ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರ್ಯಾಯ ಇಲ್ಲದ ಗೊಂದಲದಲ್ಲಿ ಮತದಾರ

Last Updated 1 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಭಾರತ ಎಂದೂ ಮರೆಯಲಾಗದ ಮೂವರು ಕ್ರಾಂತಿಕಾರಿಗಳ ಬಗ್ಗೆ ಭಾರತದ ಕೆಲವು ಸಾಮಾಜಿಕ ಕಾರ್ಯಕರ್ತರು ಹಿಂದಿ­ನಿಂದಲೂ ಪಾಕಿಸ್ತಾನದ ಗಮನಕ್ಕೆ ತರು­ತ್ತಲೇ ಬಂದಿದ್ದಾರೆ. ಭಗತ್‌ ಸಿಂಗ್‌, ರಾಜ­ಗುರು ಮತ್ತು ಸುಖದೇವ್‌ ಕಳೆದ ಶತಮಾನದ ಮೂವತ್ತರ ದಶಕದಲ್ಲಿ ಸ್ವಾತಂತ್ರ್ಯ ಹೋರಾಟ­ದಲ್ಲಿ ಗಲ್ಲು­ಗಂಬ ಏರಿದವರು. ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ಹೆಚ್ಚು ಪ್ರಖರ­ಗೊಳಿಸಿ­ದ­ವರು.

ಅವರನ್ನು ನೇಣುಗಂಬಕ್ಕೆ ಏರಿಸಿದ ಪ್ರದೇಶ ಈಗಿನ ಪಾಕಿಸ್ತಾನ­ದಲ್ಲಿದೆ. ಅವರ ತ್ಯಾಗವನ್ನು ನಾವು ಯಾವತ್ತೂ ನೆನಪಿಸಿ­ಕೊಳ್ಳ­ಬೇಕು ಎಂಬು­ದಾಗಿ ಭಾರತೀಯರ ವಲಯ ಪದೇ ಪದೇ ಮಾಡು­­ತ್ತಿದ್ದ ಒತ್ತಡಕ್ಕೆ ಪಾಕ್‌ ಸ್ಪಂದಿಸಿದೆ. ಮಾರ್ಚ್‌ 23ರಂದು ಲಾಹೋರ್‌­ನಲ್ಲಿ ಮೋಂಬತ್ತಿ ಹಿಡಿದ ನೂರಾರು ಮಂದಿ  ಮೆರ­    ವ­ಣಿ­­ಗೆ­­­­ಯಲ್ಲಿ ಸಾಗಿ ಭಗತ್‌ ಸಿಂಗ್‌ ಅವರನ್ನು ನೆನಪಿಸಿಕೊಂಡಿದ್ದಾರೆ. ಭಗತ್‌ ಸಿಂಗ್‌ ಅವರನ್ನು ಅವರ ಇಬ್ಬರು ಗೆಳೆಯರೊಂದಿಗೆ  ಗಲ್ಲಿಗೇರಿಸಿದ ಆ ದಿನದಂದು ಅವರ ತ್ಯಾಗವನ್ನು ಅಲ್ಲಿ ಸ್ಮರಿಸ­ಲಾ­ಯಿತು. ಅಂದು ಪಾಕಿಸ್ತಾನದ ಮಾಧ್ಯಮ ಕೂಡಾ ಆ ಘಟನೆಯ ಬಗ್ಗೆ ಬಹಳಷ್ಟು ವಿವರಗಳನ್ನು ನೀಡಿತ್ತು.

ಮುಸ್ಲಿಮೇತರರನ್ನು ಕಾಫಿರ್‌ ಎಂದೇ ಪರಿಗಣಿಸುವ ಅಲ್ಲಿನ ಜಮಾತ್‌ ಎ ಇಸ್ಲಾಮಿ ಸಂಘಟನೆಯ ಧೋರಣೆಯ ವಿರುದ್ಧದ ಧ್ವನಿ ಇದಾ­ಗಿತ್ತು ಎಂದರೆ ಅತಿಶಯೋಕ್ತಿ ಏನಲ್ಲ. ಮುಂದೊಂದು ದಿನ ಭಾರತ ಮತ್ತು ಪಾಕಿಸ್ತಾನ­ಗಳು ಒಗ್ಗೂಡಿ, ಭಗತ್‌ ಗಲ್ಲಿಗೇರಿದ ದಿನವನ್ನು ವ್ಯಾಪಕವಾಗಿ ಆಚರಿಸಿದರೆ ಅಚ್ಚರಿ ಏನಿಲ್ಲ. ಆ ಕ್ರಾಂತಿಕಾರಿಗಳು ಪ್ರತಿಪಾದಿಸಿದ ಮೌಲ್ಯಗಳ ಬಗ್ಗೆ ಹೊಸ ಪೀಳಿಗೆಯ ಮಂದಿ ಹೆಚ್ಚು ಆಸಕ್ತಿ ವಹಿಸಿ­ದರೂ ಆಶ್ಚರ್ಯವೆನಿಸಲಿಕ್ಕಿಲ್ಲ.

ಆದರೆ ಭಾರತದಲ್ಲಿ ಆ ದಿನ, ಭಗತ್‌ ಸಿಂಗ್‌ ತ್ಯಾಗವನ್ನು ಸ್ಮರಿಸಿಕೊಳ್ಳುವ ಕಾರ್ಯ ದೊಡ್ಡ ಮಟ್ಟ­ದಲ್ಲಿ ನಡೆಯಲೇ ಇಲ್ಲ. ಇಲ್ಲಿನ ಮಾಧ್ಯಮ­ಗಳಂತೂ ಈ ಬಗ್ಗೆ ಮೌನ ತಾಳಿದಂತಿತ್ತು. ಗಮನ ಸೆಳೆ­ಯುವಂತಹ ಯಾವುದೇ ಸಭೆ ಸಮಾರಂಭ­ಗಳೂ ಅಂದು ನಡೆಯಲಿಲ್ಲ. ಇವತ್ತು ಈ ದೇಶದ ಮೌಲ್ಯಗಳು ಬದಲಾಗುತ್ತಿವೆ. ಆದರೆ ಈ ದೇಶಕ್ಕೆ ಪ್ರಜಾಸತ್ತಾತ್ಮಕ ವ್ಯವಸ್ಥೆಯೊಂದನ್ನು ತಂದು­ಕೊಟ್ಟವರ ತ್ಯಾಗವನ್ನೂ ಮರೆತು ಹೋಗುವ ಮಟ್ಟಿಗೆ ನಾವು ಬದಲಾಗುತ್ತಿದ್ದೇವೆ ಎಂದರೆ ಅದು ವಿಷಾದನೀಯ ಸಂಗತಿಯಲ್ಲದೆ ಇನ್ನೇನು?
ಇನ್ನೊಂದು ಸಂಗತಿ ನನ್ನಲ್ಲಿ ಈಚೆಗೆ ಅಚ್ಚರಿ ಮೂಡಿ­ಸಿದೆ. ಒಗ್ಗಟ್ಟಿಗೆ ಹೆಸರಾಗಿದ್ದ ಬಿಜೆಪಿ­ಯೊಳಗೆ ಇವತ್ತು ಒಡಕಿನ ಧ್ವನಿ ಕೇಳಿಸುತ್ತಿದೆ.

ಹಿಂದೆ ಬಿಜೆಪಿ ನೇತೃತ್ವದ ಎನ್‌ಡಿಎ  ಸರ್ಕಾರ ಅಧಿಕಾರದಲ್ಲಿದ್ದಾಗ ಹಣಕಾಸು ಮತ್ತು ವಿದೇಶ ವ್ಯವಹಾರಗಳಂತಹ ಪ್ರಭಾವಿ ಖಾತೆಗಳ ಸಚಿವರಾಗಿದ್ದ ಜಸ್ವಂತ್‌ ಸಿಂಗ್‌ ಅವರಿಗೇ ಅವರು ಬಯಸಿದ ಲೋಕಸಭಾ ಕ್ಷೇತ್ರವೊಂದರ ಟಿಕೆಟ್‌ ನಿರಾಕರಿಸಲಾಗಿದೆ.  ಹೀಗಾಗಿ ಅವರು ದೃಶ್ಯ­ಮಾಧ್ಯಮ­ಗಳ ಕ್ಯಾಮೆರಾ ಎದುರು ಕಣ್ಣೀರಿಟ್ಟಿ­ದ್ದಾರೆ. ತಮ್ಮ ಈ ದುರ್ಗತಿಗೆ ‘ಹೊರಗಿನವರು’ ಕಾರಣ ಎನ್ನುತ್ತಾ ಯಾರದೇ ಹೆಸರು ಹೇಳದೆ ಕಿಡಿ ಕಾರಿದ್ದಾರೆ. ಅವರು ಧ್ವನಿ ಎತ್ತಿದ್ದು ರಾಷ್ಟ್ರೀಯ  ಸ್ವಯಂ ಸೇವಕ ಸಂಘದ ವಿರುದ್ಧವೇ  ಎಂಬುದು ಬಹಿರಂಗ ಸತ್ಯ. ಹಿಂದೆಲ್ಲಾ ತೆರೆಯ ಮರೆಯಲ್ಲಿಯೇ ಇರುತ್ತಿದ್ದ ಆರ್‌ಎಸ್‌ಎಸ್‌ ಸಂಘಟನೆಯು ಬಿಜೆಪಿ ಮೂಲಕ ತನ್ನ ಕಾರ್ಯ ಸಾಧನೆ ಮಾಡುತ್ತಿತ್ತು. ಆದರೆ ಈಚೆಗೆ ಅದು ನೇರವಾಗಿಯೇ ರಾಜಕಾರಣದಲ್ಲಿ ಕೈಯಾಡಿ­ಸುತ್ತಿದೆ ಎನ್ನುವುದರ ಬಗ್ಗೆ ಜಸ್ವಂತ್‌  ಧ್ವನಿ ಎತ್ತಿದ್ದರು.

ಅವಕಾಶವಾದಿ ರಾಜಕಾರಣದ ಏಳು­ಬೀಳು­ಗಳ ನಡುವೆ ಬಿಜೆಪಿಯು ತನ್ನ ಸಂಘಟನೆಯ ಮೂಲದ್ರವ್ಯವೇ ಆದ ಹಿಂದುತ್ವದ ಬಗ್ಗೆಯೂ ರಾಜಿ ಮಾಡಿಕೊಂಡಿರುವ ಅನುಮಾನ ಆರ್‌ಎಸ್‌­ಎಸ್‌ ಮುಖಂಡರನ್ನು ಕಾಡಿರಬೇಕು. ಹೀಗಾಗಿಯೇ ಬಿಜೆಪಿಯ ಚುನಾವಣಾ ಸಮಿತಿ ಸಭೆಯಲ್ಲಿ ಸ್ವತಃ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಉಪಸ್ಥಿತರಿದ್ದರು. ಬಿಜೆಪಿ ಅಭ್ಯರ್ಥಿಗಳ ಆಯ್ಕೆಯಲ್ಲಿ ಈ ಸಲ ಅವರ ನೇರ ಕೈವಾಡವಿದೆ.

ಗುಜರಾತ್‌ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ವಿಚಾರಧಾರೆ ಆರ್‌ಎಸ್‌ಎಸ್‌ ಮೌಲ್ಯ­ಗಳ ಚೌಕಟ್ಟಿನ ಒಳಗೆ ಬಹಳ ಚೆನ್ನಾಗಿ ಹೊಂದಿ­ಕೊಳ್ಳುತ್ತದೆ. 2002ರಲ್ಲಿ ಗುಜರಾತ್‌ನಲ್ಲಿ ನಡೆದ ಮುಸ್ಲಿಮರ ಮಾರಣಹೋಮದ ಬಗ್ಗೆ  ಕ್ಷಮೆ ಯಾಚಿಸಲು ಮೋದಿ ಇವತ್ತಿಗೂ ಸಿದ್ಧರಿಲ್ಲ. ಮೋದಿ ಬಹಳ ಹೆಮ್ಮೆಯಿಂದ ‘ಹಿಂದೂ ರಾಷ್ಟ್ರೀಯ­­ವಾದ’ದ ಬಗ್ಗೆ ಮಾತ­ನಾಡು­ತ್ತಾ­ರೆಯೇ ಹೊರತು, ಭಾರತೀಯ ರಾಷ್ಟ್ರೀಯ­ವಾದದ ಬಗ್ಗೆ ಅಲ್ಲ. ಅಭಿವೃದ್ಧಿ ಬಗ್ಗೆ ಮೋದಿ ಅವರು ಹೇಳುತ್ತಿರುವುದೆಲ್ಲವೂ ಅವರ ರಾಜ್ಯಕ್ಕೆ ಸಂಬಂಧಿಸಿದ ಸಂಗತಿಯೇ ಆಗಿದೆ. 

ಪ್ರಸಕ್ತ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿ­ದಂತೆ ಹೇಳುವುದಿದ್ದರೆ ಇಲ್ಲಿ ಮೋದಿ ಅಲೆ ಏನೂ ಇದ್ದಂತಿಲ್ಲ. ಆದರೆ ಜನರು ಕಾಂಗ್ರೆಸ್‌ ಆಡಳಿತ­ದಿಂದ ರೋಸಿ ಹೋಗಿರುವುದರಿಂದ ಬದ­ಲಾ­ವ­ಣೆ­­­ಯನ್ನು ಬಯಸುತ್ತಿದ್ದಾರೆ. ದುರಾಡಳಿತ, ಹತ್ತು ಹಲವು ಹಗರಣಗಳಲ್ಲಿ ಕಾಂಗ್ರೆಸ್‌ ಮುಳು­ಗಿದ್ದು ಎಲ್ಲರಿಗೂ ಗೊತ್ತಿರುವಂತದ್ದು ತಾನೆ. ಅದ­ಕ್ಕೊಂದು ಪರ್ಯಾಯದ ನಿರೀಕ್ಷೆ ಜನರಲ್ಲಿ­ರು­ವುದು ಸಹಜ. ಆದರೆ ಬಿಜೆಪಿ, ಜನರ ಬಯಕೆಗೆ ತಕ್ಕ ಪರ್ಯಾಯವೇನಲ್ಲ. ಈ ಪಕ್ಷಕ್ಕೂ ಹಿಂದೆ ಅಧಿಕಾರ ಕೈಗೆಟುಕಿದ್ದಾಗ ಹಗರಣಗಳಲ್ಲಿ ಮುಳುಗಿದ್ದನ್ನು ಮರೆಯುವಂತಿಲ್ಲ.

ಹಿಂದೆ ಇಂದಿರಾ ಗಾಂಧಿ ಅವರು ಗರೀಬಿ ಹಟಾವೊದಂತಹ ಘೋಷಣೆಯನ್ನು ಮಾಡಿ­ದ್ದರು. ಅದೇ ಆಗಿನ ಚುನಾವಣೆಯ ಮುಖ್ಯ ಘೋಷಾ­­­ವಾಕ್ಯ ಆಗಿತ್ತು. ಅಂತಹ ಇಂದಿರಾ ಅವರೇ ತುರ್ತುಪರಿಸ್ಥಿತಿಯನ್ನು ಹೇರಿ ಸಂವಿಧಾನ­ವನ್ನೇ ಬದಿಗೆ ಸರಿಸಿದ್ದನ್ನು ಮರೆಯುವುದುಂಟೆ. ಭಾರತ­ದಲ್ಲಿ ಒಕ್ಕೂಟ ವ್ಯವಸ್ಥೆ ಇದ್ದು, ಯಾವುದೇ ಕಾರಣಕ್ಕೂ ಅಧ್ಯಕ್ಷೀಯ ಪದ್ಧತಿಗೆ ಅವ­ಕಾಶವೇ ಇಲ್ಲ. ಆದರೂ ಇವತ್ತು ಬಹಳ ಮಂದಿ ರಾಷ್ಟ್ರೀಯ ಮಟ್ಟದಲ್ಲಿ ಪ್ರಬಲ ನಾಯಕ­ನೊ­ಬ್ಬನ ನಿರೀಕ್ಷೆ ಮಾಡುತ್ತಿರುವುದೂ ಇದೆ.

ಪ್ರಸಕ್ತ ಲೋಕಸಭಾ ಚುನಾವಣೆಯ ಆಗು­ಹೋಗು­ಗ­ಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ನನಗೆ ಈ ಚುನಾವಣೆಯು ಭ್ರಷ್ಟಾಚಾರ ಮತ್ತು ಕೋಮುವಾದಗಳ ನಡುವಣ ಸಂಘರ್ಷದಂತೆ ಕಂಡು ಬರುತ್ತಿದೆ. ಇದೊಂದು ದುರದೃಷ್ಟಕರ ಸಂಗತಿಯೇ ಆಗಿದೆ. ಅಭ್ಯರ್ಥಿಯೊಬ್ಬ ಭ್ರಷ್ಟ ಅಥವಾ ಕೋಮುವಾದಿಯಾದರೆ ಆತನನ್ನು ಒಪ್ಪಿ­ಕೊಳ್ಳುವುದಾದರೂ ಹೇಗೆ? ಇಂತಹ ಸಂದರ್ಭ­­ದಲ್ಲಿ  ಭ್ರಷ್ಟರು ಮತ್ತು ಕೋಮು­ವಾದಿ­ಗಳು ತಮ್ಮ ಪಾಪಗಳನ್ನು ಮುಚ್ಚಿಟ್ಟುಕೊಳ್ಳುವ ನಿಟ್ಟಿನಲ್ಲಿ ಆಕರ್ಷಕ ಮತ್ತು ಜನಪ್ರಿಯ ಘೋಷಣೆ­­ಗಳ ಮುಖವಾಡ ಧರಿಸುತ್ತಾರೆ ಎನ್ನು­ವುದೂ ನಿಜ. ಇದಕ್ಕೆ ಹಿಂದಿನ ದಶಕಗಳಲ್ಲೂ ನಿದರ್ಶನಗಳು ಇವೆ.

ಕಾಂಗ್ರೆಸ್‌ ಮತ್ತು ಬಿಜೆಪಿ ಈಗ ಕಣದಲ್ಲಿರುವ ಪ್ರಬಲ ರಾಜಕೀಯ ಪಕ್ಷಗಳು. ಇವೆರಡೂ ಕಳಂಕಿತ ಮತ್ತು ಉಗ್ರ ಪ್ರತಿಪಾದಕರನ್ನೇ ಅಭ್ಯ ರ್ಥಿಗಳಾಗಿ ಕಣ­ಕ್ಕಿ­ಳಿಸಿವೆ. ಸುಮಾರು ಶೇಕಡಾ 30ರಷ್ಟು ಅಭ್ಯರ್ಥಿ­ಗಳು ಕ್ರಿಮಿನಲ್‌ ಹಿನ್ನೆಲೆ ಯವರೇ ಆಗಿ­ದ್ದಾರೆ. ಜಾತ್ಯತೀತ ವಿಚಾರ ಧಾರೆಯನ್ನು ಹೊಂದಿರುವ ಕಾಂಗ್ರೆಸ್‌ ಪಕ್ಷವನ್ನೇ ನಾವು ಇಲ್ಲಿ ಹೆಚ್ಚು ಟೀಕಿಸ­ಬೇಕಾಗುತ್ತದೆ. ಅದು ತನ್ನ ವಿಚಾರಕ್ಕೆ ಪೂರಕ­ವಾಗಿ ಹೆಜ್ಜೆ ಇಡುತ್ತಿದೆಯೇ ಎಂಬ ಪ್ರಶ್ನೆಯೂ ಕಾಡುತ್ತದೆ. ಬಿಜೆಪಿ, ಹಿಂದೂ ವಿಚಾರಧಾರೆಯ ಮೂಲಕ ಅಧಿಕಾರ ಹಿಡಿಯುವ ಹೆಗ್ಗುರಿ ಹೊಂದಿ­ರುವುದರಿಂದ ಅದು ಸಹಜವಾಗಿಯೇ ಸಮಾಜ ವನ್ನು ವಿಭಾಗಿಸಿಯೇ ನೋಡುತ್ತದೆ.  ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು,  ‘ಬಿಜೆಪಿ ವಿಷದ ಬೀಜಗಳನ್ನು ಬಿತ್ತುತ್ತಿದೆ’ ಎಂದಿರುವುದು ಅರ್ಥಪೂರ್ಣವಾಗಿದೆ.

ಜನನಾಯಕ ಎಂದು ಬಿಂಬಿಸಲಾಗುತ್ತಿರುವ ರಾಹುಲ್‌ ಗಾಂಧಿ  ಈಗ ಕಾಂಗ್ರೆಸ್‌ ಪಕ್ಷದ ನೇತೃತ್ವ ವಹಿಸಿದ್ದಾರೆ. ಅವರು ಜನಾನುರಾಗಿ ಎನ್ನ­­ಲಾಗುತ್ತದೆ. ಆದರೆ ಕಾಂಗ್ರೆಸ್ ಆಡಳಿತಾ­ವಧಿ­ಯಲ್ಲಿ ಬಹಳಷ್ಟು ಕಡೆ ಕೋಮುಗಲಭೆಗಳು ನಡೆದಿವೆ­ಯಲ್ಲಾ, ಅದೆಷ್ಟೋ ಹಗರಣಗಳು ದೊಡ್ಡ ಸುದ್ದಿಯಾಗಿವೆಯಲ್ಲಾ. ಚುನಾವಣೆ ನಂತರ ಕಾಂಗ್ರೆಸ್ಸೇತರ ಸರ್ಕಾರವೇನಾದರೂ ಅಧಿಕಾರದ ಗದ್ದುಗೆ ಏರಿದರೆ ಯುಪಿಎ ಸರ್ಕಾರದ ಹಲವರ ಮೇಲೆ ತನಿಖೆ ನಡೆ­ಯಲಿರುವುದಂತೂ ನಿಜ.

ಇಂತಹ ಎಲ್ಲಾ ಬೆಳವಣಿಗೆಗಳ ನಡುವೆ ಆಮ್‌ ಆದ್ಮಿ ಪಕ್ಷದ (ಎಎಪಿ) ಹುಟ್ಟು ಮತ್ತು ಸದ್ದು ಮಹತ್ವಪೂರ್ಣ ಎನಿಸುತ್ತದೆ. ಇದು ಕಾಂಗ್ರೆಸ್‌ ಮತ್ತು ಬಿಜೆಪಿಗಳಿಗೆ ಪರ್ಯಾಯ­ವಾಗಿ ಎದ್ದು ನಿಂತಿದೆ. ಆದರೆ ಈ ಪಕ್ಷಕ್ಕೆ ಸ್ಪಷ್ಟ ವಿಚಾರಧಾರೆಯ ಕೊರತೆ ಕಾಣುತ್ತಿದೆ. ಅರವಿಂದ ಕೇಜ್ರಿವಾಲ್‌ ಅವರನ್ನಷ್ಟೇ ಕೇಂದ್ರ­ವಾಗಿ­ರುವ ಚಟುವಟಿಕೆಯಾಗಿ ಕಂಡು ಬರುತ್ತಿದೆ. ಇದೇ ಪಕ್ಷದ ಪ್ರಮುಖ ದೌರ್ಬಲ್ಯ.

ಇಂತಹ ಸಂದಿಗ್ಧದಲ್ಲಿ ಸಾಮಾನ್ಯ ಮತದಾರ­ನಿಗೆ ಇನ್ನಿಲ್ಲದ ಗೊಂದಲ ಕಾಡತೊಡಗಿದೆ. ‘ಯಾರನ್ನು ಆಯ್ಕೆ ಮಾಡುವುದು’ ಎಂಬ ಗೊಂದಲ­ದಲ್ಲಿ ಮತದಾರ ಇದ್ದಾನೆ. ಮೋದಿ ಅವರಲ್ಲಿ ನಿರಂಕುಶ ವ್ಯವಸ್ಥೆಯ ಲಕ್ಷಣಗಳು ಕಾಣಿಸುತ್ತವೆ. ಅವರು ಹೇಳುತ್ತಿರುವ ಅಭಿವೃದ್ಧಿ­ಶೀಲ ಆಡಳಿತವು ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ಕಡಿಮೆ ಒತ್ತು ನೀಡುವಂತೆ ಕಂಡು ಬರುತ್ತದೆ. ಅಧಿಕಾರ ಕೇಂದ್ರೀಕರಣಕ್ಕೇ ಹೆಚ್ಚು ಮಹತ್ವ ನೀಡುವ ಸಾಧ್ಯತೆಗಳೂ ಇಲ್ಲದಿಲ್ಲ.

ರಾಹುಲ್‌ ಗಾಂಧಿ ಬಗ್ಗೆ ಹೇಳು­ವು­ದಿದ್ದರೆ ಅವರು ದಿನದಿಂದ ದಿನಕ್ಕೆ ಸುಧಾ­ರಿ­ಸುತ್ತಿದ್ದಾರೆ, ನಿಜ. ಆದರೆ ದೇಶದ ಆಡಳಿತ ಕೀಲಿಕೈ ಪಡೆಯುವಷ್ಟು ಅವರು ಸಮರ್ಥರು ಅಂಥ ನನಗಂತೂ ಅನ್ನಿಸುತ್ತಿಲ್ಲ. ಇಂತಹ ದಟ್ಟ ಅನು­ಭವ­ಗಳು ಅವರನ್ನು ಒಬ್ಬ ಉತ್ತಮ ನಾಯಕ­­ನನ್ನಾಗಿ ರೂಪಿಸಲು ಸಾಧ್ಯವಿದೆ. 2019ರ ಸಾರ್ವತ್ರಿಕ ಚುನಾವಣೆ ವೇಳೆಗೆ ರಾಹುಲ್‌ ಅವರು ಪರಿಪಕ್ವ ನಾಯಕನಾಗಿ ಮೂಡಿ ಬರುವ ಸಾಧ್ಯತೆಗಳಿವೆ. ರಾಹುಲ್‌ ಅವರ­ಲ್ಲಿಯೂ ಸ್ಪಷ್ಟ ವಿಚಾರಧಾರೆಯ ಕೊರತೆ ಎದ್ದು ಕಾಣುತ್ತಿದೆ. ವಿದೇಶಾಂಗ ವ್ಯವಹಾರ ನೀತಿಯಲ್ಲಿಯೂ ಅವರಿಗೆ ಉತ್ತಮ ತಿಳಿವಳಿಕೆ ಇದ್ದಂತಿಲ್ಲ.

ದಕ್ಷ ಆಡಳಿತ ಮತ್ತು ಉತ್ತಮ ನಾಯಕತ್ವದ ಕೊರತೆ ಇವತ್ತು ದೇಶವನ್ನು ಕಾಡುತ್ತಿದೆ. ಅದೇ ಇವತ್ತಿನ ಬಲು ದೊಡ್ಡ ಸವಾಲೂ ಆಗಿದೆ. ಕಾಂಗ್ರೆಸ್‌ನಲ್ಲಂತೂ ಇವೆರಡರ ಕೊರತೆ ಇದೆ.  ಕಾಂಗ್ರೆಸ್‌ ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಉತ್ತಮ ಆಡಳಿತ ನೀಡುವ ಅವಕಾಶವನ್ನು ವ್ಯರ್ಥ ಮಾಡಿಕೊಂಡಿದೆ. ಎಪ್ಪತ್ತರ ದಶಕದ­ವ­ರೆಗೆ ಕಾಂಗ್ರೆಸ್‌ ನೀಡಿದ್ದ ನಾಯಕತ್ವವಿದೆಯಲ್ಲಾ, ಅಂತಹ­ದರಿಂದ ಇವತ್ತಿನ ಕಾಂಗ್ರೆಸ್‌ ಬಲು ದೂರ­­ದಲ್ಲಿದೆ. ಬಹುಶಃ ಸ್ವಾತಂತ್ರ್ಯ ಸಂಗ್ರಾಮ­ದಲ್ಲಿ ಪಾಲ್ಗೊಂಡ ಧೀಮಂತರು ಕಾಂಗ್ರೆಸ್‌ ಆಡಳಿತ­ದಲ್ಲಿ ಭಾಗಿಯಾಗಿದ್ದರಿಂದ ಆ ಪಕ್ಷ ಅಂದು ಉತ್ತಮ ನಾಯಕತ್ವದ ಪ್ರಭೆಯಿಂದ ಬೆಳ­­­ಗಲು ಸಾಧ್ಯವಾಯಿತೆನಿಸುತ್ತದೆ. ಅಂದು ಅವರು ಮೌಲ್ಯಗಳಿಗೆ ಬದ್ಧವಾಗಿದ್ದರು. ಇವತ್ತಿನ ಕಾಂಗ್ರೆಸ್‌ ಮುಖಂಡರು ಹೇಗಾದರೂ ಸರಿಯೇ, ಅಧಿಕಾರ ಪಡೆಯಬೇಕು ಎಂಬ ಗುರಿಯನ್ನಷ್ಟೇ ಹೊಂದಿರುವುದು ಎದ್ದು ಕಾಣುತ್ತಿದೆ. ಪ್ರಸಕ್ತ ಕಾಂಗ್ರೆಸ್‌, ಬಿಜೆಪಿಗಳ ಅಬ್ಬರದಲ್ಲಿ ಮತದಾರನ ಗೊಂದಲ ಮುಂದುವರಿದಿದೆ.

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT