ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೇಚಿಗೆ ಸಿಕ್ಕಿಸುವ ಅಧಿಕಾರಿಗಳು

Last Updated 18 ಜೂನ್ 2011, 19:30 IST
ಅಕ್ಷರ ಗಾತ್ರ

ಹಿರಿಯ ಅಧಿಕಾರಿಯೊಬ್ಬರಿಗೆ ಸಂಸಾರ ಸಮೇತ ಸಿನಿಮಾ ನೋಡುವ ಬಯಕೆಯಾಯಿತು. ಅವರು ಬಹಳ ಒಳ್ಳೆಯ ಅಧಿಕಾರಿಯಾಗಿದ್ದರು. ಬೆಂಗಳೂರಿನ ಅಭಿನಯ್ ಚಿತ್ರಮಂದಿರದಲ್ಲಿ ಸಿನಿಮಾ ನೋಡಲು ಹೋದರು. ನಾನಾಗ ಉಪ್ಪಾರಪೇಟೆ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದೆ. ಸಿನಿಮಾದ ಇಂಟರ್ವಲ್ ಮುಗಿದಿತ್ತು. ಆ ಹೊತ್ತಿನಲ್ಲಿ ನಮ್ಮ ಠಾಣೆಗೆ ಮೆಸೇಜ್ ಬಂತು. ನಾನು ಅಲ್ಲಿಗೆ ಹೋಗಿ ಆ ಅಧಿಕಾರಿಯನ್ನು ಕಾಣಬೇಕಂತೆ ಎಂದರು. ಏನಾಯಿತೋ ಎಂದು ನಾನು ಯೋಚಿಸುತ್ತಲೇ ಸಿಬ್ಬಂದಿ ಜೊತೆ ಅಲ್ಲಿಗೆ ಹೋದೆ. `ಯಾರೋ ಕಿಡಿಗೇಡಿಗಳು ಥಿಯೇಟರ್‌ನಲ್ಲಿ ಕುಡಿದು ಅಸಭ್ಯವಾಗಿ ವರ್ತಿಸುತ್ತಿದ್ದಾರೆ. ಅವರನ್ನು ವಿಚಾರಿಸಿಕೊಳ್ಳಿ~ ಎಂದು ಅವರು ಸೂಚಿಸಿದರು.

ಆ ಅಧಿಕಾರಿಯ ಕುಟುಂಬ ಕೂತಿದ್ದ ಸಾಲಿನ ಮುಂಬದಿಯಲ್ಲಿದ್ದ ಇಬ್ಬರು ಬಿಯರ್ ಕುಡಿಯುತ್ತಾ ಗಲಾಟೆ ಮಾಡುತ್ತಿದ್ದರು. ತಮ್ಮ ಲೋಕದಲ್ಲೇ ಇದ್ದ ಅವರಿಗೆ ಅಕ್ಕಪಕ್ಕದಲ್ಲಿ ಸಿನಿಮಾ ನೋಡುತ್ತಿದ್ದವರ ಕಷ್ಟ ಅರ್ಥವಾಗುವಂತಿರಲಿಲ್ಲ. ಯಾಕೆ ಹೀಗೆ ಮಾಡುತ್ತಿದ್ದೀರಿ ಎಂದು ಕೇಳಿದೆ. `ನೀನ್ಯಾರು ಕೇಳೋಕೆ. ಬೆಂಗಳೂರಿನಲ್ಲಿ ಬಿಯರ್ ಕುಡಿಯಲು ನಿಷೇಧ ಇದೆಯೇ~ ಎಂದು ನನಗೇ ಪ್ರಶ್ನೆ ಹಾಕಿದ. ಸಾರ್ವಜನಿಕ ಸ್ಥಳದಲ್ಲಿ ಜನರಿಗೆ ಕಿರಿಕಿರಿ ಉಂಟುಮಾಡುವುದೂ ಅಪರಾಧವೇ ಹೌದೆಂಬುದನ್ನು ಕೂಗಾಡಲು ಬಂದವನಿಗೆ ಮನವರಿಕೆ ಮಾಡಿಸಲು ಯತ್ನಿಸಿದೆ. ಅವನು ಅಷ್ಟಕ್ಕೆ ಸುಮ್ಮನಾಗಲಿಲ್ಲ.

`ದಿಸ್ ಈಸ್ ವಯಲೇಷನ್ ಆಫ್ ಹ್ಯೂಮನ್ ರೈಟ್ಸ್ ಟು ದಿ ಕೋರ್~  (ಮಾನವೀಯ ಹಕ್ಕುಗಳ ಮೂಲಕ್ಕೇ ಪೆಟ್ಟುಕೊಟ್ಟಿದ್ದೀರಿ) ಎಂದಾಗ ನನಗೆ ಅಚ್ಚರಿ. ಜನ ಸಿನಿಮಾ ನೋಡುವ ಸ್ಥಳದಲ್ಲಿ ಬಿಯರ್ ಕುಡಿದು ಅಸಭ್ಯವಾಗಿ ವರ್ತಿಸುವುದನ್ನು ಪ್ರಶ್ನಿಸಿದರೆ, ಮಾನವ ಹಕ್ಕುಗಳ ಉಲ್ಲಂಘನೆ ಹೇಗಾದೀತು ಎಂಬುದು ನನ್ನ ಚಿಂತೆ. ಅಲ್ಲಿದ್ದ ಇಬ್ಬರಲ್ಲಿ ಹೆಚ್ಚು ಮಾತನಾಡುತ್ತಿದ್ದವನು ಇಂಗ್ಲೆಂಡ್ ಪೌರತ್ವ ಪಡೆದಿದ್ದ. ಹಾಗಾಗಿ ಅವನನ್ನು ಪ್ರಶ್ನಿಸುವುದಿದ್ದರೆ ರಾಯಭಾರಿ ಕಚೇರಿಗೆ ಮೊದಲು ತಿಳಿಸಬೇಕೆಂಬುದು ಅವನ ವಾದ. ಅವನು ನಿಂತಲ್ಲೇ `ಅರೆಸ್ಟ್ ಚೆಕ್‌ಲಿಸ್ಟ್~ ಕೊಡಬೇಕೆಂದು ಪಟ್ಟುಹಿಡಿದ.

ನಮ್ಮಲ್ಲಿ ಅದನ್ನು ಬರೆದುಕೊಡುವ ವ್ಯವಸ್ಥೆ ಇದೆ. ಅಂತೆಯೇ ನಾನು ಅಲ್ಲೇ ಬರೆದುಕೊಟ್ಟೆ. ಕರ್ನಾಟಕ ಪೊಲೀಸ್ ಕಾಯ್ದೆ- `92  ಓ ಅಂಡ್ ಪಿ~- ಪ್ರಕಾರ ಸಾರ್ವಜನಿಕ ಸ್ಥಳದಲ್ಲಿ ಕುಡಿದು ಅಸಭ್ಯವಾಗಿ ವರ್ತಿಸಿರುವುದರಿಂದ ದಸ್ತಗಿರಿ ಮಾಡಬಹುದು ಎಂಬುದನ್ನು ತಿಳಿಸಿದೆ. ಅವನು ಪ್ರಿಂಟ್ ಮಾಡಿದ ಅರೆಸ್ಟ್ ಚೆಕ್‌ಲಿಸ್ಟೇ ಬೇಕೆಂದು ಇನ್ನೊಂದು ತಗಾದೆ ತೆಗೆದ. ನಮ್ಮಲ್ಲಿ ಆ ವ್ಯವಸ್ಥೆಯೇ ಇಲ್ಲವೆಂಬುದನ್ನು ಸ್ಪಷ್ಟಪಡಿಸಿದರೂ ಅವನು ಜಗ್ಗಲಿಲ್ಲ. ಅವನನ್ನು ದಸ್ತಗಿರಿ ಮಾಡಿ, ರಾಯಭಾರಿ ಕಚೇರಿಗೂ ವಿಷಯ ತಿಳಿಸಿದರಾಯಿತು ಎಂದುಕೊಂಡೆ.

ಅಷ್ಟರಲ್ಲಿ ಸಿನಿಮಾ ನೋಡುತ್ತಿದ್ದ ಅಧಿಕಾರಿ ಫೋನ್ ಮಾಡಿ ಏನಾಯಿತೆಂದು ವಿಚಾರಿಸಿದರು. ನಾನು ಜಿಗಣೆಯಂತೆ ಅವನು ಅಂಟಿಕೊಂಡಿರುವ ವಿಷಯ ಹೇಳಿದೆ. ಹೇಗಾದರೂ ಮಾಡಿ, ಅವನನ್ನು ಸಾಗಹಾಕುವಂತೆ ಹೇಳಿ ಅವರು ಕೈತೊಳೆದುಕೊಂಡರು. ಆ ಎನ್‌ಆರ್‌ಐ ಜೊತೆಯಲ್ಲಿ ಬೆಂಗಳೂರಿನವನೇ ಆದ ಇನ್ನೊಬ್ಬನಿದ್ದ. ಪೊಲೀಸರನ್ನು ಹೀಗೆ ಗೋಳು ಹೊಯ್ದುಕೊಂಡರೆ ಮುಂದೆ ತನಗೆ ಕಷ್ಟವಾದೀತು ಎಂಬುದು ಅವನ ಭಾವನೆ. ಗೆಳೆಯನನ್ನು ಸುಮ್ಮನಾಗುವಂತೆ ಓಲೈಸಲು ಅವನೂ ಯತ್ನಿಸಿದ. ಕೊನೆಗೆ ಅವರಿಬ್ಬರಿಗೂ ನೋಟಿಸ್ ಕೊಟ್ಟು, ಮಾಡಿದ ತಪ್ಪಿಗೆ ದಂಡ ಕಟ್ಟುವಂತೆ ಹೇಳಿ ಕಳುಹಿಸಿದೆ.

ಅಧಿಕಾರಿಯೊಬ್ಬರು ಸಿನಿಮಾ ನೋಡಲು ಹೋದ ಏಕೈಕ ಕಾರಣಕ್ಕೆ ಇಂಥ ಉಸಾಬರಿಯೊಂದು ನನ್ನ ತಲೆಯ ಮೇಲೆ ಬಿದ್ದಿತ್ತು.
* * *
ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ಕಾಲ. ಉಪ್ಪಾರಪೇಟೆ ಸರಹದ್ದಿನ ಹೋಟೆಲ್ ಒಂದರಲ್ಲಿ ಮಹಿಳೆಯೊಬ್ಬರು ನಾಲ್ಕು ವರ್ಷದಿಂದ ಠಿಕಾಣಿ ಹೂಡಿದ್ದರು. ಅಲ್ಲಿಂದ ಜಾಗ ಖಾಲಿ ಮಾಡಿಸುವುದೇ ಹೋಟೆಲ್‌ನವರಿಗೆ ತಲೆನೋವಾಗಿತ್ತು. ತಾನು ರಾಜಕೀಯ ಪಕ್ಷವೊಂದರ ರಾಜ್ಯ ಮಟ್ಟದ ಪ್ರಧಾನ ಕಾರ್ಯದರ್ಶಿ ಎಂದೂ ತನಗೆ ಮುಖ್ಯಮಂತ್ರಿ ಸೇರಿದಂತೆ ಎಲ್ಲಾ ಮಂತ್ರಿಗಳೂ ಗೊತ್ತೆಂದೂ ಹೆದರಿಸುತ್ತಿದ್ದರು.

ಹೋಟೆಲ್‌ನ ಮಾಲೀಕರು ಒಬ್ಬ ವೈದ್ಯ. ಅವರು ತುಂಬಾ ಮೆತುವು. ಹಾಗಾಗಿ ಈ ಮಹಿಳೆ ಅಲ್ಲಿಂದ ಜಾಗ ಖಾಲಿ ಮಾಡಿಸುವುದು ಕಷ್ಟವಾಯಿತು. `ರೆಂಟ್ ಕಂಟ್ರೋಲ್ ಆಕ್ಟ್~ ಪ್ರಕಾರ ಕೇಸು ದಾಖಲಿಸಿ, ಖಾಲಿ ಮಾಡುವಂತೆ ನೋಟಿಸ್ ಕೂಡ ಕೊಡಿಸಿದರು. ಡಿ.ಸಿ. ಮೇಲೆ ಒತ್ತಡ ತಂದು, ಆ ಮಹಿಳೆ ಅದಕ್ಕೂ ತಡೆಯಾಜ್ಞೆ ತಂದರು.

ಹೋಟೆಲ್‌ನವರಿಗೆ ಕಾಟ ತಡೆಯಲಾಗಲಿಲ್ಲ. ಆ ಮಹಿಳೆ ಇದ್ದ ಕೋಣೆಗೆ ನೀರು, ವಿದ್ಯುಚ್ಛಕ್ತಿ ಲಭ್ಯವಾಗದಂತೆ ಮಾಡಿದರು. ಹಾಗೆ ಮಾಡಿದರೆ ಬಾಡಿಗೆ ಕಟ್ಟಿಯಾರು ಎಂಬುದು ಹೋಟೆಲ್ ಮಾಲೀಕರ ಯೋಚನೆಯಾಗಿತ್ತು. ಆದರೆ, ಅವರ ಎಣಿಕೆ ಸುಳ್ಳಾಯಿತು. ತಾನು ಪರಿಶಿಷ್ಟ ವರ್ಗದವಳು ಎಂಬ ಕಾರಣಕ್ಕೆ ತನ್ನ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ ಎಂದು ನಮ್ಮ ಠಾಣೆಗೆ ಬಂದು ದೂರು ಕೊಟ್ಟರು. ಅಷ್ಟು ವರ್ಷಗಳಿಂದ ಬಾಡಿಗೆ ಕಟ್ಟದೇ ಇರುವುದು ತಪ್ಪಲ್ಲವೇ ಎಂದು ನಾನು ಬುದ್ಧಿಹೇಳಿದೆ. ಅದನ್ನು ಅವರು ಕಿವಿಮೇಲೆ ಹಾಕಿಕೊಳ್ಳಲಿಲ್ಲ. ನನ್ನ ವಿರುದ್ಧವೂ ದೂರು ದಾಖಲಿಸುವುದಾಗಿ ಬೆದರಿಕೆಯೊಡ್ಡಲು ಬಂದರು. ಎಸ್.ಪಿ.ನಾಯಕ್ ಎಂಬ ಎಸಿಪಿ ತನಿಖೆ ಪ್ರಾರಂಭಿಸಿದರು. ಆ ಮಹಿಳೆ ಯಾವ ಊರಿಗೆ ಸೇರಿದ್ದರೋ ಅಲ್ಲಿಗೆ ಸಂಬಂಧಪಟ್ಟ ತಹಸೀಲ್ದಾರ್ ಬಳಿ ಜಾತಿ ದಾಖಲೆಗಳು ಇರುತ್ತವೆ. ಅವರಿಗೆ ಎಸಿಪಿ ಪತ್ರ ಬರೆದು, ಆ ಮಹಿಳೆ ನಿಜಕ್ಕೂ ಪರಿಶಿಷ್ಟ ವರ್ಗದವರು ಹೌದೇ ಎಂದು ಕೇಳಿದರು. ತಹಸೀಲ್ದಾರರು `ಇಲ್ಲ~ ಎಂದು ಉತ್ತರಿಸಿದರು. ಸುಳ್ಳು ಜಾತಿ ಹೇಳಿಕೊಂಡು ದಬ್ಬಾಳಿಕೆ ಮಾಡುತ್ತಿದ್ದಾರೆಂದು ಆ ಮಹಿಳೆಯ ವಿರುದ್ಧವೇ ಕೇಸು ದಾಖಲಿಸಿಕೊಳ್ಳುವ ಸಾಧ್ಯತೆಯ ಬಗ್ಗೆ ಎಸಿಪಿ ಯೋಚಿಸುತ್ತಿದ್ದರು. ಅಷ್ಟರಲ್ಲೇ ರಾಜಕೀಯ ಒತ್ತಡ ತಂದು, ಅದೇ ತಹಸೀಲ್ದಾರರಿಂದ ಇನ್ನೊಂದು ಜಾತಿ ಪ್ರಮಾಣ ಪತ್ರವನ್ನು ಆ ಮಹಿಳೆ ಕಳುಹಿಸಿದರು.
ಅಷ್ಟಕ್ಕೇ ಸುಮ್ಮನಾಗದೆ, `ನೀರು ಹಾಗೂ ವಿದ್ಯುತ್ ಕೊಡದೇ ಇರುವ ಮೂಲಕ ಕೆಳಜಾತಿಯವಳಾದ ನನ್ನ ಮೇಲೆ ಶೋಷಣೆ ನಡೆಸಿದ್ದಾರೆ. ಇದು ಪರಿಶಿಷ್ಟ ಜಾತಿ/ವರ್ಗದವರಿಗೆ ಸಂಬಂಧಿಸಿದಂತೆ ಇರುವ ಕಾಯ್ದೆಯ ಉಲ್ಲಂಘನೆಯಾಗಿದೆ~ ಎಂದು ಇನ್ನೊಂದು ದೂರನ್ನು ಆ ಮಹಿಳೆ ದಾಖಲಿಸಿದರು. ಇದು ಅನ್ಯಾಯ ಎಂದು ನಾನು ಎಷ್ಟೇ ಹೇಳಿದರೂ ಆ ಮಹಿಳೆ ತಮ್ಮ ಭಂಡತನವನ್ನು ಬಿಡಲೇ ಇಲ್ಲ. ಹಿರಿಯ ಅಧಿಕಾರಿಯೊಬ್ಬರು ನನ್ನನ್ನು ಕರೆದರು. `ಏನ್ರೀ, ಆ ಮಹಿಳೆ ಸಮಸ್ಯೆ ಬಗೆಹರಿಸಿ ಎಂದರೆ ಬುದ್ಧಿ ಹೇಳುತ್ತಿದ್ದೀರಂತೆ~ ಎಂದು ಕೇಳಿದರು. ನಾನು ನಡೆದಿರುವ ಸತ್ಯವನ್ನು ತಿಳಿಸಿದೆ. ಅದು ಸತ್ಯವೇ ಅಲ್ಲ ಎಂಬಂತೆ ಅವರು ಮಾತನಾಡತೊಡಗಿದಾಗ ನನಗೆ ಆಶ್ಚರ್ಯ. `ನೀವು ಹೀಗೆಲ್ಲಾ ಮಾಡಿದರೆ ನಿಮ್ಮ ವಿರುದ್ಧವೂ ಕ್ರಮ ತೆಗೆದುಕೊಳ್ಳಬಹುದು ಗೊತ್ತೆ~ ಎಂದು ದಬಾಯಿಸಿದರು. ಆ ಮಹಿಳೆಯ ಧೋರಣೆಯಿಂದ ಬೇಸತ್ತಿದ್ದ ನಾನು, `ಅದೂ ಆಗಿಹೋಗಲಿ. ನನಗೆ ಶಿಕ್ಷೆಯಾದರೂ ಚಿಂತಿಲ್ಲ. ಕೊನೇಪಕ್ಷ ಜನರಿಗೆ ಸತ್ಯವಾದರೂ ಗೊತ್ತಾಗುತ್ತೆ~ ಎಂದೆ. ನನ್ನ ಈ ಮಾತನ್ನು ಕೇಳಿ ಆ ಅಧಿಕಾರಿ ಗೊಂದಲಕ್ಕೆ ಸಿಲುಕಿದವರಂತೆ ಮುಖ ಮಾಡಿದರು. ಎಷ್ಟೇ ಒದ್ದಾಡಿದರೂ ಆ ಮಹಿಳೆಯ ವರಾತ ಮಾತ್ರ ತಪ್ಪಲೇ ಇಲ್ಲ. ನಮ್ಮ ವ್ಯವಸ್ಥೆ ಮೋಸ ಮಾಡುವವರ ಪರವಾಗಿ ನಿಲ್ಲುವ ಇಂಥ ಎಷ್ಟೋ ಪ್ರಸಂಗಗಳನ್ನು ನಾನು ಕಂಡಿದ್ದೇನೆ.
* * *
ಪೊಲೀಸರಿಗೆ ತರಬೇತಿ ನೀಡುವ ಸ್ಥಳಗಳಲ್ಲಿ ಉಪನ್ಯಾಸ ನೀಡಲು ಕೆಲವೊಮ್ಮೆ ನನ್ನನ್ನು ಆಹ್ವಾನಿಸುತ್ತಾರೆ. ಒಮ್ಮೆ ಉಪನ್ಯಾಸ ಕೊಡಲು ಹೋಗಿದ್ದಾಗ, ಕಾನ್‌ಸ್ಟೇಬಲ್ ಒಬ್ಬರು ತುಂಬಾ ಮುಖ್ಯವಾದ ಪ್ರಶ್ನೆ ಎತ್ತಿದರು. ಹಿರಿಯ ಅಧಿಕಾರಿಗಳಿಗೆ ಕಾಫಿ-ಟೀ ತಂದುಕೊಡುವುದು ಸರಿಯೋ ತಪ್ಪೋ ಎಂಬುದು ಅವರ ಪ್ರಶ್ನೆ. ಒಳ್ಳೆಯ ಅಧಿಕಾರಿಗಳಿಗೆ ಕಾಫಿ/ಟೀ ತಂದುಕೊಡುವ ಕುರಿತು ಯಾರಿಗೂ ತಕರಾರೇ ಇರುವುದಿಲ್ಲ ಎಂಬುದು ನನ್ನ ಅನುಭವ. ಆ ಕಾನ್‌ಸ್ಟೇಬಲ್ ಹಾಗೆ ಕೇಳಲು ಬೇರೇನೋ ಕಾರಣ ಇದ್ದಿರಬಹುದೆಂದು ನಾನು ಕೆದಕಿದೆ. `ಕೆಲವೊಮ್ಮೆ ಸ್ಟೇಷನ್‌ಗೆ ರಾಜಕಾರಣಿಗಳು ಬರುತ್ತಾರೆ. ಅವರ ಜೊತೆಗೆ ಚೇಲಾಗಳು. ಆ ಚೇಲಾಗಳಲ್ಲಿ ಕೆಲವರು ನಮ್ಮ ಠಾಣೆಯ ರೌಡಿಶೀಟ್‌ನಲ್ಲೇ ಇರುವಂಥವರು. ಅವರಿಗೆ ಕಾಫಿ/ಟೀ ತಂದುಕೊಡುವುದಲ್ಲದೆ, ಆ ಲೋಟಗಳನ್ನೂ ನಾವೇ ಎತ್ತಬೇಕು. ಆತ್ಮಸಾಕ್ಷಿ ಅದಕ್ಕೆ ಒಪ್ಪುವುದಿಲ್ಲ. ಆದರೆ, ಅಧಿಕಾರಿಗಳು ಬೈಯ್ದರೆ ಏನು ಗತಿ ಎಂದುಕೊಂಡೇ ಲೋಟ ಎತ್ತುವ ಪ್ರಸಂಗಗಳಿವೆ~ ಎಂದರು. ಇದು ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುವ ಅನೇಕರ ಬೇಸರ. `ಎಲ್ಲರ ಲೋಟಗಳನ್ನು ಎತ್ತಿ, ಆ ರೌಡಿಶೀಟರ್ ಲೋಟವನ್ನು ಮಾತ್ರ ಮುಟ್ಟಬೇಡಿ. ಆಗ ನಿಮ್ಮ ಅಧಿಕಾರಿಯ ಮನಸ್ಸು ಬದಲಾಗಬಹುದು~ ಎಂದು ನಾನು ಆ ಕಾನ್‌ಸ್ಟೇಬಲ್‌ಗೆ ಸಲಹೆ ಕೊಟ್ಟೆ. ಇಲಾಖೆಯಲ್ಲಿ ಕೆಲಸ ಮಾಡುವವರ ನಡುವಿನ ಬಾಂಧವ್ಯ, ನೈತಿಕತೆ ಎಷ್ಟು ಮುಖ್ಯವೆಂಬುದಕ್ಕೆ ಇಂಥ ಸಣ್ಣ ಉದಾಹರಣೆಗಳು ಸಿಗುತ್ತವೆ. ಕೊಡಗು, ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಸ್ವಲ್ಪ ಮಟ್ಟಿಗೆ ಬೆಳಗಾವಿ ಭಾಗದ ಪೊಲೀಸರು ಅಧಿಕಾರಿಗಳು ತಪ್ಪು ನಿರ್ಧಾರ ತೆಗೆದುಕೊಂಡಾಗ ಅದನ್ನು ನಿರ್ಭೀತರಾಗಿ ಧಿಕ್ಕರಿಸುತ್ತಾರೆ. ಬಯಲುಸೀಮೆಯ ಜನ ಮಾತ್ರ ಈ ವಿಷಯದಲ್ಲಿ ಬಡಪಾಯಿಗಳು.
* * *
ಚಿಕ್ಕಪೇಟೆ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದಾಗ ನಡೆದ ಘಟನೆ ಇದು- ಟ್ರಾಫಿಕ್ ವಿಭಾಗದಲ್ಲಿದ್ದ ನನ್ನ ಸಹೋದ್ಯೋಗಿಯೊಬ್ಬರು ತಮ್ಮ ಹಿರಿಯ ಅಧಿಕಾರಿ ವ್ಯಾಯಾಮ ಮಾಡುವ ಸೈಕಲ್ ಬೇಕೆಂದಿದ್ದಾರೆ, ಕೊಡಿಸಿ ಎಂದು ನನ್ನನ್ನು ಕೇಳಿದರು. ಅವರೊಂದಿಷ್ಟು, ನಾನೊಂದಿಷ್ಟು ಹಣ ಹಾಕಿ ಆ ಸೈಕಲ್ ಕೊಳ್ಳಬೇಕೆಂಬುದು ಅವರ ಬಯಕೆ. ಅದನ್ನು ನಾನು ವಿರೋಧಿಸಿದೆ. ಬೇಕಾದರೆ ಸೈಕಲ್ ಕೊಡಿಸುವೆ. ಆದರೆ, ಹಣವನ್ನು ಮಾತ್ರ ಅವರೇ ಕೊಡಬೇಕು ಎಂದೆ. ಆ ಅಧಿಕಾರಿ ಜಯನಗರದ ಯಾವುದೋ ವಿಳಾಸ ಕೊಟ್ಟು, ಸೈಕಲನ್ನು ಅಲ್ಲಿಗೆ ತಲುಪಿಸುವಂತೆ ಹೇಳಿದ್ದರು.

ನಾನು ನಮ್ಮ ಕಾನ್‌ಸ್ಟೇಬಲ್‌ಗಳಿಗೆ ಸೈಕಲ್ ತಲುಪಿಸುವ ಕೆಲಸ ಒಪ್ಪಿಸಿದೆ. ಅವರು ಜಯನಗರದ ಆ ಮನೆಗೆ ಸೈಕಲ್ ಒಯ್ದರು. ಮನೆಯ ಕದ ತಟ್ಟಿದರು. ಬಾಗಿಲು ತೆರೆದವರು ಜನಪ್ರಿಯ ನಟಿ. ಆಶ್ಚರ್ಯವಾದರೂ ತಮಗೇಕೆ ಎಂಬಂತೆ ಕಾನ್‌ಸ್ಟೇಬಲ್‌ಗಳು ಹಿರಿಯ ಅಧಿಕಾರಿ ಇದನ್ನು ಕೊಡುವಂತೆ ಸೂಚಿಸಿದ್ದಾರೆಂದು ಹೇಳಿ, ಸೈಕಲ್ ಒಳಗಿಟ್ಟರು. ಬಿಲ್ಲನ್ನು ಕೈಗಿತ್ತರು. ಆ ಬಿಲ್ ನೋಡಿದ್ದೇ ನಟಿಗೆ ಸಿಟ್ಟುಬಂತು. ಆ ಅಧಿಕಾರಿಗೆ ಫೋನ್ ಮಾಡಿ ಬಿಲ್ ಕೇಳುತ್ತಿದ್ದಾರೆ ಎಂದು ಅಲವತ್ತುಕೊಂಡರು. ಕೆಲವೇ ಸೆಕೆಂಡುಗಳ ನಂತರ ಆ ಅಧಿಕಾರಿ ನನಗೆ ಫೋನ್ ಮಾಡಿದರು. `ಬಿಲ್ ಕೇಳುತ್ತಿದ್ದಾರಂತೆ. ಅವರಿಗೆ ಹೀಗಾ ಅವಮಾನ ಮಾಡೋದು. ಹಣ ನಾನೇ ಕೊಡುತ್ತಿದ್ದೆನಲ್ಲ~ ಎಂದು ದಬಾಯಿಸಿದರು. ಹಣ ತಾವೇ ಕೊಡುತ್ತೀರೆಂಬ ವಿಚಾರ ನನಗೆ ಗೊತ್ತಿರಲಿಲ್ಲ ಎಂದೆ. ಕೊನೆಗೆ ಅವರೇ ಸೈಕಲ್‌ನ ಹಣ ಕಳಿಸಿಕೊಟ್ಟರು. ನಟಿಯೊಬ್ಬಳನ್ನು ಓಲೈಸಲು  ಅಧಿಕಾರಿ ಸೈಕಲ್ ಕೊಡಿಸುತ್ತಿದ್ದಾರೆ ಎಂಬ ವಿಚಾರ ನನಗಾಗಲೀ, ನಮ್ಮ ಕಾನ್‌ಸ್ಟೇಬಲ್‌ಗಾಗಲೀ ಗೊತ್ತಿರಲಿಲ್ಲ.
ಮುಂದಿನ ವಾರ: ಇನ್ನಷ್ಟು ಪೇಚಿನ ಪ್ರಸಂಗಗಳು
ಶಿವರಾಂ ಅವರ ಮೊಬೈಲ್ ನಂಬರ್:
94483 13066

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT