ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೂರ್ವಗ್ರಹಗಳ ಸಾಂಸ್ಥೀಕರಣ ಬೇಡ

Last Updated 7 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಇತ್ತೀಚೆಗೆ ರೈಲಿನಲ್ಲಿ ಪಯಣಿಸುತ್ತಿದ್ದಾಗ ತಾನಾಗೇ ಮೊಬೈಲ್ ಸಂಭಾಷಣೆಯೊಂದು ಕಿವಿಗೆ ಬಿತ್ತು. ವಧು– ವರಾನ್ವೇಷಣೆ ಸಂಬಂಧದ ಮಾತುಕತೆ ಅದು: ‘ಹುಡುಗಿ ಕೆಲಸಕ್ಕೆ ಹೋಗಬಾರದು. ಮನೆಯಲ್ಲೇ ಇರಬೇಕೆಂಬ ಅಪೇಕ್ಷೆ ಅವರದು. ಆದರೆ ಸಿಂಗಪೂರ್‌ನಲ್ಲಿ ಓದಿಕೊಂಡು ಬಂದಿರುವ ಹುಡುಗಿಗೆ ಮನೆಯಲ್ಲೇ ಇರಬೇಕು ಎಂದರೆ ಒಪ್ಪುತ್ತಾರಾ? ಮನೆಯಲ್ಲಿದ್ದುಕೊಂಡೇ ಬೇಕಾದರೆ ಹುಡುಗಿ ಏನಾದರೂ ಕೆಲಸ ಮಾಡಿದಲ್ಲಿ ಅವರಿಗೆ ಆಕ್ಷೇಪಣೆ ಇಲ್ಲ’.

ಈ ಅಂಕಿ ಅಂಶಗಳನ್ನು ನೋಡಿ: 2004ರಿಂದ 2012ರವರೆಗೆ ಭಾರತದಲ್ಲಿ ಕೆಲಸ ತೊರೆದ ಮಹಿಳೆಯರ ಪ್ರಮಾಣ 1.96 ಕೋಟಿ. ಸದ್ಯಕ್ಕೆ ಕೇವಲ ಶೇ 27ರಷ್ಟು ಭಾರತೀಯ ಮಹಿಳೆಯರು ಔದ್ಯೋಗಿಕ ರಂಗದಲ್ಲಿದ್ದಾರೆ. ಕುಟುಂಬ, ಸಾಂಸ್ಕೃತಿಕ ಕಾರಣಗಳು ಹಾಗೂ ಸುರಕ್ಷತೆ ಎಂಬಂಥ ಕಾರಣಗಳಿಗಾಗಿ ಮಹಿಳೆಯರು ಉದ್ಯೋಗ ತೊರೆಯುವ ಪ್ರವೃತ್ತಿ ಹೆಚ್ಚಾಗುತ್ತಿದೆ ಎಂದು ಈ ವಿದ್ಯಮಾನವನ್ನು ವಿಶ್ಲೇಷಿಸಲಾಗುತ್ತಿದೆ.

ಸಂವಿಧಾನದತ್ತವಾದ ಸಮಾನತೆಯ ಬದುಕು ಸಾಗಿಸಲು ಸಾಮಾಜಿಕ ಹಾಗೂ ಸಾಂಸ್ಕೃತಿಕ ಮೌಲ್ಯಗಳು ಹೆಣ್ಣಿಗೆ ತಡೆಯಾಗಿರುವ ನಿದರ್ಶನಗಳು ಇವು. ಮಹಿಳೆಯ ಸ್ವಾಯತ್ತೆಯನ್ನು ನಿರಾಕರಿಸುವಂತಹ ಮೌಲ್ಯ ವ್ಯವಸ್ಥೆ ಇದು. ಮಹಿಳೆಗೆ ಸ್ವಾಯತ್ತೆಯನ್ನು ನಿರಾಕರಿಸುವ ಇಂತಹದೇ ಮನೋಧರ್ಮವನ್ನು ರಾಷ್ಟ್ರದ ಸರ್ವೋಚ್ಚ ನ್ಯಾಯಾಲಯವೂ ಪ್ರದರ್ಶಿಸಿದರೆ ಹೇಗಾಗಬೇಡ?

ವರದಕ್ಷಿಣೆ ಕಿರುಕುಳ ಪ್ರಕರಣಗಳಲ್ಲಿ ಶೇ 15.6ರಷ್ಟು ಪ್ರಕರಣಗಳಲ್ಲಿ ಮಾತ್ರ ಶಿಕ್ಷೆ ಆಗಿದೆ ಎಂಬುದರ ಆಧಾರದ ಮೇಲೆ ‘ಭಾರತೀಯ ದಂಡ ಸಂಹಿತೆಯ ಸೆಕ್ಷನ್ 498ಎ ದುರ್ಬಳಕೆ ಆಗಿದೆ. ಇದು ನಿಲ್ಲಬೇಕು’ ಎಂಬಂಥ ತೀರ್ಮಾನವನ್ನು ಸುಪ್ರೀಂ ಕೋರ್ಟ್ ಇತ್ತೀಚೆಗೆ ಪ್ರಕಟಿಸಿದೆ.

ಇದಕ್ಕಾಗಿ ಸುಪ್ರೀಂ ಕೋರ್ಟ್ ಸೂಚಿಸಿರುವ ಪರಿಹಾರವಾದರೂ ಏನು? ಮಹಿಳೆಯರು ನೀಡಿದ ದೂರುಗಳ ಪರಿಶೀಲನೆಗೆ ಪ್ರತಿ ಜಿಲ್ಲೆಯಲ್ಲಿಯೂ ನಾಗರಿಕ ಸಮಾಜದ ಸದಸ್ಯರು ಇರುವಂತಹ ಕುಟುಂಬ ಕಲ್ಯಾಣ ಸಮಿತಿಗಳನ್ನು ರಚಿಸಬೇಕು. ಪ್ರತಿ ಜಿಲ್ಲೆಯಲ್ಲಿ ಇಂತಹ ಒಂದು ಅಥವಾ ಎರಡು ಸಮಿತಿಗಳಿರಬೇಕು. ಇಂತಹ ಸಮಿತಿಗಳಲ್ಲಿ ಸ್ವಯಂ ಸೇವಕರು, ಸಾಮಾಜಿಕ ಕಾರ್ಯಕರ್ತರು, ನಿವೃತ್ತರು, ವೃತ್ತಿನಿರತ ಅಧಿಕಾರಿಗಳ ಪತ್ನಿಯರು ಹಾಗೂ ಸೂಕ್ತ ಎನಿಸುವಂತಹ ಇನ್ನೂ ಯಾರಾದರೂ ವ್ಯಕ್ತಿಗಳು ಇರಬಹುದು ಎಂದು ಹೇಳಲಾಗಿದೆ. ಈ ಸಮಿತಿ ವರದಿ ನೀಡುವವರೆಗೆ ಯಾರನ್ನೂ ಬಂಧಿಸಬಾರದು ಎಂದೂ ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ. ಆದರೆ ಇಂತಹ ಸಮಿತಿಗಳು, ಪುರುಷ ಪ್ರಧಾನ ಧೋರಣೆಗಳು ಈಗಲೂ ಜೀವಂತವಾಗಿರುವ ಜಿಲ್ಲಾ ಕೇಂದ್ರಗಳಲ್ಲಿ ಹೇಗೆ ಕಾರ್ಯ ನಿರ್ವಹಿಸಬಹುದು ಎಂದು ಊಹಿಸಬಹುದು. ಇವು ಮತ್ತೊಂದು ಬಗೆಯ ಖಾಪ್ ಪಂಚಾಯಿತಿಗಳಾಗುವುದಿಲ್ಲ ಎಂಬುದಕ್ಕೆ ಏನು ಗ್ಯಾರಂಟಿ ಎಂಬಂಥ ಪ್ರಶ್ನೆಗಳು ಕೇಳಿಬರುತ್ತಿವೆ. ಈ ಪ್ರಶ್ನೆಗಳು ಖಂಡಿತಾ ಅಪ್ರಸ್ತುತವಲ್ಲ.

ಈ ಸೆಕ್ಷನ್ 498ಎ ಅಸ್ತಿತ್ವಕ್ಕೆ ಬಂದ ಸಂದರ್ಭವಾದರೂ ಎಂತಹದ್ದು ಎಂಬುದನ್ನು ಇಲ್ಲಿ ನಾವು ನೆನಪಿಸಿಕೊಳ್ಳಬೇಕು. ಇದರ ಬೆನ್ನಿಗೆ ದಶಕಗಳ ಹೋರಾಟದ ಕಥೆ ಇದೆ. ರಾಷ್ಟ್ರದಲ್ಲಿ 1961ರ ವರದಕ್ಷಿಣೆ ನಿಷೇಧ ಕಾನೂನಿನಿಂದ ವರದಕ್ಷಿಣೆ ಪಿಡುಗು ಕಡಿಮೆಯಾಗಿರಲಿಲ್ಲ. 1970 ಹಾಗೂ 1980ರ ದಶಕದಲ್ಲಿ ಉತ್ತರ ಭಾರತದಲ್ಲಿ ವರದಿಯಾದ ವರದಕ್ಷಿಣೆ ಸಾವುಗಳು ಸಮಾಜವನ್ನು ಬೆಚ್ಚಿ ಬೀಳಿಸುವಂತಿದ್ದವು. ನಂತರ ಇದರ ವಿರುದ್ಧ ಸಾಕಷ್ಟು ಹೋರಾಟಗಳು ನಡೆದವು. ಪರಿಣಾಮವಾಗಿ ಶಾಸನಾತ್ಮಕ ಬದಲಾವಣೆಗಳೂ ಆದವು. ಭಾರತೀಯ ದಂಡ ಸಂಹಿತೆಗೆ 1983ರಲ್ಲಿ ಹೊಸ ಅಪರಾಧವೊಂದನ್ನು ಸೇರಿಸಿದ್ದೇ ಆಗ. ಇದು, ಪತಿ ಹಾಗೂ ಪತಿ ಮನೆಯವರಿಂದ ದೌರ್ಜನ್ಯ ಅಥವಾ ಕ್ರೌರ್ಯಕ್ಕೆ ಮಹಿಳೆ ಒಳಗಾದಲ್ಲಿ ಜಾಮೀನುರಹಿತ ಅಪರಾಧವಾಗಿಸಿ ಶಿಕ್ಷಿಸುವ ಅವಕಾಶ ಇರುವ ಸೆಕ್ಷನ್ 498ಎ. ತೀವ್ರತರ ದೈಹಿಕ ಹಾಗೂ ಮಾನಸಿಕ ಕ್ರೌರ್ಯಕ್ಕೆ ಒಳಗಾದ ಮಹಿಳೆಯರಿಗೆ ರಕ್ಷಣೆ ನೀಡುವ ಸದುದ್ದೇಶದ ಸೆಕ್ಷನ್ ಇದು. ಬರೀ ವರದಕ್ಷಿಣೆ ಹತ್ಯೆ ಮಾತ್ರವಲ್ಲ, ಗಂಡನ ಮನೆಯಲ್ಲಿ ಮಹಿಳೆ ಅನುಭವಿಸುವ ಕ್ರೌರ್ಯದ ಪ್ರಕರಣಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುವುದು ಈ ಸೆಕ್ಷನ್ ಉದ್ದೇಶ. ಸೆಕ್ಷನ್ 498ಎ ಅಡಿ ಅಪರಾಧ ಸಾಬೀತಾದಲ್ಲಿ ಮೂರು ವರ್ಷಗಳಷ್ಟು ಜೈಲುಶಿಕ್ಷೆಗೆ ಅವಕಾಶ ಇರುವುದು ಈ ಕಾನೂನನ್ನು ಕಠಿಣವಾಗಿಸಿದೆ.

ಆದರೆ ಗಂಡನ ತಂದೆ ತಾಯಿ, ಸೋದರ ಸೋದರಿ, ಅಜ್ಜ, ಅಜ್ಜಿಯರು ಸೇರಿದಂತೆ ಗಂಡನ ಸಂಬಂಧಿಗಳನ್ನು ಕ್ರಿಮಿನಲ್ ಪ್ರಕರಣಗಳಲ್ಲಿ ಸಿಕ್ಕಿಸಿಹಾಕಲು ಸೆಕ್ಷನ್ 498 ಎ ಬಳಕೆ ಆಗುತ್ತಿದೆ ಎಂಬ ಭಾವನೆ ಇತ್ತೀಚಿನ ದಿನಗಳಲ್ಲಿ ಸಮಾಜದಲ್ಲಿ ದೊಡ್ಡದಾಗಿ ಬೆಳೆಯುತ್ತಿದೆ. ಸುಳ್ಳು ಪ್ರಕರಣಗಳ ಬಗ್ಗೆ ಎಚ್ಚರ ವಹಿಸಬೇಕಾದುದು ಅತ್ಯಂತ ಅವಶ್ಯ ಎಂಬುದು ನಿಜ. ಎರ್ರಾಬಿರ್ರಿಯಾಗಿ ಗಂಡನ ಮನೆಯವರನ್ನು ಬಂಧಿಸಿದ ಪ್ರಕರಣಗಳಿಗೆ ಸಂಬಂಧಿಸಿದಂತೆ ಕಾನೂನು ದುರ್ಬಳಕೆ ಮಾಡಿಕೊಳ್ಳುವ ಮಹಿಳೆಯರ ಕುರಿತು ಅನೇಕ ರಾಜ್ಯ ಹೈಕೋರ್ಟ್‌ಗಳು ಹಾಗೂ ಸುಪ್ರೀಂ ಕೋರ್ಟ್ ಈಗಾಗಲೇ  ಅನೇಕ ಸಂದರ್ಭಗಳಲ್ಲಿ ಕಟುವಾದ ಮಾತುಗಳನ್ನಾಡಿವೆ. ಈಗ ಮತ್ತೊಮ್ಮೆ ‘ಮಾನವ ಹಕ್ಕುಗಳನ್ನು ಉಲ್ಲಂಘಿಸುವಂತಹ ಸುಳ್ಳು ಪ್ರಕರಣಗಳನ್ನು ನಿಯಂತ್ರಿಸುವುದು ಅವಶ್ಯ’ ಎಂದು ಎ.ಕೆ. ಗೋಯಲ್ ಹಾಗೂ ಯು.ಯು. ಲಲಿತ್ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ಪೀಠ ಹೇಳಿದೆ.

ವಾಸ್ತವವಾಗಿ ಬಂಧನಕ್ಕೆ ಸಂಬಂಧಿಸಿದಂತಹ ಅಪರಾಧ ಪ್ರಕ್ರಿಯಾ ಸಂಹಿತೆ ಸೆಕ್ಷನ್ 41, 2008ರಲ್ಲೇ ತಿದ್ದುಪಡಿಯಾಗಿದೆ. ಎಚ್ಚರಿಕೆಯಿಂದ ಬಂಧನಕ್ಕೆ ಒಳಪಡಿಸಬೇಕೆಂದು ಮಾರ್ಗದರ್ಶಿ ಸೂತ್ರಗಳನ್ನೂ ನೀಡಲಾಗಿದೆ. ಜೊತೆಗೆ 2014ರ ಜುಲೈನಲ್ಲಿ ನೀಡಿದ ನಿರ್ದೇಶನದಲ್ಲೂ ಸೆಕ್ಷನ್ 498ಎ ಅಡಿ ಬಂಧಿಸುವ ಪೊಲೀಸರ ಅಧಿಕಾರವನ್ನು ಸುಪ್ರೀಂ ಕೋರ್ಟ್ ಮತ್ತಷ್ಟು ಮೊಟಕುಗೊಳಿಸಿದೆ. ಬಂಧನಕ್ಕೆ ಮ್ಯಾಜಿಸ್ಟ್ರೇಟ್ ಅನುಮತಿ ಪಡೆದುಕೊಳ್ಳಬೇಕಾದುದು ಈಗ ಅವಶ್ಯ. ಜೊತೆಗೆ ಮ್ಯಾಜಿಸ್ಟೇಟ್ ಮುಂದೆ ‘ಮುಕ್ತಾಯ ವರದಿ’ ಸಲ್ಲಿಸಿ ಮೊಕದ್ದಮೆ ಮುಚ್ಚುವ ಅವಕಾಶವೂ ಪೊಲೀಸರಿಗೆ ಇದ್ದೇ ಇರುತ್ತದೆ. ಹೀಗಿದ್ದೂ ಈಗ ಮತ್ತೊಮ್ಮೆ ಈ ಕಾನೂನು ದುರ್ಬಲಗೊಳಿಸುವ ಯತ್ನ ನಡೆದಿದೆ.

2012ರಲ್ಲಿ 498ಎ ಸೆಕ್ಷನ್ ಅಡಿ ದಾಖಲಾದ ಪ್ರಕರಣಗಳಲ್ಲಿ ಶೇ 93.6ರಷ್ಟು ಪ್ರಕರಣಗಳಲ್ಲಿ ಪೊಲೀಸರು ಆರೋಪಪಟ್ಟಿಗಳನ್ನು ಸಲ್ಲಿಸಿದ್ದರು ಎಂಬುದನ್ನು ಸುಪ್ರೀಂ ಕೋರ್ಟ್ ಪೀಠ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ. ಇದು ಅಚ್ಚರಿಯ ವಿಚಾರ ಎಂದೂ ಅದು ಹೇಳಿದೆ. ಹಾಗಿದ್ದರೆ ಇದು ಏನನ್ನು ಧ್ವನಿಸುತ್ತದೆ? ಪೊಲೀಸರ ತೀವ್ರ ತನಿಖೆಗೆ ಒಳಪಟ್ಟ ನಂತರವೇ ಆರೋಪಪಟ್ಟಿಗಳನ್ನು ಸಲ್ಲಿಸಲಾಗುತ್ತದೆಯಲ್ಲವೆ? ಎಂದರೆ ಈ ದೂರುಗಳು ನಿಜವಾದವು ಎಂಬುದು ಪೊಲೀಸ್ ತನಿಖೆಗಳಲ್ಲಿ ಸಾಬೀತಾಗಿವೆ ಎಂದೇ ಅರ್ಥವಲ್ಲವೆ? ಹೀಗಿದ್ದೂ ಶಿಕ್ಷೆಯ ಪ್ರಮಾಣ ಶೇ 14.4ರಷ್ಟು ಮಾತ್ರ ಇತ್ತು ಎಂಬುದನ್ನೂ ಸುಪ್ರೀಂ ಕೋರ್ಟ್ ಉಲ್ಲೇಖಿಸಿದೆ. ಹಾಗೆಂದು ಉಳಿದೆಲ್ಲವೂ ಸುಳ್ಳು ಪ್ರಕರಣಗಳು ಎಂದು ಹೇಳಲಾಗುತ್ತದೆಯೆ ಎಂಬುದು ಪ್ರಶ್ನೆ. ಮಹಿಳೆಯರು ಅರ್ಧದಲ್ಲೇ ಪ್ರಕರಣಗಳನ್ನು ಕೈಬಿಟ್ಟಿರಬಹುದು. ಸಾಂಸ್ಕೃತಿಕ ಹಿಂಜರಿಕೆ ಇದಕ್ಕೆ ಕಾರಣವಾಗಿರುತ್ತದೆ. ಅಥವಾ  ನ್ಯಾಯದಾನ ಪ್ರಕ್ರಿಯೆಯ ಹಾದಿಯೂ ಕ್ಲಿಷ್ಟಕರವಾದುದಾಗಿರುತ್ತದೆ. ಆದರೆ, ಅಂಕಿ ಅಂಶಗಳ ಆಧಾರದಲ್ಲಿ ಇಂತಹವು ಸುಳ್ಳು ಪ್ರಕರಣಗಳಾಗಿ ಬಿಡುವುದು ವಿಷಾದದ ಸಂಗತಿ.

ಅತ್ಯಾಚಾರ ಪ್ರಕರಣಗಳಲ್ಲೂ ಶಿಕ್ಷೆಯ ಪ್ರಮಾಣ 2013ರಲ್ಲಿ ಶೇ 27.1ರಷ್ಟಿತ್ತು. ಹಾಗೆಂದು ಅತ್ಯಾಚಾರ ಕಾನೂನು ದುರ್ಬಲಗೊಳಿಸಲಾಗುತ್ತದೆಯೆ?
‘ಕ್ಷುಲ್ಲಕ ಸಂಗತಿಗಳ ಬಗ್ಗೆ ಕ್ಷಣದ ಆವೇಶದಲ್ಲಿ ಇಂತಹ ಆರೋಪಗಳನ್ನು ಬಹುತೇಕ ಸಂದರ್ಭಗಳಲ್ಲಿ ಮಾಡಲಾಗುತ್ತದೆ’ ಎಂದು ಕೋರ್ಟ್ ಹೇಳಿದೆ. ಆದರೆ ಅದು ನಿಜವೇ ಎಂಬುದನ್ನು ದೃಢಪಡಿಸುವಂತಹ ಯಾವುದೇ ಅಧ್ಯಯನ ವರದಿಯನ್ನೂ ಕೋರ್ಟ್ ಉಲ್ಲೇಖಿಸಿಲ್ಲ. ಗಂಡ ಅಥವಾ ಆತನ ಮನೆಯವರಿಂದ ಹಿಂಸೆ ಅನುಭವಿಸುವ ಮಹಿಳೆಗೆ ರಕ್ಷಣೆ ನೀಡುವುದು 498 ಎ ಸೆಕ್ಷನ್‌ನ ಉದ್ದೇಶ. ಆದರೆ ಪ್ರಕರಣದಲ್ಲಿ ಮನೆಯವರನ್ನೆಲ್ಲಾ ಬಂಧಿಸಿದರೆ ರಾಜಿ ಸಂಧಾನದ ಮಾರ್ಗವೇ ಮುಚ್ಚಿಹೋಗುತ್ತದೆ ಎಂದು ಪೀಠ ಹೇಳಿದೆ. ರಾಜಿಸಂಧಾನ, ವಿವಾಹವನ್ನು ಉಳಿಸಿಕೊಳ್ಳುವ ಯತ್ನದಲ್ಲಿ ಹಿಂಸೆಗೆ ಒಳಗಾಗಿರುವ ಮಹಿಳೆ ಮುಖ್ಯವಾಗದಿರುವುದು ಕೋರ್ಟ್ ಪೂರ್ವಗ್ರಹಗಳಿಗೆ ಸಾಕ್ಷಿ. ಯಥಾಪ್ರಕಾರ, ಮಹಿಳೆಯ ಘನತೆ ಹಾಗೂ ಸ್ವಾಯತ್ತೆ ಮುಖ್ಯವಾಗುವುದೇ ಇಲ್ಲ,

ಈ ಹಿಂದೆ 2014ರಲ್ಲೂ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪಿನ ಭಾಷೆಯಲ್ಲಿ, ಲಿಂಗಪೂರ್ವಗ್ರಹ ಢಾಳಾಗಿ ಗೋಚರಿಸಿತ್ತು. ವರದಕ್ಷಿಣೆ ವಿರೋಧಿ ಕಾನೂನುಗಳನ್ನು ‘ಹತಾಶ ಪತ್ನಿಯರು ರಕ್ಷಣೆಗಿಂತ ಹೆಚ್ಚಾಗಿ ಅಸ್ತ್ರವಾಗಿ ಬಳಸುತ್ತಿದ್ದಾರೆ’ ಎಂದು ಕೋರ್ಟ್ ಹೇಳಿತ್ತು. ಈ ಹೇಳಿಕೆ ನೀಡಿದ್ದ ನ್ಯಾಯಮೂರ್ತಿ ಸಿ.ಕೆ. ಪ್ರಸಾದ್ ಅವರೇ ‘ಬಂಧನದ ಅಧಿಕಾರ ಇರುವುದು ಪೊಲೀಸ್ ಭ್ರಷ್ಟಾಚಾರಕ್ಕೂ ಕಾರಣವಾಗುತ್ತಿದೆ’ ಎಂಬಂಥ ವಾಸ್ತವದ ಮಾತನ್ನೂ ಹೇಳಿದ್ದರು. ಅಪರಾಧ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 41ರ ಅನ್ವಯ ಮಾರ್ಗದರ್ಶಿ ಸೂತ್ರಗಳನ್ನು ಅನುಸರಿಸದಿರುವುದರಿಂದ ಸಮಸ್ಯೆಗಳು ಸೃಷ್ಟಿಯಾಗುತ್ತಿವೆ ಎಂಬುದನ್ನು ಅವರು ಆಗ ಒತ್ತಿ ಹೇಳಿದ್ದರು.

ಈಗ, ಸುಪ್ರೀಂ ಕೋರ್ಟ್‌ನ ಈ ಹೊಸ ನಿರ್ದೇಶನವನ್ನು ಪ್ರತಿಭಟಿಸಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಅನೇಕ ಮಹಿಳಾ ಸಂಘಟನೆಗಳು ಪತ್ರ ಬರೆದಿವೆ. 498ಎ ಸೆಕ್ಷನ್‌ನ ಎಲ್ಲಾ ದೂರುಗಳ ಪರಿಶೀಲನೆಗೆ ಕುಟುಂಬ ಕಲ್ಯಾಣ ಸಮಿತಿ ರಚನೆ ಮಾಡುವುದು ಅನ್ಯಾಯ ಹಾಗೂ ಹಿನ್ನಡೆಯದು. ಜೊತೆಗೆ ಇಂತಹ ಸಮಿತಿಗಳು ಸಂತ್ರಸ್ತರು ಹಾಗೂ ನ್ಯಾಯಾಂಗ ವ್ಯವಸ್ಥೆಯ ಮಧ್ಯೆ ಅಡ್ಡಗೋಡೆಯಾಗುತ್ತವೆ. ನ್ಯಾಯದ ಬಾಗಿಲು ತಟ್ಟಲು ಮತ್ತೊಂದು ಅಡ್ಡಿಯನ್ನು ದಾಟಬೇಕಾದ ಸ್ಥಿತಿ ಸಂತ್ಸಸ್ತೆಗೆ ಎದುರಾಗುತ್ತದೆ ಎಂದೂ ಈ ಪತ್ರದಲ್ಲಿ ವಿವರಿಸಲಾಗಿದೆ.

ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-3 ಅಂಕಿ ಅಂಶಗಳ ಪ್ರಕಾರ, ಪ್ರತಿ ಮೂವರು ಮಹಿಳೆಯರ ಪೈಕಿ ಒಬ್ಬರು ಮಾನಸಿಕ, ದೈಹಿಕ ಹಾಗೂ ಮೌಖಿಕ ಕೌಟುಂಬಿಕ ಹಿಂಸೆಗಳ ಸಂತ್ರಸ್ತೆಯರು ಎಂಬುದನ್ನು ಸಿಜೆಐಗೆ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಲಾಗಿದೆ. 24,771 ವರದಕ್ಷಿಣೆ ಸಾವುಗಳು ಭಾರತದಲ್ಲಿ 2012ರಿಂದ 2014ರ ಅವಧಿಯಲ್ಲಿ ಸಂಭವಿಸಿವೆ. ಎಂದರೆ ಸರಾಸರಿ 20ಕ್ಕೂ ಹೆಚ್ಚು ವರದಕ್ಷಿಣೆ ಸಾವುಗಳು ದಿನನಿತ್ಯ ಸಂಭವಿಸುತ್ತಿವೆ ಎಂದು ಅರ್ಥ. 2016ರಲ್ಲಿ 7633 ವರದಕ್ಷಿಣೆ ದೂರುಗಳು ದಾಖಲಾಗಿವೆ. ಎದ್ದು ಕಾಣಿಸುವ ದೈಹಿಕ ಗಾಯ ಹಾಗೂ ಸಾವು ಸಂಭವಿಸಿರುವ ಪ್ರಕರಣಗಳನ್ನು ಹೊಸದಾಗಿ ರಚನೆಯಾಗಲಿರುವ ಕುಟುಂಬ ಕಲ್ಯಾಣ ಸಮಿತಿ ಪರಿಶಲನೆಗೆ ಕಳಿಸುವುದು ಅಗತ್ಯವಿಲ್ಲ ಎಂದೂ ಸುಪ್ರೀಂ ಕೋರ್ಟ್ ರಿಯಾಯಿತಿ ತೋರಿಸಿದೆ. ಎಂದರೆ ಸತ್ತಾಗ ಮಾತ್ರ ಮಹಿಳೆಯನ್ನು ಸಂತ್ರಸ್ತೆಯಾಗಿ ಪರಿಭಾವಿಸಲಾಗುತ್ತದೆಯೆ? ಜೀವಂತವಿದ್ದಾಗ ನ್ಯಾಯ ಪಡೆದುಕೊಳ್ಳುವುದು ಸಾಧ್ಯವಿಲ್ಲವೆ ಎಂಬ ಪ್ರಶ್ನೆಗಳನ್ನು ಇದು ಹುಟ್ಟುಹಾಕಿದೆ.

ಕಾನೂನಿನ ಪ್ರಕಾರ, ವರದಕ್ಷಿಣೆ ಹಾಗೂ ವರದಕ್ಷಿಣೆ ಬೇಡಿಕೆಗಳು ಅಪರಾಧವಿರಬಹುದು. ಆದರೆ ನಿಜಜೀವನದಲ್ಲಿ ವರದಕ್ಷಿಣೆ ಎಂಬುದು ವಿವಾಹದೊಳಗೆ ಅಂತರ್ಗತವಾಗಿದೆ. ಭ್ರಷ್ಟಾಚಾರದಂತೆ ಹೊರಗೆ ವರದಕ್ಷಿಣೆ ಖಂಡಿಸಲಾಗುತ್ತದೆ. ಒಳಗೊಳಗೇ ವರದಕ್ಷಿಣೆ ಆಚರಣೆಗೆ ಕುಮ್ಮಕ್ಕು ನೀಡುವ ವಿಪರ್ಯಾಸವಿದೆ. ಹಾಗೆಯೇ ವರದಕ್ಷಿಣೆಗೆ ಸಂಬಂಧಿಸಿದಂತೆ ಹೊಸ ಹೊಸ ಸ್ವರೂಪಗಳನ್ನು ಪಡೆದುಕೊಳ್ಳುತ್ತಿರುವ ಹಿಂಸಾಚಾರದ ಆಳ ಅಗಲಗಳನ್ನು ಅರಿಯುವುದೂ ಕ್ಲಿಷ್ಟಕರ ಎಂದಾಗುತ್ತಿದೆ. ಇಂತಹ ಸಂದರ್ಭದಲ್ಲಿ ವರದಕ್ಷಿಣೆ ಕಾನೂನುಗಳ ಅನುಷ್ಠಾನದ ಸಮಸ್ಯೆಯೂ ಸಂಕೀರ್ಣವಾಗುತ್ತಿದೆ. ವರದಕ್ಷಿಣೆ ಸಮಸ್ಯೆಯನ್ನು ಭಾರತೀಯ ಕಾನೂನು ಹಾಗೂ ಸಮಾಜ ಗ್ರಹಿಸುವ ರೀತಿಯಲ್ಲೇ ದೋಷವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT