ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್‌ನಲ್ಲಿ ಚುನಾವಣಾ ಪೂರ್ವ ಏಳುಬೀಳು

Last Updated 16 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ನನ್ನ ಹುಟ್ಟೂರು ಸಿಯಾಲ್‌ಕೋಟ್ ಪಟ್ಟಣವನ್ನು ನಾನು ದೇಶ ವಿಭಜನೆಯ ವೇಳೆ ತೊರೆದು ಬಂದ ನಂತರ ಈವರೆಗೆ ಪಾಕಿಸ್ತಾನಕ್ಕೆ ಸುಮಾರು ಇನ್ನೂರಕ್ಕೂ ಹೆಚ್ಚು ಸಲ ಭೇಟಿ ನೀಡಿದ್ದೇನೆ. ನಾನು ಪ್ರತಿ ಸಲ ಆ ದೇಶಕ್ಕೆ ಭೇಟಿ ಕೊಟ್ಟಾಗಲೂ ಅಲ್ಲಿನ ಜನರ ಸಹಿಷ್ಣುತೆಯನ್ನು ಕಂಡು ಅಚ್ಚರಿಗೊಂಡಿದ್ದೇನೆ. ಅಲ್ಲಿ ಸಮಸ್ಯೆಗಳು ನೂರಾರು. ಅದೇನೇನೋ ಸಮಸ್ಯೆಗಳು ಆ ದೇಶದ ಪರಿಸ್ಥಿತಿಯನ್ನು ಅಸಹನೀಯಗೊಳಿಸಿದಾಗಲೆಲ್ಲಾ ಅವುಗಳನ್ನು ಅಲ್ಲಿನ ಮಂದಿ ಎದುರಿಸುವ ಪರಿಯನ್ನು ಬಣ್ಣಿಸಲು ಅಸಾಧ್ಯ. ಕಳೆದ 66 ವರ್ಷಗಳಲ್ಲಿ ಆ ದೇಶದ ಮಂದಿ ಸಂತೃಪ್ತಿ, ನೆಮ್ಮದಿಯಿಂದ ದಿನ ಕಳೆದದ್ದು ಬಹಳ ಕಡಿಮೆ. ಇವುಗಳೆಲ್ಲದರ ನಡುವೆಯೂ ಅಲ್ಲಿನ ಜನರು ಇವತ್ತಿಗೂ ಪ್ರಜಾಸತ್ತೆಯ ಬಗ್ಗೆ ಅತೀವ ಒಲವು ಇರಿಸಿಕೊಂಡಿದ್ದಾರೆ. ಏಕೆಂದರೆ ಆ ದೇಶಕ್ಕೆ ರಾಜಕೀಯ ಸ್ಥಿರತೆ ಮತ್ತು ಜನಪರ ಆರ್ಥಿಕ ವ್ಯವಸ್ಥೆ ಕಂಡು ಬಂದಿದ್ದೇ ಅಲ್ಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಆಳ್ವಿಕೆ ಇದ್ದಾಗ ಮಾತ್ರ.

ಮುಂದಿನ ಮೇ ತಿಂಗಳ 11ರಂದು ಆ ದೇಶದಲ್ಲಿ ನಡೆಯುಲಿರುವ ಸಾರ್ವತ್ರಿಕ ಚುನಾವಣೆ ಅದೆಷ್ಟರ ಮಟ್ಟಿಗೆ ನಿಷ್ಪಕ್ಷಪಾತವಾಗಿರಬಹುದು ಎಂಬುದೇ ಈಗ ಎಲ್ಲರನ್ನೂ ಕಾಡುತ್ತಿರುವ ಪ್ರಶ್ನೆಯಾಗಿದೆ. ಕಳೆದ ಕೆಲವು ವರ್ಷಗಳಿಂದ ಯೂರೊಪ್‌ನಲ್ಲಿಯೇ ನೆಲೆಸಿದ್ದ ಮಾಜಿ ಅಧ್ಯಕ್ಷ ಜನರಲ್ ಪರ್ವೇಜ್ ಮುಷರಫ್ ಈಚೆಗೆ ಪಾಕ್‌ಗೆ ವಾಪಸಾಗಿದ್ದಾರೆ. ಬಂದ ಒಡನೆ ಅವರು ತಾವು ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದ್ದರು. ಆದರೆ ಅವರ ವಿರುದ್ಧ ನ್ಯಾಯಾಲಯದಲ್ಲಿದ್ದ ಹತ್ತು ಹಲವು ಪ್ರಕರಣಗಳು ಇದೀಗ ಮೈಕೊಡವಿಕೊಂಡು ಎದ್ದು ಬಿಟ್ಟಿವೆ. ಮುಷರಫ್‌ಗೆ ಕೋರ್ಟ್‌ನಿಂದ ಕೋರ್ಟ್‌ಗೆ ಅಲೆಯುವುದೇ ಕೆಲಸವಾಗಿಬಿಟ್ಟಿದೆ. ಈ ಹಿನ್ನೆಲೆಯಲ್ಲಿ ಅವರ ಎಲ್ಲಾ ನಾಮಪತ್ರಗಳು ತಿರಸ್ಕೃತವಾಗಿದ್ದು, ಇದರಿಂದ ಚುನಾವಣೆ ಪ್ರಕ್ರಿಯೆ ಗೊಂದಲದ ಗೂಡಾಗಲೂಬಹುದು. ಮೂವರು ನ್ಯಾಯಮೂರ್ತಿಗಳ ಪೀಠವು ಈಗಾಗಲೇ ಮುಷರಫ್ ವಿರುದ್ಧದ ದೂರುಗಳನ್ನು ಆಲಿಸಿದ್ದು, ಮುಷರಫ್ ಮತ್ತೆ ದೇಶದಿಂದ ಹೊರ ಹೋಗದಂತೆ ಆದೇಶ ನೀಡಿದೆ.

ಈ ಎಲ್ಲಾ ಘಟನಾವಳಿಗಳು ಪಾಕ್‌ನಲ್ಲಿ ಇನ್ನಿಲ್ಲದ ರಾಜಕೀಯ ತುಮುಲಗಳಿಗೆ ಕಾರಣವಾಗಿವೆ. ಚುನಾವಣೆ ಘೋಷಣೆ ಮತ್ತು ಅದೇ ವೇಳೆ ದೇಶಕ್ಕೆ ಮುಷರಫ್ ಆಗಮನ ಮುಂತಾದ ಘಟನೆಗಳನ್ನು ಗಮನಿಸುವಾಗ ಜಿಯಾ ವುಲ್ ಹಖ್ ಆಡಳಿತಾವಧಿಯ ದಿನಗಳು ನೆನಪಾಗುತ್ತಿವೆ. ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವಂತಹ ನಾಯಕತ್ವ ಬೇಕೆ ಅಥವಾ ದೇಶವನ್ನು ಮತ್ತೆ ಅಶಾಂತಿಯ ಜ್ವಾಲೆಯೊಳಗೇ ಉಳಿಸಿಕೊಂಡು ತನ್ನ ಆಸ್ಥಿತ್ವ ಕಾಯ್ದುಕೊಳ್ಳುವಂತಹ ನಾಯಕತ್ವ ಬೇಕೆ ಎಂಬ ಬಗ್ಗೆ ಈಗ ಅಲ್ಲಿ ವ್ಯಾಪಕ ಚರ್ಚೆ ನಡೆದಿದೆ. ಇದೀಗ ಹಲವು ರಾಜಕೀಯ ಪಕ್ಷಗಳು ಅಲ್ಲಿ ಮೇಲಾಟದಲ್ಲಿ ತೊಡಗಿವೆ. ಮಧ್ಯಂತರ ಅವಧಿಯ ಪ್ರಧಾನಿ ಪಟ್ಟಕ್ಕೆ ಅವಿರೋಧ ಆಯ್ಕೆಯ ಸಂದರ್ಭದಲ್ಲಿ ಕೆಲವು ಹೆಸರುಗಳು ಧುತ್ತೆಂದಿದ್ದವು. ಆದರೆ ಮಾಜಿ ನ್ಯಾಯಮೂರ್ತಿ ಹಜರ್‌ಖಾನ್ ಖೋಸೊ ಅವರ ನೇಮಕವಾಗಿದ್ದು, ಅವರ ಕಣ್ಗಾವಲಿನಲ್ಲಿ ಮುಕ್ತ ಚುನಾವಣೆಯ ಸಾಧ್ಯತೆ ಬಗ್ಗೆ ಎಲ್ಲರೂ ನಿರೀಕ್ಷೆ ಇರಿಸಿಕೊಂಡಿದ್ದಾರೆ.

ಆದರೆ ಅಲ್ಲಿ ಮುಂಬರುವ ಚುನಾವಣೆಯು ಈ ಕಾರಣದಿಂದ ನಿಷ್ಪಕ್ಷಪಾತವಾಗಿರುತ್ತದೆ ಎಂದುಕೊಳ್ಳಬೇಕಿಲ್ಲ. ಆ ದೇಶದ ಸೇನಾ ಮುಖ್ಯಸ್ಥ ಪರ್ವೇಜ್ ಕಯಾನಿ ಅವರೂ ಚುನಾವಣೆಯು ಸ್ವತಂತ್ರವಾಗಿರುತ್ತದೆ, ಅದಕ್ಕೆ ಯಾರದೇ ಹಸ್ತಕ್ಷೇಪವಿರುವುದಿಲ್ಲ ಎಂದಿದ್ದಾರೆ. ಈ ಹೇಳಿಕೆಯೇ ಅಚ್ಚರಿ ಮೂಡಿಸುವಂತಿದೆ. ಮುಕ್ತ ಚುನಾವಣೆಯನ್ನೇ ನಾವು ಬಯಸುತ್ತೇವೆಂದು ಸೇನಾ ಮುಖ್ಯಸ್ಥರೇ ಹೇಳಿರುವುದು ಕುತೂಹಲಕಾರಿ.

ಈ ನಡುವೆ ಚುನಾವಣಾ ಪ್ರಕ್ರಿಯೆ ಬಗ್ಗೆಯೇ ಮುಷರಫ್ ನೀಡಿರುವ ಹೇಳಿಕೆ ಗೊಂದಲ ಮೂಡಿಸುವಂತಿದೆ. ದಶಕದ ಹಿಂದೆ ಪಾಕ್‌ನಲ್ಲಿ ಚುನಾವಣೆಗಳು ನಡೆದಿದ್ದಾಗ ತಮಗೆ ಬೇಕಾದವರನ್ನು ಆಯ್ಕೆ ಮಾಡುವ ನಿಟ್ಟಿನಲ್ಲಿ ಸೇನೆಯ ಹಸ್ತಕ್ಷೇಪ ಮಾಡಿಸಿದ್ದ ಮುಷರಫ್ ಅವರೂ ಇದೀಗ ನಿಷ್ಪಕ್ಷಪಾತ ಚುನಾವಣೆ ಬಗ್ಗೆ ಮಾತನಾಡುತ್ತಿರುವುದೊಂದು ವ್ಯಂಗ್ಯ.  ಹಿಂದೆ ಚುನಾವಣೆಗಳ ವೇಳೆ ತಾವು ಮಾಡಿದ್ದ ಪ್ರಜಾಪ್ರಭುತ್ವ ವಿರೋಧಿ ಕೃತ್ಯಗಳನ್ನು ಮುಷರಫ್ ಮರೆತಂತಿದೆ. ಈ ಸಲ ಕೂಡಾ ಅವರಿಗೆ ಚುನಾವಣೆಗೆ ನಿಲ್ಲಲು ಅವಕಾಶ ಸಿಕ್ಕಿದ್ದರೆ, ತಾವು ಮತ್ತು ತಮಗೆ ಬೇಕಾದವರನ್ನು ಗೆಲ್ಲಿಸಲು ಸೇನೆಯನ್ನು ಪರೋಕ್ಷವಾಗಿ ಬಳಸಿಯೋ ಅಥವಾ ಇನ್ನಾವುದೇ ವಾಮಮಾರ್ಗಗಳನ್ನು ಅನುಸರಿಸಲು ಅವರು ಹಿಂದೇಟು ಹೊಡೆಯಲಾರರು ಎಂದು ನನಗನ್ನಿಸುತ್ತಿದೆ.

ಮುಷರಫ್ ಅವರು ಈಚೆಗೆ ಪಾಕಿಸ್ತಾನಕ್ಕೆ ಕಾಲಿರಿಸಿದ ತಕ್ಷಣ ಕಾರ್ಗಿಲ್ ಯುದ್ಧದ ಬಗ್ಗೆ ಮಾತನಾಡಿ ಅದು ಪಾಕಿಸ್ತಾನದ ಸೇನೆಗೆ ಸಿಕ್ಕಿದ ಬಲುದೊಡ್ಡ ಜಯ ಎಂಬ ಹೇಳಿಕೆ ನೀಡಿ ಅಚ್ಚರಿ ಉಂಟು ಮಾಡಿದ್ದರು. ಈ ಮೂಲಕ ಸೇನೆಯನ್ನು ಹೊಗಳಿ ಅದರ ಮನಸ್ಸನ್ನು ಸಮಾಧಾನಗೊಳಿಸಲು ಮುಷರಫ್ ಯತ್ನಿಸಿದ್ದಾರೆನ್ನುವುದು ಇದರಿಂದ ಗೊತ್ತಾಗುತ್ತದೆ. ಆದರೆ ವಾಸ್ತವ ಬೇರೆ ತಾನೆ. ಕಾರ್ಗಿಲ್‌ನಲ್ಲಿ ಪಾಕಿಸ್ತಾನ ಹೀನಾಯ ಸೋಲನುಭವಿಸಿದ್ದಕ್ಕೆ ಸಂಬಂಧಿಸಿದ ಅಂಕೆಸಂಖ್ಯೆ ದಾಖಲೆಗಳನ್ನು ಅವರು ಮುಚ್ಚಿಡಲು ಸಾಧ್ಯವಿಲ್ಲ ಬಿಡಿ. ಆ ಯುದ್ಧದಲ್ಲಿ ಗೆದ್ದಿದ್ದು ಯಾರು ಎಂಬುದು ಆ ದೇಶದ ಜನಸಾಮಾನ್ಯರಿಗೆಲ್ಲಾ ಗೊತ್ತಿದೆ. ಈಗ ಮುಷರಫ್ ಅದೇನೇ ಹೇಳಿದರೂ ಸತ್ಯವನ್ನು ಮರೆ ಮಾಚುವುದು ಅಸಾಧ್ಯ.

ನಾಲ್ಕು ವರ್ಷಗಳ ನಂತರ ದೇಶಕ್ಕೆ ಕಾಲಿಟ್ಟ ಮುಷರಫ್ ನ್ಯಾಯಾಲಯದ ಮೆಟ್ಟಲುಗಳನ್ನು ಹತ್ತಿ ಇಳಿದದ್ದೇ ಹೆಚ್ಚು. ತಾವು ಹಿಂದೆ ಅಧಿಕಾರದಲ್ಲಿದ್ದಾಗ ಇದ್ದಂತಹ ಪರಿಸ್ಥಿತಿ ಈಗ ಇಲ್ಲ ಎಂಬ ಸತ್ಯ ಮುಷರಫ್‌ಗೆ ಈಗಾಗಲೇ ಮನದಟ್ಟಾಗಿರಬೇಕು. ಏಕೆಂದರೆ ನ್ಯಾಯಾಲಯವೊಂದರಲ್ಲಿ ಇವರು ನಡೆದುಕೊಂಡು ಹೋಗುತ್ತಿದ್ದಾಗ ಕ್ರೋಧತಪ್ತ ವಕೀಲನೊಬ್ಬ ಮುಷರಫ್ ಮೇಲೆಯೇ ಬೂಟು ಎಸೆದಿದ್ದ. ಮುಷರಫ್ ಇಂತಹ ಮುಜುಗರ ಅನುಭವಿಸಿರುವುದು ಇದೇ ಮೊದಲೇನಲ್ಲ. ಎರಡು ವರ್ಷಗಳ ಹಿಂದೆ ಲಂಡನ್‌ನಲ್ಲಿ ಇವರು ಸಮಾರಂಭವೊಂದರಲ್ಲಿ ಪಾಲ್ಗೊಂಡಿದ್ದಾಗ ಯುವಕನೊಬ್ಬ ಇವರತ್ತ ಬೂಟು ಎಸೆಯಲು ಯತ್ನಿಸಿದ್ದ. ಇದು ಮುಷರಫ್ ಅವರ ಇವತ್ತಿನ ಜನಪ್ರಿಯತೆಯ ಪರಿಯಾಗಿದೆ.

ಪಾಕಿಸ್ತಾನದ ನಿವೃತ್ತ ಲೆಫ್ಟಿನೆಂಟ್ ಜನರಲ್ ಶಾಹೀದ್ ಅಜೀಜ್ ಕೃತಿಯೊಂದನ್ನು ರಚಿಸಿದ್ದು ಅದರಲ್ಲಿ ಪಾಕ್ ಸೇನೆಯ ಕುರಿತು ಪ್ರಸ್ತಾಪಿಸುತ್ತಾ `ಸೇನೆ ನಮ್ಮ ಮಕ್ಕಳನ್ನು ಬೆಂಕಿಯ ಬೇಲಿಯೊಳಗೆ ಬಂಧಿಸಿಟ್ಟಿದೆ' ಎಂದಿದ್ದರು. ಆದರೆ ಮುಷರಫ್ ಇಂತಹ ವಾಸ್ತವಗಳ ಬಗ್ಗೆ ಏನನ್ನುತ್ತಾರೋ ಗೊತ್ತಿಲ್ಲ. ಆದರೆ ಮುಷರಫ್ ಪಾಕ್‌ಗೆ ಕಾಲಿಟ್ಟಿರುವುದರಿಂದ ಇಮ್ರಾನ್ ಖಾನ್ ಅವರ `ಪ್ರಭಾವ' ಒಂದಷ್ಟು ಕಡಿಮೆಯಾಗಿರುವುದಂತು ನಿಜ. ಇಮ್ರಾನ್ ಅವರ ತೆಹ್ರೀಕ್ ಎ ಇನ್ಸಾಫ್ ಪಕ್ಷ ಚುನಾವಣೆಯಲ್ಲಿ ಎತ್ತರದ ಸಾಮರ್ಥ್ಯ ತೋರಬಹುದೆಂದು ಬಹಳ ಮಂದಿ ನಿರೀಕ್ಷಿಸಿದ್ದರು. ಆದರೆ ಈಗ ಮುಷರಫ್ ಅಲೆಯಲ್ಲಿ ಇಮ್ರಾನ್ ಪ್ರಭಾವ ಮಸುಕಾಗಿರುವುದಂತು ನಿಜ.

ಹಿಂದಿನ ರಾಜಕೀಯ ಪರಿಸ್ಥಿತಿ ಅಥವಾ ವಾತಾವರಣ ಅಥವಾ ಹೊಂದಾಣಿಕೆಗಳನ್ನು ಮುಂದಿನ ಚುನಾವಣೆಯ ನಂತರ ನಾವು ಕಾಣಬಹುದಾಗಿದೆ. ಪಾಕ್‌ನ ಪಂಜಾಬ್ ಪ್ರಾಂತ್ಯವಂತೂ ನವಾಜ್ ಷರೀಫ್ ಅವರ ಜತೆಗೇ ಹೋಗುವ ಸಾಧ್ಯತೆ ನಿಚ್ಚಳವಾಗಿದ್ದರೆ, ಸಿಂಧ್ ಪ್ರಾಂತ್ಯ ಪಾಕಿಸ್ತಾನ ಪೀಪಲ್ಸ್ ಪಕ್ಷದ ಜತೆಗೇ ಉಳಿಯುವ ಸಾಧ್ಯತೆ ಇದೆ. ವಾಯವ್ಯ ಗಡಿ ಭಾಗದ ಪ್ರಾಂತ್ಯಗಳು ಅವಾಮಿ ನ್ಯಾಶನಲ್ ಪಾರ್ಟಿಯ ಜತೆಗೆ ನಿಲ್ಲಲಿವೆ ಎಂಬ ಅಂಶ ಚುನಾವಣಾ ಪೂರ್ವ ಲೆಕ್ಕಾಚಾರಗಳಿಂದ ಗೊತ್ತಾಗುತ್ತದೆ. ಈ ಗಡಿ ಪ್ರಾಂತ್ಯದಲ್ಲಿ ಬಲು ದೊಡ್ಡ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಗಾಂಧಿವಾದಿ ಖಾನ್ ಅಬ್ದುಲ್ ಗಫಾರ್ ಖಾನ್ ಅದೇಕೋ ಏನೋ ಈ ಸಂದರ್ಭದಲ್ಲಿ ನೆನಪಾಗುತ್ತಾರೆ. ಬಲೂಚಿಸ್ತಾನವೆಂಬ ಇನ್ನೊಂದು ಪ್ರಮುಖ ಪ್ರಾಂತ್ಯವಿದೆಯಲ್ಲಾ, ಅಲ್ಲಿ ಪಾಕಿಸ್ತಾನ ಪೀಪಲ್ಸ್ ಪಾರ್ಟಿಯ ಬಗ್ಗೆ ತೀವ್ರ ಅಸಮಾಧಾನವಿದೆ. ಹೀಗಾಗಿ ಅಲ್ಲಿನ ಮಂದಿ ಅವಾಮಿ ನ್ಯಾಶನಲ್ ಪಾರ್ಟಿಯ ಬಗ್ಗೆ ಒಲವು ತೋರಲೂ ಬಹುದು. ಈಗಾಗಲೇ ಆ ಪ್ರಾಂತ್ಯದ ಬಹಳಷ್ಟು ಮಂದಿ ತಮ್ಮ ಆಸ್ಥಿತ್ವದ ಪ್ರಶ್ನೆಯನ್ನೇ ಮುಂದಿಟ್ಟುಕೊಂಡು ಸೇನೆಯ ದಬ್ಬಾಳಿಕೆಯ ವಿರುದ್ಧ ಹೋರಾಟ ನಡೆಸುತ್ತಿದ್ದಾರಲ್ಲಾ, ಅಂತಹ ಯಾವುದೇ ಒಂದು ಗುಂಪಿನ ಜತೆಗೆ ಅಲ್ಲಿನ ಮಂದಿ ನಿಂತರೂ ಅಚ್ಚರಿ ಏನಿಲ್ಲ.

ಪ್ರಸಕ್ತ ಪಾಕ್‌ನಲ್ಲಿ ನಡೆದಿರುವ ಇಂತಹ ರಾಜಕೀಯ ಏಳುಬೀಳುಗಳಾವುದರಿಂದಲೂ ಭಾರತಕ್ಕಂತೂ ಯಾವುದೇ ಲಾಭವಿಲ್ಲ. ಅಲ್ಲಿನ ಸ್ಥಿತಿ, ದಿನದಿಂದ ದಿನಕ್ಕೆ ಗೊಂದಲದ ಹಾದಿಯಲ್ಲಿ ಸಾಗುತ್ತಿದೆ. ಆದರೆ ಆ ದೇಶ ನಮ್ಮಡನೆ ಇರುವ ಸಂಬಂಧವನ್ನು ಇನ್ನಷ್ಟೂ ಹದಗೆಡಿಸಿಕೊಳ್ಳುತ್ತಿರುವುದೂ ವಿಪರ್ಯಾಸವೇ. ಕೆಲವು ಸಮಯದ ಹಿಂದೆ ಗಡಿಭಾಗದಲ್ಲಿ ಪಾಕ್‌ನ ಸೈನಿಕರು ನಮ್ಮ ಇಬ್ಬರು ಯೋಧರ ರುಂಡವನ್ನೇ ಕೊಚ್ಚಿದ್ದು, ಮುಂಡವನ್ನು ನಮ್ಮ ಗಡಿಯೊಳಗೆ ಎಸೆದು ಹೋಗಿದ್ದರು. ಅಲ್ಲಿನ ಸೆರೆಮನೆಗಳಲ್ಲಿರುವ ಭಾರತೀಯರನ್ನು ಅತ್ಯಂತ ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತಿದೆ ಮತ್ತು ಜನಾಂಗೀಯ ನಿಂದನೆ ಮಾಡಲಾಗುತ್ತಿದೆ ಎಂಬ ದೂರು ವ್ಯಾಪಕವಾಗಿ ಕೇಳಿ ಬರುತ್ತಿವೆ. ಈಚೆಗೆ ಕೆಲವು ಭಾರತೀಯ ಸೆರೆಯಾಳುಗಳನ್ನು ಚಿತ್ರಹಿಂಸೆ ನೀಡಿ ಕೊಂದು ಹಾಕಲಾಗಿದೆ ಎಂಬ ಸುದ್ದಿಯೂ ಬಂದಿದೆ. ಇದೀಗ ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಸಮಸ್ಯೆಯೂ ಸುದ್ದಿಯಾಗುತ್ತಿದೆ. ಪಾಕಿಸ್ತಾನವು ತಾನೊಂದು ನಾಗರಿಕ ದೇಶ ಎಂದು ಹೇಳಿಕೊಳ್ಳುವುದಿದ್ದರೆ ಮೊದಲು ಅಲ್ಲಿರುವ ಅಲ್ಪಸಂಖ್ಯಾತರ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲೇ ಬೇಕು.                         ನಿಮ್ಮ ಅನಿಸಿಕೆ ತಿಳಿಸಿ:  editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT