ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಸರ ಪ್ರವಾಸೋದ್ಯಮ, ಸ್ಥಳೀಯರ ಪಾಲ್ಗೊಳ್ಳುವಿಕೆ

Last Updated 12 ಮಾರ್ಚ್ 2012, 19:30 IST
ಅಕ್ಷರ ಗಾತ್ರ

ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕು ಪ್ರಕೃತಿಯ ಸೊಬಗನ್ನೆಲ್ಲ ತನ್ನೊಳಗೆ ಅಡಗಿಸಿಕೊಂಡಿರುವ ತಾಣ. ಕರ್ನಾಟಕದಲ್ಲಿ ಭೌಗೋಳಿಕವಾಗಿ ಎರಡನೇ ದೊಡ್ಡ ತಾಲ್ಲೂಕೆಂಬ ಹೆಮ್ಮೆ ಇದಕ್ಕಿದೆ. ಜೋಯಿಡಾ 1890 ಚದರ ಕಿಲೋಮೀಟರ್ ಭೂ ವಿಸ್ತಾವನ್ನು ಹೊಂದಿದೆ. ಈ ತಾಲೂಕಿನ ಶೇಕಡ 85 ರಷ್ಟು ಭೂ ಭಾಗ ಅರಣ್ಯಾವೃತವಾಗಿದೆ. ಇಲ್ಲಿನ ಜನಸಾಂದ್ರತೆಯೂ ಕಡಿಮೆ ಇದೆ. ಈ ಪ್ರದೇಶದಲ್ಲಿ ಎತ್ತ ನೋಡಿದರೂ ದಟ್ಟ ಕಾಡುಗಳ ಉದ್ದಗಲಕ್ಕೂ ಹರಡಿರುವ ಸಸ್ಯ-ಪ್ರಾಣಿ ಸಂಕುಲ. ಇದು ಜೋಯಿಡಾಗೆ ವಿಶ್ವದ ಜೀವವೈವಿಧ್ಯ ಭೂಪಟದಲ್ಲಿ ವಿಶಿಷ್ಟ ಸ್ಥಾನವನ್ನು ನೀಡಿದೆ.

ಇಂಥ ಸಮೃದ್ಧ ಪ್ರಕೃತಿ ಸಂಪತ್ತನ್ನು ಹೊಂದಿರುವ ಈ ಪ್ರದೇಶದಲ್ಲಿ ಆರ್ಥಿಕಾಭಿವೃದ್ಧಿಯ ಪ್ರಮಾಣವೂ ಅಷ್ಟೇ ಅಧಿಕ ಮಟ್ಟದಲ್ಲಿರಬಹುದು ಎಂದು ಊಹಿಸಲಾಗದು. ತೀವ್ರ ಸ್ವರೂಪದ ಮೂಲಸೌಕರ್ಯಗಳ ಕೊರತೆಯಿಂದ ನರಳುತ್ತಿರುವ ಜೋಯಿಡಾ ಮಾನವಾಭಿವೃದ್ಧಿ ಸೂಚ್ಯಂಕದಲ್ಲಿ ಕೊನೆಯಲ್ಲಿರುವ ರಾಜ್ಯದ ಐವತ್ತು ತಾಲೂಕುಗಳ ಪಟ್ಟಿಗೆ ಸೇರುತ್ತದೆ. ಸುಮಾರು 54,000ದಷ್ಟಿರುವ ತಾಲೂಕಿನ ಜನಸಂಖ್ಯೆ 460 ಜನವಸತಿ ಸ್ಥಳಗಳಲ್ಲಿ ಹಂಚಿಹೋಗಿದೆ. ಜೀವನ ನಿರ್ವಹಣೆಗಾಗಿ ಹೆಚ್ಚಿನವರು ಕೃಷಿ ಅಥವಾ ಕೂಲಿಯನ್ನು ಅವಲಂಬಿಸಿದ್ದಾರೆ. ತಾಲ್ಲೂಕಿನ ಸಾಕ್ಷರತಾ ಮಟ್ಟ ಶೇಕಡ 65 ರಷ್ಟಿದ್ದರೂ, ಶಾಲೆಗಳಿಂದ ದೂರ ಉಳಿಯುವವರ ಸಂಖ್ಯೆಯೂ ಹೆಚ್ಚೇ ಇದೆ.

ನೆರೆಯಲ್ಲೇ ಇರುವ ಭಾರತದ ಅತ್ಯಂತ ಆಕರ್ಷಕ ಪ್ರವಾಸಿ ತಾಣ ಗೋವಾದತ್ತ ವಲಸೆ ಹೋಗುವವರ ಸಂಖ್ಯೆಯೂ ಜೋಯಿಡಾದಲ್ಲಿ ಹೆಚ್ಚುತ್ತಿದೆ. ಇದರಿಂದ ಈ ವಲಸಿಗರನೇಕರ ಬದುಕಿನಲ್ಲಿ ಗುಣಾತ್ಮಕ ಬದಲಾವಣೆಯೇನೂ ಆಗುತ್ತಿಲ್ಲ. ಆದರೆ ಜೋಯಿಡಾದೊಳಗೆ ಬರುತ್ತಿರುವ ಹಣದ ಥೈಲಿಗಳ ಹಾಗೂ ಭೋಗ ಸಂಸ್ಕೃತಿ  ತುಣುಕುಗಳ ಸಂಖ್ಯೆ ಹೆಚ್ಚಳವಾಗುತ್ತಿದೆಯಷ್ಟೆ.

ಭಾರತದಲ್ಲಿ ಅರಣ್ಯವಾಸಿ ಸಮುದಾಯಗಳ ಸೀಮಾಂತೀಕರಣ ಹಾಗೂ ಅವರ ದುಡಿಮೆಯ ಶೋಷಣೆ ದೇಶದ ನಾನಾ ಭಾಗಗಳಲ್ಲಿ ಕಂಡು ಬರುತ್ತಿದೆ. ಜೋಯಿಡಾ ಕೂಡ ಇದಕ್ಕೆ ಹೊರತಲ್ಲ. ತಾಲೂಕಿನ `ಅನಭಿವೃದ್ಧಿ~ ಸ್ಥಿತಿ ಕುರಿತಂತೆ ಹಲವಾರು ಬಾರಿ ಚರ್ಚೆಗಳು ನಡೆದಿವೆ. `ಈ ಪ್ರದೇಶವೇ ಹೀಗೆ, ಇಲ್ಲಿನ ಬಹುಜನರಿಗೆ ಬದಲಾವಣೆಯಲ್ಲಿ ಆಸಕ್ತಿ ಇಲ್ಲ~ ಎಂಬ ನಕಾರಾತ್ಮಕ ಭಾವನೆಗಳು ಹಲವು ಬಾರಿ ರಾಜಕೀಯ, ಅಧಿಕಾರಿ ಹಾಗೂ ಸಾರ್ವಜನಿಕ ವಲಯಗಳಲ್ಲಿ ವ್ಯಕ್ತವಾಗಿವೆ, ಇಂದಿಗೂ ಆಗುತ್ತಿವೆ.

ಸುಮಾರು ಒಂದೂವರೆ ದಶಕದಿಂದ ಜೋಯಿಡಾದಲ್ಲಿ ಸಂಶೋಧನಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ನನ್ನನ್ನು ಬಾಧಿಸುತ್ತಿರುವ ಪ್ರಶ್ನೆಯೇ ಬೇರೆ. ಇಂಥ ಸಂಪದ್ಭರಿತ ಪ್ರಕೃತಿಯ ಪರಿಸರ ಹಾಗೂ ವಿಶಿಷ್ಟ ಸಾಂಸ್ಕೃತಿಕ ಪರಂಪರೆಯ ನೆರಳಿನಲ್ಲಿ ಬದುಕುತ್ತಿರುವ ಈ ಜನರು ತಮ್ಮ ಸ್ಥಳೀಯ ಜ್ಞಾನ ಮತ್ತು ಸಂಸ್ಕೃತಿ ವೈಶಿಷ್ಟ್ಯಗಳನ್ನು ಆಧಾರವನ್ನಾಗಿ ಇಟ್ಟುಕೊಂಡು ಸುಸ್ಥಿರ ಅಭಿವೃದ್ಧಿ ಮಾರ್ಗಗಳನ್ನು ಹುಡುಕಲು ಸಾಧ್ಯವಿಲ್ಲವೇ ಎಂಬುದೇ ಈ ಪ್ರಶ್ನೆ. ಈ ಭಾವನೆ ನನ್ನ ಮನಸ್ಸಿನಲ್ಲಿ ಬರಲು ಒಂದು ಪ್ರಮುಖ ಕಾರಣವೆಂದರೆ ಜೋಯಿಡಾದ ಸುತ್ತಮುತ್ತ ಹರಡುತ್ತಿರುವ ಖಾಸಗಿ ರೆಸಾರ್ಟುಗಳು.

ಹೊರಗಿನಿಂದ ಬಂದ ಖಾಸಗಿ ಕಂಪೆನಿಗಳು ಅಥವಾ ವ್ಯಕ್ತಿಗಳು ಜೋಯಿಡಾದ ಜೀವ ವೈವಿಧ್ಯ ಹಾಗೂ ಇಲ್ಲಿನ ಜಲ ಸಂಪತ್ತನ್ನು ಬಂಡವಾಳವನ್ನಾಗಿಟ್ಟುಕೊಂಡು  ರೆಸಾರ್ಟುಗಳನ್ನು ತೆರೆದಿದ್ದು ಇಲ್ಲಿ ಅರಣ್ಯವಾಸದ ಅನುಭವಗಳನ್ನು ಐಷಾರಾಮಿ ಸೌಲಭ್ಯಗಳೊಡನೆ ಒದಗಿಸಲಾಗುತ್ತದೆ. ಗಣೇಶಗುಡಿಯಲ್ಲಿರು ಹಾರ್ನ್‌ಬಿಲ್ ಮತ್ತು ಬೈಸನ್ ರೆಸಾರ್ಟುಗಳು, ಕ್ಯಾಸಲ್‌ರಾಕ್‌ನಲ್ಲಿರುವ ಧೂಧ್ ಸಾಗರ್ ಮತ್ತು ಪ್ರಧಾನಿಯ ಜಂಗಲ್ ರೆಸಾರ್ಟುಗಳು ಹಾಗೂ ಅರಣ್ಯ ಇಲಾಖೆಯ ಸ್ವಾಮ್ಯದಲ್ಲಿರುವ ಜಂಗಲ್ ಲಾಡ್ಜಸ್ ಅಂಡ್ ರೆಸಾರ್ಟ್ಸ್-ಇವು ಭೌತಿಕವಾಗಿ ಜೋಯಿಡಾದ ಭೂ ಪ್ರದೇಶದಲ್ಲಿದ್ದರೂ ಸ್ಥಳೀಯ ಸಮುದಾಯಗಳ ಸಮಸ್ಯೆಗಳಿಗೆ ಸ್ಪಂದಿಸಿರುವ ನಿದರ್ಶನಗಳು ತೀರಾ ವಿರಳ.

ಖಾಸಗಿ ರೆಸಾರ್ಟುಗಳಲ್ಲಿ ಸ್ಥಳೀಯರಿಗೆ ಲಭ್ಯವಾಗುತ್ತಿರುವ ಉದ್ಯೋಗಾವಕಾಶಗಳೂ ಕೂಡ ಅವರ ಪ್ರಕೃತಿ-ಸಂಸ್ಕೃತಿ ಜ್ಞಾನವನ್ನು ಆಧರಿಸಿಲ್ಲ. ಅದರ ಬದಲು ಅವರನ್ನು ಪರಿಚಾರಕರಂತೆ ನಡೆಸಿಕೊಳ್ಳಲಾಗುತ್ತಿದೆ. ಕಡಿಮೆ ವೇತನವನ್ನೂ ನೀಡಲಾಗುತ್ತಿದೆ. ಒಳ್ಳೆಯ ಆದಾಯ ತರುವ ಕೆಲಸಗಳಲ್ಲಿರುವವರೆಲ್ಲಾ ಹೆಚ್ಚು ಕಡಿಮೆ ಹೊರಗಿನವರೇ ಆಗಿದ್ದಾರೆ.

ಜೋಯಿಡಾದ ಕಾಡುಗಳಲ್ಲಿ ತಲೆಮಾರುಗಳಿಂದ, ಈ ಪ್ರದೇಶದ ನೆಲ ಜಲ, ವನ್ಯ ಪ್ರಾಣಿಪಕ್ಷಿಗಳು, ಗಿಡಮರಗಳೊಡನೆ ಬದುಕುತ್ತಿರುವ ಸ್ಥಳೀಯ ಸಮುದಾಯಗಳ ಜ್ಞಾನ ಭಂಡಾರವನ್ನು ಸದ್ಬಳಕೆ ಮಾಡಿಕೊಂಡು ಇತ್ತೀಚಿನ ದಿನಗಳಲ್ಲಿ ವಿಶ್ವದೆಲ್ಲೆಡೆ ಜನಪ್ರಿಯವಾಗುತ್ತಿರುವ ಪರಿಸರ ಪ್ರವಾಸೋದ್ಯಮ ವಲಯಗಳನ್ನು ಜೋಯಿಡಾದ ಕೆಲ ಪ್ರದೇಶಗಳಲ್ಲಿ ಸ್ಥಾಪಿಸಲು ಸಾಧ್ಯತೆಯಿದೆ. ಆದರೆ ಮೂಲಸೌಕರ್ಯಗಳ ಕೊರತೆ, ಬಂಡವಾಳದ ಅಭಾವ ಹಾಗೂ ಈ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಲು ಅವಶ್ಯವಾದ ತರಬೇತಿಯ ಅಲಭ್ಯತೆ- ಈ ಮೂರು ಕಾರಣಗಳಿಗಾಗಿ ಅತ್ಯಂತ ಫಲಪ್ರದವಾಗಬಹುದಾದ ಒಂದು ಸುಸ್ಥಿರ ಉದ್ದಿಮೆಗೆ ಅವಕಾಶವಿಲ್ಲದಂತಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಮೂಲಕ ಹಾದು ಹೋಗುವ ಸಹ್ಯಾದ್ರಿ ಪರ್ವತ ಶ್ರೇಣಿಯಲ್ಲಿ ಅತಿ ಎತ್ತರದ ಐದು ಶಿಖರಗಳಾದ ಕಾರ್ಟೊಲಿಯ ಸಿದ್ಧಾ ಡೊಂಗರ್ ತೇರಾಳಿಯ ಸುಖಿತಾಲ, ಪಾತಾಗುಡಿಯ ರಣಮಂಡಳ, ಗುಂದದ ಕಂಚಿಕಲ್ಲು ಗುಡ್ಡ ಮತ್ತು ಶಿವಪುರದ ಶಿಖರ ಜೋಯಿಡಾದಲ್ಲಿವೆ. ಅದರಲ್ಲೂ ಮೊದಲನೆಯ ಮೂರು ಶಿಖರಗಳ ಪರಿಸರದಲ್ಲಿ ದೊರೆಯುವ ಅನುಭವವೇ ವಿಶಿಷ್ಟ. ಆದರೆ ಈ ಸ್ಥಳಗಳಲ್ಲಿ ಕಂಡು ಬರುವ ತೀವ್ರ ಸ್ವರೂಪದ ಮೂಲಸೌಕರ್ಯಗಳ ಕೊರತೆಯಿಂದ ಅನೇಕ ಉತ್ಸಾಹಿ ಶಿಖರಾರೋಹಿಗಳು ಹಾಗೂ ಪರಿಸರಾಸಕ್ತರು ನಿರಾಶರಾಗುತ್ತಾರೆ. ರಸ್ತೆಗಳನ್ನು ದುರಸ್ತಿ ಮಾಡಿ ನಾಲ್ಕು ಚಕ್ರ ವಾಹನಗಳು ಸುಲಲಿತವಾಗಿ ಸಂಚರಿಸಲು ಅನುವು ಮಾಡಿಕೊಟ್ಟು ಮೂಲಭೂತ ಅವಶ್ಯಕತೆಗಳನ್ನು ಪೂರೈಸುವ ಒಂದು ವ್ಯವಸ್ಥೆಯನ್ನು ಸೃಷ್ಟಿಸಿದರೆ ಅನೇಕ ಪ್ರವಾಸಿಗರನ್ನು ಆಕರ್ಷಿಸುವ ಶಕ್ತಿ ಈ ಪ್ರದೇಶಕ್ಕಿದೆ. ಆದರೆ ಎಲ್ಲೋ ಒಂದೆಡೆ ಸ್ಥಳೀಯ, ಸರ್ಕಾರಿ ಹಾಗೂ ರಾಜಕೀಯ ಇಚ್ಛಾಶಕ್ತಿಗಳ ಕೊರತೆಯಿಂದಾಗಿ ಈ ಪ್ರದೇಶಗಳು ಹೆಚ್ಚು ಕಡಿಮೆ ಅಗೋಚರವಾಗಿಯೇ ಉಳಿದಿವೆ.

ಜೋಯಿಡಾದಲ್ಲಿ ಸ್ಥಳೀಯರು ನಡೆಸಬಹುದಾದ ಮತ್ತೊಂದು ಪರಿಸರ ಸ್ನೇಹಿ ಪ್ರವಾಸೋದ್ಯಮದ ಅವಕಾಶವಿರುವುದು ತಾಲೂಕಿನ ವಿವಿಧ ಭಾಗಗಳಲ್ಲಿ ಬೆಟ್ಟಗುಡ್ಡಗಳಿಂದ ಧುಮುಕುವ ಸುಂದರ ಜಲಪಾತಗಳಲ್ಲಿ. ಆದರೆ, ಇಂಥ ಅನೇಕ ಜಲರಾಶಿಗಳು ಜನರ ಕಣ್ಣಿನಿಂದ ದೂರವಾಗಿಯೇ ಉಳಿದಿವೆ. ಉದಾಹರಣೆಗೆ ಮಲಕರ್ಣಿ, ಮುಡಿಯೇ, ಕುವೇಶಿ, ಆತಗಾವ, ಧಾವನೆ ಮುಂತಾದ ನಿಸರ್ಗ ರಮಣೀಯ ತಾಣಗಳಲ್ಲಿರುವ ಜಲಪಾತಗಳು ಮೂಲಸೌಕರ್ಯಗಳ ಅಭಾವದಿಂದ ಪ್ರವಾಸೋದ್ಯಮದ ನಕ್ಷೆಯೊಳಗೆ ಸೇರ್ಪಡೆಯಾಗಿಯೇ ಇಲ್ಲ.

ಜೋಯಿಡಾದ ಜೀವನಾಡಿಯಾದ ಕಾಳಿಯ ಉಗಮ ಸ್ಥಾನವಾದ ಕುಶಾವಳಿ ಹಾಗೂ ಕಾನೇರಿ ನದಿಯ ಉಗಮ ಸ್ಥಾನ ಕುಂಡಲ-ಇವೆರಡೂ ಕೂಡ ಪರಿಸರ ಪ್ರವಾಸೋದ್ಯಮದ ದೃಷ್ಟಿಯಿಂದಷ್ಟೇ ಅಲ್ಲದೆ ಇತಿಹಾಸ, ಸಂಸ್ಕೃತಿ, ಜೀವ ವೈವಿಧ್ಯ, ಜನ ಜೀವನ ಮುಂತಾದ ಕ್ಷೇತ್ರಗಳಲ್ಲಿ ಆಸಕ್ತಿ ಹೊಂದಿರುವವರಿಗೂ ಅತ್ಯಂತ ಪ್ರಮುಖವಾದ ವಿಷಯ ಮೂಲಗಳು. ಮತ್ತದೇ ಮೂಲಸೌಕರ್ಯಗಳ ಅಭಾವ ಈ ಎರಡು ಸ್ಥಳಗಳನ್ನೂ ಕಾಡುತ್ತಿದೆ. ಅತ್ಯಂತ ಸಮೃದ್ಧ ಪ್ರಕೃತಿ ಬೀಡೊಂದು ಜಗತ್ತಿನ ಗಮನವನ್ನು ಸೆಳೆಯದಿರುವುದು ದುರಂತವೇ ಸರಿ.

ಜೋಯಿಡಾದಲ್ಲಿ ಪರಿಸರ ಪ್ರವಾಸೋದ್ಯಮವನ್ನು ಬೆಳೆಸುವಲ್ಲಿ ಸ್ಥಳೀಯ ಇಚ್ಛಾಶಕ್ತಿ ಎಷ್ಟು ಮುಖ್ಯವೋ ಮೂಲ ಬಂಡವಾಳವೂ ಅಷ್ಟೇ ಮುಖ್ಯ. ಜೋಯಿಡಾದ ಜನರು ಈ ಉದ್ಯಮದಲ್ಲಿ ಪಾಲುದಾರರಾಗಬೇಕಾದರೆ ಅವರಲ್ಲಿ ಅಷ್ಟೊಂದು ಹಣವನ್ನು ಹೊಂದಿಸುವ ಶಕ್ತಿ ಎಷ್ಟು ಮಂದಿಗಿದೆ ಎನ್ನುವುದೂ ಪ್ರಶ್ನೆಯಾಗಿದೆ. 

ಇತ್ತೀಚೆಗಷ್ಟೇ ಕಾಳಿನದಿಯಲ್ಲಿ ಸಾಹಸ ಜಲಕ್ರೀಡೆಯಾದ ವಾಟರ್ ರಾಫ್ಟಿಂಗ್ ನಡೆಸಲು ಆಹ್ವಾನಿಸಿದ್ದ ಟೆಂಡರ್‌ಅನ್ನು 52 ಲಕ್ಷ ರೂಪಾಯಿಗಳನ್ನು ನೀಡಿ ಈಗಾಗಲೇ ಸ್ಥಳೀಯ ರೆಸಾರ್ಟ್ ಒಂದರ ಮಾಲೀಕರು ಪಡೆದಿದ್ದಾರೆ. ಇಡೀ ದಕ್ಷಿಣ ಭಾರತದಲ್ಲೇ ಅತಿ ಉದ್ದದ ರಾಫ್ಟಿಂಗ್ ಪಥವೆಂದು ಪರಿಗಣಿಸಲ್ಪಟ್ಟಿರುವ ಈ ಸಾಹಸ ಕ್ರೀಡೆಯನ್ನು ಆಡಲಿಚ್ಛಿಸುವವರು ತೆರ ಬೇಕಾದ ಹಣದ ಮೊತ್ತವೂ ಹೆಚ್ಚಿದೆ. ಸಹಜವಾಗಿಯೇ ಇದೊಂದು ಹಣವಂತರ ವಿಹಾರ ಕೇಂದ್ರವಾಗುತ್ತದೆಯೇ ಹೊರತು ಸ್ಥಳೀಯ ಜನರಿಗಾಗಲಿ, ಬಹುತೇಕ ಮಧ್ಯಮ ವರ್ಗದವರಿಗಾಗಲಿ ಕೈಗೆಟಕುವಂಥದ್ದಲ್ಲ. ಒಂದರ್ಥದಲ್ಲಿ ಇದೊಂದು ವಿಷವರ್ತುಲ.

ಹಾಗಾದರೆ ಜೋಯಿಡಾದ ಸ್ಥಳೀಯ ಸಮುದಾಯಗಳಿಗೆ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಪ್ರವೇಶ ಸಾಧ್ಯವೇ ಇಲ್ಲವೆ? ಖಂಡಿತ ಇದೆ. ಇತ್ತೀಚಿನ ದಿನಗಳಲ್ಲಿ ಕೆಲ ಆಸಕ್ತ ಹಾಗೂ ಧೈರ್ಯಶಾಲಿ ಜೋಯಿಡಾ ನಿವಾಸಿಗಳು, ವಿಶೇಷವಾಗಿ ಯುವಜನರು, ಸಂಘಟನೆಯೊಂದನ್ನು ಹುಟ್ಟು ಹಾಕಿ ತಾಲೂಕಿನ ಕೆಲವು ಪ್ರಕೃತಿ ರಮ್ಯ ತಾಣಗಳಲ್ಲಿ ಸಾಂಪ್ರದಾಯಿಕ ಅರಣ್ಯ ನಿವಾಸಗಳ ಮಾದರಿಯಲ್ಲಿ ಪ್ರವಾಸಿಗರಿಗೆ ವಾಸಸ್ಥಾನಗಳನ್ನು ನಿರ್ಮಾಣ ಮಾಡಿದ್ದಾರೆ. ಇದರ ಜೊತೆಜೊತೆಗೆ ಅರಣ್ಯ ಚಾರಣ, ಜೋಯಿಡಾದ ಜೀವ ವೈವಿಧ್ಯದ ಪರಿಚಯ, ಸಾಂಪ್ರದಾಯಿಕ ಕಲೆಗಳ ಪ್ರದರ್ಶನ, ಅರಣ್ಯವಾಸಿ ಸಮುದಾಯಗಳ ವಿಶಿಷ್ಟ ಭೋಜನ-ಇವೇ ಮುಂತಾದ ಅನುಭವಗಳನ್ನೂ ಪ್ರವಾಸಿಗರಿಗೆ ಒದಗಿಸಲಾಗುತ್ತದೆ. ಇತರ ಊರುಗಳಿಂದ ರೈಲು ಅಥವಾ ಬಸ್ಸಿನ ಮೂಲಕ ಜೋಯಿಡಾಕ್ಕೆ ಬರುವ ಪ್ರವಾಸಿಗರಿಗೆ ವಾಹನದಲ್ಲಿ ಈ `ಹೋಮ್ ಸ್ಟೇ~ ಸ್ಥಳಗಳಿಗೆ ಕರೆತರುವ ಸೌಲಭ್ಯವನ್ನೂ ಈ ತಂಡದ ಸದಸ್ಯರು ಒದಗಿಸುತ್ತಾರೆ. ಇವರ ಈ ಪ್ರಯತ್ನದಿಂದ ಉತ್ತೇಜಿತರಾಗಿ ಇನ್ನಷ್ಟು ಮಂದಿ ಪರಿಸರ ಪ್ರವಾಸೋದ್ಯಮ ಕೇಂದ್ರಗಳನ್ನು ತೆರೆಯಲು ಮುಂದೆ ಬರುತ್ತಿರುವುದು ಜೋಯಿಡಾದಲ್ಲಿ ಉಂಟಾಗುತ್ತಿರುವುದು ಸಕಾರಾತ್ಮಕ ಬೆಳವಣಿಗೆ.

ಖಾಸಗಿ ಕಂಪೆನಿಗಳು ನಡೆಸುವ ರೆಸಾರ್ಟುಗಳಿಗೂ, ಸ್ಥಳೀಯ ನಿವಾಸಿಗಳು ಆರಂಭಿಸಿರುವ `ಹೋಮ್ ಸ್ಟೇ~ಗಳಿಗೂ ಒಂದು ಪ್ರಮುಖ ವ್ಯತ್ಯಾಸವಿದೆ. ಅದೇನೆಂದರೆ ಸ್ಥಳೀಯ ಜನರ ಭಾಗವಹಿಸುವಿಕೆ. ಸಾಂಪ್ರದಾಯಿಕ ಕಲಾ ಪ್ರದರ್ಶನಗಳನ್ನು ನೀಡುವುದು, ಅಡುಗೆ ತಯಾರಿ, ಕಥೆ ಹೇಳುವುದು-ಇವೇ ಮುಂತಾದ ಜವಾಬ್ದಾರಿಗಳನ್ನೆಲ್ಲ ನಿರ್ವಹಿಸುವವರು ಸ್ಥಳೀಯರೇ ಆಗಿರುವುದರಿಂದ ಅವರಿಗೆ ಆದಾಯ ಮೂಲವೂ ದೊರೆತಂತಾಯ್ತು, ತಮ್ಮ ಸಂಸ್ಕೃತಿಯ ರಕ್ಷಣೆಯ ಮಹತ್ವದ ಬಗ್ಗೆ ಅವರ ಬದ್ಧತೆ ಮತ್ತಷ್ಟು ಗಟ್ಟಿಯಾಯ್ತು.

ಬಹುಕಾಲದಿಂದ ಚಿಪ್ಪಿನಲ್ಲಿ ಅಡಗಿ ಕುಳಿತಿರುವ ಕರ್ನಾಟಕದ ಅತ್ಯಂತ ನಿಸರ್ಗ ರಮಣೀಯ ತಾಣಗಳಲ್ಲಿ ಒಂದಾದ ಜೋಯಿಡಾದ ಜನರಿಗೆ ತಮ್ಮ ಬದುಕಿನಲ್ಲಿ ಗುಣಮಟ್ಟದ ಬದಲಾವಣೆಯನ್ನು ತರಲು ಪರಿಸರ ಪ್ರವಾಸೋದ್ಯಮ ಒಂದು ಒಳ್ಳೆಯ ಅವಕಾಶ. ಇತ್ತೀಚಿನ ದಿನಗಳಲ್ಲಿ ಕೆಲವು ಅರಣ್ಯಾಧಿಕಾರಿಗಳು ಕೂಡ ತಾಲೂಕಿನ ಕೆಲವೆಡೆ ಪರಿಸರ ಅಭಿವೃದ್ಧಿ ಸಮಿತಿಗಳಿಗೆ ಅರಣ್ಯ ರಕ್ಷಣೆಯ ಜವಾಬ್ದಾರಿಯಷ್ಟೇ ಅಲ್ಲದೆ, ಅವರ ಸುತ್ತಮುತ್ತಲಿರುವ ಪ್ರವಾಸಿ ತಾಣಗಳಿಂದ ಉತ್ಪತ್ತಿಯಾಗುವ ಆದಾಯವನ್ನೂ ಈ ಪ್ರದೇಶಗಳ ಗ್ರಾಮಾಭಿವೃದ್ಧಿಗೆ ಬಳಸಿಕೊಳ್ಳಲು ಅವಕಾಶ ನೀಡಿದ್ದು, ಪೂರಕ ಮೂಲಸೌಕರ್ಯಗಳನ್ನು ಸೃಷ್ಟಿಸುವುದರಲ್ಲೂ ನೆರವಾಗಿದ್ದಾರೆ. ಇಂಥ ಅವಕಾಶಗಳನ್ನು ಸ್ಥಳೀಯರು ಜೋಯಿಡಾದ ವಿವಿಧ ಭಾಗಗಳಲ್ಲಿ ಬಳಸಿಕೊಂಡು ಪರಿಸರ ಪ್ರವಾಸೋದ್ಯಮವನ್ನು ತಮ್ಮ ಕೈಗೆತ್ತಿಕೊಳ್ಳುವಂತಾದರೆ ಜೋಯಿಡಾ ಅಭಿವೃದ್ಧಿಯ ಹಾದಿಯಲ್ಲಿ ಒಂದು ಹೊಸ ಹೆಜ್ಜೆಯಿಟ್ಟಂತಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT