ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಬ್ಬಲ್ಲಿ ‘ಅಣ’ ಸಿಕ್ಕ; ಬಿಯರು ಇಳೀತು ಅಂತ್ಲೇ ಲೆಕ್ಕ!

Last Updated 13 ಏಪ್ರಿಲ್ 2016, 19:51 IST
ಅಕ್ಷರ ಗಾತ್ರ

ಬಡ್ಡಿ ವ್ಯವಹಾರಕ್ಕೆ ಬಿದ್ದು ಸೇವಿಂಗ್ಸ್‌ ಕಳೆದುಕೊಂಡ ಸೂಸಿಗೆ ಬದುಕಿನಲ್ಲಿ ‘ಮಜ್ಜಾ’ ಮಾಡೋದೇ ದೊಡ್ಡ ಸೇವಿಂಗ್ಸು ಅನ್ನುವ ವಿಚಾರ ಸಾಕ್ಷಾತ್ಕಾರ ಆಗೋಯ್ತು. ಅದೇ ಸಮಯಕ್ಕೆ ಆದ ಇನ್ನೊಂದು ಸತ್ಯ ದರ್ಶನವೆಂದರೆ ‘ನಮ್ಮನ್ನ ಕಾಯೋಕೆ ದೇವರಿದ್ದಾನೆ’ ಎನ್ನುವುದು. ಎರಡೂ ಒಟ್ಟಿಗೇ ಗೊತ್ತಾಯ್ತಾ ಅಥವಾ ಒಂದರ ನಂತರ ಇನ್ನೊಂದು ಗೊತ್ತಾದದ್ದಾ ಅಂತ ಕೇಳಿದರೆ ಅವಳ ಹತ್ತಿರ ನಗುವೊಂದನ್ನ ಬಿಟ್ಟರೆ ಬೇರೆ ಉತ್ತರ ಇರಲಿಲ್ಲ.

‘ಈಗೇನ್ಮಾಡ್ಲಿ ಹೇಳು? ಹೋದದ್ದು ಹೋಯಿತು. ಇದ್ದದ್ದನ್ನ ಅನುಭವಿಸೋದು ಅಂತ ನಿರ್ಧಾರ ಮಾಡಿದೀನಿ’ ಅಂತ ಅಳುತ್ತಾ ಫೋನ್ ಮಾಡಿದ ಅವಳ ಅಕ್ಕನಿಗೆ ತಿಳಿಸಿಹೇಳುತ್ತಿದ್ದಳು ಸೂಸಿ. ಅದೇ ಸಮಯಕ್ಕೆ ಆದ ಇನ್ನೊಂದು ಜ್ಞಾನೋದಯವೆಂದರೆ ಇರೋ ತನಕ ಬಿಯರ್ ಕುಡಿಯೋದರಲ್ಲಿ ತಪ್ಪೇನಿಲ್ಲ ಎನ್ನುವುದು.

ಪ್ರತೀ ಭಾನುವಾರ ತಪ್ಪದೆ ಕನ್ನಡಕ ಏರಿಸಿಕೊಂಡು ಕಾಲು ಮುಚ್ಚುವಂತೆ ಲಂಗ ಹಾಕಿಕೊಂಡು ಕಿರುಗಣ್ಣಲ್ಲೇ ಎಲ್ಲವನ್ನೂ ಗಮನಿಸುತ್ತಾ ಚರ್ಚಿಗೂ ಹೋಗಿ ಬರುತ್ತಿದ್ದಳು. ಅದ್ಯಾರೋ ಹೇಳಿದರೂಂತ ಚರ್ಚಿಗೆ ಬಂದ ಎಲ್ಲ ಸತ್ತವರ ಸಂಸ್ಕಾರಕ್ಕೂ ಹೋಗಿ ಬರುತ್ತಿದ್ದಳು.

‘ಸತ್ತವರನ್ನೆಲ್ಲಾ ಯಾಕೆ ನೋಡೋಕೆ ಹೋಗ್ತೀಯಾ? ನಿನ್ನ ನೆಂಟರಲ್ಲ ಇಷ್ಟರಲ್ಲ ಅವರು. ಸುಮ್ಮನೆ ಮದುವೆ ಮನೆ ಬಿಟ್ಟಿ ಊಟಕ್ಕೆ ನುಗ್ಗಿದ ಹಾಗೆ ಯಾರ್ಯಾರ ಸಂಸ್ಕಾರಕ್ಕೋ ಯಾಕೆ ಹೋಗ್ತೀಯಾ?’ ಅಂತ ವಿಜಿ ಕೇಳಿದ್ದಕ್ಕೆ ‘ನಿಂಗೊತ್ತಾಗಲ್ಲ ಬಿಡು’ ಅಂತ ಮಾತು ಹಾರಿಸಿದ್ದಳು. ಆಮೇಲೆ ಇನ್ಯಾವತ್ತೋ ಪೀಜಿಯ ಟೆರೇಸಿನ ಮೇಲೆ ನಿಂತು ಯಾವುದೋ ಧೂಮಕೇತು ಹಾರಿ ಭೂಮಿ ಕಡೆಗೆ ಪಯಣಿಸುವುದನ್ನು ನೋಡುತ್ತಿರುವಾಗ ಸತ್ಯ ಹೊರಗೆ ಬಿತ್ತು.

ಪ್ರತೀ ಭಾನುವಾರ ಚರ್ಚಿಗೆ ಹೋಗುತ್ತಿದ್ದಳಲ್ಲ, ಹಾಗೆ ಹೋದಾಗ ಒಮ್ಮೆ ಫಾದರ್ ಹತ್ತಿರ ಕನ್ಫೆಶನ್ ಬಾಕ್ಸಿನಲ್ಲಿ ತನ್ನ ಕಷ್ಟ ಹೇಳಿಕೊಂಡಿದಾಳೆ. ‘ನಿನ್ನ ಕಷ್ಟವನ್ನು ಏಸು ಸ್ವಾಮಿ ಅರ್ಥ ಮಾಡಿಕೊಂಡಿದ್ದಾರೆ. ನೀನು ಸ್ವಾಮಿಗೆ ಹತ್ತಿರವಾದವರ ಸೇವೆ ಮಾಡು’ ಅಂತ ಹೇಳಿದರಂತೆ. ‘ದೇವರಿಗೆ ಹತ್ತಿರವಾದವರು ಅಂದರೆ ಯಾರು? ದೇವರ ಪಾದ ಸೇರಿದವರು. ಅಂದರೆ ಸತ್ತವರು’ ಅಂತ ಇವಳೇ ಅರ್ಥೈಸಿಕೊಂಡು ಆ ಚರ್ಚೆಗೆ ಬರುತ್ತಿದ್ದವರ ಪೈಕಿ ಯಾರು ಸತ್ತರೂ ಸರ್ವೀಸಿಗೆ ಹಾಜರಾಗುತ್ತಿದ್ದಳು.

ಹೀಗೆ ಸತ್ತದ್ದಕ್ಕೆ ಕೆಟ್ಟದ್ದಕ್ಕೆ ಹಾಜರಾಗುತ್ತಿದ್ದಳೇನೋ ಸರಿ. ಸೂಸಿಗೆ ಇನ್ನೊಂದು ಸಮಸ್ಯೆ ಇತ್ತು. ಅದು ಏನೆಂದರೆ ಸಾವಿನ ಬಗ್ಗೆ ವಿಪರೀತ ವಿಕೃತಿ. ಸತ್ತವರ ಸೇವೆಗೆ ಹೋಗಿ ಹಿಂದಿರುಗಿ ಬಂದ ಸ್ವಲ್ಪ ದಿನ ಅವಳ ಅವಸ್ಥೆ ನೋಡುವಂತಿರಲಿಲ್ಲ. ರಾತ್ರಿ ಎಲ್ಲಾ ಹೆದರುವುದು, ಹೂವು ಊದಿನಕಡ್ಡಿ ಕಂಡರೆ ಬೆಚ್ಚಿಬೀಳುವುದು, ಎಲ್ಲೋ ರಸ್ತೆಯಲ್ಲಿ ಹೂವು ಬಿದ್ದಿದ್ದರೆ ಮಂಡಕ್ಕಿ ಚೆಲ್ಲಿದ್ದರೆ, ಕಾಸು ಕಂಡರೆ ಇದು ಸತ್ತವರ ಮೈ ಮೇಲಿನದ್ದೇ ಅಂತ ತಲೆಕೆಡಿಸಿಕೊಳ್ಳುವುದು ನಡೆಯುತ್ತಿತ್ತು.

ಒಂದು ದಿನ ಚರ್ಚಿನಿಂದ ವಾಪಾಸು ಬಂದವಳೇ ಅಳಲು ಶುರು ಮಾಡಿದಳು. ಏನೆಂದರೆ ಒಬ್ಬ ಪರಮ ಸುಂದರ ಪುರುಷ ಇದ್ದಕ್ಕಿದ್ದ ಹಾಗೆ ಹೃದಯಾಘಾತವಾಗಿ ದೇವರ ಪಾದ ಸೇರಿದ್ದ. ಸತ್ತವನ ಭಾಮೈದ ಇವಳಿಗೆ ಮುಖಪರಿಚಯವಂತೆ. ಪ್ರತೀ ವಾರ ಚರ್ಚಿಗೆ ಬರುತ್ತಿದ್ದನಂತೆ. ಬಹಳ ಹ್ಯಾಂಡ್ಸಮ್, ಇವಳನ್ನ ಆಗಾಗ ನೋಡಿ ನಗುತ್ತಲೂ ಇದ್ದನಂತೆ. ಸ್ವಲ್ಪ ಪರಿಚಯ ಆಗುತ್ತಿತ್ತಂತೆ ಮುಂದಿನ ವಾರ ಮಾತಾಡಿಸಬೇಕೂಂತ ಇದ್ದಳಂತೆ. ಆದರೆ ತನ್ನ ಸತ್ತ ಭಾವನ ಸಂಸ್ಕಾರಕ್ಕೆ ಅಂತ ಬಂದನಲ್ಲ ಆಗ ಅವನ ಜೊತೆ ಅವನ ಹೆಂಡತಿಯೂ ಇದ್ದಳಂತೆ.

‘ಅವಳು ಫುಲ್ಲು ಬಸುರಿ ಕಣೇ. ಹೊಟ್ಟೆ ಇಷ್ಟು ಮುಂದೆ ಇಟ್ಟುಕೊಂಡು ನಡೀಲಾರದೆ ನಡೀತಾ ಇದ್ಲು ಪಾಪ. ಈ ನನ್ ಮಗನಿಗೆ ಸ್ವಲ್ಪವೂ ನಾಚಿಕೆ ಇರಲಿಲ್ಲ. ಮತ್ತೂ ನನ್ನ ಕಡೆ ತಿರುಗಿ ತಿರುಗಿ ನೋಡುತ್ತಲೇ ಇದ್ದ’ ಅಂತ ಕುದಿಯುತ್ತಿದ್ದಳು ಸೂಸಿ.

ಇವಳ್ಯಾಕೋ ದುಡ್ಡು ಕಳೆದುಕೊಂಡ ಮೇಲೆ ಸತ್ತವರ ಸಂಬಂಧಿಗಳ ಸಾವಾಸ ಮಾಡಿ ಇನ್ನೂ ಮೆಂಟಲ್ ಕೇಸ್ ಆಗಬಹುದನ್ನಿಸಿತು ವಿಜಿಗೆ. ಅನುಮಾನದಿಂದಲೇ. ‘ಸೂಸಿ, ನಿಮ್ಮ ಫಾದರ್ರು ಸತ್ತವರ ಸೇವೆ ಮಾಡು ಅಂದಿರಲಿಕ್ಕಿಲ್ಲ ಕಣೇ... ಸ್ವಲ್ಪ ಯೋಚಿಸಿ ನೋಡು. ಯಾವ್ ಚರ್ಚಲ್ಲಿ ತಲೆಬುಡ ಸಂಬಂಧ ಇಲ್ಲದೋರ ಹೆಣ ಬಂದು ನೋಡು ಅಂತ ಹೇಳ್ತಾರೆ? ಅದೂ ವಯಸ್ಸಿನ ಹುಡ್ಗೀರನ್ನ ಹೀಗೆ ಮಾಡು ಅಂತ ಹೇಳೋಕೆ ಅವರಿಗೇನು ಬುದ್ಧಿ ಇಲ್ವಾ?...’ ಅಂದಳು.

‘ನಿಂಗೊತ್ತಾಗಲ್ಲ ಬಿಡು. ನಮ್ಮ ಕಮ್ಯೂನಿಟಿಯಲ್ಲಿ ಸರ್ವೀಸ್ ಅಂದ್ರೆ ಹೀಗೇ ಇರುತ್ತೆ’ ಅಂತ ವಾದಿಸಿದಳು ಸೂಸಿ. ಈ ಮಾತು ನಡೆದು ಕೆಲವು ದಿನ ಕಳೆದಿದ್ದವು. ಒಂದು ದಿನ ಸೂಸಿ ಚರ್ಚಿನಿಂದ ಬಂದವಳೇ ವಿಜಿಯನ್ನು ಹುಡುಕಿಕೊಂಡು ಬಂದಳು. ‘ಫಾದರ್ ಸಿಕ್ಕಿದ್ರು ಈವತ್ತು’ ಅಂದಳು.

‘ಒಳ್ಳೆಯದು. ಪ್ರತೀ ವಾರ ಸಿಗ್ತಾರಲ್ವಾ?’ ‘ಹೌದು. ಆದರೆ ಈವತ್ತು ನನ್ನ ಕರೆದು ಮಾತಾಡಿಸಿದ್ರು’ ‘ಏನ್ ಹೇಳಿದ್ರು?’ ‘ಏನಿಲ್ಲ. ಆಗಾಗ ಚರ್ಚಿಗೆ ಹೆಣ ನೋಡಕ್ಕೆ ಬರಬೇಡ. ನೋಡಿದೋರು ತಪ್ಪು ತಿಳೀತಾರೆ ಅಂದ್ರು’ ‘ಎಲಾ ಇವಳಾ! ನೀನೇ ತಾನೆ ದೇವರ ಹತ್ತಿರ ಇರೋರ ಸೇವೆ ಮಾಡು ಅಂತ ಫಾದರ್ ಹೇಳಿದ್ರು ಅಂದಿದ್ದು?’ ‘ಹೌದು...ಆದರೆ...’‘ಆದರೆ ಏನು?’ ‘ದೇವರ ಹತ್ತಿರ ಇರೋರು ಅಂದ್ರೆ ರೋಗಿಷ್ಟರು, ಅನಾಥರಂತೆ. ಸತ್ತವರಲ್ಲವಂತೆ’ ‘ಅಯ್ಯ! ಮೊದಲೇ ಸರಿಯಾಗಿ ಕೇಳ್ಕೋಬಾರದಿತ್ತಾ?’

‘ಹೌದು ನನಗೂ ಹಾಗೇ ಅನ್ನಿಸ್ತು. ಸುಮ್ ಸುಮ್ನೆ ಎಷ್ಟೋ ಹೆಣ ನೋಡಬೇಕಾಗಿ ಬಂತಲ್ಲ ಅಂತ. ನನ್ನ ಮನಸ್ಸೇ ಲಡ್ಡಾಗಿದೆ ಕಣೇ’ ಅಂದಳು ಸೂಸಿ. ಕೈಯಲ್ಲಿ ಬೈಬಲ್ಲು ಬಿಗಿಯಾಗಿ ಕೂತಿತ್ತು. ದಿನಾ ತಪ್ಪದೇ ವಾಕ್ ಮ್ಯಾನಿನಲ್ಲಿ ತನ್ನ ದೇವರ ವಾಣಿಯನ್ನು ಕೇಳಿಸಿಕೊಳ್ಳುತ್ತಿದ್ದಳು. ಆದರೆ ಅವಳು ರಾತ್ರಿಯೆಲ್ಲಾ ನಿದ್ದೆ ಮಾಡದೆ ಎದ್ದು ಕೂತಿರುವುದು ಅವಳ ರೂಮಿನಲ್ಲೇ ಇದ್ದ ಉದ್ಯೋಗಸ್ಥ ತಮಿಳು ಹುಡುಗಿ ಚಿತ್ರಾಗೆ ಗೊತ್ತಿತ್ತು.

ಸಾವಿನ ಬಗ್ಗೆ ಬೇಕಾದಷ್ಟು ತಪ್ಪು ಕಲ್ಪನೆಗಳಿರುವ ಹಂತದಲ್ಲಿ, ಸಹಜವಾಗಿ ಮನಸ್ಸನ್ನು ತರ್ಕದ ಅಥವಾ ಜ್ಞಾನದ ಮೂಲಕ ಸಂತೈಸಿಕೊಳ್ಳದೆ ಬಲವಂತವಾಗಿ ಅನುಭವಕ್ಕೆ ಒಡ್ಡಿಕೊಳ್ಳುವುದು ಅಂದರೆ ವಿಕೃತಿಯನ್ನು ಹೆಚ್ಚಿಸಿದಂತೆಯೇ ಸರಿ. ಸೂಸನ್ ಮಾನಸಿಕವಾಗಿ ಬ್ಯಾಲೆನ್ಸ್ ಕಳೆದುಕೊಳ್ಳುತ್ತಿದ್ದಳು. ಅದು ಅವಳಿಗೂ ಗೊತ್ತಾಗಿರಲಿಲ್ಲ.

ಮೊದಲಿಗೆ ಕಷ್ಟಪಟ್ಟು ಕೂಡಿದ್ದ ದುಡ್ಡನ್ನು ಮೋಸದಲ್ಲಿ ಕಳೆದುಕೊಂಡ ಆಘಾತ, ಮೇಲೆ ‘ಸೇವಿಂಗ್ಸು ಮುಖ್ಯ’ ಅಂತ ನಂಬಿದ ಜೀವನದ ಪಾಠವೊಂದು ಮಕಾಡೆ ಬಿದ್ದದ್ದರ ಪರಿಣಾಮ, ಜೊತೆಗೆ ಒಂದು ತಿಂಗಳ ಕಾಲ ಬರೀ ಹೆಣಗಳನ್ನು ನೋಡಿದ್ದರ ಫಲ ಎಲ್ಲವೂ ಸೇರಿ ಅವಳ ಮನಸ್ಸು ಒಂಥರಾ ವಿಚಿತ್ರ ಸ್ಥಿತಿ ತಲುಪಿ ಅವಳ ದೈಹಿಕ ಅವಶ್ಯಕತೆಗಳನ್ನು ಏರುಪೇರು ಮಾಡುತ್ತಿತ್ತು.

ಸೂಸಿ ನೋಡಿದ್ದ ಹೆಣಗಳಲ್ಲಿ ಮಗುವಿನ ಹೆಣವೊಂದು ಅವಳನ್ನು ಅಲ್ಲಾಡಿಸಿಬಿಟ್ಟಿತ್ತು. ‘ನಾನು ಹೋದಾಗ ಆ ಪುಟ್ಟ ಹುಡುಗಿಯ ಉಬ್ಬಿದ ಕೆನ್ನೆಯ ಮೇಲಿನ ಗುಲಾಬಿ ಬಣ್ಣ ಇನ್ನೂ ಮಿಂಚುತ್ತಾ ಇತ್ತು ಕಣೇ! ದೇವರೆಂಥಾ ಕ್ರೂರಿ! ಸಾಯಿಸೋದಾದ್ರೆ ಹುಟ್ಟಿಸಿದ್ದು ಯಾಕೆ’ ಅಂತ ಅಂದು ಬಿಕ್ಕಳಿಸಿ ಅತ್ತಿದ್ದಳು. ಅವೆಲ್ಲಾ ಸುಲಭಕ್ಕೆ ಮಾಯವಾಗುವ ಅನುಭವಗಳೇ ಅಲ್ಲ ಅನ್ನುವುದು ಎಂಥವರಿಗೂ ಗೊತ್ತಾಗುತ್ತಿತ್ತು. ದಿನದಿನಕ್ಕೆ ಸೂಸಿ ಊಟ ಕಡಿಮೆ ಮಾಡುತ್ತಿದ್ದಳು. ಜೊತೆಗೆ ಬೈಬಲ್ಲನ್ನು ಅವಚಿಕೊಂಡೇ ಇರುತ್ತಿದ್ದಳು.

ಕತ್ತಿನಲ್ಲಿ ನೋಡುನೋಡುತ್ತಿದ್ದಂತೆ ದೇವರ ಚಿನ್ಹೆಯುಳ್ಳ ಜಪಮಾಲೆ ಥರದ ಮಣಿಸರ ಅಂದರೆ ರೋಸರಿಗಳ ಸಂಖ್ಯೆ ಜಾಸ್ತಿಯಾಯಿತು. ಕೈಯಲ್ಲಿ ಏಸು ಸ್ವಾಮಿ ಉಂಗುರಗಳೇ. ‘ರಾತ್ರಿ ಒಬ್ಬಳೇ ಬಾತ್ರೂಮಿಗೆ ಹೋಗಕ್ಕೂ ಹೆದರ್ತಾಳೆ ಕಣೆ...’ ಅಂತ ಚಿತ್ರಾ ಹೇಳಿದ್ದಳು.

ಚಿತ್ರಾ ಹಾಗೂ ವಿಜಿ ಮುಂದಿನ ಸಾರಿ ಸೂಸಿಯ ಜೊತೆ ಚರ್ಚಿಗೆ ಹೋಗಿ ಫಾದರ್ ಹತ್ತಿರ ಈ ವಿಷಯ ಹೇಳಿ ಸೂಸಿಗೆ ಸಹಾಯ ಮಾಡಿ ಅಂತ ಕೇಳಿಕೊಳ್ಳುವುದಿತ್ತು. ಅಷ್ಟರಲ್ಲಿ ಸೂಸಿಯೇ ಒಂದು ದಿನ ಬಿಯರ್ ಕುಡಿಯಬೇಕು ಅಂತ ಬಹಳ ಅಪೇಕ್ಷೆ ಪಟ್ಟಳು. ಅವಳು ಚೇತರಿಸಿಕೊಳ್ಳಲು ಯಾವ ಸಹಾಯವಾದರೂ ಮಾಡಲು ರೆಡಿ ಇದ್ದ ಚಿತ್ರಾ ಮತ್ತು ವಿಜಿ ಅವಳು ಹೇಳಿದ ಜಾಗಕ್ಕೆ ಕರೆದುಕೊಂಡು ಹೋಗಲು ತಯಾರಾದರು.

‘ಬ್ರಿಗೇಡ್ ರೋಡಲ್ಲಿರೋ ಪೀಕೋಸ್ ಪಬ್‌ಗೆ ಹೋಗನ’ ಅಂದಳು ಸೂಸಿ. ‘ಆಯಿತು. ಎಷ್ಟು ದುಡ್ಡು ಬೇಕಾಗುತ್ತೆ?’ ಅಂತ ವಿಜಿ ಕೇಳಿದಳು. ಎಟಿಎಂಗಳು ರೋಡಿಗೆ ಮೂರು, ವಾಲೆಟ್ಟಿಗೆ ಐದು ಕ್ರೆಡಿಟ್ ಕಾರ್ಡುಗಳು ಬಂದು ಇದ್ದಬದ್ದವರನ್ನೆಲ್ಲಾ ಲಕ್ಷಗಟ್ಟಲೆ ಕೋಟಿಗಟ್ಟಲೆ ಹಣಕ್ಕೆ ಸಾಲಗಾರರಾಗಿರಲಿಲ್ಲ ಇನ್ನೂ. ದುಡ್ಡು ಅವಶ್ಯಕತೆಗೆ ತಕ್ಕನಾಗಿ ಪರ್ಸಿನಲ್ಲಿ ಇರುತ್ತಿತ್ತು.

ಹೆಚ್ಚಿನ ಖರ್ಚು ಇದ್ದರೆ ಅದಕ್ಕಾಗಿ ಹಣವನ್ನು ಬ್ಯಾಂಕಿನಿಂದ ಬಿಡಿಸಿಕೊಂಡು ಬರಬೇಕಾಗುತ್ತಿತ್ತು. ಹಾಸ್ಟೆಲಿನಲ್ಲಿ, ಪೀಜಿಯಲ್ಲಿ ಇರುವ ಜನ ಹೆಚ್ಚಿನಂಶ ದುಡ್ಡನ್ನು ತಮ್ಮ ಹತ್ತಿರ ಇಟ್ಟುಕೊಳ್ಳುತ್ತಿರಲಿಲ್ಲ. ಯಾರಾದರೂ ಕದ್ದು ಬಿಟ್ಟರೆ ಅಂತ ಭಯ. ಇನ್ನೊಂದು ವಿಚಾರ ಅಂದರೆ ಕದ್ದವರು ಯಾರು ಅಂತ ಹುಡುಕುವುದು ಸಾಸಿವೆಯನ್ನೂ ರಾಗಿಯನ್ನೂ ಒಂದೇ ತಟ್ಟೆಯಲ್ಲಿ ಮಿಕ್ಸ್ ಮಾಡಿ ನಂತರ ಬೇರ್ಪಡಿಸಲು ಪ್ರಯತ್ನ ಪಟ್ಟಂತೆ. ಸುಖಾಸುಮ್ಮನೆ ತಲೆನೋವು, ಅದರ ಮೇಲೆ ಮಾಡಿದ ಕೆಲಸ ಅಂಥ ಘನವಾದದ್ದೇನೂ ಅಲ್ಲ ಎನ್ನುವ ಭಾವನೆ ಬೇರೆ.

ಪೀಕೋಸ್ ಪಬ್ಬು ಬೆಂಗಳೂರಿನಲ್ಲಿ ಇದ್ದ ಪಬ್ಬುಗಳಲ್ಲಿ ಬಹಳ ಹಳೆಯದು. ‘ರೆಟ್ರೋ’ ಜಾಗ. ಎಲ್ಲಾ ‘ವಾಟ್ ಮಚ್ಚಾ’ಗಳೆಲ್ಲಾ ಅಲ್ಲಿ ಸೇರಿ ಕನ್ನಡದ ಬೈಗುಳಗಳನ್ನು ಧಾರಾಳವಾಗಿ ಬಳಸುತ್ತಾ ಆಗಾಗ ತಮ್ಮ ಗಿಟಾರನ್ನು ತೆಗೆದು ಹಾಡುತ್ತಾ ಡ್ರಮ್ಸ್ ಬಾರಿಸುತ್ತಾ ದಿನದ ಏಕತಾನತೆಯನ್ನು ಕಳೆದುಕೊಳ್ಳುತ್ತಿದ್ದರು. ಹೊಸ ಪ್ರೇಮಿಗಳಿಗೂ ಭಗ್ನ ಪ್ರೇಮಿಗಳಿಗೂ ಹೇಳಿ ಮಾಡಿಸಿದ ಜಾಗ. ಏಕೆಂದರೆ ಇದು ಒಂಥರಾ ಮಾಡ್ರನ್ ಆರ್ಟ್ ಇದ್ದ ಹಾಗೆ. ನಿಮ್ಮ ಅನುಭವದ ಪ್ರಕಾರವೇ ನಿಮ್ಮ ಅನುಭೂತಿಯೂ.

ಹೊಸ ಹುಡುಗಿ ಅಥವಾ ಹುಡುಗ ಜೊತೆಯಲ್ಲಿದ್ದರೆ ರಸ್ತೆ ದಾಟುತ್ತಿರುವ ನಾಯಿಯೂ ರೊಮ್ಯಾಂಟಿಕ್ ಆಗಿ ಕಾಣುತ್ತದೆ. ಆದರೆ ಹಳೇ ಪ್ರೇಮ ಕಚ್ಚಾಟಕ್ಕೆ ಪರಿವರ್ತನೆಯಾಗಿ, ಕಾಲಾಂತರದಲ್ಲಿ ಸಹಜವಾಗಿ ಅವಸಾನ ಹೊಂದಿದ್ದರೆ ರಾಜಾ ರವಿ ವರ್ಮನ ಪೇಂಟಿಂಗುಗಳೂ ಗೋಡೆ ಮೇಲಿನ ಕೊಚ್ಚೆಯ ರೀತಿ ಕಾಣಿಸುತ್ತವೆ.

ಸೂಸಿ ಚರ್ಚಿಗೆ ಬರುತ್ತಿದ್ದವರಲ್ಲಿ ಕೆಲವರು ಪೀಕೋಸ್‌ನಲ್ಲಿ ನಡೆವ ದಿಢೀರ್ ಸಂಗೀತ ಗೋಷ್ಠಿಗಳ ಬಗ್ಗೆ ಮಾತನಾಡಿದ್ದನ್ನು ಅವಳು ಕೇಳಿಸಿಕೊಂಡಿದ್ದಳು. ಹಾಗಾಗಿ ಅಲ್ಲಿಗೆ ಹೋದರೆ ಮನಸ್ಸು ಹಗುರಾಗಬಹುದೆನ್ನುವ ಆಸೆ ಅವಳದು. ಆದರೆ ದುಡ್ಡು ಎಷ್ಟು ಬೇಕಾಗುತ್ತೆ ಎನ್ನುವ ಅಂದಾಜು ಇರಲಿಲ್ಲವಾದ್ದರಿಂದ ಸುಮ್ಮನೆ ಒಂದು ಲೆಕ್ಕಾಚಾರದ ಮೇಲೆ ಒಬ್ಬೊಬ್ಬರು ಮುನ್ನೂರು ರೂಪಾಯಿ ಒಯ್ಯುವುದು ಅಂತ ನಿರ್ಧಾರವಾಯಿತು. ಮೂರು ಜನ ಹುಡುಗಿಯರು ಅಳುಕುತ್ತಾ ಅಂಜುತ್ತಾ ‘ಮಚ್ಚಾ’ ಗ್ಯಾಂಗಿಗೆ ನಮಗೆ ಎಂಟ್ರಿ ಇದೆಯೋ ಇಲ್ಲವೋ ಎನ್ನುವ ದಿಗಿಲಲ್ಲೇ ಹೊರಟರು.

ಶನಿವಾರ ಸಂಜೆ ಆಟೊ ಹತ್ತುವಾಗ ಬ್ರಿಗೇಡ್ ರೋಡು ಎಂದರೆ ಆಟೊದವ ತಿರುಗಿ ಮುಖ ಕೂಡ ನೋಡದೆ ಸುಮ್ಮನೆ ಹತ್ತಿಸಿಕೊಂಡ. ಆದರೆ ಪೀಕೋಸ್ ಹತ್ತಿರ ಇಳಿಯುವಾಗ ಮಾತ್ರ ಮಹರಾಯ ಭಾವೀ ಮಾವನಂತೆ ಮೇಲಿಂದ ಕೆಳಕ್ಕೆ ನೋಡಿ ಕಾಸು ತೆಗೆದುಕೊಂಡು ಹೋದ. ಕಾಸು ಕೊಡೋದು ಅಕಸ್ಮಾತ್ ತಡ ಆಗಿದ್ದರೆ ‘ಬೇಗ ಮನೆ ಸೇರ್ಕಳಿ. ಎಣ್ಣ್ ಮಕ್ಳು ವೋಗೋ ಜಾಗ ಅಲ್ಲ ಇದೆಲ್ಲಾ’ ಅಂತ ಬಿಟ್ಟಿ ಸಲಹೆ ಬಂದೇ ಬರ್ತಿತ್ತೇನೋ.

ಪಬ್ಬು ಅಂದರೆ ದೊಡ್ಡ ಜಾಗ, ಬಾರ್ ಸ್ಟೂಲು, ಟೇಬಲ್ಲು, ಎಲ್ಲೆಲ್ಲಿಯೂ ಜನ, ಡಿಸ್ಕು ಅಂತೆಲ್ಲ ಎಣಿಸಿದ್ದ ವಿಜಿಗೆ ಪೀಕೋಸ್ ನೋಡಿ ಮೊದಲಿಗೆ ನಿರಾಸೆಯಾಯಿತು. ಏಕವಾಗಿ ಒಂದರ ಮೇಲೊಂದು ಫ್ಲೋರಿನಂತೆ ಮೂರು ಫ್ಲೋರ್ ಇದ್ದವು. ಎಲ್ಲಾ ಇಕ್ಕಟ್ಟಿಕ್ಕಟ್ಟು. ಮಬ್ಬು ಮಬ್ಬು. ಅದಕ್ಕೇ ಪಬ್ಬು ಅಂತಾರೇನೋ ಅನ್ನಿಸುವ ಹಾಗೆ. ಆದರೆ ಸ್ವಲ್ಪ ಹೊತ್ತಿನಲ್ಲೇ ಆ ಜಾಗ ಅಪ್ಯಾಯಮಾನವಾಯಿತು. ಮೂರೂ ಜನ ಈ ಜಾಗಕ್ಕೆ ಹೊಸಬರು ಎನ್ನುವುದು ಸಾವಿರಾರು ವರ್ಷಗಳಿಂದ ಅಲ್ಲೇ ಕೆಲಸ ಮಾಡುತ್ತಿದ್ದಂತಿದ್ದ ವೇಟರನಿಗೆ ಗೊತ್ತಾಯಿತು. ಅವರಿಗೆ ಕೂರಲು ಒಳ್ಳೆಯ ಟೇಬಲ್ ತೋರಿಸಿ, ತಿನ್ನಲು ಕುಡಿಯಲು ಏನೇನು ತಗೋಬಹುದು ಎನ್ನುವುದನ್ನು ವಿಶ್ಲೇಷಣೆಯ ಸಮೇತ ಹೇಳಿದ.

ವೇಟರಣ್ಣ  ಬಿಯರ್ ಸರ್ವ್ ಮಾಡುತ್ತಾ ಇದನ್ನು ಯಾವುದರಿಂದ ಮಾಡುತ್ತಾರೆ, ಹೇಗೆ ಇದು ಮೂಲತಃ ಬರೀ ಇಂಗಿದ ಬಾರ್ಲಿ ಅಕ್ಕಿಯ ನೀರು, ಇದರ ಗುಣ ವೈಶಿಷ್ಟ್ಯಗಳೇನು, ಇದನ್ನು ಕುಡಿಯುವುದರಿಂದ ಹೇಗೆ ಕಿಡ್ನಿ ಕಲ್ಲುಗಳು ಕರಗಿಹೋಗುತ್ತವೆ ಮತ್ತು ಬಾಟಲಿ ಬಿಯರಿಗೂ, ಪಿಚ್ಚರ್ ಎಂಬ ಪದಕ್ಕೂ, ಡ್ರಾಫ್ಟ್ ಅಲಿಯಾಸ್ ಟ್ಯಾಪ್ ಬಿಯರು ಮತ್ತು ಮರದ ಪೀಪಾಯಿಯಲ್ಲಿ ತುಂಬಿಸಿಟ್ಟ ಕಾಸ್ಕ್ ಬಿಯರಿಗೂ ಇರುವ ವ್ಯತ್ಯಾಸಗಳನ್ನು ಸುಲಭವಾಗಿ ಅರ್ಥವಾಗುವಂತೆ ವಿವರಿಸುತ್ತಿದ್ದ.

ಸಂಜೆ ಏರಿದಂತೆ, ಸೂರ್ಯ ಇಳಿದಿಳಿದು ಹೋದಂತೆ ಇವರ ಒಳಗೆ ಬಿಯರೂ ‘ಇಳಿದು ಬಾ ತಾಯೇ ಇಳಿದು ಬಾ’ ಎಂಬ ಕವಿವಾಣಿಯಂತೆ ಧುಮ್ಮಿಕ್ಕುತ್ತಾ ಇಳಿದು ಸಂಚಲನ ಸೃಷ್ಟಿ ಮಾಡುತ್ತಿತ್ತು. ಹಾಗೆ ಆಗುತ್ತಾಗುತ್ತಾ ಡಮ್ಮರ ಢಮ್ಮರ ಢಿಕ್ ಚಿಕ ಢಿಕ್ ಚಿಕ ಮ್ಯೂಸಿಕ್ಕೂ ಜಾಸ್ತಿಯಾಗುತ್ತಾ ಮೈ ಒಳಗೆ ಏರುತ್ತಿರುವುದು ಉನ್ಮಾದವೋ, ಬಿಯರಿನ ಪರಿಣಾಮವೋ ಅಥವಾ ಅದ್ಭುತ ಸ್ಪೀಕರುಗಳ ಎಫೆಕ್ಟಾ ಇಲ್ಲಾ ತನ್ನದಲ್ಲದ ಜಗತ್ತಿನ ಮೇಲೆ ತಾನು ಸ್ಥಾಪಿಸುತ್ತಿರುವ ಅಧಿಕಾರ ಕೊಡುತ್ತಿರುವ ಕಾನ್ಫಿಡೆನ್ಸಾ ಎಂಬ ಆಲೋಚನೆಗಳೆಲ್ಲಾ ಕಲಸಿ ಹೋಗಿ ಒಂದರಿಂದ ಇನ್ನೊಂದನ್ನು ಬಿಡಿಸಿ ಇದೇ ಸತ್ಯ ಎಂದು ಹೇಳದ ‘ಫಝಿಲಾಜಿಕ್’ ಎಂಬ ಸ್ಥಿತಿಯನ್ನು ಮೈ ಮನಸ್ಸು ಎರಡೂ ಮುಟ್ಟಿಬಿಟ್ಟಿದ್ದವು.

ಮತ್ತಿನಿಂದ ಇನ್ನೂ ಉತ್ತೇಜಿತಗೊಂಡ ಮೂವರೂ ಅವನ ಹತ್ತಿರ ಆಗಾಗ ವಿಷಯಗಳ ವಿವರವನ್ನು ಕೇಳುತ್ತಿದ್ದರು. ಇಷ್ಟೆಲ್ಲಾ ವಿವರಗಳನ್ನು ಕೇಳಿದ ವಿಜಿಗೆ ಯಾಕೋ ತಾನು ಸೈನ್ಸ್ ಕ್ಲಾಸಿನಲ್ಲಿ ಕೂತಿದ್ದೇನೆ, ಪಬ್ಬಿನಲ್ಲಿ ಅಲ್ಲ ಅಂತ ಅನ್ನಿಸತೊಡಗಿತು.

‘ಥತ್ತೇರಿಕೆ! ಇದರಲ್ಲಿ ಹಂಗಾರೆ ಆಲ್ಕೋಹಾಲು ಇಲ್ವಾ? ನಾವ್ ಕುಡೀತಾ ಇರದು ಬರೀ ಆರೋಗ್ಯಕ್ಕೆ ಪರಮ ಔಷಧವಾದ ಬಾರ್ಲಿ ನೀರಾ?’ ಎಂದು ಚೀರಿ ಚೀರಿ ಚಿತ್ರಾಳನ್ನು ಕೇಳಿದಳು. ಚಿತ್ರಾ ಇವಳನ್ನು ನೋಡುತ್ತಾ ಸುಮ್ಮನೆ ನಕ್ಕಳು. ಸೂಸಿ ಪೂರ್ತಿ ಹಿಂದಕ್ಕೊರಗಿ ಮಲಗಿಕೊಂಡು ದೇವರ ಫೋಟೊ ಒಂದನ್ನು ಎದೆ ಮೇಲೆ ಇಟ್ಟುಕೊಂಡು ಐದಾರು ಜಪಮಣಿ ಸರಗಳನ್ನು ಕುತ್ತಿಗೆಗೆ ಸಿಗಿಸಿಕೊಂಡು ಸುಮ್ಮನೇ ತಾರಸಿ ನೋಡುತ್ತಿದ್ದಳು. ಅಷ್ಟರಲ್ಲಿ ಯಾರೋ ವಿಜಿ ಭುಜದ ಮೇಲೆ ಕೈ ಇಟ್ಟರು. ತಿರುಗಿ ನೋಡಿದರೆ ದಾವಣಗೆರೆಯವರು, ಪರಿಚಯದವರೇ.

‘ಏನಮ ಪಾಪಿ? ನೀನು ಇಲ್ಲಿ?’ ಅಂತ ಕೇಳಿದರು. ಪಾಪಿ ಅಂದರೆ ಅದೊಂದು ಪದ ಮಾತ್ರ. ಅದಕ್ಕೆ ಊರಿನ ವ್ಯಾಖ್ಯಾನದಲ್ಲಿ ‘ಪುಟ್ಟಿ’ ಅಂತ ಹಾಗೆ. ಆದರೆ ಪಬ್ಬಿನಲ್ಲಿ ಊರವರನ್ನು ಭೇಟಿಯಾದ ಘಳಿಗೆಯಲ್ಲೇ ವಿಜಿಗೆ ತಾನು ಪರಮ ಪಾಪಿ ಅಂತಲೇ ಅನ್ನಿಸಿತು. ಕಾಸು ಕೊಟ್ಟು ಕುಡಿದ ಬಿಯರು ಒಮ್ಮಿಂದೊಮ್ಮೆಲೆ ಆವಿಯಾಗಿ ಹೋಯಿತು.‘ಏನಿಲ್ಲಣ. ಸುಮ್ನೆ ಪ್ರೆಂಡ್ಸು ಕರುದ್ರಾ... ಅದುಕ್ಕ್ ಬಂದಿದ್ದೆ. ಇದೇ ಫಷ್ಟ್ ಟೈಮಣ. ಯಾವಾಗೂ ಬಂದಿರ್ಲಿಲ್ಲ’ ಅಂದಳು. ‘ಅಣ’ ಅಲಿಯಾಸ್ ಅಣ್ಣ ಎನ್ನುವ ವ್ಯಕ್ತಿ’ ಎಲ್ಲ ಅರಿತವರಂತೆ ಸುಮ್ಮನೆ ನಕ್ಕಿತು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT