ದ ಪ್ರಕಟಣೆಯನ್ನು ಪ್ರಧಾನಿ ಮಧ್ಯಪ್ರವೇಶದ ಕಾರಣಕ್ಕೆ ನಾಟಕೀಯವಾಗಿ ಮತ್ತು ಅವಸರದಲ್ಲಿ ಹಿಂದಕ್ಕೆ ಪಡೆಯಲಾಯಿತು. ಮೋದಿ ಸರ್ಕಾರವು ತನ್ನ ಮೂಲ ಉದ್ದೇಶದಿಂದ ಹಿಂದೆ ಸರಿದಿಲ್ಲ ಎನ್ನುವುದಕ್ಕೆ ಇನ್ನೊಂದು ನಿದರ್ಶನವೂ ಇದೆ.

ಡಿಜಿಟಲ್‌ ಮಾಧ್ಯಮದ ನಿರ್ವಹಣೆಗೆ ಸರ್ಕಾರ ಈಗ ಹೊಸ ಸಮಿತಿ ರಚಿಸಲು ಮುಂದಾಗಿದೆ. ಇದಕ್ಕೆ ಸರ್ಕಾರ ತನ್ನದೇ ಆದ ಕಾರಣವನ್ನೂ ನೀಡುತ್ತಿದೆ. ಮುದ್ರಣ ಮತ್ತು ಟೆಲಿವಿಷನ್‌ ಮಾಧ್ಯಮಗಳಿಗಾಗಿ ಕ್ರಮವಾಗಿ ಭಾರತೀಯ ಪತ್ರಿಕಾ ಮಂಡಳಿ ಮತ್ತು ಸುದ್ದಿ ಪ್ರಸಾರ ಗುಣಮಟ್ಟ ಪ್ರಾಧಿಕಾರಗಳು ಇವೆ. ಹೊಸ ಡಿಜಿಟಲ್ ಮಾಧ್ಯಮಕ್ಕೆ ಇಂತಹ ಯಾವುದೇ ನಿಯಂತ್ರಣ ವ್ಯವಸ್ಥೆ ಇಲ್ಲ. ಯಾವುದೇ ವಿಶ್ವಾಸಾರ್ಹತೆ ಇಲ್ಲದೇ ಅದರ ಕಾರ್ಯನಿರ್ವಹಣೆಗೆ ಅವಕಾಶ ಮಾಡಿಕೊಡುವುದು ಸರಿಯಲ್ಲ ಎನ್ನುವ ಕಾರಣ ನೀಡಲಾಗುತ್ತಿದೆ.

ಅಧಿಕಾರದಲ್ಲಿ ಇರುವ ಬಲಿಷ್ಠ ಸರ್ಕಾರದ ಅಧಿಕಾರಾವಧಿಯ ಕೊನೆಯ ಹಂತದಲ್ಲಿ ಅದಕ್ಕೆ ಪ್ರತಿಕೂಲವಾದ ಘಟನೆ ಏನಾದರೂ ಘಟಿಸಿದರೆ ತಕ್ಷಣಕ್ಕೆ ಸರ್ಕಾರದ ಕಣ್ಣು ಬೀಳುವುದು ಮಾಧ್ಯಮಗಳ ಮೇಲೆಯೇ. ತಮ್ಮ ಕುರ್ಚಿ ಅಲುಗಾಡುತ್ತಿರುವುದು ಅನುಭವಕ್ಕೆ ಬರುತ್ತಿದ್ದಂತೆ ಮತ್ತು ಮರಳಿ ಅಧಿಕಾರಕ್ಕೆ ಬರುವ ಬಗ್ಗೆ ಅಭದ್ರತೆಯ ಭಾವನೆ ಕಾಡುತ್ತಿದ್ದಂತೆ ಎಲ್ಲ ಕೆಟ್ಟ ಸುದ್ದಿಗಳಿಗೆ ಮಾಧ್ಯಮಗಳನ್ನೇ ದೂಷಿಸಲು ಅಧಿಕಾರಸ್ಥರು ಆರಂಭಿಸುತ್ತಾರೆ.

1975ರ ಆರಂಭದಲ್ಲಿ ಏನಾಯಿತು ಎನ್ನುವುದು ನಮಗೆಲ್ಲ ಗೊತ್ತಿರುವಂತಹ ಸಂಗತಿಯೇ ಆಗಿದೆ. ಶೇ 20ರಷ್ಟಿದ್ದ ಹಣದುಬ್ಬರ ಮತ್ತು ಜಯಪ್ರಕಾಶ್‌ ನಾರಾಯಣ ಅವರ ಚಳವಳಿಯ ಕಿಚ್ಚು ಎಲ್ಲೆಡೆ ಆವರಿಸಿತ್ತು. ಇಂದಿರಾ ಅವರ ಪ್ರಯತ್ನಗಳು ಬಹುತೇಕ ಯಶಸ್ವಿಯಾಗಿದ್ದವು. ಬಹುತೇಕ ಮಾಧ್ಯಮಗಳೂ ಅವರು ಹೇಳಿದಂತೆ ಕುಣಿಯುತ್ತಿದ್ದವು. ಪತ್ರಿಕೆಗಳ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕಿದ್ದ ಕಾರಣಕ್ಕೆ ಮತದಾರರು ಅವರನ್ನು ಶಿಕ್ಷಿಸಲು ಅಧಿಕಾರದಿಂದ ಕೆಳಗೆ ಇಳಿಸಲಿದ್ದಾರೆ ಎಂದು ನಾವು (ಪತ್ರಕರ್ತರು) ನಂಬಿದ್ದರೆ ನಮಗೆ ನಾವೇ ಮೋಸ ಮಾಡಿಕೊಂಡಂತೆ ಆಗುತ್ತಿತ್ತು. ಜನರ ಮೇಲೆ ಒತ್ತಾಯದ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಹೇರುವಂತಹ ಪ್ರಮಾದ ಎಸಗಿರದಿದ್ದರೆ ತುರ್ತು ಪರಿಸ್ಥಿತಿಯ ‘ಶಿಸ್ತು’ ಕೆಲಮಟ್ಟಿಗಾದರೂ ಜನಪ್ರಿಯವಾಗಿರುತ್ತಿತ್ತು.

ಚುನಾವಣೆಯಲ್ಲಿ ಇಂದಿರಾ ಅವರ ಸೋಲು, ಪ್ರತಿಪಕ್ಷಗಳು ಪ್ರವರ್ಧಮಾನಕ್ಕೆ ಬಂದು ಅವರನ್ನು ಜೈಲಿಗೆ ಕಳಿಸಿದ ನಂತರದ ದಿನಗಳಲ್ಲಿ ಜನರ ಮಧ್ಯೆ ಸಾಮಾಜಿಕ ಸಂಪರ್ಕ ಹೆಚ್ಚತೊಡಗಿತು. ಇದರಿಂದಾಗಿ, ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಪತ್ರಿಕೆಗಳ ದನಿ ಅಡಗಿಸುವ (ಸೆನ್ಸಾರ್‌ಶಿಪ್‌) ಪೈಶಾಚಿಕ ಕೃತ್ಯದ ಅಸಂಖ್ಯ ಘಟನೆಗಳು ಬೆಳಕಿಗೆ ಬಂದವು. ಇದರ ಪರಿಣಾಮವಾಗಿ ಪತ್ರಿಕಾ ಸ್ವಾತಂತ್ರ್ಯದ ಪರ ಮಾತನಾಡುವವರ ವಾದಕ್ಕೆ ಬಲ ಬರತೊಡಗಿತು.

ಪತ್ರಿಕಾ ಸ್ವಾತಂತ್ರ್ಯ ಖಾತರಿಪಡಿಸುವ ಪ್ರತ್ಯೇಕ ಕಾಯ್ದೆ ಜಾರಿಯಲ್ಲಿ ಇಲ್ಲದ ದೇಶದಲ್ಲಿ ಇದೊಂದು ಐತಿಹಾಸಿಕ ಬದಲಾವಣೆಯಾಗಿತ್ತು. ತುರ್ತುಪರಿಸ್ಥಿತಿ ಬಗ್ಗೆ ಉದಾಸೀನ ಧೋರಣೆ ತಳೆದಿದ್ದಕ್ಕೆ ಸುಪ್ರೀಂ ಕೋರ್ಟ್‌ ಕೂಡ ಪರಿತಪಿಸಿತ್ತು. ಸಾಮಾಜಿಕ ಸಂಪರ್ಕಕ್ಕೆ ನ್ಯಾಯಾಂಗವೂ ಬೆನ್ನೆಲುಬಾಗಿ ನಿಲ್ಲಲು ಮುಂದಾಗಿತ್ತು. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಪತ್ರಿಕೆಗಳನ್ನು ನಿಯಂತ್ರಿಸುವ ಇಂದಿರಾ ಗಾಂಧಿ ಅವರ ನಿರ್ಧಾರವು ಅವರಿಗೇ ಮುಳುವಾಗಿ ಪರಿಣಮಿಸಿತ್ತು. ಅವರ ನಿರೀಕ್ಷೆಗಳನ್ನೆಲ್ಲ ತಲೆಕೆಳಗು ಮಾಡಿತ್ತು.

ತಮ್ಮ ಜನಪ್ರಿಯತೆ ಕುಸಿಯಲು ಪತ್ರಿಕೆಗಳೇ ಕಾರಣ ಎಂಬ ನಿರ್ಣಯಕ್ಕೆ ಬಂದಿದ್ದ ರಾಜೀವ್‌ ಗಾಂಧಿ ಅವರೂ, ಅವುಗಳನ್ನು ಶಿಕ್ಷಿಸಲು ಮುಂದಾಗಿದ್ದರು. ಈ ಉದ್ದೇಶ ಸಾಧನೆಯಲ್ಲಿ ಅವರೂ ತಮ್ಮ ತಾಯಿಯಂತೆಯೇ ವೈಫಲ್ಯ ಕಂಡರು. ಅವರ ಪ್ರಯತ್ನಗಳೂ ಅವರಿಗೇ ತಿರುಗುಬಾಣವಾದವು. ದೇಶದ ಖ್ಯಾತನಾಮ ಸಂಪಾದಕರು ಮತ್ತು ಪತ್ರಿಕೆಗಳ ಮಾಲೀಕರೂ ತಮ್ಮೆಲ್ಲ ವೈಷಮ್ಯ ಮತ್ತು ಸ್ಪರ್ಧೆ ಬದಿಗಿಟ್ಟು, ರಾಜ್‌ಪಥ್‌ದಲ್ಲಿ ಭಿತ್ತಿಪತ್ರ ಹಿಡಿದುಕೊಂಡು ಪ್ರತಿಭಟನೆ ನಡೆಸಿದರು. ತುರ್ತು ಪರಿಸ್ಥಿತಿಯಲ್ಲಿ ಯಾವತ್ತೂ ಕಂಡುಬರದ ಏಕತೆಯನ್ನು ಅವರೆಲ್ಲ ಪ್ರದರ್ಶಿಸಿದ್ದರು. ಇದರಿಂದ ರಾಜೀವ್‌ ಗಾಂಧಿ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದರು. ತಮ್ಮ ಸ್ವಾತಂತ್ರ್ಯಕ್ಕಾಗಿ ಪತ್ರಿಕಾ ಸಂಸ್ಥೆಗಳು ಒಗ್ಗಟ್ಟಿನ ಮಂತ್ರ ಜಪಿಸಿದ್ದನ್ನು ಇಡೀ ದೇಶ ಅದೇ ಮೊದಲ ಬಾರಿಗೆ ಕಂಡಿತ್ತು. ದೇಶದ ಜನರು ಈ ಬೆಳವಣಿಗೆಯನ್ನು ಮುಕ್ತ ಮನಸ್ಸಿನಿಂದ ಶ್ಲಾಘಿಸಿದ್ದರು.

ಸಂಪೂರ್ಣ ಬಹುಮತ ಹೊಂದಿದ್ದ ಮತ್ತು ಪ್ರಭಾವಶಾಲಿ ನಾಯಕರು ಪತ್ರಿಕಾ ದನಿ ಹತ್ತಿಕ್ಕಲು ನಡೆಸಿದ್ದ ಪ್ರಯತ್ನಗಳೆಲ್ಲ ವಾಸ್ತವದಲ್ಲಿ ಪತ್ರಿಕಾ ಸ್ವಾತಂತ್ರ್ಯವನ್ನು ಬಲಪಡಿಸಿದ್ದವು. ಅಂತಹ ಯಶಸ್ಸು ಈ ಬಾರಿಯೂ ಕಂಡು ಬರುವುದೇ ಅಥವಾ ಹಿಂದಿನ ಸರ್ಕಾರಗಳಷ್ಟೇ ಬಲಿಷ್ಠವಾಗಿರುವ ಕೇಂದ್ರ ಸರ್ಕಾರ ಮೂರನೇ ಪ್ರಯತ್ನದಲ್ಲಿ ಯಶಸ್ವಿಯಾಗುವುದೇ ಎನ್ನುವ ಅನುಮಾನ ಈಗ ಕಾಡುತ್ತಿದೆ.

ಬಿಜೆಪಿ ಸರ್ಕಾರ ತನ್ನ ಐದು ವರ್ಷಗಳ ಅಧಿಕಾರಾವಧಿಯ ಕೊನೆಯ ವರ್ಷಕ್ಕೆ ಪ್ರವೇಶಿಸುತ್ತಿದೆ. ಈ ಕಾಲಘಟ್ಟದಲ್ಲಿ, ದೇಶಿ ಮಾಧ್ಯಮ ಪ್ರಪಂಚದ ವ್ಯಾಪ್ತಿ ಗಮನಾರ್ಹವಾಗಿ ಹಿಗ್ಗಿದೆ. 1975 ಮತ್ತು 1988ಕ್ಕೆ ಹೋಲಿಸಿದರೆ ಹೆಚ್ಚು ಪ್ರಭಾವಶಾಲಿಯಾಗಿದೆ, ಜನಪ್ರಿಯತೆ ಪಡೆದಿದೆ, ವೈವಿಧ್ಯದಿಂದ ಕೂಡಿದೆ ಮತ್ತು ಹೆಚ್ಚು ಶ್ರೀಮಂತವೂ ಆಗಿದೆ. ಹಿಂದಿನ ಎರಡು ಸಂದರ್ಭಗಳಿಗೆ ಹೋಲಿಸಿದರೆ ಅಧಿಕಾರಸ್ಥರಿಗೆ ಈಗ ಒಂದಕ್ಕಿಂತ ಹೆಚ್ಚು ಪ್ರತಿಕೂಲಗಳಿವೆ. ಸಾಮಾಜಿಕ ಸಂವಹನವು ಭಾರಿ ಜನಪ್ರಿಯವಾಗಿದೆ. ಎರಡನೆಯದಾಗಿ, ಮಾಧ್ಯಮ ಜಗತ್ತು ಹಿಂದಿಗಿಂತ ಹೆಚ್ಚು ವಿಭಜನೆಗೊಂಡಿದೆ.

ಪ್ರಜಾಪ್ರಭುತ್ವದಲ್ಲಿ ಮಾಧ್ಯಮಗಳು ಸೈದ್ಧಾಂತಿಕ, ತಾತ್ವಿಕ ಮತ್ತು ವಿಭಿನ್ನ ದೃಷ್ಟಿಕೋನದ ಕಾರಣಕ್ಕೆ ಬೇರೆಬೇರೆ ನಿಲುವು ತಳೆದಿರುತ್ತವೆ. ಇಂದಿನ ದಿನಗಳಲ್ಲಿ, ಮಾಧ್ಯಮಗಳು ಮುದ್ರಣ, ಟೆಲಿವಿಷನ್‌ ಮತ್ತು ಡಿಜಿಟಲ್‌ ವೇದಿಕೆಗಳ ಸ್ವರೂಪದಲ್ಲಿಯೂ ವಿಭಜನೆಯಾಗಿರುವುದು ಕಂಡು ಬಂದಿದೆ. ಮಾಧ್ಯಮಗಳಲ್ಲಿನ ಈ ಬಿರುಕನ್ನು ದೃಢ ನಿರ್ಧಾರದ ಸರ್ಕಾರ ತನ್ನ ಅನುಕೂಲಕ್ಕೆ ಬಳಸಿಕೊಳ್ಳಬಹುದು. ಬಿರುಕು ಹೆಚ್ಚಾದಷ್ಟೂ ಅವುಗಳನ್ನು ನಿಯಂತ್ರಿಸುವ ಅಧಿಕಾರಸ್ಥರ ಕೆಲಸ ಸುಲಭವಾಗಿರಲಿದೆ.

ಮುದ್ರಣ ಮತ್ತು ಟೆಲಿವಿಷನ್‌ ಮಾಧ್ಯಮಗಳು ತಮ್ಮದೇ ಆದ ಪ್ರತ್ಯೇಕ ನಿರ್ವಹಣಾ ವ್ಯವಸ್ಥೆ ಹೊಂದಿದ್ದು, ಡಿಜಿಟಲ್ ಮಾಧ್ಯಮಕ್ಕೆ ಅಂತಹ ವ್ಯವಸ್ಥೆ ಇಲ್ಲ ಎನ್ನುವ ಸರ್ಕಾರದ ಹೇಳಿಕೆಯ ಹಿಂದಿರುವ ಮರ್ಮವನ್ನು ನಾವು ಅರಿತುಕೊಳ್ಳಬೇಕಾಗಿದೆ. ಸಣ್ಣ ಸಣ್ಣ ರಹಸ್ಯ ಕ್ರಮಗಳ ಮೂಲಕ ಮಾಧ್ಯಮ ಸಮುದಾಯವನ್ನು ನಿಯಂತ್ರಿಸುವ ಹುನ್ನಾರ ಇದಾಗಿದೆ. ಇದು ಹೇಗೆ ಕೆಲಸ ಮಾಡಲಿದೆ ಅಥವಾ ವಿಫಲವಾಗಲಿದೆಯೇ ಎನ್ನುವುದು ಕೂಡ ಚರ್ಚೆಗೆ ಅರ್ಹವಾಗಿದೆ.

ಪರಂಪರಾಗತ ಮಾಧ್ಯಮ ಸಂಸ್ಥೆಗಳು, ಮುದ್ರಣ, ಟೆಲಿವಿಷನ್‌ ಮತ್ತು ಡಿಜಿಟಲ್‌ ಕ್ಷೇತ್ರಗಳಲ್ಲಿಯೂ ತೊಡಗಿಕೊಂಡಿವೆ. ಪ್ರತಿಯೊಂದು ಕ್ಷೇತ್ರದವರೂ ತಮ್ಮದೇ ಆದ ಸ್ವಂತ ಬೇಲಿ ನಿರ್ಮಿಸಿಕೊಂಡಿದ್ದಾರೆ. ಹೀಗಾಗಿ ಅವರು ಈ ಡಿಜಿಟಲ್‌ ಮಾಧ್ಯಮ ನಿಯಂತ್ರಣ ಕ್ರಮಗಳ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಂಡಿಲ್ಲ.

‘ಇಂಟರ್‌ನೆಟ್‌ ಅನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಯಾವುದೇ ಸರ್ಕಾರದಿಂದಲೂ ಅದನ್ನು ಕಾರ್ಯಗತಗೊಳಿಸುವುದೂ ಸಾಧ್ಯವಿಲ್ಲ’ ಎಂಬುದು ಅಂತರ್ಜಾಲ ಮಾಧ್ಯಮದ ಅನೇಕ ಹೊಸ ಸಂಸ್ಥೆಗಳ ನಿಲುವಾಗಿದೆ. ಸರ್ಕಾರ ಕೇವಲ ಅಧಿಸೂಚನೆ ಹೊರಡಿಸಬಹುದು. ಲೈಸನ್ಸ್‌ ನೀಡಿಕೆಗೆ ಸಮನಾದ ಕೆಲ ಕ್ರಮಗಳನ್ನು ಕೈಗೊಳ್ಳುವುದರಿಂದ ಆ ಬಗ್ಗೆ ಹೆಚ್ಚು ಆತಂಕಪಡಬೇಕಾಗಿಲ್ಲ ಎಂದು ಈ ಸಂಸ್ಥೆಗಳು ಭಾವಿಸಿವೆ.

ಒಂದು ವೇಳೆ, ಅಂತರ್ಜಾಲದ ಮಾಧ್ಯಮ ಸಂಸ್ಥೆಗಳನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಲು ಹೊರಟರೆ ಅದರ ಪರಿಣಾಮವನ್ನು ಒಬ್ಬರೇ ಎದುರಿಸಬೇಕಾಗಿಲ್ಲ. ಎಲ್ಲರೂ ಜತೆಯಾಗಲಿದ್ದಾರೆ. ಅಂತರ್ಜಾಲ ಮಾಧ್ಯಮ ದುರ್ಬಲಗೊಳಿಸಲು ಪ್ರಯತ್ನಿಸುವ ಮತ್ತು ಈ ನವ ಮಾಧ್ಯಮದ ಬಗ್ಗೆ ಅಸಹನೆ ಬೆಳೆಸಿಕೊಂಡಿರುವ ಮಾಧ್ಯಮ ಸಂಸ್ಥೆಗಳೂ ಅಂತಹ ಹೋರಾಟದಲ್ಲಿ ಭಾಗಿಯಾಗುವ ಅಗತ್ಯ ಉದ್ಭವಿಸಬಹುದು.

ಈ ವಾರ ದೇಶದಾದ್ಯಂತ ಸುದ್ದಿಯಾಗಿ ಪ್ರಜ್ಞಾವಂತರ ಮನಸ್ಸು ಕಲಕಿರುವ ಜಮ್ಮು ಮತ್ತು ಕಾಶ್ಮೀರದಲ್ಲಿನ ಕಠುವಾ ಮತ್ತು ಉತ್ತರ ಪ್ರದೇಶದಲ್ಲಿನ ಉನ್ನಾವ್‌ ಘಟನೆಗಳು ಅನ್ಯಾಯದ ಪರಮಾವಧಿಯ ನಿದರ್ಶನಗಳಾಗಿವೆ. ಈ ಎರಡೂ ಪ್ರಕರಣಗಳಲ್ಲಿ, ಪೊಲೀಸ್ ವ್ಯವಸ್ಥೆಯ ಅಹಂಕಾರವು ನ್ಯಾಯವನ್ನು ನಿರಾಕರಿಸಿದೆ. ಒಂದು ಘಟನೆಯಲ್ಲಿ, ಬಾಲಕಿ ಮೇಲಿನ ಅತ್ಯಾಚಾರ ಘಟನೆಯಲ್ಲಿ ಶಾಸಕನೊಬ್ಬನ ವಿರುದ್ಧ ಪೊಲೀಸರು ಪ್ರಕರಣವನ್ನೇ ದಾಖಲಿಸಿರಲಿಲ್ಲ. ಇನ್ನೊಂದು ಅಮಾನವೀಯ ಘಟನೆಯಲ್ಲಿ ಪೊಲೀಸರು ಕೋರ್ಟ್‌ನಲ್ಲಿ ಆರೋಪ ಪಟ್ಟಿ ದಾಖಲಿಸದಂತೆ ಸ್ಥಳೀಯ ರಾಜಕಾರಣಿಗಳು ಮತ್ತು ವಕೀಲರೇ ಅಡ್ಡಿಪಡಿಸಿದ್ದರು.

ಈ ಎರಡೂ ಘಟನೆಗಳ ಬಗ್ಗೆ ಮುದ್ರಣ, ಟೆಲಿವಿಷನ್‌ ಮತ್ತು ಅಂತರ್ಜಾಲದ ಎಲ್ಲ ಮಾಧ್ಯಮ ಸಂಸ್ಥೆಗಳಲ್ಲಿ ಒಂದೇ ದನಿಯಲ್ಲಿ ಆಕ್ರೋಶ ವ್ಯಕ್ತವಾಗಿದೆ. ಹೀಗಾಗಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕ್ಕೆ ತೀವ್ರಗತಿಯಲ್ಲಿ ಚಾಲನೆ ಸಿಕ್ಕಿದೆ. ಯಾವುದೇ ಒಂದು ಮಾಧ್ಯಮ ಈ ವಿವಾದಗಳಿಂದ ದೂರ ಉಳಿದಿದ್ದರೆ ಅಥವಾ ವಿರೋಧಾಭಾಸದ ನಿಲುವು ತಳೆದಿದ್ದರೆ ಇಂತಹ ತೀವ್ರ ಸ್ವರೂಪದ ಪರಿಣಾಮ ಕಂಡು ಬರುತ್ತಿರಲಿಲ್ಲ.

ಯಾವುದೇ ಒಂದು ಚಿಂತನೆಯನ್ನು ನಾವು ಒಪ್ಪಿಕೊಳ್ಳದಿರಬಹುದು, ಆ ಬಗ್ಗೆ ನಾವು ವಾದಿಸಬಹುದು, ಜಗಳ ಆಡಬಹುದು ಮತ್ತು ಇಂತಹ ವಾದಸರಣಿ ಆಧರಿಸಿ ಪ್ರತಿಯೊಬ್ಬರನ್ನೂ ಅಳೆಯಲೂಬಹುದು. ಆದರೆ, ಪತ್ರಿಕಾ ಸ್ವಾತಂತ್ರ್ಯವು ಬರೀ ಇಂತಹ ಘಟನೆಗಳಿಗೆ ಸೀಮಿತವಾಗಿರು
ವುದಿಲ್ಲ. ಎಲ್ಲರ ಅಭಿವ್ಯಕ್ತಿ ಸ್ವಾತಂತ್ರ್ಯ ರಕ್ಷಿಸಲು ಎಲ್ಲರೂ ಸಂಘಟಿತರಾಗಿ ಹೋರಾಟ ನಡೆಸಬಹುದು ಅಥವಾ ಅಂತಹ ಒಗ್ಗಟ್ಟು ಸಾಧ್ಯವಾಗದೇ ಸಣ್ಣ, ಸಣ್ಣ ರಹಸ್ಯ ಕ್ರಮಗಳ ಮೂಲಕ ಮಾಧ್ಯಮ ಸಮುದಾಯವನ್ನು ನಿಯಂತ್ರಿಸುವ ಕ್ರಮಗಳಿಗೆ ಬಲಿಯಾಗಬಹುದು.

ವಾದ ಮಾಡಿ, ಇನ್ನೊಬ್ಬರ ನಿಲುವನ್ನು ಒಪ್ಪದೇ ಹೋಗಿ, ಅವರವರ ಪತ್ರಿಕೋದ್ಯಮದ ಬಗ್ಗೆ ಅಸಹನೆ ಬೆಳೆಸಿಕೊಂಡಿದ್ದರೂ ಇತರರ ಬಗ್ಗೆ ನ್ಯಾಯನಿರ್ಣಯ ಮಾಡಲು ಹೋಗಬಾರದು. ನಿಮ್ಮ ಎದುರಾಳಿಗಳ ಅಥವಾ ಸೈದ್ಧಾಂತಿಕವಾಗಿ ಹಗೆತನ ಹೊಂದಿರುವವರ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಲು ಮುಂದಾಗದಿದ್ದರೆ ನಿಮಗೆ ನಿಮ್ಮ ಸ್ವಾತಂತ್ರ್ಯವನ್ನೂ ರಕ್ಷಿಸಿಕೊಳ್ಳಲು ಸಾಧ್ಯವಾಗಲಾರದು.

ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಪತ್ರಿಕೋದ್ಯಮದ ವಿದ್ಯಾರ್ಥಿಯಾಗಿದ್ದ ಪತ್ರಕರ್ತರೊಬ್ಬರು ಈಗ ಮೂರೂ ಬಗೆಯ ಮಾಧ್ಯಮಗಳಲ್ಲಿ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. ಈ ಅಂಕಣ ಪ್ರಕಟವಾಗುವ ದಿನ, ಎಡಿಟರ್ಸ್‌ ಗಿಲ್ಡ್‌ ಆಫ್‌ ಇಂಡಿಯಾದ ಸರ್ವ ಸದಸ್ಯರ ಸಭೆ ನಡೆಯಲಿದೆ. ‘ಗಿಲ್ಡ್‌’ನ ಕಾರ್ಯಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳದ ಅಪರಾಧಿ ಭಾವ ನನ್ನಲ್ಲೂ ಇದೆ.

ಪತ್ರಕರ್ತರು ನಮ್ಮೆಲ್ಲ ವೃತ್ತಿ ಸಂಬಂಧಿ ಹಳೆಯ ಮತ್ತು ಹೊಸ ಸಂಸ್ಥೆಗಳನ್ನು ಬಲಪಡಿಸುವ ಅಗತ್ಯ ಇದೆ. ಪರಸ್ಪರ ಗೌರವಿಸುವ ಮನೋಭಾವ ರೂಢಿಸಿಕೊಳ್ಳಲು ಇದು ಸಕಾಲವಾಗಿದೆ. ನಾವು ಯಾವುದೇ ಮಾಧ್ಯಮದ ಮೂಲಕ ನಮ್ಮ ವೃತ್ತಾಂತವನ್ನು ಹೇಳಿಕೊಳ್ಳಲಿ, ಮುಖ್ಯವಾಗಿ ನಮ್ಮ ವೃತ್ತಿಯನ್ನು ರಕ್ಷಿಸಿಕೊಳ್ಳಲು ನಾವೆಲ್ಲ ಏಕತೆ ಪ್ರದರ್ಶಿಸಬೇಕಾಗಿದೆ. ಸ್ವಾತಂತ್ರ್ಯ ಎನ್ನುವುದು ಸಣ್ಣ, ಸಣ್ಣ ತುಂಡುಗಳಲ್ಲ ಎನ್ನುವುದನ್ನು ನಾವೆಲ್ಲ ನೆನಪಿನಲ್ಲಿ ಇಟ್ಟುಕೊಳ್ಳಬೇಕಾಗಿದೆ.

(ಲೇಖಕ ‘ದಿ ಪ್ರಿಂಟ್‌’ನ ಸಂಸ್ಥಾಪಕ ಹಾಗೂ ಪ್ರಧಾನ ಸಂಪಾದಕ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT