ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ಪ್ರಾಧಿಕಾರಕ್ಕೆ ಪ್ರೇರಣೆಯಾದ ಪತ್ರ

Last Updated 5 ಜನವರಿ 2014, 19:30 IST
ಅಕ್ಷರ ಗಾತ್ರ

ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರು ನಮ್ಮ ನಾಡು ಕಂಡ ಒಬ್ಬ ಅದ್ಭುತ ಚಿಂತಕರು. ಚಿಕಿತ್ಸಕ ಬುದ್ಧಿಯ ಬರಹಗಾರರು. ಅಪರೂಪದ ಕತೆಗಾರರು. ಅವರು ಬರೆಯದ ವಿಷಯಗಳೇ ಇರಲಿಲ್ಲ. ಅವರ ಶಿಕಾರಿಯ ನಾಯಿ ‘ಕಿವಿ’­ಯಿಂದ ಹಿಡಿದು ಕನ್ನಡದಲ್ಲಿ ತಂತ್ರಾಂಶ ಅಳವ­ಡಿಕೆ ವಿಷಯದವರೆಗೆ ಅಷ್ಟೇ ಲವಲವಿಕೆಯಿಂದ ಜೀವನೋತ್ಸಾಹ ತುಂಬಿ ಬರೆಯುತ್ತಿದ್ದರು.

ಹತ್ತಾರು ಹವ್ಯಾಸಗಳು, ಮಲೆನಾಡಿನ ಅಪ­ರೂಪದ ಪಕ್ಷಿಗಳ ಛಾಯಾಗ್ರಹಣ, ಮೀನು ಹಿಡಿ­ಯು­ವುದು, ಒಂಟಿಯಾಗಿ ಕಾಡು ಸುತ್ತುವುದು, ಕಾಫಿ ಬೆಳೆಯುವಲ್ಲಿ ಪ್ರಯೋಗ ಮಾಡುವುದು, ರೈತರ ಬದುಕಿನ ಬಗೆಗೆ ಆಳವಾದ ಅಧ್ಯಯನ... ಒಟ್ಟಿ­ನಲ್ಲಿ ಒಂದು ಪುಟ್ಟ ಹಳ್ಳಿಯ ಆಗು–ಹೋಗು­ಗಳಿಂದ ಹಿಡಿದು ಜಗತ್ತಿನ ಜ್ಞಾನದವರೆಗೆ ವಿಸ್ತಾರ­ವಾದ ಚಿಂತನಲಹರಿ. ಕನ್ನಡಿಗರಿಗೆ ಅವರೊಂದು ನಿಜ­ವಾದ ಅರ್ಥದಲ್ಲಿ ಚಿಂತನೆ ಚಿಲುಮೆ, ಸ್ಫೂರ್ತಿಯ ಕಾರಂಜಿ, ಜ್ಞಾನ­ಪೀಠ­. ಸಮಕಾಲೀನ ಸಾಮಾಜಿಕ ಮತ್ತು ರಾಜಕೀಯ ವಿಷಯಗಳ ಬಗ್ಗೆ ನೇರ ನುಡಿ­ಯು­ತ್ತಿದ್ದ ವಿಚಾರ­ವಾದಿ ಅವರಾಗಿದ್ದರು. ತೇಜಸ್ವಿ­ಯವರ ಕುರಿತು ಈಗಾ­ಗಲೇ ಸಾಕಷ್ಟು ಜನ ಬರೆದಿ­ದ್ದಾರೆ. ಆಡಳಿತದ ವಿಷಯಗಳಿಗೆ ಸಂಬಂಧಿ­ಸಿ­ದಂತೆ ಅವರೊಡನೆ ಆದ ನನ್ನ ಅನುಭವಗಳನ್ನು ದಾಖಲಿಸುವುದಷ್ಟೇ ಈ ಅಂಕಣದ ಆಶಯ.

ತೇಜಸ್ವಿಯವರ ಪರಿಚಯ ನನಗೆ ಬಹಳ ಹಿಂದಿ­ನಿಂದ ಇದ್ದರೂ ನಾನು ಆಡಳಿತ ಸೇವೆಗೆ ಸೇರಿದ ಬಳಿಕ ಅದು ಬಹಳ ನಿಕಟವಾಗಿತ್ತು. ನರ­ಗುಂದದ ರೈತ ಚಳವಳಿಯ ನಂತರ ಅವರೊಡನೆ ನಡೆ­ಸಿದ ಸಮಾಲೋಚನೆ–ಸಂವಾದ ನನಗೆ ಮುಂದಿನ ದಿನಗಳಲ್ಲಿ ರೈತರ ಸಂಕಷ್ಟಗಳನ್ನು ಸಹಾನು­ಭೂತಿಯಿಂದ ಮತ್ತು ಹೊಸ ದೃಷ್ಟಿ­ಕೋನ­ದಿಂದ ನೋಡಲು ಸಾಧ್ಯವಾಯ್ತು.

ತೇಜಸ್ವಿ­ಯ­ವರು ನಮ್ಮೂರಿನಿಂದ ಸುಮಾರು ೨೦ ಕಿ.ಮೀ. ದೂರದಲ್ಲಿ ವಾಸಿಸುತ್ತಿದ್ದರು. ಅವರ ಸರಳವಾಗಿ ಕತೆ ಹೇಳುವ ರೀತಿಯಿಂದ ಹಿಡಿದು ಅಪ­ರೂಪದ ಜೀವನ ಶೈಲಿವರೆಗೆ ಸುತ್ತ­ಮುತ್ತಲಿನ ಜನರ ಕುತೂಹಲ ಮತ್ತು ಆಕ­ರ್ಷಣೆಗೆ ಕಾರಣವಾಗಿದ್ದರು. ನಾನು ಅವ­ರನ್ನು ನೋಡ­ಹೋದಾಗಲೆಲ್ಲ ಸಾಮಾನ್ಯವಾಗಿ ಸ್ಕೂಟರ್ ರಿಪೇರಿ ಮಾಡುವುದು, ಕ್ಯಾಮೆರಾ ತಗಲು ಹಾಕಿಕೊಂಡು ಫೋಟೊ ತೆಗೆಯಲು ಹೊರ­ಡುವುದು, ಗಾಳ ಹಿಡಿದು ಮೀನು ಹಿಡಿ­ಯಲು ಹೋಗುವುದು... ಇಂಥದೇ ಕೆಲಸ ನಡೆದಿ­ರು­ತ್ತಿತ್ತು. ‘ಥತ್’, ‘ದರಿದ್ರ ಕಣ್ರೀ’, ‘ತಲೆ ಕೆಟ್ಟೋನು’... ಹೀಗೆ ಅವರದೇ ಕಾಪಿರೈಟ್ ಇದ್ದ ಪದ­­ಪುಂಜಗಳು ಉದುರುತ್ತಿದ್ದವು. ಅವರೊಬ್ಬ ‘ಒಂಟಿ ಸಂಚಾರಿ’ಯಾಗಿದ್ದರು.

ಲಂಕೇಶ್ ಪತ್ರಿಕೆಯಲ್ಲಿ ಅವರ ಲೇಖನಗಳು ಪ್ರಕಟ­ವಾಗಲು ಪ್ರಾರಂಭವಾದ ಮೇಲೆ ತೇಜಸ್ವಿ­ಯವರಿಗೆ ಮತ್ತು ಲಂಕೇಶ್‌ ಪತ್ರಿಕೆಗೆ ಒಂದು ಹೊಸ ಓದುಗರ ಬಳಗವೇ ಸೃಷ್ಟಿಯಾಯ್ತು. ನಾವೆಲ್ಲ ನೋಡಿದ ದೈನಂದಿನ ಸನ್ನಿವೇಶಗಳನ್ನು ಅವ­ರದೇ ರೀತಿಯಲ್ಲಿ ವ್ಯಾಖ್ಯಾನಿಸಿ ಬೆರಗು ಉಂಟು­ಮಾಡುತ್ತಿದ್ದರು. ಅವರ ಜೊತೆಗಿನ ಒಡ­ನಾಟದ ಅನುಭವವನ್ನು ಪುನರ್‌ಸೃಷ್ಟಿಸಿ ವಿವರಿಸುವುದು ಅಸಾಧ್ಯ. ಅದು ಆ ಕ್ಷಣದ ರೋಚಕ ಅನುಭವ.
 

ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ನಿರ್ದೇಶಕನಾಗಿ ನಾನು ನೇಮಕ­ಗೊಂಡಾಗ ಬಾಯಿಗೆ ಬಂದ ಹಾಗೆ ಬೈದರು. ‘ಅಲ್ಲ ಕಣ್ರೀ ವಿಠಲಮೂರ್ತಿ, ಹಳ್ಳಿಯಿಂದ ಬಂದ ನಿಮ್ಮಂಥ­ವರು ರೈತರಿಗೆ ಸಂಬಂಧಪಟ್ಟ ಇಲಾಖೆ­ಗಳಲ್ಲಿ ಕೆಲಸ ಮಾಡುವುದು ಬಿಟ್ಟು ಯಾರಿಗೂ ಉಪ­ಯೋಗಕ್ಕೆ ಬಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ­ಯಲ್ಲಿ ಕೆಲಸ ಮಾಡುತ್ತೀರಲ್ಲ’ ಎಂದು ಛೇಡಿ­ಸು­ತ್ತಿದ್ದರು. ಅವರು ಬೈದರೂ ಅದರ­ಲ್ಲೊಂದು ರೀತಿಯ ಆತ್ಮೀಯತೆ ಇರುತ್ತಿತ್ತು. ಅವರು ಹಿತೈಷಿಯೆಂದು ಅನಿಸುತ್ತಿತ್ತು.

ಅನುಭವದಿಂದ ಹೇಳಬೇಕಾದರೆ ಬಹಳಷ್ಟು ಸಾಹಿತಿ­ಗಳು, ಕಲಾವಿದರು ಸರ್ಕಾರ ನಡೆಯುವ ರೀತಿಯ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ, ತೇಜಸ್ವಿ­ಯವರು ನಾಡಿನ ಎಲ್ಲ ಆಗು-ಹೋಗುಗಳ ಬಗ್ಗೆ ಸೂಕ್ಷ್ಮವಾಗಿ ಗಮನಿಸಿ ಮಾತನಾಡು­ತ್ತಿದ್ದರು. ಗೋಬರ್ ಗ್ಯಾಸ್ ಘಟಕಕ್ಕೆ ಸರ್ಕಾರ ಕೊಡುತ್ತಿದ್ದ ಸಬ್ಸಿಡಿ ಮೊತ್ತ ಹೇಗೆ ಅವೈಜ್ಞಾನಿಕ­ವಾಗಿ ನಿಗದಿಯಾಗಿದೆ ಹಾಗೂ ಅದು ನಗರವಾಸಿ­ಗಳ ಅಡುಗೆ ಅನಿಲದ ಸಿಲಿಂಡರ್‌ಗಳಿಗೆ ಕೊಡುವ ಸಬ್ಸಿಡಿಗಿಂತ ಹೇಗೆ ಕಡಿಮೆ ಎಂದು ಹೇಳುವ ಖಚಿತತೆ ಅವರಲ್ಲಿತ್ತು.

ಒಮ್ಮೆ ಅವರನ್ನು ಭೇಟಿಯಾದಾಗ ಅದೂ ಇದೂ ಮಾತನಾಡುತ್ತ ನಮ್ಮ ಇಲಾಖೆ ಮಾಡ­ಬಹು­ದಾದ ಕೆಲವು ಕೆಲಸಗಳ ಕುರಿತು ಸಲಹೆ ನೀಡುತ್ತಿದ್ದರು. ಕನ್ನಡ ಪುಸ್ತಕಗಳ ಪ್ರಕಟಣೆ ಮತ್ತು ಮಾರಾಟದಲ್ಲಿ ಉದಯೋನ್ಮುಖ ಲೇಖಕರಿಗೆ ಆಗುವ ಶೋಷಣೆ ಬಗೆಗೆ ಅವರು ಮಾತನಾಡಿದರು. ಪ್ರಕಾಶಕರ ಮನೆ ಬಾಗಿಲು ಕಾಯ್ದು ಕೂರಬೇಕಾದ ಅನಿವಾರ್ಯ ಸ್ಥಿತಿಯ ಚಿತ್ರಣವನ್ನು ಅವರದೇ ವಿಡಂಬನಾ ಶೈಲಿಯಲ್ಲಿ ವಿವರಿಸಿದರು. ತಮ್ಮ ಸಲಹೆಗಳನ್ನು ತಿಳಿಸಿದರೆ ನಾನು ಅದನ್ನು ಪ್ರಾಮಾಣಿಕವಾಗಿ ಅನುಷ್ಠಾನ­ಗೊಳಿಸಲು ಪ್ರಯತ್ನ ಮಾಡುವುದಾಗಿ ತಿಳಿಸಿದೆ. ಒಂದು ಇನ್‌ಲ್ಯಾಂಡ್ ಲೆಟರ್‌ನಲ್ಲಿ ಪುಸ್ತಕ ಪ್ರಕ­ಟಣೆ ಯೋಜನೆಯ ರೂಪು-ರೇಷೆಗಳನ್ನು ಸಂಕ್ಷಿಪ್ತ­ವಾಗಿ ತಿಳಿಸಿದ್ದರು. ಆ ಇನ್‌ಲ್ಯಾಂಡ್‌ ಲೆಟರ್‌ ‘ಕನ್ನಡ ಪುಸ್ತಕ ಪ್ರಾಧಿಕಾರ’ ಪ್ರಾರಂಭಿ­ಸುವ ವಿಷಯದ ಕಡತದ ಮೊದಲ ಪುಟವಾಯ್ತು.

ಕನ್ನಡ ಲೇಖಕರು ಮತ್ತು ಪುಸ್ತಕಗಳ ಪ್ರಕಟಣೆ ಬಗೆಗೆ ಅತೀವ ಕಾಳಜಿ ಹೊಂದಿದ್ದ ಹಾ.ಮಾ. ನಾಯಕರ ನೆರವು ಪಡೆದು ಯೋಜನೆ ಸಿದ್ಧಪಡಿ­ಸ­ಲಾಯ್ತು. ಪುಸ್ತಕ ಪ್ರಾಧಿಕಾರದ ನಿರ್ವ­ಹಣೆಯ ರೀತಿ-ನೀತಿಗಳು ಹಾಗೂ ನಿಯಮಾ­ವಳಿ­ಗಳನ್ನು ಸಿದ್ಧಪಡಿಸಿ ಸರ್ಕಾರದ ಅನು­ಮೋದ­ನೆಗೆ ಕಳುಹಿಸಿದೆ. ನಂತರ ಇಲಾಖೆಯಿಂದ ವರ್ಗವಾಗಿ ಶಿವಮೊಗ್ಗಕ್ಕೆ ಹೋದೆ.

ಸರ್ಕಾರ, ಕನ್ನಡ ಪುಸ್ತಕ ಪ್ರಾಧಿಕಾರ ಸ್ಥಾಪನೆಗೆ ಒಪ್ಪಿ ಮೊದಲ ಅಧ್ಯಕ್ಷರಾಗಿ ಎಲ್.ಎಸ್. ಶೇಷಗಿರಿರಾಯರನ್ನು ನೇಮಿಸಿತು. ಅಧ್ಯಕ್ಷರಿಗೆ ರಾಜ್ಯ ಸಚಿವರ ಸ್ಥಾನಮಾನ ಒದಗಿಸಿತು. ಆದರೆ, ಪ್ರಾಧಿಕಾರಕ್ಕೆ ಅಳವಡಿಸಲು ಕಳುಹಿಸಿದ್ದ ನಿಯಮಾವಳಿಗಳು ಮಾತ್ರ ಒಪ್ಪಿಗೆಯಾಗಿ ಬರಲಿಲ್ಲ. ಉದಯೋನ್ಮುಖ ಲೇಖಕರಿಗೆ ನೆರವಾಗುವುದು, ವಿವಿಧ ಜ್ಞಾನ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಕನ್ನಡದಲ್ಲಿ ಕೃತಿಗಳ ಪ್ರಕಟಣೆ ಮಾಡುವುದು, ಎಲ್ಲ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಕನ್ನಡದ ಪುಸ್ತಕಗಳು ಲಭ್ಯವಾಗುವಂತೆ ಪುಸ್ತಕ ಮಳಿಗೆಗಳನ್ನು ತೆರೆಯಲು ಅನುವು ಮಾಡಿಕೊಡುವುದು, ಕನ್ನಡ ಪದವೀಧರ ನಿರುದ್ಯೋಗಿಗಳಿಗೆ ಪುಸ್ತಕ ಮಳಿಗೆ­ಗಳನ್ನು ನಿರ್ವಹಿಸಲು ಆರ್ಥಿಕ ನೆರವು ನೀಡು­ವುದು, ಗುಣಮಟ್ಟದ ನೆಲೆಯಲ್ಲಿ ಮಾರಾಟ ಆಗುವಂತಹ ಪುಸ್ತಕಗಳನ್ನೇ ಪ್ರಕಟಿಸುವುದು, ಮತ್ತೆ ಇದೆಲ್ಲವನ್ನು ಲಾಭ-–ನಷ್ಟವಿಲ್ಲದ ಲೆಕ್ಕಾಚಾರದಲ್ಲಿ ನಡೆಸುವುದು ಕನ್ನಡ ಪುಸ್ತಕ ಪ್ರಾಧಿಕಾರದ ಜವಾಬ್ದಾರಿಯಾಗಿತ್ತು. ಹತ್ತು–ಹಲವು ಆಶಯಗಳನ್ನು ಹೊಂದಿ,  ೨೨ ವರ್ಷಗಳ ಹಿಂದೆ ಪ್ರಾರಂಭವಾದ ಕನ್ನಡ ಪುಸ್ತಕ ಪ್ರಾಧಿಕಾರ ತನ್ನ ಆಶಯದಂತೆ ಕಾರ್ಯ ನಿರ್ವಹಿಸಿದೆಯೇ ಎಂಬುದನ್ನು ಅವಲೋಕನ ಮಾಡುವ ಕಾಲ ಈಗ ಬಂದಿದೆ.

ಸರ್ಕಾರಗಳು ಹಾಗೂ ರಾಜಕೀಯ ಪಕ್ಷಗಳು ಪ್ರಕಟಿಸುವಂತೆ ಕನ್ನಡ ಪುಸ್ತಕ ಪ್ರಾಧಿಕಾರ, ಹೊಳೆಯುವ ಕಾಗದದಲ್ಲಿ ಒಂದು ವರ್ಣ­ರಂಜಿತ­ವಾದ ‘ಸಾಧನೆಯ ಹಾದಿಯಲ್ಲಿ’ ಎಂಬ ಶೀರ್ಷಿಕೆಯ ಕಿರು ಹೊತ್ತಿಗೆಯನ್ನು ಹೊರ­ತಂದಿದೆ. ಹಣಕಾಸಿನ ವಿಷಯವನ್ನೇ ಅದರಲ್ಲಿ ಪ್ರಸ್ತಾಪಿಸಿಲ್ಲ. ಒದಗಿಸುವ ಆಯ–ವ್ಯಯ, ಖರ್ಚಾದ ಹಣ, ಲಾಭ–ನಷ್ಟಗಳ ವಿಷಯ ತಪ್ಪಿಯೂ ಕೂಡ ಅದರಲ್ಲಿ ಸೇರ್ಪಡೆ ಆಗಿಲ್ಲ. ಈ ಕಿರು ಹೊತ್ತಿಗೆಯಲ್ಲಿ ತಿಳಿಸಿದ್ದಕ್ಕಿಂತ ತಿಳಿಸದಿರು­ವುದೇ ಹೆಚ್ಚಾಗಿದೆ.

ಸರ್ಕಾರ ಮತ್ತು ಅಕಾಡೆಮಿ­ಗಳು ಕೊಡುವಂತೆ ಕನ್ನಡ ಪುಸ್ತಕ ಪ್ರಾಧಿಕಾರ ಸಹ ಪ್ರಶಸ್ತಿಗಳ ಸುರಿಮಳೆಯನ್ನೇ ಸುರಿಸಿದೆ. ಈ ಸಂಸ್ಥೆಯಿಂದ ಎಷ್ಟು ಪ್ರತಿಭಾನ್ವಿತ ಯುವ ಲೇಖಕರು ಬೆಳಕಿಗೆ ಬಂದಿದ್ದಾರೆ? ಎಷ್ಟು ಪುಸ್ತಕ ಮಳಿಗೆಗಳು ನಡೆಯುತ್ತಿವೆ? ಎಷ್ಟು ಜನ ನಿರು­ದ್ಯೋಗಿ ಪದವೀಧರರು ಈ ಯೋಜನೆ ಲಾಭ ಪಡೆದಿದ್ದಾರೆ? ಲೇಖಕರನ್ನು ಓದುಗರ ಬಳಿ ತಲುಪಿಸುವಲ್ಲಿ ಎಷ್ಟು ಸಾಧನೆಯಾಗಿದೆ? ಈ ದಿಸೆಯಲ್ಲಿ ನಡೆದಿರುವ ಪ್ರಯತ್ನಗಳೇನು? ಸರ್ಕಾರ ಕಳೆದ ೨೦ ವರ್ಷಗಳಲ್ಲಿ ಎಷ್ಟು ಹಣ ಕೊಟ್ಟಿದೆ? ಪ್ರಾಧಿಕಾರ ಅದನ್ನು ಯಾವ ರೀತಿ ಖರ್ಚು ಮಾಡಿದೆ? ಈ ಯಾವ ಪ್ರಶ್ನೆಗಳಿಗೂ ಅಲ್ಲಿ ಮಾಹಿತಿ ಇಲ್ಲ. ಒಟ್ಟಿನಲ್ಲಿ ತೇಜಸ್ವಿಯವರ ಕನಸಿನ ಕಾರಣವಾಗಿ ಪ್ರಾರಂಭವಾದ ಪ್ರಾಧಿಕಾರ ಹಳಿ ತಪ್ಪಿದೆ ಎನಿಸುತ್ತದೆ. ಅದಕ್ಕೆ ಅಧ್ಯಕ್ಷರಾಗಿ ಬಂದ ಹಲವರು ಅವರ ಆಶಯಗಳನ್ನು ಸರಿದೂಗಿಸಲು ಪ್ರಯತ್ನಿಸಿದರೂ ಅವರ ಯತ್ನಗಳು ಸಫಲವಾಗಲಿಲ್ಲ.

ನಮ್ಮ ರಾಜ್ಯದಲ್ಲಿ ಕೊಡುವಷ್ಟು ಪ್ರಶಸ್ತಿ–ಪುರಸ್ಕಾರಗಳನ್ನು ದೇಶದ ಯಾವುದೇ ರಾಜ್ಯದಲ್ಲಿ ಕೊಡುವುದಿಲ್ಲ ಎಂಬುದನ್ನು ಖಚಿತವಾಗಿ ಹೇಳಬಹುದು. ಸುಮಾರು ಮೂರು ದಶಕಗಳ ಹಿಂದೆ ವಿವಿಧ ಕ್ಷೇತ್ರಗಳಲ್ಲಿನ ಸಾಧಕರನ್ನು ಗುರುತಿಸಿ, ಗೌರವಿಸಲು ಸೀಮಿತ ಸಂಖ್ಯೆಯಲ್ಲಿ ಪ್ರಾರಂಭವಾದ ಈ ಪ್ರಶಸ್ತಿ ಪ್ರದಾನ ಈಗ ಅಂಕೆ ಮೀರಿ ಬೆಳೆದಿದೆ. ಸರ್ಕಾರ ಕೊಡುವ ರಾಜ್ಯೋತ್ಸವ ಪ್ರಶಸ್ತಿಗಳಲ್ಲದೆ ಸಂಗೀತ, ಸಾಹಿತ್ಯ, ನೃತ್ಯ, ನಾಟಕ, ಜಾನಪದ, ಯಕ್ಷಗಾನ ಈ ಕ್ಷೇತ್ರಗಳಲ್ಲಿ ಹಲವಾರು ಮಹಾನು­ಭಾವರ ಹೆಸರಿನಲ್ಲಿ ಪ್ರತಿವರ್ಷ ಹಲ­ವಾರು ಪ್ರಶಸ್ತಿ ನೀಡಲಾಗುತ್ತದೆ. ಸಾರಾ­ಸಗಟಾಗಿ 2–3 ವರ್ಷಗಳಿಗೊಮ್ಮೆ ಕೊಡುವ ಪರಿ­ಪಾಠವೂ ಇದೆ. ಇಲಾಖೆಯಡಿ ಕಾರ್ಯ ನಿರ್ವ­ಹಿಸುವ ಪ್ರಾಧಿಕಾರಗಳಲ್ಲದೆ 12 ಅಕಾ­ಡೆಮಿ­­ಗಳು, 18 ಟ್ರಸ್ಟ್‌ಗಳು–ಪ್ರತಿಷ್ಠಾನಗಳು ಸಹ ಹಲ­ವಾರು ಪ್ರಶಸ್ತಿಗಳನ್ನು ನೀಡುತ್ತವೆ. ಸರ್ಕಾ­ರದ ಅನುದಾನ ಪಡೆಯುವ ಸಂಘ–ಸಂಸ್ಥೆಗಳೂ ಪ್ರಶಸ್ತಿ ನೀಡಲು ಪೈಪೋಟಿ ನಡೆಸಿವೆ. ಪ್ರಶಸ್ತಿ ಕೊಡಲು ಮಾನದಂಡಗಳು–ನಿಯ­ಮಗಳು ಪಾರ­­ದರ್ಶಕ­ವಾಗಿಲ್ಲ. ಸದ್ಯಕ್ಕೆ ಸಮಯ ಸ್ಫೂರ್ತಿ­ಯೊಂದೇ ಮಾನದಂಡ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯನ್ನು ಕನ್ನಡ, ಸಂಸ್ಕೃತಿ ಮತ್ತು ಪ್ರಶಸ್ತಿಗಳ ಇಲಾಖೆ ಎಂದು ಪುನರ್ ನಾಮಕರಣ ಮಾಡಬೇಕೇನೋ ಅನಿಸುತ್ತದೆ.

ರಾಜ್ಯದ ವಿಶ್ವವಿದ್ಯಾಲಯಗಳಂತೂ ಮನಸೋ ಇಚ್ಛೆ ಗೌರವ ಡಾಕ್ಟರೇಟ್‌ಗಳನ್ನು ನೀಡುತ್ತಿವೆ. ಇವೆಲ್ಲ ಸಾಲದೆಂಬಂತೆ ಹಂಪಿ ಕನ್ನಡ ವಿಶ್ವವಿದ್ಯಾಲಯ ನಾಡೋಜ ಪದವಿಗಳನ್ನು ನೀಡಿ ಗೌರವಿಸುತ್ತಿದೆ. ಕೆಲವೊಮ್ಮೆ ಅರ್ಹ, ಮತ್ತೆ ಕೆಲವೊಮ್ಮೆ ಅನರ್ಹ ನಾಡೋಜರನ್ನು ನಾಡಿನ ಜನರ ನಡುವೆ ಬಿಡುತ್ತಿದೆ. ನಾಡೋಜ ಪದವಿಯಿಂದ ಸನ್ಮಾನಿತರಾದ ಕೆಲವರು ಕ್ರಿಮಿನಲ್ ಮೊಕದ್ದಮೆಯನ್ನೂ ಎದುರಿಸು­ತ್ತಿ­ದ್ದಾರೆ. ಸರ್ಕಾರಿ ಅಧಿಕಾರಿಗಳಿಗೂ ಈ ಪದವಿ ಸಂದಿದೆ. ಅವರು ತಮ್ಮ ಹೆಸರಿನ ಮುಂದೆ ‘ನಾಡೋಜ’ ಎಂದು ಮುದ್ರಿಸಿದ ವಿಸಿಟಿಂಗ್ ಕಾರ್ಡ್ ಹಿಡಿದು ಓಡಾಡುತ್ತಾರೆ. ಪ್ರಶಸ್ತಿ ಕೊಡುವವರು ಹಾಗೂ ಪಡೆಯು­ವವರಿಗೆ ಯಾವುದೇ ಸಂಕೋಚವಿಲ್ಲ.  ನಾಡೋಜ ಪಂಪ ತಾನೇ ಏನು ಮಾಡಿಯಾನು?

ಇಷ್ಟೆಲ್ಲ ಪ್ರಾಧಿಕಾರ, ಅಕಾಡೆಮಿಗಳು, ಟ್ರಸ್ಟ್‌­­ಗಳು, ಪ್ರತಿಷ್ಠಾನಗಳು ಸೃಷ್ಟಿಯಾಗಿ ಹಲ­ವಾರು ಜನರಿಗೆ ಸಚಿವರ ಸ್ಥಾನಮಾನ ದೊರೆ­ತಿದೆ. ಅಧ್ಯಕ್ಷತೆ-–ಸದಸ್ಯತ್ವ ದೊರೆತಿದೆ. ಆದರೆ, ಇವು­ಗ­ಳಿಂದ ಕನ್ನಡಕ್ಕೆ, ಕನ್ನಡಿಗರಿಗೆ ಏನು ದೊರೆತಿದೆ?

೧೯೮೩ರಲ್ಲಿ ಕೇವಲ ೩೫ರಿಂದ ೪೦ ಲಕ್ಷ ರೂಪಾಯಿಯಷ್ಟಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಬಜೆಟ್ ಈಗ ₨ ೨63 ಕೋಟಿಗೆ ತಲುಪಿದೆ. ಇಷ್ಟು ಭಾರೀ ಮೊತ್ತದ ಆಯ–ವ್ಯಯ ಸಮರ್ಪಕವಾಗಿ ನಿರ್ವಹಣೆ ಆಗದಿದ್ದರೆ ಏನು ಸಾರ್ಥಕ? ಕನ್ನಡ ಸಾಹಿತ್ಯ ಪರಿಷತ್ ಸಹ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಸಮ್ಮೇಳನ ನಡೆಸಿ ಅದರ  ಖರ್ಚು-ವೆಚ್ಚ ನಿಭಾಯಿಸುವಲ್ಲಿ ಹೈರಾಣಾಗಿರುತ್ತದೆ.

ಕನ್ನಡ, ಕನ್ನಡಿಗ ಮತ್ತು ಕರ್ನಾಟಕದ ಬಗ್ಗೆ ತೇಜಸ್ವಿ ಅವರ ಮನಸ್ಸು ಸದಾ ತುಡಿಯುತ್ತಿತ್ತು. ಕನ್ನಡದ ತಂತ್ರಾಂಶ ಬೆಳವಣಿಗೆಯ ಬಗ್ಗೆ ಸರ್ಕಾರದ ಜೊತೆ ಕೆಲಸ ಮಾಡಲು ಉತ್ಸುಕರಾಗಿದ್ದರು. ಆದರೆ, ಸರ್ಕಾರದ ಉದಾಸೀನತೆಯ ಬಗ್ಗೆ ಅವರಿಗೆ ವಿಪರೀತ ಕೋಪವಿತ್ತು. ಅದೇ ರೀತಿ ನಾಡಗೀತೆಯನ್ನು ಹೇಗೆ ಸಂಕ್ಷಿಪ್ತಗೊಳಿಸಿ ಹಾಡಬೇಕು ಎಂಬ ಬಗೆಗೆ ಸಲಹೆ ನೀಡಿದ್ದರು. ಸಮ್ಮಿಶ್ರ ಸರ್ಕಾರದ ರಾಜಕೀಯ ಕಾರಣಗಳಿಂದಾಗಿ ಅದು ವಿಫಲವಾಯ್ತು. ಬೀದಿಗಿಳಿದು ಹೋರಾಟ ಮಾಡ­ದಿದ್ದರೂ ಯಾವುದೇ ಪ್ರಾಧಿಕಾರ–ಪ್ರತಿ­ಷ್ಠಾನದ ಅಧ್ಯಕ್ಷರಾಗದಿದ್ದರೂ ಕನ್ನಡ ಹೋರಾಟ­ಗಾರರಿಗೆ ಅವರು ಸ್ಫೂರ್ತಿ ನೀಡಿ­ದರು. ಕನ್ನಡದ ವಿರೋಧಿ ಧೋರಣೆ ತಳೆದಿದ್ದ ಬೆಳಗಾವಿ ಮೇಯರ್ ಮುಖಕ್ಕೆ ಕನ್ನಡ ಹೋರಾಟಗಾರರು ಮಸಿ ಬಳಿದ ಬಗ್ಗೆ ಅವರ ಪ್ರತಿಕ್ರಿಯೆ ಕೇಳಿದಾಗ ‘ಇನ್ನೇನು ಫೇರ್ ಅಂಡ್ ಲವ್ಲಿ ಬಳಿಯ­ಬೇಕಿ­ತ್ತೇನು’ ಎಂದಿದ್ದರು. ಅವರ ಆ ಒಂದು ಹೇಳಿಕೆ ಕನ್ನಡಪರ ಹೋರಾಟಗಾರರಿಗೆ ಸಾವಿರ ಆನೆ ಬಲ ತಂದಿತ್ತು.

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT