ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾನನಿಷೇಧ ಮತ್ತು ಜನಪ್ರಿಯತೆಯ ಹಪಾಹಪಿ

Last Updated 6 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ಪಾನನಿಷೇಧ ಕುರಿತು ಬಿಹಾರದ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರ ಒಟ್ಟಾರೆ ಚಿಂತನೆ ಏನಿರಬಹುದು ಎನ್ನುವುದು ನನಗೆ ಒಗಟಾಗಿ ಕಾಣುತ್ತಿದೆ. ಕೆಲ ಸಂದರ್ಭಗಳಲ್ಲಿ ನಾನು ಅಜಾಗರೂಕತೆಯಿಂದ ವರ್ತಿಸುತ್ತೇನೆ. ಆದರೆ, ಸದ್ಗುಣಗಳು ಮತ್ತು ಪವಿತ್ರವಾದ ನಾಡಾಗಿರುವ ಬಿಹಾರದಲ್ಲಿ ಜೈಲಿಗೆ ಹೋಗುವಂತಹ ಆತ್ಮಹತ್ಯಾ ಕೃತ್ಯವನ್ನು ಮಾತ್ರ ಎಸಗಲಾರೆ.

ನಿತೀಶ್‌ ಅವರ ಹೊಸ ಪಾನನಿಷೇಧ  ಕಾನೂನಿನ ಅಂತಿಮ ಕರಡನ್ನು ನಾನು ಇನ್ನೂ ಓದಿಲ್ಲ. ಆದರೆ, ಬಿಹಾರ ವಿಧಾನಸಭೆಯು ಮೊನ್ನೆ ಅಂಗೀಕರಿಸಿರುವ ಮಸೂದೆಯ ಸ್ವರೂಪವನ್ನು ನೋಡಿದರೆ ಭಯ ಮೂಡಿಸುವಂತಿದೆ.

‘ಬಿಹಾರ ಪಾನನಿಷೇಧ ಮತ್ತು ಅಬಕಾರಿ ಮಸೂದೆ 2016’ ಈ ಹಿಂದೆ ಯಾರೊಬ್ಬರೂ ಕೈಗೊಳ್ಳದ ರೀತಿಯಲ್ಲಿ ಮದ್ಯಪಾನದ ವಿರುದ್ಧ ದೊಡ್ಡ ಸಮರವನ್ನೇ ಸಾರಿದೆ.ಇದಕ್ಕೂ ಮೊದಲು ಯಾವುದೇ ಹಿಂದೂ, ಮುಸ್ಲಿಂ, ಕ್ರೈಸ್ತ ವ್ಯಕ್ತಿ ಅಥವಾ ಜಾತ್ಯತೀತರು ಮದ್ಯಪಾನದ ವಿರುದ್ಧ ಇಂತಹ ಕಠಿಣ ಸ್ವರೂಪದ ಕ್ರಮಕ್ಕೆ ಕೈಹಾಕಿರಲಿಲ್ಲ.

ಕುಟುಂಬದ ಸದಸ್ಯನೊಬ್ಬ ಮನೆಯಲ್ಲಿ ಮದ್ಯ ಅಡಗಿಸಿ ಇಟ್ಟಿದ್ದರೆ ಅದಕ್ಕೆ ಇಡೀ ಕುಟುಂಬವನ್ನೇ ಹೊಣೆಯನ್ನಾಗಿ ಮಾಡುವ ಕಠಿಣ ನಿಯಮವನ್ನು ಈ ಮಸೂದೆ ಒಳಗೊಂಡಿದೆ. ಒಂದು ವೇಳೆ ಕುಟುಂಬದ ಹದಿಹರೆಯದ ಮಕ್ಕಳು ಮನೆಯವರಿಗೇ ಗೊತ್ತಿಲ್ಲದಂತೆ ಮದ್ಯ ಅಡಗಿಸಿಟ್ಟಿದ್ದರೆ ಅದಕ್ಕೆ ಕುಟುಂಬದ ಸದಸ್ಯರೆಲ್ಲ ಬೆಲೆ ತೆರಬೇಕಾಗುತ್ತದೆ.

ಮನೆಯೊಂದರಲ್ಲಿ ಸಕ್ಕರೆ ಅಥವಾ ಬೆಲ್ಲದ ಜತೆ ದ್ರಾಕ್ಷಿ ಹಣ್ಣಿನ ಮಿಶ್ರಣ ಕಂಡುಬಂದರೂ, ಕುಟುಂಬದ ಸದಸ್ಯರು ಮದ್ಯ ತಯಾರಿಸುತ್ತಿದ್ದಾರೆ ಎಂದು ಪೊಲೀಸರು ನಿರ್ಣಯಕ್ಕೆ ಬರಲು ಮತ್ತು ಅವರ ವಿರುದ್ಧ ಪ್ರಕರಣ ದಾಖಲಿಸಲೂ ಈ ಮಸೂದೆ ಅವಕಾಶ ಮಾಡಿಕೊಡಲಿದೆ.

ಪಾನನಿಷೇಧದ ವಿರುದ್ಧ ಅಸಾಮಾನ್ಯ ಬಗೆಯಲ್ಲಿ ಪೊಲೀಸರಿಗೆ ಅಧಿಕಾರ ನೀಡುವ, ಕಠಿಣ ದಂಡನಾತ್ಮಕ ನಿಯಮಗಳನ್ನು ಒಳಗೊಂಡಿರುವ ಈ ಕಾಯ್ದೆಯನ್ನು ಕೆಲವರು ಶ್ಲಾಘಿಸಬಹುದು. ಬಾಡಿಗೆದಾರ ಕುಡುಕನಾಗಿದ್ದರೆ ಮನೆ ಮಾಲೀಕ ಅದನ್ನು ಪೊಲೀಸರ ಗಮನಕ್ಕೂ ತರಬಹುದು. ಮನೆ ಯಜಮಾನನು ಈ ಮಸೂದೆಯನ್ನು ತನ್ನ ಬಾಡಿಗೆದಾರರನ್ನು ಬೆದರಿಸಲು ದುರ್ಬಳಕೆ ಮಾಡಿಕೊಳ್ಳಲೂ ಬಳಸಬಹುದಾಗಿದೆ. ‘ಹೆಚ್ಚು ಬಾಡಿಗೆ ನೀಡು ಇಲ್ಲವೇ ನಿನ್ನ ಮನೆಯಲ್ಲಿ ಮದ್ಯದ ಬಾಟಲಿ ಇರಿಸಿ ಪೊಲೀಸರನ್ನು ಕರೆಸುತ್ತೇನೆ’ ಎಂದೂ ಬೆದರಿಸಬಹುದು.

ಹಳ್ಳಿಯೊಂದು ಪಾನನಿಷೇಧದ ಉಲ್ಲಂಘನೆಯನ್ನು ಪುನರಾವರ್ತಿಸಿದರೆ ಜಿಲ್ಲಾಧಿಕಾರಿಯು ಹಳ್ಳಿಗರ ಮೇಲೆ ದಂಡ ವಿಧಿಸಲು ಮಸೂದೆ ಅವಕಾಶ ಕಲ್ಪಿಸಿಕೊಟ್ಟಿದೆ. ಇದು 21ನೇ ಶತಮಾನದ ಕಾಲಘಟ್ಟದಲ್ಲಿ 19ನೇ ಶತಮಾನದ ಬ್ರಿಟಿಷರ ವಸಾಹತುಕಾಲದಲ್ಲಿ ಜಾರಿಯಲ್ಲಿದ್ದ ನಿಯಮಗಳನ್ನು ನೆನಪಿಸುತ್ತದೆ. ಪಾನನಿಷೇಧ ಜಾರಿಗೆ ಎಲ್ಲಿಯೂ ಇಂತಹ ನಿಯಮ ಪಾಲಿಸಿರುವ ನಿದರ್ಶನಗಳು ಇಲ್ಲ.

ಬಿಹಾರದಲ್ಲಿ ಕೊಲೆ ಮಾಡಿಯೂ ದಕ್ಕಿಸಿಕೊಳ್ಳಬಹುದು. ಜೈಲಿನಲ್ಲಿ ಇದ್ದುಕೊಂಡೇ ದುಷ್ಟಕೂಟದ (ಮಾಫಿಯಾ) ಸಾಮ್ರಾಜ್ಯವನ್ನು ನಿಯಂತ್ರಿಸಬಹುದು. ತಾವು ಹೇಳಿದಂತೆ ನಡೆಯದ ಪತ್ರಕರ್ತರನ್ನು ಕೊಲೆ ಮಾಡಲೂ ಆದೇಶಿಸಬಹುದು. ಆದರೆ ಪಾನನಿಷೇಧದ ವಿರುದ್ಧ ನ್ಯಾಯಾಂಗ ವಿಳಂಬದ ಆಶ್ರಯ ಪಡೆಯಲು ಯಾರಾದರೂ ಉದ್ದೇಶಿಸಿದ್ದರೆ ಅದನ್ನು ಮರೆತುಬಿಡುವುದೇ ಒಳಿತು.

ಪಾನನಿಷೇಧ ಉಲ್ಲಂಘನೆ ಪ್ರಕರಣಗಳ ವಿಚಾರಣೆಗೆಂದೇ ವಿಶೇಷ ನ್ಯಾಯಾಲಯಗಳು ಅಸ್ತಿತ್ವಕ್ಕೆ ಬರಲಿವೆ. ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರ ಉದ್ದೇಶ ಮತ್ತು ನಿರ್ಧಾರಕ್ಕೆ ಅನುಗುಣವಾಗಿಯೇ ಈ ಮಸೂದೆಯನ್ನು ಪರಿಪೂರ್ಣವಾಗಿ ಸಿದ್ಧಪಡಿಸಿದ್ದರೂ, ಅಷ್ಟೇನೂ ಮುಖ್ಯವಲ್ಲದ ವಿವರಗಳ ಬಗ್ಗೆಯೂ ಅತಿಯಾದ ಕಾಳಜಿ ವಹಿಸುವ ನನ್ನಲ್ಲಿ ಈಗಲೂ ಹಲವಾರು ಪ್ರಶ್ನೆಗಳು ಉದ್ಭವಿಸುತ್ತಿವೆ.

ಹೆಂಡದ ದಾಸರಾಗಿರುವವರನ್ನು ಅವರ ವಾಸಸ್ಥಳದಿಂದ ಆರು ತಿಂಗಳ ಕಾಲ ಹೊರ ಹಾಕುವ ಅಧಿಕಾರವನ್ನು ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ. ಪಾನನಿಷೇಧ ಜಾರಿಗೆ ಬಂದ ನಂತರ ಮೊದಲ ಬಾರಿಗೆ ಮದ್ಯ ಸೇವನೆ ಮಾಡಿದ ಅಥವಾ ಸಕ್ಕರೆ ಮತ್ತು ದ್ರಾಕ್ಷಿ ಮಿಶ್ರಿತ ಹಣ್ಣಿನ ರಸವನ್ನು ಸೇವಿಸಿದ ವ್ಯಕ್ತಿಯನ್ನು ಆತನ ವಾಸಸ್ಥಳದ ಪ್ರದೇಶದಿಂದ ಹೊರಹಾಕುವ ಅಗತ್ಯವಾದರೂ ಏನು ಇರುತ್ತದೆ? ಮದ್ಯವ್ಯಸನಿಗಳನ್ನು ಪಕ್ಕದ ಹಳ್ಳಿಗೆ, ಜಿಲ್ಲೆಗೆ ಕಳಿಸಲು ಸಾಧ್ಯವೇ? ಅಥವಾ ಬಿಹಾರ ಸರ್ಕಾರವು ರಾಜ್ಯದಲ್ಲಿನ ಹೆಂಡದ ದಾಸರನ್ನು ಜಾರ್ಖಂಡ್‌, ಉತ್ತರ ಪ್ರದೇಶ ಅಥವಾ ದೆಹಲಿ, ಮುಂಬೈಗೆ ಸಾಗಹಾಕಲು ಸಾಧ್ಯವಾಗಲಿದೆಯೇ?

ಬಿಹಾರದ ಬಡವರು ಮಾತ್ರ ಮದ್ಯ ಸೇವನೆ ಬಗ್ಗೆ ಚಿಂತಿಸಬೇಕಾಗಿಲ್ಲ. ಮಾರುಕಟ್ಟೆಯಿಂದ 100ರಿಂದ 200 ಮೀಟರ್‌ ದೂರದಲ್ಲಿ ಸೇಂದಿಯನ್ನು ಯಾವುದೇ ನಿರ್ಬಂಧ ಇಲ್ಲದೆ ಸೇವಿಸಬಹುದಾಗಿದೆ. ಇದನ್ನೆಲ್ಲ ನೋಡಿದಾಗ ಈ ಮಸೂದೆಯು ನಿಜವಾಗಿಯೂ ತಬ್ಬಿಬ್ಬುಗೊಳಿಸುತ್ತಿದೆ. ಹಲವಾರು ಸಕಾರಣವಾದ ಅನುಮಾನಗಳ ಹೊರತಾಗಿಯೂ ನಿತೀಶ್‌ ಕುಮಾರ್‌ ಅವರ ಇಂತಹ ನಿರ್ಧಾರವು, ಭಾರತದ ರಾಜಕಾರಣವು ಈಗ ಅತಿಯಾದ ಜನಪ್ರಿಯತೆಯ ಹಾದಿ ತುಳಿಯುತ್ತಿರುವುದನ್ನು ಖಚಿತಪಡಿಸುತ್ತದೆ.

ನಿತೀಶ್ ಕುಮಾರ್‌ ಅವರು ಚುನಾವಣೆ ಸಂದರ್ಭದಲ್ಲಿ ತಮ್ಮ ರಾಜ್ಯದ ಜನತೆಗೆ ಅತಿಯಾದ ಭರವಸೆ ನೀಡುವುದರ ಜತೆಗೆ, ಗರಿಷ್ಠ ಬದ್ಧತೆಯನ್ನೂ ತೋರಿದ್ದಾರೆ. ಅಸಾಧ್ಯವಾದುದನ್ನು ಒದಗಿಸುವ ಮಾತು ಕೊಟ್ಟು ಅವುಗಳನ್ನೆಲ್ಲ ವೋಟುಗಳನ್ನಾಗಿ  ಪರಿವರ್ತಿಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ. ಪಾನನಿಷೇಧ ನಿರ್ಧಾರವು ಸಂವಿಧಾನದ ಪರೀಕ್ಷೆಯಲ್ಲಿ ಪಾಸು ಆಗುತ್ತದೆ ಎಂದೇನೂ ನಾನು ಭಾವಿಸಲಾರೆ. ಯಾರಾದರೂ ಇದನ್ನು ಕಾನೂನು ಪ್ರಕಾರ ಪ್ರಶ್ನಿಸಿದರೆ ಅದು ಬಿದ್ದು ಹೋಗುವ ಸಾಧ್ಯತೆ ಇದೆ.

ನಿರ್ದಿಷ್ಟ ತತ್ವವೊಂದನ್ನು ಪಾಲಿಸಲು ಪ್ರಯತ್ನಿಸುವುದು ಮತ್ತು ಏನಾದರೂ ಒಳಿತನ್ನು ಮಾಡುವುದು ಒಂದೆಡೆಯಾದರೆ, ಕ್ರಿಮಿನಲ್‌ ಕಾನೂನನ್ನು ಬುಡಮೇಲು ಮಾಡಲು ಯತ್ನಿಸುವುದು ಮತ್ತು ಅದರ ದುರುಪಯೋಗ ಮಾಡಿಕೊಳ್ಳಲು ಮುಂದಾಗುವುದು ಇನ್ನೊಂದು ನಡೆಯಾಗಿರುತ್ತದೆ. ಒಂದು ವೇಳೆ ರಾಜ್ಯಪಾಲರು ಮತ್ತು ರಾಷ್ಟ್ರಪತಿ ಈ ಮಸೂದೆಗೆ ಸಮ್ಮತಿ ನೀಡುವುದನ್ನು ತಡೆಯುವ ಧೈರ್ಯ ಪ್ರದರ್ಶಿಸಿದರೆ ಅವರು ಕುಡಿತವನ್ನು ಬೆಂಬಲಿಸಿದಂತೆ ಆಗಲಿದೆ.

ಕೇಂದ್ರದಲ್ಲಿನ ಬಿಜೆಪಿ ಸರ್ಕಾರವೂ ಈ ಪಾನನಿಷೇಧ ಕಾಯ್ದೆ ಜಾರಿಯನ್ನು ಬೆಂಬಲಿಸಬಹುದು. ಇನ್ನಷ್ಟು ಕಠಿಣ ಸ್ವರೂಪದ ಕ್ರಮಗಳನ್ನು ಸೇರ್ಪಡೆ ಮಾಡಲು ಕೇಳಿಕೊಳ್ಳಲೂಬಹುದು. ನಿತೀಶ್ ಕುಮಾರ್‌ ಅವರು ಮುಂದಿನ ನಾಲ್ಕು ವರ್ಷಗಳ ಕಾಲ ಈ ಕಾಯ್ದೆ ಜಾರಿಗೆ ಗಮನ ನೀಡುವುದರಲ್ಲಿಯೇ ಕಾಲ ಕಳೆಯುವಂತಾಗಲಿ ಎನ್ನುವುದು ಬಿಜೆಪಿಯ ಉದ್ದೇಶವಾಗಿರಬಹುದು.

ಜಾರಿಗೆ ತರಲು ಸಾಧ್ಯವಿಲ್ಲದ ಭರವಸೆಗಳನ್ನು ಮತದಾರರಿಗೆ ನೀಡುವುದು ಅತಿಯಾದ ಜನಪ್ರಿಯತೆಯ ಅನಿವಾರ್ಯವಾಗಿರುತ್ತದೆ. ಒಂದೊಮ್ಮೆ ರಾಜಕಾರಣಿಗಳ ಸ್ವಂತ ಉದ್ದೇಶ ಈಡೇರಿದ ನಂತರ ಅವರು ತಮ್ಮ ಉತ್ತರಾಧಿಕಾರಿಗಳಿಗೆ ಕೆಟ್ಟ ಪರಂಪರೆಯೊಂದನ್ನು ಬಿಟ್ಟು ಹೋಗಿರುತ್ತಾರೆ. ಹೊಸದಾಗಿ ಅಧಿಕಾರಕ್ಕೆ ಬಂದವರು ಆ ಕೆಟ್ಟ ಪರಂಪರೆ ಜತೆಗೆ ಏದುಸಿರು ಬಿಡುತ್ತ ತೆವಳಬೇಕಾಗುತ್ತದೆ.

ವ್ಯವಸ್ಥೆಯ ಪಾಲಿಗೆ ಕೆಟ್ಟದ್ದಾಗಿರುವ, ಆದರೆ ಅತ್ಯಂತ ಜನಪ್ರಿಯವಾದ ನಿರ್ಧಾರ ಅಥವಾ ಕಾನೂನನ್ನು ಪ್ರಶ್ನಿಸುವ ಮೂರ್ಖತನವನ್ನು ಯಾವೊಬ್ಬನೂ  ಪ್ರದರ್ಶಿಸಲಾರ. ಕೇಂದ್ರದಲ್ಲಿ ಈ ಹಿಂದೆ ಅಧಿಕಾರದಲ್ಲಿದ್ದ ಯುಪಿಎ ಸರ್ಕಾರವು ಬಡವರು ಎದುರಿಸುವ ಅನಕ್ಷರತೆ, ಹಸಿವು ಮತ್ತಿತರ ಸಮಸ್ಯೆಗಳಿಂದ ಮುಕ್ತಗೊಳಿಸುವುದನ್ನು ಕಾನೂನುಬದ್ಧಗೊಳಿಸಲು ಹೊರಟಿತ್ತು.

ಪ್ರತಿಕೂಲ ಹವಾಮಾನ, ಪ್ರವಾಹ, ಬರಗಾಲದ ವಿರುದ್ಧ ಮತ್ತು ಕ್ರಿಕೆಟ್‌, ಹಾಕಿಯಲ್ಲಿ ಭಾರತದ ತಂಡವನ್ನು ಸೋಲಿಸುವುದರ ವಿರುದ್ಧ ಕಾಯ್ದೆ ಮಾಡಲು ಬಹುಶಃ ಯುಪಿಎ ಸರ್ಕಾರಕ್ಕೆ ಸಮಯಾವಕಾಶ ದೊರೆಯದಿರಬಹುದು ಅಥವಾ ಮರೆತು ಹೋಗಿರಲೂಬಹುದು. ಇದನ್ನು ನಾವು ಯುಪಿಎ ಸರ್ಕಾರದ ‘ಮೂರ್ಖತನದ ರಾಜಕೀಯ’ ಎಂದೂ ಕರೆಯಬಹುದು.

ಭ್ರಷ್ಟಾಚಾರದ ವಿರುದ್ಧ ಅಣ್ಣಾ ಹಜಾರೆ ಅವರು ನಡೆಸಿದ ಆಂದೋಲನವು ‘ಜನಲೋಕಪಾಲ್‌’ನ ಕರಡು ಮಸೂದೆಯೊಂದನ್ನು ರೂಪಿಸಿತ್ತು. ಅಂಬೇಡ್ಕರ್‌ ಅವರು ಸಿದ್ಧಪಡಿಸಿರುವ ಸಂವಿಧಾನದಡಿ ಈ ಮಸೂದೆಯನ್ನು ಅಂಗೀಕರಿಸಲು ಸಾಧ್ಯವೇ ಇಲ್ಲ ಎನ್ನುವುದು ಚೆನ್ನಾಗಿ ಗೊತ್ತಿದ್ದೂ ಅಂತಹ ಮಸೂದೆ ಸಿದ್ಧಪಡಿಸಲಾಗಿತ್ತು. ಈ ಕರಡು ಮಸೂದೆ ಅನ್ವಯ, ನೆರೆಹೊರೆಯವರು ಪರಸ್ಪರರ ಬಗ್ಗೆ ಬೇಹುಗಾರಿಕೆ ನಡೆಸಲು ಅವಕಾಶ ಇತ್ತು.

ಲೋಕಪಾಲ, ತನಿಖಾಧಿಕಾರಿ, ಕ್ರಿಮಿನಲ್‌ ಮೊಕದ್ದಮೆಗಳಿಗೆ ಸಂಬಂಧಿಸಿದಂತೆ ಕೋರ್ಟ್‌ನಲ್ಲಿ ವಾದ ಮಂಡಿಸುವ ಮತ್ತು ನ್ಯಾಯಾಧೀಶನ ಪಾತ್ರ ನಿರ್ವಹಿಸುವ ಅವಕಾಶ ಒದಗಿಸಲಾಗಿತ್ತು. ಇಂತಹ ಮಸೂದೆ ಅಂಗೀಕಾರವಾಗುವ ಸಾಧ್ಯತೆಯೇ ಇರಲಿಲ್ಲ. ಇಂತಹ ಸಾಧ್ಯತೆಯನ್ನು ಯಾರಾದರೂ ಪ್ರಶ್ನಿಸಿದರೆ, ‘ನೀವು ಭ್ರಷ್ಟಾಚಾರ ಬೆಂಬಲಿಸುವಿರಾ?’ ಎಂದು ಅವರನ್ನೇ ಪ್ರಶ್ನಿಸಲಾಗುತ್ತಿತ್ತು. ಕೊನೆಗೂ ಜನಲೋಕಪಾಲ್‌ ಮಸೂದೆ ನನೆಗುದಿಗೆ ಬಿದ್ದಿತು.

ಜನಲೋಕಪಾಲ್‌ ಕರಡು ಮಸೂದೆಗೆ ಗತಿ ಕಾಣಿಸಿದಂತೆ, ಕಾಲಕ್ರಮೇಣ ಪ್ರಧಾನಿಯನ್ನೂ ಲೋಕಪಾಲ್‌ ಮಸೂದೆ ವ್ಯಾಪ್ತಿಯಿಂದ ಹೊರಗೆ ಇಡಲಾಗುವುದು ಎಂದು ನಾನು ಖಚಿತವಾಗಿ ಹೇಳಬಲ್ಲೆ. ಇಂತಹ ಅತಿಯಾದ ಜನಪ್ರಿಯತೆಯ ಬೇಡಿಕೆ ಮತ್ತು ಒತ್ತಾಯಗಳನ್ನು ಬೇಡ ಎನ್ನಲು ಸಾಕಷ್ಟು ಧೈರ್ಯವೂ ಇರಬೇಕಾಗುತ್ತದೆ.

ಈ ವಿಷಯದಲ್ಲಿ ನಮ್ಮ ಹೊಚ್ಚ ಹೊಸ ರಾಜಕೀಯ ಪಕ್ಷ ಎಎಪಿಯು, ಅನುಭವಿಗಳ ಕೈಬಿಟ್ಟಿದೆ. ಪಕ್ಷವು ತನ್ನದೇ ಆದ ಜನಲೋಕಪಾಲ್‌, ದೆಹಲಿ ನಗರದಾದ್ಯಂತ ಉಚಿತ ವೈ–ಫೈ, ಪ್ರತಿ ಬಸ್‌ನಲ್ಲಿ ಸಿಸಿಟಿವಿ ಅಳವಡಿಕೆ, ಒಬ್ಬ ಭದ್ರತಾ ಸಿಬ್ಬಂದಿ ನಿಯೋಜನೆ, ಒಂದು ನೂರು ಹೊಸ ಕಾಲೇಜುಗಳ ಸ್ಥಾಪನೆ, ಖಾಸಗಿ ಶಾಲೆಗಳ ಮಟ್ಟಕ್ಕೆ ಸರ್ಕಾರಿ ಶಾಲೆಗಳನ್ನು ಮೇಲ್ದರ್ಜೆಗೆ ಏರಿಸುವುದು... ಹೀಗೆ ಅದರ ಭರವಸೆಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಇಂತಹ ಭರವಸೆಗಳೆಲ್ಲ ಕಾಲಕ್ರಮೇಣ ಏನಾಗುತ್ತಿವೆ ಎನ್ನುವುದನ್ನು ನಾವೆಲ್ಲ ನಮ್ಮ ಕಣ್ಣೆದುರಿಗೆ ಕಾಣುತ್ತಿದ್ದೇವೆ ಅಥವಾ ಯಾವುದೇ ಬದಲಾವಣೆ ಆಗಿಲ್ಲ ಎಂದು ಕೆಲವರು ದೂರುತ್ತಿರುವುದನ್ನು ಕೇಳುತ್ತಿದ್ದೇವೆ.

ಪಾನನಿಷೇಧ ಕಾನೂನನ್ನು ಪ್ರಶ್ನಿಸುವುದು ನಾಗರಿಕ ಸಮಾಜಕ್ಕೆ ಸವಾಲಾಗಿರುವುದು ನಿತೀಶ್‌ ಕುಮಾರ್‌ ಅವರಿಗೆ ಚೆನ್ನಾಗಿ ಗೊತ್ತಿದೆ. ಮಹಾರಾಷ್ಟ್ರ ಸರ್ಕಾರವು ಡಾನ್ಸ್‌ ಬಾರ್‌ಗಳ ಮೇಲೆ ನಿಷೇಧ ವಿಧಿಸಿದ್ದ ಧೋರಣೆಯು ಕೂಡ ಅಸಮರ್ಥನೀಯವಾಗಿತ್ತು.

ಕುಡಿಯುವ ಹಕ್ಕಿಗಾಗಿ ಹೋರಾಟ ನಡೆಸುವವನು ಧೈರ್ಯಶಾಲಿಯಾಗಿರುತ್ತಾನೆ. ಈ ಮಸೂದೆ ಕಾಯ್ದೆಯಾಗಿ ಜಾರಿಗೆ ಬರಲು ಇನ್ನೂ ಸಾಕಷ್ಟು ಸಮಯಾವಕಾಶ ಇರುವುದು ನಿತೀಶ್‌ ಕುಮಾರ್‌ ಅವರಿಗೆ ತಿಳಿದಿದೆ.

ಕೊಟ್ಟ ಮಾತಿನಂತೆ ನಡೆದುಕೊಂಡಿರುವೆ ಎಂದು ನಿತೀಶ್‌ ತಮ್ಮ ಮತದಾರರ ಎದುರು ಪ್ರತಿಪಾದಿಸಬಹುದು. ಪಾನನಿಷೇಧ ಜಾರಿಗೆ ತರುವ ಈ ಪ್ರಯತ್ನ ವಿಳಂಬವಾದರೆ ಅಥವಾ ಅದಕ್ಕೆ ಏನಾದರೂ ಅಡಚಣೆ ಉಂಟಾದರೆ ಇತರರನ್ನು ದೂಷಿಸಬಹುದು.

2019ರ ಲೋಕಸಭಾ ಚುನಾವಣೆಯಲ್ಲಿ ಪಾನನಿಷೇಧವನ್ನು ರಾಷ್ಟ್ರೀಯ ಕಾರ್ಯಸೂಚಿಯನ್ನಾಗಿ ಪ್ರಚಾರಕ್ಕೆ ಬಳಸುವುದು ಅವರ ಉದ್ದೇಶವಾಗಿರಲೂಬಹುದು. ಇಂತಹ ಮೂರ್ಖತನದ ಭರವಸೆ ನೀಡಿದ ಕಾಂಗ್ರೆಸ್‌ ಕೇರಳದಲ್ಲಿ ಮತ್ತು ಡಿಎಂಕೆ ತಮಿಳುನಾಡಿನಲ್ಲಿ ವಿಫಲಗೊಂಡಿರುವುದರ ಬಗ್ಗೆ ನಿತೀಶ್‌ ಹೆಚ್ಚೇನೂ  ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ನಿತೀಶ್‌ ಕುಮಾರ್ ಅವರು ತಮ್ಮ ಜಾತಿಯ  ವೋಟ್‌ ಬ್ಯಾಂಕ್‌ ಹೊಂದಿಲ್ಲ. ರಾಷ್ಟ್ರೀಯ ಮಟ್ಟದಲ್ಲಿ ನಿತೀಶ್‌ ಅವರಿಗಿಂತ ಲಾಲೂ ಪ್ರಸಾದ್‌ ಹೆಚ್ಚು ಮತದಾರರ ಬೆಂಬಲ ಪಡೆದಿದ್ದಾರೆ.

ಜಾತ್ಯತೀತ ಧೋರಣೆಗೆ ಹಲವಾರು ಹಕ್ಕುದಾರರು ಇರುವಾಗ, ಪಾನನಿಷೇಧವು ನಿತೀಶ್‌ ಅವರಿಗೆ ವಿಶಿಷ್ಟ ಪ್ರಚಾರ ತಂತ್ರ ಒದಗಿಸಿಕೊಡಲಿದೆ. ಮತದಾರರನ್ನು ಗೆಲ್ಲಲು, ಅದರಲ್ಲೂ ವಿಶೇಷವಾಗಿ ಮಹಿಳೆಯರ ಬೆಂಬಲ ಪಡೆಯಲು ಇದು ನೆರವಾಗಲಿದೆ. ಈ ಪಾನನಿಷೇಧದ ಭರವಸೆಯು ಯಾವ ಬಗೆಯಲ್ಲಿ ಜಾರಿಗೆ ಬರಲಿದೆ ಎನ್ನುವುದು ಮುಂಬರುವ ದಿನಗಳಲ್ಲಿ ತಿಳಿದು ಬರಲಿದೆ.

ವಿದೇಶಿ ಬ್ಯಾಂಕ್‌ಗಳಲ್ಲಿನ ಲಕ್ಷಾಂತರ ಕಪ್ಪು ಹಣದ ಸಂಪತ್ತನ್ನು ಸ್ವದೇಶಕ್ಕೆ ಮರಳಿ ತರುವ  ಬಿಜೆಪಿಯ ಭರವಸೆಯು ಜೋಕ್‌ ಆಗಿ ಪರಿಣಮಿಸಿದೆ. ಈಗ ಕಪ್ಪು ಹಣದ ವಿರುದ್ಧ ರೂಪಿಸಲಾಗಿರುವ ಕಠಿಣ ಸ್ವರೂಪದ ಕಾಯ್ದೆಯು ಈ ಹಿಂದಿನ ‘ಫೆರಾ’ (ಎಫ್‌ಇಆರ್‌ಎ) ಕಾಯ್ದೆಯನ್ನು ನೆನಪಿಸುವಂತಿದೆ. ಸದ್ಯಕ್ಕೆ ನಮ್ಮ ರಾಜಕೀಯ ವ್ಯವಸ್ಥೆಯು ಅತಿಯಾದ ಭರವಸೆಯನ್ನೇ ಹೆಚ್ಚಾಗಿ ಅವಲಂಬಿಸಿದೆ. ಜನಪ್ರಿಯ ಕಾರ್ಯಕ್ರಮಗಳ ಮೂಲಕ ಚುನಾವಣೆಗಳಲ್ಲಿ ಗೆಲುವು ಸಾಧಿಸಲಾಗುತ್ತಿದೆ. ಈಗ ನಿತೀಶ್‌ ಕುಮಾರ್‌ ಅವರೂ ಅದರ ಪ್ರಭಾವಕ್ಕೆ ಒಳಗಾಗಿದ್ದಾರೆ.

(ಲೇಖಕ ಮೀಡಿಯಾಸ್ಕೇಪ್ ಪ್ರೈ.ಲಿ. ಸಂಸ್ಥಾಪಕ ಸಂಪಾದಕ ಹಾಗೂ ಅಧ್ಯಕ್ಷ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT