ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಣ್ಯಶಾಲಿ ಎನ್ನಿಸಿದ ಕ್ಷಣ...

Last Updated 29 ಜೂನ್ 2013, 19:59 IST
ಅಕ್ಷರ ಗಾತ್ರ

ಮಗುವಿನ ಜನನದ ಅಂಕುರದಿಂದ (ಗರ್ಭದಿಂದ) ಪ್ರಬುದ್ಧತೆಯವರೆಗೆ (18 ವರ್ಷದವರೆಗೆ) ವ್ಯವಹರಿಸುವ ಶಿಶುವೈದ್ಯಕೀಯ ವೈದ್ಯಶಾಸ್ತ್ರದ ಆಕರ್ಷಣೀಯ ಅಂಗ. ಆದರೆ, ಶಿಶುವೈದ್ಯ ಕ್ಷೇತ್ರದಲ್ಲಿನ ಸಣ್ಣಪುಟ್ಟ ಪ್ರಮಾದಗಳು ವ್ಯಕ್ತಿಯ ಮೇಲೆ ಜೀವಿತಾವಧಿ ಪರಿಣಾಮ ಬೀರುತ್ತವೆ. ಶಿಶುವೈದ್ಯಕೀಯ ವೈದ್ಯಶಾಸ್ತ್ರ ಅಪಾರ ಸಹನೆಯನ್ನು ಬೇಡುವ, ಗ್ರಹಿಸಲು ಕಷ್ಟಕರವಾದ ವಿಷಯ.

ಕೆಲವೊಮ್ಮೆ ಮಗು ತನ್ನ ಕಾಯಿಲೆಯ ಚರಿತ್ರೆಯನ್ನು ಹೇಳಲಾರದು. ನಾವು ಇದನ್ನು ಮೂರನೇ ವ್ಯಕ್ತಿಯ ಸಾಕ್ಷಿ ಎನ್ನುತ್ತೇವೆ. ಇಂಥ ಸಂದರ್ಭಗಳಲ್ಲಿ ತಾಯಿ ಅಥವಾ ಆರೈಕೆ ಮಾಡುವ ವ್ಯಕ್ತಿ ನಿರ್ಣಾಯಕರಾಗುತ್ತಾರೆ. ಮಗುವಿನ ತಪಾಸಣೆ ಇನ್ನೂ ಕಷ್ಟ. ವೈದ್ಯರನ್ನು ಕಂಡಾಗ ಮಕ್ಕಳು ಅಳಲು ಶುರುಮಾಡುತ್ತವೆ. ಹೀಗಾಗಿ ಹಲವು ಸಲ ನಾವು ಮಗುವನ್ನು ತಾಯಿಯ ತೊಡೆಯ ಮೇಲಿರಿಸಿ ತಪಾಸಣೆ ಮಾಡುತ್ತೇವೆ. ಪ್ರತಿ ಮಗುವಿನ ಜೊತೆಗೆ ಹೆತ್ತವರು ಮತ್ತು ಅಜ್ಜಿ ತಾತ ಕೂಡ ಬರುವುದರಿಂದ ಶಿಶುವೈದ್ಯರ ಕ್ಲಿನಿಕ್‌ಗಳು ಸಾಮಾನ್ಯವಾಗಿ ಕಿಕ್ಕಿರಿದಿರುತ್ತವೆ.

ವಯಸ್ಸಾದ ವ್ಯಕ್ತಿಗಳು ಮಕ್ಕಳೊಟ್ಟಿಗೆ ಬರುವುದು ನನ್ನಲ್ಲಿ ಕಳವಳ ಉಂಟುಮಾಡುತ್ತದೆ. ಕಾಯಿಲೆಗೆ ತುತ್ತಾದ ಮಕ್ಕಳಲ್ಲಿನ ಸೋಂಕು ಅವರಿಗೆ ಸುಲಭವಾಗಿ ತಗುಲುತ್ತವೆ. ಅದರಲ್ಲೂ, ಸಿಡುಬು ರೋಗ ತೀವ್ರತರ ನೋವನ್ನುಂಟು ಮಾಡಬಲ್ಲ ಸರ್ಪಸುತ್ತು ಸಮಸ್ಯೆಗೆ ಎಡೆಮಾಡಿಕೊಡಬಹುದು. ಪ್ರತಿರಕ್ಷಣೆ ಸಾಮರ್ಥ್ಯದ ಕೊರತೆಯಿಂದ (ವಯಸ್ಸಾದಂತೆ ದೇಹದಲ್ಲಿ ವೈರಾಣು ಕಾಯಿಲೆಗಳನ್ನು ಎದುರಿಸುವ ಸಾಮರ್ಥ್ಯ ಕಡಿಮೆ ಆಗುತ್ತದೆ) ಸಾವು ಕೂಡ ಎದುರಾಗಬಹುದು.

ಇತರೆ ವಿಭಾಗಗಳ ವೈದ್ಯರೊಂದಿಗೆ ಹೋಲಿಸಿದರೆ ಶಿಶುವೈದ್ಯರು ಕಡಿಮೆ ಒತ್ತಡಕ್ಕೆ ಒಳಗಾಗುವವರು, ಸಂತುಷ್ಟರು ಮತ್ತು ಹೆಚ್ಚು ಆರೋಗ್ಯವಂತರು. ಏಕೆಂದರೆ ನಾವು ಚಿಕ್ಕ ಮಕ್ಕಳೊಂದಿಗೆ ದಿನ ಕಳೆಯುತ್ತೇವೆ. ಅವರ ಮುಗ್ಧತೆ, ನಗು ಮತ್ತು ತುಂಟಾಟದ ಸ್ವಭಾವ ನಮ್ಮನ್ನೂ ನಿತ್ಯ ಯೌವನದಲ್ಲಿ ಇರಿಸುತ್ತದೆ. ಈ ಮಕ್ಕಳೊಂದಿಗೆ ಸೇರುವ ನಾವು ಹೆಚ್ಚೂ ಕಡಿಮೆ ಮಕ್ಕಳಂತೆಯೇ ವರ್ತಿಸುತ್ತೇವೆ. ಈ ವೈದ್ಯ ವಿಭಾಗದ ವಿಶೇಷತೆಯೇ ಇದು. ನನಗೆ ನನ್ನ ವಿಭಾಗ ಮತ್ತು ಮಕ್ಕಳೆಂದರೆ ಅತೀವ ಪ್ರೀತಿ. ಶಿಶುವೈದ್ಯದ ಬೋಧನೆ  ರೋಮಾಂಚನಕಾರಿ ಮತ್ತು ಸವಾಲಿನದು.

ಜಾರ್ಖಂಡ್‌ನಿಂದ ಬಂದ 17ರ ಹರೆಯದ ವಿಕಾಸ್ ಏಪ್ರಿಲ್ 13ರಂದು ನನ್ನ ವಿಭಾಗಕ್ಕೆ ದಾಖಲಾದ. ಈ ತರುಣ ಬಡಕುಟುಂಬದ ಮೂವರು ಮಕ್ಕಳಲ್ಲಿ ಎರಡನೆಯವನು. ಪಿಐಸಿಯುನಲ್ಲಿದ್ದಾಗ ಮತ್ತು ಸ್ಟೇಬಲ್ ವಾರ್ಡ್‌ಗೆ ವರ್ಗಾಯಿಸಿದ ನಂತರ ನಾನು ರೌಂಡ್ಸ್ ಬಂದಾಗಲೆಲ್ಲಾ ಆತ ತನ್ನ ಕೈಗಳನ್ನು ಜೋಡಿಸಿ ಕೇಳುತ್ತಿದ್ದದ್ದು- `ಮೇಡಂ, ನನಗೆ ಏನಾದರೂ ಮಾಡಿ'. ಆಗ ಒಂದು ವೇಳೆ ಆತ ಮಲಗಿದ್ದರೂ ಹಾಸಿಗೆ ಮೇಲೆ ಹಾರಿ ಕುಳಿತುಕೊಂಡು ಸಂಪೂರ್ಣ ತಪಾಸಣೆಗೆ ಒಳಗಾಗಲು ಸಿದ್ಧನಾಗುತ್ತಿದ್ದ.

ಎರಡು ವರ್ಷದಿಂದ ವಿಕಾಸ್ ಹೊಟ್ಟೆ ಊತದಿಂದ ನರಳುತ್ತಿದ್ದ. ಸಮಸ್ಯೆ ಬಿಗಡಾಯಿಸಿ ವಿಕಾಸ್ ತುಂಬಾ ಎಚ್ಚರಿಕೆಯಿಂದ ಓಡಾಡಬೇಕಾಗಿತ್ತು. `ನೀನೂ ಪೂರ್ಣಾವಧಿ ಗರ್ಭಿಣಿಯಾಗಿದ್ದೀಯಾ' ಎಂದು ನಾನು ಕಿಚಾಯಿಸುತ್ತಿದ್ದೆ. ಅವನು ನಗುತ್ತಲೇ ತನಗೆ ಸಹಾಯ ಮಾಡುವಂತೆ ಯಾಚಿಸುತ್ತಿದ್ದ. ಅವನ ಹೊಟ್ಟೆಯೊಳಗೆ ತುಂಬಾ ನೀರು (ಜಲೋದರ) ಸಂಗ್ರಹವಾಗಿತ್ತು. ಅದು ಉಸಿರಾಟದ ಸ್ನಾಯುಗಳನ್ನು ಎದೆಯ ಭಾಗದತ್ತ ಮೇಲಕ್ಕೆ ತಳ್ಳಿದ್ದರಿಂದ ಕಳೆದ ಆರು ತಿಂಗಳಿನಿಂದ ಉಸಿರಾಡುವುದು ಆತನಿಗೆ ಕಷ್ಟವಾಗುತ್ತಿತ್ತು. 70 ವರ್ಷದ ವೃದ್ಧನಂತೆ ಆತ ಏದುಸಿರು ಮತ್ತು ಒತ್ತುಸಿರು ಬಿಡುತ್ತಿದ್ದ.

ರಿಚ್‌ಮಂಡ್ ವೃತ್ತದ ಬಳಿಯ ಅಪಾರ್ಟ್‌ಮೆಂಟ್ ಒಂದರಲ್ಲಿ ಆತನ ಚಿಕ್ಕಪ್ಪ ಸೆಕ್ಯುರಿಟಿ ಗಾರ್ಡ್. ಕಳೆದ ವರ್ಷ ಜಾರ್ಖಂಡ್‌ನಿಂದ ಆತ ಕರೆತಂದು ನನ್ನ ವಿಭಾಗದಲ್ಲಿ ದಾಖಲಿಸಿದ್ದ ರೋಗಿ ಸಂಪೂರ್ಣ ಗುಣಮುಖನಾಗಿದ್ದ. ಇದರಿಂದಾಗಿ ವಾಣಿ ವಿಲಾಸ ಆಸ್ಪತ್ರೆ ಮೇಲೆ ಆತನಿಗೆ ಅಪಾರ ನಂಬಿಕೆ. ರಜೆಯಲ್ಲಿ ಜಾರ್ಖಂಡ್‌ಗೆ ತೆರಳಿದ್ದ ಆತ ವಿಕಾಸ್ ಪೋಷಕರ ಮನವೊಲಿಸಿ ಆತನನ್ನು ವಾಣಿ ವಿಲಾಸಕ್ಕೆ ಕರೆತಂದಿದ್ದ. ಕೆಲವು ಸಾವಿರ ರೂಪಾಯಿ ಮತ್ತು ಕೆಲವೇ ಸಾಮಗ್ರಿಗಳ ಜೊತೆಗೆ ವಿಕಾಸ್ ರೈಲು ಹತ್ತಿದ್ದ.

ವಿಕಾಸ್‌ನದ್ದು ಸುಲಭವಾಗಿ ಬಗೆಹರಿಯುವ ಪ್ರಕರಣ ಆಗಿರಲಿಲ್ಲ. ಆತ ನಮ್ಮನ್ನು `ಪ್ರಕರಣದ ಚರ್ಚೆ'ಗೆ (ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳಿಗೆ ಬೋಧಿಸುವ ಒಂದು ವಿಧಾನ) ಒಳಪಡಿಸಿದ್ದ. ಎಲ್ಲಾ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳೂ ಕೂಡಿ ಪ್ರಕರಣ/ಕಾಯಿಲೆ ಕುರಿತು ಚರ್ಚಿಸುವ ವಿಧಾನವದು. ಡಾ. ರಘುರಾಮಯ್ಯ ಸಮಗ್ರ ಅಧ್ಯಯನದ ನಂತರ ಈ ಪ್ರಕರಣದ ವಿವರಗಳನ್ನು ಪ್ರಸ್ತುತಪಡಿಸಿದರು. ಈ ಮಗು ಹೇಗೆ ಕಾಯಿಲೆಗೆ ತುತ್ತಾಯಿತು, ಅದರ ಅವಧಿ ಮತ್ತು ಕಾಯಿಲೆಯ ಪ್ರಗತಿ ಇತ್ಯಾದಿ...

ಹೊಟ್ಟೆಯೊಳಗೆ ಏಕೆ ಅಷ್ಟು ಪ್ರಮಾಣದ ನೀರು ಸೇರಿಕೊಂಡಿತ್ತು? ಏಕೆ ಅದರ ಶೇಖರಣೆ ಹೆಚ್ಚುತ್ತಲೇ ಇತ್ತು ಮತ್ತು ಹೇಗೆ ಉಸಿರಾಟಕ್ಕೆ ತೊಂದರೆ ಉಂಟುಮಾಡುತ್ತಿದೆ?- ನಾವು ಹಲವು ಪರೀಕ್ಷೆಗಳನ್ನು ನಡೆಸಿದ್ದೆವು. ಅನೇಕ ಪುಸ್ತಕಗಳನ್ನು ಓದಿದೆವು. ಮೆದುಳಿಗೆ ಸಾಕಷ್ಟು ಕೆಲಸ ಹಚ್ಚಿದೆವು. ಯಕೃತ್ತಿನ ಸಮಸ್ಯೆಯೇ? ಹಾಗಾದರೆ ಕಾಮಾಲೆ ಏಕೆ ಬಂದಿಲ್ಲ? ಯಕೃತ್ತಿನ ಕಾರ್ಯಾಚರಣೆ ಸಹಜವಾಗಿದೆ ಎಂದು ಪರೀಕ್ಷೆಗಳು ಏಕೆ ಸೂಚಿಸುತ್ತಿವೆ? ಅದು ಯಕೃತ್ತಿಗಿಂತ ಮೇಲಿನ ಸಮಸ್ಯೆಯೇ- ಹಾಗಾದರೆ, ಎಕೋ ಮತ್ತು ಎದೆಯ ಎಕ್ಸ್‌ರೇ ಎಲ್ಲವೂ ಸಹಜವಾಗಿದೆಯೆಂದು ತೋರಿಸುತ್ತಿದೆ?

ತರಗತಿ ಮುಗಿಸಿ ಹೊರಬಂದ ಕೂಡಲೇ ವಿಕಾಸ್ ನನ್ನ ಬಳಿ ಧಾವಿಸಿದ. `ಮೇಡಂ ನನ್ನ ಕಥೆ ಕೇಳಿದಿರಲ್ಲ- ಏನಾದರೂ ತಿಳಿಯಿತೇ'. ರೋಗವನ್ನೇ ಪತ್ತೆ ಮಾಡಲು ಇನ್ನೂ ಸಾಧ್ಯವಾಗಿಲ್ಲ ಎಂಬುದನ್ನು ಅವನಿಗೆ ಹೇಗೆ ಹೇಳುವುದು? ಈ ರೋಗಿಗಳು ತರುವ ಕೆಲವೇ ಸಾವಿರ ರೂಪಾಯಿಗಳು ಹಲವೊಮ್ಮೆ ಪ್ರಾಥಮಿಕ ತಪಾಸಣೆಗಳಿಗೇ ವಿನಿಯೋಗ ಆಗುತ್ತದೆಯೇ ಹೊರತು ಚಿಕಿತ್ಸೆಗಲ್ಲ. ಹೆಚ್ಚಿನ ಪ್ರಕರಣಗಳಲ್ಲಿ ರೋಗಿಗಳು/ಅವರ ಶುಶ್ರೂಷಕರು ಇದನ್ನು ಅರ್ಥ ಮಾಡಿಕೊಳ್ಳುವುದಿಲ್ಲ. ಸರ್ಕಾರಿ ಆಸ್ಪತ್ರೆಗಳಲ್ಲಿ ಬಡ ರೋಗಿಗಳೊಂದಿಗೆ ಕೆಲಸ ಮಾಡುವ ವೈದ್ಯರು ಎದುರಿಸುವ ಅತಿ ಸಂಕಷ್ಟದ ಕ್ಷಣವಿದು.

ಹಿಂದಿನಿಂದಲೂ, ಈಗಲೂ, ನಾವು ವೆಚ್ಚವನ್ನು ಕಡಿಮೆಗೊಳಿಸಿ ರಿಯಾಯಿತಿ ಒದಗಿಸುವ ಹೊಣೆಯನ್ನು ನಿರ್ವಹಿಸುತ್ತಿದ್ದೇವೆ. ಆದರೆ ಇದು ಸುಲಭವಲ್ಲ. ಇದಕ್ಕಾಗಿ ಒಬ್ಬ ವೈದ್ಯಕೀಯ ವಿದ್ಯಾರ್ಥಿ ತನ್ನ ಓದಿನ ಸಮಯ ತ್ಯಾಗ ಮಾಡಿ ಓಡಾಡಬೇಕು. ಚುರುಕಾಗಿದ್ದ ವಿಕಾಸ್ ಸ್ವತಃ ಓಡಾಡಿಕೊಂಡು ತನಗೆ ಬೇಕಾದುದ್ದರಲ್ಲಿ ಕೆಲವನ್ನು ತಾನೇ ಪಡೆದುಕೊಂಡಿದ್ದ. ಊದಿಕೊಂಡಿದ್ದ ಹೊಟ್ಟೆ ಹೊತ್ತುಕೊಂಡು ಲವಲವಿಕೆಯಿಂದ ಓಡಾಡುತ್ತಿದ್ದ ಈ ಮಗುವಿನ ಕಾಯಿಲೆ ಅರ್ಥ ಮಾಡಿಕೊಳ್ಳುವುದು ನಮಗೂ ಸಾಧ್ಯವಾಗಿರಲಿಲ್ಲ. ಆತ ನನ್ನ ಕೊಠಡಿಗೆ ಬಂದು ಕುಳಿತುಕೊಳ್ಳುತ್ತಿದ್ದ. ತನ್ನ ಅತಿ ಸಂಕಟದ ಕಾಯಿಲೆ ಬಗ್ಗೆ ದುಃಖಿಸುತ್ತಿದ್ದ. ರೈಲ್ವೆ ಪ್ರಯಾಣದ ಹಣ, ಸೌಕರ್ಯ ವೆಚ್ಚ, ಆಹಾರ ವೆಚ್ಚ ಮುಂತಾದವುಗಳನ್ನು ಉಳಿಸಲು ಆತ ಜಾರ್ಖಂಡ್‌ನಿಂದ ಒಬ್ಬನೇ ಬಂದಿದ್ದ. ಸೆಕ್ಯುರಿಟಿ ಗಾರ್ಡ್ ಸಂಬಂಧಿ ಆಗಾಗ್ಗೆ ಭೇಟಿ ನೀಡುತ್ತಿದ್ದ.

ಒಂದು ದಿನ ವಿಕಾಸ್, `ಮೇಡಂ, ನೀವೊಬ್ಬರು ಪ್ರೊಫೆಸರ್ ಆಗಿದ್ದರೂ ಇನ್ನೂ ನನ್ನ ಸಮಸ್ಯೆಯನ್ನು ಪತ್ತೆ ಮಾಡಲು ಆಗಿಲ್ಲವಲ್ಲ' ಎಂದು ಕಿಚಾಯಿಸಿದ. ನಾನು ಆತನಿಗೆ ಈ ಪ್ರಕರಣದ ಗೋಜಲುಗಳನ್ನು ವಿವರಿಸಿದೆ. ಈ ರೋಗ ನಿರ್ಣಯಕ್ಕಾಗಿ ನಾವು ನಾರಾಯಣ ಹೃದಯಾಲಯದಲ್ಲಿ ಮಾತ್ರ ಲಭ್ಯವಿರುವ ದುಬಾರಿ ತಪಾಸಣೆ ನಡೆಸಬೇಕಾಗಿತ್ತು. ಅದಕ್ಕೆ 10 ಸಾವಿರ ರೂಪಾಯಿಗೂ ಹೆಚ್ಚು ಖರ್ಚಾಗುತ್ತಿತ್ತು. ಆಗಲೂ ಆತನ ಮಾತು- `ಏನಾದರೂ ಮಾಡಿ'.

ಒಂದಷ್ಟು ದಿನ ನನ್ನನ್ನು ಒಂಟಿಯಾಗಿ ಬಿಡುವಂತೆ ಆತನಲ್ಲಿ ಮನವಿ ಮಾಡಿದೆ. ನಮ್ಮ `ಚಂದಾ ಸಂಗ್ರಹ' ನೀತಿಯಡಿ ಸಂಗ್ರಹಿಸಿದ ಹಣವನ್ನು ಆತನ ಪರೀಕ್ಷೆಗಳಿಗೆ ಬಳಸಿದೆವು. ನಾವು ಪರೀಕ್ಷೆಗಾಗಿಯೇ 10 ಸಾವಿರ ರೂಪಾಯಿ ವೆಚ್ಚ ಮಾಡಿದರೆ, `ಚಿಕಿತ್ಸೆಗೆ ಬೇಕಾಗುವ ಹಣದ ಕಥೆಯೇನು?' ಎಂಬ ಪ್ರಶ್ನೆಯನ್ನೂ ಅವನು ಮುಂದಿಟ್ಟಿದ್ದ.

ಏಪ್ರಿಲ್ 24ರ ದಿನವನ್ನು `ವಿಶ್ವ ಮೆದುಳ್ಪೊರೆಯುರಿತ ದಿನ' (ಮೆನಿಂಜೈಟಿಸ್ ಡೇ) ಎಂದು ಆಚರಿಸಲಾಯಿತು. ಆಗ ನನ್ನ ಹಳೆಯ ವಿದ್ಯಾರ್ಥಿ ಡಾ. ಅನಿಲ್ ಸಪಾರೆ (ಅಮೆರಿಕದಲ್ಲಿ ವಾಸಿಸುತ್ತಿದ್ದರು) ನಾರಾಯಣ ಹೃದಯಾಲಯಕ್ಕೆ ಉಪನ್ಯಾಸ ನೀಡಲು ಬಂದಿದ್ದರು. ಅವರ ಭಾಷಣ ಮುಗಿದ ಕೂಡಲೇ ಅವರನ್ನು ಸಂಧಿಸಿದ ನಾನು, ವಿಕಾಸ್ ಪ್ರಕರಣವನ್ನು ನೋಡಿಕೊಳ್ಳುವಂತೆ ಕೇಳಿಕೊಂಡೆ. ಕೊನೆಗೆ ಡಾ. ಸಪಾರೆ, ಅರ್ಧ ರಿಯಾಯಿತಿ ದರದಲ್ಲಿ ಸಿ.ಟಿ. ಆ್ಯಂಜಿಯೊ ನಡೆಸಲು ಒಪ್ಪಿಕೊಂಡರು. ನಮ್ಮಲ್ಲಿದ್ದ ಎಲ್ಲಾ ಹಣವನ್ನೂ ನಾವು ಖಾಲಿ ಮಾಡಿಕೊಂಡಿದ್ದೆವು. ಆದರೆ ರೋಗ ಪತ್ತೆಯಾಗಿತ್ತು!

ವರ್ಷಗಳ ಹಿಂದೆ ವಿಕಾಸ್ ಮಗುವಾಗಿದ್ದಾಗ, ಕ್ಷಯ ರೋಗಕ್ಕೆ ಒಳಗಾಗಿದ್ದ (ತನಗೆ ಟಿಬಿ ಬಂದಿರಲಿಲ್ಲ ಎಂದು ಆತ ಪ್ರಮಾಣ ಮಾಡಿ ಹೇಳಿದ್ದ). ಆತನ ಬಾಲ್ಯದ ಇತಿಹಾಸವನ್ನು ವಿವರಿಸಲು ಇಲ್ಲಿ ಅವನ ಪೋಷಕರು ಇರಲಿಲ್ಲ. ಸ್ವತಃ ವಿಕಾಸ್ ಇಲ್ಲಿ ಕಥೆಗಾರನಾಗಿದ್ದ (ಮಾಹಿತಿ ನೀಡುವವನು). ಆತನ ಕ್ಷಯವು ಹೃದಯಾವರಣಕ್ಕೆ (ಪೆರಿಕಾರ್ಡಿಯಮ್) ಹರಡಿತ್ತು. ಇದನ್ನು ವೈದ್ಯಕೀಯ ಪರಿಭಾಷೆಯಲ್ಲಿ `ಟ್ಯುಬರ್‌ಕ್ಯುಲರ್ ಪೆರಿಕಾರ್ಡಿಟಿಸ್' (ಕ್ಷಯರೋಗದ ಹೃದಯಾವರಣ ಉರಿಯೂತ) ಎಂದು ಕರೆಯುತ್ತೇವೆ. ಇದು ದಿನಗಳು, ತಿಂಗಳು, ವರ್ಷಗಳು ಕಳೆದರೂ ಪತ್ತೆಯಾಗದು ಮತ್ತು ಚಿಕಿತ್ಸೆಗೆ ದಕ್ಕದು. ಹೃದಯಾವರಣ ಮುಚ್ಚುವ ಹೊದಿಕೆ ದಪ್ಪಗಾಗುವ ಮೂಲಕ ಹೃದಯ ಕುಳಿಗಳನ್ನು ಸಿಕ್ಕದಾಗಿಸಿತ್ತು. ಹೀಗಾಗಿ ಹೃದಯಕ್ಕೆ ಬರುವ ರಕ್ತವು ರಕ್ತನಾಳಗಳಲ್ಲಿ ಒಟ್ಟುಗೂಡುತ್ತಿತ್ತು. ಇದು ಉದರದಲ್ಲಿ ದ್ರವ್ಯ ಶೇಖರಣೆಗೆ (ಜಲೋದರ) ಎಡೆಮಾಡಿಕೊಡುತ್ತಿತ್ತು.

ರೋಗನಿರ್ಣಯದ ನಮ್ಮ ಸಂತಸ ಕ್ಷಣಿಕದ್ದು. ಶಸ್ತ್ರಚಿಕಿತ್ಸೆ ಮತ್ತು ಅದರ ವೆಚ್ಚಕ್ಕೆ ಏನು ಮಾಡುವುದು? ಅದು 48 ಸಾವಿರ ರೂಪಾಯಿಗಳನ್ನು ಮೀರುತ್ತದೆ.

`ಏನಾದರೂ ಮಾಡಿ ಮೇಡಂ'- ಎಂಬ ಮನವಿ ವಿಕಾಸ್‌ನದು. ಈ ಬಾರಿ ಹೆಚ್ಚು ಕಣ್ಣೀರಿನೊಂದಿಗೆ ಸ್ವಲ್ಪ ಹೊತ್ತು ಮಾತ್ರ ಅವನೊಂದಿಗೆ ಮಾತನಾಡಿದೆ. ಜಾರ್ಖಂಡ್‌ನ ಹಳ್ಳಿಯೊಂದರಿಂದ ಒಬ್ಬಂಟಿಯಾಗಿ ಬಂದ, ಕನ್ನಡದ ಒಂದೂ ಪದ ತಿಳಿಯದಿರುವ, ತನ್ನ ಜೊತೆ ಮಾತನಾಡುವವರೂ ಇಲ್ಲದ (ಆತ ಮಾತನಾಡುತ್ತಿದ್ದದ್ದು ಹಿಂದಿ) ಈ ಮಗುವಿನ ಅವಸ್ಥೆ ನನ್ನನ್ನು ತೀವ್ರವಾಗಿ ಕಲಕಿತು. ಏಕಾಂಗಿಯಾಗಿ ಹಾಸಿಗೆ ಮೇಲೆ ಕುಳಿತ ವಿಕಾಸ್, ತನ್ನ ಏಕೈಕ ಸಂಗಾತಿ ಮೊಬೈಲ್ ಫೋನ್‌ನೊಂದಿಗೆ ಸಮಯ ಕಳೆಯುತ್ತಿದ್ದ.

ಎಂದಿನಂತೆ, ನನ್ನ ನೆರವಿಗೆ ಬಂದ ಜಯದೇವ ಆಸ್ಪತ್ರೆಯ ಡಾ. ಚಿತ್ರಾ ನರಸಿಂಹನ್ ಶಸ್ತ್ರಚಿಕಿತ್ಸೆಯ ಅಂದಾಜು ಲೆಕ್ಕವನ್ನು ನೀಡಿದ್ದು ಮಾತ್ರವಲ್ಲ, ನೆರವಿಗಾಗಿ `ಹ್ಯಾವ್ ಎ ಹಾರ್ಟ್ ಫೌಂಡೇಷನ್' ಮತ್ತು `ಥಾಮಸ್ ಇ. ರಾಮಾಪುರಂ ಮೆಮೋರಿಯಲ್ ಚಾರಿಟಬಲ್ ಟ್ರಸ್ಟ್' ಸಂಸ್ಥೆಗಳ ಸಂಪರ್ಕ ಒದಗಿಸಿದರು. ಎರಡೂ ಸಂಸ್ಥೆಗಳು ಸಹಾಯ ನೀಡಿದರೂ ಇನ್ನೂ 10 ಸಾವಿರ ರೂಪಾಯಿ ಕೊರತೆ! ನನ್ನ ಪರಿಸ್ಥಿತಿ ನೋಡಿ ಬೇಸರಗೊಂಡ ವಿಕಾಸ್, ಸೆಕ್ಯುರಿಟಿ ಗಾರ್ಡ್‌ಗಳಾಗಿ ಕೆಲಸ ಮಾಡುತ್ತಿರುವ ತನ್ನ ಜನರನ್ನು ಭೇಟಿ ಮಾಡಲು ಅನುಮತಿ ಕೋರಿದ. ಒಂದು ವಾರದಲ್ಲಿ ಅವನು ಹತ್ತು ಸಾವಿರ ರೂಪಾಯಿ ಸಂಗ್ರಹಿಸಿ ತಂದಿದ್ದ. ಬೆಂಗಳೂರಿನಲ್ಲಿ ಅನಿಯತ ಕೆಲಸಗಳನ್ನು ಮಾಡುತ್ತಿರುವ ಜಾರ್ಖಂಡ್‌ನ ಜನರು ನೆರವು ನೀಡಿದ್ದರು. ಸಂಕಷ್ಟದಲ್ಲಿರುವ ಜನರಿಗೆ ನೆರವು ನೀಡುವ ಆ ಸಮುದಾಯದ ಬಗ್ಗೆ ನನ್ನಲ್ಲಿ ಗೌರವ ಹೆಚ್ಚಿತು.

ಜಯದೇವ ಹೃದ್ರೋಗ ಸಂಸ್ಥೆಯ ವೈದ್ಯರ ತಂಡ ಜೂನ್ 1ರಂದು ಆತನಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿತು. ಒಂದು ವಾರದಲ್ಲಿ (ಹೃದಯದ ಸುತ್ತಲಿದ್ದ ಬಿಗಿತ ತೆಗೆದುಹಾಕಿದ ಬಳಿಕ) ವಿಕಾಸನ ಹೊಟ್ಟೆ ಸಹಜ ಆಕಾರಕ್ಕೆ ಮರಳಿತು.

ಹರಕುಮುರುಕು ಇಂಗ್ಲಿಷಿನಲ್ಲಿ `ಥ್ಯಾಂಕ್ಯೂ ಮೇಡಂ' ಎಂದು ವಿಕಾಸ್ ನುಡಿದ. ವಿಕಾಸ್ ಜಾರ್ಖಂಡ್‌ಗೆ ಮರಳಿ ಹೋಗುತ್ತಿದ್ದಾನೆ. ಓದಿನಲ್ಲಿ ಇದ್ದಕ್ಕಿದ್ದಂತೆ ಆಸಕ್ತಿ ಬೆಳೆಸಿಕೊಂಡಿರುವ ಅವನು ಶಾಲೆಯಲ್ಲಿ ಹಾಜರಿ ಪಡೆಯಲು ವೈದ್ಯಕೀಯ ಪ್ರಮಾಣಪತ್ರವನ್ನು ಪಡೆದಿದ್ದಾನೆ.

ಅಂಗಿ ಕಳಚಿಕೊಂಡು ಶಸ್ತ್ರಚಿಕಿತ್ಸೆ ನಡೆಸಬೇಕಾದ ಗುರುತನ್ನು ಹೊತ್ತುಕೊಂಡು ನನ್ನ ಕೊಠಡಿಯೊಳಗೆ ಬರುತ್ತಿದ್ದ ವಿಕಾಸನಿಗೆ ಸರಿಯಾಗಿ ನೆರವು ನೀಡಲಾಗದ ಅಸಹಾಯಕತೆ ಮತ್ತು ಹತಾಶೆಯಿಂದ ಉಂಟಾಗಿದ್ದ ಖಿನ್ನತೆಯ ಮನಃಸ್ಥಿತಿಯಿಂದ ಹೊರಬರುವುದು ನನಗೆ ಸುಲಭವಾಗಿರಲಿಲ್ಲ. ಈ ಮಗು ಹುಷಾರಾದುದು ನನ್ನ ಭಾವಸ್ಥಿತಿಯನ್ನು ಉಲ್ಲಸಿತಗೊಳಿಸಿತು. ಅಲ್ಲದೆ, ಮುಗ್ಧ ಮಕ್ಕಳು ಮತ್ತು ಅವರ ಕೃತಜ್ಞತಾ ಭಾವ ಸಂಪಾದಿಸುವ ನನ್ನ ವೈದ್ಯಜಗತ್ತೇ ಶ್ರೇಷ್ಠ ಎನಿಸಿತು. ನಾನು ನಿಜಕ್ಕೂ ಪುಣ್ಯಶಾಲಿ!

ನೆರವಿಗಾಗಿ ಚೆಕ್ ಕಳುಹಿಸಿದ ನನ್ನ ಅಂಕಣದ ಓದುಗ ತಳು ದುಮನಹಳ್ಳಿಯ ಆರ್. ಕೃಷ್ಣಪ್ಪ ಅವರಿಗೆ ನನ್ನ ಧನ್ಯವಾದಗಳು. ಸರ್, ಈ ಮೊತ್ತವನ್ನು ತುರ್ತು ಅಗತ್ಯವಿರುವ ರೋಗಿಗಾಗಿ ಖಂಡಿತವಾಗಿಯೂ ಬಳಸುತ್ತೇನೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT