ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್‌ ಸ್ನೇಹ ಮತ್ತು ಸಾಂಸ್ಕೃತಿಕ ಸಂಘರ್ಷ

Last Updated 22 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

ಅಟಲ್ ಬಿಹಾರಿ ವಾಜಪೇಯಿ ಅವರು 1999ರ ಫೆಬ್ರುವರಿಯಲ್ಲಿ ಪಾಕಿಸ್ತಾನದ ಲಾಹೋರ್‌ಗೆ ಐತಿಹಾಸಿಕ ಬಸ್‌ ಯಾತ್ರೆ ಕೈಗೊಳ್ಳುವ ಹಿಂದಿನ ದಿನದ ರಾತ್ರಿ ಅವರ ಕಚೇರಿಯ ಸಿಬ್ಬಂದಿ ತೀವ್ರ ಒತ್ತಡದಲ್ಲಿ ಇದ್ದರು. ಬಾಲಿವುಡ್‌ ನಟ ದೇವಾನಂದ್‌ ಅವರನ್ನು ಮಧ್ಯರಾತ್ರಿಯಲ್ಲಿ ಸಂಪರ್ಕಿಸಿ ಬಸ್‌ ಯಾತ್ರೆಯಲ್ಲಿ ಭಾಗವಹಿಸಲು ಕೊನೇ ಕ್ಷಣದಲ್ಲಿ ಆಹ್ವಾನ ನೀಡುವುದು ಹೇಗೆ ಎನ್ನುವುದು ಅವರ ಚಡಪಡಿಕೆಗೆ ಕಾರಣವಾಗಿತ್ತು. ಪಾಕಿಸ್ತಾನದ ಪ್ರಧಾನಿ ನವಾಜ್‌ ಷರೀಫ್‌ ಅವರೂ ದೇವಾನಂದ್‌ ಅವರ ಅಭಿಮಾನಿಯಾಗಿರುವುದು ಅಟಲ್‌ ಅವರಿಗೆ ಕೊನೇ ಕ್ಷಣದಲ್ಲಿ ನೆನಪಾಗಿತ್ತು. ತಮ್ಮೊಂದಿಗೆ ಅವರನ್ನೂ ಪಾಕಿಸ್ತಾನಕ್ಕೆ ಕರೆದೊಯ್ಯಬೇಕು ಎಂಬುದು ಅವರ ಮನಸ್ಸಿಗೆ ತಡವಾಗಿ ಹೊಳೆದಿತ್ತು. ದೇವ್‌ ಸಾಹೇಬ್‌ ಅವರ ಇನ್ನೊಬ್ಬ ಅಭಿಮಾನಿಯೊಬ್ಬ ಮುಂದೆ ಬಂದು ಆ ಹೊಣೆಗಾರಿಕೆಯನ್ನು ಯಶಸ್ವಿಯಾಗಿ ನಿಭಾಯಿಸುವುದಾಗಿ ಒಪ್ಪಿಕೊಂಡಿದ್ದ. ವಾಜಪೇಯಿ ಅವರೊಂದಿಗೆ ಬಸ್‌ನಲ್ಲಿ ಲಾಹೋರ್‌ಗೆ ಪ್ರಯಾಣಿಸಲು ಪ್ರಧಾನಿ ಬಯಸಿರುವುದನ್ನು ಅವರ ಗಮನಕ್ಕೆ ತಂದಾಗ ದೇವಾನಂದ್‌ ಅದನ್ನು ಹರ್ಷದಿಂದಲೇ ಸ್ವೀಕರಿಸಿದ್ದರು. ದೇವಾನಂದ್‌ ಅವರ ಉಪಸ್ಥಿತಿಯು ಯಾತ್ರೆಯ ಪ್ರಮುಖ ಆಕರ್ಷಣೆಯಾಗಿತ್ತು.

ದೇವಾನಂದ್‌ ಅವರು 1940ರಲ್ಲಿ ವಿದ್ಯಾಭ್ಯಾಸ ಮಾಡಿದ್ದ ಕಾಲೇಜಿನಲ್ಲಿ ಸಮಾರಂಭವೊಂದನ್ನು ಆಯೋಜಿಸಲಾಗಿತ್ತು. ದೇವಾನಂದ್‌ ಅವರು ಆ ಕಾಲಘಟ್ಟದಲ್ಲಿ ಬಹುಶಃ ಹುಡುಗಿಯೊಬ್ಬಳಿಗೆ ತಮ್ಮ ಜೀವನದಲ್ಲಿ ಮೊದಲ ಬಾರಿ ಮುತ್ತಿಟ್ಟಿದ್ದಕ್ಕೆ ಸಾಕ್ಷಿಯಾಗಿದ್ದ ಕಾಲೇಜು ಅದಾಗಿತ್ತು. ಸಮಾರಂಭದಲ್ಲಿ ಭಾಗಿಯಾಗಿದ್ದ ರಾಜಕಾರಣಿಗಳು, ಸಮಾಜದ ಗಣ್ಯರು, ಮಾಧ್ಯಮದವರ ಸಮ್ಮುಖದಲ್ಲಿ ದೇವಾನಂದ್‌ ಮತ್ತೊಮ್ಮೆ ಎಲ್ಲರ ಗಮನ ಸೆಳೆದಿದ್ದರು. ದೇವಾನಂದ್‌ ಅವರಿಗಿಂತ ಒಂದು ವರ್ಷ ಚಿಕ್ಕವರಾಗಿದ್ದ ವಾಜಪೇಯಿ ಅವರಿಗೆ ದೇವಾನಂದ್‌ ಅವರನ್ನು ತಮ್ಮೊಂದಿಗೆ ಕರೆದೊಯ್ಯುವ ಮೂಲಕ ಈ ಮಹತ್ವದ ಮತ್ತು ಐತಿಹಾಸಿಕ ಭೇಟಿಯ ಮಹತ್ವ ತಗ್ಗಿಸುವ ಇರಾದೆ ಇದ್ದಿರಲಿಲ್ಲ. ಭಾರತದ ಸಾಂಸ್ಕೃತಿಕ ಹಿರಿಮೆಯನ್ನು  ಪಾಕಿಸ್ತಾನದ ಜನರಿಗೆ ಪರಿಚಯಿಸುವುದೇ ಅವರ ಮುಖ್ಯ ಉದ್ದೇಶವಾಗಿತ್ತು.

ಪಾಕಿಸ್ತಾನದ ವಿರುದ್ಧ ಸಾಂಸ್ಕೃತಿಕ, ಕ್ರೀಡೆ ಮತ್ತು ಅಕಾಡೆಮಿಕ್‌ ಬಹಿಷ್ಕಾರ ಹಾಕುವ ಬಗ್ಗೆ ಸದ್ಯಕ್ಕೆ ನಡೆಯುತ್ತಿರುವ ಪ್ರಚಾರವನ್ನು ಕಿವಿಗೊಟ್ಟು ಆಲಿಸಿದರೆ ‘ಸಾಂಸ್ಕೃತಿಕ ಪ್ರಭಾವ’ ಎನ್ನುವುದು ಸದ್ಯದ ಸಂದರ್ಭದಲ್ಲಿ ಅರ್ಥವಾಗದ ನುಡಿಗಟ್ಟು ಎನ್ನುವುದು ದೃಢಪಡುತ್ತದೆ.

ಪಾಕಿಸ್ತಾನ ವಿರುದ್ಧದ ಈ ಕೋಪೋದ್ರಿಕ್ತ ಪ್ರಚಾರ ಅಭಿಯಾನದಲ್ಲಿ ಪ್ರತಿಭಾನ್ವಿತ ಕ್ರಿಕೆಟಿಗರಾದ ಗೌತಮ್‌ ಗಂಭೀರ್‌ ಮತ್ತು ಸೌರವ್‌ ಗಂಗೂಲಿ ಅವರೂ ಭಾಗಿಯಾಗಿದ್ದಾರೆ. ಪಾಕಿಸ್ತಾನದ ಜತೆಗಿನ ಬಾಂಧವ್ಯ ಈಗಿನದಕ್ಕಿಂತ ಹೆಚ್ಚು ವಿಷಮಿಸಿದ್ದ ದಿನಗಳಲ್ಲೂ ಪಾಕಿಸ್ತಾನ ವಿರುದ್ಧದ ಕ್ರಿಕೆಟ್‌ ಪಂದ್ಯಗಳಲ್ಲಿ ಆಕಾಶದೆತ್ತರದ ದಾಖಲೆಯ ಸಾಧನೆ ಮಾಡಿರುವ ಈ ಕ್ರಿಕೆಟಿಗರು ಈಗ ಆ ದೇಶದ ವಿರುದ್ಧ ಕಿಡಿಕಾರುತ್ತಿದ್ದಾರೆ.  ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನವನ್ನು ಬಹಿಷ್ಕೃತ ದೇಶವನ್ನಾಗಿ ಮಾಡುವಲ್ಲಿ ಭಾರತ ಇನ್ನಿಲ್ಲದಂತೆ ಪ್ರಯತ್ನಿಸುತ್ತಿದೆ. ಭಾರತವು ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆ ವಿರುದ್ಧದ ಜಾಗತಿಕ ಹೋರಾಟದಲ್ಲಿ ಮುಂಚೂಣಿಯಲ್ಲಿಯೂ ಇದೆ. ಗೋವಾದಲ್ಲಿ ಇತ್ತೀಚೆಗೆ ನಡೆದ ‘ಬ್ರಿಕ್ಸ್‌’ ದೇಶಗಳ ಸಮಾವೇಶದ ಮುನ್ನ ಮತ್ತು ಆನಂತರದ ದಿನಗಳಲ್ಲಿ ನಡೆದ ವಿದ್ಯಮಾನಗಳನ್ನು ಆಧರಿಸಿ ಹೇಳುವುದಾದರೆ, ಇಂತಹ ಧೋರಣೆಗೆ ಅದರದ್ದೇ ಆದ ಮಿತಿಗಳು ಇರುವುದು ಸಾಬೀತಾಗಿದೆ.

ಟೆಲಿವಿಷನ್‌ ಚಾನಲ್‌ಗಳಲ್ಲಿ ನಡೆಯುವ ಚರ್ಚಾಗೋಷ್ಠಿಗಳಲ್ಲಿ ಭಾಗವಹಿಸುವ ಯುದ್ಧಪ್ರೇಮಿ ನಿವೃತ್ತ ಸೈನಿಕರು ಮತ್ತು ರಾಜತಾಂತ್ರಿಕರು ಪ್ರತಿಪಾದಿಸುವಂತೆ, 2014ರ ಮೇ ನಂತರ ಜಾಗತಿಕ ಶಕ್ತಿಯಾಗಿ ಭಾರತ ಹೊರಹೊಮ್ಮಿದೆ ಎಂದು ಜಂಬ ಕೊಚ್ಚಿಕೊಳ್ಳುವುದಕ್ಕೂ ಅದರದ್ದೇ ಆದ ಹಲವಾರು ಮಿತಿಗಳಿವೆ. ಸಾಂಸ್ಕೃತಿಕ ಪ್ರಭಾವವನ್ನು ಬಲವಾಗಿ ಪ್ರತಿಪಾದಿಸುವವರು ಇರುವಂತೆ ಅದಕ್ಕೆ ಕೆಡುಕುಂಟು ಮಾಡುವವರೂ ಇದ್ದಾರೆ. ‘ನೀವು ಸಾಂಸ್ಕೃತಿಕ ಪ್ರಭಾವದಲ್ಲಿ ನಂಬಿಕೆ ಹೊಂದಿದ್ದೀರಾ’ ಎಂದು  ಜೂನಿಯರ್‌ ಬುಷ್‌ ಅಮೆರಿಕದ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ರಕ್ಷಣಾ ಕಾರ್ಯದರ್ಶಿಯಾಗಿದ್ದ ಡೊನಾಲ್ಡ್‌  ರಮ್ಸ್‌ಫೆಲ್ಡ್‌ ಅವರನ್ನು ಪ್ರಶ್ನಿಸಿದಾಗ, ಅದಕ್ಕೆ ಅವರು, ‘ಹಾಗೆಂದರೇನು?’ ಎಂದು ಮರು ಪ್ರಶ್ನಿಸಿದ್ದರಂತೆ.

ರಮ್ಸ್‌ಫೆಲ್ಡ್‌ ಅವರು ಕಠಿಣ ಧೋರಣೆಯ, ಸೇನಾ ಸಾಮರ್ಥ್ಯದಲ್ಲಿ ಬಲವಾಗಿ ನಂಬಿಕೆ ಇರಿಸಿದ್ದ ಮತ್ತು ದಬ್ಬಾಳಿಕೆ ಧೋರಣೆಯ ಕಟ್ಟಾ ಬೆಂಬಲಿಗರಾಗಿದ್ದರು. ಅಮೆರಿಕದ ಹಿತಾಸಕ್ತಿ ಮತ್ತು ಭವಿಷ್ಯದ ತಲೆಮಾರಿಗೆ ಅವರು ಬಿಟ್ಟು ಹೋದ ಅವ್ಯವಸ್ಥೆಯು ಹೇಗಿದೆ ಎಂದರೆ, ಆಪರೇಷನ್ ಥಿಯೇಟರ್‌ನ  ಮೇಜಿನ ಮೇಲೆ ರೋಗಿಯ ದೇಹ ಸಿಗಿದು (ಇರಾಕ್‌ ಮತ್ತು ಆಫ್ಘಾನಿಸ್ತಾನ) ಅಪಾಯಕಾರಿ ಗೆಡ್ಡೆ ಹೊರ ತೆಗೆಯದೆ ಅಥವಾ ಹೊಲಿಗೆ ಹಾಕದೆ ಹಾಗೇ ಬಿಟ್ಟು ಹೋದಂತೆ ಇದೆ.

ಹಾರ್ವರ್ಡ್‌ ಪ್ರೊಫೆಸರ್‌ ಜೋಸೆಫ್‌ ನೆ ಜೂನಿಯರ್‌ ಅವರು 1990ರಲ್ಲಿ ಬರೆದ, ಶೀತಲ ಸಮರದ ನಂತರ ಪ್ರಕಟವಾಗಿರುವ ಶ್ರೇಷ್ಠ ಗ್ರಂಥ ‘ಬೌಂಡ್‌ ಟು ಲೀಡ್‌: ದ ಚೇಂಜಿಂಗ್‌ ನೇಚರ್‌ ಆಫ್‌ ಅಮೆರಿಕನ್‌ ಪವರ್‌’ನಲ್ಲಿ ಸಾಂಸ್ಕೃತಿಕ ಪ್ರಭಾವದ ಪರಿಕಲ್ಪನೆಯನ್ನು ಮೊದಲ ಬಾರಿಗೆ ವಿಶ್ವಕ್ಕೆ ಪರಿಚಯಿಸಿದ್ದರು.

ವಿದೇಶಾಂಗ ನೀತಿಗೆ ಸಂಬಂಧಿಸಿದ ನಿಯತಕಾಲಿಕದಲ್ಲಿ 2006ರಲ್ಲಿ ಅವರೇ ಬರೆದ ಲೇಖನದಲ್ಲಿ, ಜೂನಿಯರ್‌ ಬುಷ್‌  ತಮ್ಮ ಎರಡನೇ ಅಧಿಕಾರಾವಧಿಯಲ್ಲಿ ತಮ್ಮ ತಪ್ಪುಗಳಿಂದ ಆದ ಪಾಠಗಳನ್ನು ಕಲಿತಿದ್ದರು ಎನ್ನುವುದನ್ನು ವಿಶ್ಲೇಷಿಸಿದ್ದರು. ವಿದೇಶಾಂಗ ಕಾರ್ಯದರ್ಶಿ ಕಾಂಡೊಲೀಸಾ ರೈಸ್‌ ಅವರ ಮೂಲಕ ಸಾಂಸ್ಕೃತಿಕ ಪ್ರಭಾವಕ್ಕೆ ಮತ್ತು ಸಾರ್ವಜನಿಕ ರಾಜತಾಂತ್ರಿಕತೆಗೆ ಹೆಚ್ಚು ಆದ್ಯತೆ ನೀಡಿದ್ದರು ಎಂದು ಅವರು ತಮ್ಮ ಲೇಖನದಲ್ಲಿ ಪ್ರತಿಪಾದಿಸಿದ್ದರು. ಶೀತಲ ಸಮರ ಕೊನೆಗೊಂಡ ನಂತರದ ದಿನಗಳಲ್ಲಿ ಜೋಸೆಫ್‌ ಅವರ ಈ  ‘ಸಾಂಸ್ಕೃತಿಕ ಪ್ರಭಾವ’ದ ಸಿದ್ಧಾಂತ ಜಾಗತಿಕ ವಿದ್ಯಮಾನಗಳಲ್ಲಿ ಗಮನಾರ್ಹ ಪ್ರಭಾವ ಬೀರಿತ್ತು. ನಂತರದ ದಿನಗಳಲ್ಲಿ ಜಾಗತಿಕ ಚಿತ್ರಣ ಬದಲಾದಂತೆ ಈ ಸಿದ್ಧಾಂತವನ್ನು ಪ್ರಶ್ನಿಸುವ ಪ್ರವೃತ್ತಿ ಕಂಡು ಬಂದಿತ್ತು. ರಾಷ್ಟ್ರೀಯತೆ, ಇಸ್ಲಾಂ ಉಗ್ರವಾದ, ಚೀನಾದ ಪ್ರವರ್ಧಮಾನ, ಹೊಸ ರಷ್ಯಾದ ಆಕ್ರಮಣಶೀಲತೆಯಂತಹ ಹೊಸ ಅಪಾಯಕಾರಿ ಜಗತ್ತಿನಲ್ಲಿ ಈ ಸಿದ್ಧಾಂತದ ಪ್ರಸ್ತುತತೆ ಬಗ್ಗೆ ಹೊಸ ಪ್ರಶ್ನೆಗಳು ಕೇಳಿ ಬರತೊಡಗಿದವು.

2006ರಲ್ಲಿನ ಪ್ರಬಂಧವೊಂದರಲ್ಲಿ ಜೋಸೆಫ್‌ ಅವರು ಸಾಂಸ್ಕೃತಿಕ ಪ್ರಭಾವ ಅಂದರೆ ಏನು ಮತ್ತು ಏನಲ್ಲ ಎನ್ನುವುದರ ಬಗ್ಗೆ ಹೆಚ್ಚು ಒತ್ತು ನೀಡಿದ್ದರು. ಈ ಸಿದ್ಧಾಂತದ ಬಗ್ಗೆ ಜೆಎನ್‌ಯು ಹೊರತುಪಡಿಸಿ ರಾಜಕೀಯ ಪಕ್ಷ, ಟೆಲಿವಿಷನ್‌ ಸ್ಟುಡಿಯೊ ಅಥವಾ ಸಂಸತ್ತಿನ ಮೊಗಸಾಲೆ... ಹೀಗೆ ಪ್ರಸ್ತಾಪಿಸಿದ ಕಡೆಗಳಲ್ಲೆಲ್ಲ ಅದನ್ನು ತಮಾಷೆಯಾಗಿ ಪರಿಗಣಿಸಲಾಗುತ್ತಿತ್ತು. ಈ ಪರಿಕಲ್ಪನೆಯನ್ನು ವಿನಾಕಾರಣವಾಗಿ ಎಳೆಯಲಾಗಿದೆ ಮತ್ತು ಅನಗತ್ಯವಾಗಿ ತಿರುಚಲಾಗಿದೆ ಎಂದೂ ಜೋಸೆಫ್‌ ಹೇಳಿಕೊಂಡಿದ್ದರು. ‘ಸಾಂಸ್ಕೃತಿಕ ಪ್ರಭಾವ’ ಎಂದು ಕರೆಯುವ ಕಾರಣಕ್ಕೆ ಅದೊಂದು ಸೌಮ್ಯ ಧೋರಣೆಯಲ್ಲ ಎನ್ನುವುದು ಅವರ ಮೂಲ ವಾದವಾಗಿತ್ತು.

ಇನ್ನೊಂದು ಉದಾಹರಣೆ ಮೂಲಕವೂ ಪ್ರೊಫೆಸರ್‌ ತಮ್ಮ ನಿಲುವು ಸ್ಪಷ್ಟಪಡಿಸುತ್ತಾರೆ. ವ್ಯಕ್ತಿಯೊಬ್ಬನಿಗೆ ಬಂದೂಕಿನಿಂದ ಬೆದರಿಸಿ ಹಣ ದರೋಡೆ ಮಾಡಬಹುದು ಅಥವಾ ಸುಲಭವಾಗಿ ಶ್ರೀಮಂತನಾಗುವ ಯೋಜನೆಯ ಆಮಿಷ ಒಡ್ಡಿ ಮೋಸ ಮಾಡಬಹುದು ಇಲ್ಲವೆ ಆಧ್ಯಾತ್ಮಿಕ ಯಾತ್ರೆಯಲ್ಲಿ ಪಾಲ್ಗೊಳ್ಳುವಂತೆ ಮನವೊಲಿಸಿ ಆತನ ಸಂಪತ್ತನ್ನು ಲಪಟಾಯಿಸಬಹುದು. ಇದರಲ್ಲಿ ಮೊದಲಿನ ಎರಡು ವಿಧಾನಗಳು ನಿರ್ದಯವಾಗಿದ್ದರೆ ಮೂರನೆಯದ್ದು ಮೃದು ಧೋರಣೆ. ಅಂತಿಮ ಫಲಿತಾಂಶವು ಇನ್ನೊಬ್ಬರ ಸಂಪತ್ತನ್ನು ಕಳ್ಳತನ ಮಾಡುವುದೇ ಆಗಿರುತ್ತದೆ. ಕೈಗಳನ್ನು ತಿರುಚುವುದಕ್ಕಿಂತ ಮನಸ್ಸುಗಳನ್ನು ಭ್ರಷ್ಟಗೊಳಿಸುವುದು ಹೆಚ್ಚು ಸುಲಭ ಎಂದು ಅವರು ಹೇಳುತ್ತಾರೆ. ಈ ತರ್ಕ ಅಥವಾ ವಾದ ಸರಣಿಯು ಭಾರತದ ಜಾಗತಿಕ ಶಕ್ತಿಯಾಗುವ ಹಿತಾಸಕ್ತಿಗೆ ಅಥವಾ ಹೆಚ್ಚು ಸ್ಪಷ್ಟವಾಗಿ ಹೇಳುವುದಾದರೆ ಭಾರತ ಮತ್ತು ಪಾಕಿಸ್ತಾನ ಬಾಂಧವ್ಯದ ವಿಷಯದಲ್ಲಿ ಅನ್ವಯಿಸುವುದು ಹೇಗೆ ಎನ್ನುವ ಪ್ರಶ್ನೆಯೂ ಇಲ್ಲಿ ಉದ್ಭವವಾಗುತ್ತದೆ. 

ಸಾಂಸ್ಕೃತಿಕ ಪ್ರಭಾವವು ಕೇವಲ ಆಹಾರ, ಸಂಸ್ಕೃತಿ, ಸಾಹಿತ್ಯ ಮತ್ತು ಕ್ರೀಡೆಗೆ ಮಾತ್ರ ಸಂಬಂಧಿಸಿದೆಯೇ? ಅದು ನಿಜವೇ ಆಗಿದ್ದರೆ, ಕೋಕಾಕೋಲ, ಮ್ಯಾಕ್‌ಡೊನಾಲ್ಡ್‌, ಮೈಕಲ್‌ ಜಾಕ್ಸನ್‌ ಮತ್ತು ಮಡೋನ್ನಾ ಅವರು ಸೋವಿಯತ್‌ ಒಕ್ಕೂಟವನ್ನು ಹೆಚ್ಚು ಸುಲಭವಾಗಿ ಗೆಲ್ಲಲು ಸಾಧ್ಯವಿತ್ತು. ಚೀನೀಯರು ತಮ್ಮ ಆಹಾರಗಳ ಮೂಲಕ ನಮ್ಮ ಹೃದಯ ಮತ್ತು ಮನಸ್ಸುಗಳ ಮೇಲೆ ಪ್ರಭುತ್ವ ಸಾಧಿಸಬಹುದಾಗಿತ್ತು.

ಸಾಂಸ್ಕೃತಿಕ ಪ್ರಭಾವ ಎನ್ನುವುದು ರಾಷ್ಟ್ರೀಯ ಮೌಲ್ಯ, ನೀತಿಗಳು, ಪ್ರಜಾಪ್ರಭುತ್ವದ ಗುಣಮಟ್ಟ, ರಾಜಕೀಯ ಮತ್ತು ಸಾಮಾಜಿಕ ಸಂಸ್ಥೆಗಳ ಸಾಮರ್ಥ್ಯವನ್ನೂ ಒಳಗೊಂಡಿದೆ. ಪಾಕಿಸ್ತಾನದ ಜನರು ನಮ್ಮ ಚಲನಚಿತ್ರ, ಟೆಲಿವಿಷನ್‌ ಚಾನಲ್‌ಗಳ ವೀಕ್ಷಣೆ, ನಮ್ಮ ಕ್ರೀಡಾ ಸಾಧಕರ ಬಗ್ಗೆ ಅಭಿಮಾನ ಹೊಂದಿರುವುದು ಅಥವಾ ನಮ್ಮ ಜನಪ್ರಿಯ ಹಾಡುಗಳನ್ನು ಗುನುಗುನಿಸುವುದೊಂದೇ ಸಾಂಸ್ಕೃತಿಕ ಪ್ರಭಾವವಾಗಲಾರದು. ಪಾಕಿಸ್ತಾನದ ಪ್ರಮುಖ ಪ್ರಜೆಗಳು, ಕ್ರೀಡಾಪಟುಗಳು ಮತ್ತು ಅದರಲ್ಲೂ ವಿಶೇಷವಾಗಿ ಸಿನಿಮಾ, ಕಿರುತೆರೆ ತಾರೆಯರು ಭಾರತದಲ್ಲಿ ದುಡಿದು ಹಣ ಗಳಿಸುತ್ತಿರುವುದು ಬಾಂಧವ್ಯ ಸುಧಾರಣೆ ಬದಲಿಗೆ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಉತ್ತಮ ಪ್ರಜಾಪ್ರಭುತ್ವ, ಹೆಚ್ಚು ಉದಾರ ಧೋರಣೆಯ ಸಮಾಜ, ಅಲ್ಪಸಂಖ್ಯಾತರ ಬಗೆಗಿನ ಕಾಳಜಿ, ಮುಕ್ತ ಅಭಿವ್ಯಕ್ತಿ ಸ್ವಾತಂತ್ರ್ಯ, ಪ್ರಶ್ನಿಸುವ ಮಾಧ್ಯಮ, ಕೋರ್ಟ್‌, ಪರಿಸರ, ಕಾನೂನುಗಳು ಸಾಂಸ್ಕೃತಿಕ ಪ್ರಭಾವದ ಬ್ರ್ಯಾಂಡ್‌ನ ಪ್ರಮುಖ ಸಂಗತಿಗಳಾಗಿವೆ. ಇದನ್ನು ಓದುಗರು ಸೌಮ್ಯ, ಕಠಿಣ ಅಥವಾ ಇತಿಮಿತಿಗಳಿಲ್ಲದ ಧೋರಣೆ ಎಂದು ವ್ಯಾಖ್ಯಾನಿಸಬಹುದು. ದೇಶ ಹಾಗೂ ಸಮಾಜವೊಂದು ಅನ್ಯ ದೇಶಕ್ಕೆ ನುಸುಳುಕೋರರು ಮತ್ತು ಭಯೋತ್ಪಾದಕರನ್ನು ಕಳಿಸುವ ಮೂಲಕವಷ್ಟೇ ತನ್ನ ಪ್ರಭಾವ ಬೀರಬೇಕಿಲ್ಲ. ಸಾಂಸ್ಕೃತಿಕ ಪ್ರಭಾವವನ್ನು ಬೀರಿ ಆ ಮೂಲಕ  ಇತರರಿಗೆ ಆದರ್ಶವಾಗಿರಲು ಸಾಧ್ಯ. ಹೆಚ್ಚು ಉದಾರವಾದ, ಪ್ರಜಾಸತ್ತಾತ್ಮಕ ದೇಶಗಳು ದಬ್ಬಾಳಿಕೆ ವಿರುದ್ಧದ ಹೋರಾಟದಲ್ಲಿ ತೊಡಗಿರುವಾಗ ಇಂಥ ಧೋರಣೆ ಹೆಚ್ಚು ಫಲ ನೀಡಲಿದೆ.

ಸುಮಾರು 25 ವರ್ಷಗಳ ಹಿಂದೆ ನಾನು ‘ಸೆಮಿನಾರ್‌’ ನಿಯತಕಾಲಿಕದಲ್ಲಿ ‘ಪಾಕಿಸ್ತಾನ; ಹದ್ದಿನ ಕಾರ್ಯಸೂಚಿ’ ಶಿರೋನಾಮೆಯಡಿ ಲೇಖನವೊಂದನ್ನು ಬರೆದಿದ್ದೆ. ಪಾಶ್ಚಿಮಾತ್ಯ ಬಣವು ಅದರಲ್ಲೂ ವಿಶೇಷವಾಗಿ ಅಮೆರಿಕವು ತನ್ನ ಪ್ರಜಾಸತ್ತಾತ್ಮಕ, ಉದಾರವಾದ, ಸಾಂಸ್ಕೃತಿಕ ಪ್ರಭಾವ ಬಳಸಿ ಶೀತಲ ಸಮರ ಸಂದರ್ಭದಲ್ಲಿನ ಸೋವಿಯತ್‌ ಒಕ್ಕೂಟದ ಪ್ರಭಾವವನ್ನು ಮಣಿಸಲು ಹೇಗೆ ಹವಣಿಸುತ್ತಿದೆ ಎಂದು ವಿವರಿಸಿದ್ದೆ. ಭಾರತ ಆ ಬಗ್ಗೆ ಅಧ್ಯಯನ ನಡೆಸಿ ಪಾಕಿಸ್ತಾನ ಕುರಿತ ತನ್ನ ಧೋರಣೆಯನ್ನು ಹೆಣೆಯಬೇಕಾಗಿದೆ.

ವರದಿಗಾರನಾಗಿ ನಾನು ಪಾಕಿಸ್ತಾನಕ್ಕೆ ಹಲವಾರು ಬಾರಿ ಭೇಟಿ ನೀಡಿದ್ದಾಗ, ಭಾರತದ ಸಂಸ್ಥೆಗಳು ಆ ದೇಶದ ನೀತಿ ನಿರ್ಧಾರಕರ ಮೇಲೆ ಬೀರಿದ ಪ್ರಭಾವ ಕಂಡು ಅಚ್ಚರಿಗೊಂಡಿದ್ದೇನೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಂಬಂಧದ ಬಗ್ಗೆ ಸರ್ಕಾರಿಯಾ ಆಯೋಗ ನೀಡಿದ್ದ ವರದಿಯ ಪ್ರತಿಯೊಂದನ್ನು ತಮಗೆ ಕಳಿಸಿಕೊಡಬೇಕು ಎಂದು ಪ್ರಭಾವಿ ರಾಜಕಾರಣಿಯಾಗಿದ್ದ, ಅಲ್ಲಿನ ಪಂಜಾಬ್‌ ಪ್ರಾಂತ್ಯದ ಹಣಕಾಸು ಸಚಿವ ಶಾ ಮೆಹಮೂದ್‌ ಖುರೇಷಿ ನನ್ನಲ್ಲಿ ಅರಿಕೆ ಮಾಡಿಕೊಂಡಿದ್ದರು. ಅಂತರ  ರಾಜ್ಯ ನದಿ ನೀರು ಹಂಚಿಕೆ ವಿವಾದ ಉಲ್ಬಣಗೊಂಡಿದ್ದಾಗ ಅವರು ಈ ವರದಿ ಕೇಳಿದ್ದರು. ಖುರೇಷಿ ಆನಂತರ ಪಾಕಿಸ್ತಾನದ ವಿದೇಶಾಂಗ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದರು. ನವಾಜ್‌ ಷರೀಫ್‌ ಮೊದಲ ಬಾರಿಗೆ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ನಮ್ಮ ಸೇನಾಪಡೆಗಳ ವಿಶೇಷ ಅಧಿಕಾರ ಕಾಯ್ದೆ ವಿವರಗಳನ್ನು ಬಯಸಿದ್ದರು. ಪಾಕಿಸ್ತಾನದ ಸೇನೆಯು ಕರಾಚಿಯಲ್ಲಿ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಅಗತ್ಯವಾದ ನೀತಿ ನಿಯಮ ರೂಪಿಸಲು ನಮ್ಮ ಕಾಯ್ದೆಯ ನೆರವು ಪಡೆದಿದ್ದರು.

ಸಂಸ್ಕೃತಿ, ಆರ್ಥಿಕತೆ, ವ್ಯಾಪಾರ, ಕ್ರೀಡೆ ಮುಂತಾದವು ರಾಷ್ಟ್ರೀಯ ಹಿತಾಸಕ್ತಿ ರಕ್ಷಣೆ ವಿಷಯದಲ್ಲಿ ಪ್ರಮುಖ ಶಕ್ತಿಗಳಾಗಿ ಕಾರ್ಯನಿರ್ವಹಿಸುತ್ತವೆ. ರಾಜ್‌ಕಪೂರ್‌ ನಾಲ್ಕು ದಶಕಗಳ ಕಾಲ ಕಮ್ಯುನಿಸ್ಟ್‌ ದೇಶಗಳ ಮೇಲೆ ವ್ಯಾಪಕ ಪ್ರಭಾವ ಬೀರಿದ್ದರು. ಬರೀ ಸೋವಿಯತ್ ಒಕ್ಕೂಟದಲ್ಲಷ್ಟೇ ಅಲ್ಲದೆ, ಬೀಜಿಂಗ್‌ನಲ್ಲೂ ಪ್ರಭಾವ ಹೊಂದಿದ್ದರು. 1989ರಲ್ಲಿ ಬೀಜಿಂಗ್‌ನಲ್ಲಿ ನಡೆದಿದ್ದ ತಿಯಾನನ್‌ಮನ್‌ ಸ್ಕ್ವೇರ್‌ ಹತ್ಯಾಕಾಂಡದ ಬಗ್ಗೆ ನಾವು ಸಿದ್ಧಪಡಿಸಿದ್ದ ವರದಿಯನ್ನು ನಾವು ಇಳಿದುಕೊಂಡಿದ್ದ ಹೋಟೆಲ್‌ನ ಸಿಬ್ಬಂದಿಯು ಮೇಲಿನವರ ಅಧಿಕೃತ ಅನುಮತಿ ಇಲ್ಲದೆಯೂ ಭಾರತಕ್ಕೆ ಫ್ಯಾಕ್ಸ್‌ ಮಾಡಿದ್ದರು. ಎಲ್ಲ ಪುಟಗಳು ಫ್ಯಾಕ್ಸ್‌ ಆಗುವವರೆಗೆ ನಾವು ‘ಮೈ ಆವಾರಾ ಹ್ಞೂಂ’ ಹಾಡನ್ನು ಹಾಡುವುದಾಗಿ ಒಪ್ಪಿಕೊಂಡು ಅದನ್ನು ಪಾಲಿಸಿದ್ದರಿಂದ ಅವರು ಸಂತೋಷದಿಂದ ನಮ್ಮ ವರದಿ ಫ್ಯಾಕ್ಸ್‌ ಮಾಡಲು ಸಹಕರಿಸಿದ್ದರು.

ಅಮೆರಿಕನ್ನರು ಹಾಲಿವುಡ್‌ ನಿರ್ಮಿಸಿದ್ದಾರೆ. ಅಮೆರಿಕಕ್ಕೆ ಭೇಟಿ ನೀಡುವ ವಿದೇಶಿಯರು ಡಿಸ್ನಿಲ್ಯಾಂಡ್‌ಗೆ ಕಡ್ಡಾಯವಾಗಿ ಭೇಟಿ ನೀಡುತ್ತಾರೆ. ಅಮೆರಿಕದ ಜನರು ಬೃಹತ್‌ ಪ್ರಮಾಣದಲ್ಲಿ ಸಾಂಪ್ರದಾಯಿಕ ಮತ್ತು ಪರಮಾಣು ಶಸ್ತ್ರಾಗಾರಗಳನ್ನೂ ನಿರ್ಮಿಸಿದ್ದಾರೆ. ಆದರೆ, ರಾಜಕೀಯವಾಗಿ ಮತ್ತು ತತ್ವಜ್ಞಾನದ ದೃಷ್ಟಿಯಿಂದ ಅಮೆರಿಕನ್ನರು ಮುಚ್ಚಿದ ಸಮಾಜದ ರಷ್ಯಾದ ಜತೆ ಮುಕ್ತವಾಗಿ ಬೆರೆಯದೆ ಅವರನ್ನು ಅಲಕ್ಷ್ಯದಿಂದ ಕಾಣುತ್ತಾರೆ. ಮುಕ್ತ ಸಮಾಜದಲ್ಲಿ ಮುಕ್ತ ಧೋರಣೆಯೇ ಹೆಚ್ಚು ಪ್ರಭಾವಶಾಲಿಯಾದ ಆಯುಧವಾಗಿದೆ. ಇದೇ ಕಾರಣಕ್ಕೆ ಪಾಕಿಸ್ತಾನದ ಜತೆಗಿನ ಹೋರಾಟವು ಸದಾಕಾಲವೂ ತೀಕ್ಷ್ಣ ಸ್ವರೂಪದಿಂದ ಕೂಡಿರುವುದರ ಜತೆಗೆ ಅಭದ್ರತೆಯಲ್ಲಿ ಮುಳುಗಿರುವ ಆ ದೇಶದ ಜತೆಗಿನ ಕಹಿ ಅನುಭವವೂ ಆಗಿರುತ್ತದೆ.

(ಲೇಖಕ ಮೀಡಿಯಾಸ್ಕೇಪ್ ಪ್ರೈ.ಲಿ. ಸಂಸ್ಥಾಪಕ ಸಂಪಾದಕ ಹಾಗೂ ಅಧ್ಯಕ್ಷ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT