ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಟ್ಟದಾದರೂ ಶಕ್ತಿಶಾಲಿ ಸ್ಪೀಕರ್

Last Updated 11 ಜನವರಿ 2017, 19:30 IST
ಅಕ್ಷರ ಗಾತ್ರ

ಲಟಿವಿ (LeTV) ಎಂದು ಹೆಸರಿದ್ದು, ನಂತರ ಅದನ್ನು ಲ ಇಕೋ (LeEco) ಎಂದು ಬದಲಿಸಿಕೊಂಡ ಚೀನಾ ದೇಶದ ಎಲೆಕ್ಟ್ರಾನಿಕ್ಸ್ ಕಂಪೆನಿ ತನ್ನ ಹಲವು ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಕಂಪೆನಿ ಕೂಡ ಇತರೆ ಕೆಲವು ಕಂಪೆನಿಗಳಂತೆ ಜಾಲಮಳಿಗೆಗಳ ಮೂಲಕ ತನ್ನ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ತಲುಪಿಸುತ್ತಿದೆ.

ಈ ಕಂಪೆನಿಯ ಸ್ಮಾರ್ಟ್‌ಫೋನ್, ಸ್ಮಾರ್ಟ್‌ಟಿ.ವಿ. ಮತ್ತು ಬ್ಲೂಟೂತ್ ಹೆಡ್‌ಸೆಟ್‌ಗಳ ವಿಮರ್ಶೆಗಳನ್ನು ಇದೇ ಅಂಕಣದಲ್ಲಿ ನೀಡಲಾಗಿತ್ತು. ಈ ಸಲ ನಾವು ವಿಮರ್ಶೆ ಮಾಡುತ್ತಿರುವುದು ಲ ಟಿವಿ ಬ್ಲೂಟೂತ್ ಸ್ಪೀಕರ್ (Letv Bluetooth Speaker)

ಗುಣವೈಶಿಷ್ಟ್ಯಗಳು
ಬ್ಲೂಟೂತ್ ಸ್ಪೀಕರ್, 5+5 ವ್ಯಾಟ್ ಧ್ವನಿ ಶಕ್ತಿ, ಒಂದೇ ಪೆಟ್ಟಿಗೆ ಹಾಗೂ ಅದರೊಳಗೆ 40 ಮಿ.ಮೀ. ಗಾತ್ರದ ಎರಡು ಪುಟಾಣಿ ಸ್ಪೀಕರುಗಳು, ಬ್ಲೂಟೂತ್ 4.0, 1,200mAh ಶಕ್ತಿಯ ರೀಚಾರ್ಜೆಬಲ್ ಬ್ಯಾಟರಿ, 120 x 65 x 65 ಮಿ.ಮೀ. ಗಾತ್ರ, 320 ಗ್ರಾಂ ತೂಕ, ನಾಲ್ಕು ಬಣ್ಣಗಳಲ್ಲಿ ಲಭ್ಯ, ಇತ್ಯಾದಿ. ನಿಗದಿತ ಬೆಲೆ ₹1,999.

ಇದು ಬಹುತೇಕ ಸಿಲಿಂಡರಿನಾಕಾರದಲ್ಲಿದೆ. ಬಹುತೇಕ ಎಂದದ್ದು ಯಾಕೆಂದರೆ ಇದರ ಉದ್ದದ ಭಾಗ ಪೂರ್ತಿ ವೃತ್ತಾಕಾರದಲ್ಲಿಲ್ಲ. ಇದರ ಒಳಗಡೆ ಎರಡು ಸ್ಪೀಕರುಗಳಿವೆ ಮತ್ತು ಇನ್ನೊಂದು ಸಬ್‌ವೂಫರ್‌ನ ಕೆಲಸ ಮಾಡುವ ಅಂಗವಿದೆ.

ಸ್ಪೀಕರುಗಳ ಮಧ್ಯೆ ಸುಮಾರು ಅರ್ಧ ಇಂಚಿನಷ್ಟು ಮಾತ್ರ ಜಾಗವಿದೆ. ಅಂದರೆ ಅತ್ಯುತ್ತಮವಾದ ಸ್ಟಿರಿಯೊ ಅನುಭವ ನಿಮಗಾಗುವ ಸಾಧ್ಯತೆಯಿಲ್ಲ. ಧ್ವನಿಯನ್ನು ಪಕ್ಕಕ್ಕೆ ತಳ್ಳಿ ಸ್ವಲ್ಪ ವಿಸ್ತರಿಸಿದ ಸ್ಟಿರಿಯೊದ ಅನುಭವವೂ ಆಗುವುದಿಲ್ಲ. ಕೆಳಗಡೆ ಮತ್ತು ಮೇಲ್ಗಡೆ ಪ್ಲಾಸ್ಟಿಕ್ಕಿನಿಂದ ಮಾಡಲಾಗಿದೆ. ಸಿಲಿಂಡರಾಕಾರದ ಭಾಗವು ಲೋಹದ ಜಾಲರಿಯಿಂದ ಮಾಡಲ್ಪಟ್ಟಿದೆ. ಅದರೊಳಗೆ ಸ್ಪೀಕರುಗಳಿವೆ. ಮೇಲ್ಭಾಗದಲ್ಲಿ ಆನ್/ಆಫ್ ಬಟನ್‌ ಇದೆ. ಹಿಂಭಾಗದಲ್ಲಿ ಚಾರ್ಜ್ ಮಾಡಲು ಮೈಕ್ರೊಯುಎಸ್‌ಬಿ ಕಿಂಡಿಯಿದೆ.

ಮೇಲ್ಭಾಗದಲ್ಲಿರುವ ಆನ್/ಆಫ್ ಬಟನ್ ಹಲವು ಕೆಲಸಗಳನ್ನು ಮಾಡುತ್ತದೆ. ಆನ್ ಆಫ್ ಮಾಡುವುದು, ಫೋನ್‌ಗೆ ಜೋಡಿಸಿದಾಗ ಕರೆ ಸ್ವೀಕರಿಸುವುದು ಮತ್ತು ನಿಲ್ಲಿಸುವುದು, ಎಲ್ಲವನ್ನೂ ಈ ಒಂದೇ ಬಟನ್ ಮಾಡುತ್ತದೆ. ಇದರಲ್ಲಿ ವಾಲ್ಯೂಮ್ ಬಟನ್ ಇಲ್ಲ. ಎಲ್ಲವನ್ನೂ ಫೋನ್ ಅಥವಾ ಲ್ಯಾಪ್‌ಟಾಪ್‌ನಲ್ಲೇ ನಿಯಂತ್ರಿಸಬೇಕು. ಇದರ ರಚನೆ ಮತ್ತು ವಿನ್ಯಾಸಕ್ಕೆ ಪೂರ್ತಿ ಮಾರ್ಕು ನೀಡಬಹುದು.

ಧ್ವನಿಯ ಗುಣಮಟ್ಟ ಪರವಾಗಿಲ್ಲ. ಅದ್ಭುತ ಅನ್ನುವಂತೇನೂ ಖಂಡಿತ ಇಲ್ಲ. ಎಲ್ಲ ಕಂಪನಾಂಕಗಳ ಧ್ವನಿಯನ್ನೂ ಪುನರುತ್ಪತ್ತಿ ಮಾಡುತ್ತದೆ. ಆದರೆ ಶ್ರೀಮಂತ ಧ್ವನಿ, ಅದರಲ್ಲೂ ಉತ್ತಮ ಬಾಸ್ (bass) ಇದರದ್ದಲ್ಲ. ಆದರೆ ಧ್ವನಿ ಸ್ಪಷ್ಟವಾಗಿದೆ. ಚಿಕ್ಕ ಹಾಗೂ ಕಡಿಮೆ ಬೆಲೆಯ ಸ್ಪೀಕರ್ ಆಗಿರುವುದರಿಂದ ಇದಕ್ಕಿಂತ ಹೆಚ್ಚಿನದೇನನ್ನೂ ಆಶಿಸುವಂತಿಲ್ಲ.

ಹೊರಗಡೆ ಹೋಗುವಾಗ ಚಿಕ್ಕದಾದ, ಆದರೆ ದೊಡ್ಡ ಧ್ವನಿಯನ್ನು ಉತ್ಪತ್ತಿ ಮಾಡುವ ಸ್ಪೀಕರ್ ಬೇಕಿದ್ದಲ್ಲಿ ಇದು ನಿಮಗೆ ಆಗಬಹುದು. ಪೂರ್ತಿ ವಾಲ್ಯೂಮ್ ನೀಡಿದಾಗ ಬಹುತೇಕ ಕಡಿಮೆ ಬೆಲೆಯ ಸ್ಪೀಕರ್‌ಗಳು ಕರ್ಕಶವಾದ ಧ್ವನಿಯನ್ನು ಉತ್ಪತ್ತಿ ಮಾಡುತ್ತವೆ. ಈ ಸ್ಪೀಕರ್ ಹಾಗಿಲ್ಲ. ಪೂರ್ತಿ ವಾಲ್ಯೂಮ್‌ನಲ್ಲೂ ಆಲಿಸಬಹುದು. ಲಂಬವಾಗಿ ಇಟ್ಟಾಗ, ಸ್ಪೀಕರ್‌ನ ಕೆಳಭಾಗದಲ್ಲಿ ಮೆತ್ತನೆಯ ರಬ್ಬರ್ ಕುಶನ್ ನೀಡಿರುವುದರಿಂದ, ಅಧಿಕ ವಾಲ್ಯೂಮ್‌ ಕೊಟ್ಟಾಗ, ಇದು ಕುಣಿದಾಡುವುದಿಲ್ಲ. ಬ್ಯಾಟರಿ ಪರವಾಗಿಲ್ಲ. ಒಮ್ಮೆ ಪೂರ್ತಿ ಚಾರ್ಜ್ ಮಾಡಿದರೆ ಸುಮಾರು ದಿನ ಪೂರ್ತಿ ಆಲಿಸಬಹುದು. ಚಾರ್ಜ್ ಮಾಡುತ್ತಲೇ ಆಲಿಸಲೂಬಹುದು.

ಈ ಸ್ಪೀಕರಿನಲ್ಲಿ ಎರಡು ಪ್ರಮುಖ ಕೊರತೆಗಳಿವೆ. ಮೊದಲನೆಯದಾಗಿ ಇದನ್ನು ಬ್ಲೂಟೂತ್ ಮೂಲಕ ಮಾತ್ರವೇ ಜೋಡಿಸಬಹುದು. ಆಕ್ಸಿಲಿಯರಿ ಇನ್‌ಪುಟ್ ಇಲ್ಲ. ಅಂದರೆ ನೀವು ಮೊಬೈಲ್, ಟ್ಯಾಬ್ಲೆಟ್ ಅಥವಾ ಲ್ಯಾಪ್‌ಟಾಪ್‌ಗಳನ್ನು ಬ್ಲೂಟೂತ್ ಮೂಲಕವೇ ಜೋಡಿಸಬೇಕು. ಕೆಲವು ಎಂಪಿ3 ಪ್ಲೇಯರ್‌ಗಳಲ್ಲಿ ಬ್ಲೂಟೂತ್ ಇರುವುದಿಲ್ಲ.

ಅಂತಹವುಗಳ ಜೊತೆ ಈ ಸ್ಪೀಕರ್ ಬಳಸುವಂತಿಲ್ಲ. ಈಗ ಎಂಪಿ3 ಪ್ಲೇಯರ್‌ಗಳು ಮಾರುಕಟ್ಟೆಯಿಂದ ಬಹುತೇಕ ನಾಪತ್ತೆಯಾಗಿವೆ, ಅದು ಬೇರೆ ವಿಷಯ. ಈ ಸ್ಪೀಕರಿನಲ್ಲಿ ವಾಲ್ಯೂಮ್ ಬಟನ್ ಇಲ್ಲ. ಯಾವ ಸಾಧನಕ್ಕೆ (ಮೊಬೈಲ್, ಲ್ಯಾಪ್‌ಟಾಪ್, ಇತ್ಯಾದಿ) ಬ್ಲೂಟೂತ್ ಮೂಲಕ ಸಂಪರ್ಕಿಸಿದ್ದೀರೋ ಅದರಲ್ಲೇ ವಾಲ್ಯೂಮ್ ಹೆಚ್ಚು ಕಡಿಮೆ ಮಾಡಬೇಕು. ಒಟ್ಟಿನಲ್ಲಿ ಹೇಳುವುದಾದರೆ ನೀಡುವ ಹಣಕ್ಕೆ ಮೋಸವಿಲ್ಲ ಎನ್ನಬಹುದಾದ ಒಂದು ಶಕ್ತಿಶಾಲಿಯಾದ ಪುಟಾಣಿ ಸ್ಪೀಕರ್ ಎನ್ನಬಹುದು. 

***
ವಾರದ ಆ್ಯಪ್
ವಿವೇಕಾನಂದರ ವಾಣಿ


ಸ್ವಾಮಿ ವಿವೇಕಾನಂದರ ಉಕ್ತಿಗಳು ಎಂದೆಂದಿಗೂ ಪ್ರಸ್ತುತ. ‘ಉನ್ನತವಾದ ಸದ್ವಿಚಾರಗಳನ್ನು ಪ್ರತಿ ಮನೆಯ ಬಾಗಿಲಿಗೆ ಕೊಂಡೊಯ್ಯಲೇ ಬೇಕು ಎಂಬುದೇ ನನ್ನ ಜೀವನದ ಹೆಬ್ಬಯಕೆ.

ಸ್ತ್ರೀ-ಪುರುಷರು ತಮಗೆ ಬೇಕಾದ ಭವಿಷ್ಯವನ್ನು ತಾವೇ ರೂಪಿಸಿಕೊಳ್ಳಲಿ’ ಎಂದು ಘೋಷಿಸಿದ ಸ್ವಾಮಿ ವಿವೇಕಾನಂದರ ಸಂದೇಶಗಳನ್ನು ಜನಮಾನಸದಲ್ಲಿ ನೆಲೆಸುವಂತೆ ಮಾಡಬೇಕೆಂದು ಬೆಂಗಳೂರಿನ ರಾಮಕೃಷ್ಣ ಮಠ Voice of Vivekananda ಎಂಬ ವಿಶೇಷ ಕಿರುತಂತ್ರಾಂಶವನ್ನು (ಆ್ಯಪ್) ತಯಾರಿಸಿದೆ.

ಗೂಗಲ್‌ ಪ್ಲೇ ಸ್ಟೋರಿನಲ್ಲಿ (tiny.cc/gadgetloka261) ಮತ್ತು ಆಪಲ್ ಸ್ಟೋರ್‌ನಲ್ಲಿ (goo.gl/98Bj5w) ಇದು ಲಭ್ಯ. ವಿವೇಕಾನಂದರ ಅದ್ಭುತ ಸಂದೇಶಗಳನ್ನು ಹಲವು ವಿಭಾಗಗಳಲ್ಲಿ ನೀಡಲಾಗಿದೆ. ಕನ್ನಡ, ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ಈ ಸಂದೇಶಗಳನ್ನು ಓದಬಹುದು.

ಕೆಲವು ಆಯ್ದ ಸಂದೇಶಗಳನ್ನು ಆಲಿಸಲೂಬಹುದು. ಆದರೆ ಅದಕ್ಕಾಗಿ ನೀವು ಅಂತರಜಾಲ ಸಂಪರ್ಕವನ್ನು ಹೊಂದಿರಬೇಕು. ಮೊದಲ ಬಾರಿಗೆ ಸಂದೇಶವನ್ನು ಪ್ಲೇ ಮಾಡಲು ಮಾತ್ರ ಅಂತರಜಾಲ ಸಂಪರ್ಕ ಬೇಕು. ನಂತರ ಪ್ರತಿ ಸಲ ಪ್ಲೇ ಮಾಡಲು ಅಂತರಜಾಲ ಸಂಪರ್ಕ ಬೇಕಾಗಿಲ್ಲ.

ಕನ್ನಡದಲ್ಲಿ ಈ ಸಂದೇಶಗಳನ್ನು ಅದ್ಭುತವಾಗಿ ವಾಚಿಸಿದವರು ಖ್ಯಾತ ಸಿನಿಮಾ ಹಾಗೂ ರಂಗಭೂಮಿ ಕಲಾವಿದ ಶರತ್ ಲೋಹಿತಾಶ್ವ. ವಿವೇಕಾನಂದರ ಜನ್ಮದಿನದ ಸಂದರ್ಭಕ್ಕೆ ಸರಿಯಾಗಿ ಈ ಲೇಖನ ಓದುತ್ತಿರುವ ಎಲ್ಲರೂ ತಮ್ಮ ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಖಂಡಿತ ಹಾಕಿಕೊಳ್ಳಬಹುದಾದ ಕಿರುತಂತ್ರಾಂಶ. ಆ ಒಂದು ದಿನ ಮಾತ್ರವಲ್ಲ, ಪ್ರತಿ ದಿನವೂ ಈ ಸಂದೇಶಗಳನ್ನು ಓದಿ ಜೀವನದಲ್ಲಿ ಅಳವಡಿಸಿಕೊಳ್ಳುವುದು ಅಗತ್ಯ.

***
ಗ್ಯಾಜೆಟ್‌ ಸಲಹೆ

ಗ್ಯಾಜೆಟ್‌ಲೋಕ 6ನೇ ವರ್ಷಕ್ಕೆ ಕಾಲಿರಿಸಿದೆ. ಈ ಸಂದರ್ಭದಲ್ಲಿ ಓದುಗರ ಸಲಹೆ ಸೂಚನೆಗಳನ್ನು ಕಳೆದ ವಾರದ ಸಂಚಿಕೆಯಲ್ಲಿ ಆಹ್ವಾನಿಸಲಾಗಿತ್ತು. ಅವುಗಳಲ್ಲಿ ಕೆಲವು ಹಾಗೂ ಅವಕ್ಕೆ ನನ್ನ ಪ್ರತಿಕ್ರಿಯೆಗಳು.

1. ಗ್ಯಾಜೆಟ್‌ಲೋಕದ ಯುಟ್ಯೂಬ್ ಚಾನೆಲ್ ಪ್ರಾರಂಭಿಸಿ.
ಉ:
ಈ ಬಗ್ಗೆ ಒಂದೆರಡು ವರ್ಷಗಳಿಂದಲೇ ಯೋಚಿಸುತ್ತಿದ್ದೇನೆ. ಪ್ರಯೋಗಾತ್ಮಕವಾಗಿ ಒಂದು ಚಾನೆಲ್ ಪ್ರಾರಂಭಿಸಿ ಅದರಲ್ಲಿ ಒಂದು ವಿಡಿಯೊ ತಯಾರಿಸಿ ಹಾಕಿದ್ದೇನೆ
ಕೂಡ. ಅದನ್ನು ವೀಕ್ಷಿಸಲು bitly.com/gadgetlokatube ಜಾಲತಾಣಕ್ಕೆ ಭೇಟಿ ನೀಡಿ. 5 ನಿಮಿಷ ಅವಧಿಯ ಒಂದು ಉತ್ತಮ ಗುಣಮಟ್ಟದ ವಿಡಿಯೊ ತಯಾರಿಸಲು ಕೆಲವೊಮ್ಮೆ ಒಂದೆರಡು ದಿನಗಳೇ ಬೇಕಾಗುತ್ತವೆ! ಸಲಹೆ ಉತ್ತಮವಾಗಿದೆ. ನೋಡೋಣ. ಮುಂದಕ್ಕೆ ಇನ್ನಷ್ಟು ವಿಡಿಯೊ ಸೇರಿಸಲು ಪ್ರಯತ್ನಿಸುತ್ತೇನೆ.

2. ಗ್ಯಾಜೆಟ್‌ಲೋಕದ ಹಳೆಯ ಸಂಚಿಕೆಗಳನ್ನು ಅಂತರಜಾಲದಲ್ಲಿ ಸೇರಿಸಿ.
ಉ:
ಈ ಪ್ರಶ್ನೆಗೆ ಹಲವು ಸಲ ಉತ್ತರಿಸಿದ್ದೇನೆ. ಇತ್ತೀಚೆಗಿನ ಎಲ್ಲ ಸಂಚಿಕೆಗಳನ್ನು bitly.com/gadgetloka ಜಾಲತಾಣದಲ್ಲಿ ಓದಬಹುದು.

3. ನಿಮ್ಮದೇ ಬ್ಲಾಗ್ ಜಾಲತಾಣ ಮಾಡಿ ಅಲ್ಲಿ ಓದುಗರ ಜೊತೆ ಸಂಪರ್ಕದಲ್ಲಿದ್ದುಕೊಂಡು ಅವರ ಪ್ರಶ್ನೆಗಳಿಗೆ ಉತ್ತರಿಸಿ.
ಉ:
ಇದನ್ನೂ ಮಾಡಿದ್ದೆ! ಗ್ಯಾಜೆಟ್‌ಲೋಕ ಪ್ರಾರಂಭವಾದ ವರ್ಷದಲ್ಲಿ ನನ್ನದೇ ಜಾಲತಾಣ ವಿಶ್ವಕನ್ನಡದಲ್ಲಿ ಇದಕ್ಕಾಗಿ ಒಂದು ವಿಭಾಗ ಮಾಡಿದ್ದೆ. ಅಲ್ಲಿ ಕೆಲವು ಪ್ರಾರಂಭದ ಲೇಖನಗಳಿವೆ. ಅವುಗಳನ್ನು ಓದಲು vishvakannada.com/category/gadgetloka/ ಜಾಲತಾಣಕ್ಕೆ ಭೇಟಿ ನೀಡಿ. ಇಂಗ್ಲಿಷ್‌ನಲ್ಲಿ ಬರೆದರೆ ಮಾತ್ರ ಬೆಲೆ ಎಂದು ತಪ್ಪಾಗಿ ತಿಳಿದ ಕೆಲವರಿಗಾಗಿ techfocus.in ಎಂಬ ಜಾಲತಾಣವನ್ನೂ ನಿರ್ಮಿಸಿದ್ದೇನೆ!

4. ಫೋನ್ ಹೊರತಾಗಿ ಇತರೆ ಉಪಕರಣಗಳನ್ನೂ ಪರಿಚಯಿಸಿ.
ಉ:
ಇದನ್ನು ಮಾಡುತ್ತಲೇ ಬಂದಿದ್ದೇನೆ. ಉದಾಹರಣೆಗೆ, ವಾಷಿಂಗ್ ಮೆಷಿನ್, ಮೈಕ್ರೋವೇವ್ ಅವನ್, ಸ್ಮಾರ್ಟ್‌ವಾಚ್, ಸ್ಮಾರ್ಟ್‌ಟಿ.ವಿ, ಇತ್ಯಾದಿ.

5. ಕೃಷಿ ಕೈಗಾರಿಕೆ ಸೇವಾ ವಲಯಕ್ಕೆ ಉಪಯುಕ್ತವಾಗುವ ತಾಂತ್ರಿಕ ಗ್ಯಾಜೆಟ್ ಬಗ್ಗೆ ತಿಳಿಸಿ.
ಉ:
ತುಂಬ ಉತ್ತಮ ಸಲಹೆ. ಆದರೆ ಇದನ್ನು ಕ್ರಿಯೆಗೆ ಇಳಿಸಲು ಪ್ರಾಯೋಗಿಕವಾದ ಕಷ್ಟಗಳಿವೆ. ನಾನು ಯಾವುದೇ ಗ್ಯಾಜೆಟ್‌ಅನ್ನು ಬಳಸಿಯೇ ಅದರ ವಿಮರ್ಶೆ ಬರೆಯುವುದು. ಕೃಷಿಯಲ್ಲಿ ಬಳಕೆಯಾಗುವ ಸಾಧನವನ್ನು ಬಳಸಲು ನಾನು ಕೃಷಿಕನಲ್ಲ! ಬಹುಶಃ ಅಡಿಕೆ ಪತ್ರಿಕೆಯಲ್ಲಿ ಹಲವು ಉಪಯುಕ್ತ ಸಾಧನಗಳ ಪರಿಚಯ ಬರುತ್ತಿದೆ. 

***
ಗ್ಯಾಜೆಟ್‌ ತರ್ಲೆ

ತನ್ನ ಫೋಟೊ ತಾನೇ ತೆಗೆದುಕೊಂಡಾಗ ಅದು ಸ್ವಂತೀ (selfie) ಎನಿಸಿಕೊಳ್ಳುತ್ತದೆ. ಈ ಪದ ಪುಲ್ಲಿಂಗವೋ ಸ್ತ್ರೀಲಿಂಗವೋ? ಇದು ಸ್ತ್ರೀಲಿಂಗ ಎಂಬ ತೀರ್ಮಾನಕ್ಕೆ ಬರಬಹುದು. ಅದಕ್ಕೆ ಕಾರಣಗಳು:-
*  ಕನ್ನಡ ಭಾಷೆಯಲ್ಲಿ ಸಾಮಾನ್ಯವಾಗಿ ಸ್ತ್ರೀಲಿಂಗ ಪದಗಳು ‘ಇ’ ಕಾರಾಂತವಾಗಿರುತ್ತವೆ.
* ಸಾಮಾನ್ಯವಾಗಿ ಹುಡುಗಿಯರಿಗೆ ಸ್ವಂತೀ ಹುಚ್ಚು ಜಾಸ್ತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT