ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪವಿತ್ರ ಗೋಪೂಜೆಯ ಮರೆಯಲ್ಲಿ ದೇಶದ್ರೋಹ

Last Updated 1 ಏಪ್ರಿಲ್ 2012, 19:30 IST
ಅಕ್ಷರ ಗಾತ್ರ

ನಮ್ಮಲ್ಲಿ ಕೆಲವು `ಪವಿತ್ರ ಗೋವು~ಗಳಿವೆ (`ಹೋಲಿ ಕೌ~). `ಅವಕ್ಕೆ ಹೊಡೆಯುವುದು ಬಡಿಯುವುದು ಬಿಡಿ, ಅವುಗಳತ್ತ ಸಂಶಯದ ಕಣ್ಣು ಕೂಡಾ ಹರಿಸಬಾರದು, ಅವುಗಳ ಪೂಜೆಯನ್ನಷ್ಟೇ ಮಾಡಬೇಕು~ ಎಂದು ನಮ್ಮನ್ನು ಆಳುವವರು ಬಯಸುತ್ತಾರೆ.

ಪೂಜೆ ಮಾಡುವವ ಕಣ್ಣು ಯಾವಾಗಲೂ ಮುಚ್ಚಿರುತ್ತದೆ ಎಂದು ಅವರಿಗೂ ಗೊತ್ತಿರುತ್ತದೆ. ನಮ್ಮ ರಕ್ಷಣೆಗಾಗಿ ಇರುವ ಸೇನೆ, ಅದಕ್ಕೆ ನೆರವಾಗುವ ಗುಪ್ತಚರ ಇಲಾಖೆ, ಸಂವಿಧಾನದ ಅಂಗಗಳಲ್ಲಿ ಬಹುಮುಖ್ಯವಾದ ನ್ಯಾಯಾಂಗ, ರಾಷ್ಟ್ರಪತಿ ಹುದ್ದೆ... ಹೀಗೆ ಹಲವಾರು `ಪವಿತ್ರ ಗೋವು~ಗಳಿವೆ.

ಇವುಗಳ ವಿರುದ್ಧದ ಸಣ್ಣ ಆರೋಪ ಕೂಡಾ `ದೇಶದ್ರೋಹ~ ಎಂದು ಬಣ್ಣಿಸಲಾಗುತ್ತದೆ. ಇದು ಆ ಸಂಸ್ಥೆಗಳನ್ನು ದುರ್ಬಲಗೊಳಿಸುವ ಪ್ರಯತ್ನ. ಇದರಿಂದ ಅವುಗಳ ನೈತಿಕ ಸ್ಥೈರ್ಯ ಕುಸಿಯುತ್ತದೆ~ ಎಂಬ ಬುದ್ಧಿ ಮಾತುಗಳನ್ನು ಹೇಳಲಾಗುತ್ತದೆ.

ಈ `ಪವಿತ್ರ ಗೋವು~ಗಳಲ್ಲಿ ಭಾರತೀಯ ಸೇನೆಗೆ ಅತ್ಯುನ್ನತ ಸ್ಥಾನ. ಅದು ಈಗ ಬೀದಿಗೆ ಇಳಿದು ಎಲ್ಲೆಂದರಲ್ಲಿ ನುಗ್ಗಿ ನಡೆಸುತ್ತಿರುವ ದಾಂಧಲೆಯಿಂದ ಸರ್ಕಾರ ತತ್ತರಗುಡುತ್ತಿದೆ. ಮನಮೋಹನ್ ಸಿಂಗ್ ಅವರ ಅತ್ಯಂತ ಪ್ರಾಮಾಣಿಕ ಸಹೋದ್ಯೋಗಿ ಎಂದು ಹೇಳಲಾಗುತ್ತಿದ್ದ ಎ.ಕೆ.ಆಂಟನಿ ಅವರೇ `ಆರೋಪಿ~ಯ ಕಟಕಟೆಯಲ್ಲಿ ನಿಲ್ಲುವಂತಾಗಿದೆ.

ನಮ್ಮ ಸಮರ ಸಿದ್ಧತೆಯಲ್ಲಿನ ಹುಳುಕುಗಳು ಬಯಲಾಗಿರುವುದರಿಂದ ವಿಶ್ವದ ಎರಡನೆಯದೋ ಮೂರನೆಯದೋ ದೊಡ್ಡ ಸೇನೆ ಎಂಬ ಕೀರ್ತಿ ಕಿರೀಟ ಕೂಡಾ ಉರುಳಿ ಬೀಳುವ ಸ್ಥಿತಿಯಲ್ಲಿದೆ. ಸೇನಾ ಮುಖ್ಯಸ್ಥ ಜನರಲ್ ವಿ.ಕೆ.ಸಿಂಗ್ ಎರಡು ಪ್ರಮುಖ ವಿಷಯಗಳನ್ನೆತ್ತಿದ್ದಾರೆ. ಮೊದಲನೆಯದು, ಸೇನಾ ಖರೀದಿಯಲ್ಲಿ ದಲ್ಲಾಳಿಗಳ ಪಾತ್ರ, ಎರಡನೆಯದು ದುರ್ಬಲಗೊಳ್ಳುತ್ತಿರುವ ರಕ್ಷಣಾ ವ್ಯವಸ್ಥೆ.

ಇಷ್ಟರವರೆಗೆ ಅವರು ಯಾಕೆ ಸುಮ್ಮನಿದ್ದರು? ಪ್ರಧಾನಿಗೆ ಬರೆದ ಪತ್ರ ಯಾಕೆ ಸೋರಿಹೋಯಿತು? ಎಂಬ ಪ್ರಶ್ನೆಗಳು ಪ್ರಸ್ತುತವಾದರೂ ಅದಕ್ಕಿಂತಲೂ ಮುಖ್ಯವಾದುದು ಅವರು ಎತ್ತಿರುವ ಎರಡು ಮೂಲಭೂತ ವಿಷಯಗಳು. ವಿವಾದ ಹೊರಡಿಸಿರುವ `ಸಂದೇಶ~ ಆತ್ಮಾವಲೋಕನಕ್ಕೆ ದಾರಿ ಮಾಡಿಕೊಡಬೇಕಾಗಿತ್ತು.
 
ಆದರೆ, ಆಗುತ್ತಿರುವುದೇನು? `ಸಂದೇಶ~ವನ್ನು ಪಕ್ಕಕ್ಕಿಟ್ಟು `ಸಂದೇಶವಾಹಕ~ನ ತಲೆಯನ್ನೇ ಉರುಳಿಸುವ ಹುನ್ನಾರ.ರಾಜಕಾರಣದಲ್ಲಿರುವ ಯಾರಾದರೊಬ್ಬರು ಎದ್ದು ನಿಂತು ಎದೆ ಮೇಲೆ ಕೈ ಇಟ್ಟು ಜ.ಸಿಂಗ್ ಹೇಳಿರುವುದು ಸುಳ್ಳು ಎಂದು ಹೇಳಲು ಸಾಧ್ಯವೇ? ಭಾರತದ ರಕ್ಷಣಾ ಇಲಾಖೆಯ ಖರೀದಿಯಲ್ಲಿನ ಅವ್ಯವಹಾರಗಳು ಲೋಕಕ್ಕೆಲ್ಲ ಗೊತ್ತಿರುವ ಸಂಗತಿ. ಅದರಲ್ಲಿ ದಲ್ಲಾಳಿಗಳ ಪಾತ್ರ ಕೂಡಾ ಅಷ್ಟೇ ಜನಜನಿತ.
 
ಈ ದಲ್ಲಾಳಿಗಳ ಬಗ್ಗೆ ನಡೆದಷ್ಟು ಚರ್ಚೆ ನಮ್ಮ  ರಕ್ಷಣಾ ವ್ಯವಸ್ಥೆಯಲ್ಲಿನ ದೋಷಗಳ ಬಗ್ಗೆ ನಡೆಯದೆ ಇದ್ದರೂ ಸೇನೆಯ ಉನ್ನತ ಮಟ್ಟದಲ್ಲಿ ಇದರ ಬಗ್ಗೆ ಆತಂಕ ವ್ಯಕ್ತವಾಗುತ್ತಲೇ ಇತ್ತು. ಇತ್ತೀಚೆಗಷ್ಟೆ ಕೇಂದ್ರ ಬಜೆಟ್ ಮಂಡಿಸಿದ ಪ್ರಣವ್ ಮುಖರ್ಜಿ `ರಕ್ಷಣಾ ಇಲಾಖೆಯ ವಾರ್ಷಿಕ ಅನುದಾನವನ್ನು 1,93,407 ಕೋಟಿ ರೂಪಾಯಿಗೆ ಹೆಚ್ಚಿಸಿದ್ದೇನೆ.
 
ಇದು  ಶೇ 18ರಷ್ಟು ಹೆಚ್ಚಳ~ ಎಂದು ಬೀಗಿದ್ದರು. ಬಜೆಟ್ ಹಿಂದಿನ ದಿನವಷ್ಟೇ ಮಂಡಿಸಲಾದ ಆರ್ಥಿಕ ಸಮೀಕ್ಷೆಯ ಪುಟಗಳನ್ನು ತಿರುವಿ ಹಾಕಿದರೆ ಕಳೆದ ಬಜೆಟ್‌ನಲ್ಲಿ ನೀಡಲಾದ ಹಣದಲ್ಲಿ 3000 ಕೋಟಿ ರೂಪಾಯಿಗಳನ್ನು ಖರ್ಚುಮಾಡಲಾಗದೆ ಹಿಂತಿರುಗಿಸಿದ್ದ ವಿವರ ಕಣ್ಣಿಗೆ ರಾಚುತ್ತದೆ. ಕೊಟ್ಟ ಹಣವನ್ನು ಖರ್ಚು ಮಾಡದಿದ್ದರೆ ಯಾವ ಆಧುನೀಕರಣ ಸಾಧ್ಯ? ಜ.ಸಿಂಗ್ ಎತ್ತಿರುವುದು ಇದೇ ಪ್ರಶ್ನೆಯನ್ನು.

ರಕ್ಷಣಾ ಇಲಾಖೆಯ ಅಂತರಂಗದ ವ್ಯವಹಾರಗಳ ಬಗ್ಗೆ ಬೀದಿ ಚರ್ಚೆ ಪ್ರಾರಂಭವಾಗಿದ್ದು ಬೋಫೋರ್ಸ್ ಫಿರಂಗಿ ಖರೀದಿ ಹಗರಣದ ನಂತರದ ದಿನಗಳಲ್ಲಿ. ಬೋಪೋರ್ಸ್ ಜಗತ್ತಿನ ಅತ್ಯಂತ ಸಮರ್ಥ ಫಿರಂಗಿ ಎನ್ನಲಡ್ಡಿಯಿಲ್ಲ. ಇದರ ಸಮರ ಸಾಮರ್ಥ್ಯ ಸಾಬೀತಾಗಿದ್ದು ಕಾರ್ಗಿಲ್ ಯುದ್ಧ ಭೂಮಿಯಲ್ಲಾದರೂ, ಅದಕ್ಕಿಂತ ಹತ್ತು ವರ್ಷಗಳ ಹಿಂದೆಯೇ ಇದು ದೇಶದ ಈ ವರೆಗಿನ ಅತ್ಯಧಿಕ ಬಹುಮತ ಸರ್ಕಾರವನ್ನು ಉರುಳಿಸಿಬಿಟ್ಟಿತ್ತು.
 
ಅದಕ್ಕೆ ಬಲಿಯಾದ ಪ್ರಧಾನಿ ದೇಶದ ರಾಜಕೀಯವನ್ನು ಶುದ್ಧೀಕರಿಸುತ್ತೇನೆಂದು ಹೇಳುತ್ತಾ ಬಂದಿದ್ದ ರಾಜೀವ್‌ಗಾಂಧಿ. ದೆಹಲಿ ಹೈಕೋರ್ಟ್ ರಾಜೀವ್ ಗಾಂಧಿಯವರನ್ನು ದೋಷಮುಕ್ತಗೊಳಿಸಿದರೂ ಬೋಫೋರ್ಸ್ ಹಗರಣದಿಂದಾಗಿ ಹುಟ್ಟಿಕೊಂಡಿದ್ದ ಹಲವಾರು ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ.

 ಕಮಿಷನ್ ಸಂದಾಯವಾಗಿದ್ದು ನಿಜವಾದರೂ ಅದು ಯಾರಿಗೆ ಸಂದಾಯವಾಗಿದೆ ಎನ್ನುವುದು ಇನ್ನೂ ಗೊತ್ತಾಗಿಲ್ಲ. ಆ ವ್ಯವಹಾರದಲ್ಲಿನ ಪ್ರಮುಖ ಆರೋಪಿ- ಇಟಲಿ ಮೂಲದ ಮತ್ತು ರಾಜೀವ್‌ಗಾಂಧಿ ಕುಟುಂಬದ ಸ್ನೇಹಿತ ಎನ್ನಲಾದ ಒಟ್ಟಾವಿಯೋ ಕ್ವಟ್ರೋಚಿ.
 
1993ರಲ್ಲಿ ಸಿಬಿಐ ಆತನ ವಿರುದ್ದ ಮೊಕದ್ದಮೆ ದಾಖಲಿಸಿದ್ದು ಗೊತ್ತಾದ ಮರುಕ್ಷಣ ಭಾರತ ಬಿಟ್ಟು ಪರಾರಿಯಾಗಿದ್ದ ಕ್ವಟ್ರೋಚಿಯನ್ನು ಕಳೆದ ಇಪ್ಪತ್ತೈದು ವರ್ಷಗಳ ಅವಧಿಯ ಯಾವ ಸರ್ಕಾರಕ್ಕೂ ಬಂಧಿಸಲಾಗಿಲ್ಲ.

ಸಿಬಿಐ ಕೋರಿಕೆ ಮೇರೆಗೆ ಲಂಡನ್‌ನಲ್ಲಿದ್ದ ಆತನ ಬ್ಯಾಂಕ್ ಖಾತೆಯನ್ನು ಅಮಾನತ್ತಿನಲ್ಲಿರಿಸಿದರೆ, ಸಿಬಿಐ ವಿರೋಧದ ಹೊರತಾಗಿಯೂ ಆಗಿನ ಕಾನೂನು ಸಚಿವರಾಗಿದ್ದ ಎಚ್.ಆರ್.ಭಾರದ್ವಾಜ್ ಅವರು ಕ್ವಟ್ರೋಚಿ ವಿರುದ್ಧದ ಯಾವ ಆರೋಪವೂ ಸಾಬೀತಾಗಿಲ್ಲ ಎಂದು ಹೇಳಿ ಬ್ಯಾಂಕ್ ಖಾತೆಯ ಚಲಾವಣೆಗೆ ಅನುಮತಿ ಕೊಟ್ಟಿದ್ದರು.
 
ಕ್ವಟ್ರೋಚಿ ವಿಷಯದಲ್ಲಿ ಕಾಂಗ್ರೆಸ್ ನಡವಳಿಕೆ ಈಗಲೂ ಸಂಶಯಾಸ್ಪದವಾಗಿದೆ. ಸೋನಿಯಾಗಾಂಧಿ ಪ್ರಧಾನಿ ಪಟ್ಟವನ್ನು ತ್ಯಾಗಮಾಡಲು ಅವರನ್ನು ಕಾಡುತ್ತಿದ್ದ `ಕ್ವಟ್ರೋಚಿ ಭೂತ~ವೂ ಕಾರಣವೆನ್ನಲಾಗುತ್ತಿದೆ. ಬೋಪೋರ್ಸ್ ಹಗರಣದಲ್ಲಿ ಆರೋಪಿಗಳಾಗಿದ್ದ ಹಿಂದುಜಾ ಸೋದರರ ಜತೆಯಲ್ಲಿ ಬಿಜೆಪಿ ನಾಯಕ ಅಟಲ ಬಿಹಾರಿ ವಾಜಪೇಯಿ ಹಾರ್ದಿಕ ಸಂಬಂಧ ಹೊಂದಿದ್ದನ್ನು ಬಿಜೆಪಿ ಕೂಡಾ ನಿರಾಕರಿಸುವ ಸ್ಥಿತಿಯಲ್ಲಿ ಇಲ್ಲ.

ಬೋಫೋರ್ಸ್ ಹಗರಣದ ಬಗ್ಗೆ ಗುಲ್ಲೆಬ್ಬಿಸಿದ್ದ ಬಿಜೆಪಿ ಅಧಿಕಾರಕ್ಕೆ ಬಂದಾಗಲೂ ರಕ್ಷಣಾ ಇಲಾಖೆಯನ್ನು ಹಗರಣಗಳು ಸುತ್ತಿಕೊಂಡಿದ್ದವು. ಆ ಖಾತೆಯ ಹೊಣೆ ಹೊತ್ತಿದ್ದ ಜಾರ್ಜ್ ಫರ್ನಾಂಡಿಸ್ ಎಂಬ ಇನ್ನೊಬ್ಬ ಪ್ರಾಮಾಣಿಕ ರಾಜಕಾರಣಿ ಕಳಂಕವನ್ನು ಹೊತ್ತುಕೊಂಡೇ ನಿರ್ಗಮಿಸಬೇಕಾಯಿತು.

ಕಾರ್ಗಿಲ್ ಯುದ್ದದ ಸಮಯದಲ್ಲಿ ರಕ್ಷಣಾ ಇಲಾಖೆ ಅತೀ ಅವಸರದಿಂದ ನಡೆಸಿದ್ದ  ಅಂದಾಜು ಎರಡು ಸಾವಿರ ಕೋಟಿ ರೂಪಾಯಿ ವೆಚ್ಚದ ಖರೀದಿಯಲ್ಲಿನ ಅವ್ಯವಹಾರವನ್ನು ಸಿಎಜಿ ಮತ್ತು ಪಿಎಸಿ ಬಿಚ್ಚಿಟ್ಟಿತ್ತು. ಮಾರುಕಟ್ಟೆಯಲ್ಲಿ 172 ಡಾಲರ್‌ಗೆ ಲಭ್ಯವಿದ್ದ ಶವಪೆಟ್ಟಿಗೆಗಳನ್ನು 2000 ಡಾಲರ್‌ಗೆ ಖರೀದಿಸಿದ್ದನ್ನು ಸಿಎಜಿ ತನ್ನ ವರದಿಯಲ್ಲಿ ಪ್ರಮುಖವಾಗಿ ಉಲ್ಲೇಖಿಸಿತ್ತು.

ಅದನ್ನು ಸಮರ್ಥಿಸಿಕೊಳ್ಳಲು ಫರ್ನಾಂಡಿಸ್ ಅವರಿಗೆ ಕೊನೆಗೂ ಸಾಧ್ಯವಾಗಲೇ ಇಲ್ಲ. ಇವುಗಳಿಗೆಲ್ಲ ತಾರ್ಕಿಕ ಅಂತ್ಯ ಎಂಬಂತೆ  `ಆಪರೇಷನ್ ವೆಸ್ಟ್ ಎಂಡ್~ ಮೂಲಕ ತೆಹೆಲ್ಕಾ ಬಯಲುಗೊಳಿಸಿದ್ದ ರಕ್ಷಣಾ ಇಲಾಖೆಯ ಅಂತರಂಗದ ವ್ಯವಹಾರಗಳನ್ನು ನೋಡಿ ದೇಶದ ಜನ ಬೆಚ್ಚಿ ಬಿದ್ದಿದ್ದರು.

ಫರ್ನಾಂಡಿಸ್ ಅವರ ಪಕ್ಷದ ಮಾಜಿ ಖಜಾಂಚಿ ಆರ್.ಕೆ.ಜೈನ್ `ಯಾರ‌್ಯಾರಿಂದ ಕಮಿಷನ್ ಪಡೆದಿದ್ದೆ~ ಎಂದು ಹೇಳಿಕೊಂಡದ್ದನ್ನು ರಹಸ್ಯ ಕ್ಯಾಮೆರಾದ ಮೂಲಕ ಸೆರೆಹಿಡಿದು ತೆಹೆಲ್ಕಾ ಬಿತ್ತರಿಸಿತ್ತು.

ಸಚಿವರ ಮನೆಯಲ್ಲಿಯೇ ಅವರ ಸ್ನೇಹಿತೆ ಜಯಾ ಜೇಟ್ಲಿ ಅವರೇ `ವ್ಯವಹಾರ ಕುದುರಿಸುತ್ತಿದ್ದುದನ್ನು~ ಕೂಡಾ ದೇಶ ಕಣ್ಣಾರೆ ನೋಡಿದೆ.ಶಸ್ತಾಸ್ತ್ರ ಖರೀದಿಯಲ್ಲಿ ದಲ್ಲಾಳಿಗಳ ನೇಮಕ, ಅವರಿಗೆ ಕಮಿಷನ್ ಪಾವತಿ ಹೊಸ ಸಂಗತಿಗಳೇನಲ್ಲ. ಎಲ್ಲ ದೇಶಗಳಲ್ಲಿಯೂ ಇದು ಅಧಿಕೃತವಾಗಿಯೋ, ಅನಧಿಕೃತವಾಗಿಯೋ ನಡೆಯುತ್ತದೆ.

ಇದನ್ನು ಸಂಪೂರ್ಣವಾಗಿ ತೊಡೆದುಹಾಕುವುದು ಸಾಧ್ಯ ಇಲ್ಲ. ಆದರೆ  ಕಳಪೆ ಗುಣಮಟ್ಟದ ರಕ್ಷಣಾ ಸಾಮಗ್ರಿಗಳ ಮಾರಾಟಕ್ಕಾಗಿ ಇಲ್ಲವೇ, ರಕ್ಷಣಾ ಸಾಮಗ್ರಿಗಳ ಬೆಲೆಯನ್ನು ಹಲವಾರು ಪಟ್ಟು ಹೆಚ್ಚಿಸಲು  ಕಮಿಷನ್ ನೀಡಿದಾಗ ಮತ್ತು ರಾಜಕಾರಣಿಗಳು ಇಲ್ಲವೇ ಅಧಿಕಾರಿಗಳಿಗೆ ಕಮಿಷನ್‌ನಲ್ಲಿ ಪಾಲು ಸಂದಾಯವಾದಾಗ ಅದು ದೇಶದ್ರೋಹದ ಅಪರಾಧವಾಗುತ್ತದೆ.

ಬೋಪೋರ್ಸ್ ಹಗರಣ ಬಯಲಾದಾಗಲೂ ಸರ್ಕಾರ ಪ್ರಾರಂಭದಲ್ಲಿ ಆ ವ್ಯವಹಾರದಲ್ಲಿ ಯಾವ ದಲ್ಲಾಳಿಯೂ ಇಲ್ಲ ಎಂದು ಹೇಳಿದ್ದರೂ, ಕೊನೆಗೆ ಒಪ್ಪಿಕೊಂಡಿತ್ತು. ದಲ್ಲಾಳಿಗಳು ಈಗಲೂ ಇದ್ದಾರೆ, ಆದರೆ ಅವರು ಯಾರ ಕಣ್ಣಿಗೂ ಬೀಳುವುದಿಲ್ಲ. ಅವರ ಪರವಾಗಿ ಬೇರೆ ಯಾರೋ ವ್ಯವಹಾರ ಕುದುರಿಸುತ್ತಾರೆ.
 
ಈ ಮೋಸದಾಟವನ್ನು ತಡೆಯಲಿಕ್ಕಾಗಿ ಅಧಿಕೃತವಾಗಿ ನೋಂದಣಿ ಮಾಡಲಾದ ದಲ್ಲಾಳಿಗಳ ಜತೆ ಮಾತ್ರ ವ್ಯವಹಾರ ನಡೆಸಬೇಕು, ಈ ಮೂಲಕ ವ್ಯವಹಾರವನ್ನು ಪಾರದರ್ಶಕಗೊಳಿಸಬೇಕೆಂಬ ಸಲಹೆಯೂ ಕೇಳಿಬಂದಿತ್ತು. ಎಲ್ಲವೂ ಅಧಿಕೃತವಾಗಿ ನಡೆದರೆ ರಾಜಕೀಯಕ್ಕೆ ದುಡ್ಡೆಲ್ಲಿಂದ ಬರಬೇಕು?

ಬಹಳ ವಿಚಿತ್ರವೆಂದರೆ, ಈ ವಿವಾದ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಚರ್ಚೆಗೀಡಾಗುತ್ತಿದ್ದರೂ ಬಿಜೆಪಿಯೂ ಸೇರಿದಂತೆ ಪ್ರಮುಖ ವಿರೋಧಪಕ್ಷಗಳು ಅದನ್ನು ಬಹಳ ಗಂಭೀರವಾಗಿ ಸ್ವೀಕರಿಸಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನ ಮಾಡುತ್ತಿಲ್ಲ. ಈ ಅಪೂರ್ವವಾದ `ಸಂಯಮ~ವನ್ನು ಶ್ಲಾಘಿಸಲಾಗುತ್ತಿದೆ.
 
`ಇದೇ ಮೊದಲ ಬಾರಿಗೆ ವಿರೋಧಪಕ್ಷಗಳು ಜವಾಬ್ದಾರಿಯಿಂದ ವರ್ತಿಸಿವೆ~ ಎಂಬ ಶಹಭಾಸ್‌ಗಿರಿಯನ್ನೂ ಕೊಡಲಾಗುತ್ತಿದೆ. ಸತ್ಯ ಸಂಗತಿಯೇನೆಂದರೆ ರಕ್ಷಣಾ ಇಲಾಖೆಯನ್ನು ಬೀದಿಯಲ್ಲಿ ತೊಳೆಯುವುದು ಯಾರಿಗೂ ಬೇಡ. ಅದರಿಂದ ಕಳೆದ ಇಪ್ಪತ್ತೈದು ವರ್ಷಗಳ ಕೊಳೆಯೆಲ್ಲಾ ಹೊರಗೆ ಬರುವ ಸಂಭವ ಇದೆ.
 
ಕಾಂಗ್ರೆಸ್, ಬಿಜೆಪಿ, ತೃತೀಯರಂಗ ಹೀಗೆ ಎಲ್ಲ ಸರ್ಕಾರಗಳ ಕಾಲದ ಅಸ್ಥಿಪಂಜರಗಳು ರಕ್ಷಣಾಇಲಾಖೆಯ ಕಪಾಟಿನಲ್ಲಿವೆ. ಸ್ಯಾಂಪಲ್‌ಗಾಗಿ ಒಂದು ಅಸ್ಥಿ ಪಂಜರವನ್ನು ಹೊರತೆಗೆಯುವುದಾದರೆ.....

ಪ್ರಧಾನಿ ಪಿ.ವಿ.ನರಸಿಂಹರಾವ್ ತನ್ನ ಅಧಿಕಾರದ ಕೊನೆಯ ದಿನಗಳಲ್ಲಿ ಸುಖೋಯ್-31 ಯುದ್ಧ ವಿಮಾನ ಖರೀದಿಗೆ ರಷ್ಯಾ ಜತೆ ಒಪ್ಪಂದ ಮಾಡಿಕೊಂಡಿದ್ದರು. ಆಗ ಹಣಕಾಸು ಸಚಿವರಾಗಿದ್ದವರು ಮನಮೋಹನ್‌ಸಿಂಗ್.

ಚುನಾವಣೆಯ ಕಾಲದಲ್ಲಿಯೇ ಈ ಒಪ್ಪಂದದಲ್ಲಿನ ಅಕ್ರಮಗಳನ್ನು ಬಯಲು ಮಾಡಿದ್ದು ದೆಹಲಿಯ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆ. ಏಳು ವರ್ಷಗಳ ಹಿಂದೆ ಆ ಪತ್ರಿಕೆಯ ಸಂಪಾದಕ ಶೇಖರ್ ಗುಪ್ತಾ ಸುಖೋಯ್ ಯುದ್ಧ ವಿಮಾನ ಹೇಗೆ ಪಕ್ಷಾತೀತವಾಗಿ ರಾಜಕಾರಣಿಗಳನ್ನು ಒಂದು ಮಾಡಿತ್ತು ಎಂಬುದನ್ನು ತಮ್ಮ ಅಂಕಣದಲ್ಲಿ  ಬರೆದಿದ್ದರು.
 
ಈ ಹಗರಣ ಬಯಲಾದ ಕೂಡಲೇ ಗುಪ್ತಾ ಅವರನ್ನು ಕರೆಸಿ ಬಿಜೆಪಿ ನಾಯಕರಾದ ಅಟಲಬಿಹಾರಿ ವಾಜಪೇಯಿ ಮತ್ತು ಜಸ್ವಂತ್ ಸಿಂಗ್ ಚರ್ಚಿಸಿದ್ದರಂತೆ. ಚುನಾವಣೆಯ ಕಾಲದಲ್ಲಿ ಬಿಜೆಪಿ ಈ ಹಗರಣವನ್ನು  ಉತ್ಸಾಹದಿಂದ ಬಳಸಿಕೊಂಡಿತ್ತು.

ಸುಖೋಯ್ ಖರೀದಿ ಒಪ್ಪಂದಕ್ಕೆ ಅಂತಿಮ ರೂಪ ನೀಡಿದ್ದು ನಂತರ ಅಧಿಕಾರಕ್ಕೆ ಬಂದ ಎಚ್.ಡಿ.ದೇವೇಗೌಡರ ಸಂಪುಟದಲ್ಲಿ ರಕ್ಷಣಾ ಸಚಿವರಾಗಿದ್ದ ಮುಲಾಯಂ ಸಿಂಗ್ ಯಾದವ್. ಆ ಸಂದರ್ಭದಲ್ಲಿ ಅವರನ್ನು ಭೇಟಿಯಾಗಿದ್ದ ಶೇಖರ್ ಗುಪ್ತಾ ಹಿಂದಿನ ಹಗರಣವನ್ನು ವಿವರಿಸಿ, ಬಿಜೆಪಿ ನಾಯಕರದ್ದೂ ಅದಕ್ಕೆ ವಿರೋಧ ಇತ್ತು ಎಂದು ತಿಳಿಸಿದಾಗ ತಕ್ಷಣ ಪ್ರತಿಕ್ರಿಯಿಸಿದ್ದ ಮುಲಾಯಂಸಿಂಗ್ `ವಾಜಪೇಯಿ ಮತ್ತು ಜಸ್ವಂತ್‌ಸಿಂಗ್ ಇಬ್ಬರನ್ನೂ ಕರೆಸಿ ಸಮಾಲೋಚನೆ ನಡೆಸಿದ್ದೇನೆ.

ಅವರಿಬ್ಬರೂ ಕೆಲವು ಸಲಹೆಗಳನ್ನು ನೀಡಿದ್ದಾರೆ. ಆ ಒಪ್ಪಂದದಲ್ಲಿ ಏನೂ ಅಕ್ರಮ ಇಲ್ಲ. ನೀವೆಲ್ಲ ಪತ್ರಿಕೆಯವರು ಸುಮ್ಮನೆ ಬರೆಯುತ್ತೀರಿ~ ಎಂದು ಛೇಡಿಸಿದ್ದರಂತೆ. ಸಿದ್ಧಾಂತದ ಹೆಸರಲ್ಲಿ ಪರಸ್ಪರ ಜುಟ್ಟು ಹಿಡಿದು ಕಾದಾಡುವ ಮತ್ತು ಜನಪರವಾದ ಮಸೂದೆಗಳನ್ನೂ ಒಮ್ಮತದಿಂದ ಅಂಗೀಕರಿಸಲು ಒಪ್ಪದ ವಿರೋಧಪಕ್ಷಗಳ ನಾಯಕರನ್ನು (ನರಸಿಂಹರಾವ್, ವಾಜಪೇಯಿ ಮತ್ತು ಮುಲಾಯಂ ಸಿಂಗ್) ಸುಖೋಯ್ ಯುದ್ಧ ವಿಮಾನ ಒಟ್ಟು ಮಾಡಿತು ಎಂದು ಶೇಖರ್ ಗುಪ್ತಾ ವ್ಯಂಗ್ಯದ ದನಿಯಲ್ಲಿ ಅಂಕಣ ಕೊನೆಗೊಳಿಸುತ್ತಾರೆ.

  ಇತ್ತೀಚೆಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ತಮ್ಮ ತಂದೆ ಪ್ರಧಾನಿಯಗಿದ್ದಾಗ ಶಸ್ತ್ರಾಸ್ತ್ರ ಖರೀದಿಗೆ ಸಂಬಂಧಿಸಿದಂತೆ ದಲ್ಲಾಳಿಯೊಬ್ಬ ಸಂಪರ್ಕಿಸಿ ಲಂಚದ ಆಮಿಷ ಒಡ್ಡಿದ್ದರು ಎಂದು ಹೇಳಿದ್ದರು.

ಅದು ಸುಖೋಯ್ ಖರೀದಿಗೆ ಸಂಬಂಧಿಸಿದ್ದಾಗಿರಬಹುದೇ? ದೇವೇಗೌಡರು ಪ್ರಧಾನಿಯಾಗಿದ್ದಾಗ ಕುಟುಂಬ ಸಮೇತ ರಷ್ಯಾ ಪ್ರವಾಸ ಮಾಡಿದ್ದರು. ಆಗ ಎಚ್.ಡಿ.ಕುಮಾರಸ್ವಾಮಿಯವರೂ ಜತೆಯಲ್ಲಿದ್ದದ್ದು ನಿಜ. ಅಲ್ಲಿ ಏನಾಯಿತು ಎನ್ನುವುದನ್ನು ಅವರು ಮಾತ್ರ ಹೇಳಲು ಸಾಧ್ಯ.

 (ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT