ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೇಟೆಯ ಮೇಲೆ ರೇಟಿಂಗ್ ಪ್ರಭಾವ..!

Last Updated 14 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಷೇರುಪೇಟೆಯಲ್ಲಿ ಹಿಂದಿನ ಶುಕ್ರವಾರದ ಅನಿರೀಕ್ಷಿತ ಅಘಾತಕಾರಿ ಇಳಿಕೆಯ ಪ್ರಭಾವ ಸೋಮವಾರವೂ ಮುಂದುವರೆದು 229 ಅಂಶಗಳಷ್ಟು ಕುಸಿತ ಸಂವೇದಿ ಸೂಚ್ಯಂಕವು ಕಂಡಿತು. ಶುಕ್ರವಾರದ ಕುಸಿತದ ಕನಿಷ್ಠ ಮಟ್ಟವನ್ನು ದಾಟಿ ಇಳಿಯಿತು. ಈ ಅಸ್ಥಿರತೆಯ ವಾತಾವರಣದಲ್ಲಿ ಜಾಗತಿಕ ಪೇಟೆಗಳ ಇಳಿಕೆಯು ಹಾಗೂ ಸ್ವದೇಶಿ ವಿತ್ತೀಯ ಸಂಸ್ಥೆಗಳ ಮಾರಾಟದ ಒತ್ತಡವು ಗಾಬರಿ ಮೂಡಿಸಿದವು.

ಈ ಮಧ್ಯೆ ಷೇರುಗಳ ಬೆಲೆಗಳಲ್ಲಿ ಅದರಲ್ಲೂ ಅಗ್ರಮಾನ್ಯ ಕಂಪನಿ ಷೇರುಗಳಲ್ಲಿ ಹೆಚ್ಚಿನ ಏರಿಳಿತಕ್ಕೆ ವಿದೇಶಿ ಹೂಡಿಕೆ ಬ್ಯಾಂಕ್‌ಗಳು ನೀಡುವ ರೇಟಿಂಗ್ ಸಹ ಪ್ರಭಾವಿಯಾಗಿರುತ್ತವೆ. ಫಾರ್ಮಾ ವಲಯದ ಕಂಪೆನಿಗಳು ಹೆಚ್ಚು ಲಾಭ ಗಳಿಸುತ್ತವೆ ಎಂದರೆ ಮತ್ತೊಂದು ಕಂಪೆನಿ ಆಟೋ ವಲಯದ ಬಜಾಜ್ ಆಟೋ ಹಂತವನ್ನು ಇಳಿಸುತ್ತದೆ.
 
ಈ ರೇಟಿಂಗ್‌ಗಳು ಸುಭದ್ರವಾದ ವಾತಾವರಣವನ್ನು ತಲ್ಲಣಗೊಳಿಸುತ್ತವೆ. ಈ ಸಂಸ್ಥೆಗಳ ರೇಟಿಂಗ್‌ಗಳನ್ನು ಪ್ರಚಾರಪಡಿಸುವ ಬದಲು ಆಂತರಿಕವಾಗಿ ಮಾತ್ರ ಬಳಸುವಂತಾಗಬೇಕು ಆಗ ಮಾತ್ರ ಪೇಟೆಯು ಸಹಜಮಯವಾಗುವುದು ಸಾಧ್ಯ.

`ಎಸ್ ಅಂಡ್ ಪಿ~ ಸಂಸ್ಥೆಯು ರೇಟಿಂಗ್ ಇಳಿಸುವ ಎಚ್ಚರಿಕೆಯನ್ನು ಪುನರುಚ್ಚರಿಸಿದ ಹಿನ್ನೆಲೆಯಲ್ಲಿ ಭಾರಿ ಮಾರಾಟದ ಒತ್ತಡದಿಂದ ಸೂಚ್ಯಂಕಗಳು ಕುಸಿದವು. ಈ ಸಂಸ್ಥೆಯು ಎಸ್‌ಬಿಐ ಮತ್ತು ಯೂನಿಯನ್ ಬ್ಯಾಂಕ್‌ಗಳ ರೇಟಿಂಗ್ ಇಳಿಸಿದ ಕಾರಣ ಆತಂಕ ಮೂಡಿದವು.
 
ಆದರೆ ಇಂಡಸ್ ಇಂಡ್ ಬ್ಯಾಂಕ್ ತನ್ನ ಅಂಕಿ ಅಂಶಗಳ ಕಾರಣ ಚುರುಕಾದ ಏರಿಕೆ ಪಡೆಯಿತು. ಸರ್ಕಾರ ರಾಷ್ಟ್ರೀಯ ಇಸ್ಪತ್  ನಿಗಮದ ಆರಂಭಿಕ ಷೇರು ವಿತರಣೆ ಮುಂದೂಡಿದ ಕಾರಣ ಸಮಂಜಸವಲ್ಲ.

ಒಟ್ಟಾರೆ ಈ ವಾರ 263 ಅಂಶಗಳಷ್ಟು ಇಳಿಕೆ ಕಂಡ ಸಂವೇದಿ ಸೂಚ್ಯಂಕವು 19 ಸಾವಿರದ ಗಡಿ ದಾಟದಾಯಿತು. ಮಧ್ಯಮಶ್ರೇಣಿ ಸೂಚ್ಯಂಕವು ಕೇವಲ 2 ಅಂಶಗಳಷ್ಟು ಇಳಿಕೆ ಕಂಡರೆ ಕೆಳಮಧ್ಯಮ ಶ್ರೇಣಿ ಸೂಚ್ಯಂಕ 36 ಅಂಶಗಳಷ್ಟು ಇಳಿಕೆ ಕಂಡಿತು.
 
ವಿದೇಶಿ ವಿತ್ತೀಯ ಸಂಸ್ಥೆಗಳು ಒಟ್ಟು ರೂ.2,829 ಕೋಟಿ ಹೂಡಿಕೆ ಮಾಡಿದರೆ ಸ್ಥಳೀಯ ಹೂಡಿಕೆ ಸಂಸ್ಥೆಗಳು ರೂ.1,990 ಕೋಟಿ ಮೌಲ್ಯದ ಷೇರು ಮಾರಾಟ ಮಾಡಿದವು ಪೇಟೆಯ ಬಂಡವಾಳ ಮೌಲ್ಯವು ರೂ. 65.74 ಲಕ್ಷ ಕೋಟಿಗಳಷ್ಟಾಗಿದೆ.

ವಿತರಣೆ ಮುಂದಕ್ಕೆ
ಕೇಂದ್ರ ಸರ್ಕಾರ ಸುಧಾರಣಾ ಕ್ರಮವಾಗಿ ರಾಷ್ಟ್ರೀಯ ಇಸ್ಪತ್ ನಿಗಮ್ ಲಿ.ನ ಬಂಡವಾಳ ಹಿಂತೆಗೆತದ ಕಾರ್ಯದ ಅಂಗವಾಗಿ ಈ ಕಂಪೆನಿಯ ಷೇರನ್ನು 15 ರಿಂದ ಸಾರ್ವಜನಿಕವಾಗಿ ವಿತರಣೆ ಮಾಡುವುದಾಗಿ ಪ್ರಕಟಿಸಲಾಗಿತ್ತು.
 
ಈ ಕಂಪೆನಿಯ ಪುಸ್ತಕ ಮೌಲ್ಯವು ಪ್ರತಿ ಷೇರಿಗೆ ರೂ.22.50ರಷ್ಟಿದ್ದು,  ಮರ್ಚೆಂಟ್ ಬ್ಯಾಂಕರ್‌ಗಳಾದ ಯುಬಿಎಸ್ ಸೆಕ್ಯುರಿಟೀಸ್ ಮತ್ತು ಡಚ್ ಈಕ್ವಿಟೀಸ್ ಸಂಸ್ಥೆಗಳು ವಿತರಣೆ ಬೆಲೆಯನ್ನು ರೂ.15-17 ರಂತೆ ನಿಗದಿಪಡಿಸುವುದಾಗಿ ತಿಳಿಸಿದವು.

ಇದು ಸರ್ಕಾರಕ್ಕೆ ಒಪ್ಪಿಗೆಯಾಗದ ಕಾರಣ `ಐಪಿಒ~ ಮುಂದೂಡಿದೆ. ಈ ಹಿಂದೆ ಒಎನ್‌ಜಿಸಿ ಕಂಪೆನಿ ಷೇರು ವಿತರಣೆ ದಿನಾಂಕ ಪ್ರಕಟಿಸಿ, ಅರ್ಜಿ ಫಾರಂಗಳನ್ನು ವಿತರಿಸಿದ ನಂತರ ಮುಂದೂಡಿತು.
 
ಅದರಂತೆ ಈ ಭಾರಿಯೂ ವಿತರಣೆಗಾಗಿ ಅರ್ಜಿ ಫಾರಂಗಳನ್ನು ಬಿಡುಗಡೆ ಮಾಡಿ ನಂತರ ಮುಂದೂಡಿರುವುದು, ಬಾಲಿಶ ಕ್ರಿಯೆಯಾಗಿದೆ. ಇಂತಹ ನಿರ್ಧಾರಗಳನ್ನು ಅರ್ಜಿ ಫಾರಂ ವಿತರಣೆಗೆ ಮುಂಚೆಯೇ ದೃಢಪಡಿಸಿಕೊಂಡರೆ ಅಪಾರ ಹಣ ವ್ಯಯ ತಡೆಯಬಹುದಿತ್ತು.

ವಿಭಾಗ ಬೇರ್ಪಡಿಸುವಿಕೆ

ಎನ್‌ಆರ್‌ಬಿ ಬೇರಿಂಗ್ಸ್ ಕಂಪೆನಿಯ ಇಂಡಸ್ಟ್ರಿಯಲ್ ಬೇರಿಂಗ್ಸ್ ಚಟುವಟಿಕೆಯನ್ನು ತನ್ನ ಅಂಗಸಂಸ್ಥೆ ಎನ್‌ಆರ್‌ಬಿ ಇಂಡಸ್ಟ್ರಿಯಲ್ ಬೇರಿಂಗ್ಸ್ ಲಿ. ವರ್ಗಾಯಿಸಲಿದೆ. ಈ ವಿಭಾಗವನ್ನು ಬೇರ್ಪಡಿಸಿ ಎನ್‌ಆರ್‌ಬಿ ಇಂಡಸ್ಟ್ರಿಯಲ್ ಬೇರಿಂಗ್ಸ್ ಲಿ.ನಲ್ಲಿ ವಿಲೀನಗೊಳಿಸುವ ವ್ಯವಸ್ಥಿತ ಯೋಜನೆ ಜಾರಿಗೊಳಿಸಲು ಅಕ್ಟೋಬರ್ 24 ನಿಗದಿತ ದಿನ. ಈ ಯೋಜನೆಯ ಪ್ರಕಾರ ಪ್ರತಿ 4 ಎನ್‌ಆರ್‌ಬಿ ಬೇರಿಂಗ್ಸ್ ಷೇರಿಗೆ ರೂ.2ರ ಮುಖಬೆಲೆಯ ಒಂದು `ಎಸ್‌ಆರ್‌ಬಿ~ ಇಂಡಸ್ಟ್ರಿಯಲ್ ಬೇರಿಂಗ್ಸ್ ಲಿ. ಷೇರನ್ನು ನೀಡಲಾಗುವುದು.

ಹೊಸ ಷೇರಿನ ವಿಚಾರ
ಅನುಶೂಸ್ ಕ್ಲಾತಿಂಗ್ ಲಿ. ಕಂಪೆನಿಯು ಇತ್ತೀಚೆಗೆ ರೂ.27 ರಂತೆ ಸಾರ್ವಜನಿಕ ವಿತರಣೆ ಮಾಡಿದ್ದು 12 ರಿಂದ ಎಂ.ಟಿ. ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಗಿದೆ. ಸ್ಮಾಲ್ ಅಂಡ್ ಮೀಡಿಯಂ ಎಂಟರ್‌ಪ್ರೈಸಸ್ ವೇದಿಕೆಯಡಿ ಸಾರ್ವಜನಿಕ ವಿತರಣೆ ಮಾಡಿದ ಈ ಕಂಪೆನಿಯ ಷೇರಿನ ವಹಿವಾಟಿಗು ಇದ್ದ 4,000 ಷೇರುಗಳಿವೆ.

ಬೋನಸ್ ಷೇರಿನ ವಿಚಾರ
*ಅನುಪ್ ಮ್ಯಾಲಿಯಬಲ್ಸ್ ಲಿ. ಕಂಪೆನಿಯು 5:2ರ ಅನುಪಾತದ ಬೋನಸ್ ಷೇರು ಪ್ರಕಟಿಸಿದೆ. ಇದು ಝಡ್ ಗುಂಪಿನ ಷೇರು ಎಂಬುದು ನೆನಪಿರಲಿ.

*ಒಲಿಂಪಿಕ್ ಆಯಿಲ್ ಇಂಡಸ್ಟ್ರೀಸ್ ಕಂಪೆನಿಯು 3:1ರ ಅನುಪಾತದ ಬೋನಸ್ ಷೇರು ಪ್ರಕಟಿಸಿದೆ. ಇದು ಸಹ ಝಡ್ ಗುಂಪಿನ ಷೇರು.

*ಅನುಕರಣ ಕಮರ್ಷಿಯಲ್ ಎಂಟರ್ ಪ್ರೈಸಸ್ ಲಿ. ಕಂಪೆನಿಯು `ಟಿ~ ಗುಂಪಿನಲ್ಲಿ ವಹಿವಾಟಾಗುತ್ತಿದ್ದು 16 ರಂದು ಬೋನಸ್ ಷೇರು ಪ್ರಕಟಿಸಲಿದೆ. ಈ ಕಂಪೆನಿಯಲ್ಲಿ ಪ್ರವರ್ತಕರು ಕೇವಲ ಶೇ 9.75 ರಷ್ಟು ಮಾತ್ರ ಭಾಗಿತ್ವ ಹೊಂದಿರುವರು ಹಾಗೂ ಕಳೆದ ಜೂನ್ ಅಂತ್ಯದ ತ್ರೈಮಾಸಿಕದಲ್ಲಿ ಕಂಪೆನಿಯ ಲಾಭಗಳಿಸುವುದಿಲ್ಲವೆಂಬ ಅಂಶವನ್ನು ಮನದಲ್ಲಿಟ್ಟುಕೊಂಡು ಚಟುವಟಿಕೆ ನಡೆಸಿರಿ. ಬೋನಸ್ ಷೇರಿನ ಆಸೆಗೆ ಬಲಿಯಾಗದಿರಿ.

 ಮುಖ ಬೆಲೆ ಸೀಳಿಕೆ ವಿಚಾರ
*ಪ್ರಕಾಶ್ ಕಾನ್‌ಸ್ಟ್ರೂವೆಲ್ ಲಿ. ಷೇರಿನ ಮುಖ ಬೆಲೆ ರೂ. 10 ರಿಂದ ರೂ.1ಕ್ಕೆ ಸೀಳಲಿದೆ.

*ಬರೋಡ ಎಕ್ಟ್ರೂಷನ್ ಲಿ. ಷೇರಿನ ಮುಖ ಬೆಲೆ ರೂ.10 ರಿಂದ ರೂ.1ಕ್ಕೆ ಸೀಳಲು ನವೆಂಬರ್ 1 ನಿಗದಿತ ದಿನ.

ಮುಖ ಬೆಲೆ ಸೀಳಿಕೆ ವಿಚಾರ
*ಅಮೃತಾಂಜನ್ ಹೆಲ್ತ್‌ಕೇರ್ ಲಿ. ಕಂಪೆನಿಯು ಷೇರಿನ ಮುಖ ಬೆಲೆಯನ್ನು ರೂ.10 ರಿಂದ ರೂ.2ಕ್ಕೆ ಸೀಳಲಿದೆ. ಈ ತಿಂಗಳ 29, ನಿಗದಿತ ದಿನವಾಗಿದೆ.

*ನಾಗಾರ್ಜುನ ಅಗ್ರಿ ಕೆಂ ಕಂಪೆನಿಯು ಷೇರಿನ ಮುಖ ಬೆಲೆಯನ್ನು ರೂ.10 ರಿಂದ ರೂ.1ಕ್ಕೆ ಸೀಳಲು ನವೆಂಬರ್ 23ನ್ನು ನಿಗದಿತ ದಿನ.

*ಗೋಯೆಂಕಾ ಡೈಮಂಡ್ ಅಂಡ್ ಜುವೆಲ್ಸ್ ಲಿ. ಕಂಪೆನಿ ಷೇರಿನ ಮುಖ ಬೆಲೆಯನ್ನರೂ.ು 10 ರಿಂದ ರೂ.1ಕ್ಕೆ ಸೀಳಲು ಈ ತಿಂಗಳ 29 ನಿಗದಿತ ದಿನವಾಗಿದೆ.

*ಕನಾನಿ ಇಂಡಸ್ಟ್ರೀಸ್ ಕಂಪೆನಿಯ ಷೇರಿನ ಮುಖ ಬೆಲೆಯನ್ನು ರೂ.5 ರಿಂದ ರೂ.1ಕ್ಕೆ ಸೀಳಲು ನವೆಂಬರ್ 2 ನಿಗದಿತ ದಿನ.

*ಎಸ್.ಎಂ.ಎಸ್. ಟೆಕ್‌ಸಾಪ್ಟ್ (ಇಂಡಿಯಾ) ಕಂಪೆನಿಯ ಷೇರಿನ ಮುಖ ಬೆಲೆ ರೂ.10 ರಿಂದ ರೂ.1ಕ್ಕೆ ಸೀಳಲು ನವೆಂಬರ್ 4 ನಿಗದಿತ ದಿನವಾಗಿದೆ.

*ದೇನು ಬ್ಯುಲ್ಡ್‌ಕಾನ್ ಲಿ. ಕಂಪೆನಿ ಷೇರಿನ ಮುಖ ಬೆಲೆ ರೂ.10 ರಿಂದ ರೂ.1ಕ್ಕೆ ಸೀಳಲು 29ನ್ನು ನಿಗದಿತ ದಿನ.

*ಎಸಿಐ ಇನ್‌ಫೊಕಾಂ ಲಿ. ಕಂಪೆನಿ ಷೇರಿನ ಮುಖ ಬೆಲೆಸೀಳಿಕೆಯನ್ನು 16 ರಂದು ಪರಿಶೀಲಿಸಲಿದೆ.

ನಿಷೇದ

ಈ ಹಿಂದೆ ಪೋಲಾರೀಸ್ ಸಾಫ್ಟ್‌ವೇರ್ ಲ್ಯಾಬ್ ಎಂದಿದ್ದ ಈಗಿನ ಪೊಲಾರೀಸ್ ಫೈನಾನ್ಶಿಯಲ್ ಟೆಕ್ನಾಲಜಿ ಲಿ. ನ ಪ್ರವರ್ತಕರಾದ ಅರುಣ ಜೈನ್‌ರವರು 2000ರಲ್ಲಿ ಡಟಾ ಇಂಕ್ ಕಂಪೆನಿಯನ್ನು ಸ್ವಾಧೀನ ಪಡಿಸಿಕೊಳ್ಳುವ ಯೋಜನೆ ಕೈಬಿಟ್ಟ ವಿಷಯವನ್ನು ಹೊರಗೆಡವದೆ ತಡೆ ಹಿಡಿದು ಆ ಅವಧಿಯಲ್ಲಿ ತಮ್ಮ ಷೇರು ವಹಿವಾಟಿನಿಂದ ರೂ.27.26 ಲಕ್ಷ ಅಸಹಜವಾಗಿ ಹಣ ಸಂಪಾದಿಸಿಕೊಂಡಿದ್ದಾರೆ ಎಂದು ತನಿಖೆಯಿಂದ ಧೃಡಪಡಿಸಿಕೊಂಡ ಕಾರಣ ಅವರು 2 ವರ್ಷದವರೆಗೂ ಷೇರುಪೇಟೆಗಳಲ್ಲಿ ವಹಿವಾಟು ನಡೆಸದಂತೆ ನಿಷೇದಕ್ಕೊಳಪಡಿಸಲಾಗಿದೆ.

 ಬೆಲೆ ಏರಿಳಿತಕ್ಕೆ ಕಾರಣವಾದ ಸೂಕ್ಷ್ಮ ವಿಚಾರದ ಲಾಭ ಪಡೆದುದು ಅಪರಾಧವಾಗಿದೆ. `ಸೆಬಿ~ಯ ಈ ತೀರ್ಮಾನಕ್ಕೆ 12  ವರ್ಷ ಬೇಕಾದುದು ಖೇದಕರ.

ಲಾಭಾಂಶ ವಿಚಾರ

ಇಂಡಾಗ್ ರಬ್ಬರ್ ಶೇ 25, ಪೋಲಾರೀಸ್ ಫೈನಾನ್ಶಿಯಲ್ ಟೆಕ್ನಾಲಜಿ ಶೇ 60 (ಮುಖ ಬೆಲೆ ರೂ. 5) ಇನ್‌ಫೋಸಿಸ್ ಶೇ 300, (ಮುಖ ಬೆಲೆ ರೂ.5).

ವಾರದ ಪ್ರಶ್ನೆ
ಅಫರ್ ಫಾರ್ ಸೇಲ್ ಆಫ್ ಷೇರ್ಸ್‌ ಬೈ-ಪ್ರಮೋಟರ್ಸ್‌ ತ್ರೂ ಸ್ಟಾಕ್ ಎಕ್ಸ್‌ಚೇಂಜ್ ಮೆಕ್ಯಾನಿಸಂ ಎಂದರೇನು? ದಯವಿಟ್ಟು ವಿವರಿಸಿರಿ.

ಉತ್ತರ: ಷೇರು ವಿನಿಮಯ ಕೇಂದ್ರದಲ್ಲಿ ವಹಿವಾಟಾಗುವ ಕಂಪೆನಿಗಳು ಲಿಸ್ಟಿಂಗ್ ನಿಯಮದಂತೆ ಒದಗಿಸಬೇಕಾದ ಸಾರ್ವಜನಿಕ ಭಾಗಿತ್ವದ ಕೊರತೆ ಇದ್ದಲ್ಲಿ ಅಂತಹ ಕಂಪೆನಿಗಳು ಷೇರು ವಿನಿಮಯ ಕೇಂದ್ರದ ವಿಶೇಷ ಗವಾಕ್ಷಿಯ ಮೂಲಕ ಪ್ರವರ್ತಕರ ಭಾಗಿತ್ವದ ಮಾರಾಟವನ್ನು ಮಾಡಿ ಕೊಡುವ ಉದ್ದೇಶದಿಂದ `ಸೆಬಿ~ ಈ ಹೊಸ ಪದ್ಧತಿಯನ್ನು ಜಾರಿಗೊಳಿಸಿದೆ.
 
ಇದು ಎಲ್ಲ ಕಂಪೆನಿಗಳಿಗೂ ಲಭ್ಯವಿರದೆ ಪೇಟೆಯ ಬಂಡವಾಳ ಮೌಲ್ಯದ ಆಧಾರದ ಮೊದಲ 100 ಕಂಪೆನಿಗಳು ಅರ್ಹವಾಗಿರುತ್ತವೆ. ಈ ಯೋಜನೆಗೆ ವೇದಿಕೆಯಾಗಿ ಮುಂಬೈ ಷೇರು ವಿನಿಮಯ ಕೇಂದ್ರ ಮತ್ತು ನ್ಯಾಶನಲ್ ಷೇರು ವಿನಿಮಯ ಕೇಂದ್ರಗಳು ಕಾರ್ಯನಿರ್ವಹಿಸುವವು. 

 ಈ ದಿಶೆಯಲ್ಲಿ ಹಲವಾರು ಬಿಗಿ ನಿಯಮಗಳನ್ನು ಜಾರಿಗೊಳಿಸಲಾಗಿದೆ. ಈ ವಿಧದಲ್ಲಿ ಷೇರು ಮಾರಾಟ ಮಾಡಲು ಕನಿಷ್ಠ ರೂ.25 ಕೋಟಿ ಮಿತಿ ಇದ್ದರೂ ಸಾರ್ವಜನಿಕ ಭಾಗಿತ್ವ ಮಿತಿ ತಲುಪಲು ಇರುವ ಕೊರತೆ ತುಂಬಿಕೊಳ್ಳುವ ಕಂಪೆನಿಗಳಿಗೆ ಒಂದು ಬಾರಿ ಈ ಮಿತಿಯಿಂದ ರಿಯಾಯಿತಿ ನೀಡಲಾಗಿದೆ.
 
ಈ ಮಾರಾಟದ ಕರೆಯ ಆರಂಭಿಕ ದಿನಕ್ಕಿಂತ ಒಂದು ದಿನ ಮುಂಚಿತವಾಗಿ, ವಹಿವಾಟಿನ ಸಮಯದ ನಂತರ, ಷೇರು ವಿತರಣೆಯ ದರವನ್ನು ಪ್ರಕಟಿಸಲಾಗುವುದು. ಈ ಷೇರು ಮಾರಾಟದ ಕರೆಯ ಒಂದು ದಿನ ಮಾತ್ರ ನಡೆಯುವುದು, ಅದು ಷೇರು ವಿನಿಮಯ ಕೇಂದ್ರದ ವಹಿವಾಟಿನ ಸಮಯದಲ್ಲಿ ಮಾತ್ರ. ಈ ಮಾರಾಟದ ಕರೆಯಲ್ಲಿ ನೋಂದಾಯಿತ ಹೂಡಿಕೆದಾರರೆಲ್ಲ ಭಾಗವಹಿಸಬಹುದಾಗಿದೆ. 

 ಈ ಪ್ರಕ್ರಿಯೆಯಡಿ ಕಂಪೆನಿಯ ಬ್ರೋಕರ್ ಆಯ್ಕೆ ಮಾರಾಟ ಕರೆಯ ನೋಟೀಸಿನ ಅಂಶಗಳು, ಆರ್ಡರ್ ನೋಂದಾವಣೆಯ ಸಮಯದಲ್ಲಿನ ಅಗತ್ಯಗಳು, ಸವಲತ್ತುಗಳು `ರಿಸ್ಕ್~ ನಿರ್ವಹಣೆ, ಷೇರು ಅಲಾಟ್‌ಮೆಂಟ್, ವಹಿವಾಟು ಚುಕ್ತಾ ವಿಧಾನ, ಹಾಗೂ ಬ್ರೋಕರ್ ಕಾಂಟ್ರಾ ಕ್ಟ್ ವಿತರಣೆ ಅಂಶಗಳನ್ನು ಪರಿಗಣಿಸಿ ಮಾರ್ಗದರ್ಶನ ನೀಡಲಾಗಿದೆ. ಶುಕ್ರವಾರದಂದು ಪ್ರೆಸಿನಿಯಸ್ ಕಬಿ ಆಂಕಾಲಜಿ ಲಿ. ಕಂಪೆನಿಯು ಈ ಗವಾಕ್ಷಿಯ ಮೂಲಕ ಸುಮಾರು ಶೇ 9 ರ ಭಾಗಿತ್ವವನ್ನು ಪ್ರವರ್ತಕರು ಬಿಡುಗಡೆ ಮಾಡಿದ್ದಾರೆ.

- 98863-13380
 (ಮಧ್ಯಾಹ್ನ 4.30ರ ನಂತರ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT