ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಶ್ಚಿಮದಲ್ಲಿ ಚಿಮ್ಮಿತೇ ರಷ್ಯಾ ಹಗೆಬುಗ್ಗೆ?

Last Updated 5 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಪಶ್ಚಿಮ ಜಗತ್ತಿನಿಂದ ಪೂರ್ವದೆಡೆಗೆ ಒಂದು ಸ್ಪಷ್ಟ ಸಂದೇಶವಂತೂ ರವಾನೆಯಾಗಿದೆ. ‘ರಷ್ಯಾ ಅಧ್ಯಕ್ಷ ಪುಟಿನ್‌ರ ಕುಯುಕ್ತಿ, ಕುಟಿಲ ತಂತ್ರಗಳನ್ನು ಇನ್ನು ತಾಳಲು ಸಾಧ್ಯವಿಲ್ಲ’ ಎಂಬ ಸಂದೇಶವನ್ನು ಪಶ್ಚಿಮ ದೇಶಗಳು ರಷ್ಯಾಕ್ಕೆ ರವಾನಿಸಿವೆ. ಮೊದಲಿಗೆ ಬ್ರಿಟನ್, ರಷ್ಯಾದ 23 ರಾಜತಾಂತ್ರಿಕ ಅಧಿಕಾರಿಗಳನ್ನು ದೇಶ ಬಿಡುವಂತೆ ಸೂಚಿಸಿತು. ಅದಕ್ಕೆ ಪ್ರತಿಯಾಗಿ ರಷ್ಯಾ ತನ್ನಲ್ಲಿದ್ದ ಇಂಗ್ಲೆಂಡ್ ರಾಯಭಾರಿಗಳನ್ನು ಹೊರಗಟ್ಟಿತು. ನಂತರ ಪಶ್ಚಿಮ ದೇಶಗಳು ಒಂದಾದವು. ಅಲ್ಬೇನಿಯಾ, ಆಸ್ಟ್ರೇಲಿಯಾ, ಕೆನಡಾ, ನಾರ್ವೆ ಮೊದಲ್ಗೊಂಡು ಉಕ್ರೇನ್ ತನಕ 20ಕ್ಕೂ ಹೆಚ್ಚಿನ ರಾಷ್ಟ್ರಗಳು ಬ್ರಿಟನ್ ಮಾರ್ಗವನ್ನೇ ಅನುಸರಿಸಿ ತಮ್ಮ ದೇಶದಲ್ಲಿದ್ದ ರಷ್ಯಾ ಅಧಿಕಾರಿಗಳಿಗೆ 7 ದಿನಗಳಲ್ಲಿ ದೇಶ ಬಿಡುವಂತೆ ಸೂಚಿಸಿದವು. ಅಮೆರಿಕ ತನ್ನಲ್ಲಿದ್ದ ರಷ್ಯಾದ 60 ರಾಜತಂತ್ರಜ್ಞರನ್ನು ಹೊರಹೋಗುವಂತೆ ಸೂಚಿಸಿತು. ಬ್ರಿಟನ್ ನಿಲುವಿಗೆ ಮೊದಲು ಸಡ್ಡುಹೊಡಿದಿದ್ದ ರಷ್ಯಾ, ಪಶ್ಚಿಮ ಜಗತ್ತು ಹೀಗೆ ಒಂದೇ ನಿಲುವಿಗೆ ಅಂಟಿಕೊಂಡ ಬಳಿಕ ಮೌನಕ್ಕೆ ಜಾರಿತು.

ಜಾಗತಿಕ ರಾಜಕೀಯದ ಮಟ್ಟಿಗೆ ಮಹತ್ವದ ಬೆಳವಣಿಗೆ ಎನಿಸಿರುವ ಈ ವಿದ್ಯಮಾನವನ್ನು ತುಸು ವಿವರವಾಗಿಯೇ ನೋಡಬೇಕು. ಇದೇ ಮಾರ್ಚ್ ಮೊದಲ ವಾರದಲ್ಲಿ ರಷ್ಯಾದ ಮಾಜಿ ಗುಪ್ತಚರ ಅಧಿಕಾರಿ ಸರ್ಗೇ ಸ್ಕ್ರಿಪಲ್ ಕೊಲೆ ಪ್ರಯತ್ನ ಇಂಗ್ಲೆಂಡಿನಲ್ಲಿ ನಡೆಯಿತು. 66 ವರ್ಷದ ಸ್ಕ್ರಿಪಲ್, ರಷ್ಯಾದ ಗುಪ್ತಚರ ಸಂಸ್ಥೆಯಲ್ಲಿದ್ದವರು. ನಂತರ 1990ರ ದಶಕದಲ್ಲಿ ಬ್ರಿಟನ್ ಪರ ಬೇಹುಗಾರಿಕೆ ನಡೆಸುತ್ತಾ ದ್ವಿಪಾತ್ರ ವಹಿಸಲು ಆರಂಭಿಸಿದರು. ‘ರಷ್ಯಾದ ಗೂಢಚಾರರನ್ನು ದಿಕ್ಕು ತಪ್ಪಿಸುವ ಕೆಲಸವನ್ನು ಸ್ಕ್ರಿಪಲ್ ಮಾಡುತ್ತಿದ್ದಾರೆ’ ಎಂದು ರಷ್ಯಾ ಆರೋಪಿಸಿತ್ತು. ಆ ಕಾರಣದಿಂದಲೇ 2004ರ ಡಿಸೆಂಬರ್‌ನಲ್ಲಿ ರಷ್ಯಾದ ‘ಫೆಡರಲ್ ಸೆಕ್ಯುರಿಟಿ ಸರ್ವಿಸ್’ ಸ್ಕ್ರಿಪಲ್ ಅವರನ್ನು ಬಂಧಿಸಿತ್ತು. ನಂತರ ದೇಶದ್ರೋಹ ಆರೋಪದ ಮೆಲೆ 13 ವರ್ಷಗಳ ಜೈಲು ಶಿಕ್ಷೆ ವಿಧಿಸಿತು. ಸುಮಾರು 6 ವರ್ಷ ರಷ್ಯಾದಲ್ಲಿ ಬಂಧಿಯಾಗಿದ್ದ ಸ್ಕ್ರಿಪಲ್ ಪಾಲಿಗೆ ಹೊಸ ಭರವಸೆಯೊಂದು ಕಂಡಿದ್ದು 2010ರಲ್ಲಿ. ಕಾನೂನುಬಾಹಿರವಾಗಿ ಅಮೆರಿಕದಲ್ಲಿದ್ದುಕೊಂಡು ಬೇಹುಗಾರಿಕೆ ನಡೆಸುತ್ತಿದ್ದ ಹತ್ತು ರಷ್ಯನ್ನರನ್ನು ಅಮೆರಿಕ ಅದಾಗ ಬಂಧಿಸಿತ್ತು. 2010ರಲ್ಲಿ ಎರಡು ದೇಶಗಳೂ ಗುಪ್ತಚರರ ವಿನಿಮಯಕ್ಕೆ ಮುಂದಾದವು. ಆಗ ವಿನಿಮಯದ ಭಾಗವಾಗಿ ಸ್ಕ್ರಿಪಲ್ ಅವರನ್ನು ಕರೆತರುವಂತೆ ಅಮೆರಿಕದ ಮೇಲೆ ಬ್ರಿಟನ್ ಒತ್ತಡ ಹೇರಿತು. ಸ್ಕ್ರಿಪಲ್ ರಷ್ಯಾದಿಂದ ಬಿಡುಗಡೆಗೊಂಡು ಇಂಗ್ಲೆಂಡಿನಲ್ಲಿ ಬಂದು ನೆಲೆಸಿದರು. 2010ರ ನಂತರವೂ ಇಂಗ್ಲೆಂಡ್ ಮತ್ತು ಇತರ ಪಶ್ಚಿಮ ದೇಶಗಳಿಗೆ ಗುಪ್ತಚರ ಸೇವೆ ಒದಗಿಸುವ ಕಾರ್ಯವನ್ನು ಅನೌಪಚಾರಿಕವಾಗಿ ಮುಂದುವರೆಸಿದರು. ರಷ್ಯಾ ಕುಪಿತಗೊಂಡಿತು.

ಇದೇ ಮಾರ್ಚ್ 4ರಂದು ಸ್ಕ್ರಿಪಲ್ ಮೇಲೆ ರಾಸಾಯನಿಕ ದಾಳಿ ನಡೆಯಿತು. ಅವರ ಮನೆಯ ಮುಂಬಾಗಿಲಿನಲ್ಲಿ ನರೋದ್ರೇಕ ನಂಜು (ನೋವಿಚೋಕ್) ಇದ್ದದ್ದರ ಪರಿಣಾಮ ಸ್ಕ್ರಿಪಲ್ ಮತ್ತು ಮಗಳು ಯುಲಿಯಾ ಪ್ರಜ್ಞೆ ತಪ್ಪಿದರು. ರಕ್ಷಣೆಗಾಗಿ ಧಾವಿಸಿಬಂದ ಪೊಲೀಸ್ ಸಿಬ್ಬಂದಿಗೆ ಕೂಡ ನಂಜು ತಾಕಿ ಆಸ್ಪತ್ರೆ ಸೇರಬೇಕಾದ ಪರಿಸ್ಥಿತಿ ಬಂತು. ಈ ಪ್ರಕರಣದ ತನಿಖೆ ನಡೆಸಿದ ಇಂಗ್ಲೆಂಡ್, ‘ನೋವಿಚೋಕ್ ರಾಸಾಯನಿಕ ಬಳಸಿರುವುದು ಖಚಿತವಾಗಿದೆ. ಇದು ಶೀತಲ ಸಮರದ ಅವಧಿಯಲ್ಲಿ ಸೋವಿಯತ್ ವಿಜ್ಞಾನಿಗಳು ತಯಾರಿಸಿದ ಒಂದು ರಾಸಾಯನಿಕ. ಇದನ್ನು ಸೋವಿಯತ್ ಕಾಲದಲ್ಲೇ ಶೇಖರಿಸಿಟ್ಟುಕೊಂಡಿದ್ದ ರಷ್ಯಾ ಇದೀಗ ಬಳಸಿದೆ’ ಎಂಬ ಆರೋಪ ಮಾಡಿತು. ಆದರೆ ರಷ್ಯಾ ತನ್ನ ಪಾತ್ರವನ್ನು ನಿರಾಕರಿಸಿತು. ‘1933ರಲ್ಲಿ ಜರ್ಮನಿಯ ಸಂಸತ್ತಿಗೆ ಬೆಂಕಿ ಬಿದ್ದಾಗ ಜರ್ಮನಿ ಕೂಡ ಸೋವಿಯತ್‌ನತ್ತ ವಿನಾಕಾರಣ ಬೊಟ್ಟು ಮಾಡಿತ್ತು. ಈಗ ಯಾವುದೇ ಪುರಾವೆ ಇಲ್ಲದಿದ್ದರೂ ಬ್ರಿಟನ್ ಈ ಪ್ರಕರಣವನ್ನು ರಷ್ಯಾದ ತಲೆಗೆ ಕಟ್ಟುತ್ತಿದೆ’ ಎಂದು ರಷ್ಯಾದ ವಿದೇಶಾಂಗ ಮಂತ್ರಿ ಹೇಳಿದರು. ಇದರ ನಡುವೆಯೇ ವಿಶ್ವಸಂಸ್ಥೆಯ ರಾಸಾಯನಿಕ ಶಸ್ತ್ರ ಕಾವಲು ಘಟಕ (OPCW) ತನ್ನ ತನಿಖೆ ಮುಂದುವರೆಸಿ, ತನ್ನ ಪ್ರಕಟಣೆಯಲ್ಲಿ ‘ನೋವಿಚೋಕ್ ಬಳಸಿರುವುದು ನಿಜ. ಆದರೆ ಮೂಲದ ಪತ್ತೆ ಇನ್ನೂ ಸಾಧ್ಯವಾಗಿಲ್ಲ’ ಎಂದಿದೆ.

ತನಿಖೆಯು ರಷ್ಯಾ ಕೈವಾಡವನ್ನು ಎತ್ತಿ ಹಿಡಿಯುತ್ತದೆಯೋ ಅಥವಾ ಇಂಗ್ಲೆಂಡ್ ದೋಷಿ ಎಂದು ತೀರ್ಮಾನಿಸುತ್ತದೆಯೋ ಬೇರೆಯ ಮಾತು. ಆದರೆ ಈ ಬೆಳವಣಿಗೆಯಿಂದ ಕೆಲವು ಅಂಶಗಳಂತೂ ಸಾಬೀತಾಗಿವೆ. ಒಂದು, ಪಶ್ಚಿಮ ಜಗತ್ತಿನ ದೇಶಗಳಲ್ಲಿ ಒಗ್ಗಟ್ಟಿನ ಕೊರತೆ ಇದೆ ಎಂಬ ಅಭಿಪ್ರಾಯ ಕೆಲವು ವರ್ಷಗಳಿಂದ ಕೇಳಿಬರುತ್ತಿತ್ತು. ಆದರೆ ನಿರ್ಣಾಯಕ ಸಂದರ್ಭದಲ್ಲಿ ಈ ದೇಶಗಳು ಏಕದನಿಯಲ್ಲಿ ಮಾತನಾಡಬಲ್ಲವು ಎಂಬುದು ಈ ಪ್ರಕರಣದಿಂದ ಸಾಬೀತಾಗಿದೆ. ಎರಡು, ‘ಅಮೆರಿಕ ಅಧ್ಯಕ್ಷ ಟ್ರಂಪ್ ಮತ್ತು ಪುಟಿನ್ ನಡುವೆ ಒಳ್ಳೆಯ ಸ್ನೇಹವಿದೆ, ಹಾಗಾಗಿ ರಷ್ಯಾ ಎದುರಾಗಿ ಅಮೆರಿಕ ನಿಲುವು ಪ್ರಕಟಿಸದು’ ಎಂಬುದು ಹಲವು ತಜ್ಞರ ಅಭಿಪ್ರಾಯವಾಗಿತ್ತು. ಆದರೆ ಟ್ರಂಪ್ ಆಡಳಿತ ಅಮೆರಿಕದ ಹಳೆಯ ಮಿತ್ರ ಇಂಗ್ಲೆಂಡ್ ಪರವಾಗಿ ನಿಂತಿದೆ. ನ್ಯಾಟೋ ಬಗ್ಗೆ ಚುನಾವಣೆಯ ಸಂದರ್ಭದಲ್ಲಿ ಅಪಸ್ವರ ಎತ್ತಿದ್ದ ಟ್ರಂಪ್, ಇದೀಗ ಒಕ್ಕೂಟದ ಸೇನಾ ಶಕ್ತಿ ಬಲಪಡಿಸುವ ಮಾತನಾಡುತ್ತಿದ್ದಾರೆ!

ಇಲ್ಲಿ ಮುಖ್ಯವಾದ ಒಂದು ಪ್ರಶ್ನೆಯಿದೆ. ಹಾಗಾದರೆ ರಷ್ಯಾ ವಿರುದ್ಧ ಪಶ್ಚಿಮ ಜಗತ್ತು ಒಗ್ಗಟ್ಟಿನ ಹೆಜ್ಜೆ ಇಡುವುದಕ್ಕೆ ಸ್ಕ್ರಿಪಲ್ ಮೇಲೆ ನಡೆದ ರಾಸಾಯನಿಕ ದಾಳಿಯಷ್ಟೇ ಕಾರಣವೇ? ಅಲ್ಲ, ಈ ಪ್ರಕರಣ ರಷ್ಯಾ ವಿರುದ್ಧದ ಹಗೆಬುಗ್ಗೆ ಚಿಮ್ಮಲು ಕೇವಲ ನೆಪವಾಗಿದೆ ಅಷ್ಟೇ. Bad boy of modern geopolitics ಎಂದು ಕರೆಸಿಕೊಳ್ಳುವ ವ್ಲಾದಿಮಿರ್ ಪುಟಿನ್, ಜಾಗತಿಕ ರಾಜಕೀಯದಲ್ಲಿ ಸೋವಿಯತ್ ಔನ್ನತ್ಯವನ್ನು ಮರುಸ್ಥಾಪಿಸುವ ಉದ್ದೇಶ ಇಟ್ಟುಕೊಂಡು ಅಧಿಕಾರಕ್ಕೆ ಬಂದವರು. ಅವರ ಎಲ್ಲ ನಿಲುವು ನಿರ್ಧಾರಗಳಲ್ಲೂ ಆ ಅಂಶ ಸ್ಪಷ್ಟವಾಗಿ ಕಾಣುತ್ತದೆ. ಆದರೆ ಸೋವಿಯತ್ ಪಥನದ ಬಳಿಕ, ರಷ್ಯಾದಿಂದ ಇನ್ನಾವ ಅಪಾಯವೂ ಇಲ್ಲ ಎಂದು ಭಾವಿಸಿದ್ದ ಐರೋಪ್ಯ ರಾಷ್ಟ್ರಗಳು ಪುಟಿನ್ ತರಹದ ವ್ಯಕ್ತಿಯೊಬ್ಬನನ್ನು ಬಹುಶಃ ನಿರೀಕ್ಷಿಸಿರಲಿಲ್ಲ. ಯಾವಾಗ ಪುಟಿನ್ ಸಾರಥ್ಯದ ರಷ್ಯಾ ಕ್ರಿಮಿಯಾದತ್ತ ನುಗ್ಗಿ ಮೈಚಾಚಿಕೊಳ್ಳತೊಡಗಿತೋ, ಈ ರಾಷ್ಟ್ರಗಳು ಅಧೀರಗೊಂಡವು. ಶೀತಲ ಸಮರದ ತರುವಾಯ ರಕ್ಷಣಾ ವೆಚ್ಚವನ್ನು ಗಣನೀಯವಾಗಿ ಕಡಿತಗೊಳಿಸಿದ್ದ ದೇಶಗಳು, ಮಿಲಿಟರಿಗೆ ಶಕ್ತಿ ತುಂಬುವ ಕೆಲಸ ಮಾಡಿದವು.

ಜೊತೆಗೆ, ಇತ್ತೀಚಿನ ವರ್ಷಗಳಲ್ಲಿ ತಾನು ಇಟ್ಟ ಕೆಲವು ತಪ್ಪು ಹೆಜ್ಜೆಗಳಿಂದಾಗಿ ರಷ್ಯಾ ಇತರ ದೇಶಗಳ ವೈರ ಕಟ್ಟಿಕೊಂಡಿತು. 2006ರಲ್ಲಿ ಪುಟಿನ್ ವಿರೋಧಿ ಪಾಳೆಯದಲ್ಲಿ ಗುರುತಿಸಿಕೊಂಡಿದ್ದ, ಕೆಜಿಬಿ (ರಷ್ಯಾ ಗುಪ್ತಚರ ಸಂಸ್ಥೆ) ಮಾಜಿ ಸದಸ್ಯ ಅಲೆಕ್ಸಾಂಡರ್ ಲಿವಿನೆಕೊ ಅವರನ್ನು ಲಂಡನ್ನಿನಲ್ಲಿ ವಿಕಿರಣಶೀಲ ಪೊಲೋನಿಯಂ 210 ಬಳಸಿ ಕೊಲ್ಲಲಾಯಿತು. ಆಗಲೂ ರಷ್ಯಾದತ್ತ ಬೆರಳು ತೋರಿತ್ತು ಬ್ರಿಟನ್. ಟರ್ಕಿಯಲ್ಲಿ ಚೆಚೆನ್ ಕಾರ್ಯಕರ್ತನ ಕೊಲೆಯಾಯಿತು. ಆದರ ಹಿಂದೆಯೂ ರಷ್ಯಾ ಇದೆ ಎಂಬ ಗುಮಾನಿ ಇತ್ತು. 2014ರಲ್ಲಿ ರಷ್ಯಾ ಸೈನಿಕರು ಈಸ್ಟೋನಿಯಾದ ಭದ್ರತಾ ನಿರ್ವಹಣಾಧಿಕಾರಿಯನ್ನು ಅಪಹರಿಸಿದರು. ಉಕ್ರೇನ್ ವಾಯುನೆಲೆ ಪ್ರವೇಶಿಸಿದ್ದ ಮಲೇಷಿಯಾ ವಿಮಾನವನ್ನು ನಿರ್ದಾಕ್ಷಿಣ್ಯವಾಗಿ ಹೊಡೆದುರುಳಿಸುವ ಬಂಡತನವನ್ನು ರಷ್ಯಾ ತೋರಿತು. ಕ್ರಿಮಿಯಾ ಭಾಗವನ್ನು ಒತ್ತುವರಿ ಮಾಡಿಕೊಂಡದ್ದು, ಉಕ್ರೇನ್‌ನಲ್ಲಿ ರಾಜಕೀಯ ಅಸ್ಥಿರತೆ ಸೃಷ್ಟಿಸಿದ್ದು, ಅಮೆರಿಕದ ಚುನಾವಣೆಯ ಮೇಲೆ ಪ್ರಭಾವ ಬೀರಿದ್ದು, ಸಿರಿಯಾದಲ್ಲಿ ನಾಗರಿಕ ನೆಲೆಗಳ ಮೇಲೆ ಅಮಾನವೀಯ ದಾಳಿ ನಡೆಸಿದ್ದು... ಹೀಗೆ ಪುಟಿನ್ ದುಸ್ಸಾಹಸದ ಪಟ್ಟಿ ಬೆಳೆಯುತ್ತಲೇ ಹೋಯಿತು. ಈ ಪ್ರಕರಣಗಳು ನಡೆದಾಗ ಮಿತ್ರರಾಷ್ಟ್ರಗಳು ಸಂತ್ರಸ್ತ ರಾಷ್ಟ್ರದ ಪರ ಸಹಾನುಭೂತಿ ತೋರಿದ್ದವೆಯೇ ವಿನಾ ಸಂಘಟಿತಗೊಂಡಿರಲಿಲ್ಲ. ಇದೀಗ ಆ ಒಳಗುದಿ ಹೊರಚಿಮ್ಮಿದೆ.

ಹಾಗಾದರೆ ರಾಜತಂತ್ರಜ್ಞರ ಹೊರದಬ್ಬುವಿಕೆಯಿಂದರಷ್ಯಾದ ಮೇಲಾಗುವ ಪರಿಣಾಮವೇನು? ಹಾಗೆ ನೋಡಿದರೆ, ರಾಜತಾಂತ್ರಿಕ ಅಧಿಕಾರಿಗಳನ್ನು ಹೊರದಬ್ಬುವ ಪ್ರಯತ್ನವಾಗಿದ್ದು ಇದೇ ಮೊದಲೇನೂ ಅಲ್ಲ. ಶೀತಲ ಸಮರದ ಅವಧಿಯಲ್ಲಿ ಇಂತಹ ಹಲವು ಪ್ರಕರಣಗಳು ನಡೆದಿವೆ. 1983ರಲ್ಲಿ ಅಮೆರಿಕದ ನ್ಯೂಯಾರ್ಕ್‌ನಿಂದ ಸಿಯೋಲ್‌ಗೆ ಹೊರಟಿದ್ದ 269 ಮಂದಿಯಿದ್ದ ದಕ್ಷಿಣ ಕೊರಿಯಾ ವಿಮಾನವನ್ನು ಸೋವಿಯತ್ ಹೊಡೆದುರುಳಿಸಿತ್ತು. ಆದರೆ ತನ್ನ ಪಾತ್ರವನ್ನು ನಿರಾಕರಿಸಿತ್ತು. 1986ರಲ್ಲಿ ಸೋವಿಯತ್ ಪಾತ್ರ ಸಾಬೀತಾದಾಗ 80 ಮಂದಿ ರಾಜತಾಂತ್ರಿಕ ಅಧಿಕಾರಿಗಳಿಗೆ ರೇಗನ್ ಬಾಗಿಲು ತೋರಿಸಿದ್ದರು. ಬ್ರಿಟನ್ ಮತ್ತು ರಷ್ಯಾ ನಡುವೆ ಕೂಡ ಇಂತಹ ಹಲವು ಉದಾಹರಣೆಗಳು ಸಿಗುತ್ತವೆ.

ಮುಖ್ಯವಾಗಿ, ರಷ್ಯಾ ಮೇಲೆ ಪ್ರಮುಖ ಆರೋಪವೊಂದಿದೆ. ಆತಿಥೇಯ ರಾಷ್ಟ್ರದಲ್ಲಿ ರಾಜತಾಂತ್ರಿಕ ಅಧಿಕಾರಿಗಳಿಗೆ ಸಿಗುವ ವಿನಾಯಿತಿ (ಇಮ್ಯುನಿಟಿ) ಬಳಸಿಕೊಂಡು ರಾಜತಾಂತ್ರಿಕ ಸಿಬ್ಬಂದಿಯ ಹೆಸರಿನಲ್ಲಿ ಬೇಹುಗಾರರನ್ನು ವೈರಿ ರಾಷ್ಟ್ರದೊಳಗೆ ರಷ್ಯಾ ನುಗ್ಗಿಸುತ್ತದೆ ಎಂಬುದು ಆರೋಪ. ಶೀತಲ ಸಮರದ ದಿನಗಳಲ್ಲಿ ಸೋವಿಯತ್ ಇದೇ ಕೆಲಸ ಮಾಡುತ್ತಿತ್ತು. ತನ್ನ ಗೂಢಚರ ವ್ಯವಸ್ಥೆಯನ್ನು ಬಲಪಡಿಸಿ ಜಗತ್ತಿನಾದ್ಯಂತ ಹರಡಿತ್ತು. ಪ್ರಸ್ತುತ ರಷ್ಯಾದ ಗುಪ್ತಚರ ವ್ಯವಸ್ಥೆಯು ವಿದೇಶ ಗುಪ್ತಚರ ಸಂಸ್ಥೆ (SVR), ಸೇನಾ ಗೂಢಚರ ಸಂಸ್ಥೆ (GRU) ಮತ್ತು ಭದ್ರತಾ ಸಂಸ್ಥೆ (FSB) ಎಂಬ ಮೂರು ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಇದೀಗ ವಿವಿಧ ದೇಶಗಳಿಂದ ಹೊರಹಾಕಲ್ಪಟ್ಟಿರುವ ಅಧಿಕಾರಿಗಳಲ್ಲಿ 120 ಜನ ಬೇಹುಗಾರಿಕೆಯ ಕೆಲಸಕ್ಕಾಗಿಯೇ ನಿಯೋಜನೆಗೊಂಡವರು ಎಂದು ಹೇಳಲಾಗುತ್ತಿದೆ. ಹಾಗಾಗಿ ರಾಜತಂತ್ರಜ್ಞರ ಬಹಿಷ್ಕಾರದ ಮೊದಲ ಪರಿಣಾಮ ಎಂದರೆ, ಈ ವ್ಯಕ್ತಿಗಳ ಮೂಲಕ ನಡೆಯುತ್ತಿದ್ದ ಮಾಹಿತಿ ಸಂಗ್ರಹ ಕಾರ್ಯಕ್ಕೆ ತಡೆಯಾಗುತ್ತದೆ. ಐರೋಪ್ಯ ರಾಷ್ಟ್ರಗಳಲ್ಲಿ ಆಡಳಿತ ವಿರೋಧಿ ಅಲೆ ಎಬ್ಬಿಸಿ ಅರಾಜಕತೆ ಸೃಷ್ಟಿಸುವ ಪುಟಿನ್ ಗುಪ್ತ ರಾಜಕೀಯ ಕಾರ್ಯತಂತ್ರಕ್ಕೆ ಹಿನ್ನಡೆಯಾಗುತ್ತದೆ.

ಇನ್ನು, ರಷ್ಯಾ ಮತ್ತು ಪಶ್ಚಿಮ ಜಗತ್ತಿನ ನಡುವೆ ಉದ್ಭವಿಸಿರುವ ಪ್ರಕ್ಷುಬ್ಧ ಸ್ಥಿತಿ, ಶೀತಲ ಸಮರದ ದಿನಗಳನ್ನು ನೆನಪಿಗೆ ತಂದರೂ, ಸದ್ಯದ ಅಮೆರಿಕ ಮತ್ತು ರಷ್ಯಾ ಪರಿಸ್ಥಿತಿಯನ್ನು ಅವಲೋಕಿಸುವಾಗ ಶೀತಲ ಸಮರದ ತೀವ್ರತೆ ಮರುಕಳಿಸುವುದು ಕಷ್ಟ ಎನಿಸುತ್ತದೆ. ಶೀತಲ ಸಮರದ ವೇಳೆ ಕೇವಲ ಹತ್ತು ದಿನಗಳ ಅವಧಿಯಲ್ಲಿ ಅಮೆರಿಕ ತನ್ನ 2 ಲಕ್ಷ ಸೈನಿಕರನ್ನು ಯುರೋಪಿನ ನಿರ್ಣಾಯಕ ಸ್ಥಳಗಳಿಗೆ ಕಳುಹಿಸಿಕೊಟ್ಟಿತ್ತು. ಅದಾಗ ಅಮೆರಿಕಕ್ಕೆ ಆ ಸಾಮರ್ಥ್ಯವಿತ್ತು. ಇದೀಗ ಒಂದೊಮ್ಮೆ ರಷ್ಯಾ ದುಸ್ಸಾಹಸಕ್ಕೆ ಮುಂದಾದರೆ ತಕ್ಷಣವೇ ಪ್ರತಿರೋಧ ಒಡ್ಡಲು ಸೇನೆಯನ್ನು ಸಿದ್ಧಗೊಳಿಸಿಕೊಳ್ಳಿ ಎಂಬ ಸಲಹೆಯನ್ನು ಅಮೆರಿಕವು ಐರೋಪ್ಯ ರಾಷ್ಟ್ರಗಳಿಗೆ ನೀಡಿದೆ. ತಾತ್ಪರ್ಯ ಇಷ್ಟೇ, ಅಮೆರಿಕ ಇಂದು ಯಾರ ಭಾರವನ್ನೂ ಹೊರುವ ಸ್ಥಿತಿಯಲ್ಲಿ ಇಲ್ಲ.

ಅತ್ತ ಕಡೆ ಪುಟಿನ್ ರಷ್ಯಾಕ್ಕೆ, ಸೋವಿಯತ್ ಆಗುವ ವಾಂಛೆಯಿದ್ದರೂ, ಆರ್ಥಿಕವಾಗಿ ಮತ್ತು ಸಾಮರಿಕವಾಗಿ ಅದು ಶಕ್ತವಾಗಿಲ್ಲ. ಆರ್ಥಿಕತೆಯಲ್ಲಿ ಕೆನಡಾದಂತಹ ಪುಟ್ಟ ರಾಷ್ಟ್ರವೇ ರಷ್ಯಾಗಿಂತ ಮುಂದಿದೆ. ಹಾಗಾಗಿ ಸೋವಿಯತ್ ಶಕ್ತಿ ಸಾಮರ್ಥ್ಯವನ್ನು ರಷ್ಯಾ ಗಳಿಸಿಕೊಳ್ಳಬೇಕಾದರೆ ಅದು ಪಶ್ಚಿಮ ದೇಶಗಳೊಂದಿಗೆ ಬೆರೆತು ಬಾಳಬೇಕು. ಜೊತೆಗೆ ಹೇಳಿಕೊಳ್ಳಬಲ್ಲ ಬಲಾಢ್ಯ ಸ್ನೇಹ ವಲಯವೂ ಇಂದು ರಷ್ಯಾ ಪಾಲಿಗಿಲ್ಲ. ಹಾಗಾಗಿ ಶೀತಲ ಸಮರದ ತೀವ್ರತೆಗೆ ಪರಿಸ್ಥಿತಿ ಹೋಗಲಾರದು.

ಈ ಎಲ್ಲ ಸಂಗತಿಗಳ ಜೊತೆಗೆ ರಷ್ಯಾ ಮಂಡಿಸುತ್ತಿರುವ ವಾದದಲ್ಲೂ ಹುರುಳಿದೆ. ಪ್ರಸ್ತುತ ತೆರೆಸಾ ಮೇ ನೇತೃತ್ವದ ಸರ್ಕಾರ ‘ಗ್ಲೋಬಲ್ ಬ್ರಿಟನ್’ ಕಾರ್ಯಸೂಚಿಯನ್ನು ಕೇಂದ್ರವಾಗಿರಿಸಿಕೊಂಡಿದೆ. ಯುರೋಪಿನಿಂದ ಹೊರಬಂದ (ಬ್ರೆಕ್ಸಿಟ್) ಬಳಿಕವೂ ಇಂಗ್ಲೆಂಡ್ ಜಾಗತಿಕವಾಗಿ ಮಹತ್ವದ ಪಾತ್ರ ವಹಿಸಲು ಸಾಧ್ಯವಿದೆ ಎಂದು ಇತರ ದೇಶಗಳಿಗೆ ಮನವರಿಕೆ ಮಾಡಿಕೊಡುವುದು ಈ ಕಾರ್ಯಸೂಚಿಯ ಉದ್ದೇಶ. ಹಾಗಾಗಿ ಸ್ಕ್ರಿಪಲ್ ಕೊಲೆ ಪ್ರಯತ್ನವನ್ನು ಹಿರಿದು ಮಾಡಿ ಜಾಗತಿಕವಾಗಿ ಗಮನ ಸೆಳೆಯುತ್ತಿರುವುದು ‘ಗ್ಲೋಬಲ್ ಬ್ರಿಟನ್’ ಕಾರ್ಯಸೂಚಿಯ ಒಂದು ಭಾಗ ಎಂದು ಹೇಳಲಾಗುತ್ತಿದೆ. ಬ್ರೆಕ್ಸಿಟ್ ಮೂಲಕ ದೇಶದೊಳಗೆ ಖ್ಯಾತಿಯಷ್ಟೇ ಅಪಖ್ಯಾತಿಯನ್ನು ಗಳಿಸಿದ್ದ ತೆರೆಸಾ ಮೇ, ಇದೀಗ ಪಶ್ಚಿಮ ದೇಶಗಳ ಏಕತೆಗೆ ಕಾರಣವಾಗಿ ಅಪಖ್ಯಾತಿಯ ಭಾರ ಕಡಿಮೆ ಮಾಡಿಕೊಂಡಿರುವುದಂತೂ ಸತ್ಯ.

ಅದೇನೇ ಇರಲಿ, ಸ್ಕ್ರಿಪಲ್ ಪ್ರಕರಣದ ನಂಜು, ಪೂರ್ವ ಮತ್ತು ಪಶ್ಚಿಮದ ಶಕ್ತಿ ಕೇಂದ್ರಗಳಿಗೆ ಹರಡಿ ಮತ್ತೊಂದು ಶೀತಲ ಸಮರಕ್ಕೆ ಮುನ್ನುಡಿ ಬರೆಯದಿದ್ದರೆ ಅಷ್ಟರಮಟ್ಟಿಗೆ ಜಗತ್ತು ಕ್ಷೇಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT