ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರ್ಯಾಯ ರಾಜಕೀಯ ಶಕ್ತಿ:‘ಚತುರ್ಥರಂಗಿ’

ಅಕ್ಷರ ಗಾತ್ರ

ಸಂಪಾದಕರಿಂದ ದೂರವಾಣಿ ಕರೆ ಬರುತ್ತಿದ್ದಂತೆಯೇ ಪೆಕರ ಗಾಬರಿಯಾದ. ಇನ್ನೂ ಚುನಾವಣೆ ವೇಳಾಪಟ್ಟಿ ಪ್ರಕಟವಾಗಿಯೇ ಇಲ್ಲ. ಅಷ್ಟರಲ್ಲಿ ಇನ್ನೆಲ್ಲಿ ಹೋಗಬೇಕೋ ಏನ್ಕತೆಯೋ? ವಿಪರೀತ ರಣಬಿಸಿಲು ಬೇರೆ... ಎಂದೆಲ್ಲಾ ಪೆಕರನ ಮನಸ್ಸು ಹುಚ್‌ವೆಂಕಟ್ ತರಹ ಹರಿದಾಡಿತು.

‘ಅಲ್ರೀ, ಪೆಕರ ಅವರೇ, ಎಷ್ಟೊಂದು ರಾಜಕೀಯ ಚಟುವಟಿಕೆ ನಡೀತಾ ಇದೆ, ನಿಮಗೆ ಗೊತ್ತೇ ಆಗಲ್ಲವೇ? ಹನ್ನೊಂದು ಪಕ್ಷಗಳು ಒಂದೇ ವೇದಿಕೆಗೆ ಬಂದು ಪರ್ಯಾಯ ರಾಜಕೀಯ ಶಕ್ತಿ ಸ್ಥಾಪನೆಗೆ ಪ್ರಯತ್ನ ನಡೀತಿದೆ. ತೃತೀಯ ರಂಗದ ಚಟುವಟಿಕೆ ಬಗ್ಗೆ ಸ್ವಲ್ಪ ಬರೀಬಾರ್‍ದಾ? ಅವರೆಲ್ಲಾ ನಮ್ ರಾಷ್ಟ್ರದ ರಾಜಕೀಯ ಕ್ಷೇತ್ರದ ಅಪೂರ್ವ­ ಮುತ್ತು­ಗಳಲ್ಲವೇ? ನಾಯಕರುಗಳನ್ನೆಲ್ಲಾ ಇಂಟರ್‌ವ್ಯೂ ಮಾಡಿ, ಏನಂತಾರೆ ಕೇಳಿ’ ಎಂದು ಸಂಪಾದಕರು ಪೆಕರನನ್ನು ಬಡಿದೆಬ್ಬಿಸಿದರು.

‘ತೃತೀಯ ರಂಗದಿಂದ ಮೂರನೇ ದರ್ಜೆ ರಾಷ್ಟ್ರ ನಿರ್ಮಾಣ ಮಾತ್ರ ಸಾಧ್ಯ, ಅವರಿಂದ ಏನಾಗುತ್ತೆ ಅಂತ ನಮೋ ಅವರೇ ಹೇಳಿಬಿಟ್ಟಿದ್ದಾರಲ್ಲಾ, ಇನ್ನೇನ್ ಆಗಲು ಸಾಧ್ಯ ಸಾರ್’ ಎಂದು ಪೆಕರ ಉತ್ತರಿಸಿದ.

‘ಅವರು ಹೇಳಲಿ ಬಿಡ್ರಿ, ಕಮಲ ಪಕ್ಷದವರು ಆ ರೀತಿ ಹೇಳದೆ ಬೇರೆ ರೀತಿ ಹೇಳಲು ಸಾಧ್ಯವೇ? ನೀವು ಇದನ್ನು ಗಂಭೀರವಾಗಿ ತೆಗೆದುಕೊಳ್ಳಿ. ಹನ್ನೊಂದು ಪಕ್ಷಗಳು ಒಂದುಗೂಡಿವೆ ಅಂದ್ರೆ ಅದು ಸಾಮಾನ್ಯ ಸಂಗತಿಯಲ್ಲ’ ಎಂದು ಸಂಪಾದಕರು ಎಚ್ಚರಿಸಿದರು.

ಆಸೆಯೇ ತೃತೀಯರಂಗಕ್ಕೆ ಮೂಲ
ಪಿ.ಎಂ. ಆಗಲು ಹೂಡಿದ್ದಾರೆ ಜಾಲ
ನಿದ್ದೆಯಲ್ಲೂ ಬೀಳುತಿದೆ ಕನಸು
ಯಾರಿಗೂ ಪರಿವೆ ಇಲ್ಲ ಅವರ ವಯಸ್ಸು

ಪೆಕರ ಸ್ವಲ್ಪ ಸೀರಿಯಸ್ ಆದ. ಹನ್ನೊಂದೂ ಪಕ್ಷಗಳ ಲೀಡರ್‌ಗಳನ್ನು ಭೇಟಿಯಾಗಿ, ಸಂದರ್ಶನ ಮಾಡಿ, ವರದಿ ಕಳು­ಹಿ­ಸಬೇಕು ಎಂದು ನಿರ್ಧರಿಸಿದ. ಎಡಪಕ್ಷಗಳ ಲೀಡರ್‌­ಗಳಿದ್ದಾರೆ. ಆರ್‌ಜೆಡಿ, ಜೆಡಿಯು, ಆರ್‌ಎಸ್‌ಪಿ,  ಎಜಿಪಿ, ಬಿಜೆಡಿ ಹೀಗೆ ಪಕ್ಷಗಳ, ನಾಯಕರುಗಳ ಹೆಸರುಗಳು ಪೆಕರನ ಕಣ್ಮುಂದೆ ಓಡಾಡುತ್ತಿದ್ದಂತೆಯೇ, ಹೆಗಲ ಮೇಲೆ ಶಾಲು ಹೊದ್ದು, ನೆಲ ನೋಡುತ್ತಾ ನಮ್ಮ ದೊಡ್ಡಗೌಡರು ತೃತೀಯ­ರಂಗದ ಸಭೆಯಿಂದ ಹೊರಬಂದರು. ಪೆಕರ ಸರಸರನೆ ಓಡಿ, ಪ್ರತಿಕ್ರಿಯೆಗಾಗಿ ಕಾದು ನಿಂತ.

ದೊಡ್ಡಗೌಡರು ಪೆಕರನನ್ನು ನೋಡಿ ಸಿಡಿಮಿಡಿಗೊಂಡರು. ‘ಜಾವ್...ಜಾವ್...ಗೆಟ್‌ಔಟ್ ನೋ ಪ್ರೆಸ್, ಐ ಹೇಟ್’ ಎಂದು ಹಿಂದಿ ಇಂಗ್ಲಿಷ್‌ನಲ್ಲಿ ಗದರಿದರು.

‘ಸಾರ್, ನಾನು ಬೆಂಗಳೂರು ಕನ್ನಡಿಗ ಸಾರ್. ನಾರ್ಥ್ ಇಂಡಿಯನ್ ಪ್ರೆಸ್ ಅಂತ ತಿಳ್ಕೊಂಡು ಹಿಂದಿಯಲ್ಲಿ ಬೈಬೇಡಿ, ನೀವು ತೃತೀಯರಂಗ ಲೀಡರ್ ಅಂತೆ, ಅದ್ಕೆ ಬಂದೆ’ ಎಂದು ಪೆಕರ ವಿವರಿಸಿದ.

‘ಓಹೋ ನೀವಾ?! ರಾಷ್ಟ್ರ ರಾಜಕಾರಣದಲ್ಲಿ ಇಂದು ಕೇವಲ ಇಬ್ಬರು ನಾಯಕರ ಬಗ್ಗೆಯಷ್ಟೇ ಚರ್ಚೆ ಆಗುತ್ತಿದೆ. ಇದು ಸರಿಯಲ್ಲ. ಇಷ್ಟು ಕೆಳಮಟ್ಟದ ಚರ್ಚೆಯನ್ನು ನನ್ನ ರಾಜಕೀಯ ಜೀವನದಲ್ಲೇ ನೋಡಿಲ್ಲ. ಅದಕ್ಕೆ ನನಗೆ ಪ್ರೆಸ್ ಅಂದ್ರೆ...ಐ ಹೇಟ್...’ ದೊಡ್ಡಗೌಡರು ಮುಖ ಸಿಂಡರಿಸಿದರು.

‘ಯುವಕರು ರಾಜಕೀಯಕ್ಕೆ ಬರಬೇಕು ಅಂತ ಆಮ್ ಆದ್ಮಿಯವರು, ಕೈಪಾರ್ಟಿಗಳವರೂ ಹೇಳ್ತಾ ಇದ್ದಾರೆ. ಅದಕ್ಕೇ ಅಲ್ಲವೇ ಸಿಂಗ್‌ಜೀಗೆ ಬೈ, ಯುವರಾಜರಿಗೆ ಜೈ ಅಂತಿರೋದು. ಅಡ್ವಾಣಿಜೀಗೆ ಬೈ, ನಮೋಗೆ ಜೈ ಅಂತಿರೋದು. ನೀವು ಇನ್ನೂ ಎಷ್ಟು ಶತಮಾನ ರಾಜಕೀಯದಲ್ಲಿ ವಿರಾಜಮಾನ­ರಾಗಿರ­ಬೇಕು ಅಂತಿದ್ದೀರಾ ಸಾರ್?’ ಪೆಕರ ಧೈರ್ಯವಾಗಿ ಕೇಳಿಯೇ ಬಿಟ್ಟ.

‘ನೋಡಪ್ಪಾ, ಒಂದ್ ತಿಳ್ಕೋ, ನನ್ನ ರಾಜಕೀಯ ಅನುಭವದಲ್ಲಿನ ಕ್ವಾಟ್ರು ಅನುಭವವೂ ನಿನಗಾಗಿಲ್ಲ. ಮಲಗಿ­ರೋದಕ್ಕಿಂತ ಎದ್ದಿರೋದು ಲೇಸು, ಕೂತ್ಕೋಂಡಿರೋದಕ್ಕಿಂತ ಕೂಲಿ ಮಾಡೋದು ಲೇಸು, ಇದು ನಿನಗೆ ಗೊತ್ತಿಲ್ಲವಾ?’

‘ಎಲ್ಲಾ ಪಕ್ಷದಲ್ಲೂ ವಯಸ್ಸಾದವರಿಗೆ ಟಿಕೆಟ್ ಕೊಡಬಾರ್ದು ಅಂತಿದ್ದಾರೆ. ನಿಮ್ಮ ಪಕ್ಷಕ್ಕೆ ಸಿಗೋದು ಒಂದೇ ಸೀಟು. ಒಂದ್ ಎಂ.ಪಿ. ಇಟ್ಕೊಂಡು ಪಿ.ಎಮ್. ಆಗೋದಿ­ಕ್ಕಾಗುತ್ತಾ ಸಾರ್?’

‘ಸುಮ್‌ಸುಮ್ನೆ ಏನೇನೋ ಮಾತನಾಡಬೇಡಿ, ರಪ್ಪ, ಧರ್ಮರಾಯಸಿಂಗ್, ಖರ್ಗೇಜಿ, ಶಾಶಿರಪ್ಪ, ಪೂಜಾರಿ, ಮೊಯ್ಲಿ, ಇವರೆಲ್ಲಾ ಹುಡುಗರಾ? ಅವರೆಲ್ಲಾ ಚುನಾವಣಾ ಕಣಕ್ಕೆ ಇಳಿಯಬಹುದು, ದೊಡ್ಡೇಗೌಡ ಸ್ಪರ್ಧಿಸಿದರೆ ತಪ್ಪಾ? ಇದೆಲ್ಲಾ ಪತ್ರಿಕೆಯವರ ಷಡ್ಯಂತ್ರ. ನಾನು ಯಾರು ಅಂತ ಮುಂದೆ ತೋರಿಸ್ತೀನಿ. ನಾನಿಲ್ಲದೆ ಯಾರು ಪಿ.ಎಂ. ಆಗ್ತಾರೆ ನೋಡ್ತೀನಿ.’

‘ಮುಂದೆ ಏನು ತೋರಿಸ್ತೀರಿ ಸಾರ್?! ತೃತೀಯ ರಂಗ ರಚಿಸುವುದಾದರೆ ರಂಗದ ಪಾಲುದಾರ ಪಕ್ಷಗಳ ಪೈಕಿ ಅತಿ ಹೆಚ್ಚು ಸ್ಥಾನ ಪಡೆದ ಪಕ್ಷದ ನಾಯಕ ಪ್ರಧಾನಿ ಆಗ್ತಾನೆ ಎನ್ನುವ ಮೂಲಕ ಮುಲಾಯಂ ಸಾಹೇಬರು ಪಿ.ಎಂ. ಆಗುವುದಕ್ಕೆ ರೆಡಿ ಆಗ್ತಾ ಇದ್ದಾರೆ. ನಿಮಗೆಲ್ಲಿದೆ ಛಾನ್ಸ್?!’ ಪೆಕರ, ಪೆಕರುಪೆಕರಾಗಿ ಪ್ರಶ್ನಿಸಿದ.

‘ನಿಮ್ಮತ್ರ ಮಾತನಾಡೋಕೆ ನನಗಿಷ್ಟವಿಲ್ಲ. ವಿಶ್ವಸಂಸ್ಥೆ­ಯವರೇ ನಾನು ರಾಗಿಮುದ್ದೆ ನುಂಗಿದ್ದನ್ನು ನೋಡಿ ಬೆಚ್ಚಿ­ಬಿದ್ದಿದ್ದಾರೆ. ಈಗ ನಾನು ಕೇರಳದ ವಾಮಾಚಾರ್ ಅವರನ್ನು ಭೇಟಿಯಾಗುವ ಕಾರ್ಯಕ್ರಮವಿದೆ. ಟೈಂ ಇಲ್ಲ. ಇನ್ನೊಂದು ಸಲ ಮಾತನಾಡ್ತೀನಿ, ನಡೀರಿ’ ಎಂದು ದೊಡ್ಡಗೌಡರು ಸರಸರನೆ ಹೊರಟು ಹೋದರು.

ಪೆಕರ ತಮಿಳುನಾಡಿಗೆ ಬಂದ.
ಹಸಿವಾಗಿತ್ತು. ಅಮ್ಮಾ ಕ್ಯಾಂಟೀನಿಗೆ ಹೋಗಿ ಚೀಪ್‌ರೇಟ್ ಅಮ್ಮಾ ಇಡ್ಲಿ ತಿಂದು, ಅಮ್ಮಾ ಪೊಂಗಲ್ ಸವಿದು, ಅಮ್ಮಾ ವಾಟರ್ ಕುಡಿದ. ನೇರವಾಗಿ ಪೋಯಸ್‌ಗಾರ್ಡನ್‌ಗೆ ಬಂದು: ‘ನಾನ್ ಕರ್ನಾಟಕಂ, ಅಮ್ಮಾ ದರ್ಶನಂ ಪಣ್ಣೋಣಂ’ ಎಂದ. ಮಾತು ಸ್ವಲ್ಪ ಬಲವಾಗಿರಲಿ ಅಂತ ‘ಅಮ್ಮಾವು ಕರ್ನಾಟಕಂ, ನಾನೂ ಕರ್ನಾಟಕಂ’ ಎಂದ.

‘ಅಮ್ಮಾ ಕರ್ನಾಟಕಂ ಅಂದ್ರೆ ಕೈಕಾಲು ಮುರೀತೀನಿ. ಅವರು ತಮಿಳ್‌ಪೆಣ್’ ಎಂದು ಸೆಕ್ಯುರಿಟಿಯವನು ಗೂಸಾ ಕೊಡುವ ರೀತಿಯಲ್ಲಿ ಹೇಳಿ, ಪೆಕರನನ್ನು ತಬ್ಬಿಬ್ಬುಗೊಳಿಸಿದ.

ಅಮ್ಮಾ ಅವರ ದರ್ಶನವಾಯ್ತು.
‘ಅಮ್ಮಾ, ತಪ್ಪು ತಿಳಿಯಬೇಡಿ. ಚುನಾವಣಾ ವೇಳಾ­ಪಟ್ಟಿಯೇ ಇನ್ನೂ ಪ್ರಕಟವಾಗಿಲ್ಲ. ಆಗಲೇ ನೀವು ೪೦ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಪ್ರಕಟ ಮಾಡಿಯೇ ಬಿಟ್ಟಿದ್ದೀರಿ. ಚುನಾ­ವಣಾ ಪ್ರಣಾಳಿಕೆಯನ್ನು ಪ್ರಿಂಟ್ ಮಾಡಿ ಹಂಚಿಬಿಟ್ಟಿದ್ದೀರಿ. ಎಡಪಕ್ಷಗಳ ಜೊತೆ ಮೈತ್ರಿ ಮಾಡಿಕೊಂಡು ಅವರಿಗೆ ಒಂದೂ ಕ್ಷೇತ್ರವನ್ನೂ ಬಿಟ್ಟುಕೊಟ್ಟಿಲ್ಲ. ಅವಸರ ಅವಸರವಾಗಿ ಪ್ರಚಾರ ಶುರು ಮಾಡಿರೋದು ನೋಡಿದರೆ, ಬೆಂಗಳೂರು ಕೋರ್ಟ್‌­ಕೇಸಿನ ಭಯ ಅಂತ ಕರುಣಾಳು ಕರುಣಾ ಅವರು ಕುಟುಕಿದ್ದಾರಲ್ಲಾ ಅಮ್ಮಾ’
‘ಕಪ್ಪು ಕನ್ನಡಕದೊಳಗಿಂದ ನೋಡಿದರೆ, ಎಲ್ಲವೂ ಹಾಗೇ ಕಾಣುತ್ತದೆ’. ಅಮ್ಮಾ ಅವರು ಚುಟುಕಾಗಿ ಒಂದೇ ಮಾತಿನಲ್ಲಿ ಮುಗಿಸಿದರು. ‘ನೋಟೈಂ’ ಎಂದು ಹೇಳಿ ಎದ್ದು ನಿಂತರು.

‘ಇನ್ನೊಂದೇ ಪ್ರಶ್ನೆ ಅಮ್ಮಾ’ ಎಂದು ಪೆಕರ ಪಟ್ಟು ಹಾಕಿ ಕುಳಿತ.
‘ತೃತೀಯರಂಗದಲ್ಲಿ ನಿಮ್ಮ ಪವರ್ ಜಾಸ್ತಿ ಕಾಣ್ತಾ ಇದೆ. ಆದ್ದರಿಂದ ಅದನ್ನು ತೃತೀಯರಂಗ ಅನ್ನುವುದಕ್ಕಿಂತ ತೃತೀಯ­ರಂಗಿ ಎಂದು ಕರೆಯುವುದೇ ಸೂಕ್ತ. ಇಂಡಿಯಾದಲ್ಲಿ ಇವತ್ತು ಲೇಡಿಸ್ ಪವರ್‌ ಜಾಸ್ತಿ, ತಾವು, ಮಾಯಾವತಿ, ಕನಿಮೊಳಿ, ಮಮತಾ, ಜಯಪ್ರದಾ ಎಲ್ಲಾ ಒಂದು ಕಡೆ ಸೇರಿ ‘ಚತುರ್ಥ­ರಂಗಿ’ ಅಂತ ಒಂದು ಒಕ್ಕೂಟ ಸ್ಥಾಪನೆ ಮಾಡಿಕೊಂಡರೆ ಛಾನ್ಸಸ್ ಹೆಚ್ಚಲ್ಲವೇ?’ ಪೆಕರ ಅಮ್ಮನವರಿಗೆ ಅಡ್ವೈಸ್ ಕೊಡಲಾರಂಭಿಸಿದ.

ಅಮ್ಮಾ ಅವರು ಗರಂ ಆಗಿರುವುದು ಅವರ ಮುಖದಲ್ಲಿ ಎದ್ದು ಕಾಣುತ್ತಿತ್ತು.
‘ನಾನ್ ಇಪ್ಪೋ ಪೇಸಮಾಟ್ಟೇನ್’ ಎಂದು ಹೇಳಿ ಅಮ್ಮಾ ಅವರು ಹೊರಡಲನುವಾದರು.
‘ಇನ್ನ್ಯಾವಾಗ ಮಾತನಾಡ್ತೀರಿ ಅಮ್ಮಾ’ ಎಂದು ಪೆಕರ ಪ್ರಶ್ನಿಸಿದ.

‘ಚುನಾವಣಾ ಫಲಿತಾಂಶ ಬಂದ ಮೇಲೆ ಪಿ.ಎಂ. ಆಫೀಸಿಗೆ ಬನ್ನಿ, ಅಲ್ಲಿ ಮಾತನಾಡೋಣ’ ಎಂದು ಹೇಳಿ ಅಮ್ಮಾ ಅವರು ನಿರ್ಗಮಿಸಿದರು.
ಪೆಕರ ವರದಿ ತಯಾರಿಸಲು ಕಚೇರಿ ಕಡೆ ನಡೆದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT