ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾತ್ರಧಾರಿಯ ದ್ವಂದ್ವ

Last Updated 23 ಫೆಬ್ರುವರಿ 2015, 19:30 IST
ಅಕ್ಷರ ಗಾತ್ರ

ಇದು ಸಮೀರಣ ಕ್ಷೇತ್ರಿ­ಯವರು ಬರೆದ ಅದ್ಭುತ ನೇಪಾಳೀ ಕಥೆ. ಸಿಕ್ಕಿಂನ ಬಜಾರಿನಲ್ಲಿ ರಾಮಲೀಲಾ ನಡೆಯುತ್ತಿತ್ತು. ಬಿದಿರಿನ ಕಂಬಗಳಿಗೆ ತೂಗುಹಾಕಿದ ಪೆಟ್ರೋಮ್ಯಾಕ್ಸ್‌ ದೀಪದ ಬೆಳಕಿನಲ್ಲಿ ನಾಟಕ ಅದ್ಭುತವಾಗಿ ಕಾಣು­­ತ್ತಿತ್ತು. ರಂಗದ ಸುತ್ತಮುತ್ತ ನೂರಾರು ಜನ ಕುಳಿತಿದ್ದಾರೆ. ಗಂಡಸರು, ಹೆಂಗ­ಸರು ಆಗಾಗ ಬಾಯಿಯಲ್ಲಿ ತಂಬಾಕು ತುಂಬಿಕೊಳ್ಳುತ್ತಾರೆ. ಪಕ್ಕದ ಭಟ್ಟಿಯ ಅಂಗಡಿಯಲ್ಲಿ ತಿನಿಸುಗಳ ಮಾರಾಟ ಭರಾಟೆಯಿಂದ ನಡೆದಿದೆ. ರಾಮಲೀಲಾ ನಡೆದು ತಿಂಗಳು ಮೇಲಾಯಿತು. ಮಿಂಚುವ ಬೆಳಕಿನಲ್ಲಿ ಪಾತ್ರಧಾರಿಗಳ ಬಟ್ಟೆಗಳು ಇನ್ನಷ್ಟು ಮಿಂಚುತ್ತಿದ್ದವು.

ಆಯೋಧ್ಯೆಯಲ್ಲಿ ರಾಮ ಗಂಭೀರ­ವಾಗಿ ಕುಳಿತಿದ್ದಾನೆ, ಭರತ, ಶತ್ರುಘ್ನರು ಅಳುತ್ತಿದ್ದಾರೆ.  ಲಕ್ಷ್ಮಣ ಎದೆ ಬಡಿದು­ಕೊಂಡು ಅತ್ತು ಎಚ್ಚರ ತಪ್ಪಿ ಬೀಳುತ್ತಾನೆ.  ಹನುಮಂತ ಹೋರಾಡಿ ಅಳುತ್ತಾನೆ. ಇನ್ನೊಂದೆಡೆಗೆ ಸೀತಾಮಾತೆ ಕಾಡಿನಲ್ಲಿ ಒಬ್ಬಳೇ ಕುಳಿತು ಅಳುತ್ತಾಳೆ, ವಿರಹ ಗೀತೆ ಹಾಡುತ್ತಾಳೆ. ಅಗಸನ ಮಾತು ಕೇಳಿ ಸೀತಾಮಾತೆಯನ್ನು ಕಾಡಿಗೆ ಕಳುಹಿಸಿದ ರಾಮನನ್ನು ಜನ ಶಪಿಸುತ್ತಾರೆ.  ಸೀತೆಯ ದುಃಖ ಎಲ್ಲ­ರನ್ನು ತಟ್ಟುತ್ತಿದೆ. ಸೀತೆಯ ಆಲಾಪ­ದಲ್ಲಿ ಆರ್ತತೆ ಇದೆ. ಆಕೆಯನ್ನು ರಂಗದ ಮೇಲೆ ನೋಡಿದೊಡನೆ ಎಲ್ಲರೂ ಇದ್ದಲ್ಲಿಂದಲೇ ನಮಸ್ಕರಿಸುತ್ತಾರೆ.

ನಾಟಕ ಮುಗಿದ ಮೇಲೆ ಸೀತೆಯ ಪಾತ್ರಧಾರಿ ಶಿವಪೂಜನ ಕೆಳಗೆ ಬಂದೊಡನೆ ಅವನನ್ನು ನೂರಾರು ಮಹಿಳೆಯರು ಮುತ್ತಿಕೊಳ್ಳುತ್ತಾರೆ. ಪ್ರತಿ­ಯೊಬ್ಬ ಮಹಿಳೆ ಬಂದು ಶಿವಪೂಜನನ ಕಾಲು ಮುಟ್ಟಿ ನಮಸ್ಕಾರ ಮಾಡು­ತ್ತಾಳೆ. ಆಗ ಅತ ತನ್ನ ಕ್ಷತ್ರಿಮ ಬೈತಲೆಗೆ ಹಚ್ಚಿಕೊಂಡಿದ್ದ ಕುಂಕುಮವನ್ನು ಮುಟ್ಟಿ ಮಹಿಳೆಯ ಹಣೆಗೆ ಹಚ್ಚಿ, ಒಳ್ಳೆಯದಾಗಲಿ ಎನ್ನುತ್ತಾನೆ.  ಅವರಿಗೆ ಧನ್ಯತೆಯ ಭಾವ. ಮೊದಮೊದಲು ಶಿವಪೂಜನನಿಗೆ ಇದು ತುಂಬ ಇಷ್ಟ­ವಾಗು­ತ್ತಿತ್ತು. ಮಹಿಳೆಯರು ಇವನನ್ನು ತಾಯಿಯೆಂದು ನಂಬಿದಂತೆ ತಾನೂ ದೇವಿಯೆಂದೇ ತಿಳಿಯುತ್ತಿದ್ದ. ಆದರೆ ಇತ್ತೀಚಿಗೆ ಅವನಿಗೆ ಬಹಳ ಇರುಸುಮುರಿಸಾಗುತ್ತಿತ್ತು.
ಶಿವಪೂಜನ ರಾಮಲೀಲಾ ಮಂಡಳಿಗೆ ಸೇರಿದ್ದು ಪಾತ್ರೆ ತೊಳೆಯಲಿಕ್ಕೆ. ಹುಡುಗಿಯ ತರವೇ ಮುಖವಿದ್ದ ಈತ ನಾಟಕನೋಡಿ ನೋಡಿ ಸೀತೆಯ ಎಲ್ಲ ಹಾಡು­ಗಳನ್ನು ಕಂಠಪಾಠ ಮಾಡಿಕೊಂಡಿದ್ದ. ಪಾತ್ರೆ ತೊಳೆಯು­ವಾಗ ಅವು­ಗಳನ್ನು ಹಾಡಿಕೊಳ್ಳುತ್ತಿದ್ದ. ಇದನ್ನು ಕೇಳಿಸಿಕೊಂಡ ಮಾಲಿಕ ಇವನಿಗೆ ಪ್ರಮೋ­ಶನ್ ಕೊಟ್ಟು ಸೀತೆಯನ್ನಾಗಿ ಮಾಡಿದ್ದ.

ನಾಟಕದ ಸೀತೆ ಶಿವಪೂಜನನಲ್ಲಿ ಎಷ್ಟು ಆವಾಹನೆ ಮಾಡಿದಳೆಂದರೆ ಇವನು ಸದಾಕಾಲ ಮಾತನಾಡಿದರೂ ಸೀತೆಯ  ದುಃಖದ  ಹಾಡುಗಳೇ ಬರುತ್ತಿದ್ದವು.  ಬಾಲಿ ಎಂಬ ಹುಡುಗಿ  ಈತನನ್ನು ಮದುವೆಯಾದಳು. ಆದರೆ ಒಂದು ತಿಂಗಳು ಕೂಡ ಇವನೊಡನೆ ಬದುಕಲಾಗಲಿಲ್ಲ. ಆಕೆ ಇವನನ್ನು ಅಪ್ಪಿಕೊಂಡಾಗಲೆಲ್ಲ ಇವನ ಬಾಯಿಂದ ಬಂದ ವಿರಹಗೀತೆಗಳು ಅವಳಿಗೆ ಭಾರೀ ಸಿಟ್ಟು ತರಿಸುತ್ತಿದ್ದವು.  ಒಂದು ದಿನ ಆಕೆ ರೋಷದಿಂದ ನೀನು ಗಂಡಸೇ ಅಲ್ಲ ಎಂದು ಹೇಳಿ ಬಳೆ ಒಡೆದುಕೊಂಡು ಹೋಗಿಯೇ ಬಿಟ್ಟಳು. ಪಾತ್ರ ಮಾಡುವ ಸೀತೆ ಹಾಗೂ ಗಂಡಸಾಗಿದ್ದ ಶಿವ­ಪೂಜನನ ನಡುವೆ ಪ್ರತಿಕ್ಷಣ ಸಂಘರ್ಷ ನಡೆದು ಕೊನೆಗೆ ಸೀತೆಯೇ ಗೆಲ್ಲುತ್ತಿದ್ದಳು.

ಒಂದು ದಿನ ನಾಟಕ ಮುಗಿಸಿ ಹೊರಗೆ ಬಂದು ಬಟ್ಟೆ ಬಿಚ್ಚಿ ಬೀಡಿ ಸೇದುತ್ತಾ ಕುಳಿತಾಗ ಮಹಿಳೆಯರಿಬ್ಬರು ಬಂದರು. ಒಬ್ಬಳು ಹಿರಿಯಳು ಮತ್ತೊಬ್ಬಳು ಸುಂದರ ತರುಣಿ. ಇವನ ಕಾಲು ಮುಟ್ಟಿ ನಮಸ್ಕಾರ ಮಾಡಿದಾಗ ಎಂದಿನಂತೆ ಹುಡುಗಿಯ ಹಣೆಗೆ ಕುಂಕುಮ ಹಚ್ಚಲು ಹೋದಾಗ ಹಿರಿಯಳು, ಬೇಡ, ಆಕೆ ವಿಧವೆ ಎಂದಳು.  ಮದುವೆಯಾದ ಮರು­ದಿನವೇ ಗಂಡ ಸತ್ತ ಹುಡುಗಿ. ಯಾರೂ ಆಕೆಯನ್ನು ಮದುವೆ­ಯಾಗುವುದಿಲ್ಲವಂತೆ.  ಶಿವಪೂಜನನಿಗೆ ತನ್ನ ದ್ವಂದ್ವಮಯವಾದ ಬದುಕಿನ ಬಗ್ಗೆ ಹೇಸಿಗೆ ಬಂದಿತು. ಹೋಗಿ ಯಜಮಾನನಿಗೆ ಹೇಳಿದ, ನನಗೆ ಸೀತೆಯ ಪಾತ್ರ ಸಾಕು. ಅಲ್ಲಿಂದ ಹೊರಟು ಆ ವಿಧವೆ ಹುಡುಗಿಯ ಮನೆಗೆ ಹೋದ.  ಈ ಬಾರಿ ಖಂಡಿತವಾಗಿಯೂ ಆಕೆಯನ್ನು ಮದುವೆಯಾಗಿ ಗಂಡನಂತೇ ಬದುಕುತ್ತೇನೆ ಎಂದು ನಿರ್ಧಾರ ಮಾಡಿದ.

ಆಕೆಯ ಮನೆಗೆ ಹೋದಾಗ ಆಕೆಗೆ ಬಲು ಸಂಭ್ರಮ. ಬಂದು ಕಾಲು ಮುಟ್ಟಿದಳು. ಮನೆಗೆ ತಾಯಿ ಬಂದಿದ್ದಾಳೆಂದು ಊರ ಮಹಿಳೆಯರೆಲ್ಲ ಬಂದರು. ಈತನಿಗೆ ಆ ಹುಡುಗಿಯ ಹತ್ತಿರ ಮಾತನಾಡಲೂ ಸಾಧ್ಯವಿಲ್ಲ. ಕೊನೆಗೆ ತಡೆಯಲಾರದೆ ಆಕೆಯನ್ನು ಬದಿಗೆ ಕರೆದು ಹೇಳಿದ, ಹುಡುಗಿ, ನಾನು ನಿನ್ನನ್ನು ಮದುವೆ­ಯಾಗುತ್ತೇನೆ. ಕ್ಷಣಮಾತ್ರದಲ್ಲಿ ಆಕೆ ಕಣ್ಣು ಮುಚ್ಚಿ, ತಾವು ಹಾಗೆ ಹೇಳ­ಬಾರದು. ತಾವು ತಾಯಿ, ಜಗನ್ಮಾತೆ ಎಂದು ಮತ್ತೊಮ್ಮೆ ಕಾಲು ಮುಟ್ಟಿದಳು. ಮೊಟ್ಟ ಮೊದಲ ಬಾರಿಗೆ ಶಿವಪೂಜನನಿಗೆ ಸೀತೆಯ ಬಗ್ಗೆ ರೋಷ ಬಂದಿತು. ಮುಂದೆಂದೂ ಆತ ರಾಮಲೀಲೆ ನಡೆಯುವ ಸ್ಥಳಕ್ಕೂ ಹೋಗದೇ, ದೂರ ಎಲ್ಲಿಯೋ ಹೋಗಿಬಿಟ್ಟ. 

ನಮ್ಮ ಬದುಕಿನಲ್ಲಿ ಯಾವುದೋ ಕೆಲಸವನ್ನು ತುಂಬ ಪ್ರೀತಿಯಿಂದ, ಅನನ್ಯತೆಯಿಂದ, ತಾದಾತ್ಮ್ಯತೆಯಿಂದ ಮಾಡುತ್ತ, ಮಾಡುತ್ತ ನಮಗೆ ಬೇರೆ ವ್ಯಕ್ತಿತ್ವವೇ ಇಲ್ಲದಂತೆ ಭ್ರಮೆಗೊಳಗಾಗುತ್ತೇವೆ.  ಕೆಲಸ ಬೇರೆ, ನಮ್ಮ ವ್ಯಕ್ತಿತ್ವ ಬೇರೆ ಎಂಬ ಅರಿವು ಸದಾ ಇರಬೇಕು.  ಇಲ್ಲದೇ ಹೋದಾಗ ಕರ್ತವ್ಯದ ಪಾತ್ರ ನಮ್ಮ ವಿಶಿಷ್ಟವಾದ ವ್ಯಕ್ತಿತ್ವವನ್ನು ಅರಗಿಸಿ ಕುಡಿದು ಬಿಡುತ್ತದೆ. ನಟ ಕೇವಲ ಪಾತ್ರದಲ್ಲಿ ಮಾತ್ರ ನಟ. ಅಧಿಕಾರಿ, ಅಧಿಕಾರ ಕ್ಷೇತ್ರದಲ್ಲಿ ಮಾತ್ರ ಅಧಿಕಾರಿ.  ಹಾಗೆ ತಿಳಿದಾಗ ಮಾತ್ರ ವೈಯಕ್ತಿಕ ಜೀವನ ಕಳೆದು ಹೋಗುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT