ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುರಾಣತನ್ಮಯ ಪಾತ್ರದೊಳಗೆ ಲೌಕಿಕ ಜಾಗೃತಿಯ ಗುಪ್ತಗಾಮಿನಿ

Last Updated 17 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

ಮೆಲ್ಲನೆ ಬಾಗಿಲು ತಟ್ಟಿದೆ. ತೆರೆದುಕೊಂಡಿತು. ಒಳಗೆ  ಅಡಿಯಿಟ್ಟೆ. ಶಿವರಾಮ ಕಾರಂತರು ಬಂದವರೇ, “ಏನು ಬಂದದ್ದು...” ಎಂದು ವಿಚಾರಿಸಿದರು.

ನಾನಾದರೂ ಏನು ಹೇಳಿಯೇನು! ಸಂಬಳ ಕಡಿಮೆಯಾಯಿತು, ಜಾಸ್ತಿ ಮಾಡಿ ಅಂತ ಕೇಳುವುದೆ! ಕಲಾವಿದರಿಗೇನಾದರೂ ಸಹಾಯ ಮಾಡಿ ಅಂತ ಯಾಚಿಸುವುದೆ! ಆದರೂ ಹಿರಿಯ ಕಲಾವಿದರ ಒತ್ತಾಸೆಯಲ್ಲಿ ಆತ್ಮನಿವೇದನೆಗಾಗಿ ಬಂದು ನಿಂತಾಗಿದೆ.
ಎಲುಬಿಲ್ಲದ ನಾಲಗೆಯಲ್ಲಿ ಮಾತನಾಡಲೇಬೇಕಲ್ಲ! “ಸಂಬಳ ಕಡಿಮೆಯಾಗಿದೆ... ತುಸು ಹೆಚ್ಚು ಮಾಡುತ್ತಿದ್ದರೆ ಒಳ್ಳೆಯದಿತ್ತು” ಎಂದೆ ಮೆಲುದನಿಯಲ್ಲಿ.

ನನ್ನ ಮಾತನ್ನು ಕೇಳಿ ಅವರಿಗೆ ಏನನ್ನಿಸಿತೋ, ಸ್ವಲ್ಪ ಹೊತ್ತು ಸುಮ್ಮನೆ ಕುಳಿತಿದ್ದರು. “ಅದೆಲ್ಲ ನನ್ನಿಂದಾಗದು... ಅದರ ವಿಭಾಗವೇ ಬೇರೆ” ಎಂದುಬಿಟ್ಟರು. ನಾನು ಸ್ವಲ್ಪ ಹೊತ್ತು ಹಾಗೆಯೇ ಕುಳಿತಿದ್ದವನು, ಮತ್ತೇನೂ ಮಾತನಾಡದೆ ಹೊರಟು ನಿಂತೆ. ಭಾರವಾದ ಹೆಜ್ಜೆಗಳನ್ನಿರಿಸಿಕೊಂಡು ಮರಳಿದೆ. ನಾನೇನೋ ತಪ್ಪು ಮಾಡಿದೆನೆಂಬ ಭಾವನೆಯೊಂದು ಒಳಗೊಳಗೇ ಕೊರೆಯುತ್ತಿತ್ತು. ಎರಡು ದಿನ ಕಳೆದಿರಲಿಲ್ಲ; ನಮ್ಮ ಕೇಂದ್ರದ ನಿರ್ದೇಶಕರಾದ ಪ್ರೊಫೆಸರ್ ಹೆರಂಜೆ ಕೃಷ್ಣ ಭಟ್ಟರು,

“ಕಾರಂತರು ಮನೆಗೆ ಬರಹೇಳಿದ್ದಾರೆ” ಎಂದು ನನಗೆ ಹೇಳಿ ಕಳುಹಿಸಿದರು. ನನಗೆ ಭಯವಾಯಿತು. ನನ್ನ ಅಧಿಕಪ್ರಸಂಗಕ್ಕೆ ಬೈದೇ ಬಿಡುತ್ತಾರೆ ಎಂದು ಅಳುಕುತ್ತ ಕಾರಂತರ ಮನೆಗೆ ಹೋದೆ. “ಬಾ...” ಎಂದರು ಗುರುಗಳು. ಅವರ ಕೈಯಲ್ಲಿದ್ದ ಹಾಳೆಯೊಂದನ್ನು ನನ್ನ ಕೈಗೆ ಕೊಟ್ಟು, “ನಿನಗಿರಲಿ ಇದು” ಎಂದು ನನ್ನ ಕೈಯಲಿಟ್ಟರು. ಅದರಲ್ಲಿರುವ ಅಂಕಿಗಳನ್ನು ಓದಿದೆ. ೨೫,೦೦೦ ಎಂದು ಬರೆದಿತ್ತು. ೧೯೮೯--೯೦ರ ಸುಮಾರಿಗೆ ೨೫ ಸಾವಿರ ರೂಪಾಯಿಯ ಬೆಲೆ ಎಷ್ಟಿರಬಹುದೆಂದು ಊಹಿಸಿ! “ನನ್ನಿಂದ ನಿನಗೆ ಇಷ್ಟು ಕೊಡಲು ಸಾಧ್ಯ” ಎಂದವರೇ ಕಾರಂತರು ಸುಮ್ಮನಾದರು.

ನಾನು ಗಳಗಳನೆ ಅತ್ತು ಬಿಟ್ಟೆ. “ನನಗಾಗಿ ನಾನು ಕೇಳಿದ್ದಲ್ಲ, ಕಲಾವಿದರೆಲ್ಲರ ಪರವಾಗಿ ಕೇಳಿದೆ. ತಪ್ಪಾಗಿದ್ದರೆ ಕ್ಷಮಿಸಬೇಕು. ಇದನ್ನು ನಾನು ಸ್ವೀಕರಿಸಲಾರೆ” ಎಂದೆ.

ಅವರು ಮಾತನಾಡಲಿಲ್ಲ. “ನಾನಿದನ್ನು ಸ್ವೀಕರಿಸುವುದೇ ಇಲ್ಲ... ಕ್ಷಮಿಸಬೇಕು” ಎಂದು ಅವರ ಸಮಕ್ಷಮ ನೆಲದ ಮೇಲೆ ಚಕ್ಕಳಮಕ್ಕಳ ಕುಳಿತುಬಿಟ್ಟೆ. ನಿರಾಕರಿಸಿ ಹೊರಟು ಬಿಡಲೂ ಆಗದೆ, ಸ್ವೀಕರಿಸಲೂ ಆಗದೆ ಸುಮ್ಮನೆ ಕುಳಿತುಬಿಡುವುದಲ್ಲದೇ ಬೇರೆ ದಾರಿಯೇ ಇರಲಿಲ್ಲ. ಶಿವರಾಮ ಕಾರಂತರ ಮಾತಾದರೋ ಸಲಗದ ದಂತದ ಹಾಗೆ; ಮತ್ತೆ ಹಿಂದೆಗೆದುಕೊಳ್ಳುವ ಪ್ರಶ್ನೆಯೇ ಇಲ್ಲ.
ಅಷ್ಟರಲ್ಲಿ ಶಿವರಾಮ ಕಾರಂತರನ್ನು ಕಾಳಜಿಯಿಂದ ಆರೈಕೆ ಮಾಡುತ್ತಿದ್ದ ಮಾಲಿನಿ ಮಲ್ಯರು ಬಂದರು. “ಸಂಜೀವರೇ, ಬೇಡ ಅನ್ನಬೇಡಿ. ಅವರಿಗೆ ನಿಮ್ಮ ಮೇಲೆ ತುಂಬ ಭರವಸೆಯಿದೆ. ವಾತ್ಸಲ್ಯದಿಂದ ಕೊಟ್ಟದ್ದನ್ನು ಬೇಡ ಅನ್ನಬಾರದು” ಎಂದು ಮಾಲಿನಿ ಮಲ್ಯರು ಹೇಳಿದರು, “ಈವರೆಗೆ ನೂರಾರು ಕಲಾವಿದರಿಗೆ ಸಹಾಯ ಮಾಡುತ್ತಲೇ ಬಂದಿದ್ದಾರೆ. ಇನ್ನು ಮುಂದೆ ಪ್ರತಿವರ್ಷ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಅವರೊಂದಿಗೆ ದುಡಿದ ಒಬ್ಬೊಬ್ಬ ಕಲಾವಿದನನ್ನು ಆರ್ಥಿಕವಾಗಿ ಪುರಸ್ಕರಿಸಬೇಕೆಂದು ಯೋಚಿಸಿದ್ದಾರೆ. ಈಗ ನೀವಿದನ್ನು ಸ್ವೀಕರಿಸಬೇಕು”.

ಖಾಸಗಿ ಬ್ಯಾಂಕೊಂದರಲ್ಲಿ ೨೫ ಸಾವಿರ ರೂಪಾಯಿಯನ್ನು ಠೇವಣಿಯಾಗಿಟ್ಟು ಐದು ವರ್ಷದ ಬಳಿಕ ಹೆಚ್ಚುಕಡಿಮೆ ಅದರ ಇಮ್ಮಡಿ ಹಣ ನನಗೆ ಸಿಗುವ ಹಾಗೆ ಕಾರಂತರು ವ್ಯವಸ್ಥೆ ಮಾಡಿದ್ದರು. ಗುರುಗಳ ಆಂತರ್ಯವೇನೆಂದು ಮಾಲಿನಿ ಮಲ್ಯರ ಮೂಲಕ ನನಗೆ ವೇದ್ಯವಾದುದರಿಂದ ಅದನ್ನು ಸ್ವೀಕರಿಸದೆ ವಿಧಿ ಇರಲಿಲ್ಲ.

ಮರಳಿ ಬಂದವನೇ ಸಂಸ್ಥೆಯ ವರಿಷ್ಠರಿಗೆ ನಡೆದುದನ್ನು ಹೇಳಿದೆ. ಕಾರಂತರೇ ಕೈಯಾರೆ ಕೊಟ್ಟ ಆ ಹಣವನ್ನು ನಾನೇ ಇಟ್ಟುಕೊಳ್ಳಬೇಕೆಂದು ಅವರೂ ಹೇಳಿದರು. ಮುಂದಿನ ದಿನಗಳಲ್ಲಿ ಕಾರಂತರು ನಮ್ಮ ಸಂಸ್ಥೆಯ ಕೆಲವು ಹಿರಿಯ ಕಲಾವಿದರಿಗೆ ನಿರಖು ಠೇವಣಿಯಿರಿಸಿದ ಸ್ವಂತದ ಮೊತ್ತವನ್ನು ನೀಡಿ ಪುರಸ್ಕರಿಸುವುದನ್ನು ಮುಂದುವರಿಸಿದರು. ಅವರ ಕೊನೆ ದಿನಗಳವರೆಗೂ ಕಲಾವಿದರ ಬದುಕು ದೈನ್ಯವಾಗದಂತೆ ಕೈಲಾದಷ್ಟು ನೆರವು ನೀಡುತ್ತಲೇ ಬಂದಿದ್ದರು. ಮುಂದೆ ಐದಾರು ವರ್ಷಗಳ ಬಳಿಕ ನಾನು ಹೊಸ ಮನೆಯೊಂದನ್ನು ಕಟ್ಟಬೇಕೆಂಬ ಯೋಚನೆಗೆ ಆ ಮೊತ್ತವೇ ಮೂಲಧನವಾಗಿ ನನ್ನಲ್ಲಿ ಆತ್ಮವಿಶ್ವಾಸ ಮೂಡಿಸಿತ್ತು.

ಅದಿರಲಿ. ಕಾರಂತರು ವೈಚಾರಿಕ ಚಿಂತನೆಗೆ, ನಿಷ್ಠೂರ ನಡೆನುಡಿಗೆ ಹೆಸರಾದವರು. ನಾನು ಅವರ ಬಿಡಿ ಬರಹಗಳನ್ನು ಓದಿ ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೆನೇ ಹೊರತು ಯಾವುದೇ ಪುಸ್ತಕವನ್ನು ಇಡಿಯಾಗಿ ಓದುವುದಕ್ಕೆ ನನ್ನ ಅರಿವು- ಬರಹ ಸಾಲದಾಗಿತ್ತು. ಹಾಗಾಗಿ, ಆ ಪರ್ವತಪ್ರತಿಭೆಯ ‘ಭಾವನಾತ್ಮಕ’ ಪ್ರಪಂಚ ನನ್ನೆದುರು ತೆರೆದುಕೊಂಡದ್ದು ಅವರ ಕೂಡೆ ಒಡನಾಟದ ಅನುಭವಗಳ ಮೂಲಕ ಮಾತ್ರ. ರಿಹರ್ಸಲ್ ಸಮಯದಲ್ಲಿ ಒಂದು ಪಾತ್ರಾಭಿನಯವನ್ನು ಒಮ್ಮೆ ಹೇಳಿಕೊಟ್ಟಂತೆ ಮತ್ತೊಮ್ಮೆ ಹೇಳಿಕೊಡದೆ ಹತ್ತಾರು ವೈವಿಧ್ಯದಲ್ಲಿ ಕಾಣಿಸುತ್ತಿದ್ದ ಕಾರಂತರು ಪಾತ್ರಗಳೊಂದಿಗೆ ಭಾವನಾತ್ಮಕವಾಗಿ ಬೆರೆಯುತ್ತಿದ್ದರು ಎಂದು ನನ್ನ ಭಾವನೆ.

ಭಾಗವತಿಕೆಯ ಸಾಲುಗಳನ್ನು ತಾವೇ ಹಾಡುತ್ತ ಕುಣಿಯುತ್ತ ಪಾತ್ರದಲ್ಲಿ ತಲ್ಲೀನರಾಗಿ ಬಿಡುವುದನ್ನು ನಾನು ಗಮನಿಸುತ್ತ ಬೆರಗಾಗಿದ್ದೇನೆ. ಅವರ ಅಪಾರ ಅಭಿನಯ ಸಾಧ್ಯತೆಗಳನ್ನು ಕಲಾವಿದರಿಗೆ ಅನುಸರಿಸುವುದು ದೊಡ್ಡ ಸವಾಲೇ ಆಗಿತ್ತು. ಆದರೆ, ಕಲಾವಿದರು ಯಾವುದೇ ಕಷ್ಟವನ್ನು ಹೇಳಿಕೊಳ್ಳಲಿ- ಅದು ರಂಗದ ಒಳಗಿನದ್ದೇ ಇರಬಹುದು, ಹೊರಗಿನದ್ದೇ ಇರಬಹುದು- ಅವರು ಕೂಡಲೇ ಸ್ಪಂದಿಸುತ್ತಿದ್ದರು. ಭಾರವಾದ ಕಿರೀಟಗಳನ್ನು ಕಟ್ಟಿಕೊಂಡು ಅಭಿನಯಿಸುವುದು ಕಷ್ಟ, ಸಾಂಪ್ರದಾಯಿಕ ಆಹಾರ್ಯ ಪರಿಕರಗಳು ನಟನೆಗೆ ತೊಡಕುಂಟು ಮಾಡುತ್ತವೆ ಎಂದು ಕಲಾವಿದರು ಹೇಳಿಕೊಂಡ ಕಾರಣದಿಂದಲೇ ಅವರು ವೇಷಭೂಷಣದ ಪರಿಷ್ಕಾರಕ್ಕೆ ಕೈ ಹಾಕಿದ್ದರೆಂಬುದು ಇಲ್ಲಿ ಉಲ್ಲೇಖಾರ್ಹ.

ಕಲಾಕಾಯಕದಲ್ಲಿನ ತನ್ಮಯತೆ ಮತ್ತು ನಿಜಬದುಕಿನ ಎಚ್ಚರ- ಈ ಎರಡನ್ನೂ ನಾನು ಕಲಿತದ್ದು ಕಾರಂತರಿಂದಲೇ. ಎಚ್ಚರವೆಂದರೆ ನಿದ್ದೆಯಲ್ಲಿ ಎಚ್ಚರವೇ -ರಾತ್ರಿಗಳನ್ನು ಬೆಳಗಿಸುವ ಯಕ್ಷಗಾನ ಕಲಾವಿದರಿಗೆ! ಹಾಗಾಗಿಯೇ, ‘ಎಚ್ಚರಿಸಬೇಕೊ ಬೇಡವೊ’ ಎಂಬ ಗೊಂದಲದಲ್ಲಿ ನಾನೂ, ರಾಮನಾರಿಯೂ ಗುರು ವೀರಭದ್ರ ನಾಯಕರ ಸನಿಹವೇ ಸುಮ್ಮನೆ ನಿಂತಿದ್ದೆವು. ೧೯೭೪-–೭೫ರ ಸುಮಾರಿನ ಸಾಲಿಗ್ರಾಮ ಮೇಳದ ತಿರುಗಾಟದ ಸಮಯವದು. ಗುರುಗಳು ಮುಖವರ್ಣಿಕೆ ಬರೆದು, ಕಿರೀಟ ಕಟ್ಟಿ, ವೇಷಭೂಷಣಗಳನ್ನು ತೊಟ್ಟು, ಕೈಕಟ್ಟು ಬಿಗಿಯುವುದೊಂದನ್ನು ಬಾಕಿ ಉಳಿಸಿ ರಂಗಸ್ಥಳದ ಹಿಂದೆಯೇ ಪವಡಿಸಿಬಿಡುತ್ತಿದ್ದರು. ಅವರ ಪ್ರವೇಶಕ್ಕೆ ಇನ್ನೇನು, ಒಂದು ಪದ್ಯ ಉಳಿದಿದೆ ಎನ್ನುವಾಗ ನಮಗೆ ಆತಂಕವಾಗಿ ಬಿಡುತ್ತಿತ್ತು. ಒಂದು ವೇಳೆ, ಗುರುಗಳಿಗೆ ನಿದ್ರೆ ಬಂದು, ರಂಗಸ್ಥಳಕ್ಕೆ ವೇಷ ಹೋಗದೆ, ಎಡವಟ್ಟಾಗಿ, ‘ಯಾಕೆ ಎಚ್ಚರಿಸಲಿಲ್ಲ’ ಎಂದು ನಮ್ಮನ್ನು ಗದರಿಬಿಡುತ್ತಾರೋ ಎಂಬ ಭಯದಿಂದ ನಾನೂ ರಾಮನಾರಿಯೂ ಮಲಗಿರುವ ಗುರುಗಳ ಪಕ್ಕವೇ ನಿಂತುಕೊಂಡು ಅವರು ನಿದ್ದೆಯಿಂದೇಳುವುದನ್ನೇ ಕಾಯುತ್ತ ನಿಲ್ಲುತ್ತಿದ್ದೆವು. ಆದರೆ, ಪ್ರವೇಶದ ಕ್ಷಣಕ್ಕೆ ಸರಿಯಾಗಿ ಅವರು ತಟಕ್ಕನೆ ಎದ್ದು ಕೈಕಟ್ಟುಗಳನ್ನು ಕಟ್ಟಿಕೊಂಡು ರಂಗಸ್ಥಳದ ಹೊಗುವಾಗಿಲಿನ ಬಳಿ ನಿಂತುಬಿಡುತ್ತಿದ್ದರು.

ಯಾವ ಮಾಯೆ ಅವರನ್ನು ಅದೇ ಕ್ಷಣಕ್ಕೆ ಸರಿಯಾಗಿ ಎಬ್ಬಿಸಿಬಿಟ್ಟಿತು ಎಂದು ನಾವು ಚೋದ್ಯ ಪಡುತ್ತಿದ್ದೆವು. ಮತ್ತೋರ್ವ ಘನತೆಯ ವೇಷಧಾರಿ ಶಿರಿಯಾರ ಮಂಜು ನಾಯ್ಕರೂ ಕೂಡ ಹಾಗೆಯೇ. ಕೈ ಕಟ್ಟು ಒಂದನ್ನು ಹೊರತುಪಡಿಸಿ ಉಳಿದಂತೆ ಪೂರ್ಣ ವೇಷಧರಿಸಿ ಪವಡಿಸುತ್ತಿದ್ದರು. ರಂಗಸ್ಥಳಕ್ಕೆ ಹೊರಡುವಾಗ ಕೈಕಟ್ಟು ಬಿಗಿಯುವಾಗ ವೇಷದ ಆವೇಶ ತಂದುಕೊಂಡಂತೆ, ಇದ್ದಕ್ಕಿದ್ದಂತೆಯೇ ನಿಲುವು ಗಂಭೀರವಾಗಿ, ಹೆಜ್ಜೆಗಳಿಗೆ ಘನತೆ ಬಂದು ಚೌಕಿಯಿಂದ ರಂಗಸ್ಥಳದ ಬಾಗಿಲಿನತ್ತ ಅವರು ಸಾಗುವುದನ್ನು ನಾನೇ ನೋಡಿದ್ದೇನೆ. ವೇಷಭೂಷಣಗಳನ್ನು ಧರಿಸಿಯೂ ಅದೇಕೆ ಕೈಕಟ್ಟು ಕಟ್ಟುವುದನ್ನು ಉಳಿಸುತ್ತಾರೆ ಎಂಬುದು ನನಗೆ ಪ್ರಶ್ನೆಯಾಗಿತ್ತು. ಆಮೇಲೆ ಗೊತ್ತಾಯಿತು, ವೇಷ ಪೂರ್ಣಗೊಂಡ ಬಳಿಕ ಕಲಾವಿದರು ಮಲಗುವಂತಿಲ್ಲ, ಎಚ್ಚರದಲ್ಲಿಯೇ ಇರಬೇಕೆಂಬುದು ಸಂಪ್ರದಾಯ. ಹಾಗಾಗಿ, ಕೈಕಟ್ಟನ್ನು ಕಟ್ಟದೇ ಉಳಿಸಿ, ‘ನನ್ನ ವೇಷವಿನ್ನೂ ಪೂರ್ಣಗೊಂಡಿಲ್ಲದ ಕಾರಣ, ತುಸು ಹೊತ್ತು ಮಲಗುತ್ತಿದ್ದೇನೆ’ ಎಂಬ ವಿನಯ ಭಾವದ ಸಂಕೇತವದು.

ನಿಯಮಕ್ಕೆ ಬದ್ಧರಾಗಿದ್ದ ಅಂದಿನ ಕಲಾವಿದರು ಗೆಜ್ಜೆ ಕಟ್ಟಿದ ಬಳಿಕ ದೇಹಬಾಧೆ ತೀರಿಸಲು ಹೋಗುತ್ತಿರಲಿಲ್ಲ. ರಂಗಸ್ಥಳದ ಕಠಿಣ ದುಡಿಮೆಯಿಂದ ದೇಹದಲ್ಲಿ ಬೆವರು ಬಂದು ಅಂಥ ಒತ್ತಡವೂ ಉಂಟಾಗುತ್ತಿರಲಿಲ್ಲವೆನ್ನಿ. ಆದರೆ, ಅನಿವಾರ್ಯವಾಗಿ ಹೋಗಬೇಕೆನಿಸಿದಾಗ ಗೆಜ್ಜೆಯನ್ನು ಬಿಚ್ಚಿ ತೆಗೆದಿರಿಸಿ ಹೋಗುತ್ತಿದ್ದರು. ಕೈಕಾಲು ತೊಳೆದು ಬಂದು ಮತ್ತೆ ಅದನ್ನು ಕಟ್ಟಿಕೊಳ್ಳುತ್ತಿದ್ದರು. ಗೆಜ್ಜೆ ಕಟ್ಟುವುದರಿಂದ ತೊಡಗಿ, ‘ಕೈಕಟ್ಟು’ ಕಟ್ಟುವವರೆಗೆ ಪೌರಾಣಿಕ ಪಾತ್ರವೊಂದು ಲೌಕಿಕ ಕಲಾವಿದನೊಳಗೆ ಹಂತಹಂತವಾಗಿ ಆವಾಹನೆಯಾಗಿಬಿಡುತ್ತಿತ್ತು. ಹಾಗಾಗಿ, ಅಂಥವರು ವಿರಮಿಸಲೆಂದು ಕಣ್ಮುಚ್ಚಿ ನಿದ್ದೆ ಹೋದರೂ ಅವರೊಳಗಿನ ಪಾತ್ರ ಎಚ್ಚರವಾಗಿದ್ದುಕೊಂಡು ರಂಗಸ್ಥಳದ ಕರೆಯನ್ನು ಆಲಿಸುತ್ತಿತ್ತೆಂದು ನನಗನ್ನಿಸುತ್ತಿತ್ತು!

ನಾನು ಈಗಲೂ ಗೆಜ್ಜೆಯನ್ನು ‘ಇದು ಮನುಷ್ಯ ಮಾತ್ರರದ್ದಲ್ಲ, ಯಾವುದೋ ಪೌರಾಣಿಕ ಪಾತ್ರದ್ದು’ ಎಂಬ ಪವಿತ್ರಭಾವನೆಯಿಂದಲೇ ಕಟ್ಟಿಕೊಳ್ಳುತ್ತೇನೆ...
ಆದರೆ, ಕಾಲಿನ ಗೆಜ್ಜೆಗಳನ್ನು ಆ ಕ್ಷಣ ಬಿಚ್ಚಿ ಎದ್ದು ನಿಂತಿದ್ದೆ. ಗೆಜ್ಜೆ ಬಿಚ್ಚಿದರೂ ನನ್ನೊಳಗೆ ಆವಾಹನೆಯಾಗಿದ್ದ ಅಭಿಮನ್ಯು ಹಾಗೆಯೇ ಇದ್ದ. ಗೆಜ್ಜೆಯನ್ನು ಕೈಗೆ ಸುತ್ತಿ ಹೊರಗೆ ಧಾವಿಸಲು ಸನ್ನದ್ಧನಾಗಿದ್ದೆ. ಕಲಾವಿದರೆಲ್ಲ, ‘ಬೇಡ ಸುಮ್ಮನಿರೋಣ’ ಎಂದರೂ ನನ್ನ ಮನಸ್ಸು ತಾಳಲಿಲ್ಲ.

ಹೇಗೆ ತಾಳಿಕೊಳ್ಳಬಲ್ಲೆ ಹೇಳಿ, ‘ಕಾರಂತರಿಗೆ ಧಿಕ್ಕಾರ’ ಎಂಬ ಘೋಷಣೆಯನ್ನು ಕೇಳಿ! ಮಲೆನಾಡಿನ ಹಳ್ಳಿಯಲ್ಲಿ ಇನ್ನೇನು ‘ಅಭಿಮನ್ಯು ಕಾಳಗ’ ಪ್ರಸಂಗ ಆರಂಭವಾಗಲು ಕೆಲವೇ ಸಮಯವಿದೆ ಎನ್ನುವಾಗ ವಿರೋಧದ ಚಕ್ರವ್ಯೂಹ ನಮ್ಮನ್ನು ಸುತ್ತುವರಿಯಿತು. ಕಾರಣ ಇಷ್ಟೆ: ಶಿವರಾಮ ಕಾರಂತರು ಪರಿಸರ ಪರವಾಗಿ ಹೋರಾಟದ ಮುಂಚೂಣಿಯಲ್ಲಿದ್ದರು. ಕೈಗಾ ಅಣುಸ್ಥಾವರದ ವಿರೋಧಿ ಆಂದೋಲನದ ಸಭೆಯೊಂದರಲ್ಲಿ ಅವರು ಭಾಷಣ ಮಾಡಿದ್ದರು. ನನ್ನ ನೆನಪಿನಂತೆ ಅದು ಜನವರಿ ೨೫, ೧೯೮೬. ಅಲ್ಲಿ ನಮ್ಮ ತಂಡದ ಪ್ರದರ್ಶನವೂ ಇತ್ತು. ಪಕ್ಕದ ಹಳ್ಳಿಯಲ್ಲಿ ಕಾರಂತರ ಅಭಿಮಾನಿಗಳು ಮರುದಿನ ಇನ್ನೊಂದು ಪ್ರದರ್ಶನ ಹಮ್ಮಿಕೊಂಡುದರಿಂದ ನಾವು ಅಲ್ಲಿಗೆ ಹೋಗಿದ್ದೆವು. ಕಾರಂತರು ಮಾತ್ರ ಮೊದಲ ದಿನದ ಕಾರ್ಯಕ್ರಮ ಮುಗಿಸಿ, ಎರಡನೇ ದಿನ ನಿಲ್ಲದೆ ಊರಿಗೆ ಮರಳಿದ್ದರು.

ದುರಂತವೆಂದರೆ, ಪರಿಸರ ಆಂದೋಲನದೊಂದಿಗೆ ರಾಜಕಾರಣವೂ ತಳುಕುಹಾಕಿಕೊಂಡುದರಿಂದ ಶಿವರಾಮ ಕಾರಂತರ ಭಾಷಣ ಕೆಲವರಲ್ಲಿ ಅಸಹನೆ ಉಂಟುಮಾಡಿತ್ತು. ಹಾಗಾಗಿ, ಅವರ ನಿರ್ದೇಶನದ ನಮ್ಮ ತಂಡದ ಪ್ರದರ್ಶನಕ್ಕೆ ತಡೆಯೊಡ್ಡುವುದು ಕೆಲಮಂದಿಯ ಉದ್ದೇಶವಾಗಿತ್ತು. ಅಂದು ಮಧ್ಯಾಹ್ನವೇ ನಾವು ಉಳಿದುಕೊಂಡಿದ್ದ ಶಾಲೆಯ ಬಳಿಗೆ ವಿರೋಧಿ ಗುಂಪಿನವರು ಬಂದರು. ವಯಲಿನ್‌ ವಾದಕರಾದ ಎ.ವಿ. ಕೃಷ್ಣಮಾಚಾರ್‌ ಅವರನ್ನು ಶಿವರಾಮ ಕಾರಂತರೆಂದೇ ತಿಳಿದು ಗದರಿಸಲು ಮುಂದಾದರು. ನಾನೂ ಕೆಲವು ಕಲಾವಿದರೂ ತಡೆದೆವು. ಹೊಯಿಕೈಯೂ ಆಯಿತು. ಶಾಲೆಯ ಮುಖ್ಯೋಪಾಧ್ಯಾಯರು ಧಾವಿಸಿ ಬಂದು ಅವರನ್ನು ಸಮಾಧಾನಿಸಿದರು. ‘ನಿಮ್ಮನ್ನು ಇವತ್ತು ಆಟ ಮಾಡಲು ಬಿಡುವುದಿಲ್ಲ’ ಎಂದವರು ಹೇಳಿದಾಗ, ‘ನಾವೂ ಆಟ ಮಾಡಿಯೇ ಸಿದ್ಧ’ ಎಂದು ನಾನು ಮಾರುತ್ತರಿಸಿದೆ. ಸಹಕಲಾವಿದರು ಬೆಂಬಲಕ್ಕೆ ನಿಂತರು.

ಆ ಸಂಜೆ ನಾವು ನೇಪಥ್ಯದಲ್ಲಿ ವೇಷಭೂಷಣ ಕಟ್ಟಿಕೊಂಡು ಸಿದ್ಧರಾಗಿದ್ದಾಗ ಹೊರಗಿನಿಂದ ಗಲಭೆ ಆರಂಭವಾಯಿತು. ಪುಂಡಾಟಿಕೆಯ ನೇತೃತ್ವ ವಹಿಸುತ್ತಿದ್ದವನೊಬ್ಬ ಕಾರಂತರನ್ನು ಹೀಗಳೆದು ಮಾತನಾಡುತ್ತಿದ್ದುದನ್ನು ಕೇಳುತ್ತಿದ್ದ ನಾನು ಸಹಿಸಲಾರದೆ ಕಾಲಿನ ಗೆಜ್ಜೆಯನ್ನು ಕೈಗೆ ಸುತ್ತಿಕೊಂಡು ಎದ್ದು ನಿಂತೆ. ಸ್ಯಾಕ್ಸೋಫೋನ್ ಕಲಾವಿದರಾಗಿ ರಷ್ಯಾ ಪ್ರವಾಸದಲ್ಲಿಯೂ ನಮ್ಮ ಜೊತೆಯಾಗಿದ್ದ ಸದಾಶಿವರು ನನ್ನ ಬೆನ್ನಿಗೆ ನಿಂತರು. ಆದರೆ, ಗಲಭೆ ಕೈ ಮೀರುತ್ತದೆ ಎಂದಾಗ ಸ್ಥಳೀಯರು ಮಧ್ಯೆ ಪ್ರವೇಶಿಸಿ ವಿರೋಧಿ ಗುಂಪಿನವರನ್ನು ಸಮಾಧಾನಿಸಿದರು. ಅನೇಕ ಅಡೆತಡೆಗಳ ನಡುವೆಯೇ ನಮ್ಮ ‘ಚಕ್ರವ್ಯೂಹ’ ಪ್ರದರ್ಶನ ಸಂಪನ್ನಗೊಂಡಿತು. ಪೊಲೀಸರಿಗೆ ದೂರು ಕೊಡದಿರುವುದು, ಯಾವ ಪೊಲೀಸರೂ ಸ್ಥಳಕ್ಕೆ ಬಾರದಿರುವುದು ನನಗೆ ಅಚ್ಚರಿಯುಂಟುಮಾಡಿತ್ತು. ರಾತ್ರೋರಾತ್ರಿ ಅಲ್ಲಿಂದ ಊರಿಗೆ ಹೊರಟೆವು. ಆದರೆ, ಆ ಹಳ್ಳಿ ದಾಟಿ ಕೊಂಚ ದೂರ ಬರುವವರೆಗೂ ನಮ್ಮ ಮೇಲೆ ಸೇಡು ತೀರಿಸಿಕೊಳ್ಳಬಹುದಾದ ಭೀತಿ ಇದ್ದೇ ಇತ್ತು.

ಊರಿಗೆ ಮರಳಿದ ನಾವು ಶಿವರಾಮ ಕಾರಂತರಿಗೆ ವಿಷಯ ತಿಳಿಸಿದಾಗ ಅವರು ಆಕ್ರೋಶಕ್ಕೊಳಗಾದರು. ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರಿಗೆ ಪತ್ರ ಬರೆದು ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕೆಂದು ಆಗ್ರಹಿಸಿದರು. ಹಿರಿಯ ಸಾಹಿತಿಗಳನ್ನು ಅಪಾರ ಗೌರವದಿಂದ ಕಾಣುತ್ತಿದ್ದ ಮಂತ್ರಿಮಹೋದಯರಿದ್ದ ಕಾಲವದು. ಶಿವರಾಮ ಕಾರಂತರ ಧ್ವನಿ ದೊಡ್ಡ ಮಟ್ಟದ ಸಂಚಲನ ಉಂಟುಮಾಡಿತು. ಉನ್ನತ ಪೊಲೀಸ್ ಅಧಿಕಾರಿಗಳು ಶಿವರಾಮ ಕಾರಂತರ ಮನೆಗೆ ಬಂದು ಘಟನೆಯ ಬಗ್ಗೆ ಕ್ಷಮೆಯಾಚಿಸಿದರು. ಯಕ್ಷಗಾನ ಕೇಂದ್ರಕ್ಕೆ ಬಂದು ಕೃಷ್ಣಮಾಚಾರ್ ಅವರಲ್ಲಿಯೂ ವಿಷಾದ ವ್ಯಕ್ತಪಡಿಸಿ ಎಲ್ಲ ವಿವರಗಳನ್ನು ಪಡೆದುಕೊಂಡರು. ತತ್‌ಕ್ಷಣ ಸಮಾಜದ್ರೋಹಿಗಳನ್ನು ಬಂಧಿಸಿ ಕೇಸು ದಾಖಲಿಸಲಾಯಿತು. ಆ ದೆಸೆಯಿಂದ ನಾನು ಮತ್ತು ಕೃಷ್ಣಮಾಚಾರ್ ಎರಡು- ಮೂರು ಸಲ ಶಿರಸಿಯ ಕೋರ್ಟಿನ ಕಟೆಕಟೆ ಹತ್ತಿ ಮ್ಯಾಜಿಸ್ಟ್ರೇಟರ ಮುಂದೆ ಸಾಕ್ಷಿ ನುಡಿಯಬೇಕಾಯಿತು. ಕಾರಂತರ ವಿರೋಧಿಗಳು ನೈತಿಕವಾಗಿಯೂ ದುರ್ಬಲರಾದಂತೆ ವಕೀಲರ ಮೂಲಕ ಸಂಧಾನ ನಡೆದು ಪ್ರಕರಣ ಮುಕ್ತಾಯಗೊಂಡಿತು.

ಯಾವುದೇ ಸ್ವಾರ್ಥವಿಲ್ಲದೆ ಮಾನವಪರ, ಪರಿಸರಪರ ಧ್ವನಿಯೆತ್ತಿದ ಕಾರಂತರೂ ಕೂಡ ವಿರೋಧವನ್ನು ಎದುರಿಸಬೇಕಾದ ಘಟನೆ ನನ್ನ ಮನಸಿನಲ್ಲಿ ಬಹುಕಾಲ ಉಳಿದು ನೋವು ಉಂಟುಮಾಡುತ್ತಿತ್ತು.
(ಸಶೇಷ)
ನಿರೂಪಣೆ : ಹರಿಣಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT