ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೆಡಂಭೂತಗಳ ವಕ್ತಾರರಾಗಿ...

Last Updated 24 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

‘ಕಾಡುನಾಯಿಗಳನ್ನೇ ಏಕೆ ನೀವು ಆಯ್ಕೆ ಮಾಡಿಕೊಂಡಿರಿ?’ – ನಮಗಿದು ಪದೇ ಪದೇ ಎದುರಾಗುವ ಪ್ರಶ್ನೆ.
ಹೌದಲ್ಲ... ಕಾಡುನಾಯಿಗಳೇ ಏಕೆ? ಎಂದು ನಮಗೂ ಅನಿಸಿದ್ದಿದೆ.

ಸಮಸ್ಯೆ ಎಂದರೆ ಈ ಪ್ರಶ್ನೆಗೆ ಸರಳವಾಗಿ ತಾತ್ವಿಕವಾಗಿ ಉತ್ತರಿಸಲು ನಮಗೆ ಸಾಧ್ಯವೇ ಇಲ್ಲ. ಒಂದೆರಡು ಸಾಲಿನಲ್ಲಿ ಉತ್ತರಿಸಲು ಪ್ರಯತ್ನಿಸಿದರೆ ಶುದ್ಧ ಮೂರ್ಖರಾಗಿ ಹಾಸ್ಯಾಸ್ಪದವಾಗಿ ಕಾಣುವ ಸಾಧ್ಯತೆಗಳೇ ಹೆಚ್ಚು.

ಏಕೆಂದರೆ ಈ ಕಾಡುನಾಯಿಗಳು ತಮ್ಮ ಗೋಪ್ಯ ಬದುಕಿನ ರಹಸ್ಯಗಳನ್ನು ಸುಲಭವಾಗಿ ಬಿಟ್ಟುಕೊಡುವುದೇ ಇಲ್ಲ. ಬೇಟೆಯ ಬೆನ್ನತ್ತಿದ್ದಾಗ ಗಾಳಿಯಲ್ಲಿ ಗಾಳಿಯಾಗಿ ಕರಗಿಹೋಗುವ ಇವುಗಳನ್ನು ಹಿಂಬಾಲಿಸುವುದೇ ಕಷ್ಟ. ಇದಲ್ಲದೆ ತಮ್ಮನ್ನು ಕುರಿತು ಸಾಕ್ಷ್ಯಚಿತ್ರ ನಿರ್ಮಿಸಲು ಆಗಮಿಸಿದ ವಿಶ್ವದ ಅಗ್ರಗಣ್ಯ ಚಿತ್ರ ನಿರ್ಮಾಪಕರ ಭಗೀರಥ ಪ್ರಯತ್ನಗಳನ್ನೆಲ್ಲ ವಿಫಲಗೊಳಿಸಿ ನಿರಾಶೆ ಮೂಡಿಸಿದ್ದು ಸಹ ಅಪರಾಧವೆ.

ಇದ್ಯಾವುದು ಒಪ್ಪುವಂತಹದ್ದಲ್ಲ...! ಕಾಡಿನ ಕಾಲುದಾರಿಗಳು ಕೂಡುವೆಡೆ ಸಾಮೂಹಿಕ ಮಲ ವಿಸರ್ಜನೆ ಮಾಡಿ, ತಮ್ಮ ಸಾಮ್ರಾಜ್ಯದ ಗಡಿಯನ್ನು ಗುರುತು ಮಾಡುವುದು ಅಥವಾ ಇದೇ ರೀತಿಯ ಅನೇಕ ಅಸಭ್ಯ ನಡವಳಿಕೆಗಳನ್ನು ಬೆಳೆಸಿಕೊಂಡಿರುವ ಈ ಕಾಡುನಾಯಿಗಳು ಅಭ್ಯಸಿಸಲು ಯೋಗ್ಯವಾದ ಜೀವಿಗಳೆನಿಸುವುದಿಲ್ಲ.

ಹಾಗೆ ನೋಡಿದರೆ ಈ ಕಾಡುನಾಯಿಗಳು ಒಂದಿಷ್ಟೂ ಕರುಣೆಯಿಲ್ಲದ ಸರಣಿ ಕೊಲೆಗಾರರಂತೆ ಕಾಣತೊಡಗುತ್ತವೆ. ಜಿಗಿದು ಓಡುವ ಜಿಂಕೆಗಳ ತೊಡೆಗಳನ್ನು ಗರಗಸದಂತೆ ಹರಿತವಾದ ತಮ್ಮ ಹಲ್ಲುಗಳಿಂದ ಹರಿದು, ಅವಿನ್ನೂ ಸಾಯುವ ಮುನ್ನವೆ ತಮ್ಮ ಊಟವನ್ನು ಶುರು ಮಾಡಿರುತ್ತವೆ. ಖಂಡಿತವಾಗಿ ಇದು ಸಭ್ಯ ನಡವಳಿಕೆಯಲ್ಲ.

ಇಂತಹ ರಕ್ತಸಿಕ್ತ ಚರಿತ್ರೆಯ ಕಾಡುನಾಯಿಗಳನ್ನು ನಾವು ಹಚ್ಚಿಕೊಂಡಿದ್ದೇಕೆ? ಅವುಗಳ ಜಾಡಿನಲ್ಲಿ ಅಲೆಯುತ್ತಾ ಬದುಕಿನ ಅರ್ಧ ಭಾಗವನ್ನೆ ಕಳೆದುದನ್ನು ನೆನಪಿಸಿಕೊಂಡಾಗ ನಮಗೇ ಅಚ್ಚರಿಯಾಗುತ್ತದೆ.

ಕಾಲಾಂತರದಲ್ಲಿ ಕಾಕತಾಳೀಯವಾಗಿ ಸಂಭವಿಸುವ ಘಟನಾ ಸರಣಿಗಳು ಮನಸ್ಸಿನ ಮೇಲೆ ಬೀರುವ ಪರಿಣಾಮ ಕೆಲವೊಮ್ಮೆ ಪೆಡಂಭೂತಗಳ ಪರವಾಗಿಯೆ ವಕಾಲತ್ತು ವಹಿಸುವಂತೆ ಪ್ರೇರೇಪಿಸಿದರೆ ಅಚ್ಚರಿಯೇನಿಲ್ಲ. ಎಲ್ಲ ಕತೆಗಳಿಗೂ ಮತ್ತೊಂದು ಮುಖವಿರುತ್ತದೆ. ಹಾಗೆಂದು ಯೋಚಿಸುವುದಾಗಲೀ ನಂಬುವುದಾಗಲೀ ಬಹಳ ಸುಲಭ. ಆದರೆ ಅದರ ಸತ್ಯಾಸತ್ಯತೆಗಳನ್ನು ಅರಿಯಲು ನೀವೇ ಅನ್ವೇಷಣೆಯಲ್ಲಿ ತೊಡಗಿಸಿಕೊಂಡಾಗ ಹಾದಿ ಕಠಿಣವಾಗುತ್ತದೆ. ಈ ಅನ್ವೇಷಣೆಗಳು ನಿಮ್ಮ ಇಡೀ ಜೀವತಾವಧಿಯನ್ನೇ ಕಬಳಿಸಿದರೆ ಆಶ್ಚರ್ಯವೇನಿಲ್ಲ. ನೀವು ಆ ಹಾದಿಯ ಪ್ರತಿ ಕ್ಷಣಗಳನ್ನು ಆನಂದಿಸಲು ಸಾಧ್ಯವಾದರೆ ಮಾತ್ರ ಪಯಣ ಅಹ್ಲಾದಕರವಾಗಿರುತ್ತದೆ. ಹಾಗೂ ಈ ಪ್ರಯತ್ನದಲ್ಲಿ ತೊಡಗಿಸಿಕೊಳ್ಳುವ ಮುನ್ನ ತಲೆ ಕೆಟ್ಟವರೆಂದು ಸಮಾಜ ತೀರ್ಮಾನಿಸಿಬಿಟ್ಟರೆ ಮತ್ತಷ್ಟು ಸುಗುಮವಾಗಿ ಸಾಗುತ್ತದೆ.

ನಮ್ಮ ಕಾಡಿನ ದಿನಗಳು ಆರಂಭಗೊಂಡಿದ್ದು ತಮಿಳುನಾಡಿನ ಮುದುಮಲೈ ಅರಣ್ಯದಲ್ಲಿ. ಕಾಡಿನ ನಡುವೆ ಹರಿದಿದ್ದ ಮೊಯಾರ್ ನದಿಯ ಬದಿಯಲ್ಲಿದ್ದ ಪುಟ್ಟ ಮನೆಯೊಂದನ್ನು ಅರಣ್ಯ ಇಲಾಖೆ ನಮಗೆ ನೆಲೆಸಲು ನೀಡಿತ್ತು. ನೀರಿಗೆ ಸಂಬಂಧಿಸಿದ ಪ್ರತಿ ಕರ್ತವ್ಯಗಳಿಗೂ ನಾವು ಮೋಯಾರ್ ನದಿಗಿಳಿಯಬೇಕಿತ್ತು. ನಾವು ಬೆಳಗಿನ ಜಾವದ ನಸುಗತ್ತಲಿನಲ್ಲಿ, ಕಾಲುದಾರಿಯಲ್ಲಿ ಎಡವುತ್ತಾ ಸಾಗಿ, ನದಿ ತಲುಪುವ ವೇಳೆಗಾಗಲೆ ಕಾಡು ಕುರುಬರ ಹೆಂಗಸರು ಪಾತ್ರೆ ಉಜ್ಜುತ್ತಾ, ನೀರಿಗೆ ಗಾಳ ಎಸೆದು ಬಂಡೆಗಳ ಮೇಲೆ ಕುಳಿತಿರುತ್ತಿದ್ದರು.

ಹೊಳೆಯುತ್ತಿದ್ದ ಕಪ್ಪು ಬಂಡೆಗಳ ನಡುವೆ ನುಸುಳಿ ಹರಿಯುತ್ತಿದ್ದ ಮೊಯಾರ್ ನದಿ ಅದ್ಭುತವಾಗಿತ್ತು. ನಾವೆಂದೂ ಅಷ್ಟು ಸುಂದರವಾದ ನದಿಯಂಚಿನ ಕಾಡನ್ನು ನೋಡಿರಲಿಲ್ಲ. ನದಿಯ ದಂಡೆಯ ಇಳಿಜಾರಿನಲ್ಲಿ ದೈತ್ಯಾಕಾರವಾಗಿ ಬೆಳೆದಿದ್ದ ಮರಗಳಿದ್ದವು. ಅಲ್ಲಲ್ಲಿ ದಟ್ಟವಾಗಿ ಅರವತ್ತು–ಎಪ್ಪತ್ತು ಅಡಿ ಎತ್ತರಕ್ಕೆ ಬೆಳೆದಿದ್ದ ಬಿದಿರಿನ ಮೆಳೆಗಳು ನದಿಯತ್ತ ಬಾಗಿ, ಬೀಸುವ ಗಾಳಿಗೆ ತೂಗುತ್ತಿದ್ದವು.

ಕಾಡಿನ ಮೇಲ್ಛಾವಣಿಯಲ್ಲಿ ಕೆಂದಳಿಲುಗಳು ಮರದಿಂದ ಮರಕ್ಕೆ ರೆಂಬೆಯಿಂದ ರೆಂಬೆಗೆ ಹಾರುತ್ತಿದ್ದ ನೋಟ ಮನಮೋಹಕವಾಗಿರುತ್ತಿತ್ತು. ನೂರಾರು ವರ್ಷಗಳಷ್ಟು ಹಳೆಯದಾದ ಕಾಡು ಮಾವಿನ ಮರಗಳು, ಅವುಗಳ ರೆಂಬೆಗಳನ್ನೇರಿ ಕುಳಿತ ಆರ್ಕಿಡ್ ಗಿಡಗಳು ಇನ್‌ಸ್ಟಾಲೇಷನ್ ಆರ್ಟ್‌ನಂತೆ ಕಾಣುತ್ತಿದ್ದವು. ಉಳಿದಂತೆ ಮುಗಿಲೆತ್ತರದ ಬೀಟೆ, ನಂದಿ, ಮತ್ತಿ ಮರಗಳ ಸೊಬಗು ಪ್ರತಿ ಕ್ಷಣ ಉಲ್ಲಾಸ ಮೂಡಿಸುತ್ತಿತ್ತು.

ಬೆಳಗಿನ ಮಂಜಿನಲ್ಲಿ ಒಮ್ಮೊಮ್ಮೆ ಕಂಡು ಅದೃಶ್ಯವಾಗುತ್ತಿದ್ದ ಕಾಡಾನೆಗಳು, ಕಾಡೆಮ್ಮೆಗಳು... ಎಷ್ಟೋ ಮಂದಿ ದೇವರಪಟಕ್ಕೆ ವಂದಿಸಿ ತಮ್ಮ ದಿನಚರಿ ಶುರುಮಾಡಿದರೆ, ಮೋಯಾರ್ ನದಿಯ ಈ ಚಿತ್ರಣದೊಂದಿಗೆ ನಮ್ಮ ದಿನ ಆರಂಭಗೊಳ್ಳುತ್ತಿತ್ತು. ಹಾಗಾಗಿ ಈ ಎಲ್ಲಾ ದೃಶ್ಯಾವಳಿಗಳು ನಮ್ಮ ಮನಸ್ಸಿನಲ್ಲಿ ಇಂದಿಗೂ ಅಚ್ಚಳಿಯದಂತಿವೆ.

ಒಂದು ದಿನ ಮುಂಜಾನೆ ನದಿಯಿಂದ ಹೊರ ಬರುವಾಗ ದಡದ ಮತ್ತೊಂದು ಬದಿಯಿಂದ ವಿಚಿತ್ರವಾದ ಸದ್ದು ಕೇಳಿ ಬಂತು. ಯಾವುದೋ ಗೊರಸಿನ ಸದ್ದು ನಮ್ಮತ್ತ ಬರುತ್ತಿತ್ತು. ನಮಗೇನೂ ಕಾಣಲಿಲ್ಲ. ನೆಲಮಟ್ಟದಲ್ಲಿದ್ದ ಪೊದರುಗಳು ಅಲ್ಲಿ ದಟ್ಟವಾಗಿದ್ದವು. ಸ್ವಲ್ಪ ಹೊತ್ತಿನಲ್ಲಿ ಹುಲ್ಲುಗಳ ನಡುವಿನಿಂದ ಜಿಂಕೆಯ ಕೊಂಬು, ಬಳಿಕ ಜಿಂಕೆಯ ತಲೆ ಗೋಚರಿಸಿತು. ಅತ್ತಿತ್ತ ನೋಡಿದ ಅದು ಚಿಮ್ಮಿ, ಓಡಿ, ನಿಂತಿತು. ಆಗ ಜಿಂಕೆ ಏದುಸಿರು ಬಿಡುತ್ತಿತು. ಮತ್ತೆ ನಿಧಾನವಾಗಿ ಓಡಲಾರಂಭಿಸಿತು. ಗಿಡಬಳ್ಳಿಗಳನ್ನು ಹಾರಿ ಇಳಿದು ಓಡುತ್ತಿದ್ದಾಗ ಅದರ ಗೊರಸುಗಳು ಒದ್ದೆಯ ನೆಲದಲ್ಲಿ ಭಾರವಾಗಿ ಇಳಿಯುತ್ತಿದ್ದ ಸದ್ದು ಕೇಳುತ್ತಿತ್ತು.

ನದಿಯ ದಡದಂಚಿನಲ್ಲಿ ಓಡಿ ಕಾಡಿನಲ್ಲಿ ಮರೆಯಾದ ಆ ಜಿಂಕೆಯನ್ನು ನಾವು ಕಂಡಿದ್ದು ಕೆಲವು ಕ್ಷಣಗಳು ಮಾತ್ರ. ಮರುಕ್ಷಣವೆ ಜಿಂಕೆ ಕಾಣಿಸಿಕೊಂಡ ಸ್ಥಳದಿಂದ ಚಲಿಸುವ ಬೆಂಕಿಯ ಚೆಂಡುಗಳಂತೆ ಏನೋ ಅವತರಿಸಿ ಮಾಯವಾಗುತ್ತಿದ್ದವು. ಆ ಕೆಂಪು ಬಣ್ಣದ ಜೀವಿಗಳು ತಮಗಿಂತ ಎತ್ತರವಿದ್ದ ಪೊದೆಗಳನ್ನು ಹಾರುತ್ತಾ ಬಂದವು. ಇಬ್ಬನಿಯಿಂದ ತೋಯ್ದಿದ್ದ ಅವು ಹೊಳೆಯುತ್ತಿದ್ದವು.

ನದಿಯ ದಡಕ್ಕೆ ಬಂದು ಏನೋ ತಪಾಸಣೆ ಮಾಡಿ, ನಮ್ಮನ್ನು ಗಮನಿಸಿ ಹಿಂದಿರುಗಿ ಕಾಡಿನಲ್ಲಿ ಮರೆಯಾದ ಜೀವಿಯೊಂದನ್ನು ನಾವು ನೋಡಿದೆವು. ನಾವು ಕಂಡಿದ್ದನ್ನೆಲ್ಲ ಒಟ್ಟುಗೂಡಿಸಿ, ಆಲೋಚಿಸಿ, ನೋಡಿದ ಬಳಿಕ ಕಾಡುನಾಯಿಗಳು ಬೇಟೆಯಲ್ಲಿರುವುದು ತಿಳಿಯಿತು. ಕಣ್ಮುಚ್ಚಿ ಕಣ್ಬಿಡುವ ಹೊತ್ತಿಗೆ ಇದೆಲ್ಲಾ ಮುಗಿದುಹೋಗಿತ್ತು. ಆದರೂ, ಇಂದಿಗೂ ಆ ಚಿತ್ರಣ ನಮ್ಮ ಮನಸ್ಸಿನಲ್ಲಿ ಮಾಸಿಲ್ಲ. ಅದು ನಮ್ಮ ನೆನಪಿನಿಂದ ಇಂದಿಗೂ ಮರೆಯಾಗಿಲ್ಲ. ಆ ಸಮಯದಲ್ಲಿ ಮೂಡಿದ ಸದ್ದುಗಳನ್ನು ಮಾತ್ರ ನಾವು ನೆನಪಿಸಿಕೊಳ್ಳಲು ಸಾಧ್ಯವಿಲ್ಲ. ಬಹುಶಃ ಆಗಿನ್ನೂ ಕಾಡಿನ ಸದ್ದುಗಳಿಗೆ ನಮ್ಮ ಕಿವಿಗಳು ಪಳಗಿರಲಿಲ್ಲ.

ಆ ದೃಶ್ಯವನ್ನೇ ಮೆಲುಕು ಹಾಕುತ್ತಾ ನಮ್ಮ ಕೊಠಡಿಗೆ ಹಿಂದಿರುಗುತ್ತಿದ್ದಾಗ ಆದಿವಾಸಿಗಳಿಬ್ಬರು ಅವಸರದಲ್ಲಿ ಎಲ್ಲಿಗೋ ಹೋಗುತ್ತಿದ್ದನ್ನು ನೋಡಿದೆವು. ಕೆಲವು ಕ್ಷಣಗಳ ನಂತರ ಫಾರೆಸ್ಟರೊಬ್ಬರು ಓಡಿ ಬರುತ್ತಿರುವುದು ಕಂಡಿತು. ಲುಂಗಿಯನ್ನು ಮೇಲೆತ್ತಿ ಕಟ್ಟುತ್ತಾ ಕತ್ತಿ ಮತ್ತು ಚೀಲ ತರುವಂತೆ ತನ್ನ ಮಗನಿಗೆ ಕೂಗಿ ಹೇಳುತ್ತ ಗಡಿಬಿಡಿಯಲ್ಲಿ ಕಾಡಿನ ಕಡೆ ಹೊರಟಿದ್ದರು. ಏನೆಂದು ಕೇಳಿದರೆ, ಕೆನ್ನಾಯಿಗಳು ಜಿಂಕೆ ಹಿಡಿದ ಶಬ್ದ ಕೇಳಿ ಬಂತೆಂದು, ಕಾಡು ಕುರುಬರಿಗಿಂತ ಮುಂಚೆ ಅಲ್ಲಿಗೆ ತಲುಪದಿದ್ದರೆ ಅನಾಹುತವಾಗುವುದೆಂದು ತಿಳಿಸಿದರು. ಏನು ಶಬ್ದ, ಏಕೆ ಇಷ್ಟೆಲ್ಲಾ ಅವಸರ ನಮಗೆ ಅರ್ಥವಾಗಲಿಲ್ಲ. ಆದರೆ ಆ ದಿನಗಳಲ್ಲಿ ನಮಗಿದ್ದ ಅಪರಿಮಿತ ಕುತೂಹಲ ಯಾವುದನ್ನೂ ನಿರ್ಲಕ್ಷಿಸಲು ಬಿಡುತ್ತಿರಲಿಲ್ಲ.

ಓಡುತ್ತಿದ್ದ ಫಾರೆಸ್ಟರ್‌ನ ಹೆಜ್ಜೆಯನ್ನು ಹಿಂಬಾಲಿಸಿದೆವು. ನಮಗಿಂತ ಎರಡು ಪಟ್ಟು ವಯಸ್ಸಾಗಿದ್ದ ಆ ದಡೂತಿ ಫಾರೆಸ್ಟರ್ ಮಗನೊಂದಿಗೆ ನದಿಯ ಬಂಡೆಗಳನ್ನು ಮಂಗಗಳಂತೆ ಹಾರುತ್ತಿದ್ದರು. ಕಾಡಿಗೆ ಬೆಂಕಿ ಬಿದ್ದಾಗಲೂ ಅವರು ಅಷ್ಟು ಅವಸರದಿಂದ ವರ್ತಿಸಿದ್ದು ನಮಗೆ ನೆನಪಿರಲಿಲ್ಲ. ವೇಗವನ್ನು ಕಾಯ್ದುಕೊಂಡು ಅವರನ್ನು ಹಿಂಬಾಲಿಸುವುದು ನಮಗೆ ಸುಲಭವಾಗಿರಲಿಲ್ಲ. ತುಸು ದೂರ ಸಾಗಿದ ಬಳಿಕ ಫಾರೆಸ್ಟರ್ ಸೇರಿದಂತೆ ಹತ್ತಾರು ಮಂದಿ ವೃತ್ತಾಕಾರದಲ್ಲಿ ನೆರೆದು, ನೆಲಕ್ಕೆ ಮುಖಮಾಡಿ ಯಾವುದೋ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು. ಅವರ ಕೆಲಸದಲ್ಲಿ ಗಡಿಬಿಡಿಯಿತ್ತು. ಅವಸರವಿತ್ತು.

ಬಳಿಕ ನಾವು ಕಂಡಿದ್ದು ಬೆಚ್ಚಿಬೀಳುವ ದೃಶ್ಯ. ಕೆಲವೇ ನಿಮಿಷಗಳಿಂದಷ್ಟೆ ನಮ್ಮ ಕಣ್ಣೆದುರಿಗೆ ಚಿಮ್ಮಿ ಮಾಯವಾಗಿದ್ದ ಜಿಂಕೆ ನೂರೆಂಟು ಚೂರುಗಳಾಗಿ ಅವರೆಲ್ಲರ ಚೀಲಗಳನ್ನು ಸೇರುತ್ತಿತ್ತು. ಇಡೀ ದೃಶ್ಯ ದಾರುಣವಾಗಿ ಕಂಡರೂ ನಾವು ಅಸಹಾಯಕರಾಗಿದ್ದೆವು. ಆದರೆ ಅಲ್ಲಿ ಜರುಗಿದ್ದೇನೆಂದು ನಮಗೆ ಸ್ಪಷ್ಟವಾಗಿ ತಿಳಿಯಲಿಲ್ಲ. ಆಗಿನ್ನೂ ನಾವು ಕಾಡುನಾಯಿಗಳನ್ನು ಅರ್ಥಮಾಡಿಕೊಂಡಿರಲಿಲ್ಲ. ಅವುಗಳ ಕತೆಯನ್ನೂ ಕೇಳಿರಲಿಲ್ಲ.

ಕೆನ್ನಾಯಿ ಅಥವ ಕಾಡುನಾಯಿಗಳು ಪಕ್ಕಾ ಕಾಡುಜೀವಿಗಳು. ನಾಚಿಕೆ ಸ್ವಭಾವದ ಅವು ಊರುಕೇರಿಗಳನ್ನು ಎಂದೂ ಪ್ರವೇಶಿಸುವುದಿಲ್ಲ. ಇವುಗಳಿಗೂ ಸಾಕುನಾಯಿಗಳಿಗೂ ಯಾವ ಸಂಬಂಧವೂ ಇಲ್ಲ. ಸಾಕುನಾಯಿಗಳು ರೂಪ ಪಡೆದದ್ದು ತೋಳಗಳಿಂದ. ದುರದೃಷ್ಟವೆಂದರೆ ಚರಿತ್ರೆಯುದ್ದಕ್ಕೂ ಕಾಡುನಾಯಿಗಳಷ್ಟು ಅಪಾರ ಕಷ್ಟನಷ್ಟಗಳನ್ನು ಅನುಭವಿಸಿದ ಜೀವಿ ಮತ್ತೊಂದಿಲ್ಲ.

ಬ್ರಿಟಿಷರು ಭಾರತಕ್ಕೆ ಕಾಲಿರಿಸಿದಾಗ ಅವುಗಳನ್ನು ನೀಚ ಜೀವಿಗಳೆಂದು ಜರಿದು, ಕ್ಷುದ್ರಜೀವಿಗಳೆಂಬ ಪಟ್ಟ ಕಟ್ಟಿದರು. ಏಕೆಂದೆರೆ ತಾವು ಬೇಟೆಯಾಡಿ ಕೊಲ್ಲಬೇಕಾದ ಜಿಂಕೆ, ಕಡವೆಗಳನ್ನು, ಕೆನ್ನಾಯಿಗಳು ತಿಂದು ಮುಗಿಸುತ್ತವೆ ಎಂಬುದು ಅವರ ಆತಂಕ. ಹಾಗಾಗಿ ಕಾಡುನಾಯಿಗಳನ್ನು ನಿರ್ನಾಮಗೊಳಿಸಬೇಕೆಂದು ಪಣತೊಟ್ಟು, ಅಧಿಕೃತ ಸರ್ಕಾರಿ ಆಜ್ಞೆಯನ್ನು ಹೊರಡಿಸಿದರು. ಕಾಡುನಾಯಿಗಳನ್ನು ಕೊಲ್ಲುವವರಿಗೆ ಬಹುಮಾನವನ್ನು ಪ್ರಕಟಿಸಿದರು. ವಸಾಹತುಶಾಹಿಗಳ ಈ ಕಾನೂನು 1972ರವರೆಗೂ ಮುಂದುವರೆದಿತ್ತು.

ಬ್ರಿಟಿಷರು ಕಾಡುನಾಯಿಗಳನ್ನು ರಕ್ತಪಿಪಾಸುಗಳೆಂದು ತೀರ್ಮಾನಿಸಿದ್ದರು. ಬಹುಶಃ ಅವುಗಳ ಬೇಟೆಯ ಶೈಲಿ ಮತ್ತು ಅವರ ಅಜ್ಞಾನ ಅದಕ್ಕೆ ಕಾರಣವಾಗಿರಬೇಕು. ಗಾತ್ರದಲ್ಲಿ ಬೀದಿನಾಯಿಗಳಷ್ಟಿರುವ ಅವುಗಳಿಗೆ ತಮಗಿಂತ ಹತ್ತಿಪತ್ತು ಪಟ್ಟು ತೂಗುವ ಜಿಂಕೆಗಳನ್ನಾಗಲಿ, ಕಡವೆಗಳನ್ನಾಗಲಿ ಸುಲಭವಾಗಿ ಬೇಟೆಯಾಡಲು ಸಾಧ್ಯವಾಗುವುದಿಲ್ಲ. ಅದಕ್ಕಾಗಿ ಗುಂಪಿನಲ್ಲಿ ಕಾರ್ಯಾಚರಣೆ ನಡೆಸುವ ತಂತ್ರ ಅವುಗಳದ್ದು. ಬೇಟೆಯ ಬೆನ್ನತ್ತಿ, ಸುತ್ತುವರಿದು, ವಿವಿಧ ದಿಕ್ಕುಗಳಿಂದ ಏಕಕಾಲದಲ್ಲಿ ಎರಗಿದಾಗ ಬೇಟೆ ಪ್ರಾಣಿಗಳು ರಕ್ತಸ್ರಾವದಿಂದ ಅಸುನೀಗುತ್ತವೆ.

ಇವುಗಳ ಬೇಟೆ ಮುಂಜಾನೆ ಅಥವ ಮುಸ್ಸಂಜೆಯ ಬೆಳಕಿನಲ್ಲಿ ಜರುಗುವುದರಿಂದ ಕೆಲವೊಮ್ಮೆ ಮನುಷ್ಯನ ಕಣ್ಣಿಗೆ ಗೋಚರಿಸುತ್ತದೆ. ಅದನ್ನು ಕಂಡ ಕಣ್ಣುಗಳಿಗೆ ಕಾಡುನಾಯಿಗಳ ಬೇಟೆ ಕ್ರೌರ್ಯದಂತೆ ಕಾಣಬಹುದು, ಅಮಾನುಷವೆನಿಸಬಹುದು. ಆದರೆ ಬದುಕುಳಿಯಲು ಅವು ಜಿಂಕೆ–ಕಡವೆಗಳನ್ನು ಬೇಟೆಯಾಡಲೇ ಬೇಕು. ಅದು ಅವುಗಳ ಆಹಾರಕ್ರಮ ಅಷ್ಟೆ.

ಹುಲಿ–ಚಿರತೆಗಳು ಸಹ ಬೇಟೆಯಾಡಿ ಬದುಕುತ್ತವೆ. ಆದರೆ ಅವುಗಳ ಬೇಟೆ ಜರುಗುವುದು ಕತ್ತಲಲ್ಲಿ. ಹಾಗಾಗಿ ಅದು ಹೆಚ್ಚಾಗಿ ಮನುಷ್ಯರ ಗಮನಕ್ಕೆ ಬರುವುದಿಲ್ಲ. ಅಲ್ಲದೆ ಬೇಟೆಯನ್ನು ಕೊಲ್ಲಲು ಹುಲಿ, ಚಿರತೆ, ಕಾಡುನಾಯಿಗಳು ತೆಗೆದುಕೊಳ್ಳುವ ಸಮಯ ಹೆಚ್ಚು ಕಡಿಮೆ ಒಂದೇ ಆಗಿರುತ್ತದೆ.
ಈ ವಾದಗಳು ಏನೇ ಇರಲಿ, ನಿಸರ್ಗದಲ್ಲಿ ಬದುಕುಳಿಯುವ ನಿಯಮದಲ್ಲಿ ಕೌರ್ಯ, ತಂತ್ರ, ಅಪರಾಧಗಳೆಂಬ ಪದಗಳಿಗೆ ಅಸ್ತಿತ್ವವೇ ಇರುವುದಿಲ್ಲ. ಸಾವು... ಸಾವಷ್ಟೆ. ಸಾವಿನಲ್ಲಿ ಸುಖ ಅಥವಾ ಸೌಂದರ್ಯಗಳಿರುವುದಿಲ್ಲ. ಚಿಗುರೊಡೆದ ಬಳ್ಳಿಗಳನ್ನೊ, ಮೊಳೆತ ಕಾಳುಗಳನ್ನೊ ಕತ್ತರಿಸಿದಾಗ ಅವುಗಳಿಗೆ ಖಂಡಿತವಾಗಿ ಹಿತವೆನಿಸುವುದಿಲ್ಲ. ಮೊಳೆಯುವ ಕಾಳಿಗೂ ಭವಿಷ್ಯದ ಕನಸುಗಳಿರುತ್ತವೆ.

ಬೆಳೆದು, ಇನ್ನಷ್ಟು ಕಾಳುಗಳನ್ನು ಭೂಮಿಗೆ ಚೆಲ್ಲಿ ಸಸಿಗಳನ್ನು ಹೆರಬೇಕೆಂಬ ಬಯಕೆ ಇದ್ದೇ ಇರುತ್ತದೆ. ಚಿಗುರು, ಬಳ್ಳಿಗಳೂ ಹೂ ಬಿಟ್ಟು ಬೀಜಗಳನ್ನು ಉತ್ಪಾದಿಸುವ ಕನಸನ್ನು ಹೊಂದಿರುತ್ತವೆ. ಸಂತತಿ ಮುಂದುವರೆಸುವುದು ಎಲ್ಲಾ ಜೀವಿಗಳ ಬದುಕಿನ ಅಂತಿಮ ಗುರಿಯಾಗಿರುತ್ತದೆ. ಹಾಗಾಗಿ ಪ್ರಕೃತಿಯಲ್ಲಿ ಕ್ರೌರ್ಯ, ಕಪಟ, ಮೋಸಗಳೆಂಬ ಅನುಬಂಧಗಳಿರುವುದಿಲ್ಲ. ಅವುಗಳೇನಿದ್ದರೂ ಮಾನವ ಸಮಾಜಕ್ಕೆ ಸೀಮಿತವಾದ, ಭಾವನೆಗಳನ್ನು ಉತ್ತೇಜಿಸುವ ಪದಪುಂಜಗಳು. ಕಾಳುಗಳಾಗಲಿ, ಬಳ್ಳಿಗಳಾಗಲಿ ಬಾಣಲೆಯಲ್ಲಿ ಬೆಂದು ಮಾನವನನ್ನು ಸಂತೃಪ್ತಿಗೊಳಿಸಲು ಅರಳಿದ ಜೀವಿಗಳಲ್ಲ.

ಗಿಡಮರಗಳಿಗೆಲ್ಲ ಸಂವೇದನಾವಾಹಕ ಗುಣಗಳಿರುತ್ತವೆ. ನೆರೆಯ ಕುಲಬಾಂಧವರು ಎದುರಿಸುತ್ತಿರುವ ಚಾಕು–ಚೂರಿಗಳ ಆಕ್ರಮಣವನ್ನು ಗ್ರಹಿಸುತ್ತವೆ. ಅಪಾಯಗಳು ತನ್ನತ್ತ ಬರುತ್ತಿರುವುದು ಖಚಿತವಾಗುತ್ತಿದ್ದಂತೆ ಚಡಪಡಿಸುತ್ತವೆ. ಇದೆಲ್ಲ ಇತ್ತೀಚಿನ ವಿಜ್ಞಾನ ಕಂಡುಕೊಳ್ಳುತ್ತಿರುವ ಹೊಸ ಅಧ್ಯಾಯ. ಈ ಹಿನ್ನೆಲೆಯಲ್ಲಿ ನಮ್ಮ ಜ್ಞಾನದ ವ್ಯಾಪ್ತಿ, ಯಾತನೆ, ಪರಿತಾಪ, ತಳಮಳಗಳೆಂಬ ಪದಗಳ ಅರ್ಥಗಳನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ವ್ಯಾಖ್ಯಾನಿಸಲು ಸಾಧ್ಯ.

ಇಷ್ಟಲ್ಲದೆ, ಕಾಡುನಾಯಿಗಳು ಕಷ್ಟಪಟ್ಟು ಶ್ರಮಿಸಿ ಸಂಪಾದಿಸಿದ ಆಹಾರವನ್ನು ಕಾಡಿನಲ್ಲಿ, ಕಾಡಿನಂಚಿನಲ್ಲಿ ನೆಲೆಸಿರುವ ಜನ ಕದ್ದೊಯ್ಯುವುದು ಯುಗಯುಗಾಂತರಗಳಿಂದ ಎಲ್ಲೆಡೆ ನಡೆದುಬಂದಿರುವ ಪದ್ಧತಿ.

ಇದೇನೆ ಇರಲಿ, ಬ್ರಿಟಿಷರು ಇಂಗ್ಲೆಂಡಿಗೆ ಮರಳಿದ ಬಳಿಕವೂ ಕಾಡುನಾಯಿಗಳ ಮಾರಣಹೋಮ ಮುಂದುವರೆದಿತ್ತು. ಸತ್ಯಶೋಧನೆಗೆ ಯಾರೂ ಮುಂದಾಗಲಿಲ್ಲ. ಜನರಾಡುವ ಮಾತೆ ವಿಜ್ಞಾನವಾಗಿ ಉಳಿಯಿತು. ಹುಲಿಗಳ ಉಳಿವಿಗೆ ಕಾಡುನಾಯಿಗಳು ಮಾರಕವೆಂದು ವಿಜ್ಞಾನಿಗಳು, ಅರಣ್ಯ ಇಲಾಖೆಯ ಅಧಿಕಾರಿಗಳು ಖಚಿತವಾಗಿ ನಂಬಿದ್ದರು. ಹುಲಿ, ಚಿರತೆ, ಕಾಡುನಾಯಿಗಳೆಲ್ಲ, ಜೀವಪರಿಸರದಲ್ಲಿ ಜೊತೆಜೊತೆಯಾಗಿ ಉದಯಿಸಿದ ಜೀವಿಗಳೆಂಬ ಸಣ್ಣಸಂಗತಿ ಯಾರಿಗೂ ತಿಳಿಯಲೇ ಇಲ್ಲ. ಈ ಎಲ್ಲಾ ಘಟನೆಗಳು ಅಪರಾಧವೆಸಗದ ಜೀವಿಯೊಂದನ್ನು ವಿನಾಶದ ಅಂಚಿಗೆ ತಂದು ನಿಲ್ಲಿಸಿದವು.

ಕಾಡುನಾಯಿಗಳ ಚರಿತ್ರೆಯನ್ನು ಹೇಳುವ ಆವೇಶದಲ್ಲಿ ಮೋಯಾರ್ ನದಿಯ ಬಳಿ ನಡೆದಿದ್ದ ಘಟನೆ ಅರ್ಧಕ್ಕೆ ನಿಂತುಹೋಯಿತು. ಮಾಂಸದ ತುಂಡುಗಳನ್ನೆಲ್ಲ ಚೀಲಕ್ಕೆ ತುಂಬಿಕೊಂಡವರ ನಡುವೆ ಅಸಮಾಧಾನಗಳಿದ್ದವು. ಅವುಗಳನ್ನೆಲ್ಲ ಬಗೆಹರಿಸಿಕೊಂಡ ಗುಂಪು ವಿಜಯೋತ್ಸವದಿಂದ ತಮ್ಮ ತಮ್ಮ ಮನೆಗಳತ್ತ ಸಾಗಿತ್ತು. ಅಲ್ಲೇ ಉಳಿದ ನಾವು ಆತಂಕದಿಂದ ಮರದ ಬದಿಯಲ್ಲೆ ನಿಂತೆವು.

ಸ್ವಲ್ಪ ಹೊತ್ತಿನಲ್ಲಿ ಪೊದರಿನ ಮರೆಯಿಂದ ಏನೋ ಸರಿದಂತಾಯಿತು. ನಾವು ಅಲುಗಾಡದೆ ನಿಂತೆವು. ಹುಲ್ಲಿನೊಳಗಿನಿಂದ ಒಂದು ಕೆನ್ನಾಯಿ ಹೊರಬಂತು. ನಂತರ ಇನ್ನೊಂದು... ಆನಂತರ ಮತ್ತೊಂದು, ಹುಲ್ಲಿನಿಂದ ಹೊರಬಂದವು. ಏಳೆಂಟು ಕಾಡುನಾಯಿಗಳು ಬೇರೆ ಬೇರೆ ದಿಕ್ಕಿನಿಂದ ಪ್ರತ್ಯಕ್ಷಗೊಂಡವು. ಅತ್ತಿತ್ತ ನೋಡುತ್ತ ದಟ್ಟವಾಗಿ ಹರಡಿದ್ದ ಮನುಷ್ಯನ ವಾಸನೆಯನ್ನು ಗ್ರಹಿಸುತ್ತಾ ನಿಂತವು. ಅವುಗಳ ಮುಖದಲ್ಲಿ ಭಯವಿತ್ತು, ಆತಂಕವಿತ್ತು. ಗೊಂದಲಕ್ಕೆ ಸಿಕ್ಕಿದಂತೆ ಸರಸರನೆ ಅತ್ತಿತ್ತ ಓಡಾಡಲಾರಂಭಿಸಿದವು. ಜಿಂಕೆ ಹಿಡಿದಿದ್ದ ಸ್ಥಳದಲ್ಲಿ ನಿಂತು ಚಡಪಡಿಸಿದವು. ಐವತ್ತು ಮೀಟರ್ ದೂರದಲ್ಲಿ ಮರೆಯಲ್ಲಿ ನಿಂತು ಎಲ್ಲವನ್ನು ಗಮನಿಸುತ್ತಿದ್ದ ನಮ್ಮನ್ನು ಅವು ನೋಡಿರಲಿಲ್ಲ.

ಅಲ್ಲಿ ಏನು ನಡೆಯುತ್ತಿದೆ ಎಂದು ನಮಗಿನ್ನೂ ಸಂಪೂರ್ಣವಾಗಿ ಅರ್ಥವಾಗಿರಲಿಲ್ಲ. ಕೆನ್ನಾಯಿಗಳನ್ನು ನೋಡುತ್ತಾ ಕಲ್ಲಿನಂತೆ ಅಡಗಿ ನಿಂತಿದ್ದ ನಮಗೆ, ನಮ್ಮ ಎಡಭಾಗದ ಹುಲ್ಲಿನಲ್ಲಿ ಏನೋ ಚಲಿಸಿದ ಅನುಭವವಾಯಿತು.

ನಂತರ ಕೆಲವೇ ಕ್ಷಣಗಳಲ್ಲಿ ಆರು ಏಳು ಪುಟ್ಟ ಕಾಡುನಾಯಿಮರಿಗಳು ಹುಲ್ಲೊಳಗಿಂದ ಹೊರಬಂದವು. ಅವುಗಳು ಬಹಳ ಹಸಿದಿದ್ದಂತೆ ಕಾಣುತ್ತಿದ್ದವು. ಇದ್ದಕ್ಕಿದ್ದಂತೆ ಓಡಿ, ಇದ್ದಕ್ಕಿದ್ದಂತೆ ನಿಲ್ಲುತ್ತಿದ್ದ ಆ ಚಿಕ್ಕ ಮರಿಗಳು ಹುಲ್ಲಿನಲ್ಲಿ ಎಡವಿ ಮತ್ತೆ ಎದ್ದು ಮಾಂಸದ ವಾಸನೆ ಹಿಡಿದು ಓಡಾಡುತ್ತಿದ್ದವು. ತಮ್ಮ ಊಟ ಕಳುವಾಗಿರುವುದು ಅವುಗಳಿಗೆ ತಿಳಿದಿರಲಿಲ್ಲ. ತಾಯಿ ಕೂಡ ಅವುಗಳೊಂದಿಗಿತ್ತು.

ಅದು ಬಂದ ತಕ್ಷಣ ನೇರವಾಗಿ ಜಿಂಕೆ ಮಾಂಸವನ್ನು ಮನುಷ್ಯರು ಹಂಚಿಕೊಂಡ ಜಾಗಕ್ಕೆ ಹೋಯಿತು. ಅದರ ಹೊಟ್ಟೆ ಚಪ್ಪಟ್ಟೆಯಾಗಿದ್ದು, ಅದು ಏನನ್ನೂ ತಿಂದಿರಲಿಲ್ಲ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಬಹುಶಃ ಜನರು ಬಂದು ಕಾಡುನಾಯಿಗಳನ್ನು ಓಡಿಸಿ, ಜಿಂಕೆಯ ಮಾಂಸವನ್ನು ಕಸಿದುಕೊಂಡಿರಬಹುದು, ಈ ನಾಯಿಗಳು ಕಳ್ಳರನ್ನು ನೋಡಿರಬಹುದೆಂದು ನಾವೆಣಿಸಿದ್ದೆವು.

ಆದರೆ ದಶಕಗಳ ಕಾಲ ಕಾಡುನಾಯಿಗಳನ್ನು ಹಿಂಬಾಲಿಸಿದ ನಂತರ, ಅಂದು ಮೊಯಾರ್ ನದಿಯ ದಡದಲ್ಲಿ ಜರುಗಿದ್ದೇನೆಂಬುದು ಸ್ಪಷ್ಟವಾಗಿ ಅರಿವಾಯಿತು. ಆಹಾರ ಸಂಪಾದಿಸಿದಾಗ ಸಣ್ಣಮರಿಗಳಿಗೆ ಮೊದಲ ಆದ್ಯತೆ ನೀಡುವುದು ಕಾಡುನಾಯಿಗಳ ಸಂಸ್ಕೃತಿ. ಅವು ಸಂತೃಪ್ತಿಗೊಂಡ ಬಳಿಕವೇ ಗುಂಪಿನ ಉಳಿದ ಸದಸ್ಯರ ಊಟ. ಅವುಗಳ ಸಮಾಜದಲ್ಲಿ ಇದೊಂದು ಕಟ್ಟುನಿಟ್ಟಿನ ಸಂಪ್ರದಾಯ.

ಅಂದು ಜಿಂಕೆಯನ್ನು ಬೇಟೆಯಾಡಿದ್ದ ಕಾಡುನಾಯಿಗಳು ದೂರದಲ್ಲಿದ್ದ ಗುಂಪು ಹಾಗೂ ಅಡಗಿಸಿಟ್ಟಿದ್ದ ಮರಿಗಳನ್ನು ಕರೆತರಲು ಹೋಗಿವೆ. ಅದೇ ಸಮಯದಲ್ಲಿ ಬಂದ ಜನ ಅವುಗಳು ಶಿಕಾರಿ ಮಾಡಿ ಸಂಪಾದಿಸಿದ್ದ ಆಹಾರವನ್ನು ಕದ್ದು ಸಾಗಿಸಿದ್ದಾರೆ. ಹಾಗಾಗಿ ನಾಯಿಗಳಿಗೆ ತಮ್ಮ ಆಹಾರ ಎಲ್ಲಿ ಹೋಯಿತು? ಕದ್ದವರಾರು? ಎಂದು ತಿಳಿದಿರಲಿಲ್ಲ. ನಂತರದ ದೃಶ್ಯ ಮನ ಕರಗುವಂತಿತ್ತು.

ಅವ್ವನ ಬಾಯೊಳಗೆ ನಾಲಿಗೆ ಚಾಚಿ ಮರಿಗಳು ಆಹಾರಕ್ಕಾಗಿ ಬೇಡುತ್ತಿದ್ದವು. ಕೊಡಲು ಅವಳ ಬಳಿ ಏನೂ ಇರಲಿಲ್ಲ. ಹಸಿದು ಹಣ್ಣಾಗಿದ್ದ ಗುಂಪು ನಿರಾಶೆಗೊಂಡಿತ್ತು. ಆಗ ಏನನ್ನೋ ಹುಡುಕುತ್ತ ನಾಯೊಂದು ನಮಗೆ ತೀರ ಸನಿಹ ಬಂದು ನಮ್ಮನ್ನು ಗಮನಿಸಿ, ಬೆಚ್ಚಿ, ತಕ್ಷಣ ಅಪಾಯದ ಸೂಚನೆಯನ್ನು ಎಲ್ಲರಿಗೂ ಸಾರಿ ಹೇಳಿತು.

ಮರಿಗಳು ಸೇರಿದಂತೆ ಗುಂಪಿನ ಎಲ್ಲಾ ನಾಯಿಗಳು ಒಟ್ಟಿಗೆ, ನೇರವಾಗಿ ನಮ್ಮತ್ತ ನೋಡಿದವು. ‘ನಾವು ಕಳ್ಳರಲ್ಲ, ನಿಮ್ಮ ಆಹಾರವನ್ನು ನಾವು ಕದ್ದಿಲ್ಲ’ ಎಂದು ಅವುಗಳಿಗೆ ಮನದಟ್ಟುಮಾಡಿಕೊಡಲು ಅಂದು ಸಾಧ್ಯವೇ ಇರಲಿಲ್ಲ. ಇಂದಿಗೂ ಸಾಧ್ಯವಾಗಿಲ್ಲ. ಹಸಿದಿದ್ದ ಮರಿಗಳ ಹತಾಶೆ ತುಂಬಿದ ಕಣ್ಣುಗಳು ನಮ್ಮನ್ನು ಇಂದಿಗೂ ಕಾಡುತ್ತವೆ.

ಅವು, ತಮ್ಮ ಮೇಲೆ ಇತಿಹಾಸದುದ್ದಕ್ಕೂ ಮಾನವ ಎಸಗುತ್ತಾ ಬಂದಿರುವ ಪ್ರತಿಯೊಂದು ಪಾಶವಿಕ ಕೃತ್ಯಗಳಿಗೂ ನಮ್ಮನ್ನೇ ಹೊಣೆಗಾರರನ್ನಾಗಿ ಮಾಡಿದಂತೆ ಕಾಣಿಸುತ್ತವೆ. ಅಲ್ಲಿಂದಾಚೆಗೆ ನಮಗೆ ಹೆಚ್ಚು ಆಯ್ಕೆಗಳಿರಲಿಲ್ಲ. ಈ ಪೆಡಂಭೂತಗಳ ವಕ್ತಾರರಾಗಿ, ವಕಾಲತ್ತುದಾರರಾಗಿ ಅರ್ಧ ಜೀವನವನ್ನೇ ಕಳೆದೆವು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT