ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕಿಸ್ತಾನ: ಭಾರತಕ್ಕಿಲ್ಲ ಹೆಚ್ಚಿನ ಆಯ್ಕೆ

Last Updated 30 ಸೆಪ್ಟೆಂಬರ್ 2016, 11:42 IST
ಅಕ್ಷರ ಗಾತ್ರ

ಭಾರತ ಮತ್ತು ಪಾಕಿಸ್ತಾನದ ನಡುವಿನ ಸಮಸ್ಯೆಗಳಿಗೆ ಭಾರತದಲ್ಲಿ ಬಲಪಂಥೀಯ ಹಿಂದೂ ರಾಷ್ಟ್ರೀಯವಾದಿ ಪಕ್ಷವೊಂದು ಅಧಿಕಾರದಲ್ಲಿದ್ದಾಗ ಪರಿಹಾರ ಕಂಡುಕೊಳ್ಳುವುದು ಸಾಧ್ಯ ಎಂಬ ಗ್ರಹಿಕೆಯೊಂದಿದೆ. ಇದರ ಸಮರ್ಥನೆಗೆ ಎರಡು ಕಾರಣಗಳನ್ನು ಸಾಮಾನ್ಯವಾಗಿ ನೀಡಲಾಗುತ್ತದೆ. ಪಾಕಿಸ್ತಾನದೊಡನೆ ಹೊಂದಾಣಿಕೆ ಮಾಡಿಕೊಳ್ಳುವ ಸಂದರ್ಭದಲ್ಲಿ ಏನಾದರೂ ರಿಯಾಯಿತಿಗಳನ್ನು ನೀಡಿದರೆ, ಬಿಜೆಪಿಯಂತಹ ಪಕ್ಷದ ಉದ್ದೇಶಗಳನ್ನು ಭಾರತದ ಬಹುಸಂಖ್ಯಾತರು ಸಂಶಯದಿಂದ ನೋಡುವುದಿಲ್ಲ ಎನ್ನುವುದು ಒಂದು ಕಾರಣ. ಇದೇ ಕೆಲಸವನ್ನು ಕಾಂಗ್ರೆಸ್ ಅಥವಾ ಎಡಪಕ್ಷಗಳ ಸರ್ಕಾರಗಳು ಮಾಡಿದರೆ, ಭಾರತದೊಳಗಿನ ಅಲ್ಪಸಂಖ್ಯಾತರನ್ನು ಓಲೈಸುತ್ತಿರುವ ಅಪವಾದವನ್ನು ಅವುಗಳು ಎದುರಿಸಬೇಕಾಗುತ್ತದೆ. ಎರಡನೆಯ ಕಾರಣ ರಾಜಕೀಯ ನೆಲೆಯದಲ್ಲ, ಬದಲಿಗೆ ಸೈದ್ಧಾಂತಿಕವಾದುದು. ಭಾರತದ ಹಿಂದೂ ರಾಷ್ಟ್ರೀಯವಾದಿಗಳು ಮತ್ತು ಪಾಕಿಸ್ತಾನದ ರಾಷ್ಟ್ರೀಯವಾದಿಗಳು ದಕ್ಷಿಣ ಏಷ್ಯಾದೊಳಗೆ ಹಿಂದೂಗಳು ಮತ್ತು ಮುಸ್ಲಿಮರು ಒಂದಾಗಿರಲು ಸಾಧ್ಯವಿಲ್ಲ, ಭಿನ್ನವಾದ ರಾಷ್ಟ್ರಗಳನ್ನು ಕಟ್ಟಿಕೊಳ್ಳಬೇಕು ಎನ್ನುವ ಸೈದ್ಧಾಂತಿಕ ನಿಲುವನ್ನು ಹೊಂದಿದ್ದಾರೆ. ಆ ಕಾರಣದಿಂದಲೇ 1940ರ ದಶಕದಲ್ಲಿ ಈ ಎರಡೂ ಎದುರಾಳಿ ಗುಂಪುಗಳು ಭಾರತದ ವಿಭಜನೆಯನ್ನು ಸುಲಭವಾಗಿ ಒಪ್ಪಿದವು. ಧಾರ್ಮಿಕ ಭಿನ್ನತೆಯು ರಾಜಕೀಯ ಏಕತೆಯನ್ನು ತಡೆಯುತ್ತದೆ ಎನ್ನುವ ಸೈದ್ಧಾಂತಿಕ ಸಾಮ್ಯತೆಯನ್ನು ಈ ಎರಡೂ ಗುಂಪುಗಳು ಹೊಂದಿವೆ ಎನ್ನುವುದು ನಾನಿಲ್ಲಿ ಗುರುತಿಸುತ್ತಿರುವ ಮುಖ್ಯವಾದ ಅಂಶ. ಇದರ ಜೊತೆಗೆ ಭಾರತವೆನ್ನುವುದು ಎಲ್ಲ ಧಾರ್ಮಿಕ ಸಮುದಾಯಗಳ ಜನರ ಮಾತೃಭೂಮಿಯೂ ಆದ ಆಧುನಿಕ ಪ್ರಜಾಪ್ರಭುತ್ವ ಎನ್ನುವ ನಂಬಿಕೆಯೂ ಭಾರತೀಯ ರಾಷ್ಟ್ರೀಯತೆಯ ಬಹುಮುಖ್ಯ ಆಯಾಮವಾಗಿ ಬೆಳೆದುಬಂದಿದೆ ಎನ್ನುವುದನ್ನು ನಾವಿಲ್ಲಿ ಮರೆಯುವಂತಿಲ್ಲ.

ಬಿಜೆಪಿ ನೇತೃತ್ವದ ಸರ್ಕಾರಗಳು ಪಾಕಿಸ್ತಾನದ ಜೊತೆಗಿನ ವಿವಾದಗಳನ್ನು ಬಗೆಹರಿಸಬಲ್ಲವು ಎನ್ನುವ ಗ್ರಹಿಕೆ ಸರಿಯೊ ತಪ್ಪೊ ಎನ್ನುವುದು ಅಷ್ಟು ಮುಖ್ಯವಲ್ಲ. ಆದರೆ ಆ ನಂಬಿಕೆಯ ಲಾಭವಂತೂ ಮೋದಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಅದು ಅಧಿಕಾರಕ್ಕೆ ಬಂದಾಗಿನಿಂದಲೂ ದೊರಕಿದೆ ಎನ್ನುವುದು ಸ್ಪಷ್ಟ. ಹಾಗಾಗಿಯೇ ಪ್ರಧಾನಿಯವರು ಕಳೆದ ವರ್ಷದ ಕ್ರಿಸ್‌ಮಸ್ ದಿನದಂದು ಪಾಕಿಸ್ತಾನಕ್ಕೆ ಅನಿರೀಕ್ಷಿತ ಭೇಟಿ ನೀಡಿದಾಗ ಅದನ್ನು ಸ್ವಾಗತಿಸಿದವರೇ ಹೆಚ್ಚು ಜನ. ಕಾಶ್ಮೀರದಲ್ಲಿ ಪಿಡಿಪಿಯೊಡನೆ ಬಿಜೆಪಿಯು ಸಮ್ಮಿಶ್ರ ಸರ್ಕಾರ ರಚಿಸಿದಾಗ ಅದರಿಂದ ಕಾಶ್ಮೀರದಲ್ಲಿ ಶಾಂತಿ ಸ್ಥಾಪನೆ ಸಾಧ್ಯವೇನೊ ಎನ್ನುವ ಆಶಾವಾದ ಹಲವರಲ್ಲಿತ್ತು. ಸ್ವತಃ ಮೋದಿಯವರೆ ಅತ್ಯುತ್ಸಾಹದ ವಿದೇಶಾಂಗ ನೀತಿಯನ್ನು ತಮ್ಮದಾಗಿಸಿಕೊಂಡು, ಪ್ರಪಂಚದೊಡನೆಯ ಭಾರತದ ಸಂಬಂಧವನ್ನು ಮತ್ತೆ ಹೊಸದಾಗಿ ಜೋಡಿಸುವ ಮಹತ್ವಾಕಾಂಕ್ಷೆಯನ್ನು ಹೊಂದಿದ್ದರು ಎನ್ನುವುದೂ ಇಲ್ಲಿ ಉಲ್ಲೇಖನೀಯ.

ಆದರೆ ಕಾಶ್ಮೀರದ ಸಮಸ್ಯೆ ಕಳೆದ ಮೂರು ತಿಂಗಳಲ್ಲಿ ಉಲ್ಬಣಗೊಳ್ಳುತ್ತಿದ್ದಂತೆ, ಭಾರತ ಮತ್ತು ಪಾಕಿಸ್ತಾನದ ನಡುವಣ ಸಂಬಂಧ ಮತ್ತೆ ಕೆಟ್ಟಿದೆ. ಸೆಪ್ಟೆಂಬರ್ 18ರಂದು ಉರಿಯಲ್ಲಿನ ಭಾರತೀಯ ಸೇನಾ ನೆಲೆಯ ಮೇಲೆ ಉಗ್ರಗಾಮಿಗಳು ಆಕ್ರಮಣ ಮಾಡಿದ ನಂತರ, ವಿಶ್ವಸಂಸ್ಥೆಯೂ ಸೇರಿದಂತೆ ಹಲವು ವೇದಿಕೆಗಳಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ರಾಜತಾಂತ್ರಿಕ ಪೈಪೋಟಿ ಮತ್ತೆ ಪ್ರಾರಂಭವಾಗಿದೆ. ಪಾಕಿಸ್ತಾನದಿಂದ ಭಾರತದ ಭದ್ರತೆಗೆ ಪದೇಪದೇ ಗಾಸಿಯಾಗುತ್ತಿದ್ದರೆ ಭಾರತ ಏನು ಮಾಡಬೇಕು ಎನ್ನುವ ಪ್ರಶ್ನೆ ಮತ್ತೆ ಮುಂಚೂಣಿಗೆ ಬಂದಿದೆ. ರಾಜತಾಂತ್ರಿಕ ಮತ್ತು ಮಿಲಿಟರಿ ಆಯ್ಕೆಗಳು ಭಾರತದ ಮುಂದೆ ಇವೆ ಎನ್ನುವ ಪ್ರಶ್ನೆ ಚರ್ಚೆಯಾಗುತ್ತಿದೆ. ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಪಾಕಿಸ್ತಾನವನ್ನು ಒಂಟಿಯಾಗಿಸುವ ಪ್ರಯತ್ನವನ್ನು ಭಾರತ ನಡೆಸುತ್ತಿದೆ. ಸಾರ್ಕ್ ಶೃಂಗಸಭೆಯಲ್ಲಿ ಭಾಗವಹಿಸದಿರುವುದು, ಸಿಂಧೂ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಮರುಚಿಂತನೆ ಮತ್ತು ಪಾಕಿಸ್ತಾನದೊಳಗಿನ ಮಾನವ ಹಕ್ಕು ಉಲ್ಲಂಘನೆಯ ಘಟನೆಗಳ ಪ್ರಸ್ತಾಪ- ಇವುಗಳೆಲ್ಲವೂ ಈ ಪ್ರಯತ್ನದ ವಿಭಿನ್ನ ಆಯಾಮಗಳಷ್ಟೆ. ಪಠಾಣ್‌ಕೋಟ್‌ ಹಾಗೂ ಉರಿಯ ಸೇನಾ ನೆಲೆಗಳ ಮೇಲಿನ ದಾಳಿಗಳು ಪಾಕಿಸ್ತಾನ ಸೈನ್ಯದ ಇಲ್ಲವೆ ಗುಪ್ತಚರ ಸಂಸ್ಥೆಗಳ ಸಹಾಯದಿಂದಲೇ ನಡೆದಿವೆ ಎಂದು ಭಾರತವು ನೀಡಿರುವ ಸಾಕ್ಷ್ಯಾಧಾರಗಳನ್ನು ಪಾಕಿಸ್ತಾನ ಒಪ್ಪುತ್ತಿಲ್ಲ. ಒಂದು ಕ್ಷಣ ನಾವು ಪ್ರಾಮಾಣಿಕವಾಗಿ ಅವಲೋಕಿಸಿದರೆ ಪಾಕಿಸ್ತಾನವನ್ನು ಒಂಟಿಯಾಗಿಸುವ ಭಾರತದ ಪ್ರಯತ್ನಗಳಿಗೆ ಅಂತಹ ಯಶಸ್ಸೂ ದೊರಕುತ್ತಿಲ್ಲ ಎಂದು ಒಪ್ಪಲೇಬೇಕಾಗುತ್ತದೆ.

ಇದರ ಜೊತೆಗೆ ಭಾರತದ ಮುಂದಿರುವ ಮಿಲಿಟರಿ ಆಯ್ಕೆಗಳೂ ಅಷ್ಟೇನೂ ಹಿತಕರವಾದವುಗಳಲ್ಲ. ಬುಧವಾರ ರಾತ್ರಿ ಭಾರತೀಯ ಸೈನ್ಯವು ನಡೆಸಿದ  ‘ಸರ್ಜಿಕಲ್  ದಾಳಿ’ಗಳು ಸಾಂಕೇತಿಕವಾದವುಗಳು ಮಾತ್ರ. ಉಗ್ರಗಾಮಿಗಳು ಇರಬಹುದಾದ ಗುರಿತಾಣಗಳ ಮೇಲೆ ನಡೆಸಿದ ಈ ನಿರ್ದಿಷ್ಟ ದಾಳಿಗಳಿಂದ ಹೆಚ್ಚಿನ ನಷ್ಟವಾಗುವುದಿಲ್ಲ. ಅಲ್ಲಿರಬಹುದಾದ ಮೂಲಭೂತ ಸೌಕರ್ಯಗಳನ್ನು ಹೆಚ್ಚು ವೆಚ್ಚವಿಲ್ಲದೆ ಮತ್ತೊಂದೆಡೆ ಉಗ್ರಗಾಮಿಗಳು ಮತ್ತವರ ಪಾಕಿಸ್ತಾನಿ ಪೋಷಕರು ಕಟ್ಟಿಕೊಳ್ಳುತ್ತಾರೆ. ನಮ್ಮ ದಾಳಿಗಳು ಹೆಚ್ಚು ತೀವ್ರವಾದರೆ, ನ್ಯೂಕ್ಲಿಯರ್ ಕದನದ ಭಯವೂ ಭಾರತದ ಮುಂದಿದೆ. ಹಾಗಾಗಿ ಪಾಕಿಸ್ತಾನವನ್ನು ನಿಗ್ರಹಿಸುತ್ತೇವೆ ಎನ್ನುವ ಉಗ್ರ ಸಂಕಲ್ಪದ ಅನುಷ್ಠಾನಕ್ಕೆ ಇಲ್ಲವೆ ಅಮೆರಿಕದಂತಹ ದೇಶಗಳು ನಡೆಸುವ ಸತತ ವೈಮಾನಿಕ ದಾಳಿಗಳಿಗೆ ಆಸ್ಪದವಿಲ್ಲ.

ನಿಜ ಹೇಳಬೇಕೆಂದರೆ ಭಾರತದ ಮುಂದಿರುವ ರಾಜತಾಂತ್ರಿಕ ಇಲ್ಲವೆ ಮಿಲಿಟರಿ ಆಯ್ಕೆಗಳು ಸೀಮಿತವಾದವು ಮಾತ್ರವಲ್ಲ, ಕೇವಲ ತೋರಿಕೆಯವು ಹಾಗೂ ಭಾರತದೊಳಗಿನ ಜನರಿಗೆ ಸಾಂಕೇತಿಕ ಮಹತ್ವವನ್ನು ಹೊಂದಿರುವುವು. ನನ್ನ ಮಾತು ಅತಿಶಯೋಕ್ತಿ ಎನ್ನಿಸುವುದಾದರೆ ಇತಿಹಾಸದ ಪುಟಗಳಿಂದ ದೊರಕುವ ಈ ಕೆಲವು ಅಂಶಗಳನ್ನು ಗಮನಿಸಿ. ಶೇಖರ್ ಗುಪ್ತ ಅವರು ಗುರುತಿಸಿದಂತೆ ಪಾಕಿಸ್ತಾನವು ಕಾಶ್ಮೀರದಲ್ಲಿ 1948ರಲ್ಲಿ ಪಡೆದುಕೊಂಡಿದ್ದ ಭೂಪ್ರದೇಶಕ್ಕಿಂತ ಕಡಿಮೆ ಭಾಗಗಳನ್ನು ಇಂದು ತನ್ನ ನಿಯಂತ್ರಣದಲ್ಲಿ ಹೊಂದಿದೆ. ಕಾರ್ಗಿಲ್ ಮತ್ತು ಸಿಯಾಚಿನ್‌ಗಳ ಮೇಲೆ ಭಾರತವು ತನ್ನ ನಿಯಂತ್ರಣ ಸ್ಥಾಪಿಸಿಕೊಂಡಿದೆ. ಅದಕ್ಕಿಂತ ಮಿಗಿಲಾಗಿ 1971ರಲ್ಲಿ ಬಾಂಗ್ಲಾದೇಶ ಸ್ವತಂತ್ರವಾದಾಗ, ಪಾಕಿಸ್ತಾನವು ತನ್ನ ಅರ್ಧದಷ್ಟು ಪ್ರದೇಶವನ್ನೇ ಕಳೆದುಕೊಂಡಿತು. ಭಾರತವು ಚೀನಾಕ್ಕೆ ಲಡಾಖಿನಲ್ಲಿ ತನ್ನ ಭೂಪ್ರದೇಶವನ್ನು ಕಳೆದುಕೊಂಡಿದ್ದರೂ, ಪಾಕಿಸ್ತಾನದ ವಿರುದ್ಧ ಯಾವುದೇ ದೊಡ್ಡ ನಷ್ಟವನ್ನು ಅನುಭವಿಸಿಲ್ಲ.

ಈ ವಿಚಾರವನ್ನು ಇಲ್ಲಿ ಪ್ರಸ್ತಾಪಿಸಿರುವುದಕ್ಕೆ ಒಂದು ಕಾರಣವಿದೆ. ಪಾಕಿಸ್ತಾನವು ಈಗಾಗಲೇ ಕಳೆದುಕೊಂಡಿರುವುದಕ್ಕಿಂತ ಹೆಚ್ಚಿನ ನಷ್ಟವನ್ನು ಅನುಭವಿಸುವುದು ಅಸಂಭವ. ಯಾಕೆಂದರೆ ಅಣುಬಾಂಬುಗಳ ಪ್ರಯೋಗದ ಆತಂಕವಿರುವ ಈ ಕಾಲಘಟ್ಟದಲ್ಲಿ ಯಾರೂ ಸಾಂಪ್ರದಾಯಿಕ ಯುದ್ಧವನ್ನು ನಡೆಸುವುದಿಲ್ಲ. ಹಾಗಾಗಿ ಪಾಕಿಸ್ತಾನವು ಭಾರತದ ಮೇಲೆ ಅಸಾಂಪ್ರದಾಯಿಕ ತಂತ್ರಗಳನ್ನು ಬಳಸುತ್ತ, ಭಾರತವನ್ನು ಒಡೆಯಲು ಪ್ರಯತ್ನಿಸುತ್ತಲೇ ಇರುತ್ತದೆ. ತನ್ನ ಪಕ್ಕದಲ್ಲಿರುವ, ತನಗಿಂತ ಹಲವು ಬಾರಿ ದೊಡ್ಡದಾದ, ಹೆಚ್ಚಿನ ಸಂಪನ್ಮೂಲಗಳಿರುವ ದೇಶವನ್ನು ಅದು ಸಹಿಸುವುದಿಲ್ಲ ಎನ್ನುವುದು ಎಲ್ಲ ವಿಚಾರಧಾರೆಯ, ಸೈದ್ಧಾಂತಿಕ ಹಿನ್ನೆಲೆಯ ಜನರೂ ಪ್ರಶ್ನಿಸಲಾಗದ ವಾಸ್ತವ.

ಈ ಮಾತನ್ನು ಬರೆಯುವಾಗಲೇ ಒಂದು ಸೂಕ್ಷ್ಮವನ್ನು ಪ್ರಸ್ತಾಪಿಸಬೇಕು. ಭಾರತ ಮತ್ತು ಪಾಕಿಸ್ತಾನಗಳೆರಡೂ ದೇಶಗಳಲ್ಲಿರುವ ಶಾಂತಿಪ್ರಿಯರು ಎರಡೂ ದೇಶದ ಜನರನ್ನು ಹತ್ತಿರ ತಂದರೆ ಸಾಕು, ಶಾಂತಿ ಸ್ಥಾಪನೆಯಾಗುತ್ತದೆ ಎನ್ನುವ ಆಶಾವಾದವನ್ನು ಆಗಾಗ ವ್ಯಕ್ತಪಡಿಸುತ್ತಾರೆ. ಭಾರತ ಮತ್ತು ಪಾಕಿಸ್ತಾನಗಳ ಜನರು ಒಂದೇ ಸಾಂಸ್ಕೃತಿಕ ಮತ್ತು ಸಾಮಾಜಿಕ ಹಿನ್ನೆಲೆಯನ್ನು ಹೊಂದಿರುವವರು, ಒಂದೇ ನಾಗರಿಕತೆಯು ಎರಡೂ ದೇಶಗಳನ್ನು ಪೋಷಿಸುತ್ತಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಪರಸ್ಪರರ ದೇಶಗಳಿಗೆ ಭೇಟಿ ನೀಡಿದಾಗ ಎರಡೂ ದೇಶಗಳ ಜನರು ತಮ್ಮಲ್ಲಿರುವ ಸಾಮ್ಯತೆಗಳ ಬಗ್ಗೆ ತುಂಬ ಆಶ್ಚರ್ಯ ಮತ್ತು ಉತ್ಸುಕತೆಯಿಂದಲೇ ಮಾತನಾಡುತ್ತಾರೆ. ಭಾರತದಾಚೆ ವಾಸಿಸುವ ಅವಕಾಶ ದೊರಕಿದ ಲಕ್ಷಾಂತರ ಜನರಿಗೆ ಇರುವಂತೆ, ನನಗೂ ಪಾಕಿಸ್ತಾನ ಮೂಲದ ಅತ್ಯಂತ ಆತ್ಮೀಯ ಸ್ನೇಹಿತರಿದ್ದಾರೆ. ಆದರೆ ಎರಡೂ ದೇಶಗಳ ನಾಗರಿಕ ಸಮಾಜಗಳ ಪ್ರಯತ್ನಗಳಿಂದ ಶಾಂತಿ ಸ್ಥಾಪನೆಯಾಗುತ್ತದೆ ಎನ್ನುವ ಆಶಾವಾದ ಇಂದು ಉಳಿದಿಲ್ಲ.

ಇದಕ್ಕೆ ಸಹ ಇತಿಹಾಸದ ಪುಟಗಳಿಂದ ಕಾರಣವೊಂದು, ಪಾಕಿಸ್ತಾನದ ರಾಷ್ಟ್ರೀಯತೆಗೆ ಸಂಬಂಧಿಸಿದ ವಿವರಣೆಯೊಂದು ದೊರಕುತ್ತದೆ. ಪಾಕಿಸ್ತಾನವೆಂಬ ಭಿನ್ನವಾದ ರಾಜಕೀಯ ಘಟಕ ದಕ್ಷಿಣ ಏಷ್ಯಾದ ಮುಸ್ಲಿಮರಿಗೆ ಬೇಕು ಎನ್ನುವ ನೆಲೆಯ ಮೇಲೆ ಪಾಕಿಸ್ತಾನ ರಾಷ್ಟ್ರೀಯತೆ ರೂಪುಗೊಂಡಿತು. ಇತಿಹಾಸಕಾರ ಫೈಸಲ್ ದೇವ್ಜಿ ವಾದಿಸುವಂತೆ 1930ರ ದಶಕದಲ್ಲಿ ಚಾಲನೆ ಪಡೆದು, ಹತ್ತೇ ವರ್ಷಗಳಲ್ಲಿ ಅಭೂತಪೂರ್ವ ಯಶಸ್ಸನ್ನು ಗಳಿಸಿದ ಪರಿಕಲ್ಪನೆಯಿದು. ದೇವ್ಜಿ ಪಾಕಿಸ್ತಾನವನ್ನು ಮುಸ್ಲಿಮ್ ‘ಜಿಯಾನ್’ ಎಂದು ಕರೆದು, ಯಹೂದಿಗಳು ಕಟ್ಟಿದ ಇಸ್ರೇಲಿಗೆ ಹೋಲಿಸುತ್ತಾರೆ. ಅವರ ಮಾತಿನ ಅರ್ಥವಿಷ್ಟೆ. ದಕ್ಷಿಣ ಏಷ್ಯಾದ ಕೆಲವು ಮುಸ್ಲಿಮರು ತಮಗೊಂದು ತಾಯಿನಾಡು ಬೇಕು ಎಂದು ಯಹೂದಿಗಳನ್ನು ಅನುಸರಿಸಿದರು. ಹೀಗೆ ಪಾಕಿಸ್ತಾನದ ರಾಷ್ಟ್ರೀಯತೆಯು ಯುರೋಪಿನ ಅಥವಾ ಏಷ್ಯಾದ ಇತರ ರಾಷ್ಟ್ರಗಳು ಭಾಷೆ, ಸಂಸ್ಕೃತಿ ಇಲ್ಲವೆ ನಾಗರಿಕತೆಯಂತಹ ಆಯಾಮಗಳ ಆಧಾರದ ಮೇಲೆ ರೂಪುಗೊಂಡ ರಾಷ್ಟ್ರೀಯತೆಗಳ ಮಾದರಿಯನ್ನು ಅನುಸರಿಸುತ್ತಿಲ್ಲ, ಬದಲಿಗೆ ಇಸ್ರೇಲನ್ನು ಅನುಸರಿಸಿವೆ.

ಈ ರಾಷ್ಟ್ರೀಯತೆಯನ್ನು ಕಟ್ಟಿದವರು ಬಹುಪಾಲು ಮೇಲ್ವರ್ಗದ, ಅದರಲ್ಲೂ ಭೂಮಾಲೀಕ ವರ್ಗಕ್ಕೆ ಸೇರಿದ ರಾಜಕೀಯ ನಾಯಕರು. ಸ್ವಾತಂತ್ರ್ಯಾನಂತರ ಪಾಕಿಸ್ತಾನದ ಭದ್ರತಾ ಪಡೆಗಳು (ಇದರಲ್ಲಿ ಗುಪ್ತಚರ ಪಡೆಗಳನ್ನೂ ಸೇರಿಸಬೇಕು) ಪಾಕಿಸ್ತಾನಿ ರಾಷ್ಟ್ರೀಯತೆಯನ್ನು ಪೋಷಿಸಿದರು. ಭಾರತ ಮತ್ತು ಪಾಕಿಸ್ತಾನದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ತೌಲನಿಕವಾಗಿ ಅಭ್ಯಸಿಸಿರುವ ಮಾಯಾ ಟ್ಯೂಡರ್ ಗುರುತಿಸುವಂತೆ, ಪಾಕಿಸ್ತಾನದ ಮೇಲ್ವರ್ಗಗಳು ಪ್ರಜಾಪ್ರಭುತ್ವವು ಆಳವಾಗಿ ಬೇರೂರುವುದನ್ನು ತಡೆದವು. ಹಾಗಾಗಿ ಪಾಕಿಸ್ತಾನದ ಪ್ರಭುತ್ವದ ಕೇಂದ್ರದಲ್ಲಿ ಇಂದಿಗೂ ಮೇಲ್ವರ್ಗಗಳು ಮತ್ತು ಅಲ್ಲಿನ ಸೈನ್ಯಗಳು ಮಾತ್ರ ಇವೆ. ಇದರ ಪರಿಣಾಮವೆಂದರೆ ಪಾಕಿಸ್ತಾನದ ನಾಗರಿಕ ಸಮಾಜಕ್ಕೆ ಪ್ರಭುತ್ವದ ನಡವಳಿಕೆಗಳನ್ನು ಪ್ರಭಾವಿಸುವ ಶಕ್ತಿ ಕಡಿಮೆ.

ಭಾರತ ವಿರೋಧಿಯಾಗಿಯೇ ತನ್ನನ್ನು ವ್ಯಾಖ್ಯಾನಿಸಿಕೊಳ್ಳುತ್ತ ಬಂದಿರುವ ಪಾಕಿಸ್ತಾನದ ರಾಷ್ಟ್ರೀಯತೆಗೆ ಭಾರತದೊಡನೆ ಹೊಂದಾಣಿಕೆ ಮಾಡಿಕೊಳ್ಳಲು ಹೆಚ್ಚಿನ ಉತ್ಸುಕತೆಯಿಲ್ಲ. ಇಂತಹ ಪಾಕಿಸ್ತಾನವನ್ನು ಸಹಿಸಿಕೊಳ್ಳುವುದಲ್ಲದೆ ಭಾರತಕ್ಕೂ ಇತರೆ ಆಯ್ಕೆಗಳಿಲ್ಲ. ವ್ಯಾವಹಾರಿಕವಾಗಿ ನೋಡುವುದಾದರೆ, ಭಾರತಕ್ಕೆ ತನ್ನ ಭದ್ರತೆಯ ಬಗ್ಗೆ ಎಚ್ಚರವಿರಬೇಕು. ಅದಕ್ಕಿಂತ ಮಿಗಿಲಾಗಿ ತನ್ನೊಳಗಿನ ಎಲ್ಲ ಪ್ರದೇಶಗಳ, ಸಮುದಾಯಗಳ ಜನರೂ ಭಾರತದ ವರ್ತಮಾನ ಮತ್ತು ಭವಿಷ್ಯಗಳಲ್ಲಿ ತಾವು ಭಾಗಿದಾರರು ಎನ್ನುವ ಭಾವನೆ ಮೂಡಿಸುವ ವ್ಯವಸ್ಥೆಯನ್ನು ಕಟ್ಟಿಕೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT