ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೇಟೆಗೂ ತಟ್ಟಿದ ಚುನಾವಣೆ ಬಿಸಿ

Last Updated 15 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಹಿಂದಿನ ವಾರಾಂತ್ಯದಲ್ಲಿ ಷೇರು­ಪೇಟೆಯ ಸಂವೇದಿ ಸೂಚ್ಯಂಕವು ಏರಿಕೆಯಲ್ಲಿದ್ದವು. ಸೋಮವಾರ  ಪ್ರಕಟಗೊಂಡ ನಾಲ್ಕು ರಾಜ್ಯಗಳ ಚುನಾವಣೆಯ ಫಲಿತಾಂಶ ನಿರೀಕ್ಷಿತ ಮಟ್ಟದಲ್ಲಿಯೇ ಇದ್ದ ಕಾರಣ ಮುಂಬೈ ಷೇರು ವಿನಿಮಯ ಕೇಂದ್ರದ ಸಂವೇದಿ ಸೂಚ್ಯಂ­ಕವು ಮಧ್ಯಂತರದಲ್ಲಿ 21,483 ಅಂಶಗಳವ­ರೆಗೂ ಜಿಗಿತ ಕಂಡು ಸಾರ್ವಕಾಲಿಕ ದಾಖಲೆ ನಿರ್ಮಿಸಿತು.

ಸೂಚ್ಯಂಕದ ಈ ನೆಗೆತವು ಆ ದಿನಕ್ಕೆ ಮಾತ್ರ ಸೀಮಿತ­ಗೊಂಡಿತ್ತು. ನಂತರದ ದಿನಗಳಲ್ಲಿ ಮಾರಾಟದ ಒತ್ತಡ ಹೆಚ್ಚಾಯಿತು. ಈ ಮಧ್ಯೆ ಅಮೆರಿಕಾದ ಫೆಡ್‌ ಸಭೆಯು ಹಿಂದೆ ನೀಡಿದ ಉತ್ತೇಜಕ ಸೌಲಭ್ಯಗಳನ್ನು ಕ್ರಮೇಣ ಹಿಂದಕ್ಕೆ ಪಡೆಯಲು ಮುಂದಾಗುವುದೆಂಬ ಭೀತಿಯು ಷೇರುಪೇಟೆಯಲ್ಲಿ ಮೂಡಿದ್ದು ಸೂಚ್ಯಂಕಗಳ ಇಳಿಕೆಗೆ ಕಾರಣವಾಯಿತು.

ಈ ವಾರದ ವಿಶೇಷವೆಂದರೆ ಸ್ಟ್ರೈಡ್ಸ ಆರ್ಕೊಲ್ಯಾಬ್‌ ಕಂಪೆನಿಯು ಪ್ರತಿ ಷೇರಿಗೆ ₨500ರಂತೆ ಲಾಭಾಂಶ ಘೋಷಿಸಿದೆ. ಈ ಕಂಪೆನಿಯ ಷೇರಿನ ಬೆಲೆಯಲ್ಲಿ ಹೆಚ್ಚಿನ ಏರುಪೇರು ಕಾಣಲಿಲ್ಲ. ಮದರ್‌ಸನ್‌ ಸುಮಿ ಷೇರಿನ ಬೆಲೆಯು, ಬೋನಸ್‌ ಷೇರಿಗೆ ನಿಗದಿತ ದಿನ ಗೊತ್ತುಪಡಿಸಿದ ಕಾರಣ ಏರಿಕೆ ಕಂಡಿತು. ಕೋರಮಂಡಲ್‌ ಇಂಟರ್‌ನ್ಯಾಷನಲ್‌ ಷೇರಿನ ಬೆಲೆಯು ₨258ರವರೆಗೂ ಏರಿಕೆ ಕಂಡು ₨237 ರಲ್ಲಿ ಅಂತ್ಯಗೊಂಡಿತು.

ಅಕ್ಟೋಬರ್‌ ತಿಂಗಳ ಕೈಗಾರಿಕಾ ಕ್ಷೇತ್ರದ ಉತ್ಪಾದನೆಯ ಸೂಚ್ಯಂಕವು ಶೇ 1.8ರಷ್ಟು ಕುಸಿತ ಕಂಡರೆ ನವೆಂಬರ್‌ನ ಲ್ಲಿನ ಗ್ರಾಹಕ ದರ ಹಣದುಬ್ಬರವು ಶೇ 11.24ಕ್ಕೆ ಏರಿಕೆ ಕಂಡಿದೆ. ಇದೇ 18 ರಂದು ಭಾರತೀಯ ರಿಸರ್ವ್‌ ಬ್ಯಾಂಕ್‌ ಪ್ರಕಟಿಸಲಿರುವ ಹಣಕಾಸು ನೀತಿಯಲ್ಲಿ ಈ ಕೈಗಾರಿಕಾ ಸೂಚ್ಯಂಕ (ಐಐಪಿ) ಕುಸಿತ ಹಾಗೂ ಹಣದುಬ್ಬರ ಹೆಚ್ಚಳದ ಕಾರಣ, ಪ್ರಮುಖ ದರಗಳು ಹೆಚ್ಚಾಗುವ ಸಾಧ್ಯತೆ ಇದೆ. ತರಕಾರಿ ಬೆಲೆಗಳು ಒಂದು ವರ್ಷದ ಹಿಂದಿನ ಸಂದರ್ಭಕ್ಕೆ ಹೋಲಿಸಿದರೆ ಶೇ 61.6ರಷ್ಟು ಏರಿಕೆ ಕಂಡಿರುವುದು ಗಮನಾರ್ಹ.

ಈ ಕಾರಣದಿಂದ ಬ್ಯಾಂಕ್‌ ಸಾಲದ ಬಡ್ಡಿ ದರ 25 ಮೂಲಾಂಶಗಳಿಂದ 50 ಮೂಲಾಂಶಗಳ ವರೆಗೂ (ಶೇ 0.25ರಿಂದ 0.50ರಷ್ಟು) ಹೆಚ್ಚಾಗಬಹುದು ಎಂದು ನಿರೀಕ್ಷಿಸಲಾಗಿದೆ. ಬ್ಯಾಂಕಿಂಗ್‌ ವಲಯದ ಷೇರು ಹೆಚ್ಚಿನ ಏರುಪೇರುಗೆ ಒಳಗಾಯಿತು.

ಈ ವಾರದಲ್ಲಿ ಒಟ್ಟಾರೆ 380 ಅಂಶಗಳ ಏರಿಕೆ ಕಂಡ ಸಂವೇದಿ ಸೂಚ್ಯಂಕ ಹಿಂದಿನ ಎರಡು ವಾರಗಳ ಏರಿಕೆ ದಿಶೆಯನ್ನು ಬದಲಿಸಿದೆ.
ಮಧ್ಯಮ ಶ್ರೇಯಾಂಕದ ಸೂಚ್ಯಂಕ 96 ಹಾಗೂ ಕೆಳಮಧ್ಯಮ ಶ್ರೇಣಿ ಸೂಚ್ಯಂಕ 94 ಅಂಶಗಳ ಕುಸಿತಕ್ಕೊಳಗಾದವು. ವಿದೇಶಿ ವಿತ್ತೀಯ ಸಂಸ್ಥೆಗಳು ಖರೀದಿ ಮನಸ್ಥಿತಿಯಲ್ಲಿದ್ದರೆ, ಸ್ವದೇಶೀ ಹಣಕಾಸು ಸಂಸ್ಥೆಗಳು ಮಾರಾಟದ ಮೂಡಿನಲ್ಲಿದ್ದವು. ಹೀಗಾಗಿ ಷೇರುಪೇಟೆಯ ಒಟ್ಟಾರು ಬಂಡವಾಳ ಮೌಲ್ಯವು ₨ 67.76 ಲಕ್ಷ ಕೋಟಿಯಲ್ಲಿತ್ತು.

ಹೊಸ ಷೇರಿನ ವಿಚಾರ
*ಇತ್ತೀಚೆಗೆ ₨85ರಿಂದ ₨90ರ ಅಂತರದಲ್ಲಿ ಸಾರ್ವಜನಿಕವಾಗಿ ಷೇರು ಮರು ವಿತರಣೆ ಮಾಡಿದ ಸಾರ್ವಜನಿಕ ವಲಯದ ಪವರ್‌ಗ್ರಿಡ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾ ಕಂಪೆನಿಯು ವಿತರಣೆ ಬೆಲೆಯನ್ನು ₨90 ಎಂದು ನಿಗದಿಪಡಿಸಿದೆ. ಸಣ್ಣ ಹೂಡಿಕೆದಾರರಿಗೆ ಶೇ 5ರ ರಿಯಾಯ್ತಿಯಂತೆ ಅಂದರೆ ₨85.50 ಯಂತೆ ವಿತರಿಸಲಿದೆ.

*ಪ್ರತಿ ಷೇರಿಗೆ ₨20ರಂತೆ ಆರಂಭಿಕ ಷೇರು ವಿತರಣೆ ಮಾಡಿದ ಗುಜರಾತ್‌ನ ಕ್ಯಾಪ್ಟನ್‌ ಪೊಲಿಪ್ಲಾಸ್‌್ಟ ಲಿ. ಕಂಪೆನಿಯ ಷೇರುಗಳು 11ನೇ ಬುಧವಾರದಿಂದ ‘ಎಂ.ಟಿ’ ಗುಂಪಿನಲ್ಲಿ ನಾಲ್ಕು ಸಾವಿರ ಷೇರುಗಳ ವಹಿವಾಟಿನ ಗುಚ್ಛದೊಂದಿಗೆ ವಹಿವಾಟು ಆರಂಭಿಸಿದೆ. ಈ ಕಂಪೆನಿಯು ಎಸ್‌.ಎಂ.ಇ ವಿಭಾಗದ್ದಾಗಿದೆ.

ಬೋನಸ್‌ ಷೇರು ವಿಚಾರ
*ಮದರ್‌ಸನ್‌ ಸುಮಿ ಸಿಸ್ಟಮ್ಸ ಕಂಪನಿ ಪ್ರಕಟಿಸಿರುವ 1:2ರ ಅನುಪಾತದ ಬೋನಸ್‌ಗೆ ಡಿಸೆಂಬರ್‌ 24 ನಿಗದಿತ ದಿನವಾಗಿದೆ.
*ರಾಯ್‌ಸಾಹೆಬ್‌ ರಿಕ್ಚಂದ್‌ ಮೊಹತಾ ಸ್ಪಿನ್ನಿಂಗ್‌ ಅಂಡ್‌ ವೀವಿಂಗ್‌ ಮಿಲ್‌್ಸ ಲಿ. ಕಂಪನಿಯು 18ರಂದು ಬೋನಸ್‌ ಷೇರು ವಿತರಣೆ ಪರಿಶೀಲಿಸಿದೆ.

ದಾಖಲೆ ಲಾಭಾಂಶ
ಔಷಧ ತಯಾರಿಕೆ ವಲಯದ ಕಂಪೆನಿ ಸ್ಟ್ರೈಡ್ಸ ಆರ್ಕೊ ಲ್ಯಾಬ್‌ ಲಿಮಿಟೆಡ್‌ ತನ್ನ ಎಜಿಲ್ಲಾ ಸ್ಪೆಷಾಲಿಟೀಸ್‌ ವಿಭಾಗವನ್ನು ಅಮೆರಿಕಾದ ಮೈಲಾನ್‌ ಕಂಪನಿಗೆ 175 ಕೋಟಿ ಅಮೆರಿಕನ್‌ ಡಾಲರ್‌ಗಳಿಗೆ ಮಾರಾಟ ಮಾಡಿದೆ. ಸ್ಟ್ರೈಡ್‌್ಸ ಕಂಪೆನಿಗೆ ಅಮೆರಿಕಾದ ಎಫ್‌ಡಿಎ ಎಚ್ಚರಿಕೆ ಪತ್ರ ನೀಡಿದ್ದರಿಂದ ಅದನ್ನು ಬಗೆಹರಿಸಿಕೊಳ್ಳುವವರೆಗೂ 250ದಶಲಕ್ಷ ಡಾಲರ್‌ ಹಣವನ್ನು ತಡೆಹಿಡಿದು ಉಳಿದ ಹಣ ಪಾವತಿಸಿದೆ. ಆ ಹಣದಲ್ಲಿ ಸ್ಟ್ರೈಡ್‌್ಸ ಆರ್ಕೊ ಲ್ಯಾಬ್‌ ಷೇರುದಾರರಿಗೆ ಪ್ರತಿ ಷೇರಿಗೆ ₨500 ರಂತೆ ಲಾಭಾಂಶ ಘೋಷಿಸಿದೆ. (ಅಂದರೆ ಶೇ 5000) ಈ ಲಾಭಾಂಶ ವಿತರಣೆಗೆ 20ನೇ ಡಿಸೆಂಬರ್‌ ನಿಗದಿತ ದಿನವಾಗಿದೆ.

ವಿಭಾಗೀಯ ವಿಲೀನ
ಎಲ್ಡರ್‌ ಫಾರ್ಮಾಸ್ಯುಟಿಕಲ್ಸ ಕಂಪನಿಯ ಸ್ಥಳೀಯ ಫಾರ್ಮಾಲೇಷನ್‌್ಸ ವಿಭಾಗವನ್ನು ಟೊರೆಂಟ್‌ ಫಾರ್ಮಾಸ್ಯುಟಿಕಲ್‌್ಸ ಕಂಪನಿಗೆ ₨2,004 ಕೋಟಿ ರೂಪಾಯಿಗೆ ಮಾರಾಟ ಮಾಡುವ ಒಪ್ಪಂದ ಮಾಡಿಕೊಂಡಿವೆ.

ಮುಕ್ತ ಆಹ್ವಾನ
ಜಪಾನಿನ ಸಿಎಸಿ ಕಾರ್ಪೊರೇಷನ್‌ ಸಂಸ್ಥೆಯು ಚೆನ್ನೈನ ಆಕ್ಸೆಲ್‌ ಫ್ರಂಟ್‌ ಲೈನ್‌ ಲಿಮಿಟೆಡ್‌ ಕಂಪೆನಿಯ 75 ಲಕ್ಷ ಷೇರುಗಳನ್ನು ಷೇರುದಾರರ ಒಪ್ಪಂದದ ಪ್ರಕಾರ ಹಾಗೂ 55 ಲಕ್ಷ ಷೇರುಗಳನ್ನು ಆದ್ಯತೆ ಮೇಲೆ ಷೇರು ಕೊಳ್ಳುವ ಕಾರಣ ಶೇ 26ರಷ್ಟು ಸಾರ್ವಜನಿಕರಿಂದ ಖರೀದಿಸಲು ಮುಕ್ತ ಆಹ್ವಾನ ನೀಡಲಿದೆ. 77,38,087 ಷೇರುಗಳನ್ನು ಪ್ರತಿ ಷೇರಿಗೆ ₨45ರಂತೆ ಕೊಳ್ಳಲಿದೆ. ಈ ಪ್ರಕ್ರಿಯೆ ನಂತರ ಪ್ರವರ್ತಕ ಭಾಗಿತ್ವವು ಶೇ 65.34ರಿಂದ ಶೇ 28.07ಕ್ಕೆ ಇಳಿಯಲಿದೆ.

ಬಂಡವಾಳ ಹೆಚ್ಚಳ
ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ, ಸಿಂಡಿಕೇಟ್‌ ಬ್ಯಾಂಕ್‌ ಓರಿಯಂಟಲ್‌ ಬ್ಯಾಂಕ್‌ ಮುಂತಾದ ಸಾರ್ವಜನಿಕ ವಲಯದ ಬ್ಯಾಂಕುಗಳು ತಮ್ಮ ಬಂಡವಾಳವನ್ನು ಹೆಚ್ಚಿಸಿಕೊಳ್ಳಲು ಮುಂದಾಗಿವೆ. ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಕೇಂದ್ರ ಸರ್ಕಾರಕ್ಕೆ ಮತ್ತು ಅರ್ಹ ವಿತ್ತೀಯ ಸಂಸ್ಥೆಗಳಿಗೆ ಷೇರು ವಿತರಿಸಲಿದ್ದು ಯಾವುದೇ ಕಾರಣಕ್ಕೆ ಕೇಂದ್ರ ಸರ್ಕಾರದ ಭಾಗಿತ್ವ ಶೇ 58 ರೊಳಗೆ ಬಾರದೆ ವಿತರಿಸಬೇಕಾಗಿದೆ. ಓರಿಯಂಟಲ್‌ ಬ್ಯಾಂಕ್‌ 80.87 ಲಕ್ಷ ಷೇರು ಸರ್ಕಾರಕ್ಕೆ ವಿತರಿಸಿದೆ.

ಕಂಪೆನಿಗಳ ಸಮಾಪನ
*ಅಮರ್‌ ರೆಮೆಡೀಸ್‌ ಲಿ. ಕಂಪೆನಿಯನ್ನು ಸಮಾಪನ ಗೊಳಿಸಬೇಕೆಂದು ಮತ್ತು ಅದಕ್ಕಾಗಿ ಅಧಿಕೃತ ಸಮಾಪನ ಅಧಿಕಾರಿಯನ್ನು ನೇಮಿಸಿ ತೀರ್ಪು ನೀಡಿರುವ ಬಾಂಬೆ ಹೈಕೋರ್ಟ್‌ನ ಆದೇಶದಂತೆ ಮುಂಬೈನ ರಿಜಿಸ್ಟ್ರಾರ್‌ ಆಫ್‌ ಕಂಪೆನೀಸ್‌ ಕಚೇರಿ ತಿಳಿಸಿದ ಕಾರಣ ಈ ಕಂಪೆನಿಯ ಷೇರುಗಳು 12 ರಿಂದ ವಹಿವಾಟಿನಿಂದ ಸ್ಥಗಿತಗೊಳಿಸಲಾಗಿದೆ.

*ಅಕ್ಪಾ ಲಾಜಿಸ್ಟಿಕ್ಸ ಲಿ. ಕಂಪೆನಿಯನ್ನು ಸಮಾಪನಗೊಳಿಸಲು ಮತ್ತು ಆ ಕಾರ್ಯಕ್ಕಾಗಿ ಅಧಿಕೃತ ಸಮಾಪನ ಅಧಿಕಾರಿಯನ್ನು ನೇಮಿಸಿದ ಬಾಂಬೆ ಹೈಕೋರ್ಟ್‌ನ ಕ್ರಮದಿಂದ ಮುಂದಿನ ದಿನಗಳಲ್ಲಿನ ತೊಂದರೆಯನ್ನು ತಡೆಗಟ್ಟಲು ಈ ಕಂಪೆನಿಯ ಷೇರುಗಳ ವಹಿವಾಟನ್ನು ಡಿಸೆಂಬರ್‌ 10 ರಿಂದ ಸ್ಥಗಿತಗೊಳಿಸಲಾಗಿದೆ.

ವಾರದ ವಿಶೇಷ: ದಂಡ ವಿಧಿಸುತ್ತಿರುವ ‘ಸಿಸಿಐ’

ಭಾರತೀಯ ಸ್ಪರ್ಧಾತ್ಮಕ ಆಯೋಗ(ಕಾಂಪಿಟೇಷನ್‌ ಕಮಿಷನ್‌ ಆಫ್‌ ಇಂಡಿಯಾ–ಸಿಸಿಐ) ಕಾರ್ಯ ಚಟುವಟಿಕೆ ಚುರುಕಾಗಿದೆ. ಇತ್ತೀಚೆಗೆ ಸಾರ್ವಜನಿಕ ವಲಯದ ನವರತ್ನ ಕಂಪೆನಿ ಕೋಲ್‌ ಇಂಡಿಯಾ ತನ್ನ ಪ್ರಾಬಲ್ಯತೆಯನ್ನು ಇಂಧನದ ಇ–ಆಕ್ಷನ್‌ನಲ್ಲಿ ದುರುಪಯೋಗಪಡಿಸಿಕೊಂಡಿದೆ ಎಂದು ‘ಸಿಸಿಐ’ ಆರೋಪಿಸಿದೆ. ಜತೆಗೆ ₨1,773 ಕೋಟಿ ದಂಡವನ್ನು ಸಹ ವಿಧಿಸಿದೆ.

ಈ ಹಿಂದೆ ಅಂದರೆ ಏಪ್ರಿಲ್‌ 2012ರಲ್ಲಿ ಯುನೈಟೆಡ್‌ ಫಾಸ್ಪರಸ್‌ ಲಿಮಿಟೆಡ್‌ ಕಂಪೆನಿಯ ಮೇಲೆ ಅಲ್ಯುಮಿನಿಯಂ ಫಾಸ್ಪೈಡ್‌ ಟ್ಯಾಬ್ಲೆಟ್‌ ಬಿಡ್‌ನಲ್ಲಿ ನಿಯಂತ್ರಣ ಕೂಟದ ಚಟುವಟಿಕೆ ನಡೆಸಿದೆ ಎಂಬ ಆರೋಪದ ಮೇಲೆ ₨252 ಕೋಟಿಯಷ್ಟು ದಂಡ ವಿಧಿಸಿತ್ತು.

ಯುನೈಟೆಡ್‌ ಫಾಸ್ಪರಸ್‌ನ 2012–13ರ ವರ್ಷದ ಲಾಭ ಗಳಿಕೆಯು ₨208.13 ಕೋಟಿಯಾಗಿತ್ತು. ಈ ಕಂಪೆನಿಯು ಸ್ಪರ್ಧಾತ್ಮಕ ಮೇಲ್ಮನವಿ ನ್ಯಾಯಾಧಿಕರಣಕ್ಕೆ ಮೇಲ್ಮನವಿ ಸಲ್ಲಿಸಿತು. ಕಂಪೆನಿಗೆ ವಿಧಿಸಲಾಗಿದ್ದ ದಂಡವನ್ನು ₨252 ಕೋಟಿಯಿಂದ ಕೇವಲ ₨6.94 ಕೋಟಿಗೆ ಇಳಿಸಿ ನ್ಯಾಯಾಧಿಕರಣವೂ ತೀರ್ಪು ನೀಡಿತು.

ಯುನೈಟೆಡ್‌ ಫಾಸ್ಪರಸ್‌ ₨245.50 ಕೋಟಿಯಷ್ಟು ಪಾವತಿಸಿದ ಹೆಚ್ಚುವರಿ ದಂಡವನ್ನು ಮರಳಿ ಪಡೆಯಿತು. ಅಕ್ಟೋಬರ್‌ನಲ್ಲಿ ನ್ಯಾಯಾಧಿಕರಣ ಆದೇಶ ಬಂದ ನಂತರವಷ್ಟೇ ಷೇರಿನ ಬೆಲೆಯು ₨145.50ರ ಸಮೀಪದಿಂದ ಏರಿಕೆ ಕಾಣುತ್ತಿದೆ. ಅದೇ ರೀತಿ ನ್ಯಾಷನಲ್‌ ಸ್ಟಾಕ್‌ ಎಕ್ಸಚೇಂಜ್‌ ಡಿಎಲ್‌ಎಫ್‌, ಅಲ್ಲದೆ 11 ಸಿಮೆಂಟ್‌ ಕಂಪೆನಿಗಳಿಗೆ ಬೃಹತ್‌ ಮೊತ್ತದ ದಂಡ ವಿಧಿಸಿದ್ದ ಪ್ರಕರಣಗಳಲ್ಲಿಯೂ ಮೇಲ್ಮನವಿ ಸಲ್ಲಿಸಲಾಗಿದೆ.

ಪ್ರತಿ ತಪ್ಪಿಗೆ ದಂಡ ವಿಧಿಸಬೇಕಾದುದು ಮುಂದೆ ತಪ್ಪು ಮಾಡದೆ, ಮಾಡಿರುವ ತಪ್ಪಿಗೆ ಪ್ರಾಯಶ್ಚಿತವಾಗಲೆಂಬ ಕಾರಣಕ್ಕಾಗಿಯಾದರೂ ವಿಧಿಸುವ ದಂಡದ ಪ್ರಮಾಣದ ಪರಿಣಾಮವನ್ನು ಸಹ ಗಮನಿಸಬೇಕಾದುದು ಅವಶ್ಯಕವಾಗಿದೆ.

ಯುನೈಟೆಡ್‌ ಫಾಸ್ಪರಸ್‌ ಕಂಪೆನಿಗೆ ವಿಧಿಸಿದ ದಂಡದ ಪ್ರಮಾಣ ಹಾಗೂ ನ್ಯಾಯಾಧಿಕರಣ  ವಿಧಿಸಿದ ದಂಡದ ಪ್ರಮಾಣದಲ್ಲಿ ಭಾರಿ ವ್ಯತ್ಯಾಸವಿದೆ. ಇಂತಹ ಅಸಹಜ ಪ್ರಮಾಣದ ದಂಡ ವಿಧಿಸಿದರೆ ಕಾರ್ಪೊರೇಟ್‌ಗಳ ಭವಿಷ್ಯವೇನು? ಪ್ರತಿ ಆರ್ಡರ್‌ ಸಹ ಟ್ರಿಬ್ಯುನಲ್‌ನ ಕದ ಬಡಿದು ದಂಡದ ಗಾತ್ರವನ್ನು ಮೊಟಕುಗೊಳಿಸಿಕೊಳ್ಳಲು ಪ್ರಯತ್ನಿಸಬೇಕಾದುದು ಅನಿವಾರ್ಯವಾಗುತ್ತದೆ. ದಂಡ ವಿಧಿಸುವ ಈ ಪ್ರಕ್ರಿಯೆಯು ಸಹಜವಾಗಿರಬೇಕು. ಇದು ಕಂಪೆನಿಗೆ ಮುಳುವಾಗಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT