ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುರುಷನಿಗೂ ಪ್ರಕೃತಿಗೂ ಯುದ್ಧ ನಡೆದಿದೆ!

Last Updated 8 ಜುಲೈ 2016, 19:30 IST
ಅಕ್ಷರ ಗಾತ್ರ

ಈ ಲೇಖನ ಬರೆಯಲಾರಂಭಿಸಿದ ಹಿಂದಿನ ದಿನ ಮಳೆ ಬಂತು. ಬರೆಯುತ್ತಿರುವಾಗಲೂ ಬರುತ್ತಿತ್ತು. ಸಣ್ಣಗೆ, ಜಿಟಿಜಿಟಿ ಎನ್ನುತ್ತಾರಲ್ಲ, ಹಾಗೆ. ಹೀಗೆಯೇ ಹದವಾಗಿ ಇಡೀ ಮಳೆಗಾಲದುದ್ದಕ್ಕೂ ಬರುತ್ತದೆಯೋ ಅಥವಾ ಕಳೆದೆರಡು ವರ್ಷಗಳಂತೆ, ಬಂದಂತೆ ಮಾಡಿ, ಬಾರದೆ ಉಳಿಯುತ್ತದೆಯೋ ಕಾಣೆ. ಈಗಂತೂ ಬಂದಿದೆ.

ಒಂದು ವಾರದ ಹಿಂದೆ ಹೆದರಿಸಿತ್ತು; ಶುರುವಾದಂತೆ ಮಾಡಿ, ದಿಢೀರನೆ ನಿಂತು, ಮಾಯವಾಗಿತ್ತು ಮಳೆ. ನಮ್ಮೂರಿನ ಅಂಗಡಿ ಮುಂಗಟ್ಟು ಸಂತೆಮಾಳ ಚಾದಂಗಡಿಗಳು ಇಡೀ ವಾರ, ‘ಮತ್ತೆ ಕೈ ಕೊಡ್ತ ಮಾರಾಯ್ರೆ, ಈ ಮಳೆ!’ ಅಂತ, ಅದೇ ಅದೇ ಆತಂಕದ ಮಾತುಗಳನ್ನು ಧ್ವನಿಸಿದ್ದವು.

ಆದರೆ ನೆನ್ನೆಯಿಂದ ವಾತಾವರಣವಿದೆ. ಜೀರುಂಡೆಯ ಸದ್ದು, ಸೂರಿನ ಹನಿಗಳು ನೆಲಕ್ಕುರುಳುವ ಸದ್ದು, ಅರೆಮಬ್ಬು ಬೆಳಕು, ಥಂಡಿಗಾಳಿ, ಕಿಲಕಿಲ ನಗುವ ಗಿಡಮರಗಳು ಹಾಗೂ ಕತ್ತೆತ್ತಿ ನೋಡಿದರೆ ಮೋಡಗಳ ಚಲನೆಯೂ ಕಾಣದಷ್ಟು ದಟ್ಟವಾಗಿ ಹರಡಿರುವ ಬೂದು ಬಣ್ಣದ ಆಕಾಶ!
ಬೇಸಿಗೆಯ ಬೆಂಕಿಧಗೆ ಮಾಯವಾಗಿದೆ.

ಮಳೆಗಾಲದ ತಂಪಲು ನಮ್ಮೆಲ್ಲರ  ಒಳಗು ಹೊರಗುಗಳನ್ನು ಹೊಕ್ಕಿದೆ. ಮುದುಕರ ಮೂಳೆ ಮೊಣಕಾಲು ಬೆನ್ನುಗಳು ಮುರಿದು ಬೀಳುತ್ತವೆಯೋ ಎಂಬಷ್ಟು ನೋವು ಕೊಡತೊಡಗಿವೆ. ಗೆದ್ದಲು ಹುಳುಗಳು ತಾತ್ಕಾಲಿಕ ರೆಕ್ಕೆ ಅಂಟಿಸಿಕೊಂಡು, ಹಸಿಮಣ್ಣಿನಿಂದ ಹೊರಬಿದ್ದು, ಸಮರ್ಥವಾಗಿ ಹಾರಲೂ ಬಾರದೆ- ಜೊತೆಗೆ ಮೈಥುನದ ಅವಸರ ಬೇರೆ – ಬೆಳಕಿನ ಸುತ್ತ ಮುಕುರಿಕೊಳ್ಳುತ್ತಿವೆ. ಇಲ್ಲವೇ ಕಾಗೆಗುಬ್ಬಿಗಳಿಗೆ ಆಹಾರವಾಗುತ್ತಿವೆ.

ಕಟ್ಟಿರುವೆಗಳು ಸಾಲು ಗಟ್ಟಿಕೊಂಡು ಮಣ್ಣುಹುಳುವಿನ ಬೇಟೆಗೆ ಹೊರಟಿವೆ. ನೇರಳೆಯ ಮರವು ಮಳೆಯಲ್ಲೇ ಹಣ್ಣುದುರಿಸಿ, ಹಣ್ಣು ಬಾಯಿಗೆ ಸಿಕ್ಕದೆ ಉಳಿದಿದೆ. ಸಹಸ್ರಪದಿಗಳು ಮಾತ್ರ ಕೆಸರಿನ ಹಂಗಿಲ್ಲದೆ ಬಿದ್ದ ನೇರಳೆ ಹಣ್ಣನ್ನು ಮುತ್ತಿ ಭುಜಿಸುತ್ತಿವೆ.

ಮಳೆಗಾಲದ ಸಂಭ್ರಮವನ್ನು ಮತ್ತಷ್ಟು ಸವಿಯಬೇಕನ್ನಿಸಿತು. ಕಾಲ್ನಡಿಗೆಯಲ್ಲಿ, ಕೊಡೆ ಹಿಡಿದು ಹೊರಟೆ. ಆಗಷ್ಟೆ ಮಳೆ ನಿಂತಿತ್ತು. ಒಬ್ಬ ಮುದುಕಿ ಕಂಕುಳ ತುಂಬ ಹೂಗಿಡಗಳ ಕಟಿಂಗ್ ಒತ್ತಿಕೊಂಡು ಬರುತ್ತ ಕಂಡಳು. ಅವಳ ತುಟಿಗಳಿಂದ ನಗುವು ಬೇಡವೆಂದರೂ ಹೊರಬಂದು ತುಳುಕುತ್ತಿತ್ತು. ‘ಪ್ರತಿವರ್ಷ ನೆಡೋದು, ಬರ್ತಾವಾ ಇಲ್ಲವಾ ಗೊತ್ತಿಲ್ಲ... ನಾವಂತೂ ನಮ್ ಕೆಲ್ಸ ಮಾಡ್ಬೇಕಲ್ಲ!’ ಅನ್ನುತ್ತ ಮುಂದಕ್ಕೆ ದಾಟಿದಳು.

‘ಮಾಡು, ಮಾಡು!’ ಅನ್ನುತ್ತ ನಕ್ಕು ನಾನೂ ಮುಂದಾದೆ. ಮತ್ತೊಬ್ಬರು ಗಡಿಬಿಡಿಯಲ್ಲಿದ್ದರು, ‘ಮಳೆ ಬಂದೇ ಬಿಡ್ತು ಮಾರಾಯ್ರೆ! ಕಟ್ಟಿಗೇನೇ ಒಟ್ಟಿಲ್ಲ, ಹಾಳಾದ್ದು!’ ಎಂದು ಬೈದುಕೊಳ್ಳುತ್ತ ಬಿರಿಬಿರಿ ನಡೆದರು. ಅವರು ನಡೆದಿದ್ದ  ಡಾಂಬರು ರಸ್ತೆಯು ಸಾರಿಸಿ ತೊಳೆದಿಟ್ಟಷ್ಟು ಸ್ವಚ್ಛವಾಗಿ, ಒದ್ದೆಯಾಗಿ ಮಲಗಿತ್ತು.

ರೈತರು ಗದ್ದೆಗಿಳಿಯಬೇಕಾದ ದಿನಗಳಿವು. ಅಥವಾ ನಮ್ಮ ಮಲೆನಾಡಿನಲ್ಲಿ ಮನೆಯ ಅಂಗಳವನ್ನೇ ಅಗೆದು ಪಾತಿ ಮಾಡಿ ಬೀನ್ಸು ಸೌತೆ ಹಲಸಂದೆ ಬೀಜಗಳನ್ನು ಊರಿ ಸೊಪ್ಪಿನಿಂದ ಮುಚ್ಚುವ ದಿನಗಳು. ಅಥವಾ ಮಣ್ಣಿನ ಗೋಡೆಗಳಿಗೆ ಮಳೆಯ ಇರಿಚಲು ಬಡಿಯದಂತೆ ಸೋಗೆಯ ತಡಿ ಕಟ್ಟುವ ದಿನಗಳು.

ಅಥವಾ ನೀರೊಲೆಯ ಮುಂದೆ ಕುಳಿತು ಕೆಂಡದ ಬೂದಿಯಲ್ಲಿ, ಮಳೆಗಾಲಕ್ಕೆ ಮೊದಲು ಕಲೆ ಹಾಕಿರುವ ಗೇರುಬೀಜಗಳನ್ನು ಸುಡುತ್ತ, ಗೇರೆಣ್ಣೆಯ ಹಿತಕರ ಪರಿಮಳ ಹೀರುತ್ತ ಮೈಕಾಯಿಸಿಕೊಳ್ಳುವ ದಿನಗಳು.

ಅಥವಾ ಹಾಗೆಂದು ಮಲೆನಾಡಿನ ಬಗೆಗೆ ರೋಚಕ ಕತೆಗಳಿವೆ, ‘ಮುಂಗಾರುಮಳೆ’ ಎಂಬ ಚಲನಚಿತ್ರದ ಚಿತ್ರೀಕರಣ ನಡೆದ ಪ್ರದೇಶ ತಾನೆ? ವಾಸ್ತವತೆ ಬದಲಾದರೂ ಕಲ್ಪಕತೆ ಮಾತ್ರ ಉಳಿದುಬಂದಿದೆ.

ಚಾದಂಗಡಿ ತಲುಪಿದೆ. ಒದ್ದೆಕೊಡೆಗಳನ್ನು ಇಡಲಿಕ್ಕೆಂದೇ ಇಡುವ ಮುರುಕಲು ಬಕೆಟ್ಟು ಚಾದಂಗಡಿಯ ಹೊರಬಾಗಿಲಿನ ಬದಿಗೆ ಪ್ರತ್ಯಕ್ಷವಾಗಿತ್ತು. ಕೊಡೆ ಅದರೊಳಗೆ ಮಡಿಚಿಟ್ಟೆ. ಚಾದಂಗಡಿಯಲ್ಲಿ ಮಂಗಳೂರು ಬಜೆ ಮೆಣಸಿನಕಾಯಿ ಬೋಂಡಾಗಳಿಗೆ ಗಿರಾಕಿ ಹೆಚ್ಚಿತ್ತು. ಮಾತುಕತೆ ನಡೆದಿತ್ತು.

ಅಗೆ ಹಾಕಿದ್ರಾ?
ಎಲ್ಲಿ ಅಗೆ, ನೀರಾಗಬೇಕಲ್ಲ?
ಬಾವಿ ನೀರು ಇಲ್ಲವಾ?
ಇದೆ, ಆದರೆ ಪಂಪಿಗೆ ಸಿಕ್ಕಲ್ಲ, ಬಿಂದಿಗೆ ಬಿಟ್ರೆ ನಾಲ್ಕು ಕೊಡ ಸಿಕ್ಕುತ್ತೆ.
ತೋಟ?
ಈ ಸಲದ ಬಿಸಿಲಿಗೆ ಅರ್ಧಕ್ಕರ್ಧ ಅಡಿಕೆಮರ ಹೋದ್ವು!

ಇತ್ಯಾದಿ ಮಾತುಗಳು ಕೇಳಿಬಂದವು. ಗಿರಾಕಿಯೊಬ್ಬನ ನಾಯಿ, ಆತನ ಜೊತೆಗೇ ಬಂದದ್ದು, ಮಾಲೀಕ ತಿನ್ನುತ್ತಿದ್ದ ಮೆಣಸಿನಕಾಯಿ ಬೋಂಡಾದತ್ತ ಏಕಾಗ್ರತೆಯಿಂದ ನೋಡುತ್ತ ಚಾದಂಗಡಿಯ ಒಳಬರಲು ಬಯಸುತ್ತ ಹಿಂಜರಿಯುತ್ತ ಕೊಸರಾಡುತ್ತಿತ್ತು.

ಚಾದಂಗಡಿಯ ಮಾಲೀಕನು, ತಾನೇ ಯಜಮಾನನೂ ಅಡಿಗೆಯವನೂ ಮಾಣಿಯೂ ಕ್ಲೀನರನೂ ಆಗಿ ಸಡಗರದಿಂದ ಓಡಾಡುತ್ತಿದ್ದನು. ಹೋಟೆಲಿನ ಮತ್ತೊಂದು ಬದಿಯಲ್ಲಿ ಕುಳಿತು ಎಗ್‌ರೈಸ್ ಮೆಲ್ಲುತ್ತಿದ್ದ ಒರಟುಗಡ್ಡದ ಒಬ್ಬಾತ ಲಹರಿಯಲ್ಲಿದ್ದನು.

‘ಇದೆಂತ ಮಳೆ ಬಿಡು!... ಆರಿದ್ರಾ ಮಳೆಗೆ ಗದ್ದೆಗೆ ಮೀನು ಬೀಳ್ತಿದ್ವು, ನಾನೇ ಹಿಡ್ದಿದೀನಿ!’ ಅಂದ. ಮತ್ತೊಬ್ಬ, ‘ಮೀನು ಬಿದ್ದಿಲ್ಲ, ಆದರೆ ಅಣಬೆ ಎದ್ದವೆ!’ ಅಂದ. ಲಹರಿಯಲ್ಲಿದ್ದವ ಸೋಲೊಪ್ಪಿಕೊಳ್ಳದೆ, ‘ಊಹೂಂ, ಆಕಾಶದಲ್ಲಿ ಗುಡುಗು ಬೀಳಬೇಕು! ಆಗ ಭೂಮಿಯೊಳಗಿಂದ ಎದ್ದು ಬರತ್ತಲ್ಲ,  ಅದು ನಿಜವಾದ ಅಣಬೆ!’ ಅಂದ.

ಹಿಂದಕ್ಕೆ ಹೊರಟೆ. ಚಾದಂಗಡಿಯಿಂದ ಆಶ್ರಮಕ್ಕೆ ಬರುವ ವೇಳೆಗೆ ಕತ್ತಲು ಕವಿದಿತ್ತು. ಮೇಲೆ ಮಳೆ, ಕಾಲ ಅಡಿಗೆ ಕೊಚ್ಚೆ. ಮಬ್ಬು ಬೆಳಕಿನಲ್ಲಿ, ಉಬ್ಬು ತಗ್ಗಿನ ಕೊರಕಲು ಹಾದಿ ಸವೆಸುವಾಗ, ಅಕ್ಕಪಕ್ಕದ ಗುಡಿಸಲುಗಳ ಒಳಗಿನಿಂದ ಪಕಪಕನೆ ಬದಲಾಗುವ ನೀಲಿ ಹಳದಿ ಕೆಂಪು ಬೆಳಕುಗಳು ಕುಣಿಯುತ್ತಿದ್ದವು.

ರೈತ ಕಾರ್ಮಿಕರು, ಪಾರಾಯಣ ಮಾಡುವಷ್ಟೇ ಏಕಾಗ್ರ ಭಕ್ತಿಯಿಂದ ಟೆಲಿವಿಷನ್ ಪರದೆಗಳ ಮೇಲೆ ಸ್ಮಾರ್ಟ್ ಸಿಟಿಗಳೆಂಬ ಭುವಿಯ ಮೇಗಣ ಸ್ವರ್ಗದ ತಿಳಿವಳಿಕೆಯನ್ನು ಸೀರಿಯಲ್ಲು ಸೀರಿಯಲ್ಲಾಗಿ ಗ್ರಹಿಸಲು ಹೆಣಗುತ್ತಿದ್ದರು.

ಇದು ಒಂದು ಚಿತ್ರಣ! ಇದಕ್ಕೆ ತದ್ವಿರುದ್ಧವಾದ ಮತ್ತೊಂದು ಚಿತ್ರಣವು ಮನುಕುಲವನ್ನು ಮುಂದೊತ್ತುತ್ತಿದೆ.  ಪತ್ರಿಕೆಯಲ್ಲಿ ಅಂತಹದ್ದೊಂದು ಲೇಖನವನ್ನು ಓದಿದೆ. ಮಾನವರು ದುಡಿತಕ್ಕೆ ವಿರಾಮ ಹೇಳುವ ಕಾಲ ಬರಲಿದೆ ಎಂದು ಸಂಭ್ರಮದಿಂದ ಸಾರುತ್ತಿತ್ತು ಸದರಿ ಲೇಖನ.

ಪ್ರಗತಿಪರ ಸರ್ಕಾರಗಳು, ವಿಶ್ವದಾದ್ಯಂತ ದಕ್ಷ ಯಂತ್ರಗಳ ಸಹಾಯ ಪಡೆದು ದುಡಿಯದೆ ಇರುವ, ಮಾನವರಿಗೆ ಸಾರ್ವತ್ರಿಕ ಆದಾಯವನ್ನು ಪುಕ್ಕಟೆಯಾಗಿ ಹಂಚುವುದು ಸಾಧ್ಯವಾಗಲಿದೆಯಂತೆ.

ಲೇಖಕರ ವಿಚಾರಲಹರಿ ಹೀಗಿದೆ! ಹೇಗೂ, ಮನುಷ್ಯ ಮಾಡಬೇಕಿರುವ ಹೆಚ್ಚಿನ ಕೆಲಸಗಳನ್ನು ಯಂತ್ರಗಳು ಈಗಾಗಲೇ ನಿರ್ವಹಿಸುತ್ತಿವೆ, ದಕ್ಷತೆಯಿಂದ ನಿರ್ವಹಿಸುತ್ತಿವೆ, ಯಂತ್ರಗಳಿಗೆ ಸಂಬಳ ಕೊಡಬೇಕಾದ ಅಗತ್ಯವಿಲ್ಲ.

ಹಾಗಾಗಿ ದುಡಿಮೆಗೂ ಗಳಿಕೆಗೂ ಇರುವ ಪುರಾತನ ಸಂಬಂಧವನ್ನು ನಷ್ಟಪಡಿಸಬಹುದು. ದುಡಿಯದೆಯೆ ಅನ್ನ ತಿನ್ನಬಹುದು. ಸದರಿ ಲೇಖನದಲ್ಲಿ ಲೇಖಕರು ಧರ್ಮಗ್ರಂಥಗಳಿಂದ ತಪ್ಪು ತಪ್ಪಾಗಿ ನಿದರ್ಶನಗಳನ್ನು ಒದಗಿಸುತ್ತಾರೆ. ಉದಾಹರಣೆಗೆ ಬೈಬಲ್ಲಿನಲ್ಲಿ ಆದಂ ಈವರಿಗೆ ದೇವರು ನೀಡುವ ಶಾಪವು ಶ್ರಮವಂತೆ!

ಅದೇನೇ ಇರಲಿ, ನಾನು ಓದಿದ ಲೇಖನದ ವಿಚಾರಗಳು  ಸಾಕಷ್ಟು ಪ್ರಾತಿನಿಧಿಕವಾದದ್ದು. ಬಹಳಷ್ಟು  ‘ಪ್ರಗತಿಪರ’ ಸರ್ಕಾರಗಳು, ಸರ್ಕಾರಿ ಅಧಿಕಾರಿಗಳು, ರಾಜಕಾರಣಿಗಳು ಹಾಗೂ ಆರ್ಥಿಕ ತಜ್ಞರು ಹೀಗೆಯೇ ಯೋಚಿಸುತ್ತಾರೆ. ಯಂತ್ರನಾಗರಿಕತೆಯು ಇಂತಹ ರಾಶಿರಾಶಿ ಲೇಖನಗಳನ್ನು ದಿನಂಪ್ರತಿ ಚಲಾವಣೆಗೆ ಬಿಡುತ್ತಿದೆ.

ಉದಾಹರಣೆಗೆ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಎಂಬ ಆಂಗ್ಲ ನಾಮಧೇಯ ಹೊತ್ತ ರೋಬೋಟುಗಳ ಬಗ್ಗೆ ಹಾಗೂ ಅವುಗಳ ಕಾರ್ಯಕ್ಷಮತೆಯ ಬಗ್ಗೆ ಲೇಖನಗಳನ್ನು ನೀವೀಗಾಗಲೇ ಓದಿರುತ್ತೀರಿ. ಇವು ಕೃತಕಮಾನವರು. ಮಾನವೀಯ ಮಾನವರು ಮಾಡಬಲ್ಲ ಎಲ್ಲ ಕೆಲಸಗಳನ್ನೂ ಅವರಿಗಿಂತ ದಕ್ಷವಾಗಿ ಮಾಡಬಲ್ಲರು ಇವರು; ವಾಸನೆ ನೋಡಬಲ್ಲರು,ಯೋಚನೆ ಅರಿಯಬಲ್ಲರು, ಮಾತಿನ ಜಾಡು ಹಿಡಿಯಬಲ್ಲರು, ಕಾಣಬಲ್ಲರು, ಕೇಳಬಲ್ಲರು...

ಪಾಠಹೇಳುವುದು, ಆಫೀಸು ನಡೆಸುವುದು, ಕಾರ್ಖಾನೆಗಳಲ್ಲಿ ಉತ್ಪಾದನೆ ಮಾಡುವುದರಿಂದ ಹಿಡಿದು, ಯುದ್ಧ ಹಿಂಸಾಚಾರ ಇತ್ಯಾದಿ ಯಾವುದನ್ನೇ ಆಗಲಿ, ಯಾವ ಮುಲಾಜೂ ಇಲ್ಲದೆ ಮಾಡಬಲ್ಲ ದಕ್ಷರು ಇವರು.

ನಾನು ಮಾನವ. ಅದಕ್ಷನೆಂದು ಪರಿಗಣಿಸಲ್ಪಟ್ಟಿರುವ ಮಾನವ. ಮಾನವೀಯತೆ ನನ್ನಲ್ಲಿ ಅದೆಷ್ಟು ಉಳಿದಿದೆಯೋ ಕಾಣೆ. ಆದರೂ, ಮಾನವನಾಗಿ ಉಳಿಯಬೇಕೆಂಬ ಆಶಯ ಉಳಿದಿದೆ. ನಾನು ಅಪಾಯದಲ್ಲಿದೇನೆ. ಆದರೆ ನನಗಿಂತ ಮಿಗಿಲಾದ ಅಪಾಯ ಅನುಭವಿಸುತ್ತಿರುವವಳು ಪ್ರಕೃತಿಮಾತೆ. ಅವಳು ವಾಸ್ತವದಲ್ಲಿ ಮಾತ್ರವಲ್ಲ ಚಿತ್ರಣಗಳಲ್ಲಿಯೂ ಕಣ್ಮರೆಯಾಗುತ್ತಿದ್ದಾಳೆ.

ಪ್ರಕೃತಿಯೊಟ್ಟಿಗೆ ಯುದ್ಧಕ್ಕೆ ನಿಂತಿದೆ ಪುರುಷವು. ಇದೊಂದು ಮಹಾಯುದ್ಧ. ಈ ಯುದ್ಧದಲ್ಲಿ ಮಾನವರು ಕಾಲಾಳುಗಳು. ದುಡಿಯದೆ ತಿನ್ನಬಲ್ಲ ಕನಸನ್ನು ಉಣಿಸಿ ನಮ್ಮನ್ನು ಕಾಲಾಳುಗಳನ್ನಾಗಿಸಲಾಗಿದೆ. ಜೇಮ್ಸ್‌ಬಾಂಡ್‌ನ ಚಲನಚಿತ್ರಗಳು ನೆನಪಾಗುತ್ತಿವೆ ನನಗೆ. ಅಲ್ಲಿ ಖಳಪುರುಷ ಒಬ್ಬ ಫ್ಯಾಸಿಸ್ಟ್.

ದುರಂತವೆಂದರೆ, ಪ್ರಕೃತಿಯೊಟ್ಟಿಗೆ ಜಗಳಕ್ಕೆ ನಿಂತಿರುವ ಇಂದಿನ ವ್ಯವಸ್ಥೆಯಲ್ಲಿ ಎಲ್ಲ ಬಣ್ಣದ ರಾಜಕೀಯ ಪಕ್ಷಗಳೂ ಇವೆ. ಪ್ರಜಾಪ್ರಭುತ್ವದ ಹೆಸರು ಹೇಳುವ ವಿವಿಧ ಬಗೆಯ ಸಮಾಜವಾದಿಗಳು ಸಮಾನತೆಯ ಆಣೆಪ್ರಮಾಣ ಮಾಡುವ ಸಮತಾವಾದಿ ದೇಶಗಳು ಹಿಂದುತ್ವ ಮುಸಲತ್ವ ಇತ್ಯಾದಿ ಕಲ್ಪಿತ ಪರಂಪರೆಗಳ ಮೇಲೆ ಆಣೆ ಪ್ರಮಾಣ ಮಾಡುವ ಬಲಪಂಥೀಯರು, ಎಲ್ಲರೂ ಇದ್ದಾರೆ. ಯಂತ್ರನಾಗರಿಕತೆಯೇ ಫ್ಯಾಸಿಸ್ಟ್ ಇದ್ದೀತು ಎಂಬ ಅನುಮಾನವು ಇಂದು ನಿಜವಾಗುತ್ತಿದೆ.

ಲೇಖನದ ಆರಂಭದಲ್ಲಿ ನೀಡಿರುವ ಮಳೆಗಾಲದ ಚಿತ್ರಣದಲ್ಲಿ ಪ್ರಕೃತಿಮಾತೆಗೆ ಇನ್ನೂ ಸ್ಥಾನವಿದೆ. ಆಕೆ ಮುನಿಸಿಕೊಳ್ಳುತ್ತಿರುವ ಸ್ಪಷ್ಟ ಸೂಚನೆಗಳು ಅಲ್ಲಿದೆ. ಹಳ್ಳಿಗರು, ಇತ್ತ ಪ್ರಕೃತಿಯನ್ನೂ ಬಿಡಲಾರದೆ ಬಿಟ್ಟಿಗಳಿಕೆಯ ಆಕರ್ಷಣೆಯನ್ನೂ ಬಿಡಲಾರದೆ ತೊಳಲಾಡುತ್ತಿರುವುದು ಅಲ್ಲಿ ಕಾಣಿಸುತ್ತದೆ.

ಆರಿದ್ರಾ ಮಳೆಯಲ್ಲಿ ಗದ್ದೆಗೆ ಮೀನು ಬೀಳುವ ಅನುಭವಜನ್ಯ ಜ್ಞಾನವಾಗಲೀ ಅಥವಾ ಆಕಾಶದ ಗುಡುಗಿಗೆ ಸ್ಪಂದಿಸಿ ಭುವಿಯ ಒಳಗಡೆಯಿಂದ ಮೇಲೆದ್ದುಬರುವ ಅಣಬೆಯ ರುಚಿಯ ಜ್ಞಾನವಾಗಲೀ ಇಂದು ಬೆಲೆಯಿಲ್ಲವಾಗಿದೆ.

ಸಮಕಾಲೀನ ಸಭ್ಯತೆಯನ್ನು ಈವರೆಗೆ ಪರಂಪರೆ ಹಾಗೂ ಆಧುನಿಕತೆಗಳ ನಡುವಿನ ಸಂಘರ್ಷದಿಂದ ರೂಪಿತವಾದದ್ದೆಂದು ಗ್ರಹಿಸಲಾಗುತ್ತಿತ್ತು. ಮಾತ್ರವಲ್ಲ!  ಪರಂಪರೆಯ ಪರವಾಗಿರುವವರು ಬಲಪಂಥೀಯರೆಂದೂ ಆಧುನಿಕತೆಯ ಪರವಾಗಿರುವವರು ಎಡಪಂಥೀಯರೆಂದೂ ಸರಳವಾಗಿ ತಿಳಿಯಲಾಗುತ್ತಿತ್ತು. ಈಗ ತಿಳಿವಳಿಕೆ ಬದಲಾಗಬೇಕಿದೆ.

ಸಮಕಾಲೀನ ಸಭ್ಯತೆಯನ್ನು ಯಂತ್ರನಾಗರಿಕತೆ ಹಾಗೂ ಆಧುನಿಕತೆ ವೈಚಾರಿಕತೆಗಳ ನಡುವಿನ ಮಹಾಯುದ್ಧವಾಗಿದೆ ಎಂದು ನಾವಿಂದು ಗ್ರಹಿಸಬೇಕಿದೆ. ಹೀಗೆ ಗ್ರಹಿಸಿದಾಗ ಆಧುನಿಕರ ಸಾಲಿನಲ್ಲಿ ಬುದ್ಧ ಬಸವಣ್ಣರು ಮೊದಲ್ಗೊಂಡು ಇಂದಿನ ಎಲ್ಲ ವಿಚಾರವಂತ ಧೀಮಂತರೂ ಬಂದು ನಿಲ್ಲುತ್ತಾರೆ.

ಇತ್ತ ಯಂತ್ರನಾಗರಿಕತೆಗೂ ಒಂದು ಪರಂಪರೆಯಿದೆ. ಭ್ರಷ್ಟ ಹಾಗೂ ಪಾಪಿಷ್ಟ ಸುಲಭಜೀವಿಗಳ ಪರಂಪರೆಯದು, ರಾಜರು ವೇಶ್ಯೆಯರು ಜಮೀನುದಾರರಿಂದ ಆರಂಭವಾದದ್ದು ಆಧುನಿಕಯುಗದ ಯಂತ್ರ ಮಾಲೀಕರಲ್ಲಿ ಬೃಹತ್ ಮಾರುಕಟ್ಟೆಗಳ ನಿಯಂತ್ರಕರುಗಳಲ್ಲಿ, ಅಂತರರಾಷ್ಟ್ರೀಯ ಹಣಕಾಸಿನಲ್ಲಿ ಪರ್ಯಾವಸಾನ ಹೊಂದುತ್ತದೆ.

ಹೇಗೆ ರಾಮನು, ಯಂತ್ರ ಹಾಗೂ ಯಂತ್ರಗಳನ್ನು ಅರಿತಿದ್ದ ರಾಕ್ಷಸ ರಾವಣನನ್ನು ಸೋಲಿಸಲು ಪ್ರಕೃತಿ ಹಾಗೂ ಪ್ರಾಣಿಗಳ ನೆರವು ಪಡೆದನೋ ಹಾಗೆಯೇ ನಾವೂ ಸಹಿತ ಪ್ರಕೃತಿಮಾತೆಯೊಡಗೂಡಿ ಆಧುನಿಕ ವೈಚಾರಿಕತೆಯನ್ನು ಗೆಲ್ಲಿಸಬೇಕಿದೆ. ಶ್ರಮ ವಿರೋಧಿ ವಿಚಾರಗಳು ಜೀವವಿರೋಧಿ ವಿಚಾರಗಳು. ಶ್ರಮವೇ ದೈವವೆಂದು ಬಗೆಯುವ ನನ್ನಂತಹವರಿಗೆ ಅದು ದೈವವಿರೋಧಿ ವಿಚಾರವೂ ಹೌದು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT