ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೇಟೆಯಲ್ಲಿ ಸೂಚ್ಯಂಕದ ನಾಗಾಲೋಟ

Last Updated 4 ಜೂನ್ 2017, 19:30 IST
ಅಕ್ಷರ ಗಾತ್ರ

ಷೇರುಪೇಟೆಯ  ಸೂಚ್ಯಂಕಗಳು ದಿನ ಹೊಸ ದಾಖಲೆ ನಿರ್ಮಿಸುತ್ತಿವೆ.   ಜೂನ್‌ 2  ರಂದು (ಶುಕ್ರವಾರ) ಸಹ ಸಂವೇದಿ ಸೂಚ್ಯಂಕ 31,332.56 ರ ಸರ್ವಕಾಲೀನ ಗರಿಷ್ಠ ದಾಖಲಿಸಿದೆ.   ಇದುವರೆಗೂ ಕಡೆಗಣಿಸಲ್ಪಟ್ಟ ಫಾರ್ಮಾ ವಲಯವು ದಿಢೀರನೆ ಚುರುಕಾಗಿರುವುದು ವಿಶೇಷ.  

ಅಲ್ಲದೆ ಒಂದೇ  ದಿನ  ಸಿಪ್ಲಾ, ಲುಪಿನ್, ಸನ್ ಫಾರ್ಮಾ, ಡಾಕ್ಟರ್ ರೆಡ್ಡಿ ಲ್ಯಾಬ್ ಷೇರುಗಳು ಏರಿಕೆ ಕಂಡು ಸೂಚ್ಯಂಕ ಏರಿಕೆಗೆ ಕೊಡುಗೆ ನೀಡಿವೆ. ಹಾಗೆಯೇ ಹೀರೊ ಮೋಟೊ ಕಾರ್ಪ್, ಟಾಟಾ ಮೋಟಾರ್, ಮಹೀಂದ್ರ ಆ್ಯಂಡ್ ಮಹೀಂದ್ರ,  ಮಾರುತಿ ಸುಜುಕಿ, ಹಿಂದುಸ್ತಾನ್ ಯುನಿಲಿವರ್ ಲಿಮಿಟೆಡ್‌, ಹೆಚ್‌ಡಿಎಫ್‌ಸಿ, ಎಚ್‌ಡಿಎಫ್ ಸಿ ಬ್ಯಾಂಕ್, ಐಟಿಸಿ   ಕಂಪೆನಿಗಳು  ಸಂವೇದಿ ಸೂಚ್ಯಂಕದ ಏರಿಕೆಗೆ ತಮ್ಮದೇ  ಕೊಡುಗೆ ನೀಡಿವೆ.

ವಿಚಿತ್ರವೆಂದರೆ ಈ ಏರಿಕೆಯು ಸ್ಥಿರತೆ ಕಾಣದೆ ಒಂದೊಂದು ದಿನ ಒಂದೊಂದು ಕಂಪೆನಿಗಳು ಚುರುಕಾಗುವುದಾಗಿದೆ.   ಹೆಚ್ಚಿನ ಕಂಪೆನಿಗಳು ಏರಿಕೆಯಲ್ಲಿರುವಾಗ ಕೇವಲ ಅಂತಿಮ ಲಾಭಾಂಶ ಕೈಬಿಟ್ಟ ಕಾರಣಕ್ಕೆ ಕುಸಿತಕ್ಕೊಳಗಾಗಿದ್ದ ಕೋಲ್ ಇಂಡಿಯಾ ಸಹ ಶುಕ್ರವಾರ ಏರಿಕೆ ಕಂಡಿದ್ದು ಮತ್ತೊಂದು ವಿಶೇಷ.  

ಈ ಬೆಳವಣಿಗೆಯು ಚಟುವಟಿಕೆದಾರರ ಮೂಲ ಉದ್ದೇಶ ಕೇವಲ ಸೂಚ್ಯಂಕಗಳನ್ನು ಏರಿಕೆ ಕಾಣುವಂತೆ ಮಾಡುವುದಾಗಿದೆ. ಸೂಚ್ಯಂಕ ಸರ್ವಕಾಲೀನ ದಾಖಲೆ ನಿರ್ಮಿಸಿರುವ  ಈ ದಿನಗಳಲ್ಲಿ  ಪೇಟೆಯಿಂದ ಹಣಗಳಿಸುವ ವಿಧಗಳನ್ನು ವಹಿವಾಟುದಾರರು ಕಂಡುಕೊಳ್ಳುತ್ತಲೇ  ಇರುತ್ತಾರೆ. 


ಒಂದು ಸುದ್ದಿಯ ತುಣುಕು  ಷೇರುಗಳ ಬೆಲೆಯಲ್ಲಿ  ಎಂತಹ ಚಲನೆ ಮೂಡಿಸುವುದು ಎಂಬುದಕ್ಕೆ ಗುರುವಾರ ಕ್ಲಾರಿಸ್ ಲೈಫ್ ಸೈನ್ಸಸ್ ಕಂಪೆನಿ ಷೇರಿನ ಬೆಲೆಯ ಏರಿಳಿತ ಉತ್ತಮ ಉದಾಹರಣೆ. ಅಂದು ಮುಂಜಾನೆ ಆರಂಭದಿಂದಲೂ ₹328ರ ಸಮೀಪವಿತ್ತು. ಅಮೆರಿಕದ ಎಫ್‌ಡಿಎ ತನಿಖೆಯಲ್ಲಿ ಕ್ಲಾರಿಸ್ ಲೈಫ್ ಸೈನ್ಸಸ್ ಕಂಪೆನಿಯಲ್ಲಿ ಯಾವುದೇ ನಕಾರಾತ್ಮಕ ಅಂಶ ಇಲ್ಲ ಎಂಬ ಸುದ್ದಿ ಮಾಧ್ಯಮಗಳಲ್ಲಿ ಬಿತ್ತರವಾದ ಬೆನ್ನಲ್ಲೇ ಷೇರಿನ ಬೆಲೆಯನ್ನು ₹333ರ ಸಮೀಪದಿಂದ ₹366ಕ್ಕೆ ಏರಿಕೆ ಕಂಡು ನಂತರ ಅದೇ ವೇಗದಲ್ಲಿ ₹344 ಕ್ಕೆ ಕುಸಿಯಿತು.  ಇದು ಷೇರುಪೇಟೆಯಲ್ಲಿಯ ಏರಿಳಿತ ಎಷ್ಟು ಹರಿತ- ತ್ವರಿತ ಎಂಬುದನ್ನು ತೋರಿಸುತ್ತದೆ.

ಸರ್ಕಾರಿ ವಲಯದ ಕಂಪೆನಿಗಳಾದ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್, ಇಂಡಿಯನ್ ಆಯಿಲ್ ಕಾರ್ಪೊರೇಷನ್, ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್, ಓಎನ್‌ಜಿಸಿಗಳಲ್ಲಿ   ಲಾಭಾಂಶ ಘೋಷಣೆಯ ಪ್ರಮಾಣ ಕುಸಿತ ಕಂಡಿದೆ. 

ಕೋಲ್ ಇಂಡಿಯಾ ಕಂಪೆನಿ ಅಂತಿಮ ಲಾಭಾಂಶ ವಿತರಣೆ ಕೈಬಿಟ್ಟಿದೆ.  ಈ ಕಾರಣ ಷೇರಿನ ಬೆಲೆಯೂ ಕುಸಿತ ಕಂಡಿದೆ.  ಈ ಎಲ್ಲಾ ಕಂಪೆನಿಗಳು ಮಧ್ಯಂತರ ಲಾಭಾಂಶವಾಗಿ ಹೆಚ್ಚಿನ ಮೊತ್ತವನ್ನು ಮೊದಲೇ ವಿತರಿಸಿವೆ. ಲಾಭಾಂಶ ವಿತರಣೆಗೂ ಕಂಪೆನಿಗಳ ಸಾಧನೆಗಳಿಗೂ ಸಂಬಂಧವಿಲ್ಲ. ಎಲ್ಲವೂ ಬೇರೆ ಬೇರೆ. 

ಹಾಗಾಗಿ ಲಾಭಾಂಶ ವಿತರಣೆ ಮಾಡಲಿಲ್ಲ ಎಂಬ ಕಾರಣಕ್ಕೆ ಉತ್ತಮ ಕಂಪೆನಿ ಷೇರಿನ ಬೆಲೆಗಳು ಕುಸಿತ ಕಂಡರೆ ಕಂಪೆನಿಯ ಸಾಧನೆ ಆಧರಿಸಿ ಹೂಡಿಕೆಗೆ ಆಯ್ಕೆ ಮಾಡಿಕೊಳ್ಳಲು ಉತ್ತಮ ಅವಕಾಶವಾಗಿರುತ್ತದೆ.

ಒಟ್ಟಾರೆ ಈ ವಾರದಲ್ಲಿ ಸಂವೇದಿ ಸೂಚ್ಯಂಕವು 245 ಅಂಶ ಏರಿಕೆ ಕಂಡು ತನ್ನೊಂದಿಗೆ ಮಧ್ಯಮ ಶ್ರೇಣಿ ಸೂಚ್ಯಂಕ 281 ಅಂಶ ಹಾಗೂ ಕೆಳಮಧ್ಯಮ ಶ್ರೇಣಿ ಸೂಚ್ಯಂಕ 224 ಅಂಶ ಏರಿಕೆ ಕಾಣುವಂತೆ ಮಾಡಿವೆ. ಸ್ವದೇಶಿ ವಿತ್ತೀಯ ಸಂಸ್ಥೆಗಳು ಭಾರಿ ಕೊಳ್ಳುವಿಕೆಯ ಕಾರಣ ಈ ವಾತಾವರಣ ಮೂಡಿದೆ. ಅವು ₹111 ಕೋಟಿ ಮೌಲ್ಯದ ಷೇರು ಖರೀದಿಸಿದರೆ ವಿದೇಶಿ ವಿತ್ತೀಯ ಸಂಸ್ಥೆಗಳು 454 ಕೋಟಿ ಮೌಲ್ಯದ ಷೇರು ಮಾರಾಟ ಮಾಡಿವೆ.  ಪೇಟೆಯ ಬಂಡವಾಳೀಕರಣ ಮೌಲ್ಯ ₹126.67  ಲಕ್ಷ ಕೋಟಿಗೆ ಏರಿಕೆ ಕಂಡಿತು. 

ಬೋನಸ್ ಎಂಬ ಮಾಂತ್ರಿಕ ಪದ!: ಕೆಳಮಧ್ಯಮ ಶ್ರೇಣಿಯ ಶಿಲ್ಪಿ ಕೇಬಲ್ ಟೆಕ್ನಾಲಜಿಸ್ ಲಿಮಿಟೆಡ್ ಕಂಪೆನಿಯ ವಿರುದ್ಧ ನ್ಯಾಷನಲ್ ಕಂಪೆನಿ ನ್ಯಾಯ ಮಂಡಳಿಯಲ್ಲಿ ‘ಇನ್ಸಾಲ್ವನ್ಸಿ  ಅಂಡ್ ಬ್ಯಾಂಕ್ರಪ್ಸಿ ಕೋಡ್’ ಅಡಿಯಲ್ಲಿ ದೂರು  ದಾಖಲು  ಮಾಡಲಾಗಿರುವ ಕಾರಣ ಷೇರಿನ ಬೆಲೆ ತಿಂಗಳಲ್ಲಿ ₹107ರ ಸಮೀಪದಿಂದ ₹30ರ ಸಮೀಪಕ್ಕೆ ಕುಸಿದಿದೆ. ಇನ್ನೂ ಕುಸಿಯುತ್ತಲೇ ಇದೆ.  

ಈ ಮಧ್ಯೆ ಕಂಪೆನಿಯ ಆಡಳಿತ ಮಂಡಳಿಯ ಸಭೆಯನ್ನು 28 ರಂದು ಬೋನಸ್ ಷೇರು ವಿತರಿಸುವ ಕಾರ್ಯಸೂಚಿ ಪ್ರಕಟಿಸಿತ್ತು. ಆದರೆ ಇನ್ ಸಾಲ್ವನ್ಸಿ   ಅಂಡ್ ಬ್ಯಾಂಕ್ರಪ್ಟ್ಸಿ ಪ್ರಕ್ರಿಯೆಯ ಕಾರಣ ಬೋನಸ್ ಷೇರು ವಿತರಣೆಯನ್ನು ಪರಿಶೀಲಿಸಲಿಲ್ಲ. 

ವಹಿವಾಟಿನಿಂದ ವಹಿವಾಟಿಗೆ ಚುಕ್ತಾ ಆಗುವ 'ಟಿ ' ವಿಭಾಗದ ವಿ.ಜಿ ಫೈನಾನ್ಸ್ ಲಿಮಿಟೆಡ್ 10ರಂದು ಬೋನಸ್ ಷೇರು ಪ್ರಕಟಿಸುವ ಕಾರ್ಯಸೂಚಿ ನೀಡಿದೆ.  ಆದರೆ, ಈ ಕಂಪೆನಿಯ ₹1 ರ ಮುಖಬೆಲೆಯ ಷೇರಿನ ಬೆಲೆಯು ₹5.50 ರಲ್ಲಿದ್ದು, ಈ ಕಂಪೆನಿ ಪ್ರತಿ ಷೇರಿಗೆ ಒಂದು ಪೈಸೆಯಂತೆ ಲಾಭಾಂಶ ವಿತರಿಸಲಿದೆ. 

ಈ ಕಂಪೆನಿಯ ಬಂಡವಾಳ ₹7.50 ಕೋಟಿಯಾದರೂ ಗಳಿಸಿದ ಲಾಭ  ಡಿಸೆಂಬರ್ ಅಂತ್ಯದ ತ್ರೈಮಾಸಿಕದಲ್ಲಿ ₹23ಲಕ್ಷವಾಗಿದೆ. ಕಂಪೆನಿಯು 2015.16 ರ ವಾರ್ಷಿಕ ಲೆಕ್ಕದಲ್ಲಿ ಮೀಸಲು ನಿಧಿಯೇ ಇಲ್ಲ.  ಇಂತಹ ಕಂಪೆನಿಗಳ ಬೋನಸ್  ವ್ಯಾಮೋಹದಿಂದ ಹೊರಬಂದು ಉತ್ತಮ ಕಂಪೆನಿಗಳಲ್ಲಿ ಹೂಡಿಕೆ ಮಾಡುವುದರಿಂದ ಬಂಡವಾಳ ಸುಭದ್ರಾ ಮತ್ತು ಉತ್ತಮ ಲಾಭಾಂಶದಂತಹ ಕಾರ್ಪೊರೇಟ್ ಫಲಗಳು ಲಭ್ಯವಾಗುತ್ತದೆ.

ಮುಖಬೆಲೆ ಸೀಳಿಕೆ: ಕ್ಯಾನ್ ಫಿನ್ ಹೋಮ್ಸ್ ಲಿಮಿಟೆಡ್‌  ಕಂಪೆನಿಯು 23 ರಂದು ಷೇರಿನ ಮುಖಬೆಲೆ ಸೀಳಿಕೆ ಪರಿಶೀಲಿಸಲಿದೆ. ದ್ವಾರಕೀಶ್ ಶುಗರ್ ಕಂಪೆನಿಯ ಷೇರಿನ ಮುಖಬೆಲೆಯನ್ನು ₹10 ರಿಂದ ₹1ಕ್ಕೆ ಸೀಳಲಿದೆ.

ನೆಸ್ಕೋ ಲಿಮಿಟೆಡ್   ಷೇರಿನ ಮುಖಬೆಲೆಯನ್ನು ₹10 ರಿಂದ ₹2 ಕ್ಕೆ ಸೀಳಲಿದೆ. ಜಯಂತ್ ಆಗ್ರೋ ಆರ್ಗ್ಯಾನಿಕ್6 ರಂದು ಷೇರಿನ ಮುಖಬೆಲೆ ಸೀಳಿಕೆ ಪರಿಶೀಲಿಸಲಿದೆ.

ಹಕ್ಕಿನ ಷೇರು: ಕರೂರು ವೈಶ್ಯ ಬ್ಯಾಂಕ್ 1:6 ರ ಅನುಪಾತದಲ್ಲಿ ಪ್ರತಿ ಷೇರಿಗೆ ₹76 ರಂತೆ ಹಕ್ಕಿನ ಷೇರು ವಿತರಿಸಲಿದೆ.

ಬೋನಸ್ ಷೇರು: ವಿಪ್ರೋ ಲಿಮಿಟೆಡ್‌ ವಿತರಿಸಲಿರುವ 1:1 ರ ಅನುಪಾತದ ಬೋನಸ್ ಷೇರಿಗೆ ಜೂನ್ 14, ಸಂವಾರಿಯಾ ಆಗ್ರೋ ಮಿಲ್ಸ್ ವಿತರಿಸಲಿರುವ 1:1 ಅನುಪಾತದ ಬೋನಸ್ ಷೇರಿಗೆ ಜುಲೈ 2 ನಿಗದಿತ ದಿನವಾಗಿದೆ.

ಹಿಂದುಸ್ತಾನ್ ಪೆಟ್ರೋಲಿಯಂ ವಿತರಿಸಲಿರುವ 1:2 ರ ಬೋನಸ್ ಷೇರಿಗೆ 12ನೇ  ಜೂನ್, ಲಾರ್ಸನ್ ಅಂಡ್ ಟೊಬ್ರೋ 1:2 ರ ಅನುಪಾತದ ಬೋನಸ್ ಪ್ರಕಟಿಸಿದೆ. ಇದಕ್ಕೆ ಜುಲೈ 14 ನಿಗದಿತ ದಿನ.

ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ 1:2 ರ ಅನುಪಾತದ ಬೋನಸ್ ಪ್ರಕಟಿಸಿದೆ, ಇದಕ್ಕಾಗಿ ಜುಲೈ 15 ನಿಗದಿತ ದಿನ. ಮುತ್ತೂಟ್‌ ಕ್ಯಾಪಿಟಲ್ ಸರ್ವಿಸಸ್ ವಿತರಿಸಲಿರುವ 1:10 ರ ಅನುಪಾತದ ಬೋನಸ್ ಷೇರಿಗೆ ಜೂನ್ 13 ನಿಗದಿತ ದಿನವಾಗಿದೆ. ಸಿಟಿ ಯೂನಿಯನ್ ಬ್ಯಾಂಕ್ 1:10 ರ ಬೋನಸ್ ಷೇರು ಪ್ರಕಟಿಸಿದೆ.

ವಾರದ ವಿಶೇಷ

ಷೇರುಪೇಟೆಯಲ್ಲಿ ಹೊಸ ವಿಧಗಳು ಅನ್ವೇಷಣೆಗೊಳ್ಳುತ್ತಿರುತ್ತವೆ. ಇವೆಲ್ಲವೂ ಲಾಭಗಳಿಕೆಯ ಉದ್ದೇಶದಿಂದ ಮಾತ್ರ ಎಂಬುದು ನಿರ್ವಿವಾದ.

ಇತ್ತೀಚಿನ ವಿಧವೆಂದರೆ ಕಂಪೆನಿಗಳು ತಮ್ಮ ಫಲಿತಾಂಶ ಪ್ರಕಟಣೆಯ ಸಂದರ್ಭದಲ್ಲಿ ಷೇರಿನ ಬೆಲೆಯಲ್ಲಿ ಅತೀವ ಏರಿಳಿತ ಪ್ರದರ್ಶಿಸಿ ಅಸ್ಥಿರತೆ ಉಂಟುಮಾಡಿ ಲಾಭ ಗಳಿಕೆ ಮಾಡಿಕೊಳ್ಳುವುದು.  ರೂರಲ್ ಎಲೆಕ್ಟ್ರಿಫಿಕೇಷನ್ ಕಾರ್ಪೊರೇಷನ್ ಕಂಪೆನಿಯ ಫಲಿತಾಂಶ ಪ್ರಕಟಣೆಯ ದಿನ ಷೇರಿನ ಬೆಲೆಯೂ ₹190 ರಲ್ಲಿ ಆರಂಭವಾಗಿ ₹176 ರ ಸಮೀಪಕ್ಕೆ ಕುಸಿದು ನಂತರ ಚೇತರಿಕೆ ಕಂಡು ₹210 ರವರೆಗೂ ಏರಿಕೆಯಿಂದ ಅಚ್ಚರಿ ಮೂಡಿಸಿತು. ₹205ರ ಸಮೀಪ ದಿನಾಂತ್ಯ ಕಂಡಿತು.

ಒಂದೇ ದಿನ ಪ್ರಮುಖ ಕಂಪೆನಿ ಈ ಮಟ್ಟದ ಏರಿಳಿತ ಪ್ರದರ್ಶಿಸಿರುವುದು. ಅಲ್ಪಕಾಲೀನದಲ್ಲೇ ‘ವ್ಯಾಲ್ಯೂ ಪಿಕ್ - ಪ್ರಾಫಿಟ್ ಬುಕ್’  ಉತ್ತಮ ಅವಕಾಶ ಗಳಿಸಿಕೊಟ್ಟಿದೆ.  ಇದೆ ರೀತಿ ಬರ್ಜರ್ ಪೇಂಟ್ಸ್ ಷೇರಿನ ಬೆಲೆಯೂ ಏರಿಳಿತ ಪ್ರದರ್ಶಿಸಿದೆ. ಫಲಿತಾಂಶದ ದಿನ ₹249 ರಿಂದ ₹263 ರವರೆಗೂ ಏರಿಳಿತ ಪ್ರದರ್ಶಿಸಿತು. ಹೂಡಿಕೆ ಮಾಡುವಾಗ ಉತ್ತಮ ಕಂಪೆನಿಗಳು ಕುಸಿತದಲ್ಲಿದ್ದಾಗ ಮಾತ್ರ ಆಯ್ಕೆ ಮಾಡಿಕೊಂಡಲ್ಲಿ ಅಪಾರ ಅವಕಾಶ ಲಭ್ಯವಾಗುತ್ತದೆ.  ಸೂಚ್ಯಂಕಗಳು ಗರಿಷ್ಠದಲ್ಲಿದ್ದಾಗ ಕಳಂಕದಿಂದ ಕೂಡಿದ, ಅಪಾಯದಲ್ಲಿರುವ ಕಂಪೆನಿಗಳಿಂದ ದೂರವಿರಿ.  

ವಿಡಿಯೋಕಾನ್ ಕಂಪೆನಿ ಒಂದೇ  ತಿಂಗಳಲ್ಲಿ ತನ್ನ ಆರ್ಥಿಕ ಅವ್ಯವಸ್ಥೆಯ ಕಾರಣ ₹104 ರಿಂದ ₹36 ರವರೆಗೂ ನಿರರ್ಗಳವಾಗಿ ಕುಸಿತಕಂಡು, ಹೂಡಿಕೆಯಿಂದ ಹೊರಬರುವ ಅವಕಾಶದಿಂದ ವಂಚಿತಗೊಳಿಸಿದೆ.  ಸಂಪತ್ತಿನ  ಆಸೆಯಲ್ಲಿ ಆಪತ್ತಿಗೆ ಆಹ್ವಾನ ನೀಡದೆ ಚಟುವಟಿಕೆ ನಡೆಸುವ ಕೌಶಲ್ಯ ಈಗ ಅತ್ಯಗತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT